ಕೆಲಸದಲ್ಲಿ ಟೀಕೆಗಳನ್ನು ಸಂಬಾಳಿಸುವುದು ಹೇಗೆ?

– ರತೀಶ ರತ್ನಾಕರ.

review

ಕಚೇರಿಯಲ್ಲಿ ಕಳೆದ ಆರು ತಿಂಗಳು ಇಲ್ಲವೇ ಒಂದು ವರುಶದಲ್ಲಿ ಮಾಡಿದ ಕೆಲಸವನ್ನು ಒರೆಗೆ ಹಚ್ಚಿ ನೋಡುವುದೇ ‘ಕೆಲಸದ ಹಿನ್ನೋಟ‘ (performance review). ಕೆಲಸ ಮಾಡುವಾಗ ಎಡವಿದ್ದೆಲ್ಲಿ? ಗೆದ್ದಿದ್ದೆಲ್ಲಿ? ಮುಂದಿನ ದಾರಿಗಳೇನು? ಹೊಸ ಗುರಿಗಳೇನು? ಎಂಬುದರ ಕುರಿತು ತಮ್ಮ ಮೇಲುಗರೊಂದಿಗೆ ಮಾತುಕತೆ ನಡೆಸುವ ಒಂದು ಆಗುಹ(event)ವಿದು. ಕೆಲಸಗಾರನ ಬೆಳವಣಿಗೆ, ಸ್ತಾನಮಾನ ಮತ್ತು ಸಂಬಳವು ಈ ಹಿನ್ನೋಟವನ್ನು ಅವಲಂಬಿಸಿರುತ್ತದೆ. ಕೆಲಸದ ಹಿನ್ನೋಟವು ಎಣಿಸಿದಂತೆ ಚೆನ್ನಾಗಿ ಆಗದೆ ಹೋದರೆ, ಸಾಕಶ್ಟು ಟೀಕೆಗಳು ಎದುರಾದರೆ, ಕೆಲಸಗಾರರನ್ನು ಚಿಂತೆಗೆ ದೂಡುವುದು ಸಹಜ. ಈ ಟೀಕೆಗಳ ದೆಸೆಯಿಂದ ಹೆಚ್ಚಿನ ಕೆಲಸಗಾರರಿಗೆ ಹಿನ್ನೋಟವು ದಿಗಿಲನ್ನು ಮೂಡಿಸುತ್ತದೆ. ಮೇಲುಗರೊಂದಿಗೆ ನಡೆಸುವ ಮಾತುಕತೆ ಕೆಲಸಗಾರನ ಬೆಳವಣಿಗೆಯನ್ನು ಬೆಂಬಲಿಸುವಂತೆ ಇರದೇ ಹೋದರಂತೂ ಕೆಲಸದ ಹುರುಪನ್ನು ಕುಗ್ಗಿಸುತ್ತದೆ. ಆದರೆ ಹಿನ್ನೋಟದ ಟೀಕೆಗಳನ್ನು ಸಂಬಾಳಿಸಲು ಹಲವಾರು ದಾರಿಗಳಿವೆ.

ಮಾತು ಮುತ್ತಾಗಿರಲಿ
“ಕಳೆದ ತಿಂಗಳುಗಳಲ್ಲಿ ಕೆಲವು ಕೆಲಸಗಳನ್ನು ಹೊಸಬಗೆಯಲ್ಲಿ ಮಾಡಬೇಕಿತ್ತು, ಹೊಸ ಹೊಳಹು(idea)ಗಳು ಮೂಡಬೇಕಿತ್ತು. ಅಂತಹ ಹೇಳಿಕೊಳ್ಳುವಂತಹ ಕೆಲಸ ನಿಮ್ಮಿಂದ ಆಗಿಲ್ಲ.” – ಮೇಲುಗರ ಇಂತಹ ಮಾತುಗಳು ಒಮ್ಮೆಲೆ ಕೋಪವನ್ನು ತರಿಸಬಲ್ಲವು. ‘ಚೆನ್ನಾಗಿ ಕೆಲಸ ಮಾಡಿದ್ದರೂ ಹೀಗೆ ಹೇಳುತ್ತಾರಲ್ಲ’ ಎಂದೆನಿಸಿ ‘ಹೊಸಬಗೆಯಲ್ಲಿ ಮಾಡಲು ಅವಕಾಶಗಳಿರಲಿಲ್ಲ’, ‘ಇನ್ನೇನು ಮಾಡಬೇಕಿತ್ತು?’ ‘ಇನ್ನು ಹೇಗೆ ಕೆಲಸ ಮಾಡುವುದು ಎಂದು ನನಗೆ ತಿಳಿಯುತ್ತಿಲ್ಲ.’ ಇಂತಹ ಕಾಪುವಿಕೆ(defensive)ಯ ಮಾತುಗಳು ಹೊರಬರಬಹುದು. ಆದರೆ ಇಂತಹ ಮಾತುಗಳು ಒಳ್ಳೆಯ ಮಾತುಕತೆಗೆ ದಾರಿಮಾಡಿಕೊಡುವುದಿಲ್ಲ. ಇದರ ಬದಲಾಗಿ ಹೆಚ್ಚಿನ ವಿವರಣೆಯನ್ನು ಮೇಲುಗರಲ್ಲಿ ಕೇಳುವುದು ಒಳಿತು ಎಂದು ಅರಿಗರು ಹೇಳುತ್ತಾರೆ.

ಕೆಲಸವನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದಿತ್ತು ಎಂದು ಎತ್ತುಗೆಯೊಂದಿಗೆ ವಿವರಿಸಲು ಮೇಲುಗರನ್ನು ಕೇಳುವುದು ಒಳ್ಳೆಯದು. ಮೇಲುಗರ ಮಾತಿಗೆ ಎದುರುಮಾತನ್ನು ಆಡುವುದಕ್ಕಿಂತ, ಹೆಚ್ಚಿನ ವಿವರಣೆಯನ್ನು ಬಯಸಿದರೆ ಎಲ್ಲಿ ಎಡವಿದ್ದೆಂದು ಸರಿಯಾಗಿ ತಿಳಿಯುತ್ತದೆ. ಅಲ್ಲದೇ, ನೀವು ಟೀಕೆಗಳಿಗೆ ಒತ್ತುಕೊಟ್ಟು, ಹೆಚ್ಚು ವಿವರಣೆಯನ್ನು ಬಯಸುವವರು ಎಂದು ಗೊತ್ತಾದರೆ ಮೇಲುಗರು ಕೂಡ ಸುಮ್ಮ-ಸುಮ್ಮನೆ ಟೀಕೆಗಳನ್ನು ಮಾಡುವುದಿಲ್ಲ. ಟೀಕೆ ಮಾಡುವಾಗಲೂ ಸರಿಯಾದ ಮಾಹಿತಿ ಮತ್ತು ವಿವರಣೆಯೊಂದಿಗೆ ಮಾಡುತ್ತಾರೆ. ಅದು ಒಬ್ಬರ ಬೆಳವಣಿಗೆಗೆ ನೆರವಾಗುತ್ತದೆ. ಒಂದು ವೇಳೆ ಮೇಲುಗರ ಹಿನ್ನುಣಿಕೆಯನ್ನು (comment) ತಿಳಿದುಕೊಳ್ಳಲು ಕೊಂಚ ಹೊತ್ತು ಬೇಕಾದರೆ ಅದನ್ನು ಅವರಿಗೆ ತಿಳಿಸಿ, ಕೆಲವು ದಿನಗಳ ಬಳಿಕ ಮತ್ತೊಂದು ಮಾತುಕತೆ ನಡೆಸಬೇಕೆಂದು ತಿಳಿಸಿ.

ತಲ್ಲಣಕ್ಕೆ ಇರಲಿ ಕಡಿವಾಣ
ಒಂದು ವೇಳೆ ನೀವು ಮಾಡುತ್ತಿರುವ ಕೆಲಸ ನಿಮಗೆ ತುಂಬಾ ಹಿಡಿಸಿದ್ದರೆ ಹಾಗು ಆ ಕಸುಬಿನ ಮೇಲೆ ಉಸಿರನ್ನಿಟ್ಟುಕೊಂಡಿದ್ದರೆ, ಹಿನ್ನೋಟದ ಟೀಕೆಗಳು ‘ತನ್ನತನ‘(ego)ಕ್ಕೆ ಪೆಟ್ಟುಕೊಡುತ್ತವೆ. ಆಗ ಮನಸ್ಸಿಗೆ ತುಂಬಾ ನೋವಾಗುವುದು, ಸಿಟ್ಟು ಬರುವುದು. ಆದರೆ ಈ ತಲ್ಲಣಗಳನ್ನು ಹೊರಹಾಕದಿರುವುದು ತುಂಬಾ ಒಳ್ಳೆಯದು. ಸಿಟ್ಟು ಹಾಗು ಕೊರಗಿನ ತಲ್ಲಣಗಳನ್ನು ಮಾತಿನ ಮೂಲಕ ಹೊರಹಾಕಿದರೆ ಮನಸ್ಸೇನೋ ಹಗುರಾಗುವುದು. ಆದರೆ, ಕೆಲಸ ಮಾಡುವ ಜಾಗದಲ್ಲಿ ಇಂತಹ ತಲ್ಲಣದ ಮಾತುಗಳಿಂದ ಒಳ್ಳೆಯದಕ್ಕಿಂತ ಕೆಟ್ಟದ್ದಾಗುವುದೇ ಹೆಚ್ಚು.

ಹಿನ್ನೋಟದ ಮಾತುಕತೆಯಲ್ಲಿ ನಯವಾಗಿ ನಡೆದುಕೊಳ್ಳಿ, ಒಳ್ಳೆಯ ಪಳಗಿಗರಾಗಿರಿ(professional). ಕೆಲಸದ ಮೇಲಿನ ಟೀಕೆಗಳು ತಿದ್ದಿಕೊಳ್ಳಲು ಆಗುವಂತದ್ದು. ಇದನ್ನು ತಿದ್ದಿಕೊಂಡರೆ ಮತ್ತಶ್ಟು ಮೇಲೇರಲು ಆಗುವುದು ಎಂದು ಅರಿಯಬೇಕು. ಟೀಕೆಗಳಿಗೆ ಬಲಿಯಾಗದೇ ಅವನ್ನು ತಿದ್ದಿಕೊಂಡು ಮತ್ತಶ್ಟು ಮೇಲೇರುವ ಗುಣವನ್ನು ತೋರಿಸಬೇಕು. ಅದು ಒಳ್ಳೆಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ ಎಂದು ಅರಿಗರು ಹೇಳುತ್ತಾರೆ. ಅದಕ್ಕಾಗಿ, ತಲ್ಲಣಗಳಿಗೆ ಕಡಿವಾಣವಿದ್ದರೆ ಒಳ್ಳೆಯದು.

ಬಿಡುವು ಬೇಕು
ಆಗಶ್ಟೇ ಹಿನ್ನೋಟದ ಮಾತುಕತೆ ಮುಗಿಸಿ ಬಂದಿದ್ದೀರಿ. ಹಿನ್ನೋಟ ಕೆಲವು ಟೀಕೆಗಳು ನಿಮ್ಮನ್ನು ಚಿಂತೆಗೀಡು ಮಾಡಿ ಹುರುಪನ್ನು ಕುಗ್ಗಿಸಿದ್ದರೆ, ಕೆಲಸ ಮಾಡಲು ಒಲವಿಲ್ಲದಿದ್ದರೆ, ಒಂದು ಬಿಡುವನ್ನು ತೆಗೆದುಕೊಳ್ಳಿ. ಕೆಲಸ ಮಾಡುವ ಜಾಗದಿಂದ ಎದ್ದು ಹೊರನಡೆಯಿರಿ. ಕೊಂಚ ಹೊತ್ತು ಹೊರಗೆಲ್ಲಾದರು ಅಲೆದಾಡಿ, ಮನಸ್ಸಿಗೆ ಹಿಡಿಸಿದ ಕೆಲಸವನ್ನು ಮಾಡಿ ಹುರುಪನ್ನು ಮರುಪಡೆದುಕೊಳ್ಳಿ. ಮತ್ತೆ ಹಿತವೆನಿಸಿದ ಮೇಲೆ ಕೆಲಸಕ್ಕೆ ಹಿಂದಿರುಗಿ. ಕೆಲಸವನ್ನು ಮುಗಿಸಿ ಮನೆಗೆ ಬಂದಮೇಲೆ, ಮನೆಯವರು ಇಲ್ಲವೇ ಗೆಳತಿ-ಗೆಳೆಯರೊಂದಿಗೆ ಮಾತನಾಡಿ, ತಲ್ಲಣಗಳನ್ನು ಹಂಚಿಕೊಳ್ಳುವುದಿದ್ದರೆ ಹಂಚಿಕೊಳ್ಳಿ. ಹರಟೆ ಹೊಡೆಯಿರಿ. ಇದರಿಂದ ಮರಳಿ ಕೆಲಸ ಮಾಡುವತ್ತ ಗಮನಹರಿಸಲು ನೆರವಾಗುತ್ತದೆ. ಟೀಕೆಗಳು ತಲೆಯನ್ನು ಕೊರೆಯುವುದು ಕಡಿಮೆಯಾಗುತ್ತದೆ.

ಮುಂದೇನು?
ಹಿನ್ನೋಟದ ಗುಂಗಿನಿಂದ ಹೊರಬಂದಮೇಲೆ, ಮತ್ತೊಮ್ಮೆ ಹಿನ್ನುಣಿಕೆಗಳನ್ನು ನೋಡಿ. ಹೆಚ್ಚಿನ ವಿವರಣೆಗಳು ಬೇಕಾದರೆ ಅವುಗಳ ಪಟ್ಟಿಮಾಡಿಕೊಳ್ಳಿ. ತಪ್ಪುಗಳನ್ನು ತಿದ್ದಿಕೊಂಡು ಮುಂದೆಹೋಗಲು ಹಮ್ಮುಗೆ(plan)ಯೊಂದು ಬೇಕಾದರೆ ಮಾಡಿಕೊಳ್ಳಿ. ಮತ್ತೊಮ್ಮೆ ಮಾತುಕತೆ ನಡೆಸಿ, ಹಿನ್ನುಣಿಕೆಗಳನ್ನು ನೀಡಿದ್ದಕ್ಕೆ ನನ್ನಿ ತಿಳಿಸಿ. ತಪ್ಪುಗಳನ್ನು ಸರಿಪಡಿಸಿಕೊಂಡು, ಬೇಕಾದಲ್ಲಿ ಬದಲಾಗುವ ಬಯಕೆ ಇರುವುದನ್ನು ತೋರಿಸಿ. ಅದಕ್ಕಾಗಿ ಮೇಲುಗರ ನೆರವನ್ನು ಕೋರಿ. ಟೀಕೆಗಳಲ್ಲಿ ಕೆಲವು ನಿಮಗೆ ಸರಿ ಎನಿಸಿದರೆ ಒಪ್ಪಿಕೊಳ್ಳಿ, ಜೊತೆಗೆ ಅದನ್ನು ಹೇಗೆ ಸರಿಪಡಿಸಿಕೊಂಡು ಹೋಗುತ್ತೇನೆ ಎಂಬುದನ್ನು ತಿಳಿಸಿ. ದಿಟವಾದ ತಪ್ಪುಗಳನ್ನು ಒಪ್ಪಿಕೊಳ್ಳುವ ಮನಸ್ಸಿರಲಿ, ಅದನ್ನು ಸರಿಪಡಿಸಿಕೊಳ್ಳುವ ಹುರುಪಿರಲಿ. ಇನ್ನು ಕೆಲವು ಟೀಕೆಗಳನ್ನು ಒಪ್ಪುವುದಿಲ್ಲವಾದರೆ ಅದನ್ನು ಏತಕ್ಕಾಗಿ ಒಪ್ಪುತ್ತಿಲ್ಲ ಎಂದು ವಿವರವಾಗಿ ತಿಳಿಸಿ. ಬೆಂಬತ್ತಿನ (follow up) ಮಾತುಕತೆಯಾಗಿದ್ದರೆ ಆ ಮಾತುಕತೆಗೆ ಹೋಗುವ ಮುನ್ನ ನಿಮ್ಮ ನೆಚ್ಚಿನ ಗೆಳೆತಿ-ಗೆಳೆಯರೊಡನೆ ವಿವರವನ್ನು ಹಂಚಿಕೊಂಡು ಅವರಿಂದಲೂ ಹಿನ್ನುಣಿಕೆಗಳನ್ನು ಪಡೆಯಿರಿ. ಇದು ಬೆಂಬತ್ತಿನ ಮಾತುಕತೆಗೆ ನೆರವಾಗುತ್ತದೆ.

ಟೀಕೆಗಳೇ ಕೊನೆಯಲ್ಲ
ಟೀಕೆಗಳ ಮೇಲೆ ಮನಸ್ಸಿನಲ್ಲಿರುವ ಕಣ್ನೆಲೆ(perspective) ಬದಲಾಗಲಿ. ಟೀಕೆಗಳೇ ಕೊನೆಯಲ್ಲ, ಅವು ಯಾರನ್ನು ಕೊಂದುಬಿಡುವುದಿಲ್ಲ. ತಪ್ಪುಗಳನ್ನು ಸರಿಪಡಿಸಿ ಗೆಲುವಿನತ್ತ ಮುಂದುವರಿಯಲು, ಬದುಕಿನಲ್ಲಿ ಮತ್ತಶ್ಟು ಮೇಲೇರಲು ಹುರಿದುಂಬಿಸುವಂತಹವು ಇವು.

ಯಾವುದೇ ಕೆಲಸದಲ್ಲಿ ಎಲ್ಲವನ್ನೂ ಸರಿಯಾಗಿ ಮಾಡುವುದು ಸಾದ್ಯವಿಲ್ಲ. ಹೊತ್ತು ಕಳೆದಂತೆ ಹಿಂದೆ ಮಾಡಿದ ಕೆಲಸವನ್ನು ಒರೆಗೆ ಹಚ್ಚಿ, ಅದರಲ್ಲಾದ ದಿಟವಾದ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ನಡೆದರೆ ಗೆಲುವು ಕಟ್ಟಿಟ್ಟ ಬುತ್ತಿ. ಹಾಗಾಗಿ, ಕೆಲಸದ ಹಿನ್ನೋಟದ ಟೀಕೆಗಳಿಗೆ ಚಿಂತಿಸುವುದಕ್ಕಿಂತ ಅದನ್ನು ಬೆಳವಣಿಗೆಯ ಬಿರುಗೆ(catalyst)ಗಳನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು.
(ಈ ಮಾಹಿತಿಯು ಬಿಬಿಸಿ ಮಿಂದಾಣದಲ್ಲಿ ಮೂಡಿಬಂದಿತ್ತು. ಇದನ್ನು ಕನ್ನಡದಲ್ಲಿ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.)

(ಚಿತ್ರ ಸೆಲೆ: linkden)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.