ನಾಡು ನುಡಿಯ ಇರುವಿಕೆ ಬಗ್ಗೆ

ಹರ‍್ಶಿತ್ ಮಂಜುನಾತ್.karnataka

ಕರ‍್ನಾಟಕವು ತುಂಬಾ ಹಿಂದಿನಿಂದ ಬೆಳೆದು ಬಂದ ಪ್ರದೇಶವಾಗಿದೆ. ಹಳೆಯ ಹೊತ್ತಗೆಗಳು ಮತ್ತು ಇತ್ತೀಚಿಗೆ ನಡೆದ ಅರಕೆಗಳು ಕರ‍್ನಾಟಕದ ಹಿನ್ನಡವಳಿಯನ್ನು ತಿಳಿದುಕೊಳ್ಳಲು ನೆರವಾಗಿದೆ. ಕೆಲವು ಹಳಮೆಯ ಹೊತ್ತಗೆಗಳು ಬಹಳ ಹಿಂದಿನಿಂದಲೂ ನಮ್ಮ ನಾಡು-ನುಡಿಯ ಇರುವಿಕೆ ಬಗ್ಗೆ ತಿಳಿಸಿಕೊಡುತ್ತವೆ. ಅವುಗಳಲ್ಲಿ ಕೆಲವು ಮುಕ್ಯವಾದದನ್ನು ತಿಳಿದುಕೊಳ್ಳೋಣ.

  • ಮಹಾಬಾರತದಲ್ಲಿ ಮಹಿಶ ಮಂಡಲ ಮತ್ತು ಕುಂತಲಗಳು ಎಂಬ ಪದಗಳು ಬರೆಯಲ್ಪಟ್ಟಿವೆ. ಈಗಿನ ಮಯ್ಸೂರನ್ನು ಹಿಂದೆ ಮಹಿಶ ಮಂಡಲ ಎಂದು ಕರೆಯಲ್ಪಟ್ಟರೆ, ಕರ‍್ನಾಟಕಕ್ಕೆ ಕುಂತಳ ಎಂಬ ಹೆಸರಿತ್ತು.
  • ಮಹಾಬಾರತದ ಸಬಾಪರ‍್ವದಲ್ಲಿ ‘ಕರ‍್ಣಾಟಂ‘ ಎಂದೂ, ಬೀಶ್ಮ ಪರ‍್ವದಲ್ಲಿ ‘ಕರ‍್ಣಾಟಕಂ‘ ಎಂದು ಬರೆಯಲಾಗಿದೆ.
  • ಮಹಾಬಾರತದಲ್ಲಿ ಬಣ್ಣಿಸಲ್ಪಟ್ಟಿರುವ ‘ಮಣಿಪುರ‘ ಮಯ್ಸೂರಿನ ಚಾಮರಾಜ ನಗರದ ಸಮೀಪವಿತ್ತು ಎಂದು ಹೇಳಲಾಗುತ್ತದೆ.
  • ರುಗ್ವೇದದಲ್ಲಿ ‘ದಕ್ಶಿಣಾಪತ ಕುಂತಳ‘ ಎಂದು ಹೇಳಲಾಗಿದೆ.
  • ಇಂದಿನ ಹಾನಗಲ್ಲ ಮಹಾಬಾರತ ಕಾಲದ ವಿರಾಟ ನಗರವಾಗಿತ್ತು ಎಂದು ಹೇಳಲಾಗುತ್ತದೆ.
  • ಮತ್ಸ್ಯ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಕನ್ನಡದ ನೆಲವನ್ನು ಕರ‍್ಣ, ಕರ‍್ಣಾಟ ಮತ್ತು ಕರ‍್ಣಾಟಕ ಎಂದು ಕರೆಯಲಾಗಿದೆ.
  • ಬವ್ದ ಗ್ರಂತಗಳ ಪ್ರಕಾರ ಮೌರ‍್ಯರ ರಾಜ ಅಶೋಕನು ‘ರಕ್ಕಿತ‘ ಎಂಬ ಬವ್ದ ಬಿಕ್ಶುವನ್ನು ಬನವಾಸಿಗೂ, ಮತ್ತೋರ‍್ವನ್ನನ್ನೂ ಮಹಿಶ ಮಂಡಲ(ಇಂದಿನ ಮಯ್ಸೂರು)ಕ್ಕೂ ಕಳುಹಿಸಿ ಕೊಟ್ಟಿದ್ದನು ಎಂದು ತಿಳಿಸಿಲಾಗಿದೆ.
  • ಮಾರ‍್ಕಾಂಡೇಯ ಪುರಾಣಗಳಲ್ಲಿ ತೆಂಕಣ ನಾಡುಗಳ ಬಗ್ಗೆ ಹೇಳುವಾಗ ಕರ‍್ನಾಟಕ ಎಂಬ ಪದ ಬಳಕೆಯಾಗಿದೆ.
  • ಸುಮಾರು 2ನೇ ನೂರೇಡಿನಲ್ಲಿ, ತಮಿಳರ ಸಂಗಮ್ ಕಾಲದ ಹೆಸರಾಂತ ಬರಹಗಾರ ಅವ್ವೆಯಾರ್ ಬರೆದ ಬರಹವೊಂದರಲ್ಲಿ ‘ಕರುನಾಟಕ‘ ಪದ ಬಳಕೆಯಾಗಿದೆ.
  • ಸುಮಾರು 2ನೇ ನೂರೆಡಿನಲ್ಲಿ ಗ್ರೀಕ್ ನಾಟಕವೊಂದರಲ್ಲಿ ಗ್ರೀಕ್ ಹೆಣ್ಣನ್ನು ಅಪಹರಿಸಿ ಕರ‍್ನಾಟಕದ ಕರಾವಳಿಯ ಮಲ್ಪೆಗೆ ತಂದ ಕತೆಯಿದೆ.
  • ಕ್ರಿ. ಪೂ. 2700 ರಲ್ಲಿ ಸಿಂದೂ ನಾಗರಿಕತೆಯ ಜನರಿಗೂ ಕರ‍್ನಾಟಕಕ್ಕೂ ಇರುವ ಸಾಂಸ್ಕ್ರುತಿಕ ಮತ್ತು ದಾರ‍್ಮಿಕ ಆಚರಣೆಯಲ್ಲಿರುವ ಹೋಲಿಕೆಯನ್ನು ತಿಳಿವಿಗರು ಗಟ್ಟಿಯಾಗಿ ತಿಳಿಸಿಕೊಟ್ಟಿದ್ದಾರೆ.

ಈ ವರೆಗೆ ನಡೆಸಿರುವ ಅರಕೆಗಳಿಂದ ಸಿಕ್ಕಿರುವ ಸಾಕಶ್ಟು ದಾಕಲೆಗಳಲ್ಲಿ, ಕರ‍್ನಾಟಕಕ್ಕೆ ಸಾವಿರಾರು ವರುಶಗಳ ಹೊಳೆಯುವ ಹಿನ್ನಡವಳಿ ಇರುವುದು ಗಟ್ಟಿಯಾಗಿ ತಿಳಿದು ಬಂದಿದೆ. ಅಲ್ಲದೇ ಮಯ್ಸೂರಿನ ಹಳಮೆಯು ಕಲ್ಲುಕಾಲಕ್ಕೆ (Stone age) ಹೋಗುತ್ತದೆ. ಈ ರೀತಿಯಾಗಿ ಕರ‍್ನಾಟಕದ ಹಿನ್ನಡವಳಿ ತುಂಬಾ ಹಿಂದಿನ ಕಾಲದಿಂದಲೂ ನಡೆದು ಬಂದಿರುವುದು ತಿಳಿಯುತ್ತದೆ.

ಹಾಗೆಯೇ ಕನ್ನಡ ಮತ್ತು ಕರ‍್ನಾಟಕ ಪದ ಹುಟ್ಟಿದ ಬಗ್ಗೆ ಅನೇಕ ಅಬಿಪ್ರಾಯಗಳಿವೆ. ಅವುಗಳ ಬಗ್ಗೆ ಕೊಂಚ ತಿಳಿದು ಕೊಳ್ಳೋಣ.

  • ಹಲವು ತಿಳಿವಿಗರು ಕರ‍್ನಾಡು ಇಲ್ಲವೇ ಕನ್ನಡ ಇಲ್ಲಿಯ ಮಂದಿಯ ಮತ್ತು ನುಡಿಯ ಮೊದಲ ಹೆಸರೆಂದು ಅಬಿಪ್ರಾಯ ಪಟ್ಟಿದ್ದಾರೆ.
  • ಕರ‍್ಣಾಟ ಅತವಾ ಕರ‍್ನಾಟಕ ಎಂಬುದು ಸಾಮಾನ್ಯ ಬದಲಾವಣೆಗಳನ್ನು ಹೊಂದಿದ್ದರೂ, ಕರ‍್ನಾಟಕ ಎಂಬುವುದು ಮೊದಲು ಸಿಗುವ ಹಳೆಯ ರೂಪ.
  • ಕರ‍್ + ನಾಡು = ಕರ‍್ನಾಡು ಇದರಿಂದ ಕನ್ನಾಡು-ಕನ್ನಡು-ಕನ್ನಡ ಆಗಿರುಲೂಬಹುದು.
  • ಕಂಮಿತು + ನಾಡು = ಕನ್ನಾಡು, ಕರ‍್ನಾಟಕ ಎಂಬುದು ಬದಲಾವಣೆಯಾದ ರೂಪವಾಗಿರಬಹುದು.
  • ಕರನಾಡು ಎಂದರೆ ಕರಿಮಣ್ಣಿನ ನಾಡು ಎಂದು ಕೆಲವರು ಅಬಿಪ್ರಾಯ ಪಟ್ಟಿದ್ದಾರೆ.

ಹೀಗೆ ಕರ‍್ನಾಟಕ ಮತ್ತು ಕನ್ನಡದ ಕುರುಹುಗಳನ್ನು ನಮ್ಮ ಹಳಮೆಯಲ್ಲಿ ಗುರುತಿಸಬಹುದಾಗಿದೆ.

(ಮಾಹಿತಿ ಸೆಲೆ: wikipedia)
(ಚಿತ್ರ ಸೆಲೆ: minddynamics)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *