ವಿದ್ಯಾರ‍್ತಿ ವೇತನದ ಸೋರಿಕೆಗೊಂದು ಕಡಿವಾಣ

ನಾಗರಾಜ್ ಬದ್ರಾ.

scholar

ಹಳ್ಳಿಗಳಿಂದ ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಬಡ ವಿದ್ಯಾರ‍್ತಿಗಳು ವಾಸಿಸಲು ಬೇಕಾದ, ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ‍್ಶಗಳಿಂದ ಕಾಡುತ್ತಿತ್ತು. ಯಾಕೆಂದರೆ ಹಿಂದುಳಿದ ವರ‍್ಗದ ಸರಕಾರಿ ವಸತಿ ನಿಲಯಗಳು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ನಗರಗಳಲ್ಲಿ ಒಂದು ಅತವಾ ಎರಡು ಮಾತ್ರ ಇರುತ್ತವೆ. ಪ್ರತಿಯೊಂದು ತಾಲ್ಲೂಕಿನಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಹಳ್ಳಿಗಳು ಬರುತ್ತವೆ. ಒಂದು ಹಳ್ಳಿಯಿಂದ ಕನಿಶ್ಟ 10 ವಿದ್ಯಾರ‍್ತಿಗಳಾದರು ಹೆಚ್ಚಿನ ವಿದ್ಯಾಬ್ಯಾಸಕ್ಕೆಂದು ತಾಲ್ಲೂಕು ಕೇಂದ್ರಗಳು ಹಾಗೂ ನಗರಗಳಿಗೆ ಬರುತ್ತಾರೆಂದು ಈ ಮೊದಲು ಅಂದಾಜಿಸಿಲಾಗಿದೆ. ಹೀಗಿರುವಾಗ ಒಂದೋ ಎರಡೋ ವಸತಿ ನಿಲಯಗಳಲ್ಲಿ ಎಶ್ಟು ಬಡ ವಿದ್ಯಾರ‍್ತಿಗಳು ವಾಸಿಸಬಹುದು? ನಮ್ಮ ಸರಕಾರವು ಪ್ರತಿ ವರ‍್ಶವು ಹಣದ ಕೊರತೆಯ ನೆಪವೊಡ್ಡಿ ಹೊಸ ವಸತಿ ನಿಲಯಗಳ ನಿರ‍್ಮಾಣದ ಬೇಡಿಕೆಯನ್ನು ತಳ್ಳಿಹಾಕುತ್ತಾ ಬಂದಿದೆ.

ಹಲವಾರು ತಾಲ್ಲೂಕುಗಳಲ್ಲಿ ವಿದ್ಯಾರ‍್ತಿನಿಯರಿಗೆ ಬೇಕಾದ ಪ್ರತ್ಯೇಕವಾದ ವಸತಿ ನಿಲಯಗಳೂ ಇಲ್ಲ. ಇರುವ ಹಿಂದುಳಿದ ವರ‍್ಗದ ಸರಕಾರಿ ವಸತಿ ನಿಲಯಗಳಲ್ಲಿ ಮೆರಿಟ್ ಹಾಗೂ ಈ ವರ‍್ಗದಲ್ಲಿ ಬರುವ ಜಾತಿಗಳ ಆದಾರದ ಮೇಲೆ ಪ್ರವೇಶ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಕೇವಲ ಕೆಲವು ವಿದ್ಯಾರ‍್ತಿಗಳಿಗೆ ಮಾತ್ರ ಪ್ರವೇಶ ಸಿಗುತ್ತದೆ. ಹೆಚ್ಚು ಅಂಕ ಗಳಿಸದ ವಿದ್ಯಾರ‍್ತಿಗಳ ಗೋಳು ಕೇಳುವವರಿಲ್ಲ.
1) ಕೆಲವರು ತಮ್ಮ ಬಂದುಗಳ ಮನೆಯಲ್ಲಿ ಇರುವ ಏರ‍್ಪಾಡು ಮಾಡಿಕೊಳ್ಳುತ್ತಾರೆ.
2) ಕೆಲವು ವಿದ್ಯಾರ‍್ತಿಗಳು ಸೇರಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಾರೆ. ಆ ಕೋಣೆಯ ಬಾಡಿಗೆ ನೀಡಲು ಹಾಗೂ ಊಟಕ್ಕೆ ಹಣವನ್ನು ಹೊಂದಿಸಲಾಗದೆ ಪರದಾಡುವುದೂ ಇದೆ. ಆದ್ದರಿಂದ ಕಾಲೇಜು ಮುಗಿದ ಮೇಲೆ ಸಂಜೆಯ ಸಮಯದಲ್ಲಿ ಕಿರಾಣಿ ಅಂಗಡಿಗಳಲ್ಲಿ, ಮೇಡಿಕಲ್ ಅಂಗಡಿಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ ಕೆಲಸವನ್ನು ಮಾಡುತ್ತಾರೆ.
3) ಎಶ್ಟೋ ವಿದ್ಯಾರ‍್ತಿಗಳು ಬಿಡುವಿನ ಹೊತ್ತಿನಲ್ಲಿ ಕೆಲಸ ಮಾಡುವುದರಿಂದ ವಿದ್ಯಾಬ್ಯಾಸದ ಕಡೆಗೆ ಹೆಚ್ಚು ಗಮನ ಕೊಡಲಾಗದೆ ಪರೀಕ್ಶೆಯಲ್ಲಿ ಹಿಂದುಳಿಯುತ್ತಾರೆ.
4) ತುಂಬಾ ಬಡ ವಿದ್ಯಾರ‍್ತಿಗಳು ವಿದ್ಯಾಬ್ಯಾಸವನ್ನು ಅರ‍್ದಕ್ಕೆ ನಿಲ್ಲಿಸಿದ್ದಾರೆ.

ಈ ಹಿಂದೆ, ಪ್ರತಿ ವರ‍್ಶ ಸರಕಾರವು ಸರ‍್ಕಾರಿ/ಸರ‍್ಕಾರಿ ಅನುದಾನಿತ ಕಾಲೇಜುಗಳಲ್ಲಿ ಓದುವ ಬಡ ವಿದ್ಯಾರ‍್ತಿಗಳಿಗೆ ನೀಡುವ ವಿದ್ಯಾರ‍್ತಿ ವೇತನವು ವಿದ್ಯಾರ‍್ತಿಗಳಿಗೆ ಸರಿಯಾಗಿ ತಲುಪುತ್ತಿರಲಿಲ್ಲ. ಅದರಲ್ಲಿಯೂ ಬ್ರಶ್ಟಾಚಾರ ನಡೆಯುತ್ತಿತ್ತು. ಕಾಲೇಜಿನಲ್ಲಿ ಕೇಳಿದರೆ ಅವರು ಸರಕಾರದಿಂದ ಇನ್ನೂ ಹಣ ಬಂದಿಲ್ಲ ಎಂದು ಕಾರಣ ಹೇಳುತ್ತಿದ್ದರು. ಸರಕಾರದ ಇಲಾಕೆಯಲ್ಲಿ ಕೇಳಿದರೆ ವಿದ್ಯಾರ‍್ತಿ ವೇತನದ ಹಣವನ್ನು ಕಾಲೇಜಿಗೆ ನೀಡಲಾಗಿದೆ ಅಂತ ಹೇಳುತ್ತಿದ್ದರು. ಬಡ ವಿದ್ಯಾರ‍್ತಿಗಳಿಗೆ ಸೇರಬೇಕಾದ ದುಡ್ಡನ್ನು ಯಾರು ನುಂಗುತ್ತಿದ್ದರೋ ಏನೋ ಆ ದೇವರೇ ಬಲ್ಲ.

ಇನ್ನು ಶಾಲೆಗಳ ಪರಿಸ್ತಿತಿ ಇದಕ್ಕಿಂತ ಬೇರೆಯಾಗಿರಲಿಲ್ಲ. ಯಾವುದೇ ಸರ‍್ಕಾರಿ ಶಾಲೆಗಳಲ್ಲಿ/ಅನುದಾನಿತ ಸರ‍್ಕಾರಿ ಶಾಲೆಗಳಲ್ಲಿ 2 ರಿಂದ 10 ನೇ ತರಗತಿಯಲ್ಲಿ ಓದುತ್ತಿದ್ದ ಬಡ ವಿದ್ಯಾರ‍್ತಿಗಳಿಗೆ, ಸರಕಾರವು 200 ರಿಂದ 1000 ರೂಪಾಯಿಯವರೆಗೆ ವಿದ್ಯಾರ‍್ತಿ ವೇತನವನ್ನು ನೀಡುತ್ತದೆ. ಆದರೆ ಅದು ಸರಿಯಾಗಿ ವಿದ್ಯಾರ‍್ತಿಗಳ ಕೈ ಸೇರುತ್ತಿರಲಿಲ್ಲ. ಹಿಂದುಳಿದ ವರ‍್ಗಗಳ ಕಲ್ಯಾಣ ಇಲಾಕೆಯು ಪ್ರತಿ ವರ‍್ಶವು ವಿವಿದ ಕೋರ‍್ಸ್ ಗಳಿಗೆ ಪ್ರವೇಶ ಪಡೆಯುವ, ಹಾಗು ಈಗಾಗಲೇ ಓದುತ್ತಿರುವ ಹಿಂದುಳಿದ ವರ‍್ಗದ ಬಡ ವಿದ್ಯಾರ‍್ತಿಗಳಿಗೆ ವಿದ್ಯಾರ‍್ತಿ ವೇತನವನ್ನು ನೀಡುತ್ತದೆ. ಆದರೆ ಅದರಲ್ಲಿಯೂ ಬ್ರಶ್ಟಾಚಾರ ನಡೆಯುತ್ತಿತ್ತು. ಈ ಬ್ರಶ್ಟಾಚಾರಕ್ಕೆ ಯಾವಾಗ ಕಡಿವಾಣ ಬೀಳುತ್ತದೆ ನಮ್ಮ ಎಂದು ವಿದ್ಯಾರ‍್ತಿಗಳು ಯೋಚಿಸುತ್ತಿದ್ದರು. ಕಡೆಗೂ ಎಚ್ಚೆತ್ತ ನಮ್ಮ ರಾಜ್ಯ ಸರಕಾರದ ಹಿಂದುಳಿದ ವರ‍್ಗಗಳ ಕಲ್ಯಾಣ ಇಲಾಕೆಯು 2013 ರಲ್ಲಿ ‘ವಿದ್ಯಾಸಿರಿ’ ಎಂಬ ಯೋಜನೆಯನ್ನು ಗೋಶಿಸಿತು. ಈ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ‍್ತಿಗಳ ಬ್ಯಾಂಕ್ ಕಾತೆಗಳಿಗೆ ಆನಲೈನ್ ಮೂಲಕ ಹಣವನ್ನು ಜಮಾ ಮಾಡುತ್ತದೆ.

ಈ ಯೋಜನೆಯಲ್ಲಿ ಎರಡು ವಿದಗಳಿವೆ:
1) ಹಿಂದುಳಿದ ವರ‍್ಗಗಳ ಮೆಟ್ರಿಕ್ ನಂತರದ ವಿದ್ಯಾರ‍್ತಿಗಳಿಗೆ “ಊಟ ಮತ್ತು ವಸತಿ ಸಹಾಯ ಯೋಜನೆ”
2) ಶುಲ್ಕ ವಿನಾಯತಿ ಯೋಜನೆ

ಊಟ ಮತ್ತು ವಸತಿ ಸಹಾಯ ಯೋಜನೆ: ಈ ಯೋಜನೆ ಉದ್ದೇಶ ಯಾವುದೇ ಇಲಾಕೆಯ ಸರಕಾರಿ/ಸರಕಾರಿ ಅನುದಾನಿತ ವಿದ್ಯಾರ‍್ತಿ ವಸತಿ ನಿಲಯಗಳಿರುವ ಕಾಲೇಜುಗಳಲ್ಲಿ/ವಸತಿ ಕಾಲೇಜುಗಳಲ್ಲಿ, ಪ್ರವೇಶ ದೊರೆಯದ ಹಿಂದುಳಿದ ವರ‍್ಗಗಳ ವಿದ್ಯಾರ‍್ತಿಗಳಿಗೆ, ಊಟ ಮತ್ತು ವಸತಿಗೆ ಸಹಾಯವನ್ನು ಒದಗಿಸುವುದು. ಈ ಯೋಜನೆಯಲ್ಲಿ ವಿದ್ಯಾರ‍್ತಿಗಳನ್ನು ಮೆರಿಟ್ ಆದರಿಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ‍್ತಿಗಳಿಗೆ ಪ್ರತಿ ತಿಂಗಳು 1500 ರೂಪಾಯಿ ಅಂತೆಯೇ ಶೈಕ್ಶಣಿಕ ವರ‍್ಶದ 10 ತಿಂಗಳಿಗೆ ಒಟ್ಟು 15000 ರೂಪಾಯಿಯನ್ನು ವಿದ್ಯಾರ‍್ತಿಗಳ ಬ್ಯಾಂಕ್ ಕಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ವಿದ್ಯಾರ‍್ತಿಗಳು ಅರ‍್ಜಿಯನ್ನು ಆನಲೈನ್ ಮೂಲಕವೇ ಹಾಕಬೇಕು.

ಶುಲ್ಕ ವಿನಾಯತಿ ಯೋಜನೆ: ಈ ಯೋಜನೆಯಲ್ಲಿ ವಿದ್ಯಾರ‍್ತಿಗಳ ಆಯ್ಕೆಯನ್ನು ಮೆರಿಟ್ ಆದರಿಸಿ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆಯಾದ ವಿದ್ಯಾರ‍್ತಿಗಳಿಗೆ ಈ ಕೆಳಗಿನ ಶುಲ್ಕಗಳನ್ನು ವಿದ್ಯಾರ‍್ತಿ ವೇತನದ ರೂಪದಲ್ಲಿ ಮರುಪಾವತಿಸಲಾಗುತ್ತದೆ.
1) ಬೋದನೆಯ ಶುಲ್ಕ
2) ಪ್ರಯೋಗಾಲಯ ಶುಲ್ಕ
3) ಪರೀಕ್ಶಾ ಶುಲ್ಕ
4) ಕ್ರೀಡಾ ಶುಲ್ಕ
5) ಗ್ರಂತಾಲಯ ಶುಲ್ಕ
ಈ ಯೋಜನೆಗೆ ವಿದ್ಯಾರ‍್ತಿಗಳು ಆನಲೈನ್ ಮೂಲಕ ಅರ‍್ಜಿ ಸಲ್ಲಿಸಬೇಕು.

ಇನ್ನು ಸರಕಾರಿ/ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ, ಬಡ ವಿದ್ಯಾರ‍್ತಿಗಳಿಗೆ ನೀಡುವ ವಿದ್ಯಾರ‍್ತಿ ವೇತನವನ್ನು ವಿದ್ಯಾರ‍್ತಿಗಳ ಬ್ಯಾಂಕ್ ಕಾತೆಗಳಿಗೆ ನೇರವಾಗಿ ಜಮಾ ಮಾಡುವ ಉದ್ದೇಶದಿಂದ, ಅಂದಿನ ಯು.ಪಿ.ಎ ಸರಕಾರವು ದೇಶದ ಎಲ್ಲಾ ರಾಶ್ಟ್ರೀಕ್ರುತ ಬ್ಯಾಂಕುಗಳಿಗೆ ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಎಲ್ಲಾ ಶಾಲಾ ವಿದ್ಯಾರ‍್ತಿಗಳಿಗೆ ಉಚಿತವಾಗಿ, ಯಾವುದೇ ಮೊತ್ತವಿಲ್ಲದೇ ಬ್ಯಾಂಕ್ ಕಾತೆಯನ್ನು ತೆರೆಯುವಂತೆ ಅವಕಾಶ ಮಾಡಿಕೊಡುವಂತೆ ತಿಳಿಸಿತ್ತು. ಆಮೇಲೆ ಸರಕಾರವು ನೀಡುವ ವಿದ್ಯಾರ‍್ತಿ ವೇತನವು ವಿದ್ಯಾರ‍್ತಿಗಳ ಬ್ಯಾಂಕ್ ಕಾತೆಗಳಿಗೆ ನೇರವಾಗಿ ಜಮಾ ಮಾಡುವ ಕ್ರಿಯೆ ಶುರುವಾಯಿತು. ನಮ್ಮ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಕೆಯು ಪರಿಶಿಶ್ಟ ಜಾತಿ ಮತ್ತು ಪರಿಶಿಶ್ಟ ಪಂಗಡಕ್ಕೆ ಸೇರಿದ ಬಡ ವಿದ್ಯಾರ‍್ತಿಗಳಿಗೆ ನೀಡುವ ವಿದ್ಯಾರ‍್ತಿ ವೇತನವನ್ನು ಕಳೆದ ವರ‍್ಶದಿಂದ ವಿದ್ಯಾರ‍್ತಿಗಳ ಬ್ಯಾಂಕ್ ಕಾತೆಗಳಿಗೆ ನೇರವಾಗಿ ಜಮಾ ಮಾಡುತ್ತಿದೆ. ಅಲ್ಪಸಂಕ್ಯಾತರ ಕಲ್ಯಾಣ ಇಲಾಕೆಯು ಕೂಡ ಇದೇ ರೀತಿಯ ವ್ಯವಸ್ತೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಬಡ ವಿದ್ಯಾರ‍್ತಿಗಳಿಗೆ ನೀಡುತ್ತಿರುವ ವಿದ್ಯಾರ‍್ತಿ ವೇತನದಲ್ಲಿ ಆಗುತ್ತಿರುವ ಬ್ರಶ್ಟಾಚಾರವು ಕೊನೆಗೊಂಡಿದೆ.

ನಮ್ಮ ದೇಶದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಡಿಜಿಟಲ್ ಇಂಡಿಯಾ (Digital India) ವನ್ನು ಜುಲೈ 15 ,2015 ರಂದು ಗೋಶಿಸಿದರು. ಈ ಯೋಜನೆಯಲ್ಲಿ ವಿದ್ಯಾರ‍್ತಿ ವೇತನಕ್ಕೆ ಸಂಬಂದಿಸಿದ ಪ್ರಕ್ರಿಯೆಗಳನ್ನು ಮಾಡಲು ನ್ಯಾಶನಲ್ ಸ್ಕಾಲರಶಿಪ್ ವೆಬ್ ಪೋರ‍್ಟಲ್ (National Scholarship Web Portal) ಅನ್ನು ನಿರ‍್ಮಿಮಿಸಲಾಗಿದೆ. ನಮ್ಮ ದೇಶದ ಸರಕಾರಗಳು ವಿದ್ಯಾರ‍್ತಿ ವೇತನದ ಪ್ರಕ್ರಿಯೆಯಲ್ಲಿ ಅದನ್ನು ಉಪಯೋಗಿಸಬಹುದು.

ಆತ್ಮೀಯ ಸ್ನೇಹಿತರೆ ನನ್ನದೊಂದು ಕೋರಿಕೆ, ನಿಮಗೆ ಪರಿಚಯವಿರುವ ಬಡ ವಿದ್ಯಾರ‍್ತಿಗಳಿಗೆ ಈ ಕೆಳಗಿನ ವಿದ್ಯಾರ‍್ತಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ. ಆಗಸ್ಟ್ ತಿಂಗಳಲ್ಲಿ ಎಲ್ಲಾ ವಿದ್ಯಾರ‍್ತಿ ವೇತನಗಳ ಅರ‍್ಜಿಗಳನ್ನು ಕರೆಯಲಾಗುತ್ತದೆ.

1) ಹಿಂದುಳಿದ ವರ‍್ಗಗಳ ಕಲ್ಯಾಣ ಇಲಾಕೆಯ ವಿದ್ಯಾರ‍್ತಿ ವೇತನ – www.karepass.cgg.gov.in
2) ಸಮಾಜ ಕಲ್ಯಾಣ ಇಲಾಕೆಯ ವಿದ್ಯಾರ‍್ತಿ ವೇತನ. ಪರಿಶಿಶ್ಟ ಜಾತಿ ಮತ್ತು ಪರಿಶಿಶ್ಟ ಪಂಗಡಕ್ಕೆ ಸೇರಿದ ವಿದ್ಯಾರ‍್ತಿಗಳಿಗೆ – www.sw.kar.nic.in
3) ಅಲ್ಪಸಂಕ್ಯಾತರ ಕಲ್ಯಾಣ ಇಲಾಕೆಯ ವಿದ್ಯಾರ‍್ತಿ ವೇತನ – www.gokdom.kar.nic.in
4) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಬಿವ್ರುದ್ದಿ ಮಂತ್ರಾಲಯದ ವಿದ್ಯಾರ‍್ತಿ ವೇತನ. (Ministry of Human Resource Development). ಪ್ರತಿ ವರ‍್ಶ ಡಿಗ್ರಿ ಪ್ರವೇಶ ಪಡೆಯುವ ಎಲ್ಲಾ ಜಾತಿಯ ಬಡ ವಿದ್ಯಾರ‍್ತಿಗಳಿಗೆ – www. kar.nic.in/mhrd
5) ಐ.ಟಿ ಕಂಪನಿ ಇನ್ಪೋಸಿಸ್ ನೀಡುವ ವಿದ್ಯಾರ‍್ತಿ ವೇತನ – www. vidyaposhak.org
6) ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ‍್ತಿ ವೇತನ – www. kar.nic.in/pue 
7) ದೀರೂಬಾಯ್ ಅಂಬಾನಿ ವಿದ್ಯಾರ‍್ತಿ ವೇತನ. ಅಂಗವಿಕಲ ವಿದ್ಯಾರ‍್ತಿಗಳಿಗೆ – www.kar.nic.in/dba
8) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅವಾರ‍್ಡ್. ಪರಿಶಿಶ್ಟ ಜಾತಿಯ ವಿದ್ಯಾರ‍್ತಿಗಳಿಗೆ – www. kar.nic.in/abk
9) ಕೇಂದ್ರ ಸರ‍್ಕಾರದ ವಿಜ್ನಾನ ಮತ್ತು ತಂತ್ರಜ್ನಾನ ಸಚಿವಾಲಯ ಮತ್ತು ವಿಜ್ನಾನ ಮತ್ತು ತಂತ್ರಜ್ನಾನ ಇಲಾಕೆ ವತಿಯಿಂದ, ಮೂಲ ವಿಜ್ನಾನ ವಿಶಯದಲ್ಲಿ ಉನ್ನತ ಶಿಕ್ಶಣ ವ್ಯಾಸಂಗ ಮಾಡುವ ವಿದ್ಯಾರ‍್ತಿಗಳಿಗೆ ವಿದ್ಯಾರ‍್ತಿ ವೇತನ (Inspire Scholarship) – www. kar.nic.in/inspire
10) ಮೆರಿಟ್ ಸ್ಕಾಲರಶಿಪ್ – ದ್ವಿತೀಯ ಪದವಿ ಪೂರ‍್ವ ಪರೀಕ್ಶೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ‍್ತಿಗಳಿಗೆ ವ್ರುತ್ತಿ ಶಿಕ್ಶಣ (ಇಂಜಿನಿಯರಿಂಗ್, ವೈದ್ಯಕೀಯ, ಕ್ರುಶಿ) ಶುಲ್ಕವನ್ನು ಸರ‍್ಕಾರ ನೀಡುತ್ತದೆ – www. kar.nic.in/merit
11) ಐ.ಟಿ ಕಂಪನಿ ವಿಪ್ರೊ ಅವರ ಅಜೀಮ್ ಪ್ರೇಮಜೀ ಪೌಂಡೇಶನ್ – www.azimpremjifoundation.org

(ಚಿತ್ರಸೆಲೆ: admissionquest.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: