ಬಿರುಗಾಳಿ ಎಬ್ಬಿಸಿದ ಪೋಕ್ಸ್-ವಾಗನ್ ಸುದ್ದಿ

ಪ್ರಶಾಂತ ಸೊರಟೂರ.

volkswagen

ತಾನೋಡದ ಜಗತ್ತಿನಲ್ಲಿ ಬಿರುಗಾಳಿಯೊಂದು ಎದ್ದಿದೆ. ಜಗತ್ತಿನ ಮುಂಚೂಣಿ ಕಾರು ತಯಾರಕರಲ್ಲಿ ಒಂದಾದ ಜರ‍್ಮನಿಯ ಪೋಕ್ಸ್-ವಾಗನ್ (Volkswagen) ಮೇಲೆ ಅಮೇರಿಕಾದಲ್ಲಿ ಮೋಸ ಮಾಡಿರುವ ಆರೋಪ ಬಂದಿದ್ದು, ಅದು ನಿಜವೆಂದು ತೀರ‍್ಮಾನವಾದರೆ ಆ ಕಂಪನಿ ಸುಮಾರು 18 ಬಿಲಿಯನ್ ಡಾಲರ್ (~1.18 ಲಕ್ಶ ಕೋಟಿ ರುಪಾಯಿಗಳು!) ನಶ್ಟು ದಂಡ ತೆರಬೇಕಾಗಬಹುದು.

ಹಿನ್ನೆಲೆ:

ಕಾರು, ಲಾರಿ, ಇಗ್ಗಾಲಿ ಮುಂತಾದ ಉರುವಲಿನಿಂದ ಓಡುವ ಬಂಡಿಗಳು ಕೆಡುಗಾಳಿಯನ್ನು ಉಗುಳುತ್ತವೆ. ಮಂದಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಕೆಡುಗಾಳಿಯನ್ನು ಹಿಡಿತದಲ್ಲಿಡಲು, ಕೆಡುಗಾಳಿಯ ಮಟ್ಟವು ಇಂತಿಶ್ಟು ಮಿತಿಯನ್ನು ಮೀರಿಬಾರದು ಎಂಬ ಕಟ್ಟಲೆಗಳು ಜಗತ್ತಿನ ಹಲವು ದೇಶಗಳಲ್ಲಿ ಜಾರಿಯಲ್ಲಿವೆ. ಉದಾಹರಣೆಗೆ, ಬಾರತದಲ್ಲಿ ಕೆಡುಗಾಳಿಯ ಮಿತಿಯನ್ನು ಬಾರತ ಸ್ಟೇಜ್ (Bharat Stage – BSIII/IV) ಕಟ್ಟಲೆಯಡಿಯಲ್ಲಿ ಅಳೆಯಲಾಗುತ್ತದೆ. ಬಾರತ ಸರಕಾರದ ಅಡಿಯಲ್ಲಿರುವ ರಸ್ತೆ ಮತ್ತು ಸಾಗಾಣಿಕೆ ಕವಲು (Ministry of Road and Transport) ಈ ಮಿತಿಯನ್ನು ಜಾರಿಗೆ ತರುತ್ತದೆ.

ಗಾಡಿಯ ಮಾದರಿಯೊಂದನ್ನು ಮಾರಾಟಕ್ಕೆ ಇಳಿಸುವ ಮುನ್ನ, ಬಂಡಿ ತಯಾರಕರು ಆಯಾ ನಾಡಿನ ಕೆಡುಗಾಳಿ ಮಿತಿಯನ್ನು ತಮ್ಮ ಬಂಡಿಗಳು ಮೀರುತ್ತಿಲ್ಲ ಅನ್ನುವ ಒಪ್ಪೋಲೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಒಪ್ಪೋಲೆಯನ್ನು ಸರಕಾರದ ಅಡಿಯಲ್ಲಿರುವ ಇಲ್ಲವೇ ಸರಕಾರದಿಂದ ಒಪ್ಪಿಗೆ ಪಡೆದ ಕೂಟಗಳು ನೀಡುತ್ತವೆ. ಬಾರತದಲ್ಲಿ ಎ.ಆರ್.ಎ.ಐ. (Automotive Research Association of India – ARIA) ಕೂಟ ಇಂತಹ ಒಪ್ಪೋಲೆಯನ್ನು ನೀಡಿದರೆ, ಅಮೇರಿಕಾದಲ್ಲಿ ಇ.ಪಿ.ಎ. (Environmental Protection Agency – EPA) ಮತ್ತು ಕಾರ‍್ಬ್ (California Air Resources Board – CARB) ಕೂಟಗಳು ಇಂತಹ ಒಪ್ಪೋಲೆಯನ್ನು ನೀಡುವ ಅದಿಕಾರ ಹೊಂದಿವೆ.

ಬಂಡಿಯ ಮಾದರಿಯೊಂದು ಒಪ್ಪೋಲೆ ಪಡೆದುಕೊಳ್ಳಬೇಕಾದರೆ, ಕಟ್ಟಲೆ ಕೂಟಗಳು ನಡೆಸುವ ಪರೀಕ್ಶೆಯಲ್ಲಿ ಬಂಡಿಗಳು ತೇರ‍್ಗಡೆಯಾಗಬೇಕಾಗುತ್ತದೆ. ಕಟ್ಟಲೆ ಕೂಟಗಳ ಒರೆಹಚ್ಚುವ ತಾಣದಲ್ಲಿ ಗೊತ್ತುಪಡಿಸಿದ ವೇಗ, ಸುತ್ತಣ (Environment), ಸುತ್ತಿನಲ್ಲಿ (cycle) ಬಂಡಿಯನ್ನು ಓಡಿಸಿ, ಆ ಬಂಡಿಯಿಂದ ಎಶ್ಟು ಕೆಡುಗಾಳಿ ಹೊರಬೀಳುತ್ತಿದೆ ಎಂದು ಅಳೆಯಲಾಗುತ್ತದೆ. ಹೀಗೆ ಅಳೆಯಲಾದ ಕೆಡುಗಾಳಿಯು ಗೊತ್ತುಪಡಿಸಿದ ಮಟ್ಟದೊಳಗೆ ಇದ್ದರಶ್ಟೇ ಆ ಬಂಡಿಯ ಮಾರಾಟಕ್ಕೆ ಒಪ್ಪೋಲೆ ಕೊಡಲಾಗುತ್ತದೆ.

ಪೋಕ್ಸ್-ವಾಗನ್ ಮಾಡಿದ ಎಡವಟ್ಟು ಏನು?:

ಕಟ್ಟಲೆ ಕೂಟ ಒಪ್ಪೋಲೆ ನೀಡಬೇಕಾದಾಗ ನಡೆಸುವ ಪರೀಕ್ಶೆಯ ಬಗ್ಗೆ ಮೇಲೆ ತಿಳಿದುಕೊಂಡೆವಲ್ಲವೇ? ಪೋಕ್ಸ್-ವಾಗನ್ ಮೇಲೆ ಬಂದಿರುವ ಆರೋಪವೆಂದರೆ ಬಂಡಿಯ ಅಂಕೆಮಣೆಯಲ್ಲಿರುವ (Electronic Control Unit) ಸಾಪ್ಟವೇರ‍್ ನಲ್ಲಿ ಕೆಲವೊಂದು ಕೈ(ತಲೆ!)ಚಳಕವನ್ನು ಬಳಸಿ ’ಬಂಡಿಯನ್ನು ಈಗ ಪರೀಕ್ಶೆಗೆ ಒಡ್ಡಲಾಗಿದೆ’ ಎಂಬ ಸ್ತಿತಿಯನ್ನು ತಿಳಿಯುವಂತೆ ಅಣಿಗೊಳಿಸಲಾಗಿದೆ. ಇದರಂತೆ ಬರೀ ಪರೀಕ್ಶೆ ನಡೆಯುವಾಗ ಬಂಡಿಯು ಕಡಿಮೆ ಕೆಡುಗಾಳಿಯನ್ನು ಸೂಸುತ್ತದೆ. ಅದೇ ಪರೀಕ್ಶೆಯಿಂದ ಹೊರಬಂದು ನಿಜವಾದ ರಸ್ತೆಯಲ್ಲಿ ಓಡುತ್ತಿರುವಾಗ ಬೇರೆ ಸ್ತಿತಿಗೆ ಬದಲಾಗಿ ಹೆಚ್ಚಿನ ಕೆಡುಗಾಳಿಯನ್ನು ಉಗುಳುತ್ತವೆ.

ಹೇಗೆ ಮಾಡಬಹುದು?

ಕಾರಿನ ಸ್ಟೀಯರಿಂಗ್ ಅಲುಗಾಡದೆಯೇ ವೇಗ ಹೆಚ್ಚುತ್ತಿರುವುದು, ಸುಮಾರು ಹೊತ್ತು ಇಂತಿಶ್ಟು ವೇಗದಲ್ಲೇ ಬಂಡಿ ಓಡುತ್ತಿರುವುದು ಮುಂತಾದ ಅಂಶಗಳನ್ನು ಕಲೆಹಾಕಿ, ಬಂಡಿಯನ್ನು ’ಈಗ’ ಪರೀಕ್ಶೆಗೆ ಒಳಪಡಿಸಲಾಗಿದೆ ಎಂದು ಅಂಕೆಮಣೆ (Electronic Control Unit) ತಿಳಿದುಕೊಳ್ಳುತ್ತದೆ ಮತ್ತು ಅದರಂತೆ ಕಡಿಮೆ ಕೆಡುಗಾಳಿ ಉಗುಳುವಂತೆ ಸಲಕರಣೆಗಳನ್ನು ಮತ್ತು ಇಂಜಿನ್ನನ್ನು ಅಂಕೆಯಲ್ಲಿಡುತ್ತದೆ. ಈಗ ಪರೀಕ್ಶೆ ನಡೆಯುತ್ತಿಲ್ಲ (ನಿಜವಾದ ರಸ್ತೆಯಲ್ಲಿ ಓಡುತ್ತಿದೆ) ಅಂತಾ ತಿಳಿದೊಡನೆ ಅಂಕೆಮಣೆಯು ಕಾರನ್ನು ಓಟದ ಬೇರೆ ಪಾಡಿಗೆ ಬದಲಾಯಿಸುತ್ತದೆ.

ಹೀಗೆ ಮಾಡುವುದರಿಂದ ಏನು ಲಾಬ?

ಹೆಚ್ಚಿನ ಕೆಡುಗಾಳಿ ಉಗುಳುವಂತೆ ಮಾಡಿದರೆ ಕಾರು ತಯಾರಕರಿಗೆ ಏನು ಲಾಬ ಎಂಬ ಕೇಳ್ವಿ ಬರುವುದು ಸಹಜ. ಇದರಿಂದ ಮುಕ್ಯವಾದ ಮೂರು ಲಾಬಗಳನ್ನು ಪಡೆಯಬಹುದು. ಅವೆಂದರೆ,

1. ಕೆಡುಗಾಳಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಸ್ತಿತಿಯಲ್ಲಿ ಹೆಚ್ಚಿನ ಉರುವಲು ವೆಚ್ಚವಾಗುತ್ತದೆ. ಇದಕ್ಕೆ ಕಾರಣವೆಂದರೆ NOx (ನೈಟ್ರೋಜನ್ ಆಕ್ಸೈಡ್) ನಂತಹ ಕೆಡುಗಾಳಿಯನ್ನು ಅಂಕೆಯಲ್ಲಿಡಲು, ಇಂಜಿನ್ನಿನಲ್ಲಿ ಉರಿದು ಹೊರಬರುವ ಸುಟ್ಟಗಾಳಿಯನ್ನು ಮರಳಿ ಇಂಜಿನ್‍ನೊಳಗೆ ಬಿಡಲಾಗುತ್ತದೆ. ಹೀಗೆ ಮಾಡುವುದರಿಂದ NOx ನಂತಹ ಕೆಡುಗಾಳಿಯನ್ನೇನೋ ಕಡಿಮೆ ಮಾಡಬಹುದು ಆದರೆ ಸುಟ್ಟಗಾಳಿಯನ್ನೇ ಮರಳಿ ಬಿಡುವುದರಿಂದ ಉರುವಲಿನ ಅಳವುತನ (fuel efficiency) ಕಡಿಮೆಯಾಗಿ, ಬಂಡಿಯ ಮೈಲಿಯೋಟ (mileage) ಕಡಿಮೆಯಾಗುತ್ತದೆ.

2. ಕೆಡುಗಾಳಿಯನ್ನು ಹಿಡಿತದಲ್ಲಿಡಲು ಬಂಡಿಯ ವೇಗ, ಬಿರುಸುತನ (sportiveness) ಮುಂತಾದ ಓಡಿಸುಗರಿಗೆ ಇಶ್ಟವಾಗುವ ಅಂಶಗಳನ್ನು ತಗ್ಗಿಸಬೇಕಾಗುತ್ತದೆ.

3. ಕೆಡುಗಾಳಿಯನ್ನು ಹಿಡಿತದಲ್ಲಿಡಲು ಬಳಸಲಾದ ಸಲಕರಣೆ ಮತ್ತು ನಡೆಗಳಿಂದ ಇಂಜಿನ್ನಿನ ಒಟ್ಟಾರೆ ಬಾಳಿಕೆ, ಬಂಡಿಯನ್ನು ಸರಿಸ್ತಿತಿಯಲ್ಲಿ ಕಾಯ್ದುಕೊಳ್ಳಲು ತಗಲುವ ವೆಚ್ಚ ಹೆಚ್ಚಾಗಬಹುದು

ಕಾರು ಕೊಳ್ಳುಗರು ಹೆಚ್ಚಿನ ಮೈಲಿಯೋಟ, ಒಳ್ಳೆಯ ವೇಗ, ಬಿರುಸುತನ, ಬಾಳಿಕೆಯನ್ನು ಮೆಚ್ಚುತ್ತಾರೆ ಹೊರತು ಎಶ್ಟು ಕೆಡುಗಾಳಿ ಉಗುಳುತ್ತಿದೆ ಅನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಹಾಗಾಗಿ ಕೊಳ್ಳುಗರಿಗೆ ಒಳಿತೆನಿಸುವ ಅಂಶಗಳನ್ನು ತಮ್ಮ ಕಾರು ನೀಡಿದರೆ, ಹೆಚ್ಚು ಕೊಳ್ಳುಗರನ್ನು ಸೆಳೆಯಬಹುದಲ್ಲವೇ?! ಕೆಡುಗಾಳಿಯೇನು ಬರೀ ಪರೀಕ್ಶೆಗಶ್ಟೇ ಇದ್ದರೆ ಸಾಕಲ್ಲವೇ?! ಇದೇ ಕಾರು ತಯಾರಕರನ್ನು ಸೆಳೆಯುವ, ಕಟ್ಟಲೆ ಮೀರುವ ನಡೆ.

ಕಟ್ಟಲೆ ಏನು ಹೇಳುತ್ತದೆ?

ಒಪ್ಪೋಲೆ ನೀಡಬೇಕಾದರೆ ಕಟ್ಟಲೆ ಕೂಟಗಳು ನಿಜವಾದ ರಸ್ತೆಯಲ್ಲಿ ಬಂಡಿಗಳನ್ನು ಓಡಿಸಿ, ಒರೆಗೆಹಚ್ಚಲು ಆಗದಿರುವುದರಿಂದ ಮೇಲೆ ತಿಳಿಸಿರುವಂತಹ ಪಾರುದಾರಿಗಳನ್ನು ಕಾರು ತಯಾರಕ ಕೂಟಗಳು ಕಂಡುಕೊಳ್ಳಬಹುದು ಎಂದು ಊಹಿಸಿ, ಅಮೇರಿಕಾ, ಯುರೋಪ್ ಕಟ್ಟಲೆ ಕೂಟಗಳು ಅದಾಗಲೇ ಹೆಚ್ಚಿನ ಒಳಕಟ್ಟಲೆಯೊಂದನ್ನು ಈ ಮುಂಚೆ ಸೇರಿಸಿದ್ದವು. ಅದರಂತೆ ಬಂಡಿಯಲ್ಲಿ ’ಸೋಲಿಸುವ ಇಲ್ಲವೇ ಕುಗ್ಗಿಸುವ ಸಲಕರಣೆ’ಗಳನ್ನು (defeat device) ಬಳಸುವಂತಿಲ್ಲ. ಸೋಲಿಸುವ/ಕುಗ್ಗಿಸುವ ಸಲಕರಣೆಯ ಬಗ್ಗೆ ಕಟ್ಟಲೆಗಳು ಹೀಗೆ ಹೇಳುತ್ತವೆ,

ಬಂಡಿಯ ವೇಗ (speed), ಬಿಸುಪು (temperature), ಹಲ್ಗಾಲಿ (gear) ಮುಂತಾದ ಅಂಶಗಳನ್ನು ಬಳಸಿಕೊಂಡು, ರಸ್ತೆಯಲ್ಲಿ ಬಂಡಿಯು ಸಾಗುವಾಗ ಎದುರಾಗುವ ಸಾಮಾನ್ಯ ಸ್ತಿತಿಯನ್ನು ಕಂಡುಕೊಂಡು, ಕೆಡುಗಾಳಿಯ ಹಿಡಿತವನ್ನು ಕಡಿಮೆ ಮಾಡುವುದಾಗಲಿ, ತೆಗೆದುಹಾಕುವುದಾಗಲಿ ಮಾಡುವ ಸಲಕರಣೆಗಳನ್ನು ಸೋಲಿಸುವ/ಕುಗ್ಗಿಸುವ ಸಲಕರಣೆಗಳು (Defeat device) ಎಂದೆಣಿಸಲಾಗುತ್ತದೆ. ಇಂತಹ ಸಲಕರಣೆಗಳನ್ನು ಬಳಸುವಂತಿಲ್ಲ.

ಪೋಕ್ಸ್-ವಾಗನ್ ಈ ಕಟ್ಟೆಲೆಯನ್ನು ಮೀರಿದೆ ಮತ್ತು ಇದರಿಂದಾಗಿ ತನ್ನ ಕಾರು ಮಾರಾಟ ಹೆಚ್ಚಿಸಿಕೊಳ್ಳಲು ಹೆಚ್ಚಿನ ಕೆಡುಗಾಳಿಯನ್ನು ಉಗುಳುವ ಕಾರುಗಳನ್ನು ರಸ್ತೆಗಿಳಿಸಿ ಮಂದಿಯ ಆರೋಗ್ಯ, ಸಮಾಜದ ಒಳಿತನ್ನು ಅದು ಕಡೆಗಣಿಸಿದೆ ಎಂದು ಅಮೇರಿಕಾದ ಕಟ್ಟಲೆ ಕೂಟಗಳು ದೂರಿವೆ. 2009 ರಿಂದ 2015 ರ ವರೆಗಿನ ಪೋಕ್ಸ್-ವಾಗನ್ ಕಾರುಗಳು ಮೋಸದ ಈ ಸುಳಿಗೆ ಸಿಲುಕಿವೆ.

ಇನ್ನೂ ಹಲವು ಕಾರು ತಯಾರಕ ಕೂಟಗಳು ಕಟ್ಟಲೆ ಮೀರುವ ಇಂತಹ ನಡೆಯನ್ನು ಪಾಲಿಸುತ್ತಿರಬಹುದು ಅನ್ನುವುದು ತಾನೋಡದ ಕೈಗಾರಿಕೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಈ ಗಾಳದಲ್ಲಿ ಯಾರು ಸಿಕ್ಕಿಹಾಕಿಕೊಳ್ಳುತ್ತಾರೆ ಅನ್ನುವುದು ಕಾದು ನೋಡಬೇಕು.

(ತಿಟ್ಟಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: