ಮಯ್ಲಿಯೋಟದ ಮುಂದಾಳು – ಡೀಸೆಲ್ ಸೆಲೆರಿಯೊ

ಜಯತೀರ‍್ತ ನಾಡಗವ್ಡ.

Model2

ವರುಶದ ಹಿಂದೆ ಬಿಡುಗಡೆಗೊಂಡು ಜನರ ಮೆಚ್ಚುಗೆ ಪಡೆದಿದ್ದ ಮಾರುತಿ ಸುಜುಕಿರವರ ಸೆಲೆರಿಯೊ ಇದೀಗ ಡೀಸೆಲ್ ಬಿಣಿಗೆಯೊಂದಿಗೆ (engine) ಹೊರಬಂದಿದೆ. ಮಾರುತಿ ಸುಜುಕಿ ಕೂಟದವರು ಕೆಲ ದಿನಗಳ ಹಿಂದೆ ಈ ಬಂಡಿಯನ್ನು ಬೀದಿಗಿಳಿಸಿದ್ದಾರೆ.  ಬಾರತದ ಮಾರುಕಟ್ಟೆಗೆ ಸುಜುಕಿ ಕೂಟದವರ ಎರಡನೇ ಡೀಸೆಲ್ ಬಿಣಿಗೆ ಇದಾಗಿದ್ದು ಮಾರುಕಟ್ಟೆಯಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಇಲ್ಲಿಯವರೆಗೆ ಸುಜುಕಿ ಕೂಟ ಬಾರತದಲ್ಲಿ 1.3 ಲೀಟರ್ ಅಳತೆಯ ಒಂದೇ ಡೀಸೆಲ್ ಬಿಣಿಗೆಯನ್ನು ಅಣಿಗೊಳಿಸಿತ್ತು, ಇದೇ ಬಿಣಿಗೆ ಬಹುತೇಕ ಎಲ್ಲ ಸುಜುಕಿ ಡೀಸೆಲ್ ಬಂಡಿಗಳಲ್ಲಿ ಇರುತ್ತಿತ್ತು. ಆದರೆ ಈ ಬಾರಿ ಹೊಸ ಬಿಣಿಗೆಯೊಂದನ್ನು ಬಾರತದಲ್ಲಿ ಬೆಳವಣಿಗೆ ಮಾಡುವ ಆಸೆ ಹೊಂದಿದ್ದ ಸುಜುಕಿಯವರು ಅದನ್ನು ಕನಸಾಗಿಸಿದ್ದಾರೆ.

Engineಕಾರು ಬಂಡಿಗೆಂದೇ ಅಣಿಗೊಳಿಸಿದ ಬಾರತದ ಬಲು ಚಿಕ್ಕ ಡೀಸೆಲ್ ಬಿಣಿಗೆ ಇದು. ಕೇವಲ 2 ಉರುಳೆ (cylinder) ಹೊಂದಿರುವ ಈ ಬಿಣಿಗೆ 0.8 ಲೀಟರ್ ಅಳತೆಯದ್ದಾಗಿದೆ. ಇಶ್ಟೇ ಅಲ್ಲದೇ ಈ ಬಿಣಿಗೆ ಬಾರತದಲ್ಲಿರುವ ಎಲ್ಲ ಕಾರುಗಳಿಗಿಂತ ಹೆಚ್ಚಿನ ಮಯ್ಲಿಯೋಟ (mileage) ನೀಡಲಿದೆ. ಪ್ರತಿ ಲೀಟರ್ ಡೀಸೆಲ್ ಗೆ 27.62 ಕಿಮೀ ಸಾಗಲಿದೆ ಹೊಸ ಡೀಸೆಲ್ ಸೆಲೆರಿಯೊ. ಕೆಲ ವರುಶಗಳ ಹಿಂದೆ ಹೊಂಡಾ ಕೂಟದವರಿಂದ ಬಿಡುಗಡೆಗೊಂಡಿದ್ದ ಅಮೇಜ್ ಬಂಡಿ ಪ್ರತಿ ಲೀಟರ್ ಡೀಸೆಲ್ ಗೆ 25 ಕಿಮೀ ಮಯ್ಲಿಯೋಟ ನೀಡುವ ಮೂಲಕ ಮೊದಲ ಸ್ತಾನದಲ್ಲಿತ್ತು. ಇದನ್ನು ಹಿಂದಿಕ್ಕುವ ಮೂಲಕ ಸೆಲೆರಿಯೊ ಡೀಸೆಲ್ ಮಂದಿಯ ಮನಸೆಳೆಯುತ್ತಿದೆ.

ಅಗ್ಗದ ಬೆಲೆಯ ಕೊಳ್ಳುಗರ ಮನಸ್ತಿತಿಯನ್ನು ಅರಿತ ಮಾರುತಿ ಸುಜುಕಿ ಕೂಟ ಈ ನಿಟ್ಟಿನಲ್ಲಿ ಬಂಡಿಯ 97% ರಶ್ಟು ಬಿಡಿಬಾಗಗಳನ್ನು ಬಾರತದಲ್ಲಿ ಅಣಿಗೊಳಿಸಿದೆ.  ಬಂಡಿಯನ್ನು 4 ರಿಂದ 5 ಲಕ್ಶ ಕಿಮೀಗಳವರೆಗೆ ಬಾರತದ ಬಗೆ ಬಗೆಯ ಬೀದಿಗಳಲ್ಲಿ ಹೆದ್ದಾರಿಗಳಲ್ಲಿ ಓಡಾಡಿಸಿ ಒರೆಗೆ ಹೆಚ್ಚಲಾಗಿದೆ ಎಂದು ಕೂಟದವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬಂಡಿಯ ಒಳಮಯ್ ಹಾಗೂ ಹೊರಮಯ್ ಗಳಲ್ಲಿ ಯಾವುದೇ ಹೆಚ್ಚಿನ ಬೇರ‍್ಮೆ ಮಾಡಲಾಕೊಳ್ಳದೇ ಪೆಟ್ರೊಲ್ ಸೆಲೆರಿಯೊ ಮಯ್ಮಾಟವನ್ನೇ ಉಳಿಸಿಕೊಳ್ಳಲಾಗಿದೆ. ಕಿರು ಕಾರುಗಳಲ್ಲಿ ಈಗಾಗಲೇ ಕಿಕ್ಕಿರಿದು ತುಂಬಿರುವ ಕಾರುಗಳ ಸಾಲಿಗೆ ಮತ್ತೊಂದು ಆಯ್ಕೆ ಬಂದಿದ್ದು ಕೊಳ್ಳುಗರಿಗೆ ಗೊಂದಲ ಇನ್ನೂ ಹೆಚ್ಚಲಿದೆ. ಹೆಚ್ಚಿನ ಮಯ್ಲಿಯೋಟದ ಕಾರು ಎಂಬ ಹಣೆಪಟ್ಟಿಯನ್ನೇ ಇದರ ಮಾರಾಟ ತಂತ್ರವನ್ನಾಗಿಸಲಾಗಿದೆ. ಆದರೂ ಕೆಲವರು ಬಿಣಿಗೆಯ ಕಸುವು ಮತ್ತು ಸೆಳೆಬಲ ಅಶ್ಟಕಶ್ಟೇ ಎಂದು ಮೂಗು ಮುರಿದು ಕೊಳ್ಳುತ್ತಿದ್ದಾರೆ.  ಹೊಸ ಡೀಸೆಲ್ ಸೆಲೆರಿಯೊ ಮಾರುತಿ ಸುಜುಕಿಯವರಿಗೆ ಲಾಬ ತಂದು ಕೊಡಲಿದೆಯೇ ಇದಕ್ಕೆ ಕಾರು ತಯಾರಕರು ಕಾದು ನೋಡಬೇಕು.

ಬಂಡಿಯ ವಿಶೇಶಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ.

imp(ಮಾಹಿತಿ ಮತ್ತು ತಿಟ್ಟ ಸೆಲೆ: www.marutisuzuki.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.