ಕೊನೆಯ ಮಾಹಿತಿ ಕೊಡುವ ಕಪ್ಪುಪೆಟ್ಟಿಗೆ
– ಹರ‍್ಶಿತ್ ಮಂಜುನಾತ್.ಕಪ್ಪುಪೆಟ್ಟಿಗೆ(Black Box) ಸಾಮಾನ್ಯವಾಗಿ ಬಾನೋಡಗಳು ಅವಗಡಕ್ಕೆ ಸಿಲುಕಿದ ಹೊತ್ತಲ್ಲಿ ಈ ಪದ ಹೆಚ್ಚಾಗಿ ಮಂದಿಯ ನಡುವೆ ಬಳಕೆಯಲ್ಲಿರುತ್ತದೆ. ಅಲ್ಲದೇ ಇಂತಹ ಹೊತ್ತಲ್ಲಿ ಮೊದಲು ಹುಡುಕುವುದೇ ಬಾನೋಡದ ಕಪ್ಪುಪೆಟ್ಟಿಗೆಯನ್ನು. ಬಾನೋಡಗಳು ಅವಗಡಕ್ಕೆ ಸಿಲುಕಿದ ಬಗ್ಗೆ ನೋಡುಗರು ಇಲ್ಲದ ಹೊತ್ತಿನಲ್ಲಿಯೂ, ಹೆಚ್ಚು ನಿಕರವಾಗಿ ಮಾಹಿತಿ ಕಂಡುಕೊಳ್ಳಲು ಕಪ್ಪುಪೆಟ್ಟಿಗೆ ಬಲು ಉಪಕಾರಿ.
ಏನಿದು ಕಪ್ಪುಪೆಟ್ಟಿಗೆ?
ಕಪ್ಪುಪೆಟ್ಟಿಗೆಯ ಇನ್ನೊಂದು ಹೆಸರು ಮುಂಗಾಳಿತೇರು ದನಿ ಅಚ್ಚೊತ್ತುಗ (CVR – Cockpit Voice Recorder). 1950ರ ಹೊತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಪ್ಪುಪೆಟ್ಟಿಗೆಯನ್ನು ಕಂಡುಹಿಡಿದು ಬಳಕೆಗೆ ತಂದಾಗ ಅದಕ್ಕೆ ಕಪ್ಪು ಬಣ್ಣವನ್ನು ಹಚ್ಚಲಾಗಿತ್ತು. ಇಲ್ಲಿಂದಲೇ ಕಪ್ಪುಪೆಟ್ಟಿಗೆ ಹೆಸರು ಕೂಡ ಬಳಕೆಗೆ ಬಂದಿತು. ಮುಂದಿನ ದಿನಗಳಲ್ಲಿ ಗುರುತಿಸಲು ಸುಲಬವಾಗಲಿ ಎಂಬ ನಿಟ್ಟಿನಲ್ಲಿ ಕಡುಹಳದಿ ಅತವಾ ಕಡುಕೇಸರಿ ಬಣ್ಣವನ್ನು ಬಳಸಲಾಯಿತು. ಆದರೂ ಕಪ್ಪುಪಟ್ಟಿಗೆ ಎನ್ನುವ ಹೆಸರು ಈಗಲೂ ಹಾಗೆಯೇ ಉಳಿದುಕೊಂಡಿದೆ.
ಸಾಮಾನ್ಯವಾಗಿ ಯಾವುದಾದರೂ ಬಾನೋಡದ ಹಾರಾಟವು ವಿಪಲಗೊಂಡು ಪತನವಾದರೆ, ಅದನ್ನು ಕಂಡು ಹಿಡಿಯುವ ಕೆಲಸದಲ್ಲಿ ಎರಡು ಚೂಟಿಗಳು(Device) ಪ್ರಮುಕ ಪಾತ್ರ ವಹಿಸುತ್ತದೆ. ಒಂದು, ಹಾರಾಟ ತಿಳಿಹ ಅಚ್ಚೊತ್ತುಗ(FDR – Flight Data Recorder) ಮತ್ತೊಂದು, ಗಾಳಿತೇರಿನ(Aircraft) ಮುಂಗಾಳಿತೇರು ದನಿ ಅಚ್ಚೊತ್ತುಗ((CVR – Cockpit Voice Recorder). ಇವೆರಡೂ ಸೇರಿಸಿ ಕಪ್ಪುಪೆಟ್ಟಿಗೆ ಎನ್ನುವುದು.
ಹಾರಾಟ ತಿಳಿಹ ಅಚ್ಚೊತ್ತುಗವು ಬಾನೋಡದ ಬಿರುಸು (Speed), ಬಿಣಿಗೆ(Engine), ಬಿರುಸೇರಿಕೆ(Acceleration), ಗಾಳಿಯ ಬಿರುಸು (Wind Speed), ಎತ್ತರ(height), ತುಬ್ಬೆಲೆ(Radar) ಇರುವ ಜಾಗ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುತ್ತದೆ. ಹಾಗೆಯೇ ಮುಂಗಾಳಿತೇರು ದನಿ ಅಚ್ಚೊತ್ತುಗವು ಅವಗಡಕ್ಕೂ ಮೊದಲು ಬಾನೋಡದ ಮುಂಗಾಳಿತೇರಿನೊಳಗೆ (Cockpit) ಗಾಳಿತೇರಾಳುಗಳ(Pilot) ನಡುವೆ ನಡೆದ ಮಾತುಗಳನ್ನು ಕೂಡಿಟ್ಟು ಕೊಂಡಿರುತ್ತದೆ.
ಯಾವುದೇ ಬಾನೋಡದ ದುರಂತದ ಹೊತ್ತಲ್ಲಿ ಅತೀ ಕಡಿಮೆ ಹಾನಿಗೊಳಗಾಗುವ ಬಾಗವೆಂದರೆ ಬಾನೋಡದ ಬಾಲ. ಹಾಗಾಗಿ ಈ ಕಪ್ಪುಪಟ್ಟಿಗೆಯನ್ನು ಬಾಲಕ್ಕೆ ಹತ್ತಿರವಾಗಿ ಬದ್ರವಾಗಿಡಲಾಗುತ್ತದೆ. ಕಪ್ಪುಪೆಟ್ಟಿಗೆಯ ಹೊರಬಾಗ ಬಹಳಶ್ಟು ಹೊಳಪಿನಿಂದ ಕೂಡಿರುತ್ತದೆ, ಆದ್ದರಿಂದ ಇದನ್ನು ಸುಮಾರು 20 ಅಡಿ ದೂರದಿಂದಲೂ ಗುರುತಿಸಬಹುದಾಗಿದೆ. ಇದು ಸಾಮಾನ್ಯವಾಗಿ ಬೆಂಕಿ ಮತ್ತು ನೀರಿನ ಪ್ರಬಾವದಿಂದ ಯಾವುದೇ ಹಾನಿಗೊಳಗಾಗುವುದಿಲ್ಲ. ಕಪ್ಪುಪೆಟ್ಟಿಗೆಯ ಅಚ್ಚೊತ್ತುಗ(Recorder)ವನ್ನು 11000 ಡಿಗ್ರಿ ಸೆಲ್ಸಿಯಸ್ ಇರುವ ಬೆಂಕಿಯಲ್ಲಿ ಹಲವು ಗಂಟೆಗಳ ಕಾಲ ಇಟ್ಟು ಮತ್ತು 2600 ಡಿಗ್ರಿ ಸೆಲ್ಸಿಯಸ್ ಉಗಿಯಲ್ಲಿ 10 ಗಂಟೆಗಳ ಕಾಲ ಇಟ್ಟು ಒರೆ ಹಚ್ಚಿ ನೋಡಲಾಗಿರುತ್ತದೆ. ಅಲ್ಲದೇ ಇದು -55 ಡಿಗ್ರಿ ಸೆಲ್ಸಿಯಸ್ ನಿಂದ +70 ಡಿಗ್ರಿ ತಾಪಮಾನದಲ್ಲೂ ಕೆಲಸ ಮಾಡಲು ಯೋಗ್ಯವಾಗಿರುತ್ತದೆ.
1960 ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊದಲಬಾರಿಗೆ ಬಾನೋಡಗಳಲ್ಲಿ ಕಪ್ಪುಪೆಟ್ಟಿಗೆಯನ್ನು ಅಳವಡಿಸಲಾಯಿತು. ಈ ಬದಲಾವಣೆ ಮುಂದಿನ ದಿನಗಳಲ್ಲಿ ಕಪ್ಪುಪೆಟ್ಟಿಗೆಯ ಅನಿವಾರ‍್ಯತೆಯನ್ನು ಸಾಬೀತುಪಡಿಸಿತು. ಇದರಿಂದ ನಾಗರ್ ಬಾನೋಡದ ಮಹಾ ನಿರ‍್ದೇಶನಾಲಯ ನಿಯಮಾನುಸಾರವಾಗಿ ಎಲ್ಲಾ ಬಾನೋಡಗಳು ಮತ್ತು ತಿರುಗಲುಗ(Helicopter)ಗಳಿಗು ಹಾರಾಟ ತಿಳಿಹ ಅಚ್ಚೊತ್ತುಗ ಮತ್ತು ಮುಂಗಾಳಿತೇರು ದನಿ ಅಚ್ಚೊತ್ತುಗ ಅಳವಡಿಕೆ ಮಾಡಬೇಕೆಂದು ಜನವರಿ 1, 2005ರಲ್ಲಿ ತೀರ‍್ಮಾನಿಸಿತು.
ಕಪ್ಪುಪೆಟ್ಟಿಗೆಯ ಅರಕೆಗಾರ:
ಕಪ್ಪುಪಟ್ಟಿಗೆಯನ್ನು ಕಂಡು ಹಿಡಿದವರು ಆಸ್ಟ್ರೇಲಿಯಾದ ಡೇವಿಡ್ ವಾರೆನ್. 1953 ರಲ್ಲಿ ಜಗತ್ತಿನ ಮೊದಲ ವಾಣಿಜ್ಯ ಉದ್ದೇಶಿತ ಚಿಮ್ಮುಗೆ(Jet) ಕಾಮೆಟ್, ಅವಗಡಕ್ಕೆ ಸಿಲುಕಿದ ಹೊತ್ತಿನಲ್ಲಿ ಡೇವಿಡ್ ವಾರೆನ್ ಮನದಲ್ಲಿ ಕಪ್ಪುಪೆಟ್ಟಿಗೆ ಅರಕೆಯ ಬಗ್ಗೆ ಹೊಳೆದಿತ್ತು. ತನಿಕೆಯ ಹೊತ್ತಿನಲ್ಲಿ ಮಾತು ಸೇರಿದಂತೆ ಇತರೆ ಕೆಲವು ಮಾಹಿತಿಗಳ ಹೆಚ್ಚುಗಾರಿಕೆಯ ಅಂಶಗಳ ಬಗ್ಗೆ ಮನಗಂಡ ವಾರೆನ್, ಚೂಟಿ ಒಂದನ್ನು ತಯಾರಿಸಲು ಮುಂದಾದರು. ಹಲವಾರು ತೊಡಕಗಳನ್ನು ಎದುರಿಸಿ, ಅರಕೆಯಿಂದ ಹಿಂದೆ ಸರಿಯದೇ 1956ರಲ್ಲಿ ಕಪ್ಪು ಪೆಟ್ಟಿಗೆಯನ್ನು ರಚಿಸಿದರು. ಇದರ ಅವಶ್ಯಕತೆಯ ಬಗ್ಗೆ ಅರಿತುಕೊಂಡ ಸರಕಾರ, ಮುಂದೆ ಇದನ್ನು ಕಡ್ಡಾಯಗೊಳಿಸಿತು. ಈ ಮೂಲಕ ಕಪ್ಪುಪೆಟ್ಟಿಗೆಯಂತಹ ಹೆಚ್ಚುಗಾರಿಕೆಯ ಚೂಟಿ, ಡೇವಿಡ್ ವಾರೆನ್ ವಿಶ್ವಬಾನೋಡಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ.
ಇಂಡಿಯಾದಲ್ಲಿ ಹೀಗೆ:
ಇಂಡಿಯಾ ನಾಡಿನಲ್ಲಿ ಎಲ್ಲಾದರೂ ಬಾನೋಡ ದುರಂತದಂತಹ ಅವಗಡಗಳಾದರೆ, ಅವಗಡದ ಬಳಿಕ ಮೊದಲು ಕಪ್ಪುಪೆಟ್ಟಿಗೆಯನ್ನು ಕಂಡುಹುಡುಕಿ ಅದನ್ನು ಸಿವಿಲ್ ಏವಿಯೇಶನ್‍ನ ಪ್ರಮುಕ ಕಚೇರಿ ಇರುವ ದೆಹಲಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಅಲ್ಲಿಯೂ ಕಪ್ಪುಪೆಟ್ಟಿಗೆಯಿಂದ ಯಾವುದೇ ಮಾಹಿತಿಯನ್ನು ಪಡೆಯಲು ಸಾದ್ಯವಾಗದೇ ಇದ್ದಲ್ಲಿ, ಕಪ್ಪುಪೆಟ್ಟಿಗೆಯನ್ನು ಬಾನೋಡ ತಯಾರಾದ ಸಂಸ್ತೆಗೆ ಕಳುಹಿಸಿ ಅಲ್ಲಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ.
(ಚಿತ್ರ ಸೆಲೆ: pixgood.com, wikipedia)
ಇತ್ತೀಚಿನ ಅನಿಸಿಕೆಗಳು