ಕೆರೆಯ ಸುತ್ತ ಒಂದು ಸುತ್ತು

ಸುನಿತಾ ಹಿರೇಮಟ.ಕೆಲಗೇರಿ ಕೆರೆ

ಕಾಯವೆಂಬ ಕೆರೆಗೆ,
ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ,
ದೃಢವೆಂಬ ತೂಬನಿಕ್ಕಬೇಕಯ್ಯ.
ಆನಂದವೆಂಬ ಜಲವ ತುಂಬಿ,
ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ.
ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ ಬೆಳೆಸಿ,
ಅರುಹೆಂಬ ಹೂವ, ಅದ್ವೈತವೆಂಬ ಹಸ್ತದಿಂದ ಕುಯಿದು
ಅನುಪಮಲಿಂಗಕ್ಕೆ, ಪೂಜಿಸಬಲ್ಲರೆ ಲಿಂಗಾರ‍್ಚಕರೆಂಬೆ.
ಈ ಭೇದವನರಿಯದೆ, ಹುಸಿಯನೆ ಪೂಜಿಸಿ,
ಗಸಣೆಗೊಳಗಾದ ಪಿಸುಣಿಗಳ
ಲಿಂಗಪೂಜಕರೆಂತೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ತೋಂಟದ ಸಿದ್ದಲಿಂಗ ಶಿವಯೋಗಿಗಳು

ಕೆರೆಯನ್ನು ಹೀಗೂ ಕರಾರುವಕ್ಕಾಗಿ, ಇಡಿಯಾಗಿ ಹೇಳಬಹುದಾದಲ್ಲಿ, ಕೆರೆ ನಮ್ಮ ಹಿರಿಯರನ್ನ ಎಶ್ಟೆಲ್ಲಾ ಕೋನಗಳಲ್ಲಿ ಆವರಿಸಿತ್ತು ಎನ್ನುವ ಅಲೋಚನೆ ಶುರುವಾಗಿತ್ತದೆ… ನಿಜ ಕೆರೆ ಎಂಬುದು ಕೆರೆಯ ಅಂಗಳ, ಕೆರೆಯ ಏರಿ, ತೂಬು, ಕೆರೆಯ ಕೋಡಿ, ಕೆರೆಯ ಕರುಳ ಬಳ್ಳಿಯ ಹಾಗೆ ಹಬ್ಬಿದ ಕಾಲುವೆಗಳ ಹಂದರ. ಯಾವುದೇ ತಾಂತ್ರಿಕ ಅನೂಕೂಲತೆಗಳು ಇಲ್ಲದಿದ್ದ ಆ ಸಮಯದಲ್ಲಿ ಕೆರೆ-ಕಟ್ಟೆಗಳನ್ನು ಕಟ್ಟುವುದರ ಬಗ್ಗೆ ಮತ್ತು ಅವುಗಳ ಎಲ್ಲ ಬಾಗಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಸಮಗ್ರ ಅರಿವು ಈಗಲೂ ಅರೆ ಕ್ಶಣ ನಮ್ಮನ್ನು ನಾಚುವಂತೆ ಮಾಡುತ್ತದೆ. ಕೆರೆ-ಕಟ್ಟೆಗಳು ಸಾಮಾಜಿಕ ಒಲವು ಮತ್ತು ಸಾಮೂಹಿಕ ಕಾರ‍್ಯಶೀಲತೆಯ ಸಂಕೇತಗಳು. ಹಿರಿಯರು ನಿರ‍್ಮಿಸಿದ ಕೆರೆಗಳು ಹೆಚ್ಚು ಕಾಲ ಉಳಿಯಲಿ ಮತ್ತು ಒಡೆಯದಿರಲಿ ಎಂಬ ಆಶಯದಿಂದ, ಅವುಗಳ ವಿನ್ಯಾಸ ಮತ್ತು ಕಟ್ಟುವಿಕೆ ತಾಂತ್ರಿಕತೆಯ ಮಾದರಿಗಳ ಬಗ್ಗೆ ನಿಗಾವಹಿಸಿದ್ದು ಈಗಲೂ ಇರುವ ನಮ್ಮ ಕೆರೆಗಳನ್ನ ಗಮನಿಸಿದರೆ ತಿಳಿಯುತ್ತದೆ.

ಕೆರೆಗಳ ಪ್ರಕಾರಗಳನ್ನು ಹಲವು ರೀತಿಯಲ್ಲಿ ಹೇಳುವ ಅಬ್ಯಾಸವಿದೆ;

  • ಕೆರೆ ಕಟ್ಟಬೇಕಾದಾಗ ಮುಕ್ಯವಾಗಿ ಕೆರೆಗಳಿಗೆ ನೀರು ಉಣಿಸುವ ಮಾದರಿ ಮತ್ತು ಕೆರೆಗಳಿಂದ ನೀರು ಒದಗಿಸುವ ನೆಲದ ಬೌಗೋಳಿಕತೆಯನ್ನು ಪರಿಗಣಿಸಲಾಗುತ್ತಿತ್ತು.
  • ಸರಪಳಿಯ ಮಾದರಿಯಲ್ಲಿ ಇರುವ ಕೆರೆಗಳಲ್ಲಿ ನೀರಿನ ಒಳ ಹರಿವಿಗಾಗಿ, ನೀರನ್ನು ಹೊರ ಬಿಡುವುದಕ್ಕಾಗಿ ಮತ್ತು ಪ್ರವಾಹ ಕಾಲದ ನೀರು ಕೆರೆಗೆ ದಕ್ಕೆಯಾಗದಂತೆ ಹರಿದು ಹೋಗಲು ಬೇಕಾದ ಎಲ್ಲ ಬಾಗಗಳ ವಿನ್ಯಾಸವನ್ನು ಕಾಣಬಹುದು ಮತ್ತು ದೊಡ್ಡದಾದ ಒಂದೇ ಕೆರೆಯಲ್ಲಿ ನೀರನ್ನು ಕೂಡಿಡುವ ಮತ್ತು ನೀರು ಸೋರಿ ಹೋಗದಂತೆ ಎಚ್ಚರಿಕೆ ವಹಿಸುವ ವಿನ್ಯಾಸಕ್ಕೆ ಒತ್ತು ಕೊಡಲಾಗುತ್ತಿತ್ತು.
  • ಬೇಸಾಯಕ್ಕೆ, ಜನರ ದಿನನಿತ್ಯದ ಚಟುವಟಿಕೆಗಳಿಗೆ ಹಾಗು ಇನ್ನಿತರ ಅಗತ್ಯಗಳಿಗೆ ಬೇಕಾದ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.
  • ಅಲ್ಲದೆ ಕೆರೆಯ ಮೂಲ ಆಯಾಮಗಳಾದ ಮಳೆ ನೀರು ಸಂಗ್ರಹಣೆ, ಮಣ್ಣಿನ ಸವಕಳಿಯ ತಡೆ, ಮಳೆ ತರುವ ಪ್ರವಾಹದ ನೀರನ್ನು ಪೋಲು ಮಾಡದೆ ಮಳೆ ನೀರು ಕೂಡಿಡಲು ಆದ್ಯತೆ ನೀಡಲಾಗುತ್ತಿತ್ತು.

ಈ ಕಾರಣಗಳಿಗಾಗಿ ಕೆರೆಯ ಪ್ರತಿಯೊಂದು ಬಾಗವು ಮಹತ್ವ ಪಡೆಯುತ್ತಿತ್ತು

ಒಸರುವಾ ತೊರೆ ಲೇಸು | ಹಸುನಾದ ಕೆರೆ ಲೇಸು | ಸರವಿರುವವನ ನೆರೆ ಲೇಸು | ಸಾಗರವು ವಸುಧಿಗೆ ಲೇಸು ಸರ‍್ವಜ್ನ||

ಕೆರೆಯ ತಳ:

ತೊಣ್ಣುರು ಕೆರೆ

ತೊಣ್ಣುರು ಕೆರೆ

ಕೆರೆಯ ತಳ ಎಂದರೆ ನೀರು ನಿಲ್ಲುವ ಜಾಗ. ಮಳೆ ಅತವಾ ನದಿಗಳಿಂದ ಹರಿದುಬಂದ ನೀರು ಇಲ್ಲಿ ಬಂದು ನಿಲ್ಲುವುದರಿಂದ ಸಹಜವಾಗಿ ಇದು ತಗ್ಗಾದ ಜಾಗ. ನೀರಿನ ಹರಿವು ಹೆಚ್ಚಾದಂತೆ ಅದರ ಹರವು ಬೆಳೆಯುತ್ತಾ ಎತ್ತರ ಮತ್ತು ಅಗಲಗಳಗಳಲ್ಲಿ ಕೆರೆ ತುಂಬುತ್ತಾ ಹೋಗುತ್ತದೆ. ಕೆರೆಯ ತಳ ಬದ್ರ ಬುನಾದಿಯಾಗಿರಬೇಕು. ಕೆರೆಯ ತಳದಲ್ಲಿ ಮಣ್ಣನ್ನು ಬಿಗಿಯಾಗಿಸಿ ನೀರು ಸೋರದಂತೆ ಎಚ್ಚರ ವಹಿಸುತ್ತಾರೆ. ಹಲವು ಗಟ್ಟಿಯಾದ ಮಣ್ಣಿನ ಪದರಗಳನ್ನ ಹೀಗೆಯೆ ಮಾಡುತ್ತಾ ಕೆರೆಯ ತಳ ಸಿದ್ದವಾಗುತ್ತದೆ. ಕೆರೆ ಕಟ್ಟ ಬೇಕಾದರೆ ದೊರೆಯವ ನೆಲದ ಅಳತೆ, ಉಬ್ಬುತಗ್ಗುಗಳು, ಎತ್ತರ ಮತ್ತು ಕೆರೆಯ ಅಚ್ಚುಕಟ್ಟಿನಲ್ಲಿ ಬೆಳೆಯುವ ಬೆಳೆಗಳಿಗೆ ಬೇಕಾಗುವ ನೀರಿನ ಪ್ರಮಾಣ ಮತ್ತು ಇನ್ನಿತರ ಬೇಡಿಕಗಳು ಕೆರೆ ತಳದ ಅಳತೆಯನ್ನು ನಿರ‍್ದರಿಸುವಲ್ಲಿ ಮುಕ್ಯವಾಗಿರುತ್ತಿದ್ದವು. ಹಲವು ರಾಜ ಪರಂಪರೆಗಳ ಇತಿಹಾಸವುಳ್ಳ ನಮ್ಮಲ್ಲಿ ಕೆರೆಗಳ ಇತಿಹಾಸವು ಅವರೊಡನೆ ಬೆಳೆಯುತ್ತಾ ಬಂದಿತು. ಆ ನಿಟ್ಟಿನಲ್ಲಿ ನಾವು ಗಮನಿಸಬೇಕಾದದ್ದು ಅವುಗಳ ಸುದೀರ‍್ಗ ಕಾಲದ ಬಾಳಿಕೆ, ಇದೇ ಕೆರೆ ತಳದ ಬಗ್ಗೆ ಮಾತನಾಡುವುದಾದರೆ ತೊಣ್ಣುರು ಕೆರೆ ನೀರು ಸ್ಪಟಿಕದ ತರಹ ಪಾರದರ‍್ಶಕತೆಯುಳ್ಳ ಇತಿಹಾಸ ಹೊಂದಿದೆ, ಅದರ ತಳದಲ್ಲಿ ಬಿದ್ದ ಮುತ್ತು ಸಹ ಮೇಲಿನಿಂದ ಕಾಣುತ್ತಿತ್ತು ಎಂದು ಇತಿಹಾಸ ಹೇಳುತ್ತದೆ.

ಕೆರೆ ಅಂಗಳ:
Kere 3
ಕೆರೆಯ ಜೀವವಿರುವುದೆ ಈ ಅಂಗಳದಲ್ಲಿ ನಿಂತ ನೀರು ಮುಂದಿನ ಜೀವನಕ್ಕೆ ರಹದಾರಿ. ಅಂಗಳದ ಪರಿಸರ ಸ್ವಚ್ಚವಾಗಿರಬೇಕು, ನೆಲದ ಮೇಲಿನ ಮತ್ತು ನೀರೊಳಗಿನ ಜೀವ ವೈವಿದ್ಯತೆಗೆ ಸಂಪೂರ‍್ಣ ಸಹಕಾರಿಯಾಗಬೇಕು, ಆಗಲೇ ಕೆರೆಯ ಉದ್ದೇಶ ಈಡೇರುವುದು ಎನ್ನುವ ಅರಿವು ಬಲವಾಗಿತ್ತು. ಕೆರೆ ಅಂಗಳದ ಪವಿತ್ರತೆ ಮತ್ತು ಸ್ವಚ್ಕತೆಯನ್ನ ಕಾಪಾಡಲು ನಮ್ಮ ಹಿರಿಯರಿಗಿದ್ದ ದಾರಿ ಅಲ್ಲಿ ಕಟ್ಟುವ ದೇವಾಲಯ. ಅದು ದೇವರ ಗುಡಿಯೊಂದೇ ಆಗಿರದೆ ನೀರನ್ನು ಅರಾದಿಸುವ ಕಲೆಯ ನೆಲೆಯು ಆಗಿತ್ತು.

Kere 5

ಕೆರೆ ಏರಿ:
ಯಾವುದೇ ಕೆರೆಯನ್ನು ನೋಡಿದ ತಕ್ಶಣ ಅದರ ಏರಿ ಗಮನಸೆಳೆಯುತ್ತದೆ. ಅದು ಚೆನ್ನಾಗಿದ್ದರೆ ಕೆರೆ ಸುಸ್ತಿಯಲ್ಲಿದೆ ಎಂದಾಯಿತು. ಏರಿಯು ಕೆರೆಯ ಅತ್ಯಂತ ಪ್ರಮುಕ ಬಾಗ. ನೀರನ್ನು ಹಿಡಿದಿಟ್ಟುಕೊಳ್ಳಲು, ತೂಬುಗಳ ಮುಕಾಂತರ ಅಚ್ಚುಕಟ್ಟಿಗೆ ಹಾಯಿಸುವ ಬಹುಮುಕ್ಯ ಕೆಲಸ ಇದರದು. ಹಲವಾರು ಹಳ್ಳಿಗಳಲ್ಲಿ ಊರಿಂದೂರಿಗೆ ಸಂಪರ‍್ಕ ಕಲ್ಪಿಸುವ ದಾರಿಯಾಗಿಯು ಬಳಕೆಯಾಗುತ್ತದೆ. ಆದುದರಿಂದ ಇದರ ಕಟ್ಟುವಿಕೆಯಲ್ಲಿ ವಿಶೇಶ ಆದ್ಯತೆ ನೀಡಲಾಗುತ್ತದೆ.

ಶಾಂತಿಸಾಗರ ಕೆರೆ

ಶಾಂತಿಸಾಗರ ಕೆರೆ

– ಕೆರೆಯ ತಳ ಬಾಗದ ಮಣ್ಣನ್ನು ಈ ಏರಿ ಬಾಗದ ಕಟ್ಟುವಿಕೆಯಲ್ಲಿ ಬಳಸಲಾಗುತ್ತದೆ. ಮಣ್ಣನ್ನು ಪದರ ಪದರಗಳಲ್ಲಿ ಹರಡಿ ನೀರಲ್ಲಿ ನೆನೆಸಿ ಆನಂತರ ಅದನ್ನು ಬಿಗಿಗೊಳಿಸಲಾಗುತ್ತದೆ.
– ಕೆರೆ ಏರಿಯ ತಳ ಬಾಗವು ವಿಶಾಲವಾಗಿದ್ದು, ಅದು ಮೇಲಕ್ಕೆ ಹೋದಂತೆ ಕಿರಿದಾಗುತ್ತ ಹೋಗುತ್ತದೆ.
– ಕೆರೆಯ ಏರಿಯ ವಿನ್ಯಾಸಕ್ಕೆ ನೆಲದ ಮೇಲಿನ ನೀರು ಹರಿಯುವ ದಿಕ್ಕು, ಪರಿ ಮತ್ತು ಮಣ್ಣಿನ ಗುಣಗಳ ಬಹು ಸೂಕ್ಶ್ಮ ಅರಿವಿನ ಬಗ್ಗೆ ಆಳವಾಗಿ ತಿಳಿದಿರಬೇಕು.
– ಕೆರೆಯ ಅಂಗಳದ ನಂತರ ಪ್ರಾಮುಕ್ಯ ಪಡೆದಿರುವ ಏರಿಯನ್ನು ಕಟ್ಟಲು ಕೆರೆಯ ಜಾಗದ ಮಣ್ಣು, ಕಲ್ಲು ಮತ್ತು ಇತರ ವಸ್ತುಗಳನ್ನು ಬಳಸಲಾಗುತ್ತದೆ. ಅಲ್ಲದೆ ಕೆಲವು ಕಾರಣಗಳಿಗಾಗಿ ಇಟ್ಟಿಗೆಗಳನ್ನು ಸಹ ಬಳಸಲಾಗುತ್ತಿತ್ತು.
– ಕೆರೆಯ ಕಡೆಯ ಇಳಿಜಾರನ್ನು ನೀರಿನಿಂದ ಬರುವ ಅಲೆಗಳ ಹೊಡೆತದಿಂದ, ಏರಿ ಕೊಚ್ಚಿಹೋಗದಂತೆ ತಡೆಯುವಂತೆ ಇಳಿಜಾರಿನ ಅಳತೆಯನ್ನು ನಿರ‍್ದರಿಸಲಗುತ್ತಿತ್ತು, ಅದಕ್ಕೆ ಗಟ್ಟಿಯಾಗಿ ಕಲ್ಲಿನ ಜೋಡಣೆ ಮಾಡಿ ಮಣ್ಣು ಮತ್ತು ಕೆಲವು ಸಂದರ‍್ಬಗಳಲ್ಲಿ ಗಾರೆಯನ್ನು ಬಳಸಿ ಕಟ್ಟಿದ ಉದಾಹರಣೆಗಳಿವೆ.
– ನೀರು ಏರಿಯ ಮಣ್ಣಿನಿಂದ ಸೋರಿ ಹೋಗುವುದನ್ನು ಬಹು ಮಟ್ಟಿಗೆ ತಡೆಯುವಂತೆ ದಪ್ಪ ದಪ್ಪ ಕಲ್ಲುಗಳಿಂದ ತಡೆಗೋಡೆ ಕಟ್ಟಿ ಗಟ್ಟಿಗೊಳಿಸಲಾಗುತ್ತಿತ್ತು.
– ಹೊರಗಿನ ಇಳಿಜಾರನ್ನ ಮಣ್ಣಿನ ಸವಕಳಿ ತಡೆಯಲು ವಿನ್ಯಾಸಗೊಳಿಸಲಾಗುತ್ತಿತ್ತು, ಅಲ್ಲದೆ ಈ ಬಾಗದಲ್ಲಿ ಮಣ್ಣಿನ ಸವಕಳಿ ತಡೆಯುವಂತೆ ಮಣ್ಣನ್ನು ಗಟ್ಟಿಗೊಳಿಸಲಾಗುತ್ತಿತ್ತು, ಮರಗಿಡಗಳನ್ನು ಬೆಳೆಸುವ ವಾಡಿಕೆ ಇತ್ತು.
– ಏರಿಯ ಎತ್ತರವನ್ನು ನಿರ‍್ದರಿಸುವಾಗ ಕೆರೆಯ ಅತೀ ಹೆಚ್ಚು ನೀರು ಹಿಡಿದಿಡುವ ಪ್ರಮಾಣವನ್ನು ಪರಿಗಣಿಸಲಾಗುತ್ತದೆ, ಯಾವುದೇ ಮಟ್ಟದಲ್ಲೂ ಏರಿ ಮುಳುಗಡೆಯಾಗದಂತೆ ವಿನ್ಯಾಸಗೊಳಿಸಲಾಗುತ್ತಿತ್ತು. ಅದಕ್ಕೆ ಬೇಕಾದ ಕೋಡಿ ಮತ್ತು ತೂಬುಗಳನ್ನು ಅವಶ್ಯಕತೆಗೆ ತಕ್ಕಂತೆ ಅಳವಡಿಸಲಾಗುತ್ತಿತ್ತು.

ನಮ್ಮ ಹಿರಿಯರಿಗೆ ಕೆರೆ ಕಟ್ಟುವುದರಲ್ಲಿ ಇದ್ದ ನೈಪುಣ್ಯತೆ ಹಾಗೂ ಉನ್ನತ ತಾಂತ್ರಿಕತೆ ಎಶ್ಟರಮಟ್ಟಿಗೆ ಇತ್ತೆಂದು ತಿಳಿಯಬೇಕಾದಲ್ಲಿ, ಆ ಕಾಲದಲ್ಲಿ ರಚನೆಯಾದ ತೂಬುಗಳ ಕರಾರುವಕ್ಕಾದ ವಿನ್ಯಾಸ ಮತ್ತು ಕೋಡಿಗಳ ಬಗ್ಗೆ ತಿಳಿಯುವ ಕುತೂಹಲ, ಕೆರೆಯ ಆಳದಂತೆ ಆಳವಾಗಿ ಗಾಡವಾಗಿ ಬೆಳೆಯುತ್ತಲೇ ಇದೆ. ತಾಂತ್ರಿಕತೆಯೊಂದಿಗೆ ಕಲಾತ್ಮಕತೆಯೊಂದಿಗೆ ಅಚ್ಚರಿಗೊಳಿಸುವ ಗಡಿಗ ತೂಬು, ಒನಕೆ ತೂಬು, ಕತ್ತರಿ ತೂಬು ಹೀಗೆ ಅಚ್ಚರಿಗೊಳಿಸುತ್ತ ಹೋಗುತ್ತದೆ ತೂಬುಗಳ ತಾಂತ್ರಿಕತೆಯ ಪ್ರಪಂಚ.

ನನಗೆ ಕಾಣೋ ಕೆರೆ ಯಾವ ಯಾವ ಬಾವದಲ್ಲಿ ಇರತ್ತೋ ಗೊತ್ತೇ ಆಗಲ್ಲ. ಒಮ್ಮೆ ಜಾನಪದದಲ್ಲಿ ಹಾಡೊ ಕೆರೆ ಹೊನ್ನಮ್ಮನೊ, ಬಾಗಿರತಿಯೋ ಆದ್ರೆ, ಮಗದೊಮ್ಮೆ ಸಕಲ ಜೀವಿಗಳ ಜೀವನಾಸರೆಯ ಅಮ್ರುತ ಬಿಂದುವಾಗಿಯೊ, ಇಲ್ಲ ವಚನಕಾರರು, ದಾಸರು ಹೇಳಿದ ಆ ಜೀವನದ ರಸಾನುಬವದಂತೆಯೊ, ಜೀವ ವೈವಿದ್ಯತೆಯ ತೊಟ್ಟಿಲಾಗಿಯೊ, ರಾಜಮಹಾರಾಜರುಗಳ ಕಾಲದಲ್ಲಿ ಕೆರೆಯನ್ನು ಕಟ್ಟಿಸುವುದು ಒಂದು ಪುಣ್ಯಕಾರ‍್ಯವೆಂಬ ಬಾವನೆಯೋ, ಇತಿಹಾಸ ಬರೆದ ಆ ತಾಂತ್ರಿಕತೆಯ ಕಣಜವೊ…

ಮದಗ ಮಾಸೂರಿನ ಕೆರೆಯ ತೂಬು

ಮದಗ ಮಾಸೂರಿನ ಕೆರೆಯ ತೂಬು

ಒಂಚೂರು ಜನಪದ, ಒಂಚೂರು ಇತಿಹಾಸ, ಒಂಚೂರು ರೋಚಕತೆ, ಹೌದು ಕೆರೆನೆ ಹಂಗೆ ಅದು ಯಾವಾಗಲು ನನ್ನನ್ನು ಮಂತ್ರಮುಗ್ದಳನ್ನಾಗಿಸುತ್ತೆ. ಕೆರೆ ಕಟ್ಟುವ ಇಂತಹ ಗಟ್ಟಿಯಾದ ವಿಶಯದಲ್ಲೂ ಮನಸ್ಸು ಹಕ್ಕಿಯಾಗಿ ಗುನುಗುನಿಸುತ್ತದೆ ಮೆಲ್ಲಗೆ… ಜೀವನದ ಒಂದು ಪ್ರಮುಕ ಗಟ್ಟದಲ್ಲಿ ಕೆರೆಯು ತನ್ನ ಪ್ರಾಮುಕ್ಯತೆಯನ್ನ ಹೇಳುವ ಆ ಸುಂದರ ಪರಿಕಲ್ಪನೆ ರೆಕ್ಕೆ ಬಿಚ್ಚಿಕೊಳ್ಳುತ್ತದೆ…

ಪೊಣ್ಣಿಲ್ಲತ ಮನೆತನ | ಕಣ್ಣಿಲ್ಲತ ಜೀವಮಾನ ಆಳಿಲ್ಲತ ದೊರೆತನ | ಕ್ಟ್ಟಿನೋ ಫಲವಿಲ್ಲೆ ಮಕ್ಕಳಿಲ್ಲತ ಒಕ್ಕಾಮೆ | ಕೆಜ್ಜಿನೋ ಫಲವಿಲ್ಲೆ ನೀರಿಲ್ಲತ ನೀಕೆರೆ | ತೋಡಿನೋ ಫಲವಿಲ್ಲೆ ಪುವಿಲ್ಲತ ಪುತೋಟ | ಮಾಡಿನೋ ಫಲವಿಲ್ಲೆ

ಅಮ್ಮ ಹೆಣ್ಣಿಲ್ಲದ ಮನೆತನ ಕಣ್ಣಿಲ್ಲದ ಬದುಕಿನಂತೆ, ಆಳಿಲ್ಲದ ಅರಸನಂತೆ, ಮಕ್ಕಳಿಲ್ಲದ ಮನೆಯಂತೆ, ನೀರಿಲ್ಲದ ಕೆರೆಯಂತೆ, ಹೂವಿಲ್ಲದ ಹೂದೋಟದಂತೆ ನಿಶ್ಪಲ. ಆದ್ದರಿಂದ ತನಗೊಪ್ಪುವ ಮಡದಿ  ತರುವುದಾಗಿ ತನ್ನ ಹ್ರುದಯದಾಳವನ್ನು ತೆರೆದಿಡುತ್ತಾನೆ ಮದುವೆಯಾಗ ಬಯಸುವ ಕೊಡವರ ಹುಡುಗ.
ಮಾಹಿತಿ ಮತ್ತು ಚಿತ್ರ ಸೆಲೆ: (vachana.sanchaya, ಹಂಪಿ ಸಂಪುಟ, pandavapuratown.gov.inwikisourcepuratattva.inprajavani.netkarnatakatravelstad.com, tripadvisor.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *