ಡೆಡ್ ಸೀ ಎಂಬ ಉಪ್ಪಿನಕೆರೆ !

ಕಿರಣ್ ಮಲೆನಾಡು.

’ಡೆಡ್ ಸೀ’ (Dead Sea) ಎಂಬ ಹೆಸರನ್ನು ನೀವು ಕೇಳಿರಬಹುದು. ಇದೇನಿದು ವಿಚಿತ್ರ ಹೆಸರು ಅಂತಾನೂ ಬೆರಗುಗೊಂಡಿರಬಹುದು. ಬನ್ನಿ ಇದರ ಅಚ್ಚರಿಯ ವಿಶಯಗಳತ್ತ ಒಂದು ನೋಟ ಬೀರೋಣ.
ಇಸ್ರೇಲ್ ಮತ್ತು ಜೋರ‍್ಡಾನ್ ನಾಡುಗಳ ನಡುವೆ ಹರವಿಕೊಂಡ ದೊಡ್ಡದಾದ ಉಪ್ಪುನೀರಿನ ಕೆರೆಯನ್ನು ಮಡಿದ ಕಡಲು (Dead Sea) ಎಂದು ಕರೆಯುವರು. ಹೀಬ್ರೂ ನುಡಿಯಲ್ಲಿ ಉಪ್ಪಿನ ಕಡಲು ಮತ್ತು ಅರೇಬಿಕ್ ನುಡಿಯಲ್ಲಿ ಮಡಿದ ಕಡಲು ಎಂಬ ಹುರುಳಿನಲ್ಲಿ ಕರೆಯುತ್ತಾರೆ. ನೆಲದರಿಮೆಯಂತೆ ನೋಡಿದಾಗ ಇದು ಕಡಲಲ್ಲ, ಇದೊಂದು ದೊಡ್ಡದಾದ ಉಪ್ಪಿನಕೆರೆ (Salt lake) !

PHOTO-1
ಡೆಡ್ ಸೀ ! ಹಾಗೇಕೆ ಕರೆಯುವರು ?

ಈ ಕೆರೆಯ ನೀರಿನಲ್ಲಿ 34.2% ರಶ್ಟು ಉಪ್ಪಿನ ಅಡಕಗಳಿವೆ. ನಮಗೆ ಗೊತ್ತಿರುವಂತೆ ಕಡಲ ನೀರು ಹೆಚ್ಚು ಉಪ್ಪಾಗಿರುತ್ತದೆ, ಆದರೆ ಈ ಕೆರೆ ಕಡಲ ನೀರಿಗಿಂತ 8.6 ಪಟ್ಟು ಹೆಚ್ಚು ಉಪ್ಪಾಗಿದೆ. ಈ ಕೆರೆ ಇಶ್ಟು ಉಪ್ಪಾಗಿರುವುದರಿಂದ ಅದರ ನೀರಿನಲ್ಲಿ ಯಾವುದೇ ಜೀವಿಗಳು ಬದುಕುವುದು ಕಶ್ಟ ಆದ್ದರಿಂದ ಈ ಕೆರೆಗೆ ಮಡಿದ ಕಡಲು (Dead Sea) ಎಂಬ ಹೆಸರು ಬಂದಿದೆ!. ನಮ್ಮ ಬರಹದಲ್ಲಿ ಇದನ್ನು ‘ಮಡಿದ ಕಡಲು’ ಬದಲಾಗಿ ನೆಲದರಿಮೆಯಂತೆ ಕಡು ಉಪ್ಪಿನಕೆರೆ ಎಂದು ಕರೆಯೋಣ.

ನೆಲದರಿಮೆ, ಹವೆಯಳವು  ಮತ್ತು ಕಡು ಉಪ್ಪಿನಕೆರೆ:

Dead_sea_2

ಕಡಲಮಟ್ಟದಿಂದ 422 ಮೀಟರ್ ಕೆಳಗೆ ಇರುವ ಈ ಕಡು ಉಪ್ಪಿನಕೆರೆ ಮತ್ತು ಅದರ ದಡಗಳು ನೆಲದ ಮೇಲ್ಮಯ್ಯಲ್ಲೇ ಹೆಚ್ಚು ತಗ್ಗಿನ ಜಾಗಗಳಾಗಿವೆ. ಈ ಕಟ್ಟುಪ್ಪಿನಕೆರೆಯು ನೆಲದ ಮೇಲಿನ ಉಪ್ಪಿನಕೆರೆಗಳ (Hypersaline lake) ಪೈಕಿ ಹೆಚ್ಚು ಆಳದ್ದು ಹಾಗು ಹೆಚ್ಚು ಉಪ್ಪುನೀರಿನಿಂದ ಕೂಡಿದ್ದಾಗಿದೆ. ಕೆರೆಗೆ ಯಾವುದೇ ಹೊರಹರಿವು ಹಾಗು ಹೆಚ್ಚಿನ ಒಳಹರಿವು ಇಲ್ಲವಾದ್ದರಿಂದ ಈ ಕಡು ಉಪ್ಪಿನಕೆರೆಯು ಮುಚ್ಚಿದ ಬೋಗುಣಿಯ (Endorheic basin) ಕೆರೆಯಾಗಿದೆ.

ಸುಮಾರು 23.8 ಮಿಲಿಯನ್ ವರುಶಗಳಿಂದ 5.3 ಮಿಲಿಯನ್ ವರುಶಗಳವರೆಗೆ ಆಪ್ರಿಕಾದ ಗಟ್ಟಿತೆರಳೆಯ ತಗಡಿನ ತುದಿಯು (African tectonic plate) ಅರೇಬಿಯನ್ ಗಟ್ಟಿತೆರಳೆಯ ತಗಡು (Arabian tectonic plate) ಸೇರುವಲ್ಲಿ ಸವೆಯುತ್ತಾ(Subduction) ಬಂತು ಹೀಗಾಗಿ ಅದರ ಅಂಚುಗಳು ತೆಳುವಾಗುತ್ತಾ ಬಂದವು ಮತ್ತು ತೆಳುಬಾಗವು ಅಲ್ಪಸ್ವಲ್ಪ ತಿರುಚಿಕೊಂಡವು ಮುಂದೆ ಅವುಗಳೇ ಬಿರುಕಿನ ಕಂದಕಗಳಾದವು, ಈ ಮಾರ‍್ಪಾಟಿನಿಂದ ಹುಟ್ಟಿದ್ದೇ ಜೋರ‍್ಡನ್ ಬಿರುಕಿನ ಕಣಿವೆ (Jordan Rift Valley) ಹಾಗು ಅದರ ಆಳದ ಬಾಗವೇ (Deepest point) ಈ ಕಡು ಉಪ್ಪಿನ ಕೆರೆ. ಹಿಂದೆ ಹೇಳಿದಂತೆ ಇದರ ಕೆಳಗಿನ ಗಟ್ಟಿತೆರಳೆಯ ತಗಡು (Tectonic plate) ಸರಿಯಾಗಿ ಮಾರ‍್ಪಟ್ಟಿಲ್ಲವಾದ್ದರಿಂದ ಜೊತೆಗೆ ಇದರೊಳಗಿನ ಕಲ್ಲು-ಮಣ್ಣಿನ ಏರ‍್ಪಾಟು ಸರಿಯಾಗಿ ಹಂಚಿಹೊಗಿಲ್ಲ, ಇತರೆ ತಗಡುಗಳಿಗಿಂದ ಇದು ಬೇರೆಯದ್ದಾಗಿದ್ದರಿಂದ ಕೆರೆ ಬೋಗುಣಿಯ ಜಾಗವನ್ನು ಮಡಿದ ಕಡಲಿನ ಮಾರ‍್ಪಾಡಿನ ತಪ್ಪೇರ‍್ಪಾಟು ( Dead Sea Transform (DST) fault system) ಎಂದು  ನೆಲದರಿಗರು ಕರೆಯುತ್ತಾರೆ.

ಕೆರೆಯ ಮಾರ‍್ಪಾಡು ಒಂದು ಸಂಗತಿಯಾದರೆ ಕೆರೆಗೆ ನೀರು ತುಂಬಿಕೊಂಡಿದ್ದು ಇನ್ನೊಂದು ಸಂಗತಿ, ಸುಮಾರು 3.7 ಮಿಲಿಯನ್ ವರುಶಗಳ ಹಿಂದೆ ಜೋರ‍್ಡಾನ್ ಬಿರುಕಿನ ಕಣಿವೆಯಲ್ಲಿನ ಜೋರ‍್ಡಾನ್ ನದಿ, ಕಡು ಉಪ್ಪಿನ ಕೆರೆ, ಮತ್ತು ಬಡಗಣ ವಾಡಿ-ಅರಬಾ(Wadi Arabah) ಒಣನೆಲದ ಬಾಗಗಳು ಮೆಡಿಟರೇನಿಯನ್ ಕಡಲಿನಿಂದ ಉಂಟಾದ ನೆರೆಯಿಂದ ತುಂಬಿದ್ದವು. ವರುಶಗಳು ಉರುಳಿದಂತೆ ನೀರೆಲ್ಲಾ ಆವಿಯಾಗಿ ತಗ್ಗಿನಲ್ಲಿರುವ ಹಾಗು ಹೆಚ್ಚಿನ ಒಳ ಮತ್ತು ಹೊರಹರಿವಿರದ ಈ ಕಡು ಉಪ್ಪುಕೆರೆಯ ಬಾಗದಲ್ಲಿ ನೀರು ಹಾಗೆ ಉಳಿಯಿತು. 2 ಮಿಲಿಯನ್ ವರುಶಗಳ ಹಿಂದೆ ಇನ್ನೆಂದಿಗೂ ಮೆಡಿಟರೇನಿಯನ್ ನೆರೆ ಬರದಂತೆ ಜೋರ‍್ಡಾನ್ ಬಿರುಕಿನ ಕಣಿವೆಯಲ್ಲಿ ಹಲವು ಮಾರ‍್ಪಾಟುಗಳಾದವು. ಈ ಕೆರೆಗೆ ಯಾವುದೇ ಹೊರಹರಿವು ಇಲ್ಲದ್ದರಿಂದ ನೀರು ಆವಿಯಾಗುತ್ತಾ ಬಾರವಾದ ಅಡಕಗಳು(Heaviest elements) ನೀರಿನಲ್ಲಿ ಉಳಿಯುತ್ತಾ ಹಾಗು ಜೋರ‍್ಡಾನ್ ನದಿ ಮತ್ತು ಇತರ ಚಿಕ್ಕ ಚಿಕ್ಕ ನೀರಿನ ಸೆಲೆಗಳಿಂದ ನೀರು ಮತ್ತೆ ತುಂಬಿಕೊಂಡಿತು. ಹಲವಾರು ವರುಶಗಳಿಂದ ನಡೆಯುತ್ತಿರುವ ಈ ಏರ‍್ಪಾಟಿನಿಂದ ಇದು ಕಡು ಉಪ್ಪಿನ ಕೆರೆಯಾಗಿ ಬದಲಾಗಿದೆ.

ಕೆರೆಯ ಸುತ್ತಮುತ್ತ ಉಪ್ಪಿನ ದಂಡೆಗಳನ್ನು ಕಾಣಬಹುದು. ಕೆರೆಯಲ್ಲಿ ಉಪ್ಪಿನ ಅಳತೆಯನ್ನು (Salinity) ಎರಡು ಬಾಗಗಳಾಗಿ  ಮಾಡಲಾಗಿದೆ, ಮೊದಲನೇ ಬಾಗವು 35 ಮೀ ಆಳವಿದ್ದು ಮತ್ತು  ಕಡಿಮೆ ಉಪ್ಪಿನಳತೆಯನ್ನು ಹೊಂದಿದೆ, ಎರಡನೇ ಬಾಗವು ಮೊದಲನೇ ಬಾಗದ ಕೆಳಬಾಗದ್ದಾಗಿದೆ ಹಾಗು ಹೆಚ್ಚು ಉಪ್ಪಿನಳತೆಯನ್ನು ಹೊಂದಿದೆ. ಕೆರೆಯ ಸರಾಸರಿ ಉಪ್ಪಿನಳತೆ ಸಾವಿರ ಬಾಗದಲ್ಲಿ 342 (Parts Per Thousand). ನೀರಿನಲ್ಲಿ ಉಪ್ಪಿನಡಕಗಳು ಹೆಚ್ಚಾಗಿರುವುದರಿಂದ ನೀರಿನದಟ್ಟಣೆಯೂ(Density) ಹೆಚ್ಚಾಗಿದೆ, ಮನುಶ್ಯನ ಮಯ್ಯಿಯ ಅಡಕಗಳ ಸರಾಸರಿ ದಟ್ಟಣೆ ಇದಕ್ಕಿಂತ ಕಡಿಮೆ ಇರುವುದರಿಂದ ಮನುಶ್ಯರು ಈ ಕೆರೆಯಲ್ಲಿ ತೇಲುತ್ತಾರೆ! ಅಂದರೆ ಈಜು ಬಾರದವರೂ ಈ ಕಡಲಿನಲ್ಲಿ ಹಾಯಾಗಿ ತೇಲಬಹುದು.

PHOTO-4

ಕೆರೆಯ ಬೋಗುಣಿಯ ಹಲವೆಡೆ ನೀರ‍್ಮಣ್ಣಿನಿಂದ ಉಂಟಾದ ಕಂತುಮಣ್ಣನ್ನು (quicksand) ಕಾಣಬಹುದಾಗಿದೆ. ಈ ಕೆರೆಯ ಇನ್ನೊಂದು ಅಚ್ಚರಿಯೆಂದರೆ ಕೆರೆಯ ಆಳದಲ್ಲಿನ ಬಂಡೆಗಲ್ಲುಗಳು, ಉಪ್ಪುನೀರಿನ ಸೆಳೆತಕ್ಕೊಳಪಟ್ಟು ತುಣುಕುಗಳಾಗುತ್ತವೆ ಹಾಗೆ ತುಣುಕುಗಳು ಮೇಲೆ ಬಂದು ಅಲೆಯ ಬಿರುಸಿಗೆ ಹೊರಗೆಸೆಯಲ್ಪಡುತ್ತವೆ. ಕೆರೆಯ ಬಡಗಣ ಬಾಗದಲ್ಲಿ 100 mm ನಶ್ಟು ಮತ್ತು ತೆಂಕಣ ಬಾಗದಲ್ಲಿ 50mm ನಶ್ಟು ಸರಾಸರಿ ಮಳೆ ಹೊಯ್ಯುತ್ತದೆ. ಬೇಸಿಗೆಯ ಸರಾಸರಿ ಬಿಸುಹು (temperature) 32’C ರಿಂದ 39’C ಮತ್ತು ಚಳಿಗಾಲದ ಸರಾಸರಿ ಬಿಸುಹು 20’C  ರಿಂದ 23’C. ಈ ಕಡು ಉಪ್ಪಿನಕೆರೆಯು ಕಡಲ ಮಟ್ಟದಿಂದ ಕೆಳಗಿರುವುದರಿಂದ ಈ ಬಾಗದಲ್ಲಿ ಕಡು ನೇರಳೆ ಕಿರಣಗಳ ದಟ್ಟಣೆ ಕಡಿಮೆಯಿದೆ ಹಾಗು ಗಾಳಿ ಹೊದಿಕೆಯ ಒತ್ತಡ (Atmospheric pressure) ಹೆಚ್ಚಿರುವುದರಿಂದ ಉಸಿರ‍್ಗಾಳಿಯ (Oxygen) ದಟ್ಟಣೆ ನೆಲದ ಇತರ ಬಾಗಗಳಿಗಿಂತ  ಹೆಚ್ಚಿದೆ.

dead_seaಈ ಕಡು ಉಪ್ಪಿನ ಕೆರೆಯಲ್ಲಿ ಯಾವುದೇ ಜೀವಿಗಳು ಬದುಕಲು ಆಗುವುದಿಲ್ಲ ಆದರೂ ಕೆಲವು ಕಣ್ಣಿಗೆ ಕಾಣದ ಹಲೋರ‍್ಚಿಯಾದಂತಹ ಬ್ಯಾಕ್ಟೀರಿಯಾಗಳು ಬದುಕುತ್ತಿವೆ. ಕೆರೆ ಮತ್ತು ಜೋರ‍್ಡಾನ್ ನದಿ ಸೇರುವ ಬೋಗುಣಿಯಲ್ಲಿ ಹಲವು ಜೊಂಡುಹುಲ್ಲು ಮತ್ತು ತಾಳೆಮರಗಳು ಬೆಳೆಯುತ್ತವೆ. ಕಡು ಉಪ್ಪಿನಕೆರೆಯ ಹೊರಬಾಗದ ಜೋರ‍್ಡಾನ್ ಬಿರುಕಿನ ಕಣಿವೆಯಲ್ಲಿ (Jordan rift valley) ಒಂಟೆ, ನರಿ, ತೋಳ, ಮೊಲದಂತಹ ಪ್ರಾಣಿಗಳು ಬದುಕುತ್ತಿವೆ.

ಸುತ್ತಾಟ ಮತ್ತು ವಹಿವಾಟು ತಾಣವಾಗಿ ಕಟ್ಟುಪ್ಪಿನಕೆರೆ (Tourism and economy):

PHOTO-3
ಮೇಲೆ ಹೇಳಿದಂತೆ ಮನುಶ್ಯರು ಈ ಕೆರೆಯಲ್ಲಿ ತೇಲುವುದರಿಂದ ಹಾಗು ಇದರ ಸುತ್ತಮುತ್ತಲಿನ ಜಾಗ ನೋಡುಗರ ಕಣ್ಸೆಳೆಯುವುದರಿಂದ ಇದೊಂದು ಪ್ರವಾಸಿ ತಾಣವಾಗಿ ಮಾರ‍್ಪಟ್ಟಿದೆ. ವರುಶದ ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ. ನೀರಿನ ಮೇಲೆ ಸರಾಗವಾಗಿ ತೇಲುತ್ತಾ ವೇಳೆ ಕಳೆಯುವುದು ಸುತ್ತಾಡುಗರಿಗೊಂದು ಮೋಜು. ಈ ಕೆರೆಗೆ ನೀರಿನ ದೊಡ್ಡ ಸೆಲೆಯೆಂದರೆ ಜೋರ್ಡಾನ್ ನದಿ, ಇತ್ತೀಚಿನ ದಿನಗಳಲ್ಲಿ ಜೋರ‍್ಡಾನ್ ನದಿಯ ನೀರನ್ನು ಒಕ್ಕಲುತನಕ್ಕೆ ಬಳಸುವುದು ಹೆಚ್ಚಿದ್ದರಿಂದ ಅದರ ಹರಿವಿನಲ್ಲಿ ಇಳಿತವುಂಟಾಗುತ್ತಿದೆ ಜೊತೆಗೆ ಕಡು ಉಪ್ಪುಕೆರೆಯಲ್ಲಿ ಯಾವುದೇ ಹೊರಹರಿವು ಇಲ್ಲದ್ದರಿಂದ ಕೆರೆಯಲ್ಲಿ ಉಪ್ಪಿನ ಅಡಕಗಳು ಹೆಚ್ಚುತ್ತಿವೆ. ಇಲ್ಲಿ ಕಲೆಹಾಕಿದ ಉಪ್ಪಿನಡಕಗಳನ್ನು ವಾಣಿಜ್ಯ ಹುಟ್ಟುವಳಿಯಾಗಿ ಮಾರಲಾಗುತ್ತದೆ.

ಇಲ್ಲಿನ ಉಪ್ಪಿನಡಕಗಳು, ಇಲ್ಲಿನ ಕೊಳೆಯಿಲ್ಲದ ಸುತ್ತುಮುತ್ತಲು, ಕಡಿಮೆಯಿರುವ ಕಡುನೇರಳೆ ಬೆಳಕಿನ ಕದಿರು ಮತ್ತು ಕೆರೆ ತಗ್ಗಿನಲ್ಲಿರುವುದರಿಂದ ಹೆಚ್ಚಿರುವ ಗಾಳಿಯ ಒತ್ತಡಗಳು ಹಲವು ರೀತಿಯ ಬೇನೆಯನ್ನು ಗುಣಪಡಿಸುತ್ತವೆಯಂತೆ ಹೀಗಾಗಿ ಕಡು ಉಪ್ಪಿನ ಕೆರೆಯ ಸುತ್ತಮುತ್ತ ಪ್ರಕ್ರುತಿ ಮದ್ದುಮನೆಗಳು (natural therapic centres) ತಲೆಯೆತ್ತುತ್ತಿವೆ. ಈ ಕಡು ಉಪ್ಪಿನಕೆರೆಯು ಹಿಂದೆ ರೋಮನ್ ಮತ್ತು ಗ್ರೀಕರ ಬಾಗವಾಗಿತ್ತು ಹಾಗು ಈಗಲೂ ಯಹೂದಿ ದರ‍್ಮದವರು ಈ ಕೆರೆಯ ಜತೆ ದಾರ‍್ಮಿಕ ನಂಟು ಇಟ್ಟುಕೊಂಡಿದ್ದಾರೆ.

(ಮಾಹಿತಿ ಸೆಲೆಗಳು: http://www.extremescience.com/dead-sea.htm, Wikipediajewishvirtuallibrary.orgdeadsea-health.org)

(ತಿಟ್ಟ ಸೆಲೆಗಳು: nationalgeographic.com, guideoftravels.com, rawandtours.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Joshi says:

    ತುಂಬಾ ಒಳ್ಳೆಯ ಲೇಖನ. ನಾನು ಕೂಡ ಆ dead sea ಉಪ್ಪಿನ ನೀರಿನ ‌ಮೇಲೆ ಮಲಗಿ, ತೇಲುತ್ತ newspaper ಓದಿದ ಅಪರೂಪದ ಅನುಭವ ಪಡೆದಿದ್ದೇನೆ. ನೀರಿಗೆ ಇಳಿಯುವ ಮುನ್ನ ಅಲ್ಲಿನ ವಿಶೇಷ ಮಣ್ಣನ್ನು ಮೈಗೆಲ್ಲ ಹಚ್ಚಿಕೊಳ್ಲಲೇಬೇಕು. ಇಲ್ಲದಿದ್ದರೆ ಉಪ್ಪಿನ ಉರಿ ತಡೆಯಲು ‌ಸಾಧ್ಯವೇ ಇಲ್ಲ. ಆ ಮಣ್ಣಿನ ಔಷಧೀಯ ಗುಣಗಳಿಂದಾಗಿ ಅದಕ್ಕೆ ಭಾರೀ ಬೇಡಿಕೆ.

ಅನಿಸಿಕೆ ಬರೆಯಿರಿ: