ಗುಂಪುಸಾರಿಗೆ ಬಳಕೆಯನ್ನು ತೀರ‍್ಮಾನಿಸಬಲ್ಲ ಅಂಶಗಳು

– ಅನ್ನದಾನೇಶ ಶಿ. ಸಂಕದಾಳ.

PublicTransport

ನಗರಗಳಲ್ಲಿ ಗಾಡಿಗಳ ಓಡಾಟದಿಂದ ದಟ್ಟಣೆ (congestion) ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ. ಹೆಚ್ಚೆಚ್ಚು ಮಂದಿ, ‘ಗುಂಪು ಸಾರಿಗೆ’ (public transport) ಯನ್ನು ಬಳಸುವ ಹಾಗೆ ಮಾಡುವುದರಿಂದ ಹೆಚ್ಚುತ್ತಿರುವ ದಟ್ಟಣೆಯನ್ನು ತಹಬದಿಗೆ ತರಬಹುದೆಂದು ಎಂದು ಅನಿಸುವುದು ದಿಟವೇ. ಗುಂಪು ಸಾರಿಗೆ ಬಗೆಗಳನ್ನು (ಮೆಟ್ರೋ ರೈಲುಗಳು, ಸಾರಿಗೆ ಬಸ್ಸುಗಳು ಇತ್ಯಾದಿ) ಸರಿಯಾಗಿ ಬಳಸುವಂತಾದರೆ, ಮಂದಿಯು ತಮ್ಮ ಸ್ವಂತ ಗಾಡಿಗಳನ್ನು ಬಳಸುವುದನ್ನು ಕಡಿಮೆ ಮಾಡುವರು ಎಂದೆಣಿಸಲಾಗಿದೆ. ಆ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಗುಂಪು ಸಾರಿಗೆಯ ಏರ‍್ಪಾಡನ್ನು ಕಟ್ಟಿಕೊಳ್ಳುವತ್ತ ಹೆಚ್ಚೆಚ್ಚು ಹೂಡಿಕೆಗಳು ಆಗಬೇಕಿದೆ. ಆದರೆ ಸಾರಿಗೆ ಏರ‍್ಪಾಡಿನ ರೂಪು-ರೇಶೆ ಸರಿಯಾಗಿರದಿದ್ದರೆ, ಹೊಸ ಬಸ್ಸು ಅತವಾ ಮೆಟ್ರೋ ರೈಲುಗಳು ಮಂದಿಯ ಬಳಕೆಯಿಂದ ದೂರವೇ ಉಳಿಯಬಹುದು ಎಂದು ಬೇರೆ ಬೇರೆ ನಾಡಿನಲ್ಲಿ ನಡೆದಿರುವ ಒರೆತಗಳು (survey) ತಿಳಿಸುತ್ತವೆ.

ಒಳ್ಳೆ ಸಾರಿಗೆ ಏರ‍್ಪಾಡಿದ್ದರೂ, ಮಂದಿಯು ಗುಂಪು ಸಾರಿಗೆಯನ್ನೇ ಬಳಸುವರು ಎಂದು ಹೇಳಲಾಗುವುದಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸಾರಿಗೆ ಬಗೆಯನ್ನು (ಗುಂಪು ಸಾರಿಗೆ ಅತವಾ ತಮ್ಮದೇ ಗಾಡಿಗಳನ್ನು ಬಳಸುವುದು) ಮಂದಿಯು ತೀರ‍್ಮಾನಿಸುವಲ್ಲಿ, ಸಾರಿಗೆಗೆ ಸಂಬಂದವಿರದ ಕೆಲ ಅಂಶಗಳ ಅತವಾ ಸಾರಿಗೆ ಏರ‍್ಪಾಡಿನ ಕಟ್ಟುಬಗೆಯ (design) ಕೆಲ ಅಂಶಗಳ ಪಾತ್ರವೂ ಇದೆ ಎಂದು ಆ ಒರೆತಗಳಿಂದ ತಿಳಿದುಬಂದಿದೆ. ಅವುಗಳಲ್ಲಿ ಮುಕ್ಯವಾದ ಮೂರು ಅಂಶಗಳೆಂದರೆ

1. ನಿಬಿಡತೆ (density)
2. ಎಟಕುವಿಕೆ ಅತವಾ ನಿಲುಕುವಿಕೆ (accessibility)
3. ನಡೆಯಬಲ್ಲುದಿಕೆ (walkability)

ನಿಬಿಡತೆ :

ಯಾವುದೇ ಒಂದು ನಗರ ಅತವಾ ಪ್ರದೇಶದಲ್ಲಿ, ಹೆಚ್ಚು ಮಂದಿಯಿದ್ದಶ್ಟೂ ಹೆಚ್ಚು ಓಡಾಟ ಇರುತ್ತದೆ. ಮಂದಿ ಎಣಿಕೆ ಹೆಚ್ಚಿದ್ದಾಗ ಓಡಾಟಕ್ಕಾಗಿ ಹೆಚ್ಚು ಮಂದಿ ತಮ್ಮದೇ ಗಾಡಿಗಳನ್ನು ಬಳಸಿದರೆ ದಟ್ಟಣೆ ಹೆಚ್ಚೇ ಇರುತ್ತದೆ. ಅಂತಲ್ಲಿ ಗುಂಪು ಸಾರಿಗೆಯ ಅಗತ್ಯತೆ ಹೆಚ್ಚಿರುತ್ತದೆ. ಸರಿಯಾದ ಸಾರಿಗೆ ಏರ‍್ಪಾಡು ಇದ್ದರೆ ಮಂದಿಯು ಅವುಗಳನ್ನೇ ಬಳಸಲು ಮುಂದಾಗುತ್ತಾರೆ ಎಂದು ಒರೆತಗಳು ತಿಳಿಸುತ್ತವೆ. ಯಾಕೆಂದರೆ. ದಟ್ಟಣೆ ಹೆಚ್ಚಿರುವ ನಗರಗಳಲ್ಲಿ ತಮ್ಮ ಗಾಡಿಗಳನ್ನು ಓಡಿಸುವುದು ಕಂಡಿತವಾಗಿಯೂ ಪ್ರಯಾಸದ ಕೆಲಸವಾಗಿರುತ್ತದೆ ಎಂಬ ಅರಿವು ಮಂದಿಗಾಗಿರುತ್ತದೆ!

ಎಟಕುವಿಕೆ ಅತವಾ ನಿಲುಕುವಿಕೆ:

ಹೆಚ್ಚು ಮಂದಿದಟ್ಟಣೆ (population density) ಇದ್ದ ಕೂಡಲೇ, ಹೆಚ್ಚೆಚ್ಚು ಮಂದಿಯು ಗುಂಪು ಸಾರಿಗೆ ಬಳಸುತ್ತಾರೆ ಎಂದು ಹೇಳಲು ಬರುವುದಿಲ್ಲ ಎನ್ನುತ್ತಾವೆ ಆ ಒರೆತದ ವರದಿಗಳು. ಬಸ್ಸು ಅತವಾ ಮೆಟ್ರೋ ರೈಲು ಸಾರಿಗೆ ನಿಲ್ದಾಣಗಳು ಎಶ್ಟು ದೂರದಲ್ಲಿ ಇವೆ ಎಂಬುದು ಸಾರಿಗೆ ಸೇವೆಗಳ ‘ನಿಲುಕುವಿಕೆ’ ಯನ್ನು ತೀರ‍್ಮಾನಿಸುತ್ತವೆ. ನಿಲುಕುವಿಕೆ ವಹಿಸುವ ಪಾತ್ರದ ಬಗ್ಗೆ ಹೇಳಲು ಬೀಜಿಂಗ್ (ಚೈನಾ) ಮತ್ತು ನ್ಯೂಯಾರ‍್ಕ್ (ಅಮೇರಿಕ) ನಗರಗಳನ್ನು ಆ ವಿಶಯವಾಗಿ ಹೋಲಿಸಲಾಗಿದೆ. ನ್ಯೂಯಾರ‍್ಕ್ ಗಿಂತ ಬೀಜಿಂಗ್ ನಲ್ಲಿ ಮಂದಿ ದಟ್ಟಣೆ ಹೆಚ್ಚಿದ್ದರೂ ನ್ಯೂಯಾರ‍್ಕ್ನಲ್ಲಿ ಹೆಚ್ಚು ಮಂದಿ ಗುಂಪು ಸಾರಿಗೆ ಬಳಸುತ್ತಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಕಾರಣ, ಹೆಚ್ಚಿನ ಎಣಿಕೆಯಲ್ಲಿ ಮಂದಿಯು ಕೆಲಸ ಮಾಡುವ ತಾಣಗಳು ಅತವಾ ಆಪೀಸುಗಳು, ಮೆಟ್ರೋ ನಿಲ್ದಾಣದಿಂದ ಕೇವಲ 20 ನಿಮಿಶದಲ್ಲಿ ನಡೆದೇ ತಲುಪಬಹುದಾದಶ್ಟು ದೂರದಲ್ಲಿರುವುದು! ಸಾಮಾನ್ಯವಾಗಿ ಒಬ್ಬ ವ್ಯಕ್ತಿ 20 ನಿಮಿಶಗಳ ಕಾಲ ಬಿಡುವಿಲ್ಲದೇ ನಡೆಯಬಲ್ಲನಾಗಿರುವುದರಿಂದ, ನಿಲ್ದಾಣದಿಂದ 20 ನಿಮಿಶಗಳಶ್ಟೇ ದೂರವಿರುವರು ಮೆಟ್ರೋವನ್ನು ಬಳಸುವ ಸಾದ್ಯತೆ ಹೆಚ್ಚಿರುತ್ತದೆ ಅಂತ ಆ ವರದಿಗಳು ಹೇಳುತ್ತವೆ. ಬೀಜಿಂಗ್ ನಲ್ಲಿ ಮೆಟ್ರೋ ನಿಲ್ದಾಣಗಳಿಂದ 20 ನಿಮಿಶದಲ್ಲಿ ನಡೆದುಕೊಂಡೇ ತಲುಪುವಂತ ಹೆಚ್ಚಿನ ಎಣಿಕೆಯಲ್ಲಿ ಮಂದಿಯು ಕೆಲಸ ಮಾಡುವ ಆಪೀಸುಗಳು ಕಡಿಮೆ ಇರುವುದರಿಂದ, ಗುಂಪು ಸಾರಿಗೆಯನ್ನು ಹೆಚ್ಚು ಮಂದಿ ಬಳಸುತ್ತಿಲ್ಲ ಎಂದು ವರದಿಗಳು ತಿಳಿಸುತ್ತವೆ.

ನಡೆಯಬಲ್ಲುದಿಕೆ :

ಸಾರಿಗೆ ಏರ‍್ಪಾಡು ಕುರಿತು ನಡೆಸಿದ ಆ ಒರೆತಗಳಿಂದ ಕಂಡುಕೊಂಡ ಮತ್ತೊಂದು ವಿಶಯ ಹೀಗಿದೆ. ಚೈನಾದ ಕೆಲ ನಗರಗಳಲ್ಲಿ

  • ಮಂದಿಯು ವಾಸಿಸುವ ಜಾಗಗಳಿಂದ ಗುಂಪು ಸಾರಿಗೆ ನಿಲ್ದಾಣಗಳು 900 ಮೀಟರ್ ದೂರದಲ್ಲಿದ್ದರೂ ಮಂದಿಯು ನಡೆದುಕೊಂಡೇ ನಿಲ್ದಾಣಗಳನ್ನು ತಲುಪುವರು
  • ಆದರೆ ಕೆಲವೆಡೆ, ಮಂದಿಯು ವಾಸಿಸುವ ಜಾಗಗಳಿಂದ ಗುಂಪು ಸಾರಿಗೆಯ ನಿಲ್ದಾಣಗಳು ಕೇವಲ 100 ಮೀಟರ್ ಮತ್ತು ಅದಕ್ಕಿಂತ ತುಸು ಹೆಚ್ಚಿನ ದೂರದಲ್ಲಿದ್ದರೂ, ಅಲ್ಲಿಗೆ ನಡೆದು ತಲುಪಲು ಬಯಸುತ್ತಿಲ್ಲ

ಕಾಲುದಾರಿಗಳ (footpath) ಮೇಲೆ ಅಂಗಡಿಗಳಿದ್ದು, ದಾರಿಗಳ ಇಕ್ಕೆಲಗಳಲ್ಲಿ ಮರಗಳನ್ನೂ ಹೊಂದಿದ್ದರೆ ಅಂತ ದಾರಿಗಳಲ್ಲಿ ನಡೆಯಲು ಇಶ್ಟ ಎಂದು ಹೆಚ್ಚಿನ ಮಂದಿ ಹೇಳಿದ್ದಾರೆ. ಅಂಗಡಿಗಳನ್ನು ನೋಡುತ್ತಾ ಶಾಪಿಂಗ್ ಮಾಡುತ್ತಾ ನಡೆಯುವುದು ಹೆಚ್ಚು ಕುಶಿ ಕೊಡುತ್ತದೆ, ಗಿಡ-ಮರಗಳು ನಡೆಯುವ ಆಯಾಸವನ್ನು ಮರೆಸುತ್ತದೆ ಎಂದೂ ಮಂದಿಯು ಹೇಳಿದ್ದಾರೆ. ನಿಲ್ದಾಣವು 900 ಮೀಟರ್ ದೂರದಲ್ಲಿದ್ದರೂ ಮಂದಿಯು ನಡೆದೇ ತಲುಪುವ ಹಿಂದಿನ ಗುಟ್ಟಿದು. ಕಾಲುದಾರಿಗಳು ಚಿಕ್ಕದಾಗಿದ್ದು ಸರಿಯಾದ ಸ್ತಿತಿಯಲ್ಲಿರದೇ ಇರುವುದು, ದಾರಿಗಳ ಎಡ-ಬಳಗಲ್ಲಿ ಕಡಿಮೆ ಅಂಗಡಿ-ಮರಗಳನ್ನು ಹೊಂದಿರುವುದು ಅತವಾ ಅಂಗಡಿ-ಮರಗಳನ್ನು ಹೊಂದದೇ ಇರುವುದು, ನಿಲ್ದಾಣಗಳು 100 ಮೀಟರ್ ಅತವಾ ತುಸು ಹೆಚ್ಚಿನ ದೂರದಲ್ಲಿದ್ದರೂ ಮಂದಿಯು ನಡೆದೇ ತಲುಪಲು ಬಯಸದಿರುವುದಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳುತ್ತವೆ. ಇದರಿಂದ ತಿಳಿದುಬರುವುದೇನೆಂದರೆ ಗುಂಪು ಸಾರಿಗೆಯನ್ನು ಹೆಚ್ಚು ಮಂದಿ ಬಳಸುವಂತಾಗಬೇಕಾದರೆ, ನಿಲ್ದಾಣಗಳು ದೂರದಲ್ಲಿರಬಾರದು. ಹೆಚ್ಚಿನ ದೂರದಲ್ಲಿದ್ದರೆ ನಿಲ್ದಾಣಕ್ಕೆ ಹೋಗುವ ಕಾಲುದಾರಿಗಳಲ್ಲಿ ಮಂದಿ ಹಾಯಾಗಿ ಸಾಗುವಂತಾ ಏರ‍್ಪಾಡುಗಳಾದರೂ ಇರಬೇಕು ಎಂಬುದಾಗಿದೆ.

ದಿನೇ ದಿನೇ ಬೆಳೆಯುತ್ತಿರುವ ಮತ್ತು ವೇಗವಾಗಿ ಏಳಿಗೆ ಕಾಣುತ್ತಿರುವ ನಗರಗಳಲ್ಲಿ ಸಾರಿಗೆ ಏರ‍್ಪಾಡನ್ನು ರೂಪಿಸುವ ಬಗೆ ಸವಾಲಿನ ಕೆಲಸವೇ ಆಗಿದೆ. ಹೆಚ್ಚು ಮಂದಿಯನ್ನು ಗುಂಪು ಸಾರಿಗೆಯತ್ತ ಸೆಳೆಯುತ್ತಾ ದಟ್ಟಣೆ ಕಡಿಮೆ ಮಾಡುವಲ್ಲಿ ಸರಿಯಾದ ಸಾರಿಗೆ ಏರ‍್ಪಾಡಿನ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮೇಲೆ ತಿಳಿಸಿದ ನಿಬಿಡತೆ, ಎಟಕುವಿಕೆ ಅತವಾ ನಿಲುಕುವಿಕೆ ಮತ್ತು ನಡೆಯಬಲ್ಲುದಿಕೆ ಅಂಶಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಿದೆ.

(ಚಿತ್ರ ಸೆಲೆ : bbc.com )

(ಮಾಹಿತಿ ಸೆಲೆ : agenda.weforum.org )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.