ಬೆಲೆತಗ್ಗಿಕೆ ಸುಳಿಯೊಳಗೆ ಜಪಾನ್ ಹೇಗೆ ಸಿಕ್ಕಿಕೊಂಡಿದೆ?

– ಅನ್ನದಾನೇಶ ಶಿ. ಸಂಕದಾಳ.

japan-deflation

ಜಪಾನಿನಲ್ಲಿ ತಲೆದೋರಿರುವ ಬೆಲೆತಗ್ಗಿಕೆಯಿಂದ (deflation) ಹೊರಬರಲು ಆ ನಾಡು ನಡೆಸುತ್ತಿರುವ ಕಸರತ್ತಿನ ಬಗ್ಗೆ ಈ ಹಿಂದೆ ಬರೆಯಲಾಗಿತ್ತು. ಬೆಲೆತಗ್ಗಿಕೆಯಿಂದ ನಾಡಿನ ಗಳಿಕೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಆದ್ದರಿಂದ, ಬೆಲೆತಗ್ಗಿಕೆ ಎಂಬುದು ಯಾವುದೇ ನಾಡಿನಲ್ಲಿ ಕಂಡು ಬಂದರೂ ಹೆಚ್ಚು ಹೊತ್ತು ಅದು ಮುಂದುವರೆಯದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಹೆಚ್ಚು ಕಡಿಮೆ ಒಂದು ವರುಶ ಕಳೆದರೂ, ಜಪಾನ್ ನಾಡು ಬೆಲೆತಗ್ಗಿಕೆಯಿಂದ ಹೊರಬರಲಾಗುತ್ತಿಲ್ಲ. ಮುಂದುವರೆದ ನಾಡುಗಳಲ್ಲಿ ಕಾಣಬರುವ ಬೆಲೆತಗ್ಗಿಕೆ ಹಿಂದಿನ ಕಾರಣಗಳೇನು ಎಂಬುದರ ಬಗ್ಗೆ ಹಲವಾರು ಅನಿಸಿಕೆಗಳಿವೆ. ಅಂತ ಹಲವಾರು ಅನಿಸಿಕೆಗಳಲ್ಲಿ, ಆ ನಾಡುಗಳಲ್ಲಿ ಕಡಿಮೆಯಾಗುತ್ತಿರುವ ಮಂದಿಯೆಣಿಕೆಯೂ (population) ಬೆಲೆತಗ್ಗಿಕೆಗೆ ಒಂದು ಮುಕ್ಯವಾದ ಕಾರಣ ಎಂಬ ತೋಚಿಕೆಗೆ (finding) ಹಣಕಾಸರಿಗರಿಂದ ಹೆಚ್ಚು ಬೆಂಬಲ ದೊರೆಯುತ್ತಿದೆ.

ಸುಮಾರು 12.5 ಕೋಟಿಯಶ್ಟು ಮಂದಿಯನ್ನು ಹೊಂದಿರುವ ಜಪಾನಿನಲ್ಲಿ, ಮಂದಿಯೆಣಿಕೆಯ ಶೇ 26.4 ರಶ್ಟು ಮಂದಿ, 65 ವರುಶವನ್ನು ದಾಟಿದವರಾಗಿದ್ದಾರೆ. ಸಾಮಾನ್ಯವಾಗಿ ಒಂದು ನಾಡಿನ ಹಣಕಾಸು ಏರ‍್ಪಾಡಿನಲ್ಲಿ ಬೆಲೆತಗ್ಗಿಕೆ-ಹಣದುಬ್ಬರಗಳು ಪಾಳಿ/ಸರದಿಯಂತೆ (turn by turn) ಕಾಣಿಸಿಕೊಳ್ಳುತ್ತವೆ. ಆದರೆ ನಾಡಿನಲ್ಲಿ ಮುಪ್ಪಿನವರು ಹೆಚ್ಚಾಗುತ್ತಾ, ಹರೆಯದವರು ಕಡಿಮೆ ಆಗುತ್ತಿದ್ದರೆ ಹಣಕಾಸಿನ ಏರ‍್ಪಾಡನ್ನು ಸರಿದಾರಿಗೆ ತರುವುದು ಅಶ್ಟು ಸುಳುವಾದ ಕೆಲಸವಾಗಿರುವುದಿಲ್ಲ. ಜಪಾನಿನ ಸದ್ಯದ ಸಮಸ್ಯೆ ಇದೇ ಆಗಿದೆ. ಆದರೆ ‘ಬ್ಯಾಂಕ್ ಆಪ್ ಜಪಾನ್’ ನ ( ಸೆಂಟ್ರಲ್ ಬ್ಯಾಂಕ್ ) ಮಾಜಿ ಗವರ‍್ನರ್ ಆದ ಮಸಾಕಿ ಶಿರಾಕವ (Masaaki Shirakawa) ಅವರು ಈ ಅನಿಸಿಕೆಯನ್ನು ಒಪ್ಪುವುದಿಲ್ಲ. ಅವರ ಪ್ರಕಾರ – ಬೆಲೆತಗ್ಗಿಕೆಗೂ ಮತ್ತು ಮಂದಿಯೆಣಿಕೆಯರಿಮೆಗೂ (demography) ನಂಟಿಲ್ಲ ಎಂಬುದಾಗಿದೆ. ಆದರೆ 2000ರ ದಶಕದಲ್ಲಿ, ಮುಂದುವರೆದ ನಾಡುಗಳ ಹಣಕಾಸಿನ ಏರ‍್ಪಾಡನ್ನು ಒಂದರೊಂದಿಗೆ ಹೋಲಿಸಿ ನೋಡಿದಾಗ, ಮಂದಿಯ ಎಣಿಕೆ ಹೆಚ್ಚಾದಂತೆಲ್ಲಾ ಹಣದುಬ್ಬರವೂ ಹೆಚ್ಚಾಗಿರುವುದು ಕಂಡುಬಂದಿದೆ.

ಇಂಗ್ಲೆಂಡ್ ನ ಮಂದಿಯೆಣಿಕೆಯ ಹಿನ್ನಡವಳಿ (Population History) ಗಮನಿಸಿ ಅಂಶವೊಂದನ್ನು ಕಂಡುಕೊಳ್ಳಲಾಗಿದೆ. ಮಂದಿಯೆಣಿಕೆಯ ಅಡಿಕಟ್ಟಲೆ ಎಂದೇ ಅದನ್ನು ಬಗೆಯಲಾಗಿದೆ. ಮಂದಿಯೆಣಿಕೆ ಹೆಚ್ಚಾಗುತ್ತಿದ್ದಾಗ ಅದರ ತಕ್ಕ ಹಾಗೆ ಆಹಾರ ಉತ್ಪಾದನೆಯೂ ಹೆಚ್ಚಾಗುತ್ತಿರಬೇಕು. ಒಂದು ವೇಳೆ ಉತ್ಪಾದನೆ ಹೆಚ್ಚಾಗದೇ, ಮಂದಿಯ ಎಣಿಕೆಯಶ್ಟೇ ಹೆಚ್ಚಾಗುತ್ತಿದ್ದರೆ – ಇರುವ ಆಹಾರವನ್ನು ಮಂದಿಯ ನಡುವೆ ಹಂಚಬೇಕಾಗುತ್ತದೆ. ಆದರಿಂದ ಆಹಾರಕ್ಕೆ ಬೇಡಿಕೆ ಹೆಚ್ಚಾಗುತ್ತಾ ಅದರ ಬೆಲೆ ಹೆಚ್ಚಾಗುತ್ತದೆ. ಅಂದರೆ ಮಂದಿಯ ಎಣಿಕೆ ಹೆಚ್ಚಾದಂತೆ ಅದು ಬೇಡಿಕೆಯನ್ನು ಹುಟ್ಟಾಕುತ್ತದೆ ಎಂದು ಸುಳುವಾಗಿ ತಿಳಿಯಬಹುದು. ಮಂದಿಯೆಣಿಕೆ ಹೆಚ್ಚಳ ಮತ್ತು ಹಣದುಬ್ಬರದ (inflation) ನಂಟನ್ನು ತೋರಿಸುವ ಪುರಾವೆ ಇದಾಗಿದೆ. ಈ ಗಮನಿಕೆಯು ಮಂದಿ ಬಳಸುವ ವಸ್ತುಗಳಿಗೆ ಅತವಾ ಸೇವೆಗಳಿಗೂ ಹೊಂದುತ್ತದೆ. ಹಣದುಬ್ಬರದಿಂದ ಕೆಲಸಗಳು ಹುಟ್ಟುತ್ತಾ ನಾಡಿನ ಗಳಿಕೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಬಹುದು.

ಮಂದಿಗೆ ವಯಸ್ಸಾದಂತೆ ಆ ನಾಡಿನಲ್ಲಿ ದುಡಿಯುವ ಕೈಗಳು ಕಡಿಮೆ ಆಗುವುದು.  ದುಡಿಯುವ ಕೈಗಳು ಹೆಚ್ಚಾಗದೇ ಇದ್ದಲ್ಲಿ ನಾಡಿನಲ್ಲಿ ಹೂಡಿಕೆಗಳು ಕಡಿಮೆ ಆಗುತ್ತವೆ.  ಒಡಮೆಗಳ (asset/property) ಬೆಲೆಗಳು ಕಡಿಮೆ ಆಗತೊಡಗುತ್ತವೆ.  ಬೇಡಿಕೆಯನ್ನೇ ಕಡಿಮೆ ಮಾಡುವ ಮತ್ತು ಹೂಡಿಕೆಗಳನ್ನು ತಗ್ಗಿಸುವ ಇಂತ  ಸನ್ನಿವೇಶಗಳಿಂದ ಆ ನಾಡಿನ ನಾಳಿನ ಬೆಳವಣಿಗೆಯನ್ನು ನೆಚ್ಚಲಾಗುವುದಿಲ್ಲ.  ಇದನ್ನು ಸರಿಪಡಿಸಬೇಕೆಂದರೆ ಬೇಡಿಕೆಯನ್ನು ಹೆಚ್ಚಿಸಬೇಕು. ಅದು  ಹಣದುಬ್ಬರದಿಂದ ಆಗಬಲ್ಲುದಾಗಿದೆ. ಆದರೆ, ಹಿಡಿತದಲ್ಲಿದ್ದರೂ ವಸ್ತುಗಳ ಬೆಲೆಯನ್ನು  ತುಸು ತುಟ್ಟಿಗೊಳಿಸುವ ಹಣದುಬ್ಬರವನ್ನು ವಯಸ್ಸಾದ ಮಂದಿ ಇಶ್ಟ ಪಡುವುದಿಲ್ಲ.  ವಯಸ್ಸಾದ ಮಂದಿಯ ಎಣಿಕೆ ಹೆಚ್ಚಾಗಿದ್ದಾಗ ಆಳ್ವಿಕೆ ನಡೆಸುವ ಸರಕಾರಗಳ ಒಲವೂ ಕೂಡ (ಅದಿಕಾರ ಉಳಿಸಿಕೊಳ್ಳಲು) ಆ ಮಂದಿಯ ಮೇಲೆ ಇರುತ್ತದೆ. ಆದ್ದರಿಂದ ಹಣಕಾಸಿನ ಏರ‍್ಪಾಡನ್ನು ಸರಿಪಡಿಸಬೇಕಿರುವ ಆ ನಾಡಿನ ರೀತಿ-ನೀತಿಗಳಿಗೆ ರಾಜಕೀಯದ ಆಯಾಮವೂ ಸೇರಿಕೊಳ್ಳುತ್ತದೆ. ಹಾಗಾದಾಗ ಬೆಲೆತಗ್ಗಿಕೆ ತುಸು ಹೆಚ್ಚಿನ ದಿನಗಳವರೆಗೇ ಇರಬೇಕಾಗುತ್ತದೆ.

ಜಪಾನ್ ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ಅಂದರೆ ಹೆರುವೆಣಿಕೆಯದ್ದಾಗಿದೆ (Total Fertility Rate). ಮಾಹಿತಿ ಪ್ರಕಾರ 1950 ರಲ್ಲಿ 3.65 ಇದ್ದ ಜಪಾನಿನ ಹೆರುವೆಣಿಕೆ 2014 ರಲ್ಲಿ 1.42 ಆಗಿದೆ. ಅಂದರೆ, 1950 ರಲ್ಲಿ ಹತ್ತು ದಂಪತಿಗಳ (20 ಮಂದಿ) ಜಾಗವನ್ನು ಅವರ ನಂತರದ ಪೀಳಿಗೆಯಲ್ಲಿ 36-37 ಮಂದಿ ತುಂಬುತ್ತಿದ್ದರು. ಆದರೆ ವರುಶ ಕಳೆದಂತೆ ಹೆರುವೆಣಿಕೆಯಲ್ಲಿ ಇಳಿಕೆ ಕಂಡಿರುವ ಜಪಾನಿನಲ್ಲಿ ಇಂದು ಹತ್ತು ದಂಪತಿಗಳ (20 ಮಂದಿ) ಜಾಗವನ್ನು ಅವರ ಮುಂದಿನ ಪೀಳಿಗೆಯ 14-15 ಮಂದಿ ತುಂಬುವರು ಎನ್ನುವುದು ಅದರ ಹುರುಳು. ಅಂದರೆ ಪೀಳಿಗೆ ಕಳೆದಂತೆ ಮಂದಿಯ ಕೊರತೆಯನ್ನು ಜಪಾನ್ ಎದುರಿಸುತ್ತಿದೆ. ಒಂದು ಕಡೆ ವಯಸ್ಸಾಗುತ್ತಿರುವ ಮಂದಿ ಮತ್ತೊಂದು ಕಡೆ ಮುಂದಿನ ಪೀಳಿಗೆಯಲ್ಲಿನ ಮಂದಿಯ ಕೊರತೆ – ಹೊರಗಿನ ಜಗತ್ತಿನ ಹಣಕಾಸಿನ ಏರ‍್ಪಾಡಿನ ಬೆಳವಣಿಗೆಗಳಿಗಿಂತ, ತನ್ನ ನಾಡಿನ ಒಳಗಡೆ ಇರುವ ಈ ಎರಡು ಸಮಸ್ಯೆಗಳೇ ಜಪಾನಿನಲ್ಲಿನ ಬೆಲೆತಗ್ಗಿಕೆಗೆ ಕಾರಣವಾಗಿದೆ. ಆದರಿಂದ ಹಣಕಾಸಿನ ರೀತಿ-ನೀತಿಗಳು ಏನೇ ಇದ್ದರೂ, ತನ್ನ ಬೆಳವಣಿಗಾಗಿ ಮಂದಿಯೆಣಿಕೆಪರಿಚೆಯ (demographics) ಸಮಸ್ಯೆಯನ್ನು ಬಗೆಹರಿಸಲು ಜಪಾನ್ ಮೊದಲು ಗಮನ ಕೊಡಬೇಕಾಗಿದೆ!

(ಚಿತ್ರ ಸೆಲೆ : theguardian.com )

(ಮಾಹಿತಿ ಸೆಲೆ : agenda.weforum.orgJapan-Demographics )Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s