ಪುಟಿಯಲಿದೆ ಪಿಗೊ ಅಸ್ಪಾಯರ್

ಜಯತೀರ‍್ತ ನಾಡಗವ್ಡ.

Ford_figo_aspire_1

ಇಂಡಿಯಾದೆಲ್ಲೆಡೆ ಕಳೆದ 2-3 ವರುಶಗಳಲ್ಲಿ ಕಿರು ಕಾರುಗಳದ್ದೇ ಸದ್ದು. ಕಿರು ಸೇಡಾನ್ ಆಗಿರಲಿ ಇಲ್ಲವೇ ಕಿರು ಹಲಬಳಕೆ ಬಂಡಿಗಳೇ ಇರಲಿ ಇವುಗಳು ಮಂದಿಗೆ ಮೆಚ್ಚುಗೆಯಾಗಿವೆ. ಅದರಲ್ಲೂ ನಾಲ್ಕು ಮೀಟರ್ ಮತ್ತು ಅದಕ್ಕಿಂತ ಕಡಿಮೆ ಉದ್ದದ ಕಿರು ಸೇಡಾನ್ ಗಳಿಗೆ ಎಲ್ಲಿಲ್ಲದ ಬೇಡಿಕೆ. ಕಳೆದ ಕೆಲ ವರುಶಗಳಲ್ಲಿ ನಾಲ್ಕು ಮೀಟರ್ ಹಾಗೂ ಅದಕ್ಕಿಂತ ಕಡಿಮೆ ಉದ್ದದ ಬಂಡಿಗಳ ಮೇಲೆ ಸರಕಾರ ತೆರಿಗೆ ಕಡಿತ ಮಾಡಿರುವುದು ಇದರ ಹಿಂದಿರುವ ಕಾರಣ.

ಹೋಂಡಾ ಅಮೇಜ್, ಟಾಟಾ ಜೆಸ್ಟ್, ಮಾರುತಿ ಸುಜುಕಿ ಡಿಜಾಯರ್, ಹ್ಯುಂಡಾಯ್ ಎಕ್ಸೆಂಟ್ ಮುಂತಾದ ಕಿರು ಸೇಡಾನ್‍ಗಳ ಪಟ್ಟಿಗೆ ಸೇರ‍್ಪಡೆಗೊಳ್ಳಲು ಇದೀಗ ಪೋರ‍್ಡ್ ನವರ ಹೊಚ್ಚ ಹೊಸ ಪಿಗೊ ಅಸ್ಪಾಯರ್ (Figo Aspire) ಕಾರು ಬರುತ್ತಿದೆ. ಈ ಗುಂಪಿನ ಕಾರುಗಳಲ್ಲಿ ಇನ್ನೂ ಸೆಣಸಾಟ ಚುರುಕುಗೊಳ್ಳುವುದು ದಿಟವಾಗಿದೆ.

ಪಿಗೊ ಹಿಂಗದ ಕಾರು (hatchback) ಹಾಗೂ ಎಕೊ-ಸ್ಪೋರ‍್ಟ್ ಹಲಬಳಕೆಯ (multi utility) ಬಂಡಿಗಳನ್ನು ಮಾರುಕಟ್ಟೆಗಿಳಿಸಿ ಪೋರ‍್ಡ್ ಕಾರು ಕೂಟ ಕೊಳ್ಳುಗರ ಅಚ್ಚುಮೆಚ್ಚು ಎನ್ನಿಸಿತ್ತು. ಈ ಮಾದರಿಗಳ ಬೇಡಿಕೆ ಹೇಗಿತ್ತೆಂದರೆ ಕೊಳ್ಳಲು ಮುಂಗಡ ಹಣ ನೀಡಿ 3 ರಿಂದ 6 ತಿಂಗಳವರೆಗೆ ಕಾಯಬೇಕಾದ ಪರಿಸ್ತಿತಿ. ಇದೇ ಕಾರಣಕ್ಕೆ ಪೋರ‍್ಡ್ ಕೆಲ ಕೊಳ್ಳುಗರನ್ನು ಕಳೆದುಕೊಂಡು ಹಿನ್ನಡೆ ಕೂಡ ಅನುಬವಿಸಿದ್ದುಂಟು. ಇದೀಗ ಅದೇ ಪಿಗೊ ಮತ್ತು ಎಕೊ-ಸ್ಪೋರ‍್ಟ್ ಗೆಲುವನ್ನು ಕಾಯ್ದುಕೊಳ್ಳುವ ಹವಣಿಕೆಯಲ್ಲಿ ಪಿಗೊ ಅಸ್ಪಾಯರ್ ಬಿಡುಗಡೆಗೊಳಿಸಲು ಮುಂದಾಗಿದೆ.

ಬೇಡಿಕೆ ಮೇಲೆರುತ್ತ ಕೊಳ್ಳುಗರ ಕಾಯುವಿಕೆ ಹೆಚ್ಚಾಗಿದ್ದರಿಂದ 3 ವರುಶಗಳ ಹಿಂದೆ ಪೋರ‍್ಡ್ ನವರು ಗುಜರಾತಿನ ಸಾನಂದನಲ್ಲಿ ಇಂಡಿಯಾದ ಎರಡನೇ ಕಾರ‍್ಕಾನೆ ಕಟ್ಟುವ ತೀರ‍್ಮಾನ ಮಾಡಿದ್ದರು. ಇದೇ ಕಾರ‍್ಕಾನೆಯಿಂದ ಹೊರಬರುತ್ತಿರುವ ಮೊದಲ ಕಾರು ಪಿಗೊ ಅಸ್ಪಾಯರ್ ಎನ್ನುವುದು ವಿಶೇಶ.

2014ರ ಇಂಡಿಯಾದ ಬಂಡಿ ತೋರ‍್ಪಿನಲ್ಲಿ ಪೋರ‍್ಡ್ ಮಳಿಗೆಯಲ್ಲಿ ಈ ಕಾರು ಕಾಣಿಸಿಕೊಂಡು ಸುದ್ದಿ ಮಾಡಿತ್ತು. ಸುಮಾರು ಒಂದುವರೆ ವರುಶದ ನಂತರ ಅಂದರೆ ಈ ತಿಂಗಳ ಕೊನೆಯಲ್ಲಿ ಪಿಗೊ ಅಸ್ಪಾಯರ್ ಬೀದಿಗಿಳಿಯುವ ಹೊತ್ತು ಕೂಡಿಬಂದಂತಿದೆ. ಇಂಡಿಯಾದ 25 ದೊಡ್ಡ ಊರುಗಳಲ್ಲಿ ಈ ಬಂಡಿಯನ್ನು ಹಲವಾರು ಮಂದಿಗೆ ತೋರಿಸಿ ಅವರಿಗಾದ ಮೊದಲ ಅನುಬವ ಪಡೆದು ಮಾರಾಟಕ್ಕೆ ಪೂರ‍್ತಿ ಅಣಿಯಾಗಿರುವ ಹೊಸ ಪಿಗೊ ಅಸ್ಪಾಯರ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲವಾದರೂ, ಪೋರ‍್ಡ್ ಕೂಟದ ಮಿಂದಾಣದಲ್ಲಿ ಮತ್ತು ಮಿಂಬಲೆಯ ಇತರೆಡೆ ದೊರೆತ ಮಾಹಿತಿಗಳ ಆದಾರದ ಮೇಲೆ ಈ ಕೆಳಗಿನ ಮಾಹಿತಿಗಳನ್ನು ನೀಡಿರುವೆ.

ಬಿಣಿಗೆ (Engine):

ಅಸ್ಪಾಯರ್ ಬಂಡಿ 1.2 ಲೀಟರ್ ಅಳತೆಯ ಪೆಟ್ರ‍ೋಲ್ ಹಾಗೂ ಒಂದುವರೆ ಲೀಟರ್ ಡೀಸೆಲ್ ಬಿಣಿಗೆಗಳನ್ನು ಹೊಂದಿರಲಿದೆ. ಆದರೆ ಈ ಮುಂಚೆ ಪಿಗೊ ಕಾರು ಹೊಂದಿದ್ದ 1.2 ಲೀ ಡ್ಯುರಾಟೆಕ್ (Duratec) ಬಿಣಿಗೆ ಇದರಲ್ಲಿ ಇಲ್ಲ. ಅದರ ಬದಲಾಗಿ ಹೊಚ್ಚ ಹೊಸ ಟಿಆಯ್-ವಿಸಿಟಿ (Ti-VCT) ಎಂಬ ಹೊಸ ಬಿಣಿಗೆಗೊಂದನ್ನು ಇದರಲ್ಲಿ ಅಳವಡಿಸಿದೆ. ಟಿಆಯ್-ವಿಸಿಟಿಯನ್ನು ಹೊಸ ಚಳಕ ಬಳಸಿ ಬೆಳೆಸಲಾಗಿದೆ ಎಂದು ಪೋರ‍್ಡ್ ಹೇಳಿಕೊಂಡಿದೆ. ಇದರಿಂದ ಹೆಚ್ಚಿನ ಉರುವಲು ಅಳವುತನ (fuel efficiency), ಹೆಚ್ಚು ಕಸುವು ಮತ್ತು ಈ ಬಿಣಿಗೆ ಕಡಿಮೆ ಕೆಡುಗಾಳಿಯನ್ನು ಹೊರ ಉಗುಳಲಿದೆ ಎಂದು ಪೋರ‍್ಡ್ ಕೂಟ ತಿಳಿಸಿದೆ. ಅಸ್ಪಾಯರ್ ಪೆಟ್ರ‍ೋಲ್ ಬಿಣಿಗೆ 85 ರಿಂದ 90 ಕುದುರೆಬಲ (horse power) ಕಸುವುಂಟುಮಾಡಲಿದೆ ಮತ್ತು ಇದು ಪ್ರತಿ ಲೀಟರ್ ಗೆ 16-18 ಕಿ.ಮೀ ಓಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

Ford_figo_aspire_engine_2

ಮೊದಲಿನ ಪಿಗೊ ಡೀಸೆಲ್ ಮಾದರಿ ಕಾರಿನಲ್ಲಿದ್ದ 1.4ಲೀಟರ್ ಡ್ಯುರಾಟಾರ‍್ಕ್(Duratorq) ಬಿಣಿಗೆ ಬದಲು 1.5 ಲೀಟರ್ ನ ಟಿಡಿಸಿಆಯ್(TDCI) ಬಿಣಿಗೆಯನ್ನು ಇದಕ್ಕೆ ಅಳವಡಿಸಿದೆ. 1.5ಲೀ ಟಿಡಿಸಿಆಯ್ ಈಗಾಗಲೇ ಪೀಯಸ್ಟಾ (FIESTA), ಎಕೊ-ಸ್ಪೋರ‍್ಟ್(Eco-Sport) ಮಾದರಿಗಳಲ್ಲಿ ಓಡುತ್ತಿದೆ. ಇದೇ ಬಿಣಿಗೆಯನ್ನು ಓಡಿಸುಗಾರಿಕೆಗೆ ತಕ್ಕಂತೆ ಕೆಲವು ಸಣ್ಣ ಪುಟ್ಟ ಮಾರ‍್ಪಾಡುಗಳನ್ನು ಮಾಡಿ ಚೊಕ್ಕಟವಾಗಿಸಿದೆ. ಡಿಸೇಲ್ ಅಸ್ಪಾಯರ್ 95-105 ಕುದುರೆಬಲ ನೀಡಿ, ಪ್ರತಿ ಲೀಟರ್ ಗೆ 25-27 ಕಿ.ಮೀ.ವರೆಗೂ ಓಡಲಿದೆ ಎಂಬ ಸುದ್ದಿಗಳು ಬಂದಿವೆ.

ಸಾಗಣಿ (transmission):

ಪಿಗೊ ಅಸ್ಪಾಯರ್ ನ ತನ್ನಿಡಿತ ಸಾಗಣಿಯು (automatic transmission) ಉರುವಲು ಅಳವುತನ ಕಡಿಮೆಗೊಳಿಸುವುದಶ್ಟೇ ಅಲ್ಲದೇ ನಿಮ್ಮ ಓಡಿಸುತನವನ್ನು (Driveability) ಹಿತಗೊಳಿಸುತ್ತದೆ. ಇದರಲ್ಲಿ ಇಬ್ಬಗೆ ಬೇರ‍್ಪಡಕವಿದ್ದು (dual clutch) ನಿಮ್ಮ ಕಾರಿನ ಹಲ್ಗಾಲಿ (gear) ಬದಲಾಯಿಸುವುದನ್ನು ಸುಲಬಗೊಳಿಸುತ್ತದೆ. ಓಡಿಸುಗನ ಹಿಡಿತದ ಸಾಗಣಿ (manual transmission) ಇಶ್ಟಪಡುವವರಿಗೆ ಇದರಲ್ಲಿ 5-ವೇಗದ ಸಾಗಣಿ ಕೂಡ ಇದೆ.

ಕಾಪಿನ ವಿಶೇಶತೆ (safety features):

ಈ ಬಂಡಿಯಲ್ಲಿ ಕಾಪಿಗೆ ಹೆಚ್ಚಿನ ವಿಶೇಶತೆ ನೀಡಲಾಗಿದೆ. ಕಾರಿನಲ್ಲಿ ಕೂತಿರುವ ಎಲ್ಲ ಪಯಣಿಗರಿಗೆ ಅನುಕೂಲವಾಗಲೆಂದು 6 ಗಾಳಿಚೀಲಗಳು (Airbags) ಇದರಲ್ಲಿ ನೀಡಲಾಗಿದ್ದು, ಗುದ್ದುವಿಕೆ ಮುಂತಾದ ಅವಗಡಗಳು ಉಂಟಾದಾಗ ಇವುಗಳು ಪಯಣಿಗರನ್ನು ಕಾಪಾಡುತ್ತವೆ. ಇಂದಿನ ಬಹುತೇಕ ಕಿರು ಸೇಡಾನ್ ಕಾರುಗಳಲ್ಲಿ ಎರಡು ಗಾಳಿಚೀಲ ಕೊಟ್ಟರೆ ಅದೇ ಹೆಚ್ಚು, 6 ಗಾಳಿಚೀಲಗಳು ಬೇಕೆಂದರೆ ನೀವು ಹೆಚ್ಚಿನ ಹಣ ತೆರಬೇಕಾಗುತ್ತದೆ. ಪಿಗೋ ಅಸ್ಪಾಯರ್ ಈ ವಿಶಯದಲ್ಲಿ ವಿಶೇಶವಾಗುತ್ತದೆ.

ಒಳ ಮಯ್ -ಹೊರ ಮಯ್:

ದಿಟ್ಟ, ಗಟ್ಟಿ ಮುಟ್ಟಾದ ಹೊರಮಯ್ ನೋಟ ಇತರೆ ದುಬಾರಿ ಕಾರುಗಳಂತೆ ತೋರುತ್ತದೆ. ಈ ಸಾಲಿನ ಇತರೆ ಕಿರು ಸೇಡಾನ್ ಬಂಡಿಗಳ ಹೋಲಿಕೆಯಲ್ಲಿ ಅಸ್ಪಾಯರ್ ಹಿಂದೆ ಬಿದ್ದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಹೊರಮಯ್ ಮೂಲಕ ಕಾರು ಹಲವರಿಗೆ ಮೆಚ್ಚುವಂತಿದೆ.

ಬಲು ಮುಕ್ಯವಾದ ಒಳಮಯ್ ಕೂಡ ಅಶ್ಟೇ ಮನಸೆಳೆಯುವಂತಿದೆ. ನಾಲ್ವರು ಕೂಡಲು ಸಾಕಶ್ಟು ಜಾಗವಿದ್ದು ಕಾಲು ಚಾಚಲು ಮುಂಬದಿ-ಹಿಂಬದಿಯ ಎಲ್ಲ ಪಯಣಿಗರಿಗೆ ಯಾವುದೇ ತೊಂದರೆ ಎನ್ನಿಸುವುದಿಲ್ಲ. ಕೂರುಮಣೆ ತೊಗಲು (leather) ಹಾಗೂ ಏರಿಳಿಸುವ ತಲೆಯೂರುಕಗಳು(height adjustable headrest) ನಿಮ್ಮ ದೂರದ ಪಯಣಗಳನ್ನು ದಣಿವಿರದಂತೆ ಮಾಡುತ್ತವೆ.

Ford_figo_aspire_engine_3_Interiors Overview
ನೀರಿನ ಬಾಟಲಿ, ಪ್ಲ್ಯಾಸ್ಟಿಕ್/ಹಾಳೆಯ ಕಾಪಿ ಲೋಟ ಇಲ್ಲವೇ ಕೊಡೆಗಳನ್ನು ನಿಮ್ಮ ಪಕ್ಕಕ್ಕಿರಿಸಲು ಮತ್ತು ಚಿಲ್ಲರೆ ನಾಣ್ಯ ಕೂಡಿಡಲು ಬಾಗಿಲ ಬದಿಗೆ ಬೇರೆ ಬೇರೆ ಗೂಡುಗಳನ್ನು(cup holder, coin holder) ನೀಡಲಾಗಿದೆ. ಜಾರದಂತ ಬಟ್ಟೆ (anti-skid cloth) ಬಳಸಿ ಅಲೆಯುಲಿ (mobile) ಸುಲಬವಾಗಿ ಇಡಲು ಕೂಡ ಇನ್ನೊಂದು ಗೂಡು ಇದರಲ್ಲಿದೆ. ಅಲೆಯುಲಿಯನ್ನು ತಲುಪುದಾರಿಗಳಾಗಿ (navigation) ಬಳಸುವ ಓಡಿಸುಗರಿಗೆ ನೆರವಾಗಲೆಂದು ತೋರುಮಣೆಯ (dashboard) ಮುಂಬಾಗದಲ್ಲಿ ವಿಶೇಶವಾಗಿ ಪುಟ್ಟ ಗೂಡೊಂದನ್ನು ಒದಗಿಸಿದ್ದು ಕಾರಿನ ವಿಶೇಶಗಳಲ್ಲೊಂದು. ಕಾರಿನ ಹಿಂಬದಿಯ ಸರಕು ಚಾಚಿನಲ್ಲೂ (bootspace) ನಾಲ್ಕಾರು ದೊಡ್ಡ ಚೀಲಗಳನ್ನು ಸಲೀಸಾಗಿ ಇಡುವ ಏರ‍್ಪಾಟು ಒದಗಿಸಿದ್ದಾರೆ.

ಬಣ್ಣಗಳು:

Ford_figo_aspire_2

ಇಲ್ಲಿಯವರೆಗೆ ವಿವಿದ ತೋರ‍್ಪುಗಳಲ್ಲಿ ಮತ್ತು ಪೋರ‍್ಡ್ ಮಿಂದಾಣದಲ್ಲಿ ಕಾಣಿಸಿಕೊಂಡಿರುವ ಪಿಗೊ ಅಸ್ಪಾಯರ್ ಕಡುಗೆಂಪು ಬಣ್ಣದಲ್ಲಿ. ಹೀಗಾಗಿ ಈ ಬಣ್ಣದ ಅಸ್ಪಾಯರ್ ಸಿಗುವುದು ಕಚಿತವಾಗಿದೆ. ಇತರೆ ಯಾವ ಬಣ್ಣಗಳಲ್ಲಿ ಕೊಳ್ಳುಗರಿಗೆ ಸಿಗಲಿದೆ ಎನ್ನುವ ಮಾಹಿತಿ ಇನ್ನೂ ಬಯಲಾಗಿಲ್ಲ. ಆದರೂ ಬಿಳಿ, ಕಪ್ಪು, ನೀಲಿ, ಬೆಳ್ಳಿ ಹಾಗೂ ಕಂದು ಬಣ್ಣಗಳಲ್ಲಿ ಅಸ್ಪಾಯರ್ ಸಿಗುವ ಸಾದ್ಯತೆ ಹೆಚ್ಚೆಂದು ಹೇಳಬಹುದು.

ಪೋರ‍್ಡ್ ಕೂಟದವರು ಕಾರುಗಳ ಬೆಲೆ ಇನ್ನೂ ಹಾರಹಾಕದಿದ್ದರೂ, ತನ್ನ ಪಯ್ಪೋಟಿ ಕಾರುಗಳಿಗಿಂತ ಚೂರು ಹೆಚ್ಚು ಕಮ್ಮಿ ಇರಬಹುದು ಎಂದು ಕಯ್ಗಾರಿಕೆಯ ಪಂಡಿತರ ಅನಿಸಿಕೆ. ಹಲವರು ಹೇಳಿರುವಂತೆ ಪೆಟ್ರೋಲ್ ಮಾದರಿ ರೂ. 5 ಲಕ್ಶ ಮತ್ತು ಡೀಸೆಲ್ ಮಾದರಿ ರೂ.6.25 ಲಕ್ಶಗಳಿಂದ ಶುರುವಾಗಲಿದೆ. ಪೆಟ್ರೋಲ್ ಮಾದರಿಯ ಕಾರನ್ನು ರಸ್ತೆಗಿಳಿಸಿದಾಗ ತಗಲುವ ಬೆಲೆ (On Road Price) 6.5 ರಿಂದ 8 ಲಕ್ಶ ಆಗಬಹುದು. ಹೊಸದಾಗಿ ಕಾರುಕೊಳ್ಳಬೇಕು ಎಂದು ಮನಸು ಮಾಡಿರುವವರು ಪಿಗೊ ಅಸ್ಪಾಯರ್ ನತ್ತ ಕೂಡ ಕಣ್ಣುಹಾಯಿಸಬಹುದು.

(ಮಾಹಿತಿ ಮತ್ತು ತಿಟ್ಟಸೆಲೆಗಳು: http://www.india.ford.com/cars/figoaspire

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: