ಕರಾವಳಿಯ ತಿನಿಸು ಮಾವಿನಹಣ್ಣಿನ ಮೆಣಸ್ಕಾಯಿ

ಆಶಾ ರಯ್.

IMG_0501

ಸಿಹಿ, ಹುಳಿ ಮತ್ತು ಕಾರ ಒಟ್ಟಿಗೆ ಇರೋ ಒಂದು ಅಡಿಗೆ ಎಂದರೆ ದಕ್ಶಿಣ ಕನ್ನಡ ಜಿಲ್ಲೆಯ ವಿಶೇಶ ಮೆಣಸ್ಕಾಯಿ. ಬೆಲ್ಲ ಮತ್ತು ಕಾರ ಹೆಚ್ಚು ಇರೋ ಈ ಅಡಿಗೆಯನ್ನು ಹುಳಿಯಾಗಿರುವ ಯಾವದಾದರು ತರಕಾರಿ ಇಲ್ಲವೇ ಹಣ್ಣು ಹಾಕಿ ಮಾಡಬಹುದು. ಹೆಚ್ಚಾಗಿ ಮಾವಿನಕಾಯಿ, ಮಾವಿನಹಣ್ಣು, ಅನಾನಸ್ ಹಾಕಿ ಮಾಡ್ತಾರೆ. ದಕ್ಶಿಣ ಕನ್ನಡದಲ್ಲಿ ಮದುವೆ, ಸಮಾರಂಬಗಳಲ್ಲಿ ಈ ಮೆಣಸ್ಕಾಯಿ ಇದ್ದೇ ಇರುತ್ತೆ.

ಬೇಕಾದ ಪದಾರ‍್ತಗಳು:
ಚಿಕ್ಕ ಮಾವಿನಹಣ್ಣು: 6
ಎಣ್ಣೆ: 2 ಚಮಚ
ಒಣಮೆಣಸು: 10-12
ಎಳ್ಳು: 2 ಚಮಚ
ಕೊತ್ತಂಬರಿ ಕಾಳು: 2 ಚಮಚ
ಜೀರಿಗೆ: 1 ಚಮಚ
ಮೆಂತ್ಯೆ ಕಾಳು: 1/4 ಚಮಚ
ಅರಿಶಿನ: 1/4 ಚಮಚ
ಬೆಲ್ಲ: 2 ಚಮಚ
ತೆಂಗಿನಕಾಯಿ: 1 ಬಟ್ಟಲು
ಹಿಂಗು: 1 ಚಿಟಿಕೆ
ಉಪ್ಪು: ರುಚಿಗೆ ತಕ್ಕಶ್ಟು

ಮಾಡುವ ಬಗೆ:
ಮಾವಿನಹಣ್ಣನ್ನು ಸರಿಯಾಗಿ ತೊಳೆದುಕೊಳ್ಳಿ. ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ, 2 ಲೋಟ ನೀರು, ಉಪ್ಪು, ಬೆಲ್ಲ ಮತ್ತು ಅರಿಶಿನ ಹಾಕಿ ಸಣ್ಣ ಉರಿಯಲ್ಲಿ 10 ನಿಮಿಶ ಬೇಯಲು ಇಡಿ. ಬಳಿಕ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಒಣಮೆಣಸು, ಕೊತ್ತಂಬರಿ, ಜೀರಿಗೆ, ಎಳ್ಳು, ಮೆಂತ್ಯೆ ಕಾಳನ್ನು ಒಂದೊಂದಾಗಿ ಹುರಿದಿಟ್ಟುಕೊಳ್ಳಿ. ತೆಂಗಿನಕಾಯಿ ತುರಿಯನ್ನು ಕೆಂಪಗೆ ಹುರಿದುಕೊಳ್ಳಿ. ಹುರಿದ ಎಲ್ಲಾ ಮಸಾಲೆ, ತೆಂಗಿನಕಾಯಿಯನ್ನು ಮಿಕ್ಸರ್ ನಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಮಾವಿನಹಣ್ಣಿಗೆ ಸೇರಿಸಿ 1 ಕುದಿ ಬರಿಸಿ ಒಲೆ ಆರಿಸಿ.

ಒಗ್ಗರಣೆಗೆ:
ಎಣ್ಣೆ: 1 ಚಮಚ
ಸಾಸಿವೆ: 1/2 ಚಮಚ
ಒಣ ಮೆಣಸು: 1
ಕರಿಬೇವು: 1 ಎಸಳು
ಹಿಂಗು: 1 ಚಿಟಿಕೆ

ಸಣ್ಣ ಒಗ್ಗರಣೆ ಪಾತ್ರೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಹೊಟ್ಟಿದ ನಂತರ 1 ಮುರಿದ ಒಣಮೆಣಸು, ಕರಿಯಬೇಕು, ಹಿಂಗು ಹಾಕಿ ಒಗ್ಗರಣೆ ಮಾಡಿ ಮಾವಿನ ಪದಾರ‍್ತಕ್ಕೆ ಸೇರಿಸಿ. ರುಚಿಯಾದ ಮೆಣಸ್ಕಾಯಿಯನ್ನು ಅನ್ನದೊಂದಿಗೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: