ಮುದ್ದಾದ ಸಾಕುನಾಯಿ ‘ಪಗ್’ ಹುಟ್ಟಿಬೆಳೆದ ಕತೆ

– ನಾಗರಾಜ್ ಬದ್ರಾ.

ಪಗ್

ಒಂದಿಲ್ಲೊಂದು ಕಡೆಯಲ್ಲಿ ಪಗ್ (Pug) ತಳಿಯ ನಾಯಿಯನ್ನು ನೋಡಿರುತ್ತೀರಿ. ಮುದ್ದಾದ ಪಗ್ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚಾದ ನಾಯಿಯ ತಳಿಯಾಗಿದೆ. ಜಾಹೀರಾತು ಲೋಕದಲ್ಲಂತೂ ಇದಕ್ಕೆ ತುಂಬಾ ಬೇಡಿಕೆಯಿದೆ.

‘ಪಗ್’ ಹೊಸ ತಳಿಯಲ್ಲ. ಸುಮಾರು 2500 ವರುಶಗಳಿಂದ ಇವು ನಮ್ಮೊಡನೆ ಇವೆ!

ಹಲವಾರು ಮಂದಿಗೆ ಚಿಕ್ಕನಾಯಿಗಳ ಪರಿಕಲ್ಪನೆಯು ಇತ್ತೀಚಿನ ದಿನಗಳಲ್ಲಿ ಕಂಡುಬಂದಂತೆ ತೋರುತ್ತದೆ. ಆದರೆ ಅದು ದಿಟವಲ್ಲ. ಪಗ್ ಈ ನೆಲದ ಮೇಲೆ ಬದುಕುತ್ತಿರುವ ವಿಶ್ವದ ಹಳೆಯ ತಳಿಗಳ ಪೈಕಿಯಲ್ಲಿ ಒಂದೆಂದು ಕರೆಯಲ್ಪಡುತ್ತದೆ. ಕ್ರಿ.ಪೂ 400 ನೇ ಇಸವಿಯಲ್ಲಿಯೇ ಚೀನಾದಲ್ಲಿ ಈ ತಳಿಗಳು ಕಂಡುಬಂದಿವೆ.

ಚೀನಾದ ಅರಸು ಮನೆತನದವರು ತುಂಬಾ ಇಶ್ಟಪಟ್ಟು ಸಾಕುತ್ತಿದ್ದ ತಳಿಗಳಿವು. ಪಗ್ ದೊರೆಯ ಕುಟುಂಬಕ್ಕೆ ತುಂಬಾ ಹತ್ತಿರವಾಗಿತ್ತು. ಇವನ್ನು ಎಶ್ಟು ಇಶ್ಟಪಡುತ್ತಿದ್ದರೆಂದರೆ ಕಾವಲುಪಡೆಗಳ ಕಾವಲಿನಲ್ಲಿ ಐಶಾರಾಮಿ ಕೋಣೆಗಳಲ್ಲಿ ಪಗ್‍ಗಳನ್ನು ಇರಿಸುತ್ತಿದ್ದರು. ಮುಂದೆ ಟಿಬೆಟಿನಲ್ಲಿ ಬೌದ್ದ ದರ‍್ಮದ ಸನ್ಯಾಸಿಗಳು, ತಮ್ಮ ಮಟಗಳಲ್ಲಿ ಪಗ್‍ಗಳನ್ನು ಸಾಕುಪ್ರಾಣಿಗಳಂತೆ ನೋಡಿಕೊಳ್ಳಲು ಆರಂಬಿಸಿದ ಮೇಲೆ ಏಶ್ಯಾದ ಇತರೆ ದೇಶಗಳಲ್ಲಿ ಪಗ್ ತಳಿಗಳು ಹರಡತೊಡಗಿದವು. ಪಗ್‍ಗಳ ಮುಕದ ಮೇಲಿರುವ ತೊಗಲಿನ ಮಡಿಕೆಗಳು ತುಂಬಾ ವಿಶಿಶ್ಟವಾಗಿದ್ದು, ಹಳೇಕಾಲದ ಚೈನೀಸ್ ಅಕ್ಶರಗಳ ಆಕಾರದಂತೆ ಕಾಣಿಸುತ್ತವೆ. ಇದೊಂದು ಬೆರಗಿನ ಸಂಗತಿಯಾಗಿದೆ.

ದೊರೆಯ ಜೀವ ಉಳಿಸಿ, ಯುರೋಪಿಯನ್ನರ ಮನಗೆದ್ದಿತ್ತು!

ವಿಲಿಯಂ ಹೊಗರ‍್ತ್ ಜೊತೆಗಿರುವ ಪಗ್

ದೊರೆ ವಿಲಿಯಂ ಹೊಗರ‍್ತ್ ಜೊತೆಗಿರುವ ಪಗ್

ಸುಮಾರು 16 ನೇ ಶತಮಾನದಲ್ಲಿ ಪಗ್‍ಗಳನ್ನು ಮೊದಲಬಾರಿಗೆ ಯುರೋಪಿಗೆ ಪರಿಚಯಿಸಲಾಯಿತು. 1572 ರಲ್ಲಿ ಸ್ಪ್ಯಾನಿಶ್ ಹಾಗೂ ಆಗಿನ ಯುರೋಪಿಯನ್ ನಾಡುಗಳ ನಡುವೆ ಯುದ್ದ ಆರಂಬಗೊಂಡಿತ್ತು. ಆ ಹೊತ್ತಿನಲ್ಲಿ ಒಂದು ಇರುಳು, ಸ್ಪ್ಯಾನಿಶ್ ಪಡೆಯು ಗುಡಾರದಲ್ಲಿ ಮಲಗಿದ್ದ ನೆದರ್‍ಲ್ಯಾಂಡಿನ ದೊರೆ ವಿಲಿಯಮ್ ಹೊಗರ‍್ತ್ (William Hogarth) ಅವನನ್ನು ಸಾಯಿಸಲು ಹೊಂಚುಹಾಕಿ ಬರುತ್ತಿತ್ತು. ಅದನ್ನು ಗಮನಿಸಿದ ವಿಲಿಯಮ್ ಹೊಗರ‍್ತ್ ನ ಪಗ್ ದೊರೆಯನ್ನು ಎಚ್ಚರಿಸಲು ಅವನ ಹತ್ತಿರಹೋಗಿ ಪರಚಲು ಆರಂಬಿಸಿತು. ಆದರೆ ದೊರೆಗೆ ಎಚ್ಚರವಾಗಲಿಲ್ಲ. ಕಡೆಗೆ ಅದು ಅವನ ಮುಕದ ಮೇಲೆಹಾರಿ ನಿದ್ದೆಯಿಂದ ಎಚ್ಚರಿಸಿ ದೊರೆಯ ಜೀವ ಉಳಿಸಿತ್ತು. ಈ ಸುದ್ದಿ ಪಡುವಣ ಯುರೋಪ್ ತುಂಬಾ ಹರಡಿ ಪಗ್ ಹೆಸರುವಾಸಿಯಾಯಿತು. ವಿಲಿಯಮ್ ಹೊಗರ‍್ತ್ ತನ್ನ ಪ್ರೀತಿಯ ಪಗ್ ನಾಯಿಗೆ ಪಾಂಪೇ (Pompey) ಎಂಬ ಹೆಸರಿಟ್ಟಿದ್ದನು.

ಇಟಲಿಯ ಮಿಲಿಟರಿ ಪಡೆಗಳಲ್ಲಿ ಪಗ್‍ಗಳನ್ನು ವೈರಿಗಳನ್ನು ಪತ್ತೆಹಚ್ಚಲು ಬಳಸಿಕೊಳ್ಳಲಾಗುತ್ತಿತ್ತು. ಅಲ್ಲದೇ ಇಟಲಿಯವರ ಮೆಚ್ಚಿನ ಕಾವಲುನಾಯಿಯಾಗಿ ಪಗ್ ಕೆಲಸಮಾಡುತ್ತಿತ್ತು. ಅಂಗಿ ಹಾಗೂ ಚಡ್ಡಿ ಹಾಕಿರುವ ಪಗ್‍ನ ಚಿತ್ರಗಳನ್ನು ತಮ್ಮ ಗಾಡಿಗಳ ಮುಂಬದಿಯಲ್ಲಿ ಬಿಡಿಸಿಕೊಂಡು ಪಗ್ ಮೇಲಿನ ತಮ್ಮ ಪ್ರೀತಿಯನ್ನು ಇಟಲಿಯವರು ತೋರ‍್ಪಡಿಸುತ್ತಿದ್ದರು.

ಇಂಗ್ಲೆಂಡಿನ ಅರಸು ಮನೆತನದ ಮುದ್ದಿನ ನಾಯಿ

1688 ರಲ್ಲಿ ಮೂರನೇ ವಿಲಿಯಮ್ ದೊರೆಯು ಇಂಗ್ಲೆಂಡಿನ ಸಿಂಹಾಸನವನ್ನು ಏರಲು ನೆದರ್‍ಲ್ಯಾಂಡಿನಿಂದ ಹೊರಡುವಾಗ ಪಗ್ ತಳಿಯ ನಾಯಿಯೊಂದನ್ನು ಜೊತೆಗೆ ಕರೆದುಕೊಂಡು ಹೋದನು. ಆ ಮೂಲಕ ಮೊದಲಬಾರಿಗೆ ಇದು ಇಂಗ್ಲೆಂಡ್ ಮಂದಿಗೆ ಪರಿಚಯವಾಯಿತು. 19 ನೇ ಶತಮಾನದ ಹೊತ್ತಿಗೆ ಪಗ್ ಇಂಗ್ಲೆಂಡಿನಲ್ಲಿ ತುಂಬಾ ಹೆಸರುವಾಸಿಯಾಗಿತ್ತು.

ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಗೆ ಪಗ್‍ಗಳ ಬಗ್ಗೆ ತುಂಬಾ ಒಲವಿತ್ತು. ಓಲ್ಗಾ, ಪೆಡ್ರೊ, ಮಿಂಕಾ, ಪಾತಿಮಾ ಹಾಗೂ ವೀನಸ್ ಎಂಬ ಹೆಸರಿನ ಪಗ್‍ಗಳನ್ನು ಅರಮನೆಯಲ್ಲಿ ಸಾಕಿದ್ದರು. ವಿಕ್ಟೋರಿಯಾ ರಾಣಿಯ ನಾಯಿ ಮೇಲಿನ ಆಸಕ್ತಿ ಅವಳನ್ನು 1873 ರಲ್ಲಿ ನಾಯಿಗಳ ಬಗೆ ಬಗೆಯ ತಳಿಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಪ್ರಚಾರ ಮಾಡಲು ಕೆನ್ನೆಲ್ ಕ್ಲಬ್‍ (kennel club) ಹುಟ್ಟುಹಾಕುವಂತೆ ಮಾಡಿತು. ರಾಣಿಯ ಮೊಮ್ಮಗ ಕಿಂಗ್ ಜಾರ‍್ಜ್ V (King George V) ಹಾಗೂ ಅವರ ಮಗ ಕಿಂಗ್ ಎಡ್ವರ‍್ಡ್ VIII (King Edward VIII) ಕೂಡ ಪಗ್‍ಗಳ ಮೇಲೆ ಇನ್ನಿಲ್ಲದ ಒಲವನ್ನು ಹೊಂದಿದ್ದರು.

ಅಟ್ಲಾಂಟಿಕ್ ಕಡಲನ್ನು ದಾಟಿ ಅಮೇರಿಕಾಕ್ಕೂ ಕಾಲಿಟ್ಟಿತು!

ಪಗ್ ನಾಯಿ

19 ನೇ ಶತಮಾನದಲ್ಲಿ ಯುರೋಪಿನ ಮೂಲಕ ಪಗ್‍ಗಳು ಮೊದಲಬಾರಿಗೆ ಅಮೇರಿಕಾಕ್ಕೆ ತಲುಪಿದವು. ಕೆಲವೇ ದಿನಗಳಲ್ಲಿ ಇವು ಅಮೇರಿಕಾ ಮಂದಿಯ ಮನಗೆದ್ದು ಹೆಸರುವಾಸಿಯಾದವು. 1931 ರಲ್ಲಿ ಅಮೇರಿಕಾದಲ್ಲಿ ಪಗ್‍ಗಳ ಕುರಿತು ಪಗ್ ಡಾಗ್ ಕ್ಲಬ್ ಆಪ್ ಅಮೇರಿಕಾ (Pug Dog Club of America) ಎಂಬ ಹೆಸರಿನ ಒಂದು ಹೊಸ ಕ್ಲಬ್ ಅನ್ನು ಹುಟ್ಟುಹಾಕಲಾಯಿತು. 1981 ರಲ್ಲಿ ಅಮೇರಿಕಾದ ವೆಸ್ಟ್ ಮಿನ್‍ಸ್ಟರ್ ಕೆನ್ನೆಲ್ ಕ್ಲಬ್‍ನ ನಾಯಿಗಳ ಪ್ರದರ‍್ಶನವನ್ನು (Westminster Kennel Club Dog Show) ಪಗ್ ಗೆದ್ದುಕೊಂಡಿತ್ತು.

2004 ರಲ್ಲಿ ಬ್ರೆಜಿಲ್‍ನ ರಿಯೊ ಡಿ ಜನೈರೊದಲ್ಲಿ ನಡೆದ ವರ‍್ಲ್ಡ್ ಡಾಗ್ ಶೋನಲ್ಲಿ ಡಬಲ್ ಡಿ ಸಿನೊಬ್ಲು ಮಾಸ್ಟರ್‍ಪೀಸ್ (Double D Cinoblu’s Masterpiece) ಎಂಬ ಬಿರುದು ಪಡೆಯಿತು. ಆ ಮೂಲಕ ತೆಂಕಣ ಅಮೇರಿಕಾಕ್ಕೂ ಅಡಿಯಿಟ್ಟಿತು.

ರಶ್ಯಾದ ರಾಣಿಯ ಮನಸ್ಸನ್ನೇ ಕದ್ದಿತ್ತು

ರಶ್ಯಾದ ರಾಣಿ ಜೊತೆಗಿರುವ ಪಗ್

ರಶ್ಯಾದ ರಾಣಿಯ ಮುದ್ದಿನ ಪಗ್

18 ನೇ ಶತಮಾನದಲ್ಲಿ ಪಗ್ ರಶ್ಯಾ ದೇಶಕ್ಕೆ ಮೊದಲಬಾರಿಗೆ ಪರಿಚಯವಾಯಿತು. ರಶ್ಯಾದ ರಾಣಿ ಎಕಟೆರಿನಾ ಡಿಮಿಟ್ರೀವ್ನಾ ಗೋಲಿಟ್ಸಾನಾ (Ekaterina Dmitrievna Golitsyna) ಪಗ್ ಅನ್ನು ತುಂಬಾ ಇಶ್ಟಪಡುತ್ತಿದ್ದಳು. 1759 ರಲ್ಲಿ ಲೂಯಿಸ್-ಮೈಕೆಲ್ ವಾನ್ ಲೂ (Louis-Michel van Loo) ಎಂಬ ಚಿತ್ರಗಾರ ಈ ಪಗ್ ಹಾಗೂ ರಾಣಿ ಜೊತೆಗಿರುವ ಒಂದು ಸುಂದರ ಚಿತ್ರವನ್ನು ಬಿಡಿಸಿದ್ದಾನೆ.

ಇಂಡಿಯಾದ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿತು!

2003 ರಲ್ಲಿ ಮೊಬೈಲ್ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡ ಪಗ್ ತಳಿಯು ಇಂಡಿಯಾದಲ್ಲಿ ಹೆಚ್ಚು ಮಂದಿಗೆ ಪರಿಚಯವಾಯಿತು. ಅಲ್ಲಿಯವರೆಗೆ ಇದರ ಪರಿಚಯ ಹೆಚ್ಚಿನವರಿಗೆ ಇರಲಿಲ್ಲ. ಪ್ರಕಾಶ್ ವರ‍್ಮಾ ಅವರ ನಿರ‍್ದೇಶನದ ವೊಡಾಪೋನ್ (ಹಳೆಯ ಹೆಸರು – ಹಚಿಸನ್ ಎಸ್ಸಾರ‍್) ಕಂಪನಿಯ ಜಾಹೀರಾತಿನ ಸರಣಿಯಲ್ಲಿ ಕಾಣಿಸಿಕೊಂಡ ಪಗ್ ಇಂಡಿಯಾದಲ್ಲಿ ಮನೆಮಾತಾಯಿತು. ಇವುಗಳ ಮಾರಾಟದಲ್ಲಿಯು ಗಣನೀಯವಾಗಿ ಏರಿಕೆಯಾಯಿತು. ಈ ಜಾಹಿರಾತಿನಲ್ಲಿ ಕಾಣಿಸಿಕೊಂಡ ಪಗ್‍ನ ಹೆಸರು ಚೀಕಾ.

ಜಗತ್ತಿನಾದ್ಯಂತ ಹಲವಾರು ಹೆಸರುಗಳಿವೆ

ಪಗ್‍ಗಳಿಗೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಪ್ರಾನ್ಸ್ ನಲ್ಲಿ ಇವುಗಳನ್ನು ಕಾರ‍್ಲಿನ್ (Carlin) ಎಂದು ಕರೆದರೆ, ಸ್ಪೇನ್‍ನಲ್ಲಿ ಡೊಗ್ಯುಲೊ (Dogullo), ಜರ‍್ಮನಿಯಲ್ಲಿ ಮಾಪ್ಸ್ (Mops) ಹಾಗೂ ಇಟಲಿಯಲ್ಲಿ ಕ್ಯಾಗನ್ಲಿನೊ (Caganlino) ಎಂದು ಕರೆಯುತ್ತಾರೆ. ಪಗ್‍ಗಳ ಗುಂಪನ್ನು ಗ್ರಮ್ಬಲ್ (grumble) ಎಂದು ಕರೆಯಲಾಗುತ್ತದೆ.

ಮೊದಲು ಪಗ್‍ಗಳನ್ನು ಹಲವಾರು ದೇಶಗಳ ಅರಸು ಮನೆತನದವರ ಪ್ರೀತಿಯಿಂದ ಸಾಕುತ್ತಿದ್ದರು. ಬಳಿಕ ಇವುಗಳನ್ನು ಹಣವಂತರು ಸಾಕಲು ಆರಂಬಿಸಿದರು. ದಿನಗಳು ಕಳೆದಂತೆ ಪಗ್‍ಗಳು ಸಿರಿವಂತಿಕೆಯ ಗುರುತಾಗಿ ಮಾರ‍್ಪಟ್ಟವು. ಈಗಲೂ ಇವನ್ನು ಸಿರಿವಂತಿಕೆಯ ಗುರುತು ಎಂದೇ ಹೇಳಲಾಗುತ್ತದೆ.

(ಮಾಹಿತಿ ಸೆಲೆ: wiki , pugspot.com, thedogdigest.com, vetstreet.com   )
(ಚಿತ್ರ ಸೆಲೆ: maxpixelwiki )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: