ರಂಗಾಕು – ಜಪಾನಲ್ಲೊಂದು ಅರಿಮೆಯ ಚಳುವಳಿ
ಜಪಾನ್
ಹೆಸರು ಕೇಳಿದೊಡನೆ ನಮ್ಮೆದುರಿಗೆ ನಿಲ್ಲುವುದು ಅದರ ರೊಬೋಟ್‍ಗಳು, ತಾನೋಡಗಳ (automobiles) ಕೈಗಾರಿಕೆಗಳು, ಮುಂಚೂಣಿಯಲ್ಲಿ ನಿಲ್ಲುವ ಅದರ ಅರಕೆಗಳು, ಎಂತದೇ ಅವಗಡಗಳನ್ನು ಎಂಟೆದೆಯಿಂದ ಒಗ್ಗಟ್ಟಾಗಿ, ಜಾಣ್ಮೆಯಿಂದ ಎದುರಿಸುವ ಅದರ ನಾಡಿಗರು.
ಸಂಪನ್ಮೂಲಗಳ ಕೊರತೆಯನ್ನು ಎದುರಿಸಿದರೂ ನಾಡೊಂದು ಹೇಗೆ ಇಶ್ಟೊಂದು ಮುಂದುವರೆಯಿತು? ಹೇಗೆ ಸಾಯನ್ಸ್ ಮತ್ತು ಟೆಕ್ನಾಲಜಿಯಲ್ಲಿ ಅದಿಂದು ಮುನ್ನೆಲೆಗೆ ಬಂತು? ಅನ್ನುವ ಕೇಳ್ವಿಯ ಜಾಡು ಹಿಡಿದು ನಡೆದಾಗ ಹಲವು ಮುಂದುವರೆದ ನಾಡುಗಳಲ್ಲಿ ನಡೆದಂತೆ ಜಪಾನಲ್ಲೂ ಕೂಡ ಅದರ ನುಡಿಯ ಸುತ್ತ ಚಳುವಳಿ ನಡೆದಿರುವುದು, ಅರಿಮೆಯನ್ನು ತನ್ನದಾಗಿಸುವ ಕೆಲಸ ಎಡೆಬಿಡದೇ ಸಾಗಿದ್ದು ಕಾಣುತ್ತದೆ. ಜಪಾನಿನಲ್ಲಿ ನಡೆದ ಅರಿಮೆಯನ್ನು ತನ್ನಾದಾಗಿಸುವ ಅಂತಹ ಕಾಲಗಟ್ಟವೊಂದರ ಬಗ್ಗೆ ಈಗ ತಿಳಿಯೋಣ ಬನ್ನಿ.
ಬೇಲಿಯ ನಾಡು:
ಕ್ರಿ.ಶ. 1633 ರಿಂದ 1853 ರ ಹೊತ್ತಿನಲ್ಲಿ ಜಪಾನ್ ನಾಡಿಗರನ್ನು ಹೊರನಾಡುಗಳ ಒಡನಾಟದಿಂದ ದೂರ ಉಳಿಸಲಾಗಿತ್ತು. ಜಪಾನ್‍ನಿಂದ ಹೊರಹೋಗುವವರನ್ನು ಮತ್ತು ಜಪಾನಿಗೆ ಬೇರೆ ನಾಡಿಂದ ಬರುವವರನ್ನು ನೇಣಿಗೇರಿಸುವಂತಹ ಕಟ್ಟಲೆಗಳು ಆಗ ಜಾರಿಯಲ್ಲಿದ್ದವು. ಹೊರನಾಡುಗಳು ಅದರಲ್ಲೂ ಸ್ಪೇನ್ ಮತ್ತು ಪೋರ‍್ಚುಗಲ್ ದೇಶಗಳ ಆಳ್ವಿಕೆಯ ಮತ್ತು ದಾರ‍್ಮಿಕ ದಾಳಿಯನ್ನು ತಡೆಗಟ್ಟಲು ಜಪಾನ್ ದೊರೆಗಳು ಇಂತಹ ದಾರಿಯನ್ನು ಆಯ್ಕೆಮಾಡಿಕೊಂಡಿದ್ದರು. ಬೇರೆ ನಾಡುಗಳಿಂದ ನೇರವಾದ ಒಡನಾಟ ಕಳಚಲ್ಪಟ್ಟ ಆ ಹೊತ್ತಿನ ಜಪಾನ್‍ನ್ನು ಸಾಕೊಕು (Sakoku) ಅಂದರೆ ಸರಪಳಿಯ ಇಲ್ಲವೇ ಬೇಲಿಯ ನಾಡು ಎಂದು ಕರೆಯಲಾಗುತ್ತದೆ.
ಹೊರನಾಡುಗಳಿಂದ ಜಪಾನಿಗರು ನೇರವಾದ ಒಡನಾಟದಿಂದ ದೂರವಿದ್ದರೂ, ಈ ಹೊತ್ತಿನಲ್ಲಿ ಕೆಲವು ರೇವುಪಟ್ಟಣಗಳಿಂದ ಹೊರದೇಶಗಳೊಡನೆ ವ್ಯಾಪಾರ, ಕೊಡುಕೊಳ್ಳುವಿಕೆಗೆ ಕೆಲವು ಕಟ್ಟುಪಾಡುಗಳೊಂದಿಗೆ ಅವಕಾಶವನ್ನು ನೀಡಲಾಗಿತ್ತು. ನಾಗಾಸಾಕಿ ಊರಿನ ಬಳಿ ಡೆಜಿಮಾ (Dejima) ಎಂಬ ಸ್ತಳವನ್ನು ಇದಕ್ಕಾಗಿ ಅಣಿಗೊಳಿಸಲಾಗಿತ್ತು. ಡೆಜಿಮಾ ಮೂಲಕ ಮುಕ್ಯವಾಗಿ ಡಚ್ಚರು ಜಪಾನಿನೊಡನೆ ಒಳ್ಳೆಯ ನಂಟನ್ನು ಬೆಳಸಿಕೊಂಡರು. ಆಗ ಶುರುವಾದದ್ದೇ ಡಚ್ಚರಿಂದ ಪಡುವಣ ನಾಡುಗಳ ಅರಿಮೆಯ ಸಾರವನ್ನು ಹೀರುವ ಜಪಾನಿಗರ ಚಳುವಳಿ.
(ಡಚ್ಚರ ಹಡಗನ್ನು ಜಪಾನಿಗೆ ಬರಮಾಡಿಕೊಳ್ಳುತ್ತಿರುವ ತಿಟ್ಟ)
ರಂಗಾಕು – ಚಳುವಳಿ:
ಬೇರೆ ನಾಡುಗಳಿಂದ ಒಡನಾಟ ಕಡಿಯಲ್ಪಟ್ಟಿದ್ದರೂ ಡಚ್ಚರು ಜಪಾನಿಗೆ ಪಡುವಣ ದೇಶದಲ್ಲಿ ನಡೆಯುತ್ತಿರುವ ಅರಿಮೆಯ ಮಾಹಿತಿಯನ್ನು, ಅಲ್ಲಿ ಹುಟ್ಟುತ್ತಿದ್ದ ಸಲಕರಣೆಗಳನ್ನು, ಕೈಗಾರಿಕೆಗಳ ತಿಳುವಳಿಕೆಯನ್ನು ತಮ್ಮ ವ್ಯಾಪಾರದೊಂದಿಗೆ ಹೊತ್ತು ತರುತ್ತಿದ್ದರು. ಹೀಗಾಗಿಯೇ ಜಪಾನ್ ಡಚ್ಚರ ಮೇಲೆ ತನ್ನ ನಂಬಿಕೆಯನ್ನು ಇರಿಸತೊಡಗಿತು, ಅವರಿಂದ ವ್ಯಾಪಾರಾದಾಚೆಗೆ ಪಡುವಣದ ಅರಿವನ್ನು ತನ್ನದಾಗಿಸಿಕೊಳ್ಳುವಲ್ಲಿ ಗೊತ್ತುಗುರಿಯನ್ನು ಇಟ್ಟುಕೊಂಡು ಕೆಲಸ ಮಾಡತೊಡಗಿತು. ಅರಿಮೆಯ ಈ ಕಲಿಯುವಿಕೆಯನ್ನು ಜಪಾನಿನಲ್ಲಿ ರಂಗಾಕು (Rangaku) ಅಂದರೆ ಡಚ್ಚರಿಂದ ಕಲಿಯುವಿಕೆ ಇಲ್ಲವೇ ಪಡುವಣದಿಂದ ಕಲಿಯುವಿಕೆ (Western learning) ಎಂದು ಕರೆಯಲಾಗುತ್ತದೆ.
ಚಳುವಳಿಯ ಮೊದಲ ಹಂತ:
ಪಡುವಣದಿಂದ ಕಲಿಯುವ ಅರಿಮೆಯ ಚಳುವಳಿಯಾದ ರಂಗಾಕುವಿನ ಮೊದಲ ಹಂತವನ್ನು 1640–1720 ಎಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ಕಲಿಯುವಿಕೆ ತುಂಬಾ ಹಿಡಿತದಲ್ಲಿತ್ತು ಅನ್ನಬಹುದು. ಕಡಲ ಮತ್ತು ಮದ್ದರಿಮೆಯ ವಿಶಯಗಳನ್ನು ಬಿಟ್ಟು ಬೇರೆಲ್ಲ ಬಗೆಯ ಪಡುವಣದ ಹೊತ್ತಗೆಗಳನ್ನು ತಡೆಹಿಡಿಯಲಾಗಿತ್ತು. ಮೊದಲ ಹಂತವಾಗಿ ಜಪಾನ್ ಮತ್ತು ಡಚ್ ನುಡಿ ಬಲ್ಲವರನ್ನು ಹೊತ್ತಗೆಗಳ ಅನುವಾದಕ್ಕೆ ಅಣಿಗೊಳಿಸಲಾಗಿತ್ತು. ಇವರ ಕೆಲಸವೆಂದರೆ ಡಚ್ಚರು ಒದಗಿಸುವ ತಿಳುವಳಿಕೆಯನ್ನು ಜಪಾನಿ ನುಡಿಗೆ ಅನುವಾದಿಸುವುದು. ಪ್ರತಿ ವರುಶ ಜಪಾನಿಗೆ ಬರುವಾಗ ಡಚ್ಚರು ಪಡುವಣ ದೇಶಗಳಲ್ಲಿ ಏನು ನಡೆದಿದೆ, ಯಾವ ಬಗೆಯ ಕೈಗಾರಿಕೆಗಳು, ಅರಿಮೆಯ ಏಳಿಗೆಗಳು ನಡೆದಿವೆ ಅನ್ನುವುದನ್ನು ಜಪಾನಿಗರಿಗೆ ತಿಳಿಸಲು ಕೋರಲಾಯಿತು. ಇದರ ಬದಲಾಗಿ ಡಚ್ಚರಿಗೆ ತಮ್ಮ ಸರಕುಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ಒದಗಿಸಲಾಯಿತು.
ಮೊದಲಿಗೆ ಡಚ್ಚರಿಂದ ಪಡೆದ ಹೊತ್ತಗೆಗಳು ಜಪಾನಿ ನುಡಿಗೆ ಅನುವಾದಿಸಲ್ಪಟ್ಟರೆ, ಬರಬರುತ್ತಾ ಡಚ್ಚರು ಹೊತ್ತು ತರುತ್ತಿದ್ದ ದೂರತೋರುಕಗಳು (telescopes), ಗಡಿಯಾರಗಳು, ಸೀರುತೋರ‍್ಪುಗಳು (microscopes), ನಾಡತಿಟ್ಟಗಳು (maps/globes), ಕನ್ನಡಕಗಳು ಮುಂತಾದ ಸಲಕರಣೆಗಳ ಮಾರಾಟ ಹೆಚ್ಚತೊಡಗಿತು. ಅವುಗಳ ಬಳಕೆಯ ಬಗ್ಗೆ ಜಪಾನಿಗರು ತುಂಬಾ ನಲ್ಮೆಯಿಂದ ಡಚ್ಚರಿಂದ ಕಲಿತರು.
(ಮೈಕ್ರೋಸ್ಕೋಪ್ ಬಗ್ಗೆ ತಿಳಿಸುತ್ತಿರುವ ಜಪಾನಿ ಹೊತ್ತಗೆ)
ಚಳುವಳಿಯ ಎರಡನೆ ಹಂತ:
1720-1839 ರ ಹಂತವನ್ನು ಕಲಿಕೆಯ ಎರಡನೆಯ ಹಂತವೆಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ಪಡುವಣದ ಹಲವಾರು ಅರಿಮೆಯ ಹೊತ್ತಗೆಗಳು ತುಂಬಾ ಬಿರುಸಿನಿಂದ ಜಪಾನಿ ನುಡಿಗೆ ಅನುವಾದಿಸಲ್ಪಟ್ಟವು. ಇದರಲ್ಲಿ ತುಂಬಾ ಮುಕ್ಯವಾದ ಹೊತ್ತಗೆ ಎಂದರೆ ಮೊರಿಶಿಮಾ ಎಂಬುವವರು ಜಪಾನಿ ನುಡಿಗೆ ಅನುವಾದಿಸಿದ ’ಡಚ್ಚರ ಹೇಳಿಕೆಗಳು’ (Sayings of the Dutch). ಈ ಹೊತ್ತಗೆಯಲ್ಲಿ ಮೈಕ್ರೋಸ್ಕೋಪ್ ಕೆಲಸ ಮಾಡುವ ಬಗೆ, ಬಿಸಿ ಗಾಳಿಚಂಡಿನ ಅರಿಮೆಯ ಹಿನ್ನೆಲೆ, ಪಡುವಣದಲ್ಲಿರುವ ಬೇನೆಗಳ ಮತ್ತು ಅವುಗಳನ್ನು ಗುಣಪಡಿಸುವ ಮದ್ದರಿಮೆಯ ತಿಳುವಳಿಕೆ, ಹಡಗುಗಳ ಕಟ್ಟಣೆ, ಮಿಂಚರಿಮೆಯ ಅರಿವು ಮುಂತಾದ ಹತ್ತು ಹಲವಾರು ತಿಳುವಳಿಕೆಯನ್ನು ಜಪಾನಿ ನುಡಿಯಲ್ಲಿ ತಿಳಿಸಲಾಯಿತು.
(ಮದ್ದರಿಮೆಯ ಬಗ್ಗೆ ಬರೆಯಲಾದ ಮೊದಲ ಜಪಾನಿ ಹೊತ್ತಗೆ)
(ಇಲೆಕ್ಟ್ರಿಸಿಟಿ ಬಗ್ಗೆ ಬರೆಯಲಾದ ಮೊದಲ ಜಪಾನಿ ಹೊತ್ತಗೆ)
1804 ರಿಂದ 1829 ರ ಹೊತ್ತಿನಲ್ಲಿ ಜಪಾನಿನಲ್ಲಿ ಹಲವಾರು ಶಾಲೆಗಳು ತೆರೆಯಲ್ಪಟ್ಟವು. ಈ ಮೂಲಕ ಮೊದಲ ಹಂತಕ್ಕಿಂತ ಬಿರುಸಾಗಿ ಎರಡನೇ ಹಂತದಲ್ಲಿ ಜಪಾನಿಗರು ತಮ್ಮ ನುಡಿಯಲ್ಲಿ ದೊರೆತ ಪಡುವಣದ ಅರಿಮೆಯ ಸಾರವನ್ನು ಹೀರತೊಡಗಿರದರು.
ಚಳುವಳಿಯ ಮೂರನೆಯ ಹಂತ:
1829 ರ ಈಚೆಗಿನ ಹಂತವನ್ನು ಪಡುವಣದಿಂದ ಕಲಿಯುವಿಕೆಯ ಮೂರನೆಯ ಹಂತವೆಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ರಂಗಾಕು ಚಳುವಳಿ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಯಿತು. ಪಡುವಣದೊಂದಿಗೆ ಒಡನಾಟ ಜಪಾನಿಗರಿಗೆ ಒಳ್ಳೆಯದೇ ಹೊರತು ಕೆಡುಕಿನದಲ್ಲ ಅನ್ನುವಂತ ಮಾತುಗಳು ಹೆಚ್ಚಾಗಿ ಕೇಳತೊಡಗಿದವು. ಬೇಲಿಯ ನಾಡಾಗಿದ್ದ ಜಪಾನನ್ನು ಪಡುವಣದ ಮತ್ತು ಇತರ ಹೊರಜಗತ್ತಿನ ಕಲಿಕೆಗೆ ತೆರವುಗೊಳಿಸಬೇಕು ಅನ್ನುವ ಕೂಗುಗಳು ಕೇಳಿಸಿದವು.
ಮುಂದಿನ ಕೆಲವು ವರುಶಗಳಲ್ಲಿ ಜಪಾನ್ ಇಡಿ ಜಗತ್ತಿಗೆ ತೆರೆದುಕೊಳ್ಳುವುದಕ್ಕೆ ಮುಂಚಿತವಾಗಿಯೇ ರಂಗಾಕು ಚಳುವಳಿ ಜಪಾನಿಗರ ಅರಿಮೆಗೆ ಒಳ್ಳೆಯ ಅಡಿಪಾಯವನ್ನು ಹಾಕಿಕೊಟ್ಟಿತ್ತು.
ಚಳುವಳಿಯಲ್ಲಿ ಪದಕಟ್ಟಣೆ:
ಪಡುವಣದಿಂದ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಹಾತೊರೆದ ಜಪಾನಿಗರು ಮೊದಲು ಅವುಗಳನ್ನು ತಮ್ಮ ನುಡಿಗೆ ತರುವಂತಾಗಲು ಪದಕಟ್ಟಣೆಯಲ್ಲಿ ತುಂಬಾ ಬಿರುಸಿನಿಂದ ತೊಡಗಿದರು. ಮದ್ದರಿಮೆ (medical science) , ಇರುವರಿಮೆ (physical science), ಮಿಂಚರಿಮೆ (electrical science), ಇರ‍್ಪರಿಮೆ (chemistry), ಬೆಳಕರಿಮೆ (optics), ಉಸಿರಿಯರಿಮೆ (biology), ಬಾನರಿಮೆ (astronomy), ಚಳಕದರಿಮೆ (mechanical engineering) ಮುಂತಾದ ಹತ್ತು ಹಲವಾರು ಅರಿಮೆಯ ಕವಲುಗಳಲ್ಲಿ ದೊರೆತ ಪಡುವಣದ ಅರಿವನ್ನು ತಿಳಿಸಲು ಜಪಾನಿಗರು ಸಾವಿರಾರು ಜಪಾನಿ ಪದಗಳನ್ನು ಹುಟ್ಟುಹಾಕಿದರು.
ಶಿಜುಕಿ (Shizuki) ಎಂಬುವವರು ಪಿಸಿಕ್ಸ್ ವಿಶಯದ ಪದಗಳಿಗೆ ಜಪಾನಿ ಪದಗಳನ್ನು ಕಟ್ಟಿದರೆ, ಉಡಗವಾ ಯೊನ್ (Udagawa Yōan) ಎಂಬುವವರು ಕೆಮಿಸ್ಟ್ರಿಯಲ್ಲಿ ಪದಗಳನ್ನು, ಹಶಿಮೋಟೋ ಮುನಿಯೋಶಿ (Hashimoto Muneyoshi) ಮಿಂಚರಿಮೆಯ ಪದಗಳನ್ನು ಜಪಾನಿ ನುಡಿಯಲ್ಲಿ ಟಂಕಿಸಿದರು. ಒಟ್ಟಾರೆಯಾಗಿ ಈ ಚಳುವಳಿಯಲ್ಲಿ ಅರಿಮೆಯ ಪದಗಳ ಹಾಲ್ಗಡಲೇ ಹರಿಯೆತೆಂದರೆ ತಪ್ಪಾಗಲಾರದು. ಹೀಗೆ ಕಟ್ಟಲ್ಪಟ್ಟ ಜಪಾನಿ ಪದಗಳನ್ನು ಬಳಸಿಕೊಂಡು ಜಪಾನಿಗರು ಹಲವಾರು ಹೊತ್ತಗೆಗಳನ್ನು ಬರೆದರು. ಈ ಮೂಲಕ ಅರಿಮೆಯನ್ನು ತಮ್ಮ ನುಡಿಯಲ್ಲೇ ಎಲ್ಲರಿಗೂ ಎಟುಕುವಂತೆ ಮಾಡಿದರು.
ಕನ್ನಡಿಗರಿಗೆ ರಂಗಾಕು ಕಲಿಸುವ ಪಾಟ:
ಜಪಾನಿಗರ ರಂಗಾಕು ಚಳುವಳಿಯಿಂದ ಕನ್ನಡಿಗರು ಕಲಿಯಬೇಕಾದ ಮುಕ್ಯ ಪಾಟವೆಂದರೆ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ತಿಳುವಳಿಕೆಯನ್ನಾಗಲಿ ತಮ್ಮ ನುಡಿ ಸಮಾಜಕ್ಕೆ ತಲುಪಿಸಬೇಕೆಂದರೆ, ಆ ತಿಳುವಳಿಕೆಯನ್ನು ತಮ್ಮ ನುಡಿಗೆ ತರುವಂತಹ ಕೆಲಸ ಆಗಬೇಕು.
ಆದರೆ ಕನ್ನಡಿಗರು ಇಂದು ಇದರ ಎದುರಾದ ನಿಲುವನ್ನು ಹೊಂದಿರುವಂತಿದೆ. ಇಂಗ್ಲಿಶಲ್ಲಿ ಇಲ್ಲವೇ ಇನ್ನೊಂದು ನುಡಿಯಲ್ಲಿರುವ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಇಡಿ ಕನ್ನಡ ನುಡಿ ಸಮಾಜ ಇಂಗ್ಲಿಶ್ ಕಲಿಯಬೇಕು ಅನ್ನುವಂತ ತಪ್ಪು ತಿಳುವಳಿಕೆಯನ್ನು ಹೊಂದಿದೆ. ಇದರ ಬದಲಾಗಿ ಹೊರಜಗತ್ತಿನ ಅರಿವನ್ನು ಕನ್ನಡಕ್ಕೆ ತರುವ ಕೆಲಸ ತುಂಬಾ ಮುಕ್ಯ ಅನ್ನುವುದನ್ನು ಇಂದು ಮನಗಾಣಬೇಕಿದೆ ಮತ್ತು ಈ ನಿಟ್ಟಿನಲ್ಲಿ ಕನ್ನಡಿಗರು ಎಡೆಬಿಡದೇ ತೊಡಗಬೇಕಿದೆ.
(ಮಾಹಿತಿ ಮತ್ತು ತಿಟ್ಟಗಳ ಸೆಲೆ: http://en.wikipedia.org/wiki/Rangaku)
ಇತ್ತೀಚಿನ ಅನಿಸಿಕೆಗಳು