ಇಂದು ಬಿಡುಗಡೆಯಾಗಲಿದೆ ಮಾರುತಿ ಸುಜುಕಿ S-CROSS

ಜಯತೀರ‍್ತ ನಾಡಗವ್ಡ.

Scorss1

ಅಗ್ಗದ ಬೆಲೆಯ ಬಂಡಿಗಳು ಹಾಗೂ ಸಾಕಶ್ಟು ನೆರವು ತಾಣಗಳ ಬಲೆ ಹರಡಿಕೊಂಡು ಹೆಸರು ಮಾಡಿರುವ ಮಾರುತಿ ಸುಜುಕಿ ಬಂಡಿಗಳು ಈಗಲೂ ಇಂಡಿಯಾದ ಕೊಳ್ಳುಗರ ಮೊದಲ ಆಯ್ಕೆ. ಇಂಡಿಯಾದಲ್ಲಿ ಮಾರಾಟವಾಗುವ ಪ್ರತಿ ಮೂರನೇ ಕಾರು ಮಾರುತಿ ಸುಜುಕಿ ಕೂಟದ್ದಂತೆ! ಬಲು ಸುದ್ದಿಮಾಡಿರುವ ಮಾರುತಿ ಸುಜುಕಿ ಕೂಟದವರ ಹೊಚ್ಚ ಹೊಸ ಎಸ್‌-ಕ್ರಾಸ್ (S-CROSS) ಎಂಬ ಬಂಡಿ ಇಂದಿನಿಂದ ಇಂಡಿಯಾದ ಬೀದಿಗಳಲ್ಲಿ ಕಂಡು ಬರಲಿದೆ.

Scross2

ಮಾರುತಿ ಸುಜುಕಿ ಕೂಟದವರು ಎಸ್‌-ಕ್ರಾಸ್ ಕಾರನ್ನು ಬಿಡುಗಡೆ ಮಾಡುತ್ತಿರುವ ವಿಶಯವನ್ನರಿತ ಹ್ಯುಂಡಾಯ್ ತನ್ನ ಕ್ರೇಟಾ ಬಂಡಿಯನ್ನು ಅದಕ್ಕೂ ಮೊದಲೇ ಬಿಡುಗಡೆ ಮಾಡಿ ಮಾರುಕಟ್ಟೆಯನ್ನು ಕಬಳಿಸುವ ತರಾತುರಿ ತೋರಿದ್ದು ಈಗ ಹಳೆಯ ಸುದ್ದಿ. ಹೆಚ್ಚು ಕೊಳ್ಳುಗರಿಲ್ಲದೇ ಕಂಗೆಟ್ಟಿದ್ದ ಸೇಡಾನ್ ಮಾದರಿ ಎಸ್‌ಎಕ್ಸ್-4(SX-4) ಅನ್ನು ಮಾರುಕಟ್ಟೆಯಿಂದ ಹಿಂತೆಗೆದು ಎಸ್‌-ಕ್ರಾಸ್ ಎಂಬ ಕಿರು ಹಲಬಳಕೆಯ ಬಂಡಿಯಂತಿರುವ ಕಾರನ್ನು ಸುಜುಕಿ, ಇಂಡಿಯಾದಲ್ಲಿ ಹೊರತರುವ ಮನಸ್ಸು ಮಾಡಿತ್ತು. ಇಂದು ಅದನ್ನು ನಿಜವಾಗಿಸಲಿದೆ ಮಾರುತಿ ಸುಜುಕಿ.

ಇಂಡಿಯಾದಲ್ಲಿ ಗೆಲುವನ್ನೇ ಮಯ್ಗೂಡಿಸಿಕೊಂಡಿರುವ ಸುಜುಕಿ ಕೂಟದವರಿಗೆ ತಿಂಗಳಶ್ಟು ಹಳೆಯದಾದ ಸೆಲೆರಿಯೊ ಡಿಸೇಲ್ ಸೋಲು ತಂದಿದೆ. ಈ ವರುಶದ ಕೊನೆಯಲ್ಲಿ ನಾಲ್ಕಾರು ಹೊಸ ಮಾದರಿ ಬಂಡಿಗಳನ್ನು ನೀಡುವ ಹಮ್ಮುಗೆಯಲ್ಲಿರುವ ಇಂಡಿಯಾದ ಬಲು ದೊಡ್ಡ ಕೂಟಕ್ಕೆ ಈ ಸೋಲು ಹೆಚ್ಚೇನು ಕಾಡಲಿಕ್ಕಿಲ್ಲ.  ಎಸ್‌-ಕ್ರಾಸ್ ಮೂಲಕ ಇನ್ನೊಂದು ಗೆಲುವಿನ ಓಟಕ್ಕೆ ಮಾರುತಿ ಸುಜುಕಿ ಅಣಿಯಾಗುತ್ತಿರಬಹುದು. ಹೊಸ ಎಸ್‌ಕ್ರಾಸ್ ಬಂಡಿಯ ಇಣುಕು ನೋಟ ಇಲ್ಲಿದೆ.

ಬಿಣಿಗೆ (engine):

S_Cross_engines

ಪೆಟ್ರೋಲ್ ಬಿಣಿಗೆಗಳನ್ನೇ ಜೀವಾಳವನ್ನಾಗಿಸಿಕೊಂಡಿರುವ ಮಾರುತಿ ಸುಜುಕಿ ಕೂಟದವರು ಹೊಸ ಎಸ್‌-ಕ್ರಾಸ್ ಬಂಡಿಯಲ್ಲಿ ಪೆಟ್ರೋಲ್ ಬಿಣಿಗೆಯನ್ನು ಅಳವಡಿಸಿಲ್ಲ! ಕೇವಲ ಡೀಸೆಲ್ ಆಯ್ಕೆಯನ್ನಶ್ಟೇ ನೀಡಲಾಗಿದ್ದು ಹಲವರಿಗೆ ಅಚ್ಚರಿ, ನಿರಾಶೆ ಮೂಡಿಸಿದೆ. ಎಸ್‌-ಕ್ರಾಸ್ ಬಂಡಿ ಡಿಡಿಆಯ್‌ಎಸ್-200 ಮತ್ತು ಡಿಡಿಆಯ್‌ಎಸ್-320 ಎರಡು ಡೀಸೆಲ್ ಬಿಣಿಗೆಗಳ ಆಯ್ಕೆಗಳಲ್ಲಿ ಸಿಗಲಿದೆ. ಡಿಡಿಆಯ್‍ಎಸ್-200 ಬಿಣಿಗೆ ಅದೇ ಹಳೆಯ 1.3ಲೀಟರ್ ಅಳತೆಯದ್ದು.

Table1

ಇಂಡಿಯಾ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕೂಟ ಸೇರಿದಂತೆ ಹಲವು ಇತರೆ ಕೂಟಗಳ ಬಂಡಿಯಲ್ಲೂ ಕಾಣಸಿಗುವ 1.3 ಲೀಟರ್‌ನಲ್ಲಿ ಹೆಚ್ಚೇನು ಬದಲಾವಣೆಗಳು ಕಂಡು ಬರುವುದಿಲ್ಲ. ಆದರೆ ಡಿಡಿಆಯ್‌ಎಸ್-320 ಹೆಸರಿನಡಿ 1.6ಲೀಟರ್ ಅಳತೆಯ ಬಿಣಿಗೆಯೊಂದನ್ನು ಸುಜುಕಿ ಕೂಟ ಇಂಡಿಯಾದ ಕೊಳ್ಳುಗರ ಮುಂದಿಡುತ್ತಿದೆ.

ಹೊಸ ಬಿಣಿಗೆಯಲ್ಲಿ ಎರಡು ಮೇಲುಬ್ಬುಗುಣಿಗಳು (Double Overhead Camshafts – DOHC) ಇರಲಿದ್ದು ಕಡಿಮೆ ಉರುವಲಿಗೆ ಹೆಚ್ಚಿನ ಅಳವುತನ (efficiency) ನೀಡಲಿದೆ. 1.6ಲೀಟರ್‌ನ ಬಿಣಿಗೆ 118 ಕುದುರೆಬಲ ಕಸುವು ನೀಡಿ, 320 ನ್ಯೂಟನ್-ಮೀಟರ್‌ಗಳಶ್ಟು ತಿರುಗುಬಲದ (torque) ಮೂಲಕ ಗಾಲಿಗಳನ್ನು ಮುಂದೆ ಸಾಗಿಸಲಿದೆ.

ಸಾಗಣಿ (transmission):
ಎರಡು ಬಿಣಿಗೆಗಳೊಂದಿಗೆ ಓಡಿಸುಗನಿಡಿತದ ಸಾಗಣಿಯನ್ನು ಜೋಡಿಸಲಾಗಿದೆ. ಡಿಡಿಆಯ್‍ಎಸ್-320 ಗೆ 6 ವೇಗದ ಮತ್ತು ಡಿಡಿಆಯ್‌ಎಸ್ -200 ಗೆ 5 ವೇಗದ ಸಾಗಣಿಯನ್ನು ಅಳವಡಿಸಲಾಗಿದೆ. ತನ್ನಿಡಿತದ ಸಾಗಣಿ (automatic transmission) ಇದರಲ್ಲಿ ಕೊಡಲಾಗಿಲ್ಲ.

ಮಯ್ಮಾಟ:
ಎಸ್‌-ಕ್ರಾಸ್ ಬಂಡಿಯನ್ನು ಕಿರು ಹಲಬಳಕೆ ಬಂಡಿಯೆಂಬಂತೆ ಬಿಂಬಿಸಲಾಗಿತ್ತು ಆದರೆ ಯಾವ ಕಡೆಯಿಂದ ಕಣ್ಣಾಡಿಸಿದರೂ ಇದು ಕಿರು ಹಲಬಳಕೆಯ ಬಂಡಿಯಂತೆ ಕಾಣದು. 180 ಮಿಲಿಮೀಟರ್ ಇರುವ ಕಿರಿದಾದ ಬಂಡಿಯ ನೆಲತೆರವು ಕೂಡ ಇದಕ್ಕೆ ಹಿಡಿದ ಕನ್ನಡಿ. ಮಾರುತಿ ಸುಜುಕಿ ಕೂಟದವರು ಇದನ್ನು ಒಪ್ಪಿಕೊಂಡಿದ್ದು ಎಸ್‌-ಕ್ರಾಸ್ ಕಿರು ಹಲಬಳಕೆ ಕಾರಿಗೆ ಸೇರುವುದಿಲ್ಲ ಇದೊಂದು ಪ್ರೀಮಿಯಮ್ ಕ್ರಾಸೋವರ್ (Premium Crossover) ಎಂದು ಕರೆದಿದ್ದಾರೆ.

ಕ್ರಾಸೋವರ್ ಬಂಡಿಗಳೆಂದರೆ ಅತ್ತ ಸೇಡಾನ್ ಆಗಿರದೇ ಇತ್ತ ಹಲಬಳಕೆಯ ಬಂಡಿಗಳಾಗಿರದೇ ಇವೆರಡರ ನಡುವಿನ ಬೆರಕೆಯ ತಳಿ. ಇವುಗಳು ಹೊರದೇಶಗಳಾದ ಅಮೇರಿಕಾ, ಯೂರೋಪ್, ಜಪಾನ್‍ಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಎಸ್‌-ಕ್ರಾಸ್ ಬಂಡಿ ಒಂದು ದೊಡ್ಡ ಹಿಂಗದ (hatchback) ಕಾರು ಎನ್ನಲು ಅಡ್ಡಿಯಿಲ್ಲ.

ಒಂದೇ ಸಾಲಿನಲ್ಲಿ ಓರಣವಾಗಿ ಜೋಡಿಸಲಾಗಿರುವ ಮುಂದೀಪಗಳು (head lamp), ಎರಡು ಪಟ್ಟಿಯ ಮುನ್ಕಂಬಿ ತೆರೆ (front grill), ರೆಕ್ಕೆಯಂತೆ ಚಾಚಿರುವ ಹೊರಗನ್ನಡಿಗಳು ನೋಡುಗರ ಕಣ್ಣಿಗೆ ಅಂದವೆನ್ನಿಸುತ್ತವೆ. ಇಶ್ಟು ಬಿಟ್ಟರೆ ಹೊರ ಮಯ್ಮಾಟದಲ್ಲೇನು ಮೋಡಿ ಮಾಡದ ಎಸ್‌-ಕ್ರಾಸ್ ಒಳನೋಟದಲ್ಲಿ ಕೊಳ್ಳುಗರನ್ನು ಸೆಳೆಯಬಲ್ಲುದು.

scross-seats

ಬಂಡಿಯಲ್ಲಿ ನಯವಾದ ಕೂರಿರ‍್ಕೆ ಜವಳಿ (seat upholstery), ಅದಕ್ಕೆ ತಕ್ಕ ತೋರುಮಣೆ ಓಡಿಸುಗನಿಗೆ ಹಿಡಿಸುವಂತಿವೆ. ಕಾಲು ಚಾಚಲು, ತೋಳು ಊರಲು (shoulder room) ಸಾಕಶ್ಟು ಜಾಗ ಮಾಡಿರುವುದು ದೂರದ ಪಯಣಗಳನ್ನು ಹಿತವಾಗಿಡಲಿದೆ. ತಲೆಯೂರಲು ಜಾಗ ಹೆಚ್ಚೇನು ಇಲ್ಲದಿದ್ದರೂ ಪರವಾಗಿಲ್ಲ ಎನ್ನಬಹುದು. ಮದ್ಯಮ ಗಾತ್ರದ ಸರಕು ಚಾಚು, ಕುಟುಂಬವೊಂದರ ಸರಕು ಚೀಲಗಳನ್ನು ಹೊತ್ತೊಯ್ಯಲು ಸಾಕಾಗಬಹುದು. ಬಂಡಿಯ ಪ್ರತಿ ಬಾಗಿಲಿನಲ್ಲಿ ನೀರಿನ ಬಾಟಲಿಯಿಡಲು ಇಡುದಾಣಗಳು (bottle holders), ಮುಂಬಾಗದಲ್ಲಿ ಸರಕು ಗೂಡುಗಳು (glove box) ಹೆಚ್ಚಿನ ಸಾಮಾನುಗಳನ್ನು ಸಾಗಿಸಲು ನಿಮ್ಮ ನೆರವಿಗೆ ಬರಲಿವೆ.

ಎಸ್‌-ಕ್ರಾಸ್ ಅಲ್ಪಾ ಮಾದರಿಗಳಲ್ಲಿ ತಲುಪುದಾರಿಯ ಏರ‍್ಪಾಟು (navigation system), ತಂತಾನೇ ಹವಾಮಾನ ಹಿಡಿತದಲ್ಲಿಡುವ ಏರ‍್ಪಾಟು (auto climate control), ತಂತಾನೇ ಕೆಲಸ ಮಾಡುವ ಒರೆಸುಕಗಳು (automatic wipers), ತಂತಾನೇ ಶುರುವಾಗುವ ಮುಂದೀಪಗಳು (automatic headlamps) ಮತ್ತು ತಟ್ಟೆ ತಡೆತದ ಏರ‍್ಪಾಟು (disc brake) ಸಿಗಲಿದೆ. ಇದಲ್ಲದೇ ಬಂಡಿಯಲ್ಲಿ ತಿಳಿನಲಿ ಏರ‍್ಪಾಟು (infotainment) ನೀಡಲಾಗಿದ್ದು ಇದರಿಂದ ನೀವು ನಿಮ್ಮ ಚೂಟಿಯುಲಿಯನ್ನು (smart phone) ಬಂಡಿಯ ತೋರುಮಣೆಗೆ ಜೋಡಿಸಿಕೊಳ್ಳಬಹುದು.

ಎಸ್‌-ಕ್ರಾಸ್‌ನ ಕಿರಿಯ ಸಿಗ್ಮಾ ಮಾದರಿಯಲ್ಲೂ 2 ಗಾಳಿಚೀಲಗಳು ಮತ್ತು ಸಿಲುಕಿನ ತಡೆತದ ಏರ‍್ಪಾಟು (Anti-lock Braking System) ನೀಡಿದ್ದು ಓಡಿಸುಗರ ಕಾಪುವಿಕೆಗೆ (safety) ಮಾರುತಿ ಸುಜುಕಿ ಕೂಟ ಹೆಚ್ಚಿನ ಒತ್ತು ನೀಡಿದ್ದು ಕಂಡು ಬರುತ್ತದೆ.  ಹಿಂಬಾಗದ ಪಯಣಿಗರಿಗೆಂದೇ ಕುಳಿರು ಪೆಟ್ಟಿಗೆಯ ಕಿಂಡಿ (AC vent) ನೀಡದೇ ಇರುವುದು ಕೊರತೆಯಾಗಿ ಎದ್ದು ಕಾಣುತ್ತದೆ.

airbags

ನೀಲಿ, ಕಂದು, ಬೆಳ್ಳಿ, ಬಿಳಿ ಮತ್ತು ಚಾಕಲೇಟ್ ಹೀಗೆ ಅಯ್ದು ಬಣ್ಣಗಳಲ್ಲಿ ಎಸ್‌-ಕ್ರಾಸ್ ದೊರೆಯಲಿದೆ.

ಪಯ್ಪೋಟಿ:
ಈ ತೆರನಾದ ಬೆರಕೆ ತಳಿ ಬಂಡಿಗಳು ಹೆಚ್ಚಾಗಿ ನಮ್ಮ ದೇಶದಲ್ಲಿ ಮಂದಿಯ ಒಲವು ಗಳಿಸಿದ್ದು ಕಡಿಮೆಯೇ. ಕಿರು ಹಳಬಳಕೆಯ ಬಂಡಿಯಲ್ಲದಿದ್ದರೂ ಕೆಲವರು ಹೇಳುವಂತೆ ಎಸ್‌ಕ್ರಾಸ್ ಹ್ಯುಂಡಾಯ್ ಕ್ರೇಟಾಗೆ ಎದುರಾಳಿಯಂತೆ. ಈ ವಾದವನ್ನು ಹಲವರು ಅಲ್ಲಗಳೆದಿದ್ದು, ಎಸ್‌ಕ್ರಾಸ್ ಬೇರೆಯ ಪಂಗಡಕ್ಕೆ ಸೇರಿದೆ ಎಂದಿದ್ದಾರೆ. ಇತ್ತಿಚೀನ ವರುಶಗಳಲ್ಲಿ ಹೊರಬಂದ ಟೊಯೊಟಾ ಲಿವಾ ಕ್ರಾಸ್, ಪೊಲೊ ಕ್ರಾಸ್, ಪಿಯಾಟ್ ಅವೆಂಚುರಾ ಇಂತ ಆಟೋಟ ಒಲವಿಗರ ಕಾರುಗಳಿಗೆ ಕೂಡ ಇದು ಎದುರಾಳಿಯಾಗಬಹುದೇ ಎಂಬ ಕೇಳ್ವಿ ಮೂಡಿಬಂದಿದೆ. ಇದಕ್ಕೆ ಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

ಬೆಲೆ:
ಸುಜುಕಿ ಕೂಟದವರು ಬಂಡಿಯ ಬೆಲೆಯನ್ನು ಹೊರಹಾಕಿಲ್ಲ.  ಕೆಲವು ಮೂಲಗಳ ಪ್ರಕಾರ ೮ ರಿಂದ ೧೩ ಲಕ್ಶಗಳಲ್ಲಿ ಎಸ್‌-ಕ್ರಾಸ್‌ನ ಸಿಗ್ಮಾ, ಅಲ್ಪಾ, ಜೀಟಾ ಎಂಬ ವಿವಿದ ಬಗೆಗಳು ಸಿಗಲಿವೆ.

ಎಸ್‌ಕ್ರಾಸ್‌ಗಳಿಗೆಂದೇ ಮಾರುತಿ ಸುಜುಕಿಯ ನೆಕ್ಸಾ (Nexa) ಎಂಬ ಹೊಸ ಮಳಿಗೆಗಳು ಇಂಡಿಯಾದ ಹಲವೆಡೆ ತಲೆಯತ್ತಿವೆ. ತನ್ನ ಸಿರಿತನದ ಕಾರುಗಳನ್ನು ಮಾರಲು ಮಾರುತಿ ಸುಜುಕಿ ಕೂಟ ಇದೀಗ ಹೊಸತಾಗಿ ನೆಕ್ಸಾ ಎಂಬ ಮಳಿಗೆಗಳ ಬಲೆಯನ್ನು ಇಂಡಿಯಾದ ತುಂಬೆಲ್ಲ ಹೆಣೆಯುತ್ತಿದೆ. ನೆಕ್ಸಾಗಳಲ್ಲಿ ಕಾಣಿಸಿಕೊಳ್ಳಲಿರುವ ಮೊದಲ ಕಾರಾಗಿ ಎಸ್‌ಕ್ರಾಸ್ ದೊರೆಯಲಿದ್ದು ಮುಂಬರುವ ದಿನಗಳಲ್ಲಿ ಹೆಚ್ಚು ಬೆಲೆಯ ಸಿಯಾಜ್ (Ciaz), ಗ್ರ್ಯಾಂಡ್ ವಿಟಾರಾ (Grand vitara) ಮಾದರಿಗಳು ನೆಕ್ಸಾದಲ್ಲಿರಲಿವೆ ಎಂಬ ಸುದ್ದಿ ಹೊರಬಿದ್ದಿದೆ.

ಎಸ್‌-ಕ್ರಾಸ್‌ನ ವಿವಿದ ಪರಿಚೆಗಳನ್ನು ಕೆಳಕಂಡ ಪಟ್ಟಿಯಲ್ಲಿ ನೋಡಬಹುದು.

Table2

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.marutisuzuki.com, www.autocarindia.com, www.zigwheels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications