ಯುಗಾದಿ: ಹೊಸತಿಗೆ ಮುನ್ನುಡಿ

ಹರ‍್ಶಿತ್ ಮಂಜುನಾತ್.

yugadi

ಹೊತ್ತು ಉರುಳಿ ಉರುಳಿ ಓಡುತಿದೆ. ಹಳೆ ಏಡು ಕಳೆದು ಹೊಸ ಏಡಿನೆಡೆಗೆ ನಮ್ಮೆಲ್ಲರ ತಂದು ನಿಲ್ಲಿಸಿದೆ! ಇದು ನಮಗೆಲ್ಲರಿಗೂ ಯುಗಾದಿ ಹಬ್ಬದ ಸವಿ ಹೊತ್ತು. ಹಳೆ ನೋವ ಮರೆತು ಹೊಸತನ್ನು ಹಂಬಲಿಸಿ ಬರಮಾಡಿಕೊಳ್ಳುವ ನಲಿವಿನ ಹೊತ್ತು. ಯುಗಾದಿ ಹಬ್ಬವು ನಮ್ಮ ನಾಡಿನ ಮಂದಿಗೆ ಹೆಚ್ಚುಗಾರಿಕೆಯ ಹಬ್ಬಗಳಲ್ಲೊಂದು. ಕಾರಣ ಯುಗಾದಿ ಹಬ್ಬವು ಹೊಸ ಏಡಿನ ಮೊದಲಿದ್ದಂತೆ. ಈ ಹೊಸ ಏಡನ್ನು ನಲಿವಿನಿಂದ ಬರಮಾಡುವಲ್ಲಿ ನಾಡ ಮಂದಿ ಅಣಿಯಿಟ್ಟಿರುತ್ತಾರೆ. ಯುಗಾದಿಯಲ್ಲಿ ಎರಡು ಬಗೆಗಳಿವೆ. ಒಂದು ಚಂದ್ರಮಾನ ಯುಗಾದಿ ಮತ್ತೊಂದು ಸೌರಮಾನ ಯುಗಾದಿ. ಚಂದ್ರನ ಸುತ್ತುವಿಕೆಯ ನಾಳುಗಳ ಲೆಕ್ಕಾಚಾರದ ಮೇಲೆ ಚಾಂದ್ರಮಾನ ಯುಗಾದಿ ಮತ್ತು ಸೂರ‍್ಯನ ಸುತ್ತುವಿಕೆಯ ನಾಳುಗಳ ಲೆಕ್ಕಾಚಾರದ ಮೇಲೆ ಸೌರಮಾನ ಯುಗಾದಿಯನ್ನು ಮಾಡಲಾಗುತ್ತದೆ.

ಚಂದ್ರನ ಪ್ರತೀ ಸುತ್ತಿಗೂ ಒಂದು ತಿಂಗಳು ಬೇಕು. ಹೀಗೆ ಒಟ್ಟು ಹನ್ನೆರಡು ಸುತ್ತಿಗೆ ಒಂದು ಏಡು. ಹೀಗೆ ಏಡಿನ ಮೊದಲ ದಿನವನ್ನು ಯುಗಾದಿಯಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿಶ್ಣು ದೇವನು ಮೀನಿನ ರೂಪ ತಾಳಿದನೆಂದು ಕತೆಯಿದೆ. ಈ ದಿನವನ್ನು ಕರ‍್ನಾಟಕದಲ್ಲಿ ಮತ್ತು ಆಂದ್ರ ಪ್ರದೇಶದಲ್ಲಿ ಯುಗಾದಿ ಎಂದು ಕರೆದರೆ, ಕೇರಳದಲ್ಲಿ ವಿಶು ಹಬ್ಬವೆಂದೂ, ಗೋವಾದಲ್ಲಿ ಸಂವತ್ಸರಪಾಡ್ಪೊ, ತಮಿಳುನಾಡಿನಲ್ಲಿ ಪುತಾಂಡು, ಮಹಾರಾಶ್ಟ್ರದಲ್ಲಿ ಗುಡಿಪಾಡ್ಯ, ಪಂಜಾಬಿನಲ್ಲಿ ಬಯ್ಸಾಕಿ, ಸಿಂದಿಯವರು ಚೇತಿಚಾಂದ್ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.

ಮುಂಜಾನೆ ಸೂರ‍್ಯ ಹುಟ್ಟುವುದಕ್ಕೂ ಮೊದಲೇ ಎದ್ದು ಮಯ್ಗೆ ಎಣ್ಣೆಯನ್ನು ತಿಕ್ಕಿ, ಬಿಸಿ ನೀರಿನಲ್ಲಿ ಮಿಂದು, ಹೊಸ್ತಿಲು ತೊಳೆದು ಕುಂಕುಮ ಹಚ್ಚಿ, ಬಾಗಿಲಿಗೆ ತೋರಣ ಕಟ್ಟಿ, ದೇವರಿಗೆ ಪೂಜೆ ಕೆಲಸಗಳನ್ನು ನೆರವೇರಿಸಿ ತಮ್ಮವರೊಂದಿಗೆ ಬೇವು ಬೆಲ್ಲ ಹಂಚಿಕೊಂಡು ತಿನ್ನುವ ನಲಿವಿನ ಹೊತ್ತು. ಹೀಗೆ ಎಳ್ಳು ಬೆಲ್ಲ ತಿನ್ನುವಾಗ ಎಲ್ಲರಿಗೂ ಒಳ್ಳೆಯ ಆರೋಗ್ಯ, ಸಕಲ ಸಿರಿವಂತಿಕೆ, ನಲಿವಿನ ಬದುಕು ಸಿಗಲೆಂದು ಬಯಸುವುದು ವಾಡಿಕೆ.

ಮನವರಳಿದೆ ಮನೆ ಬೆಳಗಿದೆ
ಯುಗಾದಿ ಮರಳಿ ಬರುತಿದೆ
ನೂರಾಸೆಗೆ ಮೊದಲಾಗಿದೆ
ಹೊಸ ಏಡ ಹೊತ್ತು ತರುತಿದೆ.

ಹಣ್ಣೆಲೆಗಳು ನೆಲಕುರುಳಿ
ಚಿಗುರೆಲೆಗಳು ಹಸಿರಾಗಿ
ಪಕ್ಶಿ ಸಂಕುಲವು ಗರಿಬಿಚ್ಚಿ
ನವ ಚೈತನ್ಯದಿ ನಳನಳಿಸುತ
ನೂರಾಸೆಗೆ ಮೊದಲಾಗಿದೆ
ಯುಗಾದಿ ಮರಳಿ ಬರುತಿದೆ

ನೋವು ನಲಿವ ಬುತ್ತಿಗಂಟು
ಬೇವುಬೆಲ್ಲದ ಒಂದಣದಲ್ಲುಂಟು
ಅಂದಕಾರವ ದೂರವಿರಿಸಿ
ಇರುಳ ಸೀಳಿ ಬೆಳಕಿರಿಸಿ
ಹೊಸತನಕೆ ಜಗವರಳಿದೆ
ನೂರಾಸೆಗೆ ಮೊದಲಾಗಿದೆ
ಯುಗಾದಿ ಮರಳಿ ಬರುತಿದೆ
ಹೊಸ ಏಡ ಹೊತ್ತು ತರುತಿದೆ.

(ಚಿತ್ರ ಸೆಲೆ: mangalorean.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: