ಅರಿಮೆಗೆ ಇಂಬು ನೀಡಿದ ಒಂದು ಬರದ ಕತೆ

ಚಯ್ತನ್ಯ ಸುಬ್ಬಣ್ಣ.

ಬರ ಅಂದ ಕೂಡಲೇ ನಮ್ಮ ಕಣ್ಮುಂದೆ ಓಡುವ ತಿಟ್ಟ ಯಾವುದು? ಮೋಡದ ಸುಳಿವೇ ಇಲ್ಲದ ಬಾನು, ಇಂಗಿದ ಕೆರೆ, ಬಾವಿಯಂತಹ ನೀರ ಒರತೆಗಳು, ಬಿರುಕು ಬಿಟ್ಟ ನೆಲ, ಹಸಿವೆಯಿಂದ ಕಂಗೆಟ್ಟ ಮಂದಿ, ಸಾಯುತ್ತಿರುವ ಪ್ರಾಣಿಗಳು, ಸತ್ತು ಕೊಳೆಯುತ್ತಿರುವ ಪ್ರಾಣಿಗಳನ್ನು ತಿನ್ನಲು ಮುತ್ತುವ ಹದ್ದುಗಳು ಇವೆಲ್ಲ. ಒಂದೆಡೆಯಲ್ಲಿ ಹೆಚ್ಚು ಹೊತ್ತು ಮಳೆಯಿಲ್ಲದ, ನೀರಿಲ್ಲದ ಪರಿಸ್ತಿತಿ ನೆಲೆನಿಂತಾಗ ಸಹಜವಾಗಿ ಅಲ್ಲಿನ ಮಂದಿಯ ಬದುಕು ಹದೆಗೆಡುತ್ತದೆ. ನೀರಿನ ಆಸರೆ ಇಲ್ಲದೆ ಬೇಸಾಯಕ್ಕೆ ತೊಡಕುಂಟಾಗುತ್ತದೆ. ಜನ ಅಲ್ಲಿಂದ ಬೇರೆಡೆಗೆ ಗುಳೆ ಹೋಗುತ್ತಾರೆ.

ಹಿನ್ನಡವಳಿಯಲ್ಲಿ ಹಲವಾರು ಪೊಳಲಿಕೆಗಳು ಬರದಿಂದ ನೆಲಕಚ್ಚಿದ್ದನ್ನು ನಾವು ಅರಿಯಬಹುದು. ಬರ ಅಂದರೆ ನೀರಿಲ್ಲದಂತಾಗುವಿಕೆ ಅಶ್ಟೇ ಅಲ್ಲ; ಬೇರೆ ಹಲವು ನಯ್ಸರ‍್ಗಿಕ ಕಾರಣಗಳಿಂದ ಅತವಾ ಮನುಶ್ಯರ ಕಯ್ವಾಡದಿಂದ ಬೂಮಿಯಲ್ಲಿ ಬೇಸಾಯ ಮಾಡಲಿಕ್ಕಾಗದೆ ಇಲ್ಲವೇ ಬೆಳೆದ ಬೆಳೆ ಹಾಳಾಗಿ ಪಸಲು ಕಯ್ಗೂಡದೆ ಹೋದಾಗ ಅದನ್ನು ಕೂಡ ಬರ ಎನ್ನಬಹುದು. ಮನುಜನ ಹಳಮೆಯಲ್ಲಿ ಜರಗಿದ ಅಂತಹದ್ದೊಂದು ದೊಡ್ಡ ಬರ ಹಾಗೂ ಅದು ಹೇಗೆ ಹಳಮೆಯ ದಿಕ್ಕನ್ನೇ ಬದಲಿಸಿತು ಮತ್ತು ಅರಿಮೆಯ ಕವಲೊಂದಕ್ಕೆ ಹುಟ್ಟು ನೀಡಿತು ಎಂಬುದನ್ನು ತಿಳಿಯೋಣ ಬನ್ನಿ.

15ನೆಯ ನೂರೇಡಿನಿಂದಾಚೆಗೆ ಯೂರೋಪಿನವರು ಹಡಗುಕಟ್ಟುವಿಕೆ ಮತ್ತು ಕಡಲು ಹಾಯುವಿಕೆಯಲ್ಲಿ ಹೊಸದಾದ ಚಳಕಗಳನ್ನು ಮೊಗಸಲು ಮುಂದಾದರು. ಹೊಸ ನಾಡುಗಳನ್ನು ಕಂಡುಕೊಂಡು ಅಲ್ಲಿಯೇ ನೆಲೆಯೂರತೊಡಗಿದರು. ಅವರಲ್ಲಿ ಸ್ಪೇನಿಗರು ಮತ್ತು ಪೋರ‍್ಚುಗೀಸರು ತಮ್ಮ ಪಡುವಣದ ಅಟ್ಲಾಂಟಿಕ್ ಕಡಲನ್ನು ಹಡಗಿನಲ್ಲಿ ಹಾದು ಅಮೆರಿಕಾ ಬೂಕಂಡಕ್ಕೆ ಲಗ್ಗೆಯಿಟ್ಟರು.

ಅಮೇರಿಕಾದ ಇಂಕಾ, ಅಜ್ಟೆಕ್ ಮುಂತಾದ ಅಮೆರಿಂಡಿಯನ್ ಬುಡಕಟ್ಟುಗಳವರೊಂದಿಗೆ ಯೂರೋಪು ವಸಾಹತುದಾರರ ಒಡನಾಟ, ಹೊಡೆ-ಬಡಿದಾಟ ಎಲ್ಲವೂ ನಡೆಯುತ್ತಿದ್ದ ಕಾಲವದು. ಕೇಳರಿಯದ ಪೊಳಲಿಕೆಗಳು, ಕಂಡರಿಯದ ನಾಡುಗಳು ಇವೆಲ್ಲವೂ ಯೂರೋಪಿನವರಲ್ಲಿ ಬೆರಗುಮೂಡಿಸಿದ್ದವು. ಹಾಗೇ ಅಲ್ಲಿಂದ ಹಿಂತಿರುಗುವ ಮಂದಿ, ತಮ್ಮೊಂದಿಗೆ ಹಲವಾರು ಗಿಡಗಂಟೆಗಳನ್ನು, ಹಣ್ಣುಗಳನ್ನೂ ಹೊತ್ತು ತಂದು, ತಮ್ಮ ತವರಿನಲ್ಲಿ ಹಬ್ಬಿಸಿದರು. ಚಟಕ್ಕಾಗಿ ಹೊಗೆಸೊಪ್ಪು ಬೆಳೆದರೆ, ಹೊಟ್ಟೆತುಂಬಿಸಲು ಮುಸುಕಿನ ಜೋಳ, ನೆಲಗಡಲೆ ಮುಂತಾದವನ್ನು ಬೆಳೆಯಲು ಯೂರೋಪಿನಲ್ಲಿ ಮೊದಲಿಟ್ಟರು.

ಅಂಡೀಸ್ ಬೆಟ್ಟಗಳು ಉದ್ದಕ್ಕೂ ಚಾಚಿಕೊಂಡಿರುವ ತೆಂಕಣ ಅಮೇರಿಕಾದ ಎತ್ತರದ ನಾಡು(highlands)ಗಳಲ್ಲಿ, ಪೆರು ಮತ್ತು ಬೊಲಿವಿಯಾ ನಾಡುಗಳ ನಡುವಿನ ಟಿಟಿಕಾಕಾ ಕೆರೆಯ ಸುತ್ತಮುತ್ತಲಿನಲ್ಲಿ ಬೆಳೆಯುತ್ತಿದ್ದ ಹೊಸಬಗೆಯ ಗೆಡ್ಡೆಗಳು ಬರಗೆಟ್ಟು ಚಿನ್ನವನ್ನು ಅರಸುತ್ತಾ ಅಲ್ಲಿ ಅಲೆದಾಡುತ್ತಿದ್ದ ಸ್ಪೇನಿಗರಿಗೆ ದೊರೆತವು. ಅದೇ ನಮ್ಮ ತಿನಿಸುಗಳಲ್ಲಿ ನಾವು ಈಗ ಬಳಸುವ ಆಲೂಗಡ್ಡೆ.

1570ರ ಹೊತ್ತಿಗೆ ಆಲೂಗಡ್ಡೆ ಸ್ಪೇನ್ ತಾಯ್ನಾಡಿಗೆ ತಲುಪಿತು. ಇದರ ಪೊರೆತದ ಗುಣಗಳನ್ನು(nutritional qualities) ಒಕ್ಕಲಿಗರು ತಿಳಿದ ಬಳಿಕ ನಿದಾನವಾಗಿ ಉಳಿದ ಯೂರೋಪಿಗೂ ಆಲೂಗಡ್ಡೆ ಹರಡಿತು. ಈ ಬೆಳೆ ಇಂಗ್ಲೆಂಡ್ ಪಕ್ಕದ ಅಯರ‍್ಲೆಂಡ್ ನಡುಗಡ್ಡೆಗೆ ಯಾವಾಗ ತಲುಪಿತು ಎಂದು ಕಚಿತವಾಗಿ ಗೊತ್ತಿಲ್ಲದಿದ್ದರೂ, 1800ರ ಹೊತ್ತಿಗೆ ಆಲೂಗಡ್ಡೆ ಬೇಸಾಯ ಅಯರ‍್ಲೆಂಡ್ ನಲ್ಲಿ ಚೆನ್ನಾಗಿ ಬೇರೂರಿತ್ತು.

19ನೇ ನೂರೇಡಿನ ನಡುವಿನಲ್ಲಿ ಅಯರ‍್ಲೆಂಡ್ ನಾಡು ಬ್ರಿಟಿಶ್ ಒಕ್ಕೂಟದ ಬಾಗವಾಗಿತ್ತು. ಅಯ್ರಿಶ್ ಹಳ್ಳಿಗರು ತಮ್ಮ ಹೊಲಗಳಲ್ಲಿ ಹಲವಾರು ಬೆಳೆಗಳನ್ನಿಟ್ಟು ಆರಯ್ಕೆ ಮಾಡುತ್ತಿದ್ದರು. ಮಯ್ಮುರಿಯ ದುಡಿದು, ಗೋದಿಯಂತಹ ಕಾಳಿನ ಬೆಳೆಗಳನ್ನು ಅವರು ಬೆಳೆಯುತ್ತಿದ್ದರಾದರೂ, ಅವೆಲ್ಲವೂ ಹೊಲದ ಕಂದಾಯ ತೆರಲು ಸರಿಹೋಗುತ್ತಿತ್ತು. ಆಯರ‍್ಲೆಂಡ್ ನಾಡಿನ ಹೆಚ್ಚಿನ ಬೂಮಿಯ ಒಡೆತನ ಪ್ರಾಟೆಸ್ಟೆಂಟ್ ಮತದ ಇಂಗ್ಲಿಶ್ ಮತ್ತು ಆಂಗ್ಲೋ-ಅಯ್ರಿಶ್ ಜಮೀನ್ದಾರರ ಕಯ್ಯಲ್ಲಿತ್ತು. ಹೊಲದೊಡೆಯರು ಇಂಗ್ಲೆಂಡಿನಲ್ಲಿ ತಂಗಿರುತ್ತಿದ್ದರು. ಕ್ಯಾತೊಲಿಕ್ ಪಂಗಡದ ಅಯ್ರಿಶ್ ಮಂದಿ ಗೇಣಿದಾರರಾಗಿ ಬದುಕು ಸವೆಸುತ್ತಿದ್ದರು.

ಕಾಳಿನ ಬೆಳೆಗಳು ಸುಮಾರಾದ ಇಳುವರಿ ನೀಡುತ್ತಿದ್ದವು. ಆದರೆ ಅಲ್ಲಿನ ಬಡಬಗ್ಗರು ಹಸಿವು ನೀಗಲು ನೆಚ್ಚಿಕೊಂಡಿದ್ದು ಆಲೂಗಡ್ಡೆಯನ್ನು. ತೆಂಕಣ ಅಮೇರಿಕಾದ ಎತ್ತರದ ನಾಡುಗಳಲ್ಲಿರುವಂತಹ ತಣ್ಣಗಿನ, ತೇವದುಂಬಿದ ಗಾಳಿಪಾಡು ಆಲೂಗಡ್ಡೆಗೆ ಒಗ್ಗುತ್ತದೆ. ಅಂತಹದೇ ಗಾಳಿಪಾಡು ಹೊಂದಿರುವ ಅಯರ‍್ಲೆಂಡಿನಲ್ಲಿ ಆಲೂಗಡ್ಡೆಯನ್ನು ಚೆನ್ನಾಗಿ ಬೆಳೆಯಬಹುದಾಗಿತ್ತು. ಒಬ್ಬ ಆಳು ದಿನಕ್ಕೆ 8 ರಿಂದ 14 ಪವುಂಡುಗಳಶ್ಟು (3 ರಿಂದ 6 ಕೆಜಿ) ಆಲೂಗಡ್ಡೆಯನ್ನು ಉಣ್ಣುತ್ತಿದ್ದ. ಜೊತೆಗೆ ಒಂದಿಶ್ಟು ಆಕಳ ಹಾಲು ಇದ್ದರೆ ಸಾಕು, ಅಂದು ತುತ್ತಿನ ಚೀಲ ತುಂಬುತ್ತಿತ್ತು.

ಆಲೂಗಡ್ಡೆ ಗಿಡದ ಕುರಿತು
ಬೆಳೆಯುತ್ತಿರುವ ಆಲೂಗಡ್ಡೆ ಗಿಡದ ತಾಳಿನ ನೆಲದಡಿಯ ಗೆಣ್ಣಿ(underground node)ನಿಂದ ಕವಲುಗಳು ಟಿಸಿಲೊಡೆಯುತ್ತವೆ. ಈ ನೆಲದಡಿ ತಾಳು(stolon)ಗಳ ತುದಿಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಈ ಹೊತ್ತಿನಲ್ಲೇ ಗಿಡವು ಹೂದಳೆಯಲಾರಂಬಿಸುತ್ತದೆ. ಬೆಳಕಿನ ಒಂದುಗೆಯಲ್ಲಿ ದೊರೆತ ಉಣಿಸು ಗಂಜಿಯ ರೂಪದಲ್ಲಿ ನೆಲದಡಿ ತಾಳುಗಳಿಗೆ ಕಳಿಸಲ್ಪಟ್ಟು, ಆ ತಾಳುಗಳ ತುದಿಯಲ್ಲಿನ ಊತ ನಿದಾನವಾಗಿ ಗಡ್ಡೆಯಾಗಿ ಬೆಳೆಯುತ್ತದೆ. ಬಲಿತ ಗಡ್ಡೆಯ ಮೇಲೆ ಚಿಕ್ಕದಾದ ಮೊಗ್ಗುಗಳನ್ನು ನಾವು ನೋಡುವೆವು. ಆಲೂಗಡ್ಡೆಯನ್ನು ಹೋಳುಗಳಾಗಿ ಕತ್ತರಿಸಿ ಬೀಜಗಳಂತೆ ಬಳಸಬಹುದು. ಪ್ರತಿಯೊಂದು ಹೋಳಿನಲ್ಲೂ ಒಂದು ಮೊಗ್ಗು ಇರಲೇಬೇಕು. ಆಗಲೇ ಅದು ಒಂದು ಗಿಡವಾಗಿ ಬೆಳೆಯಬಲ್ಲದು.

ಹೂವಿನ ಹೂಪುಡಿ(pollen)ಯು ಗಂಡು ಕೂಡುಕಣ(male gamete)ಗಳನ್ನು ಹುಟ್ಟಿಸಬಲ್ಲದಾಗಿರುತ್ತದೆ. ಹೂದುಂಬುಗೆ(pollination)ಯ ಹೊತ್ತಿನಲ್ಲಿ ಈ ಗಂಡು ಕೂಡುಕಣಗಳು ಹೂವಿನಲ್ಲಿರುವ ಹೆಣ್ಣು ಕೂಡುಕಣಗಳೊಂದಿಗೆ ಬೆಸೆದು ಹಸನುಕಣ(zygote)ಗಳು ಉಂಟಾಗುತ್ತವೆ. ಬೀಜದಲ್ಲಿನ ಬಸಿರು(embryo) ಈ ಹಸನುಕಣದಿಂದ ಬೆಳೆದುಬಂದದ್ದು. ಗಂಡು ಮತ್ತು ಹೆಣ್ಣು ಕೂಡುಕಣಗಳ ಬೆಸುಗೆಯಿಂದ ಬೇರೆ ಬೇರೆ ಗಿಡಗಳ ಪೀಳಿಗಳು ಕಲೆತು ಒಂದು ತೆರನಾದ ಪೀಳಿಮಾದರಿ(genotype) ಮೂಡುತ್ತದೆ. ಇದನ್ನು ದಿಟವಾದ ಬೀಜದಲ್ಲಿ ಕಾಣಬಹುದಾಗಿದ್ದು, ಈ ಹೊಲಬಿನಲ್ಲಿ ಪೀಳಿಬೇರ‍್ಮೆ(genetic diversity) ಹೆಚ್ಚು.

ಆಲೂಗಡ್ಡೆ ಗಿಡದಲ್ಲಿ ಕೂಡಾ ಹೂದುಂಬುಗೆ, ಬಸಿರುದುಂಬಿಕೆ(fertilization)ಯ ಬಳಿಕ ಬೀಜಗಳು ಅಬಿವ್ರುದ್ದಿಗೊಳ್ಳುತ್ತವಾದರೂ ಆಲೂಗಡ್ಡೆ ಬೇಸಾಯದಲ್ಲಿ ಹೆಚ್ಚಾಗಿ ಬಳಸಲ್ಪಡುವುದು ಗಡ್ಡೆಯ ಹೋಳುಗಳು. ಗಡ್ಡೆಯಿಂದ ಬೆಳೆದ ಗಿಡವು ಬಣ್ಣ, ಎತ್ತರ, ಮಾಗುವಿಕೆ, ಬೆಳವಣಿಗೆ ಹೀಗೆ ಎಲ್ಲಾ ಪರಿಚೆಗಳಲ್ಲೂ ತನ್ನ ತಾಯಿ ಗಿಡವನ್ನು ಹೋಲುತ್ತದೆ. ಒಂದು ಗಡ್ಡೆಯ ಹೋಳುಗಳಿಂದ ಹುಟ್ಟಿದ ಎಲ್ಲಾ ಆಲೂಗಡ್ಡೆ ಗಿಡಗಳ ನಡುವಿನ ಬೇರ‍್ಮೆ ತುಂಬಾ ಕಡಿಮೆ ಇರುತ್ತದೆ. ಇದನ್ನು ಪೀಳಿ ಒಬ್ಬಗೆತನ(genetic uniformity) ಎನ್ನಬಹುದು.

ಪೀಳಿ ಒಬ್ಬಗೆತನದ ಕೆಡಕುಗಳು ಹಲವು. ಎತ್ತುಗೆಗೆ ಬೇನೆ ಬರಿಸುವ ಸೀರುಗಗಳು ಗಡ್ಡೆಯ ಹೋಳುಗಳನ್ನು ಸಾಗುವಳಿಗೆ ಬಳಸಿದ ಹೊಲದಲ್ಲಿ ಒಂದು ಆಲೂಗಡ್ಡೆ ಗಿಡವನ್ನು ಹೊಕ್ಕವು ಎಂದುಕೊಳ್ಳಿ, ಸುತ್ತಲಿನ ಮಿಕ್ಕ ಗಿಡಗಳೂ ಕೂಡ ಅದೇ ಪೀಳಿಮಾದರಿ ಹೊಂದಿರುವುದರಿಂದ ಬೇನೆ ಸುಲಬವಾಗಿ ಹರಡುವುದು. ಬೀಜದಿಂದ ಹುಟ್ಟಿಸಿದ ಗಿಡಗಳಲ್ಲಿ ಪೀಳಿಮಾದರಿ ಬೇರೆತನ(genotypic diversity) ಹೆಚ್ಚಿದ್ದು, ಸೀರುಗಗಳು ಅಶ್ಟು ಸುಲಬವಾಗಿ ಗಿಡದಿಂದ ಗಿಡಕ್ಕೆ ಹಬ್ಬಲಾರವು. ಪೀಳಿ ಬೇರ‍್ಮೆ ಹೆಚ್ಚಿದ್ದಶ್ಟೂ ಬೇನೆ ಎದುರಿಸುವಿಕೆ ಹುರುಪು(disease resistance) ಮೇಲ್ಮಟ್ಟದಲ್ಲಿರುತ್ತದೆ.

ತೆಂಕಣ ಅಮೇರಿಕಾದಿಂದ ಯೂರೋಪಿಯನ್ನರು ಹೊತ್ತು ತಂದ ಹೊರೆಯಲ್ಲಿದ್ದ ಆಲೂಗಡ್ಡೆಗಳ ಎಣಿಕೆ ಕಡಿಮೆ. ಅದರಲ್ಲೂ ಯೂರೋಪಿನಲ್ಲಿ ಬೆಳೆಯಲು, ತಿನ್ನಲು ತಕ್ಕನಾದ ತಳಿಗಳನ್ನು ಮಾತ್ರ ಅವರು ಆರಿಸಿಕೊಂಡದ್ದರಿಂದ, ಕೆಲವು ಬಗೆಯ ತಳಿಗಳನ್ನಶ್ಟೇ ರಯ್ತರು ಬೆಳೆಯಲು ಸಾದ್ಯವಾಯಿತು. ಹಾಗಾಗಿ ಯೂರೋಪಿನ ಆಲೂಗಡ್ಡೆ ಗಿಡಗಳಲ್ಲಿ ಪೀಳಿ ಬೇರ‍್ಮೆ ಅದರ ತವರಾದ ಆಂಡೀಸ್ ಬೆಟ್ಟಗಳ ತಪ್ಪಲಿನಲ್ಲಿ ಇರುವುದಕ್ಕಿಂತ ಕೆಳಮಟ್ಟದಲ್ಲಿತ್ತು.

ಬರಸಿಡಿಲಿನಂತೆರಗಿದ ಬರ:
ಅದು 1845ರ ಬೇಸಿಗೆಕಾಲ. ಹಿಂದಿನ ವರ‍್ಶಗಳಿಗೆ ಹೋಲಿಸಿದಲ್ಲಿ ಅಯ್ರಿಶ್ ನಡುಗಡ್ಡೆಯನ್ನು ಸೇರಿದಂತೆ ಇಡೀ ಯೂರೋಪಿನ ಗಾಳಿಪಾಡಿನಲ್ಲಿ ಕೊಂಚ ಏರುಪೇರು ಕಂಡುಬಂದಿತು. ಬೆಚ್ಚಗಿನ, ಒಣ ಗಾಳಿಪಾಡು ಇದ್ದಕ್ಕಿದ್ದಂತೆ ಬದಲಾಗಿ, ಬಿಸುಪು 1.5 ರಿಂದ 7 ಡಿಗ್ರಿ ಸೆಲ್ಶಿಯಸ್ ಗಳಶ್ಟು ತಗ್ಗಿ, ತುಂತುರು ಮಳೆ ಸುರಿಯಲು ಮೊದಲಾಯಿತು. ಹಚ್ಚ ಹಸಿರಿನ ಆಲೂಗಡ್ಡೆ ಬಳ್ಳಿಗಳು ಬಣ್ಣಕಳೆದುಕೊಂಡು ಹೊಲದಲ್ಲೇ ಕೊಳೆಯಲಾರಂಬಿಸಿದವು. ಅಯ್ರಿಶ್ ಗೇಣಿದಾರ ಒಕ್ಕಲಿಗರು ದಂಗಾಗಿ ನೋಡುವುದನ್ನು ಬಿಟ್ಟು ಬೇರೇನೂ ಮಾಡಲಾರರಾಗಿದ್ದರು. ನೆಲದಡಿಯ ಗಡ್ಡೆಗಳಲ್ಲಿ ಕೆಲವೇನೋ ಕೊಳೆತಿದ್ದವಾದರೂ ಉಳಿದವು ಚೆನ್ನಾಗಿದ್ದವು. ಆದರೆ ದುರಾದ್ರುಶ್ಟ ! ಕಣ್ಣ ನೋಟಕ್ಕೆ ಸರಿಯಾದವೆಂದು ಬಗೆದು ರಯ್ತರು ಉಗ್ರಾಣಗಳಲ್ಲಿ ಪೇರಿಸಿಟ್ಟ ಗಡ್ಡೆಗಳೂ ಮೆಲ್ಲಗೆ ಕೊಳೆತುಹೋದವು.

ಬೇರೆಯ ಕಾಳಿನ ಬೆಳೆಗಳ ಇಳುವರಿಗೆ ಹೊಡೆತ ಬೀಳಲಿಲ್ಲವಾದರೂ ಅದೆಲ್ಲವೂ ತೆರಿಗೆ ಕಟ್ಟಲು ಮೀಸಲಿಟ್ಟಿದ್ದಾಗಿತ್ತು. ಒಂದುವೇಳೆ ತೆರಿಗೆ ಕಟ್ಟಲಾಗದಿದ್ದಲ್ಲಿ ಅಂತಹ ಗೇಣಿದಾರರಿಂದ ಹೊಲವನ್ನು ಕಸಿದುಕೊಂಡು ಹೊರಗಟ್ಟಲಾಗುತ್ತಿತ್ತು. ಹಸಿವು, ಬಡತನ, ಕ್ರೂರವಾದ ರಾಜಕೀಯ ಕಟ್ಟುಪಾಡುಗಳಿಂದ ಕಂಗೆಟ್ಟ ಅಯ್ರಿಶ್ ಮಂದಿ ಹೇಳತೀರದ ಬವಣೆಯನ್ನನುಬವಿಸಿದರು. 1840ರ ಹೊತ್ತಿಗೆ ಅಯ್ರಿಶ್ ಮಂದಿಯೆಣಿಕೆ 80 ಲಕ್ಶದಶ್ಟಿತ್ತು. ಹೊಟ್ಟೆಗೆ ಕೂಳಿಲ್ಲದೆ ಇಲ್ಲವೇ ಕಾಯಿಲೆಯಿಂದ ಮುಂದಿನ ಹದಿನಯ್ದು ವರುಶಗಳಲ್ಲಿ 10 ಲಕ್ಶ ಅಯ್ರಿಶ್ ಜನ ಸತ್ತು, 15 ಲಕ್ಶ ಜನ ಅಮೇರಿಕಾ ಇಲ್ಲವೇ ಕೆನಡಾ ಗೆ ಗುಳೇ ಹೊರಟರು.

ದೊಡ್ಡ ಬರ

 

ಅಯ್ರಿಶ್ಶರು ಬ್ರಿಟಿಶರ ದಬ್ಬಾಳಿಕೆಯನ್ನು ಎದುರುಗೊಳ್ಳಲು ಹಾಗೂ 20ನೆಯ ನೂರೇಡಿನಲ್ಲಿ ಬ್ರಿಟಿಶ್ ಆಳ್ವಿಕೆಯಿಂದ ಬಿಡುಗಡೆ ಹೊಂದಲು ದೊಡ್ಡ ಬರ ಅತವಾ ಅಯ್ರಿಶ್ ಆಲೂಗಡ್ಡೆ ಬರ ಮೂಲ ಕಾರಣವಾಯಿತು. ಗಿಡಕುತ್ತರಿಮೆಯಲ್ಲಿ ಇದನ್ನೀಗ  ಆಲೂಗಡ್ಡೆಯ ಕೊನೆ ಅಂಗಮಾರಿ ರೋಗ (potato late blight disease) ಎಂದು ಕರೆಯುಲಾಗುವುದು. ಬೇನೆ ಹಿಡಿದ ಗಿಡದ ಎಲೆಯ ಮೇಲಿನ ತೊಗಲ್ತೂತು(stomata)ಗಳಿಂದ ಸೀರುಗಗಳು ಹೊರಬರುತ್ತವೆ. ಪಯ್ಟಾಪ್ತೋರಾ ಇನ್ಪೆಸ್ಟಾನ್ಸ್ ಎಂದು ಉಸಿರರಿಮೆಯಲ್ಲಿ ಕರೆಯಲ್ಪಡುವ ಈ ಸೀರುಗಗಳನ್ನು ಮೊದಲು ಬೂಜು(fungus) ಗುಂಪಿಗೆ ಸೇರಿಸಲಾಗಿತ್ತು. ಆದರೆ ಈಗ ಇವು ಊಮಯ್ಕೋಟಾ(oomycota) ಎಂಬ ಬೂಜಿನಂತಹದ್ದೇ ಬೇರೊಂದು ಗುಂಪಿಗೆ ಸೇರಿದ ಉಸಿರಿಗಳೆಂದು ತಿಳಿದುಬಂದಿದೆ. ಗಾಳಿಯಲ್ಲಿ ತೇವ ಹೆಚ್ಚಿದ್ದಾಗ ಇವುಗಳು ಚುರುಕಾಗುತ್ತವೆ.

ಕೊನೆ ಅಂಗ ಮಾರಿ

(ಕೊನೆ ಅಂಗಮಾರಿ ರೋಗಕ್ಕೆ ತುತ್ತಾದ ಆಲೂಗಡ್ಡೆ ಗಿಡದ ಎಲೆ ಮತ್ತು ಗಡ್ಡೆ)

ಎಲೆಯ ಮೇಲೆ ನೆಲೆಯೂರುವ ಈ ಸೀರುಗಗಳಲ್ಲಿ ಬಿತ್ತರವಿ(sporangia)ಗಳು ಕುಡಿಯೊಡೆಯುತ್ತವೆ. ಮುಂದಿನ ಪೀಳಿಗೆಯನ್ನು ಹುಟ್ಟಿಸಬಲ್ಲ ಬಿತ್ತಗಳು(spores) ಈ ಬಿತ್ತರವಿಯಲ್ಲಿರುತ್ತವೆ. ಕಾವಳತೆ 20 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಿದ್ದಾಗ ಬಿತ್ತರವಿಗಳಿಂದಾಗುವ ಸೋಂಕು ಕಡಿಮೆ ಇರುತ್ತದೆ. ಕಾವಳತೆ ಕುಗ್ಗಿ, ತೇವಾಂಶ ಹೆಚ್ಚಾದಾಗ ಬಿತ್ತರವಿಗಳ ಸೋಂಕು ಹೆಚ್ಚಾಗಿ ಸುತ್ತೆಡೆಗಳಿಗೆ ಹಬ್ಬುವುದು. ಎಲೆಯ ಮೇಲಿನ ಬಿತ್ತರವಿಗಳು ನೀರಿನೊಂದಿಗೆ ಒಯ್ಯಲ್ಪಟ್ಟು ಮಣ್ಣಿಗೆ ಸೇರುತ್ತವೆ. ಮಣ್ಣಿನಲ್ಲಿರುವ ಗಡ್ಡೆಗೆ ಸೋಂಕು ತಗುಲಿದಾಗ ಗಡ್ಡೆ ಕೂಡಾ ಕೆಟ್ಟು ಕೊಳೆಯುತ್ತದೆ. ಕೆಡುತ್ತಿರುವ ಆಲೂಗಡ್ಡೆ ಗಿಡದ ಬಳ್ಳಿಗಳ ಮೇಲೆ ಬೆಳ್ಳಗಿನ ಬೂಜಿನ ಪದರವನ್ನು ಎಲ್ಲರೂ ಗಮನಿಸಿದ್ದರಾದರೂ ಆ ಬೂಜು ಈ ಬೇನೆಯಿಂದಾದ ಆಗುಹ(effect) ಎಂದು ಹುರುಳಿಸಿಕೊಂಡರೇ ಹೊರತು ಆ ಬೂಜೇ ಗಿಡಕ್ಕೆ ಬೇನೆಯುಂಟುಮಾಡುತ್ತಿದೆ ಎಂದು ತಿಳಿಯಬಲ್ಲಶ್ಟು ಅರಿಮೆ ಆಗಿನ್ನೂ ಬೆಳೆದಿರಲಿಲ್ಲ.

ಬಿತ್ತರವಿ

ಗಿಡಕುತ್ತರಿಮೆಯ ಹುಟ್ಟು :
ಈ ಹೊತ್ತಿಗೆ ಸರಿಯಾಗಿ ಆಂಟನ್ ಡಿ ಬ್ಯಾರಿ ಎಂಬ ಜರ‍್ಮನ್ ಗಿಡದರಿಗ(botanist) ಆಲೂಗಡ್ಡೆಯ ಕೊಳೆತದ ಗುಟ್ಟು ಬಿಡಿಸಲು ಮುಂದಾದ. ಆತ ಒಂದಶ್ಟು ಆಲೂಗಡ್ಡೆ ಗಿಡಗಳನ್ನು ತಣ್ಣಗಿನ ತೇವದುಂಬಿದ ಗಾಳಿಪಾಡಿನಲ್ಲಿ ಬೆಳೆದ. ಅವುಗಳಲ್ಲಿ ಕೆಲವು ಗಿಡಗಳ ಮೇಲೆ ಮೊದಲೇ ಕೊಳೆತಕ್ಕೆ ಒಳಗಾದ ಗಿಡಗಳಿಂದ ತೆಗೆದ ಬಿತ್ತರವಿಗಳ ಪುಡಿಯನ್ನು ಬಳಿದು, ಉಳಿದವನ್ನು ಹಾಗೇ ಬಿಟ್ಟ. ಬಿತ್ತರವಿಗಳ ಸೋಂಕು ತಗುಲಿದ ಗಿಡಗಳು ಕೊಳೆಯಲಾರಂಬಿಸಿದರೆ, ಉಳಿದ ಗಿಡಗಳು ಚೆನ್ನಾಗಿ ನಳನಳಿಸುತ್ತಿದ್ದವು. ಅಲ್ಲಿಗೆ ಆ ಬೂಜು ಗಡ್ದೆಗಳನ್ನು ಕೊಳೆಸಲು ಕಾರಣವಾಗುತ್ತಿದೆ ಎಂಬುದು ನಿಕ್ಕಿಯಾಯಿತು.

ಆಂಟನ್ ನ ಗಮನಿಕೆಯನ್ನು ತಿಳಿದ ಮೇಲೆ ಹಲವಾರು ಅರಿಗರು ಬೇರೆ ಬೇರೆ ಗಿಡದ ಬೇನೆಗಳು ಮತ್ತು ಅವಕ್ಕೆ ಕಾರಣವಾಗುವ ಬೂಜುಗಳನ್ನು ಕಂಡುಕೊಳ್ಳಲಾರಂಬಿಸಿದರು. ಬೇನೆಯ ಬಗೆಗಿನ ಗೊಡ್ಡುನಂಬಿಕೆಗಳು ಕಡಿಮೆಯಾಗಲು ಮೊದಲಾಯಿತು. ಅಲ್ಲಿಯವರೆಗೂ ಹೆಚ್ಚಿನ ತಕ್ಕುಮೆಗೆ ಪಾತ್ರವಾಗಿದ್ದ ಅಡಿಕಟ್ಟಲೆ ಎಂದರೆ “ ಒಮ್ಮೆಲೆ ಹುಟ್ಟುವಿಕೆ ”(spontaneous generation)ಯ ಕಟ್ಟಲೆ. ಈ ಕಟ್ಟಲೆಯ ತಿರುಳು ‘ ಉಸಿರಿಲ್ಲದ ವಸ್ತುಗಳಿಂದ ಉಸಿರಿಗಳು ಒಮ್ಮಿಂದೊಮ್ಮೆಲೆ ಹುಟ್ಟಬಲ್ಲವು’ ಎಂಬುದು. ಗ್ರೀಕ್ ಅರಿಗ ಅರಿಸ್ಟಾಟಲ್ ನಿಂದ ಹಿಡಿದು 19ನೇ ನೂರೇಡಿನವರೆಗೂ ಮಂದಿ ಇದರಲ್ಲಿ ಅಚ್ಚಳಿಯದ ನಂಬುಗೆ ಇಟ್ಟಿದ್ದರು. ಹಾಗಾಗಿ ಕೊಳೆಯುವ ಗಿಡದಿಂದ ಬೂಜು ಒಮ್ಮೆಲೆ ಹುಟ್ಟಿದೆ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಈ ಅಡಿಕಟ್ಟಲೆ ಬರಬರುತ್ತಾ ನೆಲೆ ಕಳೆದುಕೊಳ್ಳಲು ಶುರುವಾಗಿ, ಕೊನೆಗೆ ಪ್ರೆಂಚ್ ಅರಿಗ ಲ್ಯೂಯಿ ಪ್ಯಾಶ್ಚರ್ ನ ಅರಕೆಗಳಿಂದ ಅನುಮಾನಕ್ಕೆಡೆಯಿಲ್ಲದಂತೆ ಮೂಲೆಗುಂಪಾಯಿತು.

ಗಿಡಗಳಿಗೆ ಬೇನೆಯುಂಟು ಮಾಡುವಲ್ಲಿ ಸೀರುಗಗಳ ಪಾತ್ರವಿದೆ ಎಂಬುದು ಕಾತರಿಯಾದ್ದರಿಂದ, ಗಿಡಕುತ್ತರಿಮೆಯ ಕುರಿತ ಅರಕೆಗಳಿಗೆ ಹೆಚ್ಚು ಹೆಚ್ಚಾಗಿ ಅರಿಗರು ಕಯ್ಹಾಕಿ ದುಡಿದು ಗಿಡಕುತ್ತರಿಮೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಕ್ಯತೆಯನ್ನು ಪಡೆದುಕೊಳ್ಳಲು ನೆರವಾಯಿತು. ಬೂಜಿನಿಂದ ಬರುವ ಬೇನೆಗೆ ತಾಮ್ರದ ಅಂಶವಿರುವ ವಸ್ತುಗಳು ತೊಡಕಾಗಬಲ್ಲವು ಎನ್ನುವುದು ಬೆಳಕಿಗೆ ಬಂದು ಮಯ್ಲುತುತ್ತ (copper sulphate) ದಂತಹ ರಾಸಾಯನಿಕಗಳನ್ನು ರೋಗದ ತಡೆಗೆ ಬಳಸವುದು ಮೊದಲಾಗಿ, ಬೆಳೆಕಾಪುಗೆಗೆ ಬೂಜುಮದ್ದಿ(fungicide)ನ ಬಳಕೆಯ ಪರಿಪಾಟ ಕೂಡ ಬೆಳೆದುಬಂದಿತು.

ಇದು, ಆಲೂಗಡ್ಡೆ ಬೆಳೆಯ ರೋಗದಿಂದ ಉಂಟಾದ ಬರವೊಂದು ಜನರನ್ನು ಗೋಳುಗುಟ್ಟಿಸಿ, ಕೂಡಣದಲ್ಲಿನ ಮಾರ‍್ಪಾಡಿಗೆ ಕಾರಣವಾದ ಮತ್ತು ಅರಿಮೆಯ ಕವಲೊಂದನ್ನು ಹುಟ್ಟುಹಾಕಿದ ಕತೆ-ವ್ಯತೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.apsnet.orgyouviewed.comextension.umaine.eduongislandhort.cornell.edu, plantpath.cornell.edu)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. pollination=ಹೂದುಂಬುಗೆ ಪದವನ್ನು ಬಳಸಿದ್ದೀರಿ.
    pollen = ಹೂದುಂಬು, ಈ ಪದ ಬಳಸಬಹುದೆ?

ಅನಿಸಿಕೆ ಬರೆಯಿರಿ: