ಅಮೇರಿಕಾದಲ್ಲಿರುವುದು ಇಂಗ್ಲಿಶ್ ಒಂದೇ ಅಲ್ಲ!
– ರತೀಶ ರತ್ನಾಕರ.
ಹೆಚ್ಚಿನ ಹೊರಗಿನ ಕಣ್ಣುಗಳಿಗೆ ಅಮೇರಿಕಾದಲ್ಲಿ ಇಂಗ್ಲಿಶ್ ಒಂದೇ ಇರುವುದೆಂಬ ಅನಿಸಿಕೆ ಇದೆ. ಆದರೆ ಅಮೇರಿಕಾಕ್ಕೆ ಯಾವುದೇ ಒಂದು ರಾಶ್ಟ್ರ ನುಡಿ ಎಂಬುದಾಗಲಿ ಇಲ್ಲವೇ ಆಡಳಿತ (Official) ನುಡಿ ಎಂಬುದಾಗಲಿ ಇಲ್ಲ ಎಂದರೆ ಬೆರಗೆನಿಸಬಹುದು. ಅಮೇರಿಕಾದ ಹಳಮೆಯ ಪುಟಗಳನ್ನು ತೆರೆದರೆ ನೂರಾರು ಬುಡಕಟ್ಟು ನುಡಿಗಳು ಇದ್ದ ಕುರುಹು ಸಿಗುತ್ತದೆ. ಆದರೆ ಹೆಚ್ಚಿನ ಬುಡಕಟ್ಟು ನುಡಿಗಳು ಈಗ ಕಾಣೆಯಾಗಿವೆ, ಒಂದಶ್ಟು ಬುಡಕಟ್ಟು ನುಡಿಗಳು ಅಳಿವಿನ ಅಂಚಿನಲ್ಲಿದ್ದರೆ ಇನ್ನು ಕೆಲವು ನುಡಿಗಳು ಮರುಹುಟ್ಟು ಪಡೆದುಕೊಂಡು ಬೆಳೆಯುತ್ತಿವೆ. ಸುಮಾರು 80% ಮಂದಿ ಇಂಗ್ಲಿಶ್ ಬಲ್ಲವರಿದ್ದರೂ ಇಂಗ್ಲಿಶಿನ ಜೊತೆ ಸ್ಪ್ಯಾನಿಶ್, ಚೈನೀಸ್, ಟಗಾಲಗ್ (Tagalog), ಪ್ರೆಂಚ್, ವಿಯೆಟ್ನಾಮೀಸ್ ಹಾಗು ಜರ‍್ಮನ್ ನಂತಹ ನುಡಿಗಳು ಅಮೇರಿಕಾದ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಲ್ಲಿದೆ. ಅದೂ ಸರಕಾರದ ಸೇವೆಗಳಲ್ಲಿ ಬಳಕೆಯಲ್ಲಿದೆ ಎಂಬುದು ಗಮನಿಸಬೇಕಾದ್ದು.
ಮೊದಲೇ ತಿಳಿಸಿದಂತೆ ಅಮೇರಿಕಾದ ಒಕ್ಕೂಟ ಸರಕಾರಕ್ಕೆ ಯಾವುದೇ ರಾಶ್ಟ್ರ ನುಡಿ ಇಲ್ಲವೇ ಆಡಳಿತ ನುಡಿ ಎಂಬುದಾಗಿ ಇಲ್ಲ. ತನ್ನ ಆಡಳಿತದ ಕೆಲಸಗಳನ್ನು ಹೆಚ್ಚಾಗಿ ಇಂಗ್ಲಿಶಿನಲ್ಲಿ ಮಾಡುತ್ತಿದೆ, ಚುನಾವಣೆಯ ಓಟಿನ ಚೀಟಿ, ತೆರಿಗೆ ಮಾಹಿತಿಯಂತಹ ಕೆಲವು ವಿವರಗಳನ್ನು ಇಂಗ್ಲಿಶ್ ಸೇರಿದಂತೆ ಹಲವು ಬೇರೆ ಬೇರೆ ನುಡಿಗಳಲ್ಲಿ ನೀಡುತ್ತಿದೆ. ಆದರೂ ಸಂವಿದಾನದಲ್ಲಿ ಇಂಗ್ಲಿಶನ್ನು ಆಡಳಿತ ನುಡಿ ಎಂದು ಗುರುತಿಸಲಾಗಿಲ್ಲ.
ಅಮೇರಿಕಾವು ಒಂದು ಒಕ್ಕೂಟದ ಆಳ್ವಿಕೆಯಾದ್ದರಿಂದ ತಮಗೆ ಬೇಕಾದ ನುಡಿಗಳನ್ನು ಆಡಳಿತ ನುಡಿಯನ್ನಾಗಿ ಮಾಡಿಕೊಳ್ಳುವ ಅದಿಕಾರವನ್ನು ಆಯಾ ನಾಡುಗಳು ಉಳಿಸಿಕೊಂಡಿವೆ. ಕೆಲವು ನಾಡುಗಳು ಇಂಗ್ಲಿಶನ್ನು ಮಾತ್ರ ಆಡಳಿತ ನುಡಿಯನ್ನಾಗಿ ಮಾಡಿಕೊಂಡಿದ್ದರೆ, ಇನ್ನು ಕೆಲವು ಇಂಗ್ಲಿಶ್ ಹಾಗು ಸ್ಪ್ಯಾನಿಶ್ ಅನ್ನು ಆಡಳಿತ ನುಡಿಯನ್ನಾಗಿ ಮಾಡಿಕೊಂಡಿವೆ. (ಎತ್ತುಗೆಗೆ – ನ್ಯೂ ಮೆಕ್ಸಿಕೊ), ಮತ್ತೆ ಕೆಲವು ನಾಡುಗಳು ಇಂಗ್ಲಿಶಿನ ಜೊತೆಗೆ ಹೆಚ್ಚು ಬಳಕೆಯಲ್ಲಿರುವ ಬೇರೊಂದು ನುಡಿ ಇಲ್ಲವೇ ಹಲವು ಬುಡಕಟ್ಟು ನುಡಿಗಳನ್ನು ಆಡಳಿತ ನುಡಿಯನ್ನಾಗಿಸಿವೆ. ಎತ್ತುಗೆಗೆ ಅಲಾಸ್ಕ ನಾಡಿನಲ್ಲಿ ಟಗಾಲಗ್ ನುಡಿಯನ್ನು ಸೇರಿಸಿ ಹಲವು ಬುಡಕಟ್ಟು ನುಡಿಗಳು ಆಡಳಿತ ನುಡಿಗಳಾಗಿವೆ. ಕೇವಲ 1000 ಮಂದಿ ಆಡುತ್ತಿರುವ ಹವಾಯನ್ ನುಡಿಯನ್ನು ಹವಾಯಿ ನಾಡಿನಲ್ಲಿ ಆಡಳಿತ ನುಡಿಯನ್ನಾಗಿಸಿ ಅದರ ಬೆಳವಣಿಗೆಗೆ ಒತ್ತುಕೊಡಲಾಗುತ್ತಿದೆ. ನ್ಯೂ ಮೆಕ್ಸಿಕೋದಲ್ಲಿ ಇಂಗ್ಲಿಶ್ ಹಾಗು ಸ್ಪ್ಯಾನಿಶ್ ಆಡಳಿತವಿದ್ದರೂ ಅಲ್ಲಿನ ಬುಡಕಟ್ಟು ನುಡಿಗಳಾದ ನ್ಯಾವಹೊ(Navajo) ಮತ್ತು ಪ್ವೆಬ್ಲೋ(Pueblo) ನುಡಿಗಳಲ್ಲಿ ಎಲ್ಲಾ ಬಗೆಯ ಸರಕಾರಿ ಸೇವೆಗಳು ಸಿಗುವಂತೆ ನೋಡಿಕೊಳ್ಳುತ್ತದೆ.
ಇನ್ನು ಕೆಲವು ನಾಡುಗಳು ಒಕ್ಕೂಟದ ಆಳ್ವಿಕೆಯಂತೆ ಸಾಂವಿದಾನಿಕವಾಗಿ ಯಾವುದೇ ಆಡಳಿತ ನುಡಿಯನ್ನು ಮಾಡಿಕೊಂಡಿಲ್ಲ. ಆದರೂ ಆ ನಾಡಿನ ಮಂದಿಗೆ ಅನುಕೂಲವಾಗುವ ನುಡಿಯಲ್ಲಿ ಸೇವೆಗಳನ್ನು ನೀಡುತ್ತಿವೆ. ಎತ್ತುಗೆಗೆ ಕ್ಯಾಲಿಪೋರ‍್ನಿಯಾ ನಾಡಿನಲ್ಲಿ ಯಾವುದೇ ಒಂದು ಆಡಳಿತ ನುಡಿ ಇಲ್ಲದಿದ್ದರೂ ಅಲ್ಲಿನ ಹಲವಾರು ಸರಕಾರಿ ಸೇವೆಗಳು ಸ್ಪ್ಯಾನಿಶ್, ಚೈನೀಸ್, ಕೊರಿಯನ್, ಟಗಲಾಗ್, ಪರ‍್ಶಿಯನ್, ರಶ್ಯನ್, ವಿಯೆಟ್ನಾಮಿಸ್ ಮತ್ತು ತಾಯ್ ನುಡಿಗಳಲ್ಲಿ ಸಿಗುತ್ತವೆ. ಹೀಗೆ ಅಮೇರಿಕಾದ ಒಕ್ಕೂಟದ ಅಡಿಯಲ್ಲಿರುವ ನಾಡುಗಳು ತಮ್ಮ ನಾಡಿನಲ್ಲಿರುವ ಮಂದಿಗೆ ಅನುಕೂಲವಾಗುವ ನುಡಿಯಲ್ಲಿ ಸೇವೆಯನ್ನು ನೀಡುತ್ತಿವೆ.
ಅಮೇರಿಕಾದಲ್ಲಿನ ಈ ನಡೆಗೆ ಹಲವು ಕಾರಣಗಳಿವೆ. ಅಮೇರಿಕಾದ ಒಕ್ಕೂಟದ ಆಳ್ವಿಕೆಯಲ್ಲಿ ಕೆಲವು ನಂಬಿಕೆಗಳಿವೆ; ತಮ್ಮ ನಾಡು ಮತ್ತಶ್ಟು ಏಳಿಗೆ ಹೊಂದ ಬೇಕೆಂದರೆ ಆ ನಾಡಿನ ಮಂದಿಯಲ್ಲಿರುವ ಬುದ್ದಿ, ಚಳಕ ಮತ್ತು ಕಲಿಕೆಯ ಸಂಪೂರ‍್ಣ ಬಳಕೆ ಆಗಬೇಕು. ಅಲ್ಲದೇ ಬೇರೆ ಬೇರೆ ನುಡಿಗಳು ಹೊತ್ತು ತರುವ ನಡೆ-ನುಡಿ, ಹಳಮೆ, ಚಳಕ, ಅರಿಮೆ ಮತ್ತು ಚಿಂತನೆಗಳ ಬಳಕೆ ಆಗಬೇಕು. ಇವೆಲ್ಲವು ಪರಿಣಾಮಕಾರಿಯಾಗಿ ಆಗಬೇಕೆಂದರೆ ಮಂದಿಯ ನುಡಿಯನ್ನು ಬೆಂಬಲಿಸಬೇಕು ಆ ಮೂಲಕ ನಾಡಿನ ಏಳಿಗೆ ಮತ್ತಶ್ಟು ಆಗುತ್ತದೆ ಎಂಬುದು ಒಕ್ಕೂಟದ ಆಳ್ವಿಕೆಯ ನಂಬಿಕೆಯಾಗಿದೆ. ಅದಕ್ಕಾಗಿ ಒಕ್ಕೂಟದಾಳ್ವಿಕೆಯು ಆಯಾ ನಾಡುಗಳಿಗೇ ಕಲಿಕೆಯ ಹಕ್ಕನ್ನು ಕೊಟ್ಟಿದೆ. ಆಯಾ ನಾಡುಗಳು ಅಲ್ಲಿನ ಮಂದಿಯ ನುಡಿಗೆ ತಕ್ಕಂತೆ ಗಟ್ಟಿಯಾದ ಕಲಿಕೆಯನ್ನು ಕಟ್ಟಿಕೊಂಡು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿವೆ. ರಕ್ಶಣೆ ಸೇರಿದಂತೆ ಇನ್ನಿತರ ಹೊರನಾಡಿನ ವಿಶಯಗಳ ಸುತ್ತ ಬೇಕಾಗಿರುವ ಕಲಿಕೆಯ ನೆರವನ್ನು ಮತ್ತು ಸಲಹೆಯನ್ನು ಒಕ್ಕೂಟದ ಆಳ್ವಿಕೆಯು ಆಯಾ ನಾಡುಗಳಿಗೆ ನೀಡುತ್ತದೆ, ಉಳಿದಂತೆ ಕಲಿಕೆಯ ವಿಶಯದಲ್ಲಿ ಮೂಗು ತೂರಿಸುವುದು ಕಡಿಮೆ.
ಬೇರೆ ಬೇರೆ ನುಡಿಯಾಡುವ ಮಂದಿ ಬಗೆ ಬಗೆಯ ಅರಿವನ್ನು ಹೊಂದಿರುತ್ತಾರೆ, ಆ ನುಡಿಯಲ್ಲಿ ಬುದ್ದಿವಂತರಾಗಿರುತ್ತಾರೆ. ಇಂಗ್ಲಿಶ್ ಇಲ್ಲವೇ ಮತ್ತೊಂದು ಹೊರನುಡಿಯನ್ನು ಹೇರಿದರೆ ಅವರ ಬೆಳವಣಿಗೆಯನ್ನು ಅಲ್ಲೇ ಚಿವುಟಿದಂತೆ. ಒಂದು ನುಡಿ ಜನಾಂಗದ ಬೆಳವಣಿಗೆಯನ್ನು ಚಿವುಟಿದರೆ ಆ ನಾಡಿನ ಏಳಿಗೆಗೆ ಕೊಡಲಿ ಪೆಟ್ಟು ಕೊಟ್ಟಂತೆ ಎಂಬ ತಿಳಿವು ಅಮೇರಿಕಾದ ಒಕ್ಕೂಟದ ಆಳ್ವಿಕೆಯಲ್ಲಿ ಮೂಡಿಬರುತ್ತಿದೆ.
ಮಂದಿ ನುಡಿಯಲ್ಲಿಯೇ ಕಲಿಕೆ, ದುಡಿಮೆ, ಸೇವೆಗಳನ್ನು ನೀಡಿ ಬೆಂಬಲಿಸುವುದು ಏಳಿಗೆಯ ದಾರಿಯಲ್ಲೊಂದು ಎಂದು ಕಂಡುಕೊಂಡಿದ್ದಾರೆ. ಅಮೇರಿಕಾದ ಹಲವು ನಾಡುಗಳಲ್ಲಿ ಮೊದಲ ಹಂತದ ಕಲಿಕೆಯಿಂದ ಹಿಡಿದು ಉನ್ನತ ಮಟ್ಟದ ಕಲಿಕೆಯನ್ನು ಆಯಾ ಮಂದಿ ನುಡಿಯಲ್ಲಿ ನೀಡಲಾಗುತ್ತಿದೆ. ಇಂಗ್ಲಿಶನ್ನು ಹೊರತುಪಡಿಸಿ ಬೇರೆ ಯಾವ ಯಾವ ನುಡಿಗಳಲ್ಲಿ ಉನ್ನತ ಮಟ್ಟದ ಕಲಿಕೆಯು ಅಮೇರಿಕಾದ ಕಲಿಕೆವೀಡಿನಲ್ಲಿ ಸಿಗುತ್ತಿದೆ, ಮತ್ತು ಎಶ್ಟು ಮಂದಿ ಓದುತ್ತಿದ್ದಾರೆ ಎಂದು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.
ಒಕ್ಕೂಟದ ಆಳ್ವಿಕೆಯಿಂದ ಸಿಗುವ ಸರಕಾರಿ ಸೇವೆಗಳು ಕೂಡ ಹಲವು ನುಡಿಗಳಲ್ಲಿ ಸಿಗುತ್ತಿರುವುದನ್ನು ಗಮನಿಸಬಹುದಾಗಿದೆ. ಒಕ್ಕೂಟದ ಆಳ್ವಿಕೆಯ ಸೇವೆಗಳಲ್ಲಿ ‘ತೆರಿಗೆ’ಯ ಸೇವೆಯೂ ಒಂದು. ತೆರಿಗೆಯ ಮಾಹಿತಿ ಮತ್ತು ಸೇವೆಗಳಿಗಿರುವ ಮಿಂದಾಣವು ಸುಮಾರು 6 ನುಡಿಗಳಲ್ಲಿದೆ. ಮಿಂದಾಣ ಒಂದೇ ಅಲ್ಲದೇ ತೆರಿಗೆ ಕಟ್ಟುವವರ ನೆರವಿನ ಕಚೇರಿಗಳಲ್ಲಿ ಹಲನುಡಿಯ ಸೇವೆ ನೀಡುತ್ತಿದ್ದು, ಕೆಲವು ಕಡೆ 150 ಕ್ಕೂ ಹೆಚ್ಚು ನುಡಿಗಳಲ್ಲಿ ಸೇವೆ ಸಿಗುತ್ತದೆ! ಹಲವು ಕಡೆಗಳಲ್ಲಿ ಮಂದಿಯ ಅನುಕೂಲಕ್ಕಾಗಿ ಅಲ್ಲಿನ ಮಂದಿ ನುಡಿಯಲ್ಲಿ ಚುನಾವಣೆಯ ಓಟಿನ ಚೀಟಿಯನ್ನು ನೀಡಲಾಗುತ್ತಿದೆ (ನ್ಯೂಯಾರ‍್ಕ್ ನಗರದ ಕ್ವೀನ್ಸ್ ಬಾಗದಲ್ಲಿ ಬಂಗಾಳಿ ಓಟಿನ ಚೀಟಿ ಕೊಡುತ್ತಿರುವುದನ್ನು ಇಲ್ಲಿ ನೆನೆಯಬಹುದು).
ಹೌದು ಹೊರನೋಟಕ್ಕೆ ಅಮೇರಿಕಾದಲ್ಲಿ ಇಂಗ್ಲಿಶ್ ಒಂದೇ ಇರುವಂತೆ ಕಾಣುತ್ತಿದೆ. ಆದರೆ ಅಲ್ಲಿಯೂ ಹಲವು ನುಡಿಗಳ ಹರವು ಇದೆ. ನಾಡಿನ ಏಳಿಗೆಗಾಗಿ ನುಡಿಯ ಹಲತನವನ್ನು ಉಳಿಸಿ-ಬೆಳೆಸುವ ಗುರಿಯತ್ತ ಸಾಕಶ್ಟು ಕೆಲಸಗಳು ಆಗುತ್ತಿರುವುದಂತೂ ದಿಟ. ಇದಕ್ಕೆ ಅಲ್ಲಿನ ಒಕ್ಕೂಟದಾಳ್ವಿಕೆಯ ನೆರವು ಇರುವುದು ಮೆಚ್ಚುವಂತದ್ದು. ಒಕ್ಕೂಟದ ಆಳ್ವಿಕೆಯೇ ಹೇಳುವಂತೆ “ಒಂದು ಗಟ್ಟಿಯಾದ ನಾಡನ್ನು ಕಟ್ಟಲು ಅಲ್ಲಿನ ಮಂದಿಯ ನಡೆ-ನುಡಿಯ ಹಲತನವನ್ನು ಬಲಿಕೊಡಬೇಕಾಗಿಲ್ಲ.“(building a strong nation does not require the sacrifice of cultural difference;) ಈ ಮಾತು ನೂರಕ್ಕೆ ನೂರರಶ್ಟು ದಿಟ.
(ಮಾಹಿತಿ ಸೆಲೆ: adfl.orgm, wikipedia-USA-education -language, wiki-usa-languages, wiki – USA-HigherEducation)
ಬರಹ ತುಂಬಾ ಚೆನ್ನಾಗಿದೆ . ಇಲ್ಲಿನ ಮಾಹಿತಿಗಳು ನಮ್ಮ ದೇಶವನ್ನು ಮತ್ತು ರಾಜ್ಯವನ್ನು ಆಳುತ್ತಿರುವ ರಾಜಕೀಯ ಮಂದಿಗೆ ಮನದಟ್ಟಾಗಿ , ಅವರು ದೇಶೀಯ ನುಡಿಗಳ ಉಳಿವು ಮತ್ತು ಬೆಳವಣಿಗೆಗೆ ಸರಿಯಾದ ಯೋಜನೆಗಳನ್ನು ಕೈಗೊಳ್ಳುವಂತಾಗಬೇಕು .
ಸಿ ಪಿ ನಾಗರಾಜ ಬೆಂಗಳೂರು