‘ಅವ್ವ’ನ ಊರಿನ ಮರೆಯದ ರಜೆಗಳು ….

– ಡಾ|| ಅಶೋಕ ಪಾಟೀಲ.

raja-mane

ರಜೆಗೆ ಊರಿಗೆ ತೆರಳೋದೆಂದರೆ ಅದೊಂದು ರೊಟೀನು. ಅಕ್ಟೋಬರ್ ನಲ್ಲಿ ಸರಿಯಾಗಿ ಒಂದು ತಿಂಗಳು ಮತ್ತು ಏಪ್ರಿಲ್ ಮತ್ತು ಮೇ ನ ಸರಿಯಾಗಿ ಎರಡು ತಿಂಗಳು ರಜೆಗಳು ಯಾರು ರೂಲ್ಸ್ ಮಾಡಲಿ ಬಿಡಲಿ, ಕಲಿಮನೆಯ ಮಾಸ್ತರರು ಮತ್ತು ಹುಡುಗ ಹುಡುಗಿಯರಿಗೆ ಈ ರಜೆಯ ರೂಲ್ಸ್ ಅಂತೂ ಪಿಕ್ಸ್. ಮನೆಯಲ್ಲಿ ಅವ್ವನಂತೂ ಸಪ್ಟಂಬರ್ ಕೊನೆ ವಾರದಲ್ಲೇ ಲಗೇಜು ರೆಡಿ ಮಾಡಲು ಅಣಿಯಾಗುತ್ತಿದ್ದಳು. ಅಕ್ಟೋಬರ್ ಪೂರ‍್ತಿ ನಮ್ಮವ್ವನ ತವರುಮನಿಯಲ್ಲಿ. ಅಪ್ಪನ ಮನೆಯಲ್ಲಿ ಅದಾಗಲೇ ನನ್ನ ಗಂಡಜ್ಜ ಗಂಡಜ್ಜಿ ತೀರಿಹೋದದ್ದರಿಂದ, ಅಲ್ಲಿ ಕೇವಲ ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇರುವರಾದ್ದರಿಂದ ಅವ್ವನಿಗೆ ಇಶ್ಟೇ ನೆವ ಸಾಕಿತ್ತು. ಒಂದೋ ಎರಡೋ ದಿನ ಅಲ್ಲಿದ್ದು (ಅಲ್ಲಿರೋ ತರ ಮಾಡಿ) ನನ್ನ ಕರಕೊಂಡು ತವರುಮನೆಗೆ ಬಂದುಬಿಡುತ್ತಿದ್ದಳು. ಅಪ್ಪನೂ ತನ್ನ ಅಣ್ಣನ ಮನೆಯಲ್ಲಿ ಸ್ವಲ್ಪ ದಿನ, ನಮ್ಮವ್ವನ ಮನೆ(ತನ್ನ ಅತ್ತೆಯ ಮನೆ)ಯಲ್ಲಿ ಸ್ವಲ್ಪ ಜಾಸ್ತಿನೇ ದಿನ ಇರುತ್ತಿದ್ದರು. ನಮ್ಮ ಹೆಣ್ಣಜ್ಜಿ (ಅವ್ವನ ಅಮ್ಮ) ಗಟ್ಟಿಮುಟ್ಟಾಗಿದ್ದು ತಮ್ಮ ಅಳಿಯನ ಮೇಲೆ ತುಸು ಹೆಚ್ಚೇ ಅನುರಾಗ ತೋರಿಸುತ್ತಿದ್ದರು. ಹೆಣ್ಣಜ್ಜ ತೀರಿ ತುಂಬಾ ವರ‍್ಶಗಳಾಗಿದ್ದವೆನಿಸುತ್ತದೆ. ಇದ್ದ ಒಬ್ಬ ಮಗಳನ್ನು ಬಂಗಾರದಂತ ಅಳಿಯಗೇ (ಬಣ್ಣವೇನೋ ಬಂಗಾರದಂತಲ್ಲ, ಬಣ್ಣ ಮಾತ್ರ ತುಸು ಕಪ್ಪು) ಕೊಟ್ಟಿದ್ದು ಅವರ ಆನಂದಕ್ಕೆ ಎಣೆಯಿಲ್ಲದಂತಾಗಿಸಿತ್ತು. ಹೀಗೆ ಅಕ್ಟೋಬರ್ ಪಟಪಟನೇ ಸರಿದುಹೋಗುತ್ತಿತ್ತು. ಮುಂದೆ ಮತ್ತೆ ಬೇಸಿಗೆ ರಜೆಗೆ ಎರಡು ತಿಂಗಳು ಪೂರ‍್ತಿ ಅವ್ವನ ಊರಲ್ಲೇ ಜಾಂಡಾ.

ನನ್ನ ಹೆಣ್ಣಜ್ಜಿಗೆ ಮನೆ ತುಂಬಾ ಮೊಮ್ಮಕ್ಕಳು. ಅವ್ವನ ಇಬ್ಬರು ಅಣ್ಣ ತಮ್ಮಂದಿರೆಲ್ಲ ಕೂಡೇ ಇರುತ್ತಿದ್ದರಿಂದ (ಉಳಿದ ನಾಲ್ಕು ಜನ ಬೇರೆ ಬೇರೆ ನೌಕರಿ ನಿಮಿತ್ತ ಬೇರೆ ಊರುಗಳಲ್ಲಿ) ನಮ್ಮ ಸೋದರ ಮಾವರ ಮಕ್ಕಳ ಜೊತೆ ನಾನೊಬ್ಬ ಸೇರಿ ಸುಮಾರು ಏಳು ಜನ ಆಗುತ್ತಿದ್ದೆವು. ರಜೆಗೆ ಅವರೂ ಊರಿಗೆ ಬಂದು ಬಿಡುತ್ತಿದ್ದರು. ರಜೆಯಲ್ಲಂತೂ ಯಾವ ಹೋಮವರ‍್ಕು, ಟ್ಯೂಶನ್ನು ಯಾವುದರ ಪರಿವೇ ಇಲ್ಲದೇ ಸ್ವಚ್ಚಂದ ರಜೆಯ ಮಜಾ ಅನುಬವಿಸಿದವರು ನಾವೇ ಇರಬೇಕು. ಈಗಿನೋರ ಪರಿಸ್ತಿತಿಯಂತೂ ಹೇಳಲಾಗದು. ರಜೆ ಎಂದರೇನು? ಎನ್ನುವಂತಾಗಿ ಹೋಗಿದೆ.

ನಮ್ಮಜ್ಜಿ ಕರ‍್ಚಿನಲ್ಲಿ ತುಸು ಜಿಪುಣಿನೇ ಇದ್ದಳೇನೋ ಎನಿಸುತ್ತೆ. ಬೆಳಗ್ಗೆ ಮನೆ ಹತ್ತಿರ ಬರೋ ಬ್ರೆಡ್ಡನ್ನು ಕರೀದಿ ಮಾಡುತ್ತಿರಲಿಲ್ಲ. ಯಾಕೆಂದರೆ ಅವು ರೂಪಾಯಿಗೆ ಎರಡೇ ಇರುತ್ತಿದ್ದವು. ಅಡಿಗೆ ಮನಿ ಕಿಡಕಿ ಕಡೇ ಬಂದು ಅವ ಬೇಕಂತ ಹುಡುಗರು ಎದ್ದಾವನೋ ಅಂತ ಪರೀಕ್ಯೆ ಮಾಡೋಕೇ “ಬ್ರೇಡ್ಡೋ ಬಿಸಿಬಿಸಿ ಬ್ರೇಡ್ಡೋ…” ಅಂತ ವದರಿಬಿಡಾವ. ಅಜ್ಜಿ ಹೊರಗೆ ಓಡಿ ಹೋಗಿ “ಹುಡುಗರಿಗೆ ಬ್ಯಾಟ ಹಚ್ಚಾಕ ಬಂದ್ಯೇನ್ಲಾ…ನಡಿ ಮುಂದ” ಅಂತಿದ್ಲು. ಅವ ಅಜ್ಜಿಯನ್ನು ಶಪಿಸುತ್ತ ಮುಂದಿನ ಓಣಿಗೆ ಹೋಗುತ್ತಿದ್ದ. ಅಶ್ಟರಲ್ಲೇ ನಾವೆಲ್ಲ ಬ್ರೇಡ್ಡು…ಅಂತ ಪಿಚ್ಚಿನ ಕಣ್ಣಲ್ಲಿ ರಾಗ ಶುರುಮಾಡುತ್ತಿದ್ದೆವು. ಅಜ್ಜಿ ನಮ್ಮಲ್ಲೇ ದೊಡ್ಡವನೊಬ್ಬನಿಗೆ ಒಬ್ಬೊಬ್ಬರಿಗೆ ಎರಡರಂತೆ ಎಣಿಸಿ ಊರ ಹೊರಗಿನ ಬಟ್ಟಿಯಿಂದ ಬ್ರೆಡ್ಡನ್ನು ತರಲು ಕಳುಹಿಸುತ್ತಿದ್ದಳು. ಎದ್ದಹಾಸಿಗಿಲೇ ಬ್ರೆಡ್ಡನ್ನು ತರೋದೇ ಮೊದಲ ಕೆಲಸ. ಬಟ್ಟಿಲೇ ಬ್ರೆಡ್ ಯಾಕೆ ತರೋದಂದ್ರೆ, ಅಲ್ಲಿ ಐದು ರೂಪಾಯಿಗೆ ಹನ್ನೆರಡು ಬ್ರೆಡ್!! ಹೋಲ್ ಸೇಲ್ ದರ. ಅಜ್ಜಿಯ ಪಕ್ಕಾ ಲೆಕ್ಕ. ಪ್ರತೀ ಐದು ರೂಪಾಯಿಯ ಬ್ರೆಡ್ ನಲ್ಲಿ ಎರಡು ಬ್ರೆಡ್ ಜಾಸ್ತಿ ಸಿಗುತ್ತಿದ್ದವು. ನಾವೊಂದೈದು ಜನ ಬ್ರೆಡ್ ಗಾಗೇ ಮುಂಜಾನೆ ಪರೇಡ್ ಹೊರಡುತ್ತಿದ್ದೆವು – ಬ್ರೆಡ್ ಪರೇಡ್!

ತುಂಗಬದ್ರೆ ಸೆರಗಿನ ನಮ್ಮೂರಲ್ಲಿ ನಳ ಬಂದಾಗಿದ್ದೇ ನೋಡಿರದ ನಾವು ಅವ್ವನ ಊರಲ್ಲಿ ನೀರಿಗಾಗಿ ಇರೋ ಹಾಹಾಕಾರವನ್ನು ಮರೆಯೋ ಹಾಗಿಲ್ಲ. ಅಜ್ಜಿ ಮನೆಯಿಂದ ಸುಮಾರು ಅರೆ ಕೀಮಿ ದೂರದಲ್ಲಿರೋ ಬಾವಿಯಿಂದ ನೀರು ತರಲು ನಾವೆಲ್ಲ ನಮ್ಮ ಸೈಜಿಗೆ ಸರಿಯಾಗಿ ಹೊಂದೋ ಸೈಜಿನ ಕೊಡಗಳನ್ನು ತಗೊಂಡು ಬ್ರೆಡ್ ನ ಕಾರ‍್ಯಕ್ರಮ ಮುಗಿದ ಕೂಡಲೇ ನೀರಿಗಾಗಿ ವಾಟರ್ ಪರೇಡ್ ನಡೆಸುತ್ತಿದ್ದೆವು. ನಾನು ನಮ್ಮವ್ವ ಊರಲ್ಲಿರೋ ಹಾಗೆ ಬೇಕಾಬಿಟ್ಟಿ ನೀರು ಕರ‍್ಚು ಮಾಡೋದಕ್ಕೆ ಅಲ್ಲಿ ಎಲ್ಲರೂ ಅಡ್ಡಗಾಲು ಹಾಕುತ್ತಿದ್ದರು. “ನಿನ್ನ ಮಗ ನೋಡು, ಐದು ಮಂದಿ ಜಳಕ ಮಾಡೋವಶ್ಟು ನೀರನ್ನ ಒಬ್ಬನ ಕಾಲಿ ಮಾಡ್ಯಾನ, ಈಟದನ, ಎಶ್ಟಿದ್ದಾನಿವ?” ಎಂದು ನನ್ನವ್ವನಿಗೆ ದೂರು ಸಲ್ಲಿಸುತ್ತಿದ್ದರು. ಆದರೆ ಅವ್ವ ಇವನ್ನೆಲ್ಲ ಹಚ್ಚಿಕೊಳ್ಳುತ್ತಿರಲಿಲ್ಲ. ಅಲ್ಲಿ ತಾನು ಮನೆಯ ಒಬ್ಬಳೇ ಮಗಳಾದ್ದರಿಂದ ಆಕೆಗೆ ಯಾರೂ ಎದುರಿಗೆ ಗಟ್ಟಿಯಾಗಿ ಮಾತೂ ಆಡುತ್ತಿರಲಿಲ್ಲ. ಆಕೆಯ ಅಣ್ಣನೂ ಆಕೆಗೆ ಹೆದರುತ್ತಿದ್ದ. ಇಂತದರಲ್ಲಿ ನಮ್ಮ ಅತ್ತೆಯವರಾರೂ ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ. ಅವ್ವನೂ ಅವರೊಟ್ಟಿಗೆ ತುಂಬಾ ಚೆನ್ನಾಗೇ ಇರುತ್ತಿದ್ದಳು. ಅಡುಗೆ ಮನೆಯಲ್ಲಿ ಎಲ್ಲ ಕೆಲಸಗಳಿಗೂ ನೆರವು ನೀಡುತ್ತಿದ್ದಳು. ಆದರೆ ಅವರ ಅಣ್ಣಂದಿರು ಈಕೆ ಕಡಿಂದ ರೊಟ್ಟಿ ಮಾಡಸಕ ಹಚ್ಚಿದ್ರ ಸಿಟ್ಟಿಗೆ ಬರುತ್ತಿದ್ದರು (ರೊಟ್ಟಿಯೇನೋ ಚೆನ್ನಾಗಿ ಮಾಡುತ್ತಿದ್ದಳು!).  ತವರುಮನಿಗೆ ಒಂದೀಟ್ ಆಸರಿಕಿ ಬ್ಯಾಸರಿಕಿ ಅಂತ ಬಂದಿರ‍್ತಾಳ, ಆಕೀ ಕೈಯ್ಲೇ ರೊಟ್ಟಿ ಬಡ್ಯಾಕ್ ಹಚ್ಚೀರೆನು? ಅಂತ ತಮ್ಮ ಹೆಂಡತಿಯರಿಗೆ ಗದರಿಸುತ್ತಿದ್ದರು. ಆದರೆ ಅವ್ವ ಇರಲಿ ಬಿಡು, ನಾನ ಮಾಡ್ತಿನಿ ಅಂದಿದ್ದೆ, ಅವರ ಮ್ಯಾಲ್ಯಾಕ್ ರೇಗ್ತಿ, ನಿಮ್ದೇನು? ಅಂದ ಮ್ಯಾಲೆ ಗಪ್ಪಾಗುತ್ತಿದ್ದರು.

ಅಜ್ಜಿಯ ಮನೆ ಆವರಣದ ಎದುರಿನ ಮನೆಯಲ್ಲಿ ಬ್ರಾಮಣ ಕುಟುಂಬ ವಾಸವಾಗಿದ್ದು ಸದಾ ಮಡಿಯಲ್ಲೇ ಇರುತ್ತಿದ್ದರು. ಯಾವಾಗಲೂ ಅಜ್ಜಿಯೂಂದು ಕಟ್ಟೆ ಮೇಲೆ ಕುಳಿತು ಎದುರಿಗೆ ಯಾರೂ ಹೋದರೂ ಅವರು ಹೋದ ಮೇಲೆ ನೀರು ಚಿಮುಕಿಸುತ್ತಿತ್ತು. ನಮಗೋ ಇದು ಬಲು ಮೋಜಿನ ವಿಚಾರವಾಗಿತ್ತು. ಬೇಕಂತ ಆಕೆಯ ಮುಂದೆ ಪದೇ ಪದೇ ಹಾಯುತ್ತಿದ್ದೆವು. ಬೇಸರವಿಲ್ಲದೇ ಏನೇನೂ ಜಪ ಮಾಡುತ್ತ ಕಮಂಡಲದೊಲಗಿನ ನೀರನ್ನು ಸಿಂಪಡಿಸುತ್ತಿತ್ತು.  ಕೊನೆಗೆ ತಾಳ್ಮೆಗೆಟ್ಟು ಅಜ್ಜಿಗೆ ಲೇ ಗಂಗಿ, ನಿನ್ನ ಮೊಮ್ಮಕ್ಕಳ ಕಾಟ ಅತೀ ಆತವಾ..ಮಕ್ಕಳಾ ಇವು? ಮುಂಡೇ ಗಂಡವು, ಮೈಮೇಲೆ ಹಾಯ್ತವಲ್ಲೇ.ಏನ್ ಮಾಡಕತೀ, ಹೊರಗ ಬಂದ್ ಹೇಳಿ ಹೋಗಲೇ ಅಂತಾ ತನ್ನ ಗೆಳತಿ ಗಂಗಮ್ಮ, ಅಂದರೆ ನನ್ನಜ್ಜಿಯನ್ನು ಸಿಟ್ಟಿನಿಂದ ಕೂಗುತ್ತಿತ್ತು. ಅಜ್ಜಿ ಹೊರಬಂದು ನಮ್ಮನ್ನೆಲ್ಲ ಗದರಿಸಿದ ಮೇಲೆನೇ ಅದಕ್ಕೇ ಸಮಾದಾನವಾಗುತ್ತಿತ್ತು. ಇದೂ ದಿನವೂ ನಡೆಯೋದು ಅಬ್ಯಾಸವಾಗಿತ್ತು.

ವಾರಕ್ಕೊಮ್ಮೆ ಬರೋ ನಳದಲ್ಲಿ ಓಣಿಯವರೆಲ್ಲ ಕೊಡಗಳನ್ನು ಮುಂಜಾವಿನಿಂದಲೇ ಪಾಳೆಗಿಟ್ಟಿರುತ್ತಿದ್ದರು. ಈ ಅಜ್ಜಿ ಮಾತ್ರ ಅಲ್ಲೊಂದು ಇಟ್ಟಂಗಿ ಇಡುತ್ತಿತ್ತು ಪಾಳೆಗೆ. ಕೊಡ ಮೈಲಿಗೆ ಆಗುತ್ತದೆಂದು. ಆದರೆ ಆಕೆಯ ಇಟ್ಟಂಗಿ ಕಲ್ಲನ್ನು ದಾಟಿ ಹತ್ತಾರು ಕೊಡಗಳು ಪಾಳೆ ತಪ್ಪಿಸುತ್ತಿದ್ದವು. ಅಜ್ಜಿ ಲಬೊಲಬೋ ಬಾಯಿ ಬಡಿದುಕೊಳ್ಳುತ್ತ ಹಿಡಿಶಾಪ ಹಾಕುತ್ತಿತ್ತು. ಈಕೆ ಪಾಳೆ ಬಂದರೇ ಮುಗೀತು. ಮೊದಲು ನಳವನ್ನೇ ತೊಳೆಯುತ್ತಿದ್ದಳು. ನಂತರ ಕೊಡ ಇಡೋ ಜಾಗ, ನಂತರ ಕೊಡ, ನಂತರ ಕೊಡಕ್ಕೊಂದು ವಸ್ತ್ರ, ನಳದ ಮೂತಿಗೊಂದು ವಸ್ತ್ರ, ನೊಡುಗರ ತಾಳ್ಮೆ ಮುಗಿದು ವಟ ವಟ ಅನ್ನುತ್ತ ಅಜ್ಜಿಗೆ ಸಾಕುಮಾಡಿಡುತ್ತಿದ್ದರು. ಅಶ್ಟರಲ್ಲಿ ಯಾವನೋ ಒಬ್ಬ ಅಜ್ಜಿಯ ಕೊಡವನ್ನು ಅಚಾನಕ್ಕಾಗಿ ಮುಟ್ಟಿಬಿಡುತ್ತಿದ್ದ!.ಅಲ್ಲಿಗೇ ಮುಗೀತು. ಆ ಎಲ್ಲ ನೀರು ಮಣ್ಣುಪಾಲು. ಅಜ್ಜಿ ಮತ್ತೆ ನಳ ತೊಳೆದು ಯತಾ ಪ್ರಕಾರ ನೀರು ತುಂಬುತ್ತಿತ್ತು..ಯಾಕಾರ ಈ ಅಜ್ಜಿ ಕೊಡ ಮುಟ್ಟಿದೆನಪ್ಪ ಎಂದು ಕೊಡ ಮುಟ್ಟಿದವ ಪಾಪ ಬಹಳ ಪಶ್ತಾತಾಪ ಪಡುತ್ತಿದ್ದ.

ಅಜ್ಜಿ ಮನೆಯಲ್ಲಿ ಆರು ಎಮ್ಮೆಗಳಿದ್ದವು. ಆರು ಎತ್ತುಗಳಿದ್ದವು. ಹೈನಕ್ಕೆನೂ ಕೊರತೆ ಇರುತ್ತಿರಲಿಲ್ಲ. ನನ್ನ ಸೋದರಮಾವನ ಮಗನೊಬ್ಬ ಆಗ ತಾನೇ ಕರೆದ ಬೆಚ್ಚಗಿನ ಹಾಲನ್ನು ಒಂದು ಪೂರ‍್ಣ ಚರಿಗೆ ಕುಡಿದು ಓ..ಬ್ಬ ಎಂದು ಡೇಕರಿಸುತ್ತಿದ್ದ. ಮೊಸರು ತುಪ್ಪವಂತೂ ಬರಪೂರ. ಎಲ್ಲದಕ್ಕೂ ತುಪ್ಪ ಹಾಕಿ ತಿನುವುದನ್ನು ಅಲ್ಲೇ ನಾ ಕಲಿತದ್ದು. ನೀವು ಊಟಕ್ಕೆ ಕುಳಿತರೆ ಏನೂ ಪದಾರ‍್ತ ನೀಡಿದರೂ ತುಪ್ಪ ಹಾಕದಿದ್ದರೆ ಅದು ಪೂರಾ ಎನಿಸುವುದಿಲ್ಲ – ನೀಡುವವರಿಗೆ ಮತ್ತು ಊಟ ಮಾಡುವವರಿಗೆ. ನಮ್ಮ ಮಾವಂದಿರು ಬರ‍್ಜರಿ ಊಟ ಮಾಡುವುದನ್ನು ನೋಡಿ ಕಣ್ ತುಂಬಿಕೊಂಡಿದ್ದೇನೆ. ವಯಸ್ಸಿನಲ್ಲೂ ನನಗೆ ಆಟು ಚಂದ ಊಟ ಮಾಡುವದಕ್ಕೆ ಆಗಲಿಲ್ಲ ಎನ್ನೋ ಕೊರಗು ಈಗಲೂ ಇದೆ.  ಮನೆಗೆ ಬಳಸಿ ಹೆಚ್ಚಿನ ಹಾಲನ್ನು ಹೊರಗೆ ಕೆಲ ಅಂಗಡಿಗಳಿಗೆ ಮೊಮ್ಮಕ್ಕಳ ಮೂಲಕ ಕೊಟ್ಟು ಬರಲು ಹೇಳುತ್ತಿದ್ದಳು. ಮೊಮ್ಮಕ್ಕಳಲ್ಲಿ ಯಾರಾದರೂ ಕೊಟ್ಟು ಬರಲು ಒಲ್ಲೆ ಎಂದು ರಾಗ ತಗೆದರೆ ಏನಾದರೊಂದು ಆಸೆ ತೋರಿಸಿ ಪುಸಲಾಯಿಸಿ ಕೆಲಸ ಸಾದಿಸುತ್ತಿದ್ದಳು.  ಅದರ ಲೆಕ್ಕವನ್ನೂ ಸಣ್ಣ ಡೈರಿಯಂತ ಪುಸ್ತಕದಲ್ಲಿ ಹಚ್ಚಿಡುತ್ತಿದ್ದಳು. ಎಮ್ಮೆ ಕಾಯಲು ಸುತ್ತಲ ಊರಿನ ಕೆಲ ಆಳುಮಕ್ಕಳು ಇರುತ್ತಿದ್ದರೂ, ನಾವೂ ಬುತ್ತಿ ಕಟ್ಟಿಕೊಂಡು ಅವರ ಜೊತೆ ಎಮ್ಮೆ ಕಾಯಲು, ಎಮ್ಮೆ ಹೊಡಕೊಂಡು ಹೊಲಕ್ಕೆ ಹೋಗುತ್ತಿದ್ದೆವು. ಅದರ ಮಜವೇ ಬೇರೆ. ಚಿಕ್ಕ ಊರಲ್ಲಿ ಸ್ವಲ್ಪವೇ ದೂರ ಸಾಗಿದರೆ ಊರು ಮುಗಿದು ಮಡೆ ಹೊಲದ ದಾರಿ ಸಿಗುತ್ತಿತ್ತು. ಅದಕ್ಕೇ ಮಡೆ ಹೊಲ ಅಂತ ಯಾಕನ್ನುತ್ತಿದ್ದರೋ ಗೊತ್ತಿಲ್ಲ. ಅವ್ವನನ್ನು ಕೇಳಬೇಕೆಂದುಕೊಳ್ಳುತ್ತೇನೆ, ಮರೆತುಹೋಗುತ್ತೇನೆ. ಇನ್ನೂಂದು ಪಟ್ಟೀ ಹೊಲಕ್ಕೆ ಟೆಂಗುಂಟಿ ದಾರಿ ಹೊಲ ಎನ್ನುತ್ತಿದ್ದರು. ಸುಮಾರು ಸರ‍್ತಿ ಎಮ್ಮೆಗಳೇ ನಮಗೇ ದಾರಿ ತೋರಿಸುತ್ತಿದ್ದವು. ಸರಿಯಾಗಿ ನಮ್ಮ ಹೊಲದಲ್ಲೇ ಮೇಯುತ್ತಿದ್ದವು. ಅಶ್ಟರಲ್ಲೇ ಆ ತಣ್ಣನೆ ಗಾಳಿ, ಆ ಹೊಲದ ವಾತಾವರಣದಲ್ಲಿ ಯಾವಾಗ ಬುತ್ತಿ ಬಿಚ್ಚುತ್ತೇವೆಯೂ ಎನಿಸಿ ಗಡದ್ದಾಗಿ ಊಟಮಾಡುತ್ತಿದ್ದೆವು. ಕೆಲವೊಮ್ಮೆ ತುಸು ಜಾಸ್ತಿನೇ ಊಟ ಮಾಡಿ, ಬುತ್ತಿಯೇ ಕಡಿಮೆ ಬೀಳುತಿತ್ತು. ಅಕ್ಕ ಪಕ್ಕದ ಹೊಲದವರು ಊಟಕ್ಕೆ ತಮ್ಮ ಊಟದ ಜೊತೆಗೆ ಕೂಡಿಕೊಳ್ಳುತ್ತಿದ್ದರು. ಊರಿಂದ ಬಂದ ನನ್ನನ್ನು ಹೆಚ್ಚು ಅಚ್ಚ ಅಚ್ಚ ಮಾಡುತ್ತಿದ್ದರು. ರುದ್ರವ್ವನ ಮಗ ತೇಟ್ ಅವರ ಅಜ್ಜನ್ನ ಹೋತಾನ್ನೋಡು ಅಂತ ಮಾತಾಡಿಕೊಳ್ಳುತ್ತ ಪಸಂದಾಗೇ ಊಟ ಮಾಡುತ್ತಿದ್ದರು. ಹಾಗಂದರೇನೇ ಏನೋ ಸಂತಸಯೆನಿಸುತ್ತಿತ್ತು. ಅಲ್ಲೇ ವರ‍್ತಿ ನೀರನ್ನೇ ಕುಡಿಯುತ್ತಿದ್ದೆವು. ಕೆಲವೊಮ್ಮೆ ಎತ್ತಿನ ಬಂಡಿಯಲ್ಲಿ ಅದಾಗಲೇ ಕೊಡದಲ್ಲಿ ನೀರಿರುತ್ತಿತ್ತು.  ಕೆಲವೊಮ್ಮೆ ಇಳಿಸಂಜೆ ಹೊತ್ತು ಒಲೆ ಹೂಡಿ ಅಲ್ಲೇ ಎಮ್ಮೆ ಹಾಲು ಕರೆದು ಚಾ ಮಾಡಿದ ನೆನಪು. ಹೊಲದಿಂದ ಸಂಜೆ ಬಂದು ತಾಸುಗಟ್ಟಲೇಲೇ ಅವ್ವನ ಮುಂದೆ ವರದಿ ಒಪ್ಪಿಸುತ್ತಿದ್ದೆ.

ಸಂಜೀಕಡೆ ಅಜ್ಜಿ ಮನೆ ಹತ್ತಿರ ಇರೋ ರಾಮಲೀಂಗೇಶ್ವರ ಗುಡಿಯಲ್ಲಿ ಬಜನಿ. ಸುಮಾರು ಜಾನಪದ ಹಾಡುಗಳು ನಾಲಿಗೆ ಮೇಲೆ ಗುನುಗುನಿಸಲು ಆ ದಿನಗಳಲ್ಲಿ ಬಜನಿ ಮಾಡಿದ್ದಕ್ಕೇ ಇರಬೇಕು. ಅದೊಂದು ಮರೆಯಲಾರದ ದಿವ್ಯ ಅನುಬವವೆನ್ನಲೇ ಬೇಕು. ಹೊಲದ ಕೆಲಸ ಮುಗಿಸಿ ಬಂದ ರೈತಬಾಂದವರೆಲ್ಲ ಕೂಡಿ ದೇವರನ್ನು ಆರಾದಿಸುವ ಆ ಸುಸಮಯಕ್ಕೆ ಏನೆನ್ನಲಿ? ಸುತ್ತಮುತ್ತಲ ಓಣಿಯ ಬಾಂದವರು, ಎಲ್ಲರೂ ಒಂದೇ ಸಮಾಜದವರಾದ್ದರಿಂದ ಎಲ್ಲರ ಮನೆಯೊಳಗೆ ಸಂಬಂದಗಳಲ್ಲೇ ಕೊಡತೊಗೊಳ್ಳೋದು ಮಾಡಿದ್ದರಿಂದ ಎಲ್ಲರೂ ಸಂಬಂದಿಕರೇ ಆಗಿರುತ್ತಿದ್ದರು. ಯಾರೋ ಯಾರಿಗೆ ಕಾಕ, ಆ ಕಾಕ ಇನ್ನಾರಿಗೋ ಮಾವ, ಆ ಮಾವ ಇನ್ನಾರಿಗೋ ದೊಡ್ಡಪ್ಪ,  ಈ ದೊಡ್ಡಪ್ಪ ನನ್ನಂತವರಿಗೆ ದೊಡ್ಡ ಮಾವ, ಇವರೆಲ್ಲರ ನಡುವೆ ನಾನು ಈ ಚಿಗದೊಡ್ಡಪ್ಪಂದಿರ ತಂಗೀ ಮಗ, ಅಳಿಯ, ಮನೆ ತೊಳಿಯ! ಎಲ್ಲರೂ ಕೆಲ ವಾದ್ಯಗಳಲ್ಲಿ ತಕ್ಕ ಮಟ್ಟಿಗೆ ಪರಿಣಿತರು. ಅದ್ ಹೇಗೆ ಕಲಿತರೋ ನಾ ಕಾಣೆ. ಕೆಲವರು ಹಾಡು ಹಾಡಿ ಉಳಿದವರನ್ನು ಕೂಡಿ ಹಾಡಿಸುವ ಪದ್ದತಿ ಇತ್ತು. ತುಂಬಾ ಚಂದದ ಹಾಡುಗಳು ಅಲ್ಲಿ ಪ್ರಸ್ತುತ ಗೊಳ್ಳುತ್ತಿದ್ದವು. ನಮ್ಮೆಲ್ಲ ಹುಡುಗರ ಕೈಯಲ್ಲಿ ತಾಳಗಳಿರುತ್ತಿದ್ದವು. ಇಬ್ಬರು ತಬಲಾ ಬಾರಿಸುತ್ತಿದ್ದರು. ಮುಲ್ಕೀ ಮಾವ ಹಾರ‍್ಮೋನಿಯಂ ಸಾತ್ ಕೊಡುತ್ತಿದ್ದ. ಆವಾಗ ಹಾಡಿರುವ ಕೋಟಿಗೊಬ್ಬ ಶರಣ, ತವಶಿವನ ಕರಣ, ಕಲಬುರಗಿಯ ಶ್ರೀ ಶರಣು ಬಸವನ ಮಾಡೋ ನೀ ದ್ಯಾನ, ಚನಪ್ಪ ಚನಗೌಡ ಹಾಡುಗಳು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತವೆ. ಹಾಡಿನಲ್ಲಿ ಏರಿಳಿತಗಳಿರುತ್ತಿದ್ದವು. ಸುಮಾರು ಒಂದು ತಾಸು ನಡೆದ ಬಜನೆ ನಂತರ ಮಂಗಳಾರತಿ ಪದ ಹಾಡಿ, ಮಂಡಾಳ್ ಕೊಬ್ರಿ ಪ್ರಸಾದ ಸೇವಿಸಿ ಬಜನೆ ಮಂಗಳವಾಗುತ್ತಿತ್ತು. ನಾವು ಮನೆಗೆ ಬಂದು ಗಡದ್ದಾಗಿ ಊಟ ಮಾಡಿ ಮಲಗಿದರೆ ಏಳೋದು ಬೆಳಗ್ಗೆ ಬ್ರೆಡ್ ತಿನ್ನೋಕೆನೇ!.

ನಮ್ಮ ದೊಡ್ಡ ಮಾವನ ಬಗ್ಗೆ ಹೇಳದೇ ಇದ್ದರೆ ಇದೆಲ್ಲ ಬರೆದದ್ದು ಹೊಳ್ಯಾಗ ಹುಂಚಣ್ಣು ತೊಳದಾಂಗ. ಈರನಗೌಡ ನನ್ನ ದೊಡ್ಡ ಮಾವ. ನನ್ನವ್ವನ ದೊಡ್ಡಣ್ಣ. ಕಪ್ಪನೆಯ ದಪ್ಪ ಮೀಸೆಯ ದೊಡ್ಡಾಳು. ಯಾವಾಗಲೂ ಬಿಳಿ ಜುಬ್ಬಾ, ಬಿಳಿ ದೋತ್ರ ಹಾಕಿಕೊಳ್ಳುತ್ತಿದ್ದ. ಹೊಲಕ್ಕೆ ಹೋಗಿ ಬಂದೇ ಜಳಕ ಮಾಡುತ್ತಿದ್ದ. ಮಾತಂತೂ ಸುಸ್ಪಶ್ಟ ಮತ್ತು ಕಡಕ್. ಇಶ್ಟೆಲ್ಲಾ ಕ್ರೆಡಿಟ್ ತೆಗೆದುಕೊಂಡರೂ ನನ್ನವ್ವನ ಮುಂದೆ ತುಂಬಾ ಸಪ್ಪೆಯೆನಿಸುತ್ತಿದ್ದ, ನನ್ನವ್ವನನ್ನು ತುಂಬಾನೇ ಅಚ್ಚ ಮಾಡುತ್ತಿದ್ದ. ಆಕೆ ಸಣ್ಣ ಕೆಲಸ ಮಾಡಿದರೂ ಹೆಂಡತಿ, ಅಂದ್ರ ನಮ್ಮತ್ತಿ ಮ್ಯಾಲೆ ಸಿಡುಕುತ್ತಿದ್ದ. ಬಯಲಾಟದಲ್ಲಿ ನಮ್ಮಾವಂದು ಕಂಸನ ಪಾತ್ರ. ಇಡೀ ಊರಿಗೆ ಇಶ್ಟದ ರಂಗನಟ. ಬಾಗವತರ ಅಚ್ಚುಮೆಚ್ಚಿನ ಪಾತ್ರದಾರಿಯಂತೆ. ಎಲ್ಲ ಸನ್ನಿವೇಶಗಳ ಎಲ್ಲ ಡೈಲಾಗುಗಳೂ ನಿರರ‍್ಗಳ, ಸುಸ್ಪಶ್ಟವಂತೆ. ದುರದ್ರುಶ್ಟವಶಾತ್  ನನಗೆ ಆತ ಆಡಿರುವ ಯಾವ ಬಯಲಾಟಗಳೂ ನೆನಪಿಲ್ಲ. ಅತವಾ ನಾ ನೋಡಿಲ್ಲ. ಅವ್ವ ಹೇಳಿದ್ದನ್ನು ಮಾತ್ರ ಕೇಳಿದ್ದೇನೆ. ಸಹವಾಸ ದೋಶದಿಂದ ಕುಡಿತ ಜೊತೆಯಾಗಿತ್ತು.  ಇಳಿಸಂಜೆ ಮನೆಯಲ್ಲಿರುತ್ತಿರಲಿಲ್ಲ. ಕೆಲವೊಮ್ಮೆ ಬಜನೆಗೆ ನೇರವಾಗಿ ಬಂದು ಜೊತೆಯಾಗಿಬಿಡ್ತಿದ್ದ. ನಮ್ಮಾವ ಬಂದ ಕೂಡಲೇ ಯಾವ ನರಪಿಳ್ಳೆಯಾದರೂ ತಬಲಾ ಬಾರಿಸುತ್ತಿರಲಿ, ಅವ ಎದ್ದು ತಬಲಾ ಇವನಿಗೆ ಬಿಟ್ಟುಕೊಡಬೇಕು, ಏಕೆಂದರೆ ಆಗಲೇ ಮಾವ ಲೈಟಾಗಿ ಟೈಟಾಗಿರುತ್ತಿದ್ದ. ಕಣ್ಣುಗಳು ಕೆಂಪಗಾಗಿರುತ್ತಿದ್ದವು. ಮಾವ ಬಂದೊಡನೆ ಸುಮ್ಮನೆ ಯಾಕಪ್ಪ ಕಿರಿಕಿರಿ ಅಂತ ಬೇಗನೇ ಬಜನೆಗೆ ಮಂಗಳ ಹಾಡುತ್ತಿದ್ದರು. ಏಕೆಂದರೆ ಸ್ವಲ್ಪ ಯಾರಾದರೂ ತಪ್ಪು ಹಾಡಿದಲ್ಲಿ, ವಾದ್ಯ ತಪ್ಪು ನುಡಿಸಿದಲ್ಲಿ ಅವರಿಗೊಂದು ಗತಿ ಕಾಣಿಸಿಬಿಡುತ್ತಿದ್ದ. ಅಲ್ಲ್ಗೇ ಬಜನೀ ಕತಿ ಮುಗೀತಿತ್ತು. ನಮ್ಮೆಲ್ಲರನ್ನೂ ಕರೆದುಕೊಂಡು ಮನೆಗೆ ಬಂದು ಊಟಕ್ಕೆ ಅಣಿಯಾಗುತ್ತಿದ್ದ. ನಾವು ಹೆದರಿ ಸುಮ್ಮನೆ ಇರುತ್ತಿದ್ದೆವು. ತುಂಬಾ ಶಿಸ್ತಿನ ಊಟ ಮಾಡುತ್ತಿದ್ದ. ನಮಗೆಲ್ಲ ಹುಡುಗರಿಗೆ ನಡುನಡುವೆ ಒಂದೊಂದು ತುತ್ತು ಕೊಡುತ್ತಿದ್ದ.  ನಮ್ಮವ್ವ ಬಂದು ಅವರೆಲ್ಲ ಆಮೇಲೆ ಊಟ ಮಾಡ್ತಾರೆ, ನೀನು ಉಂಡು ಮಲಕೋ ಹೋಗು ಅಂತ ದೈರ‍್ಯವಾಗೇ ಅನ್ನುತ್ತಿದ್ದಳು. ಅವಳ ಮಾತಿಗೆ ಮಾತ್ರ ತುಟಿ ಪಿಟಕ್ ಅನ್ನದೇ ತಲೆಯಾಡಿಸುತ್ತಿದ್ದ. ವಾಪಸ್ ಅವಳಿಗೇನೆ ನೀ ಊಟ ಮಾಡಿಯಿಲ್ಲ?, ಕೆಲಸ ಬಗಸಿ ಮಾಡಕ ಹೋಗ್ಬ್ಯಾಡ, ಆರಾಮಾಗಿರವಾ ಅಂತ ಉಪದೇಶ ಕೋಡೋಕೆ ಶುರು ಮಾಡ್ತಿದ್ದ. ಇಕಿ ಹೂ ಹೂ ಅಂದು ಸಾಗಿ ಹಾಕುತ್ತಿದ್ದಳು. ಊಟವಾದ್ ಕೂಡಲೇ ನನ್ನ ಅಜ್ಜಿ ಮಲಗಿದಾಳೂ ಇಲ್ಲವೋ ಹೋಗಿ ನೋಡಿ ಬರುತ್ತಿದ್ದ. ಆಮೇಲೆ ತನ್ನ ಹಾಸಿಗೆಗೆ ಹೋಗುತ್ತಿದ್ದ.  ನನ್ನ ಕೆಲವೊಮ್ಮೆ ಹೆಗಲಮೇಲೆ ಕೂಡ್ಸಿಕೊಂಡು ತನ್ನ ಗೆಳೆಯರಿಗೆಲ್ಲ, ತನ್ನ ತಂಗೀ ಮಗ ಅಂತ ಬಲ್ ಜಂಬದಿಂದ ಹೇಳಿಕೊಳ್ತಿದ್ದ. ಕೆಲವೊಮ್ಮೆ ಹೊಲದಲ್ಲಿ ಬಂಡಿಯ ಜೊತೆ ಹೋದಾಗ ಹೊಲದಾಗ ನಂಬರ್ ಇದ್ದ ಚಾರ‍್ಟ್ ಒಂದನ್ನ್ ಹರಡಿ ಸ್ವಲ್ಪ ಹೊತ್ತು ಮರದ ಅಡಿಯಲ್ಲಿ ಕೂಡುತ್ತಿದ್ದ. ಅದು ಓಸಿ ಚಾರ‍್ಟ್ ಅಂತಾ ಈಗೀಗ ತಿಳಿಯಿತು. ಬಲೇ ಪಾಕಡಿ ನಮ್ಮ ದೊಡ್ಡ ಮಾವ. ಇನ್ನೂ ಏನೇನೂ ಆಟವಿದ್ವೋ ನಾ ಕಾಣೆ, ಕಣ್ಣಿಗೆ ಕಂಡಿದ್ವು ಮಾತ್ರ ಇಶ್ಟು. ಇಂತಿಪ್ಪ ನಮ್ಮಾಂವ ಆಡಿದ ಬಯಲಾಟದ ಒಂದೂ ಆಟವನ್ನು ನಾ ನೋಡದೇ ಇರೋದೇ ನನ್ನ ದುರಾದ್ರುಶ್ಟವಲ್ಲದೇ ಮತ್ತೇನು? ಅದೆನೋ ಗೊತ್ತಿಲ್ಲ, ಈ ವೀರಬದ್ರ ದೇವರ ಹೆಸರಿರೋ ವ್ಯಕ್ತಿಗಳಲ್ಲಿ ಒಂದು ಅವ್ಯಕ್ತ ಶಕ್ತಿ ಯಾವಾಗಲೂ ಜಾಗ್ರುತವಿರುತ್ತದೆ. ಬೇಕಾದ್ರೆ ಗಮನಿಸಿ, ನನ್ನ ಅಬಿಪ್ರಾಯ.

ಬೋರಾಣಿ ದೇ ಒಂದು ಸುಗ್ಗಿ. ನಾವು ಹೊಲಕ್ಕೆ ಬೋರಾಣಿ ಹುಳು ಹುಡುಕ್ಕೊಂಡು ಬರೋಕೇ ಹೋಗ್ತಿದ್ವಿ. ನಮ್ಮ ದೊಡ್ಡ ಮಾವನ ಮಗ ಆವಾಗ ಹೊಲದಲ್ಲಿ ಕಮತದ ಉಸ್ತುವಾರಿಗೆ ಇದ್ದ. ಅವ ಹೊಲದಿಂದ ಬರೋವಾಗ ತನ್ನ ದೋತರದಲ್ಲಿ ಸುಮಾರು ಬೋರಾಣಿ ಹುಳುಗಳನ್ನು ತರುತ್ತಿದ್ದ. ತುಂಬಾ ದೊಡ್ಡ ಕೆಂಪು ಬೋರಾಣಿಗೆ ನಾವ್ ಕೆಮ್ಮಡ್ಡು ಎನ್ನುತ್ತಿದ್ದೆವು. ಅವನ್ನು ಕಾಲಿ ಕಡ್ಡಿಪೆಟ್ಟಿಗೆಯೊಳಗೆ ಇಟ್, ಅದೆಂತದೋ ತಪ್ಪಲು ತಿನಿಸಿ ಹಿಂಸಿಸುತ್ತಿದ್ದೆವು. ಅದರ ಕುತ್ತಿಗೆಗೆ ತೆಳು ದಾರ ಕಟ್ಟಿ ಸ್ವಲ್ಪ ದೂರದವರೆಗೂ ಹಾರಿಸಿ ಮತ್ತೆ ಜಗ್ಗುತ್ತಿದ್ದೆವು. ಆ ಹಿಂಸೆಗೆ ಆ ಬೋರಾಣಿಗಳು ಎಲ್ಲಿ ಪ್ರತೀಕಾರ ತೊಗೋಳ್ತಾವೋ ಅಂತ  ಈಗ ಕೆಲವೊಮ್ಮೆ ಬಯವಾಗುತ್ತದೆ. ಯಾರ ಹತ್ತಿರ ಹೆಚ್ಚು ಬೋರಾಣಿಗಳ ಹೆಚ್ಚು ಕೆಮ್ಮಡ್ಡುಗಳ ಸಂಗ್ರಹವಿರುತ್ತದೆಯೋ ಅವರು ವಿಶೇಶ ವ್ಯಕ್ತಿಯೆನಿಸುತ್ತಿದ್ದರು. ಅದೊಂದು ಸೊಗಸಾದ ನೆನಪು.

ರಜೆ ಮುಗಿಯುತ್ತ ಬಂದಂತೆ ಊರಿಂದ ಬಂದ ಬೇರೆ ಬೇರೆ ಸೋದರಮಾವಂದಿರ ಮಕ್ಕಳು ತಮ್ಮ ತಮ್ಮ ಊರಿಗೆ ಹೊರಡುತ್ತಿದ್ದರು. ರಜೆಯ ಕೊನೆದಿನದವರೆಗೂ ನನ್ನವ್ವ ತವರುಮನಿಯಿಂದ ಕದಲುತ್ತಿರಲಿಲ್ಲ. ಎಲ್ಲರ್ ಹೋದಮೇಲೆ ನಮ್ ಪಾಳಿ ಬರುತ್ತಿತ್ತು. ಸಿಕ್ಕಾಪಟ್ಟೆ ಬುತ್ತಿ, ಕಾಳುಕಡಿ ಎಲ್ಲವನ್ನೂ ದಂಡಿಯಾಗೇ ಆಕೆಯ ಜೊತೆ ಕಳಿಸುತ್ತಿದ್ದರು. ಅಪ್ಪ ನಮ್ಮನ್ನು ಕರೆದುಕೊಂಡು ಹೋಗಲು ಬರುತ್ತಿದ್ದ. ದೊಡ್ಡಮಾವ ನಾವು ಊರಿಗೆ ಹೋಗೋ ದಿವಸ ಕಣ್ಣಿಗೇ ಕಾಣಿಸುತ್ತಿರಲಿಲ್ಲ. ಅವನಿಗೆ ತಂಗಿ ಊರಿಗೆ ಹೋಗೋದನ್ನು ನೋಡಲು ಸಹಿಸಲಾರದಶ್ಟು ಮ್ರುದು ಮನಸ್ಸಿನ ಕಂಸ. ಅವನಲ್ಲಿರೋ ಕಂಸ ಕೇವಲ ಪಾತ್ರಕ್ಕೇ ಸೀಮಿತವಾಗಿದ್ದ.

ಈಗ ಅಜ್ಜಿಯೂ ಇಲ್ಲ, ದೊಡ್ಡ ಮಾವನೂ ಇಲ್ಲ. ಸಣ್ಣ ಮಾವ ಊರ ಹೊರಗಡೆ ಎಕ್ಸ್ಟೆನ್ಶನ್ ಏರಿಯಾದಲ್ಲಿ ದೊಡ್ಡ ಆರ್ ಸಿಸಿ ಮನೆ ಹಾಕಿಸಿದ್ದಾನೆ. ಹೊಲಗಳನ್ನೆಲ್ಲ ಕೋರು ಲಾವಣಿಗೆ ಕೊಟ್ಟಾಗಿದೆ. ಎತ್ತು, ಎಮ್ಮೆಗಳನ್ನು ಎಂದೋ ಮಾರಲಾಗಿದೆ. ಬಯಲಾಟ ಆಡೋರು ಊರು ಬಿಟ್ಟಾಗಿದೆ. ಅವ್ವನೂ ಈಗ ಅಕ್ಟೋಬರ್, ಎಪ್ರೀಲ್, ಮೇಗಳನ್ನು ನನ್ನ ಜೊತೆಗೇ ಕಳೆಯುತ್ತಾಳೆ. ಊರಲ್ಲಿ ರಾಮಲಿಂಗನ ಗುಡಿಯಲ್ಲಿ ಬಜನಿ ನಿಂತು ಸುಮಾರು ವರ‍್ಶಗಳಾಗಿವೆ. ಬಜನೀ ಮಾಡೋಕೆ ಯಾರ‍್ಗೂ ಪುರುಸೊತ್ತಿಲ್ಲ. ಊರಿನಲ್ಲಿ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ತಪ್ಪಿದೆ. ಬ್ರಾಮಣರ ಅಜ್ಜಿ ಎಂದೋ ದೈವಾದೀನವಾಗಿ ಅವಳ ಮೊಮ್ಮಕ್ಕಳೂ ಬೇರೆಯವರಿಗೆ ಹಳೇಮನೆ ಮಾರಿದ್ದಾರೆ. ಊರಲ್ಲಿ ಯಾರೂ ಮಡಿ ಮಾಡುತ್ತಿಲ್ಲ. ಮನಸ್ಸುಗಳಶ್ಟೇ ಮೈಲಿಗೆಯಾಗಿವೆಯೇನೋ ಎನಿಸುತ್ತದೆ. ಹೊಲದಲ್ಲಿ ಬೋರಾಣಿಗಳೂ ಗುಯ್ಗುಡುತ್ತಿಲ್ಲ. ಇನ್ನೂ ಹೇಳುವದೆಂದರೆ, ನನ್ನ ಮಗಳಿಗೆ ಆಕೆಯ ಶಾಲೆಯೂ ಎಲ್ಲ ರಜೆಗಳನ್ನೂ ರದ್ದು ಮಾಡಿದೆ. ಕಾಂಪೀಟೇಶನ್ ಯುಗ ಅಲ್ವಾ…

(ಚಿತ್ರ ಸೆಲೆ: pencilsketchartdesignsphotos.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಬಾಲ್ಯದ ನೆನಪಾಯ್ತು.

  2. Sandeep Audi says:

    ಚೆನ್ನಾಗಿದೆ ಬರಹ…. ಹಳೆ ನೆನಪು

jaganagarakere ಗೆ ಅನಿಸಿಕೆ ನೀಡಿ Cancel reply

%d bloggers like this: