ಬಾರತದ ಅಸಾಮಾನ್ಯ ವಾಸ್ತುಶಿಲ್ಪಿ

ನಾಗರಾಜ್ ಬದ್ರಾ.

charls1
ಚಾರ‍್ಲ್ಸ್ ಕೊರಿಯ್ (Charles Correa) ಎಂಬ ಹೆಸರು ವಿಶ್ವದ ಮತ್ತು ಬಾರತದ ಇತಿಹಾಸ ಪುಟಗಳಲ್ಲಿರುವ ಸುಪ್ರಸಿದ್ದ ವಾಸ್ತುಶಿಲ್ಪಿಗಳ ಹೆಸರಿನಲ್ಲಿ ಒಂದಾಗಿ ಸೇರಿಕೊಂಡಿದೆ. ಅವರೊಬ್ಬರು ಬಾರತ ಮಾತೆಯ ಹೆಮ್ಮೆಯ ಪುತ್ರ, ಬಾರತದ ಹೆಸರನ್ನು ಜಗತ್ತಿನಾದ್ಯಂತ ಸುಪ್ರಸಿದ್ದಗೊಳಿಸಿದ್ದಾರೆ. ಸ್ವಾತಂತ್ರ್ಯ ನಂತರದ ಬಾರತದ ಆದುನಿಕ ವಾಸ್ತುಶಿಲ್ಪಿ. ಆದುನಿಕ ನಗರಗಳಲ್ಲಿ ಬಡವರು ಬದುಕುವ ಹಾಗೆ ವಾಸ್ತುಶಿಲ್ಪ ನಿರ‍್ಮಿಸುವಲ್ಲಿ ಅವರು ಪ್ರಸಿದ್ದವಾಗಿದ್ದರು. ಚಾರ‍್ಲ್ಸ್ ಕೊರಿಯ್ ಅವರು ತಮ್ಮ ವಾಸ್ತುಶಿಲ್ಪಗಳಲ್ಲಿ ಸಾಂಪ್ರದಾಯಿಕ ವಿದಾನಗಳಿಗಾಗಿ ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಬಳಸುವುದಕ್ಕಾಗಿ ಪ್ರಸಿದ್ದವಾಗಿದ್ದರು. ಅವರು ಬಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳಲ್ಲಿ ತಮ್ಮ ಶೈಲಿಯಲ್ಲಿ ಕಟ್ಟಡಗಳನ್ನು ನಿರ‍್ಮಿಸಿ, ಆ ದೇಶಗಳ ಸರಕಾರಗಳಿಂದ ಗೌರವ, ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಚಾರ‍್ಲ್ಸ್ ಕೊರಿಯ್ ಅವರ ಪೂರ‍್ಣ ಹೆಸರು ಚಾರ‍್ಲ್ಸ್ ಮಾಕ್ರ ಕೊರಿಯ್. ಇವರು ನಮ್ಮ ನೆರೆ ರಾಜ್ಯವಾದ ತೆಲಂಗಾಣದ ಸಿಕಂದರಬಾದ್‍ನಲ್ಲಿ, 1 ಸೆಪ್ಟೆಂಬರ್ 1930 ರಲ್ಲಿ ಜನಿಸಿದರು. ತಮ್ಮ ಕಾಲೇಜು ಶಿಕ್ಶಣವನ್ನು ಮುಂಬೈನ ಸಂತ ಕ್ಸೇವಿಯರ್ ಕಾಲೇಜಿನಲ್ಲಿ ಮುಗಿಸಿದರು. ಮುಂದಿನ ಉನ್ನತ ಶಿಕ್ಶಣವನ್ನು ಯುನಿವರ‍್ಸಿಟಿ ಆಪ್ ಮಿಶಿಗನ್ (University of Michigan) ಮತ್ತು ಮಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಕೆಂಬ್ರಿಡ್ಜ್ (Massachusetts Institute of technology)ನಲ್ಲಿ 1953 ರಿಂದ 1955 ರವರೆಗೆ ಕಲಿತರು.

ತಮ್ಮ ವ್ರುತ್ತಿ ಜೀವನವನ್ನು 1958 ರಲ್ಲಿ ಮುಂಬೈಯಲ್ಲಿ ಇವರು ಆರಂಬಿಸಿದರು. ಚಾರ‍್ಲ್ಸ್ ಕೋರಿಯ್ ಅವರ ವಾಸ್ತುಶಿಲ್ಪದಲ್ಲಿ ಮೂಡಿಬಂದ ಮೊದಲ ಕಟ್ಟಡವೆಂದರೆ ಮಹಾತ್ಮ ಗಾಂದೀಜಿಯವರ ವಸ್ತುಗಳ ನೆನಪಿನ ವಸ್ತುಸಂಗ್ರಹಾಲಯ (Mahatma Gandhi memorial museum), ಇದನ್ನು ಮಹಾತ್ಮ ಗಾಂದಿಯವರ ಸಬರಮತಿ ಆಶ್ರಮ, ಅಹಮದಾಬಾದ್‍ನಲ್ಲಿ ಕಟ್ಟಿದರು. ಅದನ್ನು ಅವರು ತಮ್ಮ 28 ನೇ ವಯಸ್ಸಿನಲ್ಲಿಯೇ ನಿರ‍್ಮಿಸಿದ್ದರು. ಇಲ್ಲಿಂದ ಶುರುವಾದ ಅವರ ಅದ್ಬುತ ವಾಸ್ತುಶಿಲ್ಪಗಳ ಕಟ್ಟಡಗಳನ್ನು ಕಟ್ಟುವ ಪಯಣದಲ್ಲಿ ಮತ್ತೆ ಯಾವತ್ತೂ ಹಿಂದೆ ತಿರುಗಿ ನೋಡಲಿಲ್ಲ.

ಅವರ ವಾಸ್ತುಶಿಲ್ಪದಲ್ಲಿ ನಿರ‍್ಮಿಸಿದ ಪ್ರಮುಕ ಕಟ್ಟಡಗಳು:
ರಾಜಸ್ತಾನ – ಜವಹರ್ ಕಲಾ ಕೇಂದ್ರ
ಮದ್ಯಪ್ರದೇಶ – ವಿದಾನ ಸಬೆ ಮತ್ತು ಬಾರತ ಬವನ
ಹೊಸದೆಹಲಿ – ಬ್ರಿಟಿಶ್ ಕೌನ್ಸಿಲ್, ಎಲ್.ಐ.ಸಿ ಯ ಕೇಂದ್ರ ಕಚೇರಿ ‘ಜೀವನ್ ಬಾರತಿ’, ನ್ಯಾಶನಲ್ ಕ್ರಾಪ್ಟ್ಸ್ ಮ್ಯುಸಿಯಂ ಮತ್ತು ರಾಜ್‍ಗಾಟ್‍ನಲ್ಲಿನ ಗಾಂದಿ ದರ‍್ಶನ ಮ್ಯುಸಿಯಂ
ತಮಿಳುನಾಡು – ಚೆನ್ನೈನ ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್ ಕಟ್ಟಡ ಮತ್ತು ಮಹೀಂದ್ರ ರಿಸರ‍್ಚ್ ವ್ಯಾಲಿ ಕಟ್ಟಡ
ಪಶ್ಚಿಮ ಬಂಗಾಳ – ಕೊಲ್ಕೊತ್ತಾದ ಸಾಲ್ಟ್ ಲೇಕ್ ಸಿಟಿ
ಮಹಾರಾಶ್ಟ್ರ – ನವ ಮುಂಬೈ ನಗರ, ಮುಂಬೈ ದಾರಾವಿಯ ಕಡಿಮೆ ವೆಚ್ಚದ ಮನೆಗಳು, ಜೀವನ್ ಬೀಮಾ ನಗರ ಟೌನ್‍ಶಿಪ್, ಸಲ್ವಕಾವೋ ಚರ‍್ಚ್, ಸಿಟಿ ಮ್ಯುಸಿಯಂ ಮತ್ತು ಪುಣೆಯ ಕಂಟೋನ್ಮೆಂಟ್ ಚರ‍್ಚ್
ಕೇರಳ – ಮಲಬಾರ್ ಸಿಮೆಂಟ್ ಹೌಸ್ ಟೌನ್‍ಶಿಪ್ ಮತ್ತು ಕೋವಲಂ ಬೀಚ್ ರೆಸಾರ‍್ಟ್
ಗುಜರಾತ್ – ಅವಳಿ ಮನೆಗಳ ನಗರ ಮತ್ತು ರಾಮಕ್ರಿಶ್ಣ ಹೌಸ್
ಗೋವಾ – ವೆರೆಮ್ ಹೌಸ್, ಸಿಡಾಡೆ ಡೆ ಗೋವಾ ಹೊಟೇಲ್, ಡೋನ ಸೈಲ್ವಿಯ ಹೋಟೆಲ್ ಮತ್ತು ಮಡಗಾಂವ್ ಸ್ಟೇಶನ್
ಸೀಮಾಂದ್ರ/ತೆಲಂಗಾಣ – ಹೈದರಬಾದಿನ ಬುದ್ದಪೂರ‍್ಣಿಮ ಲೇಕ್‍ಪ್ರಂಟ್ ಟೌನ್‍ಶಿಪ್
…ಇನ್ನೂ ಅನೇಕ ಕಟ್ಟಡಗಳ ನಿರ‍್ಮಾಣ ಮಾಡಿದ್ದಾರೆ.

ಜವಹರ್ ಕಲಾ ಕೇಂದ್ರ, ರಾಜಸ್ತಾನ

ಜವಹರ್ ಕಲಾ ಕೇಂದ್ರ, ರಾಜಸ್ತಾನ

ನಮ್ಮ ಕರ‍್ನಾಟಕದಲ್ಲಿಯು ಅವರ ವಾಸ್ತುಶಿಲ್ಪದಲ್ಲಿ ಅನೇಕ ಕಟ್ಟಡಗಳು ನಿರ‍್ಮಾಣಗೊಂಡಿವೆ. ಅವುಗಳಲ್ಲಿ ಕೆಲವು ಹೆಸರುಗಳು ಇಲ್ಲಿವೆ. ಬೆಂಗಳೂರಿನ ಬೀಮಾನಗರ ಟೌನ್‍ಶಿಪ್, ಕಲ್ಬುರ‍್ಗಿ ಜಿಲ್ಲೆಯ ವಾಡಿಯಲ್ಲಿನ ಸಾವಿರಾರು ನೀರುದ್ಯೋಗಿಗಳಿಗೆ ಉದ್ಯೋಗ ನೀಡಿದ ಎಸಿಸಿ ಟೌನ್‍ಶಿಪ್, ಬೆಂಗಳೂರಿನ ಟೈಟನ್ ಟೌನ್‍ಶಿಪ್, ಮಸ್ಕರೆನ್ಹಸ್ ಹೌಸ್, ಕೋರಮಂಗಲ ಹೌಸ್, ವಿಶ್ವೇಶ್ವರಯ್ಯ ಸೆಂಟರ್, ಟಾಟಾ ಎಲೆಕ್ಸಿ ಮತ್ತು ಜವಹರ ಲಾಲ್ ನೆಹರು ಸೆಂಟರ್.

ಗಟಪ್ರಬಾ ನದಿಯ ಪ್ರವಾಹದಿಂದ ಮುಳುಗಡೆ ಆಗುತ್ತಿದ್ದ ಬಾಗಲಕೊಟೆ ನಗರವನ್ನು ಬೇರೆ ಕಡೆಗೆ ಸಾಗಿಸುವ ಹೊಣೆಯನ್ನು ಅಂದಿನ ಮುಕ್ಯಮಂತ್ರಿ ರಾಮಕ್ರಿಶ್ಣ ಹೆಗೆಡೆಯವರು ಹೊತ್ತಿದ್ದರು. ತಮಗೆ ಆತ್ಮೀಯರಾಗಿದ್ದ ಚಾರ‍್ಲ್ಸ್ ಕೋರಿಯ್ ಅವರನ್ನು ಕರೆದು ಆ ಕೆಲಸದ ಮೇಲುಸ್ತುವಾರಿಯನ್ನು ಮುಕ್ಯಮಂತ್ರಿಗಳು ನೀಡಿದರು. ಅದೇ ಇಂದಿನ ಬಾಗಲಕೋಟೆಯ ನವನಗರ.

ಚಾರ‍್ಲ್ಸ್ ಅವರು ಬೇರೆ ದೇಶಗಳಲ್ಲಿಯೂ ಹಲವಾರು ಕಟ್ಟಡಗಳನ್ನು ನಿರ‍್ಮಿಸಿದ್ದಾರೆ. ಅವುಗಳ ಕೆಲವು ಹೆಸರುಗಳು ಇಲ್ಲಿವೆ; ಲಿಬಿಯಾದ ಸ್ಟೀಲ್ ಟೌನ್‍ಶಿಪ್, ಅಮೇರಿಕಾದ ನ್ಯೂರೋಸೈನ್ಸ್ ಸೆಂಟರ್, ಕತಾರ್ ದೇಶದ ದೋಹದಲ್ಲಿನ ಮ್ಯುಸಿಯಂ ಆಪ್ ಇಸ್ಲಾಮಿಕ್ ಆರ‍್ಟ್, ಲಂಡನ್ನಿನ ಮೆಮೋರಿಯಲ್ ಗೇಟ್ಸ್, ಸಿಂಗಾಪೂರದ ಕಂಪ್ಯೂಟರ್ ಸೆಂಟರ್, ಬಾಸ್ಟನ್ ದೇಶದಲ್ಲಿನ ಮೆಕ್‍ಗೌವೆರ‍್ನ್ ಇನ್ಸ್ಟಿಟ್ಯೂಟ್ ಪಾರ್ ಬ್ರೈನ್ ರಿಸರ‍್ಚ್, ಪೋರ‍್ಚುಗಲ್ ದೇಶದಲ್ಲಿನ ದಿ ಶಾಂಪಾಲಿಮೋ ಸೆಂಟರ್ ಪಾರ್ ಅನ್‍ನೋನ್(The Champalimaud center for unknown).

ದಿ ಶಾಂಪಾಲಿಮೋ ಸೆಂಟರ್ ಪಾರ್ ಅನ್‍ನೋನ್ - ಪೋರ‍್ಚುಗಲ್

ದಿ ಶಾಂಪಾಲಿಮೋ ಸೆಂಟರ್ ಪಾರ್ ಅನ್‍ನೋನ್ – ಪೋರ‍್ಚುಗಲ್

ನಗರಗಳಲ್ಲಿ ಒಳ್ಳೆಯ ವಾತಾವರಣ ಮತ್ತು ಬಡವರಿಗೆ ಕಡಿಮೆ ಹಣದಲ್ಲಿ ಒಳ್ಳೆಯ ಮನೆಗಳ ನಿರ‍್ಮಾಣ ಆಗಬೇಕು ಎಂಬ ಗುರಿಯಿಟ್ಟುಕೊಂಡು, ಒಳ್ಳೆಯ ನಗರಗಳ ಯೋಜನೆಗಾಗಿ 1984 ರಲ್ಲಿ ಚಾರ‍್ಲ್ಸ್ ಅವರು ತಮ್ಮದೇ ಆದ ಅರ‍್ಬನ್ ಡಿಸೈನ್ ರಿಸರ‍್ಚ್ ಇನ್ಸ್ಟಿಟ್ಯೂಟ್ ಅನ್ನು ಮುಂಬೈಯಲ್ಲಿ ಪ್ರಾರಂಬಿಸಿದರು. ಅವರು 2005 ರಿಂದ 2008 ವರೆಗೂ ದೆಹಲಿಯ “ದಿಲ್ಲಿ ಅರ‍್ಬನ್ ಆರ‍್ಟ್ಸ್ ಕಮಿಶನ್’ನ ಅದ್ಯಕ್ಶರಾಗಿದ್ದರು. 1985 ರಲ್ಲಿ ಬಾರತದ ಅಂದಿನ ಪ್ರದಾನ ಮಂತ್ರಿ ರಾಜೀವ ಗಾಂದಿ ಅವರು ಚಾರ‍್ಲ್ಸ್ ಅವರನ್ನು ನ್ಯಾಶನಲ್ ಕಮಿಶನ್ ಆಪ್ ಅರ‍್ಬನೈಸೇಶನ್ ನ ಅದ್ಯಕ್ಶರಾಗಿ ನೇಮಿಸಿದ್ದರು.

ಪ್ರಶಸ್ತಿ – ಬಿರುದುಗಳು:
ದೇಶಕ್ಕೆ ನೀಡಿದ ಕೊಡುಗೆಯನ್ನು ಆದರಿಸಿ 1972 ರಲ್ಲಿ ಬಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ನಂತರ 2006 ರಲ್ಲಿ ದೇಶದ ಎರಡನೆಯ ಅತ್ಯುತ್ತಮ ನಾಗರಿಕ ಪ್ರಶಸ್ತಿ ಪದ್ಮ ವಿಬೂಶಣ ನೀಡಿ ಗೌರವಿಸಿತು. 2011 ರಲ್ಲಿ ಅಂದಿನ ಗೋವಾ ಸರಕಾರವು, ಗೋವಾ ರಾಜ್ಯದ ಅತ್ಯುತ್ತಮ ನಾಗರಿಕ ಪ್ರಶಸ್ತಿ ‘ಗೋಮಂತ್ ವಿಬೂಶಣ‘ ನೀಡಿ ಗೌರವಿಸಿತು. ಇಂಟರ್ ನ್ಯಾಶನಲ್ ಯುನಿಯನ್ ಆಪ್ ಆರ‍್ಕಿಟೆಕ್ಟ್ ಸಂಸ್ತೆಯು, ಮೂರು ವರುಶಕ್ಕೊಮ್ಮೆ ವಾಸ್ತುಶಿಲ್ಪ ಕ್ಶೇತ್ರದಲ್ಲಿ ವಿಶ್ವಕ್ಕೆ ನೀಡಿದ ಕೊಡುಗೆಯನ್ನು ಆದರಿಸಿ ನೀಡುವ ಚಿನ್ನದ ಪದಕವನ್ನು, 1990 ರಲ್ಲಿ ಚಾರ‍್ಲ್ಸ್ ಕೊರಿಯ್ ಅವರಿಗೆ ನೀಡಿತು. ಈ ಪದಕವನ್ನು ಪಡೆದ ಬಾರತದ ಒಬ್ಬರೇ ವಾಸ್ತುಶಿಲ್ಪಿ ಇವರಾಗಿದ್ದಾರೆ. ರಾಯಲ್ ಇನ್ಸ್ಟಿಟ್ಯೂಟ್ ಆಪ್ ಬ್ರಿಟಿಶ್ ಆರ‍್ಕಿಟೆಕ್ಟ್ ಅವರು 2013 ರಲ್ಲಿ ಚಾರ‍್ಲ್ಸ್ ಕೊರಿಯ್ ಅವರ ವಾಸ್ತುಶಿಲ್ಪಗಳ ಪ್ರದರ‍್ಶನವನ್ನು ಏರ‍್ಪಡಿಸಿತ್ತು.

ಬಾರತದ ಶ್ರೇಶ್ಟ ವಾಸ್ತುಶಿಲ್ಪಿ ಚಾರ‍್ಲ್ಸ್ ಕೊರಿಯ್ ಅವರು ಜೂನ್ 16, 2015 ರಂದು ಮುಂಬೈಯಲ್ಲಿ ನಿದನರಾದರು. ಅವರು ನಿದನವಾದ ದಿನದಂದು ಸಂತಾಪ ಸೂಚಿಸಬೇಕಾದ ನಮ್ಮ ಮಾದ್ಯಮಗಳು ಇಡೀ ದಿನ 1700 ಕೋಟಿ ರೂಪಾಯಿ ಹಗರಣವನ್ನು ಮಾಡಿ, ದೇಶದಿಂದ ಓಡಿ ಹೋದ ಲಲಿತ್ ಮೋದಿಯ ಬಗ್ಗೆ ವರದಿಯನ್ನು ಪ್ರಸಾರ ಮಾಡಿದ್ದು ವಿಪರ‍್ಯಾಸವೇ ಸರಿ. ಲಲಿತ್ ಮೋದಿಯವರು ಕ್ಯಾನ್ಸರ್ ನಿಂದ ನರಳುತ್ತಿರುವ ತಮ್ಮ ಪತ್ನಿಗೆ, ಪೋರ‍್ಚುಗಲ್ಲಿನ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಲು ಸುಶ್ಮಾ ಸ್ವರಾಜ್ ಅವರ ಸಹಾಯ ಕೇಳಿದರೋ, ಆ ಆಸ್ಪತ್ರೆಯ ವಾಸ್ತುಶಿಲ್ಪವನ್ನು ನಿರ‍್ಮಿಸಿದವರು ಇದೇ ಚಾರ‍್ಲ್ಸ್ ಕೊರಿಯ್ ಅವರು! ನಮ್ಮ ದೇಶದ ಮಾದ್ಯಮಗಳು ನಟ-ನಟಿಯರ ಕೌಟುಂಬಿಕ ಜಗಳಗಳ ಸುದ್ದಿಯನ್ನು ಇಡೀ ದಿನ ಪ್ರಸಾರ ಹಾಗೂ ಚರ‍್ಚೆ ಮಾಡುವುದರಲ್ಲಿಯೇ ತೊಡಗಿರುವುದು ಎಂತಹ ವಿಪರ‍್ಯಾಸ.

ನಮ್ಮ ದೇಶದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸರಕಾರದ ಮೊದಲ ಬಜೆಟ್ಟಿನಲ್ಲಿ 100 ಸ್ಮಾರ‍್ಟ್ ಸಿಟಿಗಳ ನಿರ‍್ಮಾಣ ಮಾಡುವ ಯೋಜನೆಯನ್ನು ಗೋಶಣೆ ಮಾಡಿದರು. ಆ ಯೋಜನೆಯಲ್ಲಿ ದೇಶದ ಯಾವ ಯಾವ ರಾಜ್ಯದ ಎಶ್ಟು ನಗರಗಳು, ಯಾವ ನಗರಗಳನ್ನು ಆರಿಸಲಾಗಿದೆ ಎಂದು ಗೋಶಣೆ ಮಾಡುವ ಕೆಲವು ದಿನಗಳ ಮೊದಲೇ ನಮ್ಮ ದೇಶದ ಶ್ರೇಶ್ಟ ವಾಸ್ತುಶಿಲ್ಪಯನ್ನು ಕಳೆದುಕೊಂಡದ್ದು ದುರಾದ್ರುಶ್ಟ. ಅವರು 70 ರ ದಶಕದಲ್ಲೇ ನವೀ ಮುಂಬೈಯಂತ ಆದುನಿಕ ನಗರಗಳ ನಿರ‍್ಮಾಣ ಮಾಡಿದ್ದರು. ಅವರು ಬದುಕಿದ್ದಿದ್ದರೆ ಕೇಂದ್ರ ಸರಕಾರದ ಸ್ಮಾರ‍್ಟ್ ಸಿಟಿಗಳ ನಿರ‍್ಮಾಣದ ಯೋಜನೆಗೆ ತುಂಬಾ ಸಹಾಯವಾಗುತ್ತಿತ್ತು. ಅವರು ಬಾರತದ ಕೋಟ್ಯಾಂತರ ವಾಸ್ತುಶಿಲ್ಪಿಗಳಿಗೆ ಆದರ‍್ಶವಾಗಲಿ ಎಂದು ಆಶಿಸೋಣ. ಅವರ ಆತ್ಮಕ್ಕೆ ಶಾಂತಿನೀಡು ಎಂದು ಆ ದೇವರಲ್ಲಿ ಬೇಡಿಕೊಳ್ಳೋಣ. ಅವರು ಮುಂದಿನ ಜನ್ಮದಲ್ಲಿಯೂ ಬಾರತ ಮಾತೆಯ ಮಡಿಲಲ್ಲಿ ಮತ್ತೆ ಹುಟ್ಟಿಬರಲಿ ಎಂದು ಆಶಿಸೋಣ.
ಬಾರತದ ಶ್ರೇಶ್ಟ ವಾಸ್ತುಶಿಲ್ಪಿಗೆ ನನ್ನದೊಂದು ಸಲಾಂ…

(ಚಿತ್ರ ಸೆಲೆ: myfeedly.infomimoa.euarchitectureau.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. Vinaykumar says:

  ಭಾರತ !!!

 2. ಪ್ರಿಯಾಂಕ್ ಕತ್ತಲಗಿರಿ says:

  ವಿನಯ್ ಕುಮಾರ್ ಅವರೇ,
  “ಬಾರತ” ಎಂದು ಯಾಕೆ ಬರೆಯಲಾಗಿದೆ ಎಂದು ತಿಳಿಯಲು ಇಲ್ಲಿ ನೋಡಿ: http://128.199.25.99/%E0%B2%8E%E0%B2%B2%E0%B3%8D%E0%B2%B2%E0%B2%B0%E0%B2%95%E0%B2%A8%E0%B3%8D%E0%B2%A8%E0%B2%A1/

 3. Reblogged this on nagarajbhadra and commented:
  ಬಾರತದ ಅಸಾಮಾನ್ಯ ವಾಸ್ತುಶಿಲ್ಪಿ

ಅನಿಸಿಕೆ ಬರೆಯಿರಿ: