ಕಾಪಿಗಿಡ ನೆಡುವುದು ಮತ್ತು ಆರಯ್ಕೆ

– ರತೀಶ ರತ್ನಾಕರ.
DSCF0028ಹಿಂದಿನ ಬರಹಗಳಲ್ಲಿ ಕಾಪಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಪಿ ಗಿಡದ ಬೆಳವಣಿಗೆಯ ಕುರಿತು ತಿಳಿದುಕೊಂಡೆವು. ಬುಟ್ಟಿಯಲ್ಲಿರುವ ಕಾಪಿ ಗಿಡಗಳನ್ನು ತೋಟದ ಜಾಗದಲ್ಲಿ ನೆಡುವುದು ಮುಂದಿನ ಕೆಲಸವಾಗಿರುತ್ತದೆ. ಈ ಕೆಲಸದ ಕುರಿತು ಈ ಬರಹದಲ್ಲಿ ಅರಿಯೋಣ.

ತೋಟಕ್ಕೆಂದು ಜಾಗದ ಆಯ್ಕೆ:
ಕಾಪಿ ಬೆಳೆಯಲು ಬೇಕಾದ ಗಾಳಿಪಾಡು ಮತ್ತು ಜಾಗದ ಗುಣದ ವಿವರವನ್ನು ಕೂಡ ಕಾಪಿಯ ಹುಟ್ಟು ಮತ್ತು ಹರವು ಬರಹದಲ್ಲಿ ತಿಳಿದಿದ್ದೇವೆ. ಕಾಪಿಗೆ ಇಳಿಜಾರಿನ, ತಂಪಿರುವ ಹಾಗು ಸಾಕಶ್ಟು ಮಳೆಯಾಗುವ ಜಾಗವು ಬೇಕಾಗುತ್ತದೆ. ತೋಟದ ಮಣ್ಣು ಸಾಕಶ್ಟು ಪಲವತ್ತತೆಯಿಂದ ಕೂಡಿರಬೇಕು. ಕಾಪಿಯ ಬೆಳವಣಿಗೆ ಚೆನ್ನಾಗಿರಲು ಮಣ್ಣಿನ ಹುಳಿಯಳತೆಯು (pH) 6.1 ಇರಬೇಕು. ಗಿಡಗಳ ಬೆಳವಣಿಗೆಗೆ ಬೇಕಾಗಿರುವ, ಮಣ್ಣಿನಲ್ಲಿರುವ ಆರಯ್ಕೆಯು ಹಾಳಾಗದಂತಿರಲು ಈ ಹುಳಿಯಳತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ ಮಣ್ಣನ್ನು ಹುಳಿಯಳಕದಲ್ಲಿ ಒರೆಹಚ್ಚಿ ಇದರ ಹುಳಿಯಳತೆಯನ್ನು ಅರಿತುಕೊಳ್ಳಬೇಕು, ಮತ್ತು ಅದು ಹೆಚ್ಚು-ಕಡಿಮೆಯಾಗಿದ್ದರೆ ರಾಸಾಯನಿಕ ಇಲ್ಲವೇ ಸಾವಯವ ಪದ್ದತಿಯಿಂದ ಮಣ್ಣಿನ ಹುಳಿಯಳತೆ ಸರಿಪಡಿಸಿಕೊಳ್ಳಬೇಕು.

ಹೆಚ್ಚಾಗಿ ಇಳಿಜಾರಿನ ಬೆಟ್ಟದಂತಹ ಜಾಗಗಳೇ ಕಾಪಿ ಬೆಳೆಯಲು ಬೇಕಾಗಿರುವುದರಿಂದ ಈ ಇಳಿಜಾರಿನ ಜಾಗದಲ್ಲಿ ಸಾಕಶ್ಟು ನೆರಳು ಇರಬೇಕಾಗುತ್ತದೆ. ತೋಟದ ಜಾಗವು ಯಾವುದೇ ಮರಗಳಿಲ್ಲದೆ ಬೋಳುಬೆಟ್ಟವಾಗಿದ್ದರೆ, ನೆರಳಿಗಾಗಿ ಸಿಲ್ವರ್, ಅಗರ್, ಶ್ರಿಗಂದ, ಸಾಗುವಾನಿಯಂತಹ ಮರಮಟ್ಟಾಗುವ (Timber) ಗಿಡಗಳನ್ನು ಮೊದಲು ನೆಡಬೇಕು. ಇಲ್ಲವೇ ಬೆಳೆಯುವವರು ತಾವೇ ಆಯ್ದುಕೊಂಡ ಗಿಡಗಳನ್ನು ನೆರಳಿಗಾಗಿ ನೆಡಬಹುದು. ಈಗಾಗಲೇ ಸಾಕಶ್ಟು ಮರಗಳು ತೋಟದ ಜಾಗದಲ್ಲಿದ್ದರೆ ಮರಗಸಿ ಮಾಡಿ ಬೇಕಾದಶ್ಟು ನೆರಳನ್ನು ಮಾತ್ರ ಕಾಯ್ದುಕೊಳ್ಳಬೇಕು. ಕಡುಹೆಚ್ಚು ನೆರಳು ಇಲ್ಲವೇ ಹೆಚ್ಚು ಬಿಸಿಲು ಗಿಡದ ಬೆಳವಣಿಗೆಯನ್ನು ಹಾಳುಮಾಡುತ್ತದೆ.

ಗಿಡನೆಡುವ ಮೊದಲು ಜಾಗದಲ್ಲಿರುವ ಕಳೆಗಿಡ ಮತ್ತು ಕಾಡುಗಿಡಗಳನ್ನು ತೆಗೆಯಬೇಕು. ಕಳೆಗಿಡಗಳನ್ನು ತೆಗೆದು, ಒಣಗಿಸಿ ಸುಡುವ ಪರಿಪಾಟ ಈ ಹಿಂದೆ ಇತ್ತು, ಆದರೆ ಅದು ತೋಟದ ಜಾಗದಲ್ಲಿನ ಉಸಿರಿಗಳ ಬದುಕನ್ನು ಹಾಳುಗೆಡುವುತ್ತದೆ ಮತ್ತು ಮಣ್ಣಿನ ಪಲವತ್ತತೆಗೆ ಒಂದಲ್ಲ ಒಂದು ಬಗೆಯಲ್ಲಿ ನೆರವಾಗುವ ಗಿಡ, ಕೀಟ ಹಾಗು ಪ್ರಾಣಿಗಳನ್ನು ಸಾಯಿಸುತ್ತದೆ. ಆದ್ದರಿಂದ ಈಗ ಕಳೆಗಿಡಗಳನ್ನು ತೆಗೆದು ಅಲ್ಲಿಯೇ ಕೊಳೆಯಿಸಿ ಮಣ್ಣಿಗೆ ಗೊಬ್ಬರವಾಗುವಂತೆ ಮಾಡುತ್ತಾರೆ.

ತೋಟದ ಜಾಗವನ್ನು ಸರಿಮಟ್ಟದ ದೊಡ್ಡ ತುಂಡುಗಳನ್ನಾಗಿ ಅಳತೆ ಮಾಡಿಕೊಳ್ಳಬೇಕು. ಒಂದೊಂದು ತುಂಡಿನಲ್ಲೂ ಕಾಪಿಗಿಡಗಳನ್ನು ಹಲವು ಸಾಲುಗಳಲ್ಲಿ ನೆಡಲಾಗುವುದು. ಎರೆಡು ತುಂಡುಗಳ ನಡುವೆ ನಾಲ್ಕು ಗಾಲಿಯ ಗಾಡಿಗಳು ಓಡಾಡುವಶ್ಟು ಜಾಗವಿದ್ದರೆ ಒಳ್ಳೆಯದು. ಪ್ರತಿ ತುಂಡಿನಲ್ಲೂ ಕಾಪಿಗಿಡಗಳನ್ನು ಸಾಲಾಗಿ ನೆಡಲು ಗುರುತುಗಳನ್ನು ಮೊದಲು ಮಾಡಬೇಕಾಗುತ್ತದೆ. ಅರಾಬಿಕಾ ಮತ್ತು ರೊಬಸ್ಟಾ ಗಿಡಗಳನ್ನು ಈ ಕೆಳಗಿನ ಅಳತೆಯಲ್ಲಿ ಹಲವು ಸಾಲುಗಳಲ್ಲಿ ನೆಡಬಹುದು.

ಅರಾಬಿಕಾ – 7‍ X 7, 5 X 5 ಇಲ್ಲವೇ 8 X 8 ಅಡಿಗಳು (ಒಂದು ಸಾಲಿನಲ್ಲಿರುವ ಗಿಡಗಳ ನಡುವಿನ ದೂರ x ಎರೆಡು ಸಾಲುಗಳ ನಡುವಿನ ದೂರ)
ರೊಬಸ್ಟಾ – 8 X 8 ಇಲ್ಲವೇ 10 X 10 ಅಡಿಗಳುThota

ಗುಂಡಿ ತೆಗೆಯುವುದು:

ಕಾಪಿ ಗಿಡಗಳನ್ನು ನೆಡಲು ಗುರುತು ಮಾಡಿರುವ ಸಾಲಿನಲ್ಲಿ ಗುಂಡಿಯನ್ನು ತೆಗೆಯುವುದು ಮುಂದಿನ ಕೆಲಸವಾಗಿರುತ್ತದೆ. ಈ ಗುಂಡಿಗಳನ್ನು ತೆಗೆಯುವಾಗ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ;

1. ಕಾಪಿಗಿಡದಲ್ಲಿ ನಲ್ಲಿಬೇರುಗಳಿರುತ್ತವೆ ಇವು ಮಣ್ಣಿನ ಆಳಕ್ಕೆ ನೇರವಾಗಿ ಹೋಗುತ್ತವೆ. ಕಾಪಿಗಿಡದ ಬದಿಯ ಬೇರುಗಳು ಕೂಡ ಮಣ್ಣಿನಲ್ಲಿ ಸಾಕಶ್ಟು ಹರಡಿಕೊಳ್ಳುತ್ತವೆ. ಹೀಗಾಗಿ ಮಣ್ಣು ಸಡಿಲವಾಗಿದ್ದರೆ ಒಳ್ಳೆಯದು ಮತ್ತು ಗುಂಡಿಯು ಆಳವಿದ್ದಶ್ಟು ಒಳ್ಳೆಯದು.

Chitra 22. ಗಿಡ ನೆಡಲು ಗುರುತು ಮಾಡಿರುವ ಜಾಗದ ಸುತ್ತ, ಬೇರುಗಳ ಬೆಳವಣಿಗೆಗೆ ಅಡ್ಡಿಯಾಗುವ ಕಲ್ಲುಗಳು ಇರದಂತೆ ನೋಡಿಕೊಳ್ಳಬೇಕು.

3. ಹೆಚ್ಚಾಗಿ ಕಾಪಿಗಿಡಗಳನ್ನು ಜುಲೈ ಇಲ್ಲವೇ ಆಗಸ್ಟ್ ತಿಂಗಳಿನ ಮುಂಗಾರು ಮಳೆಯ ಹೊತ್ತಿನಲ್ಲಿ ತೋಟದಲ್ಲಿ ನೆಡಲಾಗುವುದು. ಅದಕ್ಕಾಗಿ ಬೇಕಾದ ಕಾಪಿಗುಂಡಿಗಳನ್ನು ಎರೆಡು ತಿಂಗಳು ಮುಂಚೆಯೇ ತೋಡಿದರೆ ಒಳ್ಳೆಯದು. ಇದರಿಂದ ಗಿಡನೆಡುವ ಜಾಗದ ಸುತ್ತಲಿನ ಮಣ್ಣು ಸಡಿಲವಾಗುತ್ತದೆ.

4. ಕಾಪಿಗುಂಡಿಯು 1.5 ‍X 1.5 X 1.5 (ಉದ್ದ x ಅಗಲ x ಆಳ) ಅಡಿಗಳಶ್ಟು ಇರಬೇಕು.

5. ಬೇಕಾದ ಆಳದ ಗುಂಡಿಯನ್ನು ತೆಗೆದ ಬಳಿಕ ಗುಂಡಿಯನ್ನು ಕೇವಲ ಮಣ್ಣಿನಿಂದ ಮುಚ್ಚಬೇಕು. ಮಣ್ಣನ್ನು ಯಾವುದೇ ಕಾರಣಕ್ಕೂ ಗುಂಡಿಗೆ ಒತ್ತಿ ತುಂಬಬಾರದು. ಸಣ್ಣ ಕಲ್ಲು ಮತ್ತು ಇತರೆ ಕಸಗಳಿದ್ದರೆ ಅವನ್ನು ತುಂಬಬಾರದು. ಹೀಗೆ ಮಣ್ಣು ಮುಚ್ಚಿದ ಗುಂಡಿಯ ಮೇಲೆ ಗುರುತಿಗಾಗಿ ಒಂದು ಬಿದಿರಿನ ಕಡ್ಡಿಯನ್ನೋ, ಕೋಲನ್ನೋ ನೆಡಬಹುದು (ನೆನಪಿರಲಿ, ನಾವಿನ್ನು ಕಾಪಿಗಿಡವನ್ನು ನೆಟ್ಟಿಲ್ಲ)

ಗಿಡನೆಡುವುದು ಮತ್ತು ಆರಯ್ಕೆ:
ಪಾತಿಯ ಬುಟ್ಟಿಗಳಲ್ಲಿರುವ ಕಾಪಿಗಿಡಗಳನ್ನು ತೋಟದ ಜಾಗಕ್ಕೆ ಸಾಗಿಸಿಟ್ಟಿರಬೇಕು. ಈಗಾಗಲೇ ಮಣ್ಣನ್ನು ಮುಚ್ಚಿರುವ ಕಾಪಿಗುಂಡಿಗಳನ್ನು ಕೈಯಿಂದಲೇ ಬಗೆಯಬಹುದು, ಕಾಪಿ ಬುಟ್ಟಿಯ ಅಳತೆಗೆ ಸರಿಹೊಂದುವಂತೆ ಗುಂಡಿಗೆ ಮುಚ್ಚಿದ್ದ ಮಣ್ಣನ್ನು ಕೈಯಿಂದ ತೆಗೆಯಬೇಕು. ಪ್ಲಾಸ್ಟಿಕ್ ಬುಟ್ಟಿಯನ್ನು ಜೋಪಾನವಾಗಿ ಹರಿದು ತೆಗೆದು, ಕಾಪಿ ಗಿಡದ ಬೇರಿನ ಸುತ್ತಲಿನ ಮಣ್ಣು ಒಡೆದುಹೋಗದಂತೆ, ಆ ಬುಟ್ಟಿಯ ಮಣ್ಣಿನ ಸಮೇತ ಗಿಡವನ್ನು ಗುಂಡಿಯೊಳಗೆ ನೇರವಾಗಿ ನೆಡಬೇಕು. ಬಳಿಕ ಸುತ್ತಲಿನ ಮಣ್ಣಿನಿಂದ ಮುಚ್ಚಿ ಗಿಡವನ್ನು ಗಟ್ಟಿಯಾಗಿ ಊರಬೇಕು. ಹೀಗೆ ನೆಟ್ಟ ಗಿಡವು ಬಾಗದಂತೆ ನೆರವಿಗಾಗಿ ಒಂದು ಮರದ ಕೋಲನ್ನು ನೆಡುವುದು ಒಳ್ಳೆಯದು.

ಗಿಡವನ್ನು ನೆಡುವಾಗ ಕೊಟ್ಟಿಗೆ ಗೊಬ್ಬರ ಇಲ್ಲವೇ ಪ್ರತಿ ಗುಂಡಿಗೆ 50-100 ಗ್ರಾಂ ನಶ್ಟು ರಾಕ್ ಪಾಸ್ಪೇಟ್ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಗಿಡದ ಬೆಳವಣಿಗೆಗೆ ನೆರವಾಗುತ್ತದೆ. ಸಾವಯವ ಬೆಳೆಗಾರರು ಬೆಳವಣಿಗೆಗೆ ನೆರವಾಗುವ ಸಾವಯವ ಗೊಬ್ಬರವನ್ನು ಬಳಸಬಹುದು.

ಆರಯ್ಕೆ:

1. ಗಿಡವನ್ನು ನೆಟ್ಟ ಒಂದು ತಿಂಗಳೊಳಗೆ ಮಳೆ ಬಂದರೆ ಒಳ್ಳೆಯದು ಇಲ್ಲವಾದರೆ ಗಿಡಕ್ಕೆ ನೀರಿನ ಏರ‍್ಪಾಡನ್ನು ಮಾಡಬೇಕು.

2. ಮಳೆಗಾಲ ಮುಗಿಯುವ ಹೊತ್ತಿಗೆ, ಕಾಡುಮರದ ಸೊಪ್ಪಿನಿಂದ ಗಿಡದ ಸುತ್ತಲು ಮರೆಯನ್ನು ಮಾಡಿ ನೇಸರನ ಬಿಸಿಲು ಸುಡದಂತೆ ಎಚ್ಚರ ವಹಿಸಬೇಕು.

3. ಗಿಡವನ್ನು ನೆಟ್ಟ ಕೆಲವು ದಿನದಲ್ಲಿ ಅದರ ಬುಡದಲ್ಲಿರುವ ಮಣ್ಣು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರೆ, ಗಿಡದ ಸುತ್ತಲಿನ ಮಣ್ಣನ್ನು ಕಡೆದು ಗಿಡದ ಬುಡಕ್ಕೆ ಹಾಕಿ ಮಣ್ಣನ್ನು ಏರಿಸಬೇಕು. ಇದು ಗಿಡವು ಗಟ್ಟಿಯಾಗಿ ಹಾಗು ನೇರವಾಗಿ ಬೆಳೆಯಲು ನೆರವಾಗುತ್ತದೆ.

4. ಕಾಪಿ ಗಿಡದ ಸಾಲುಗಳ ನಡುವೆ, ಹೆಚ್ಚಿನ ನೆರಳು ಮತ್ತು ಸೊಪ್ಪಿನ ಗೊಬ್ಬರಕ್ಕಾಗಿ ಹಾಲುವಾಣ/ಪಂಗಾರು ಗಿಡಗಳನ್ನು ನೆಡುತ್ತಾರೆ. ಇದು ಗಿಡಕ್ಕೆ ಬೇಕಾದ ನೆರಳನ್ನು ಒದಗಿಸುತ್ತದೆ. ಕಾಪಿಗಿಡಗಳು ಸಾಕಶ್ಟು ಎತ್ತರಕ್ಕೆ ಬಂದಾಗ ನೆರಳು ಹೆಚ್ಚಾದರೆ ಇವನ್ನು ಕಡಿದು ತೆಗೆಯಲಾಗುತ್ತದೆ. ಈ ಗಿಡಗಳ ಸೊಪ್ಪು ತೊಟಕ್ಕೆ ಒಳ್ಳೆಯ ಗೊಬ್ಬರವಾಗಿದೆ.

5. ಸಾವಯವ ಇಲ್ಲವೇ ರಾಸಾಯನಿಕ ಬೇಸಾಯ ಪದ್ದತಿಯ ಆದಾರದ ಮೇಲೆ ಗಿಡಕ್ಕೆ ಗೊಬ್ಬರವನ್ನು ಹಾಕಬೇಕು.

6. ಗಿಡಗಳನ್ನು ತೋಟದಲ್ಲಿ ನೆಟ್ಟಾಗ ಗಿಡಗಳ ನಡುವೆ ಸಾಕಶ್ಟು ಕಾಲಿ ಜಾಗ ಇರುವುದರಿಂದ ಅಲ್ಲಿ ಕಳೆಗಿಡಗಳು ಹುಟ್ಟುತ್ತಲೇ ಇರುತ್ತವೆ. ಕಳೆಗಿಡಗಳು ಗಿಡದ ಬೆಳವಣಿಗೆಗೆ ತೊಂದರೆ ನೀಡುತ್ತವೆ. ಈ ಕಳೆಗಿಡಗಳನ್ನು ಕೊಚ್ಚಿ ತೆಗೆಯುತ್ತಿರಬೇಕು ಇದನ್ನು ‘ಹಳ ಹೊಡೆಯುವುದು’ ಎಂದು ನಮ್ಮಲ್ಲಿ ಕರೆಯುತ್ತಾರೆ.

ಹೀಗೆ ಗಿಡವನ್ನು ನೆಟ್ಟ ಮೊದಲ ವರುಶ ಅದರ ಆರಯ್ಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಕಾಪಿಗಿಡವು ಬೆಳೆದು ಇಳುವರಿಯನ್ನು ಕೊಡಲು ಸುಮಾರು ನಾಲ್ಕರಿಂದ ಅಯ್ದು ವರುಶಗಳು ಬೇಕಾಗುತ್ತವೆ. ಇಳುವರಿ ಕೊಡುತ್ತಿರುವ ಗಿಡದಿಂದ ವರುಶಕ್ಕೆ ಒಮ್ಮೆ ಕಾಪಿಬೆಳೆಯ ಕುಯ್ಯಲನ್ನು ಮಾಡಬಹುದು. ಕಾಪಿ ತೋಟಕ್ಕೆಂದು ಇರುವ ಜಾಗದಲ್ಲಿ ಹೆಚ್ಚಿನ ಮರಗಳನ್ನು ಕಡಿಸದೇ, ಇತರೆ ಉಸಿರಿಗಳ ಬದುಕಿಗೆ ಹಾನಿ ಮಾಡದೇ, ಕಾಡಿನ ನಡುವೆಯೇ ಒಂದು ಬೆಳೆ ನೀಡುವ ಗಿಡಗಳಾಗಿ ಈ ಕಾಪಿಗಿಡಗಳನ್ನು ಬೆಳೆಸಬಹುದು. ತಾನೂ ಒಂದು ಬಗೆಯ ಗಿಡವಾಗಿ ಕಾಡಿನಲ್ಲಿರುವ ಮರಗಿಡಗಳ ಹಲತನದೊಂದಿಗೆ ಸೇರಿಕೊಳ್ಳುವುದು ಈ ಬೆಳೆಯ ಮೇಲ್ಮೆ.

(ಚಿತ್ರಸೆಲೆ: homongfoundation)



Categories: ಅರಿಮೆ

Tags: , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s