ಆರೋಗ್ಯಕ್ಕೆ ನೀರು

– ಶ್ಯಾಮಲಶ್ರೀ.ಕೆ.ಎಸ್.

ಇತ್ತೀಚೆಗೆ ಸ್ನೇಹಿತರೊಬ್ಬರಿಗೆ ಕೈ ಕಾಲು ಮುಕ ಊದಿಕೊಳ್ಳುತ್ತಿತ್ತು. ವೈದ್ಯರ ಬಳಿ ಹೋಗಿ ತಪಾಸಣೆ ನಡೆಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲುಗಳು(ಹರಳು) ಶೇಕರಣೆಯಾಗಿ ಸೋಂಕು ಉಂಟಾಗಿದೆಯೆಂದು ತಿಳಿಯಿತು. ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿರುವುದೂ ಒಂದು ಕಾರಣವಾಗಿತ್ತು. ಈ ಕಲ್ಲುಗಳು ಅನಗತ್ಯವಾದ ಕನಿಜಾಂಶ, ಕ್ಯಾಲ್ಸಿಯಂ, ಯೂರಿಕ್ ಆಮ್ಲಗಳಿಂದ ಕೂಡಿದುದಾಗಿದೆ. ನೀರಿನ ಹೊರತಾಗಿ ಕೆಲವು ಕುರುಕಲು(ಜಂಕ್ ಪುಡ್) ತಿಂಡಿ ತಿನಿಸುಗಳ ಸೇವನೆಯಿಂದಲೂ, ಬೀಜಯುಕ್ತ ಆಹಾರ ಪದಾರ‍್ತಗಳಿಂದಲೂ ಮೂತ್ರಪಿಂಡಗಳಲ್ಲಿ ಹರಳುಗಳಾಗುವುದೆಂದು ಹೇಳಲಾಗುತ್ತದೆ. ಇಂತಹ ಬೇಡವಾದ ವಸ್ತುಗಳನ್ನು ಮೂತ್ರದ ಮುಕಾಂತರ ಹೊರಹಾಕಲು ನೀರಿನ ಪಾತ್ರ ಪ್ರಮುಕವಾಗಿದೆ. ಮೂತ್ರಕೋಶಗಳಲ್ಲಿ ಕಲ್ಲುಗಳು ಚದುರಿದಾಗ ಆಗುವ ಬೇನೆ ಅಶ್ಟಿಶ್ಟಲ್ಲ. ಅನುಬವಿಸಿದವರಿಗೆ ತಿಳಿದಿರುತ್ತದೆ ಆ ನರಕಯಾತನೆ.

ನಮ್ಮ ದೇಹದ ಆರೋಗ್ಯಕ್ಕೆ ಪೌಶ್ಟಿಕ ಆಹಾರ ಎಶ್ಟು ಮುಕ್ಯವೋ, ನೀರಿನ ಸೇವನೆ ಸಹ ಅಶ್ಟೇ ಮುಕ್ಯ. ಮಾನವನ ಶರೀರವು ಸುಮಾರು ನೂರಕ್ಕೆ 60 ರಿಂದ 70 ರಶ್ಟು ಬಾಗ ನೀರಿನಿಂದಲೇ ಆವ್ರುತವಾಗಿದೆ. ಇಂತಹ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಯಾಗುವುದು ಅತೀ ಅವಶ್ಯಕ. ಬರೀ ಮೂತ್ರಪಿಂಡವಶ್ಟೆ ಅಲ್ಲ, ದೇಹದ ಎಲ್ಲಾ ಅಂಗಾಂಗಳಿಗೂ ನೀರು ಬಹಳ ಅವಶ್ಯಕ. ಹಸಿವಾದಾಗ, ಬಾಯಾರಿಕೆ ಉಂಟಾದಾಗ ಹೇಗೆ ನೀರನ್ನು ಕುಡಿಯಲು ಬಯಸುತ್ತೇವೆಯೋ ಹಾಗೆಯೇ ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತವು ಸರಾಗವಾಗಿ ಹರಿಯಲು, ನಿರ‍್ಜಲೀಕರಣದಿಂದ ಮುಕ್ತರಾಗಲು, ದೇಹದ ಸಮತೋಲನ ಕಾಪಾಡಲು ನೀರು ತುಂಬಾ ಮುಕ್ಯ,. ದೇಹದ ಚಯಾಪಚಯ ಕ್ರಿಯೆಗಳಿಗೆ, ರಕ್ತ ಹೀನತೆಗೆ ನೀರು ಕುಡಿಯುವುದು ಅನಿವಾರ‍್ಯ. ದೇಹದ ಉಶ್ಣತೆಯನ್ನು ನಿಯಂತ್ರಿಸಲು, ಆಹಾರದ ಜೀರ‍್ಣಕ್ರಿಯೆಗೆ ನೀರು ಬಹಳ ಅಗತ್ಯ. ದೇಹದ ಚರ‍್ಮವು ತ್ಯಾಜ್ಯ ವಸ್ತುಗಳನ್ನು ಬೆವರಿನ ಮೂಲಕ ಹೊರದೂಡುತ್ತದೆ. ಇದರಿಂದ ಚರ‍್ಮವು ಒಣಗದಂತೆ ಕಾಪಾಡಿ ಹೊಳಪು ಹೆಚ್ಚಿಸಲು ಅಗತ್ಯವಾದ ನೀರು ಕುಡಿಯುವುದು ಬಹಳ ಉಪಯೋಗಕಾರಿ.

ದಿನಕ್ಕೆ ಕನಿಶ್ಟ ಮೂರರಿಂದ ನಾಲ್ಕು ಲೀಟರ್ ನಶ್ಟು ನೀರನ್ನು ಕುಡಿಯುವುದೊಳ್ಳೆಯದು ಎಂದು ಹೇಳಲಾಗುತ್ತದೆ. ಪ್ರತಿಗಂಟೆಗೊಮ್ಮೆ ಒಂದು ಲೋಟ ನೀರನ್ನು ಕುಡಿಯುವುದು ಉತ್ತಮ ಎಂಬುದು ತಜ್ನರ ಅಬಿಪ್ರಾಯ. ಮಕ್ಕಳಿಗೆ ಇದರ ಅರಿವಿಲ್ಲದಿರುವುದರಿಂದ ಹಿರಿಯರೇ ಅವರಿಗೆ ನೀರನ್ನು ಕುಡಿಸುವುದು, ಕುಡಿಯಲು ಹೇಳುವುದು ಒಳಿತು. ಬೆಳಗ್ಗೆ ಎದ್ದೊಡನೆ ನೀರು ಕುಡಿಯುವ ಅಬ್ಯಾಸ ಬಹಳ ಒಳ್ಳೆಯದೆಂಬುದಾಗಿ ಹೇಳಲಾಗುತ್ತದೆ. ನಾವು ಆಹಾರ ಸೇವಿಸುವಾಗ ಬಳಿಯಲ್ಲಿಯೇ ನೀರನ್ನು ಇಟ್ಟಕೊಳ್ಳುವುದನ್ನು ರೂಡಿಸಿಕೊಂಡರೆ ಒಳ್ಳೆಯದು. ತಿನ್ನುವ ಪದಾರ‍್ತ ಗಂಟಲಿಗೆ ಸಿಲುಕುವುದು, ಬಿಕ್ಕಳಿಕೆ, ನೆತ್ತಿಗೇರುವುದು ಮುಂತಾದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ನೀರು ಅಮ್ರುತವೇ ಸರಿ!

(ಚಿತ್ರ ಸೆಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಚಂದದ ಮಾಹಿತಿ.

ಅನಿಸಿಕೆ ಬರೆಯಿರಿ:

%d bloggers like this: