ನೀರು – ಏನಿದರ ಗುಟ್ಟು?
– ರಗುನಂದನ್.
ಮುಂಚಿನಿಂದಲೂ ಮನುಶ್ಯನಿಗೆ ಬೂಮಿಯನ್ನು ಬಿಟ್ಟು ಬೇರೆಡೆ ಜೀವಿಗಳು ಇವೆಯೇ ಎಂಬ ಕುತೂಹಲ ಇದ್ದೇ ಇದೆ. ಮಂಗಳ ಮತ್ತು ಶುಕ್ರ ಸುತ್ತುಗಗಳಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನ ಸಾಕಶ್ಟು ನಡೆದಿದೆ. ನೇಸರಕೂಟದಾಚೆಗೂ(solar system) ಜೀವಿಗಳು ಇವೆಯೇ ಎಂಬ ಕೇಳ್ವಿ ಆಗಾಗ ಅರಿಗರ ತಲೆ ಹೊಕ್ಕಿದೆ. ಇದಕ್ಕೆ ಸಾಕಶ್ಟು ಅರಕೆ ಕೂಡ ನಡೆದಿದೆ, ನಡೆಯುತ್ತಲೂ ಇದೆ.
ಜೀವಿಗಳು ಇರಬಹುದೇ ಎಂಬ ಪ್ರಶ್ನೆಯನ್ನು ಇನ್ನೊಂದು ಬಗೆಯಲ್ಲಿ ನೋಡಿದರೆ – ಜೀವಿಗಳು ಹುಟ್ಟಿ ಬೆಳೆಯುವುದಕ್ಕೆ ಮುಕ್ಯವಾದ ಕಾರಣಗಳಾವವು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅಂದರೆ ಆ ನೆಲದಲ್ಲಿ ಬೂಮಿಯಲ್ಲಿ ಇರುವಂತಹ ಕಾವಳತೆ(temperature), ಗಾಳಿ, ನೀರು ಮುಂತಾದವುಗಳು ಇರಬೇಕಾಗುತ್ತದೆ. ಹಾಗಾಗಿ ಅರಿಗರು ಸಾಮಾನ್ಯವಾಗಿ ಹೊಸ ನೆಲಗಳನ್ನು ಹುಡುಕುವಾಗ ಅಲ್ಲಿ ನೀರಿನ ಇರುವಿಕೆಯ ಕುರುಹುಗಳಿವೆಯೇ ಎಂದು ಮೊದಲು ಹುಡುಕುತ್ತಾರೆ. ಬೂಮಿಯಲ್ಲಿ ಗಿಡ ಮರಗಳು ಪ್ರಾಣಿ ಪಕ್ಶಿಗಳು ಇರುವುದೇ ನೀರಿನಿಂದ ಎಂಬ ಸಾಮಾನ್ಯ ತಿಳುವಳಿಕೆ ಎಲ್ಲರಿಗೆ ಇರುತ್ತದೆ. ಈ ನೋಟದಲ್ಲಿ ನೋಡಿದಾಗ ನೀರು ವಿಶೇಶ ವಸ್ತು ಎನಿಸುತ್ತದೆ.
ಬೇರೆ ಎಲ್ಲಾ ಹರಿಕಗಳಿಗೆ (fluid) ಹೋಲಿಸಿದರೆ ನೀರು ಯಾಕೆ ಬೇರೆ ಮತ್ತು ಅದರಿಂದ ಜೀವಿಗಳಿಗೆ ಹೇಗೆ ಒಳಿತು ಎಂಬುದನ್ನು ಅರಿಮೆಯ ನೋಟದಿಂದ ನೋಡುವ ಒಂದು ಮೊಗಸು ಈ ಬರಹದ ಕಟ್ಟು.
ಒಂದು ನೀರಿನ ಅಣುಕೂಟದಲ್ಲಿ(molecule) ಎರಡು ಹೈಡ್ರೋಜನ್ ಅಣು ಮತ್ತು ಒಂದು ಆಕ್ಸಿಜನ್ ಅಣುವಿರುತ್ತದೆ. ಇವು ಒಂದಕ್ಕೊಂದು ಹೇಗೆ ಅಂಟಿಕೊಂಡಿವೆ ಎಂಬುದನ್ನು ಆಮೇಲೆ ನೋಡೋಣ. ಸೋಜಿಗವೆಂದರೆ ಬೇರೆ ಹೈಡ್ರೋಜನ್ ಉಳ್ಳ ಅಣುಕೂಟಗಳು (ಮೀತೇನ್, ಅಮೋನಿಯಾ, ಹೈಡ್ರೋಜನ್ ಸಲ್ಪೈಡ್) ಬೂಮಿಯ ಕಾವಳತೆ ಮತ್ತು ಒತ್ತಡದಲ್ಲಿ (atmospheric temperature and pressure) ಆವಿಯ(gaseous) ರೂಪದಲ್ಲಿ ಇರುತ್ತವೆ. ಆದರೆ ನೀರು ಮಾತ್ರವೇ ಹರಿಕದ ರೂಪದಲ್ಲಿರುತ್ತದೆ! ಹಾಗಾಗಿ ನೀರಿನ ಅಣುಕೂಟಗಳಿಗೆ ಒಂದಕ್ಕೊಂದು ಅಂಟಿಕೊಳ್ಳುವ ಸೆಳೆತ ಹೆಚ್ಚಿದೆ ಎಂದು ಅರಿಯಬಹುದು.
ನೀರಿಗೆ ಬಿಸುಪಿನ ಅಳವು (heat capacity) ಹೆಚ್ಚಿರುತ್ತದೆ (ಅಂದರೆ ಹೆಚ್ಚು ಕಾವು ಒದಗಿಸಿದಶ್ಟು ಕಾವಳತೆ ಕೂಡಲೆ ಏರುವುದಿಲ್ಲ). ಈ ಗುಣದಿಂದಾಗಿ ನೀರಿನ ಒಡಲುಗಳಾದ ಕಡಲುಗಳು, ನೇಸರನಿಂದ ಬರುವ ಕಾವನ್ನು ಚೆನ್ನಾಗಿ ಮರುಹಂಚಿಕೆ ಮಾಡುತ್ತವೆ ಮತ್ತು ಬೂಮಿಯ ತಾಪವನ್ನು ಒಬ್ಬಗೆಯಾಗಿ ಇರಿಸುತ್ತವೆ. ಇದು ಜೀವಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ.
ಬೇರೆಲ್ಲಾ ಹರಿಕಗಳು ತಂಪಾಗಿಸಿದಾಗ ಕುಗ್ಗುತ್ತವೆ ಮತ್ತು ಗಟ್ಟಿಯಾಗುತ್ತವೆ ಆದರೆ ನೀರಿನ ರೂಪವಾದ ಮಂಜುಗಡ್ಡೆ (ice) ತಂಪಾಗಿಸಿದಾಗ ಹಿಗ್ಗುತ್ತದೆ ಮತ್ತು ತೇಲುತ್ತದೆ. ಇದರಿಂದ ಕೆರೆ ಕೊಳಗಳು ಕೆಳಗಿನಿಂದ ಗಟ್ಟಿಯಾಗದೇ ಮಂಜುಗಡ್ಡೆ ಬರಿಯ ನೀರಿನ ಮೇಲೆ ತೇಲುತ್ತದೆ. ಇದರಿಂದ ನೀರಿನ ಜೀವಿಗಳಿಗೆ ಬೇಕಾದ ಕಾವಳತೆ ಸಿಗುತ್ತದೆ.
ನೀರಿಗೆ ಸಾಕಶ್ಟು ಬಗೆಯ ವಸ್ತುಗಳನ್ನು ಕರಗಿಸಿಕೊಳ್ಳುವ ಕಸುವು ಇದೆ. ಇದರಿಂದಾಗಿ ಜೀವಿಗಳಿಗೆ ಬೇಕಾಗುವ ಹಲಬಗೆಯ ಪೊರೆತ(nutrients)ಗಳನ್ನು ಸಾಗಿಸುವ ಶಕ್ತಿ ನೀರಿಗಿದೆ. ನೀರಿಗೆ ಮಿನ್ತುಣುಕುಗಳನ್ನು ಅಡಗಿಸಿಕೊಳ್ಳುವ ಅಳವಿಲ್ಲದಿದ್ದರೆ ಗಿಡ ಮರಗಳಲ್ಲಿ ಬೆಳಕಿನೊಂದುಗೆ(photosynthesis) ಆಗುತ್ತಲೇ ಇರಲಿಲ್ಲ. ನೀರಿಗೆ ಹೆಚ್ಚಿನ ಮಟ್ಟದ ಮೇಲ್ಮೈ ಎಳೆತ(surface tension) ಇರುವ ಕಾರಣದಿಂದ ಎಶ್ಟೇ ಉದ್ದ ಇರುವ ಮರಕ್ಕೂ ಮರದೆಸರನ್ನು(sap) ಸಾಗಿಸಬಲ್ಲದು.
ನೀರಿಗೆ ಯಾಕೆ ಈ ಬಗೆಯ ಗುಣಗಳಿವೆ ಎಂದು ಮುಂದಿನ ಬರಹದಲ್ಲಿ ತಿಳಿದುಕೊಳ್ಳೋಣ…
(ತಿಟ್ಟಸೆಲೆ: unrth.com)
1 Response
[…] ಕಳೆದ ಬರಹದಲ್ಲಿ ತಿಳಿದುಕೊಂಡಂತೆ ನಮ್ಮ ಸುತ್ತಣದಲ್ಲಿರುವ ವಸ್ತುಗಳಲ್ಲೇ ನೀರು ವಿಶೇಶವಾದುದು. ಆದರೆ ವಿಶೇಶವಾದ ಗುಣಗಳು ನೀರಿಗೇ ಏಕೆ ಇವೆ ಎಂಬುದು ಕುತೂಹಲವಾದುದು. ಇದಕ್ಕೆ ಕಾರಣ ಅದರ ಅಣುಗಳು ಒಂದಕ್ಕೊಂದು ಹೊಂದಿಕೊಂಡಿರುವ ಬಗೆ. ಮುಂಚೆ ಹೇಳಿದ ಹಾಗೆ ಹೈಡ್ರೋಜನ್ ಎಣೆಯ ನಿರುಗೆಯು (hydrogen bonding arrangement) ನೀರು ಈ ರೀತಿ ಇರುವುದಕ್ಕೆ ಕಾರಣ. […]