ನೀ ಬಾರದಿರುವೆಯಾ ಓ ಕೋಪವೇ

– ನಾಗರಾಜ್ ಬದ್ರಾ.

train-pencil

ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ. ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ, ಒಬ್ಬಳು ಮಗಳು ರಾಣಿ. ಕುಟುಂಬದ ಮೂಲ ಕಸುಬು ವ್ಯವಸಾಯವಾಗಿತ್ತು, ವರ‍್ಶ ಪೂರ‍್ತಿ ಮಳೆಯನ್ನು ನಂಬಿಕೊಂಡು ಬದುಕನ್ನು ಸಾಗಿಸುತ್ತಿದ್ದರು. ಕಡು ಬಡತನವಿದ್ದರೂ, ಮಕ್ಕಳಾದರು ಚೆನ್ನಾಗಿ ಓದಿ ಒಳ್ಳೆಯ ಉದೋಗ್ಯಕ್ಕೆ ಸೇರಿ ಈ ಬಡತನದಿಂದ ಮುಕ್ತಿ ನೀಡುತ್ತಾರೆ ಅಂತ ಕನಸು ಕಾಣುತ್ತಾ ಬದಕುತ್ತಾ ಇದ್ದರು.

ಅಜೇಯನು ಓದಿನಲ್ಲಿ, ಆಟದಲ್ಲಿ ಎಲ್ಲದರಲ್ಲೂ ಮುಂದೆಯಿದ್ದನು. ಅವನ ಅಪ್ಪ-ಅಮ್ಮನ ಆಸೆಯಂತೆ ಅಜೇಯನು ಚೆನ್ನಾಗಿ ಓದಿ ಮೆಟ್ರಿಕ್ ಪರೀಕ್ಶೆಯಲ್ಲಿ ಡಿಸ್ಟಿಂಕ್ಶನ್‍ನಲ್ಲಿ ಉತ್ತಿರ‍್ಣನಾಗುತ್ತಾನೆ. ಮಗನ ಉತ್ತಮವಾದ ಪಲಿತಾಂಶದಿಂದ ತುಂಬಾ ಸಂತೋಶಗೊಂಡ ಪಾಲಕರು ಮುಂದಿನ ಪಿ.ಯು.ಸಿ ವಿದ್ಯಾಬ್ಯಾಸಕ್ಕೆ ಜಿಲ್ಲೆಯ ಪ್ರತಿಶ್ಟಿತ ಕಾಲೇಜಿಗೆ ಅವನನ್ನು ಸೇರಿಸಬೇಕಂತ ಯೋಚಿಸಿದರು. ಜಿಲ್ಲೆಯ ಪ್ರತಿಶ್ಟಿತ ಕಾಲೇಜು ಅಂದ ಮೇಲೆ ಸಿಕ್ಕಾಪಟ್ಟೆ ಶುಲ್ಕವಿರುವದು. ಅಶ್ಟೊಂದು ದುಡ್ಡನ್ನು ಹೇಗೆ ಹೊಂದಿಸುವದು ಅಂತ ಪಾಲಕರು ಯೋಚಿಸಲಾರಂಬಿಸಿದರು. ಯಲ್ಲಪ್ಪನು ಅಲ್ಲಿಲ್ಲಿ ಸಾಲವನ್ನು ಮಾಡಿ ಹಣವನ್ನು ಹೊಂದಿಸಿ ಆ ಕಾಲೇಜಿಗೆ ಅಜೇಯನನ್ನು ಸೇರಿಸಿದನು. ಹಳ್ಳಿಯಲ್ಲಿ ಬೆಳೆದ ಅಜೇಯನಿಗೆ ನಗರದ ವಾತಾವರಣ ಹೊಸದಾಗಿತ್ತು. ಕಾಲೇಜಿನ ಮೊದಲ ದಿನ ಅಜೇಯನ ಮನಸ್ಸಿನಲ್ಲಿ ಏನೋ ಒಂದು ತರಹದ ಕಳವಳ, ಬಯ, ನಗರದ ಕಾಲೇಜಿನ ಹುಡುಗ-ಹುಡುಗಿಯರ ಜೊತೆ ಹೇಗೆ ಸ್ನೇಹ ಬೆಳೆಸೋದು ಅಂತ ಯೋಚಿಸುತ್ತಾ ಕಾಲೇಜಿಗೆ ಹೋದನು. ಅಲ್ಲಿಯ ಹುಡುಗರ ಜೊತೆ ಮಾತನಾಡಿದ ಮೇಲೆ ಅವನ ಬಯ, ಆತಂಕ ಎಲ್ಲಾ ಮಾಯವಾಯಿತು. ದಿನ ಕಳೆದಂತೆ ಅವನು ನಗರ ಜೀವನ ಶೈಲಿಗೆ ಹೊಂದಿಕೊಂಡನು. ನೋಡು ನೋಡುತ್ತಲೇ ಮೊದಲ ಪಿ.ಯು.ಸಿ ಪರೀಕ್ಶೆ ಬಂತು. ಅಜೇಯನು ಚೆನ್ನಾಗಿ ಓದಿ ಉತ್ತಮವಾದ ಅಂಕಗಳಿಂದ ತೇರ‍್ಗಡೆ ಹೊಂದಿದನು.

ಡಾಕ್ಟರ್ ಆಗಬೇಕೆಂಬ ಆಸೆಯಿಂದ ಎರಡನೇ ಪಿ.ಯು.ಸಿ ವರ‍್ಶದಲ್ಲಿ ಇನ್ನೂ ಹೆಚ್ಚು ಓದಲು ಪ್ರಾರಂಬಿಸಿದನು. ಅವನ ಆಸೆಯಂತೆ ಎರಡನೇ ಪಿ.ಯು.ಸಿ ಪರೀಕ್ಶೆಯಲ್ಲಿ 90% ಶೇಕಡಾವಾರು ಅಂಕಗಳನ್ನು ಪಡೆದು ಉತ್ತೀರ‍್ಣನಾದನು. ಸಿ.ಇ.ಟಿ ಯಲ್ಲಿ ಉತ್ತಮ ರ‍್ಯಾಂಕನ್ನು ಪಡೆದು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ (MBBS) ಸೀಟ್ ಕೂಡ ಪಡೆದನು. ಈ ಸುದ್ದಿ ತಿಳಿದ ತಕ್ಶಣವೇ ಅಜೇಯನ ಮನೆಯಲ್ಲಿ ಹಬ್ಬದ ವಾತವರಣ, ಊರ ತುಂಬಾ ಇವನದೇ ಚರ‍್ಚೆ, ಪಾಲಕರ ಸಂತೋಶಕ್ಕೆ ಮಿತಿಯೇ ಇರಲಿಲ್ಲ. ಅಜೇಯ ಸರಕಾರಿ ಸೀಟು ಪಡೆದ್ದಿದರಿಂದ ಬ್ಯಾಂಕುಗಳು ಶಿಕ್ಶಣ ಸಾಲವನ್ನು ನೀಡಲು ನಾಮುಂದು-ತಾಮುಂದು ಅಂತ ಮುಂದೆ ಬಂದವು. ಅಜೇಯನು ಬ್ಯಾಂಕಿನಿಂದ ಸಾಲವನ್ನು ಪಡೆದು, ತನ್ನ ವೈದ್ಯಕೀಯ ವಿದ್ಯಾಬ್ಯಾಸವನ್ನು ಶುರುಮಾಡಿದನು. ವೈದ್ಯಕೀಯ ಕಾಲೇಜಿನಲ್ಲೂ ಉತ್ತಮ ಓದಿನಿಂದ ಕಾಲೇಜಿನ ಪ್ರಾದ್ಯಾಪಕರಿಗೆಲ್ಲರಿಗೂ ಮೆಚ್ಚಿನ ಶಿಶ್ಯನಾದನು. ಓದಿನಲ್ಲಿ ಕಾಲೇಜಿಗೆ ಪ್ರತಮನಾದನು. ಎಂ.ಬಿ.ಬಿ.ಎಸ್ ಡಿಗ್ರಿಯ ನಾಲ್ಕು ವರ‍್ಶಗಳಲ್ಲಿಯೂ ಕಾಲೇಜಿಗೆ ಪ್ರತಮನಾಗಿ ಉತ್ತೀರ‍್ಣರಾದನು. ಇನ್ನೂ ಕಡೆಯ ವರ‍್ಶದ ತರಬೇತಿಯನ್ನು ಕೂಡ ಉತ್ತಮವಾದ ರೀತಿಯಲ್ಲಿ ಪೂರ‍್ಣಗೊಳಿಸಿ ತಂದೆ-ತಾಯಿಯನ್ನು ಬೇಟಿ ಮಾಡಲು ತನ್ನ ಹಳ್ಳಿಗೆ ಹೊರಟನು. ಹಾಗೆ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಒಂದು ದಿನ ದಿನಪತ್ರಿಕೆಯನ್ನು ಓದುತ್ತಿದ್ದಾಗ ಕೇಂದ್ರ ಸರಕಾರದ ಉದೋಗ್ಯದ ಜಾಹೀರಾತು ನೋಡಿ ಅದಕ್ಕೆ ಅರ‍್ಜಿಯನ್ನು ಹಾಕಿದನು.

ಒಂದು ತಿಂಗಳ ನಂತರ ಸಂದರ‍್ಶನವು ಜರುಗಿತು, ಅದರಲ್ಲಿ ಅಜೇಯ ಚೆನ್ನಾಗಿ ಮಾಡಿದನು. ಅಜೇಯನಿಗೆ ತುಂಬಾ ನಂಬಿಕೆಯಿತ್ತು ತಾನು ಆಯ್ಕೆಯಾಗಬಹುದು ಅಂತ. ಅವನ ನಂಬಿಕೆಯಂತೆಯೇ ಕೆಲವು ದಿನಗಳ ನಂತರ ಸರಕಾರದಿಂದ ಅಂಚೆಯ ಮುಕಾಂತರ ಅಜೇಯನ ಮನೆಗೆ ನೇಮಕಾತಿ ಆದೇಶವು ಬಂತು. ಅದನ್ನು ಕೇಳಿದ ಕ್ಶಣವೇ ಸಂತೋಶದ ಕಣ್ಣ ಹನಿಗಳು ಅವನ ತಂದೆ ತಾಯಿಯರ ಕಣ್ಣುಗಳನ್ನು ತುಂಬಿಸಿದವು. ಅಜೇಯನ ಮುಕದಲ್ಲಿ ತಾನು ಅಂದು ಕೊಂಡಿದ್ದು ಸಾದಿಸಿದ ಕುಶಿ ತುಂಬಿತ್ತು. ಊರಿನ ತುಂಬಾ ಈ ಸುದ್ದಿ ಹರಡಿದ ಕ್ಶಣವೇ ಅಜೇಯನಿಗೆ ಹಾಗೂ ಅವನ ಪಾಲಕರಿಗೆ ಶುಬಾಶಯಗಳ ಮಹಾಪೂರವೇ ಹರಿದು ಬರತೊಡಗಿತು. ತಮ್ಮ ಊರ ಹುಡುಗನ ಸಾದನೆಯನ್ನು ಕಂಡು ಊರಿನ ಎಲ್ಲರಿಗೂ ಹೆಮ್ಮೆಯಾಗಿತ್ತು. ಅಜೇಯನಿಗೆ ದೆಹಲಿಯ ಕೇಂದ್ರ ಸರಕಾರದ ಆಸ್ಪತ್ರೆಯಲ್ಲಿ ನೇಮಕಾತಿಯಾಯಿತು. ಬೆಂಗಳೂರಿನಿಂದ ದೆಹಲಿಗೆ ಹೊರಡುವ ರೈಲಿನ ಟಿಕೆಟನ್ನು ತೆಗೆಸಿದನು. ಆದರೆ ಅವನಿಗೆ ಕನ್ಪರ‍್ಮ್ ಟಿಕೆಟ್ ಸಿಕ್ಕಿರಲಿಲ್ಲ, ಆರ್.ಎ.ಸಿ (RAC) ಟಿಕೆಟ್ ಸಿಕ್ಕಿತ್ತು. ಎರಡು ದಿನಗಳ ನಂತರ ಹೊರಡಬೇಕಿತ್ತು. ಹೊರಡುವ ಮುನ್ನ ತಮ್ಮ ಮನೆ ದೇವರ ದರ‍್ಶನ ತೆಗೆದುಕೊಂಡು ಬರಬೇಕಂತ ಯೋಚಿಸಿದನು. ಮರು ದಿನ ಬೆಳಗ್ಗೆ ಬೇಗನೆ ಮನೆ ದೇವರ ದರ‍್ಶನಕ್ಕೆ ಹೊರಟನು, ಸಾಯಂಕಾಲದ ಹೊತ್ತಿಗೆ ದರ‍್ಶನವನ್ನು ಪಡೆದು ಮತ್ತೆ ತನ್ನ ಹಳ್ಳಿಗೆ ವಾಪಸಾದನು. ಮರು ದಿನ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಅವನ ರೈಲುಗಾಡಿಯಿತ್ತು. ಬೆಳಗ್ಗೆ ಬೇಗ ಎದ್ದು ಊರ ದೇವರ ದರ‍್ಶನವನ್ನು ಪಡೆದನು. ತನ್ನ ಬಟ್ಟೆ, ಸಾಮಾನುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡನು. ತಂದೆ,ತಾಯಿಯ ಆಶೀರ‍್ವಾದವನ್ನು ಪಡೆದು ತಂಗಿಗೆ “ನೀನು ಚೆನ್ನಾಗಿ ಓದು, ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋ, ಕೆಲವು ತಿಂಗಳ ನಂತರ ನಾನು ದೆಹಲಿಯಲ್ಲಿಯೇ ಮನೆ ಮಾಡಿ ನಿಮ್ಮಲ್ಲರನ್ನೂ ಕರೆಸಿಕೊಳ್ಳುತ್ತೀನಿ, ನಾನು ಹೋಗಿ ಬರ‍್ತೀನಿ” ಅಂತ ತಂಗಿ ರಾಣಿಗೆ ಹೇಳಿ ಹೊರಟನು ಬೆಂಗಳೂರಿನ ಕಡೆಗೆ. ಅವನ ಊರು ಬೆಂಗಳೂರಿನಿಂದ ಸುಮಾರು 110 ಕಿಲೋಮೀಟರ್ ದೂರವಿದೆ. ರಾತ್ರಿ ಸುಮಾರು 8.30 ಗಂಟೆಗೆ ಬೆಂಗಳೂರಿನ ರೈಲ್ವೆ ನಿಲ್ದಾಣವನ್ನು ತಲುಪಿದನು. ರೈಲು 9 ಗಂಟೆಗೆ ಹೊರಡುವುದಿತ್ತು.

(ಈ ಕತೆಯಲ್ಲಿ ಬರುವ ಇನೊಂದು ಪಾತ್ರ ಸುರೇಶ, ಅವನ ಪತ್ನಿಯ ಹೆಸರು ಸುನೀತಾ. ಅವರಿಗೆ ಇಬ್ಬರು ಮಕ್ಕಳು – ಆರು ವರ‍್ಶದ ಮಗ ರಾಹುಲ್ ಮತ್ತು ನಾಲ್ಕು ವರ‍್ಶದ ಮಗಳು ಅಂಜಲಿ)

ಸುರೇಶನು ಬೆಂಗಳೂರಿನ ಕಾಸಗಿ ಕಂಪನಿಯೊಂದರಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು.ತನ್ನ ಕುಟುಂಬದ ಜೊತೆಯಲ್ಲಿ ಬೆಂಗಳೂರಲ್ಲಿಯೇ ವಾಸವಾಗಿದ್ದನು. ಒಳ್ಳೆಯ ಕೆಲಸ, ಕೈತುಂಬ ಸಂಬಳ, ಮಕ್ಕಳು, ಪತ್ನಿಯ ಜೊತೆ ಸುಕವಾದ ಜೀವನ ನಡೆಸುತ್ತಿದ್ದನು. ಸುರೇಶನ ಉತ್ತಮವಾದ ಕೆಲಸವನ್ನು ಕಂಡು ಕಂಪನಿಯವರು ತಂಡದ ಮುಕ್ಯಸ್ತನಾಗಿ (Team leader) ಬಡ್ತಿ ನೀಡಿದರು. ಬಡ್ತಿ ಸಿಕ್ಕ ಮೇಲೆ ಸಂಬಳವು ಹೆಚ್ಚಾಯಿತು, ಅದರ ಜೊತೆಯಲ್ಲಿಯೇ ಒತ್ತಡವು ಹೆಚ್ಚಾಯಿತು. ಸುರೇಶನಿಗೆ ಪ್ರತಿ ತಿಂಗಳು ಮನೆಯ ಬಾಡಿಗೆ ನೀಡಿ ಸಾಕಾಗಿತ್ತು.ತಾನು ಒಂದು ಸ್ವಂತ ಮನೆಯನ್ನು ಕರೀದಿ ಮಾಡಬೇಕು ಅಂತ ಯೋಚಿಸಿದ. ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಂಡು ಬೆಂಗಳೂರಿನಲ್ಲಿ ಅಪಾರ‍್ಟ್ಮೆಂಟ್ ಒಂದನ್ನು ಕರೀದಿಸಿದನು. ಗ್ರುಹ ಪ್ರವೇಶ ಮಾಡಲು ಒಳ್ಳೆಯ ದಿನವನ್ನು ತೆಗೆಸಿದ್ದನು.ಅಶ್ಟರಲ್ಲಿಯೇ ಕಂಪನಿಯ ಒಂದು ಮುಕ್ಯವಾದ ಕೆಲಸದ ಮೇರೆಗೆ ಅವನು ದೆಹಲಿಗೆ ಹೋಗಬೇಕಾಗಿ ಬಂತು. ಕಂಪನಿಯ ಮುಕ್ಯವಾದ ಕೆಲಸ, ಆಗೋದಿಲ್ಲ ಅಂತ ಹೇಗೆ ಹೇಳೋದು? ಸುರೇಶನಿಗೆ ದಾರಿ ತೋಚದಂತಾಗಿತ್ತು. ಸುರೇಶನು ಮನಸ್ಸಿನಲ್ಲಿ ಹಿಡಿ ಶಾಪವನ್ನು ಹಾಕುತ್ತಾ ಹೋಗಲು ಒಪ್ಪಿಕೊಂಡನು. ಗ್ರುಹ ಪ್ರವೇಶದ ದಿನಾಂಕವನ್ನು ಮುಂದೆ ಹಾಕಿ ಬೆಂಗಳೂರಿನಿಂದ ದೆಹಲಿಗೆ ಹೊರಡುವ ರೈಲಿನ ಟಿಕಟನ್ನು ತೆಗೆಸಿ ಹೊರಡಲು ಸಿದ್ದನಾದನು.

ಸುರೇಶನು ಬೆಂಗಳೂರಿನ ರೈಲು ನಿಲ್ದಾಣವನ್ನು ತಲುಪಿದನು. ಅವನು ಕೂಡ 9 ಗಂಟೆಗೆ ದೆಹಲಿಗೆ ಹೊರಡುವ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ರಾತ್ರಿ 9 ಗಂಟೆಗೆ ರೈಲು ಬಂತು, ಅಜೇಯ ಮತ್ತು ಸುರೇಶ ಇಬ್ಬರೂ ರೈಲನ್ನು ಹತ್ತಿ ಕೊಂಡರು. ವಿರ‍್ಪಯಾಸ ಎಂದರೆ ಇಬ್ಬರ ಸೀಟುಗಳು ಒಂದೇ ಬೋಗಿಯಲ್ಲಿ ಬಂದಿದ್ದವು. ಸುರೇಶನದು ಮೇಲಿನ ಸೀಟು. ಅವನ ಕೆಳಗಿನ ಸೀಟನ್ನು ಅಜೇಯ ಮತ್ತು ಇನೊಬ್ಬ ಪ್ರಯಾಣಿಕ ರಾಜುಗೆ ನೀಡಲಾಗಿತ್ತು. ಯಾಕೆಂದರೆ ಅಜೇಯ ಮತ್ತು ರಾಜು ಸೀಟುಗಳು ಕನ್ಪರ‍್ಮ್ ಆಗಿರಲಿಲ್ಲ. ಆರ್.ಎ.ಸಿ (RAC) ಯಾಗಿದ್ದವು. ರೈಲು ಪ್ರಯಾಣ ಪ್ರಾರಂಬಿಸಿತು. ಅಜೇಯ ಮತ್ತು ರಾಜು ಇಬ್ಬರೂ ಕೆಳಗಿನ ಸೀಟಿನಲ್ಲಿ ಕುಳಿತು ಕೊಂಡರು. ಸುರೇಶನಿಗೆ ಇನ್ನೂ ನಿದ್ದೆ ಬಂದಿರಿಲಿಲ್ಲ, ಕೆಳಗಡೆ ಸೀಟಿನಲ್ಲಿ ಕುಳಿತುಕೊಳ್ಳಬೇಕೆಂದರೆ ಅವರಿಬ್ಬರು ಕುಳಿತಿದ್ದರು. ಮನಸ್ಸಿನಲ್ಲಿಯೇ ಗೊಣಗುತ್ತಾ ಬೆಳಿಗ್ಗೆ ಯೋಚಿಸಿದರಾಯಿತ್ತು ಅಂತ ಮನಸ್ಸಿನಲ್ಲಿ ಮೇಲಿನ ಸೀಟಿನಲ್ಲಿ ಹಾಗೆ ಸುಮ್ಮನೆ ಮಲಗಿದನು. ಅಜೇಯ ಮತ್ತು ರಾಜು ಇಬ್ಬರೂ ತಮ್ಮ ತಮ್ಮ ಪರಿಚಯವನ್ನು ಮಾಡಿಕೊಂಡು ಹಾಗೆ ಹರಟೆ ಪ್ರಾರಂಬಿಸಿದರು. ರಾಜು ಇಂಜಿನಿಯರಿಂಗ್ ಓದಿ ದೆಹಲಿಯಲ್ಲಿ ಐ ಎ ಎಸ್ ಪರೀಕ್ಶೆಗೆ ತರಬೇತಿ ಪಡೆಯಲು ಹೊರಟಿದ್ದನು.

ಬೆಂಗಳೂರಿನಿಂದ ದೆಹಲಿ ಸುಮಾರು 26 ಗಂಟೆಗಳ ರೈಲು ಪ್ರಯಾಣ. ರೈಲು ಪ್ರಯಾಣ ಶುರುವಾಗಿ ಸುಮಾರು 30 ನಿಮಿಶಗಳಾಗಿದ್ದವು. ಟಿ.ಸಿ (Ticket Checker – TC) ಟಿಕೆಟ್ ಪರೀಕ್ಶಿಸಲು ಬಂದರು. ಅಜೇಯ ಮತ್ತು ರಾಜು ತಮ್ಮ ಟಿಕೆಟನ್ನು ತೋರಿಸಿದ ಮೇಲೆ, ಯಾವುದಾದರೂ ಸೀಟು ಕಾಲಿಯಿದ್ದರೆ ನಮ್ಮ ಟಿಕೇಟು ಕನ್ಪರ‍್ಮ್ ಮಾಡಿಕೊಡಿ ಸರ್ ಅಂತ ಟಿ.ಸಿ ಗೆ ಹೇಳಿದರು. ಟಿ.ಸಿ – ಯಾವುದು ಕಾಲಿಯಿಲ್ಲ ಅಂತ ಉತ್ತರಿಸಿ ಮುಂದೆ ಹೊರಟು ಹೋದನು. ರಾಜು, ಅಜೇಯ ಮತ್ತೆ ತಮ್ಮ ಹರಟೆಯನ್ನು ಮುಂದುವರೆಸಿದರು. ಸುಮಾರು ರಾತ್ರಿ 11 ಗಂಟೆಗೆ ಇಬ್ಬರಿಗೂ ನಿದ್ದೆ ಬಂದು ಇಬ್ಬರೂ ಒಂದೇ ಸೀಟಿನಲ್ಲಿ ಕುಳಿತು ಕೊಂಡು ಹಾಗೆ ನಿದ್ದೆಗೆ ಜಾರಿದರು. ರೈಲಿನ ತುಂಬಾ ಕತ್ತಲು ಆವರಿಸಿತು, ಗಾಡಿಯು ಹಾಗೆ ತನ್ನ ಪ್ರಯಾಣವನ್ನು ಮುಂದುವರಿಸಿತ್ತು. ನಡುರಾತ್ರಿ ರಾಜುಗೆ ನಿದ್ರೆ ತಾಳಲಾಗದೆ, ಆರು ಸೀಟುಗಳಿರುವ ನಡುವಿನ ಜಾಗದಲ್ಲಿ ದಿನಪತ್ರಿಕೆಯೊಂದನ್ನು ಹಾಸಿ ಆರಾಮಾಗಿ ಮಲಗಿದನು. ಅಜೇಯನಿಗೆ ಪೂರ‍್ತಿ ಸೀಟು ಸಿಕ್ಕಿತು, ಆರಾಮವಾಗಿ ಮಲಗಿದನು. ರೈಲು ಗಾಡಿಯು ಮಾತ್ರ ಯಾರನ್ನು ಲೆಕ್ಕಿಸದೆ ತನ್ನ ಪ್ರಯಾಣವನ್ನು ಮುಂದುವರೆಸಿತ್ತು. ಮರು ದಿನ ಬೆಳಗಿನ ಜಾವ ಎಲ್ಲರೂ ಎದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ಉಪಹಾರ ಮಾಡುತ್ತಿದ್ದರು. ಅಜೇಯ, ರಾಜು, ಸುರೇಶ ಕೂಡ ಉಪಹಾರವನ್ನು ಸೇವಿಸಿ ಕುಳಿತು ಕೊಂಡಿದ್ದರು.

ಅಜೇಯು ಮತ್ತು ರಾಜು ಕೆಳಗಡೆ ಸೀಟಿನಲ್ಲೇ ಕುಳಿತಿದ್ದರು. ಸುರೇಶನಿಗು ಕೆಳಗಡೆ ಸೀಟಿನಲ್ಲಿ ಕುಳಿತು ಕೊಳ್ಳಬೇಕಾಗಿತ್ತು. ಅವರನ್ನು ಕೇಳಿದನು. ಆದರೆ ಅಜೇಯನು “ನಮ್ಮದು ಆರ್.ಎ.ಸಿ (RAC) ಸೀಟು ಇಬ್ಬರೂ ಕುಳಿತಿದ್ದೀವಿ, ನಿಮ್ಮದು ಮೇಲಿನ ಸೀಟು ಅಲ್ಲಿಯೇ ಕುಳಿತುಕೊಳ್ಳಿ” ಎಂದನು. ಸುರೇಶನು “ಮೇಲಗಡೆ ಸೀಟು ಬರೀ ಮಲಗಲು ಮಾತ್ರ, ಕುಳಿತುಕೊಳ್ಳಲು ಕೆಳಗಡೆ ಸೀಟುಯಿರುತ್ತೆ” ಅಂತ ಹೇಳಿದನು. ಅದಕ್ಕೆ ಅಜೇಯನು “ಮತ್ತೆ ನಾವು ಎಲ್ಲಿ ಕುಳಿತು ಕೊಳ್ಳಬೇಕು, ನಮ್ಮದು ಆರ್.ಎ.ಸಿ, ಹಾಗಾಗಿಯೇ ಇಬ್ಬರೂ ಕುಳಿತಿದ್ದೀವಿ” ಎಂದನು. ಮೊದಲೇ ಸುರೇಶ ಮುಂಗೋಪಿ, ಸಿಟ್ಟಿನಿಂದ ದಪ್ಪ ದನಿಯಲ್ಲಿ “ನಾನು ಎಲ್ಲಿ ಕುಳಿತುಕೊಳ್ಳಬೇಕು” ಎಂದು ಕಿರುಚಾಡ ತೊಡಗಿದನು. ಅಪ್ಟರಲ್ಲಿಯೇ ರಾಜು ಮದ್ಯ ಪ್ರವೇಶಿಸಿ ಸುರೇಶನಿಗೆ ತಿಳಿಹೇಳಿದನು. ಆದರೆ ಸುರೇಶ ಮಾತ್ರ ಕೇಳಲಿಲ್ಲ. ಅವನದು ಒಂದೇ ಪ್ರಶ್ನೆ – “ನಾನು ಎಲ್ಲಿ ಕುಳಿತುಕೊಳ್ಳಲಿ?” ಎಂದು.

ಅಜೇಯ ಹಾಗೂ ಸುರೇಶ ಮದ್ಯೆ ಮಾತಿನ ಚಕಮಕಿ ಜೋರಾಯಿತು, ಅಶ್ಟರಲ್ಲಿಯೇ ಸುರೇಶನಿಗೆ ಕೋಪ ನೆತ್ತಿಗೇರಿ ಕೆಟ್ಟ ಶಬ್ದಗಳಿಂದ ಅಜೇಯನಿಗೆ ಬೈಯ್ಯತೊಡಗಿದನು. ಅಜೇಯಗೂ ತುಂಬಾ ಕೋಪಬಂತು, ಅವನು ಕೆಟ್ಟ ಶಬ್ದಗಳಿಂದ ಅದಕ್ಕೆ ಉತ್ತರಿಸಿದನು. ಇಬ್ಬರ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿತು, ರಾಜು ಜಗಳವನ್ನು ಬಿಡಿಸಲು ಪ್ರಯತ್ನಿಸಿದನು. ಆದರೆ ಸುರೇಶನು ಕೋಪದಲ್ಲಿ ಅಜೇಯನನ್ನು ಜೋರಾಗಿ ತಳ್ಳಿದನು. ಅವನು ತಳ್ಳಿದ ರಬಸಕ್ಕೆ ಬೋಗಿಯಲ್ಲಿನ ಕಂಪಾರ‍್ಟ್ಮೆಂಟ್ ನ ಕಬ್ಬಿಣದ ರಾಡ್ ತುದಿ ಬಾಗವು ಅಜೇಯನ ತಲೆಗೆ ಜೋರಾಗಿ ತಾಕಿತ್ತು. ಅಜೇಯನ ತಲೆಯ ಹಿಂದಿನ ಬಾಗಕ್ಕೆ ತುಂಬಾ ಜೋರಾಗಿ ಪೆಟ್ಟು ಬಿದ್ದಿತು. ಪೆಟ್ಟು ಎಶ್ಟು ಜೋರಾಗಿತ್ತು ಎಂದರೆ ಅಜೇಯ ಅಲ್ಲಿಯೇ ಪ್ರಜ್ನೆ ತಪ್ಪಿ ಕುಸಿದು ಬಿದ್ದನು. ಸುರೇಶ, ರಾಜು, ಬೋಗಿಯಲ್ಲಿಯ ಜನರೆಲ್ಲರೂ ಆತಂಕಕ್ಕೀಡಾದರು, ಅಲ್ಲಿಯೇ ಇದ್ದ ಒಬ್ಬರು ಅಜೇಯನ ಮುಕಕ್ಕೆ ನೀರನ್ನು ಸಿಂಪಡಿಸಿದರು. ತಲೆಗೆ ತುಂಬಾ ಜೋರಾಗಿ ಪೆಟ್ಟಾಗಿದ್ದುದ್ದರಿಂದ ಅಜೇಯನಿಗೆ ಪ್ರಜ್ನೆ ಬರಲಿಲ್ಲ, ಅಶ್ಟರಲ್ಲಿಯೇ ಒಬ್ಬ ಪ್ರಯಾಣಿಕನು ಹೋಗಿ ಟಿ.ಸಿ ಯನ್ನು ಕರೆತಂದನು, ಟಿ.ಸಿ ಯು ಅಜೇಯನ ಕೈಯನ್ನು ಹಿಡಿದು ನರಬಡಿತವನ್ನು ಪರೀಕ್ಶಿಸಿದನು. ಸ್ವಲ್ಪ ಕಡಿಮೆಯಾಗಿತ್ತು ಟಿ.ಸಿ ಗೆ ತುಂಬಾ ಬಯವಾಯಿತು, ಮುಂದಿನ ರೈಲು ನಿಲ್ದಾಣಕ್ಕೆ ಕರೆಮಾಡಿ ಸನ್ನಿವೇಶದ ಬಗ್ಗೆ ಮಾಹಿತಿಯನ್ನು ನೀಡಿ ಬೇಕಾಗಿರುವ ವೈದ್ಯಕೀಯ ನೆರವಿನ ಬಗ್ಗೆ ತಿಳಿಸಿದನು. ಸುಮಾರು 100 ಕಿಲೋಮೀಟರ್ ದೂರದಲ್ಲಿ ಮುಂದಿನ ಕಮಲಾಪುರ ಜಂಕ್ಶನ್ ರೈಲು ನಿಲ್ದಾಣವಿತ್ತು. ಅಲ್ಲಿ ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ತೆಯುಳ್ಳ ಆಸ್ಪತ್ರೆಯಿತ್ತು, ಅಲ್ಲಿವರೆಗೂ ಅಜೇಯನಿಗೆ ಪ್ರಾತಮಿಕ ಚಿಕಿತ್ಸೆಯನ್ನು ರೈಲಿನಲ್ಲಿಯೇ ನೀಡಿದ್ದರು. ಇದ್ದನೆಲ್ಲಾ ಕಂಡ ಸುರೇಶನಿಗೆ ಮಾತೇ ಬರದೆ ಗಾಬರಿಗೊಂಡು ಕುಳಿತಿದ್ದ. ಅಜೇಯನಿಗೆ ಏನೂ ಆಗದೇ ಆರಾಮಾಗಿ ಬಂದರೆ ಸಾಕು ಅಂತ ಸುರೇಶನು ಮನಸ್ಸಿನಲ್ಲೇ ದೇವರನ್ನು ಪ್ರಾರ‍್ತಿಸುತ್ತಿದ್ದನು. .

ರೈಲುಗಾಡಿಯು ಕಮಲಾಪುರ ಜಂಕ್ಶನ್ ರೈಲು ನಿಲ್ದಾಣವನ್ನು ತಲುಪಿತು. ಅಶ್ಟೊತ್ತಿಗೆ ನಿಲ್ದಾಣದಲ್ಲಿ ವೈದ್ಯಕೀಯ ವ್ಯವಸ್ತೆಯನ್ನು ಮಾಡಲಾಗಿತ್ತು, ರೈಲು ಸಿಬ್ಬಂದಿಯವರು ಅಜೇಯನನ್ನು ಆಂಬುಲೆನ್ಸಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೊರಟರು, ಅವರ ಜೊತೆ ರಾಜು ಮತ್ತು ಸುರೇಶ ಕೂಡ ಹೊರಟರು. ಆಸ್ಪತ್ರೆಗೆ ತಲುಪಿದ ತಕ್ಶಣವೇ ಅಲ್ಲಿಯ ಡ್ಯುಟಿ ಡಾಕ್ಟರ್ ಅಜೇಯನನ್ನು ತಪಾಸಣೆ ಮಾಡತೊಡಗಿದರು. ಆದರೆ ಅಶ್ಟೊತ್ತಿಗೆ ಅಜೇಯನ ಪ್ರಾಣ ಪಕ್ಶಿ ಹಾರಿಹೋಗಿತ್ತು. ಇದನ್ನು ತಿಳಿದ ತಕ್ಶಣ ಸುರೇಶನು ಅಲ್ಲಿಯೇ ಕುಸಿದುಬಿದ್ದನು, ರಾಜುವಿನ ದುಕದ ಕಟ್ಟೆ ಒಡೆಯಿತು. ಇಬ್ಬರಿಗೂ ನಂಬುವುದಕ್ಕಾಗಲಿಲ್ಲ. ಒಂದು ಸೀಟಿಗೆ ಜಗಳ ಎಲ್ಲಿಗೆ ಬಂದು ಕೊನೆಗೊಂಡಿತು ಅಂತ.

ರೈಲು ಇಲಾಕೆಯವರು ಅಜೇಯನ ಹತ್ತಿರ ಇದ್ದ ಐ.ಡಿ ಕಾರ‍್ಡ್ ಗಳನ್ನು ತೆಗೆದುಕೊಂಡು, ಅದರಲ್ಲಿನ ಮನೆಯ ವಿಳಾಸಕ್ಕೆ ಸ್ತಳೀಯ ಪೋಲೀಸರ ಸಹಾಯದಿಂದ ಸುದ್ದಿಯನ್ನು ತಲುಪಿಸಿದರು. ಮಗನ ಸಾವಿನ ಸುದ್ದಿಯನ್ನು ತಿಳಿದ ಹೆತ್ತವರಿಗೆ ಕಾಲ ಕೆಳಗಿನ ಬೂಮಿಯೇ ಸರಿದಂತಾಯಿತು. ಹೆತ್ತ ತಾಯಿಯು ಅಲ್ಲಿಯೇ ಪ್ರಜ್ನೆ ತಪ್ಪಿ ಕುಸಿದು ಬಿದ್ದಳು. ಅವರಿಗೆ ಜೀವನವೇ ಕೊನೆಗೊಂಡತೆ ಅನುಬವವಾಗುತ್ತಿತ್ತು. ತಮ್ಮ ಜೀವನವನ್ನೇ ಮೀಸಲಿಟ್ಟು ಓದಿಸಿದ್ದಕ್ಕೆ ಕೊನೆಗಾಲದಲ್ಲಿ ಮಗನು ತಮಗೆ ಆಸರೆ ಆಗುತ್ತಾನೆ ಅಂತ ಕನಸುಗಳನ್ನು ಕಂಡಿದ್ದರು, ತಮ್ಮ ಕಶ್ಟಗಳು ಕೊನೆಗೊಂಡವು ಅಂತ ಸಂತೋಶ ಪಡುತ್ತಿರುವಾಗಲೇ ವಿದಿಯು ಗೋರ ಆಟವನ್ನಾಡಿತ್ತು. ಪೋಲಿಸರು ಕೇಸನ್ನು ಬುಕ್ ಮಾಡಿಕೊಂಡು ಸುರೇಶನನ್ನು ಅರೆಸ್ಟ್ ಮಾಡಿದರು. ಅಜೇಯನ ಶರೀರವನ್ನು ಮರಣೋತ್ತರ ಪರೀಕ್ಶೆ ಮಾಡಿ ಅವನ ಪಾಲಕರಿಗೆ ಹಸ್ತಾಂತರಿಸಿದರು. ಒಂದು ನಿಮಿಶದ ಕೋಪ ಎರಡು ಕುಟುಂಬಗಳನ್ನು ಬೀದಿಗೆ ತಂದಿತು. ಒಂದು ಕಡೆ ಅಜೇಯ ತನ್ನ ಪ್ರಾಣವನ್ನೇ ಕಳೆದುಕೊಂಡನು, ಇನ್ನೊಂದು ಕಡೆ ಸುರೇಶನು ಜೈಲು ಸೇರಿದನು.

ಇದಕ್ಕೆ ಯಾರು ಕಾರಣರು – ರೈಲು ಇಲಾಕೆಯ ಕಟ್ಟಳೆಯೋ? ಸುರೇಶನ ಕೋಪವೋ? ಅತವಾ ಅಜೇಯನ ವಿರೋದವೋ?. ಅವರಿಬ್ಬರರ ಕೋಪವೇ ಇದಕ್ಕೆ ಕಾರಣ. ಮನುಶ್ಯನ ಒಂದು ನಿಮಿಶದ ಕೋಪ ಅವನ ಜೀವನವನ್ನೇ ಹಾಳು ಮಾಡುವುದರ ಜೊತೆಗೆ ಇನೊಬ್ಬರ ಜೀವನವನ್ನೂ ಹಾಳುಮಾಡಬಹುದು. ಆದ್ದರಿಂದಲೇ ಮನುಶ್ಯನು ತನ್ನ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಸುರೇಶನ ವಾದವು ಸರಿಯಾಗಿತ್ತು, ಮೇಲಗಡೆಯಿರುವ ಸೀಟು ಮಲಗಲು ಮಾತ್ರ ಕುಳಿತುಕೊಳ್ಳಲು ಅವನಿಗೆ ಕೆಳಗಿರುವ ಸೀಟು ಬೇಕಲ್ಲ. ಇನ್ನೊಂದು ಕಡೆ ಅಜೇಯನ ವಾದವೂ ಸರಿಯೇ – ಯಾಕೆಂದರೆ side lower berth ನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಬಹುದು ಅಂತ ರೈಲು ಇಲಾಕೆ ಹೇಳುತ್ತದೆ. ಆದರೆ side lower berth ಆರ್.ಎ.ಸಿ ಇದ್ದರೆ, side upper berth ಸೀಟಿನವರು ಬೆಳಗಿನ ಜಾವದಲ್ಲಿ ಎಲ್ಲಿ ಕುಳಿತುಕೊಳ್ಳಬೇಕು ಅಂತ ರೈಲ್ವೆಇಲಾಕೆಯು ಸ್ಪಶ್ಟನೆ ನೀಡುವುದಿಲ್ಲ. ಮೊದಲೇ ಕೆಳಗಡೆ ಇಬ್ಬರು RAC ಸೀಟಿನವರು ಕುಳಿತಿರುತ್ತಾರೆ.ಮೇಲಗಡೆ ಸೀಟಿನವನು ಎಲ್ಲಿ ಕುಳಿತುಕೊಳ್ಳಬೇಕು? ಮೂವರೂ ಹೊಂದಾಣಿಕೆ ಮಾಡಿಕೊಂಡು ಕುಳಿತಿದ್ದರೆ ಈ ಜಗಳ ಆಗುತ್ತಿರಲಿಲ್ಲ.

( ರೈಲ್ವೆ ಇಲಾಕೆಯ ಈ ನೀತಿಯಿಂದ ಪ್ರತಿ ದಿನವೂ ಪ್ರಯಾಣದಲ್ಲಿ ನೂರಾರು ಜಗಳಗಳಾಗುತ್ತಲೇ ಇವೆ. ಪ್ರಯಾಣಿಕರು ಹೊಂದಾಣಿಕೆ ಮಾಡಿಕೊಂಡು ಪ್ರಯಾಣಿಸ ಬೇಕಾದ ಪರಿಸ್ತಿತಿ ಇದೆ. ರೈಲ್ವೆ ಇಲಾಕೆಯು ಈ ಸಮಸ್ಯೆಯನ್ನು ಆದಶ್ಟೂ ಬೇಗ ಪರಿಹರಿಸಲಿ )

ನೀ ಬಾರದಿರುವೆಯಾ ಓ ಕೋಪವೇ

ಬೂಮಿಯ ಮೇಲಿನ ಸಕಲ ಜೀವಾತ್ಮಗಳಲ್ಲಿಯೂ ನೀನಿರುವೆ
ಎರಡಕ್ಶರದ ಹೆಸರಿನಲ್ಲಿ ನಿನ್ನನ್ನು ವರ‍್ಣಿಸಬಹುದೇ

ನಿನ್ನನು ಗೆಲ್ಲಲು ರುಶಿ ಮುನಿಗಳು ವರ‍್ಶಗಟ್ಟಲೇ ತಪಸ್ಸು ಮಾಡಿದರಯ್ಯಾ
ಜನರ ಎದೆಯ ಕಂಬನಿಗಳಿಗೆ ಕಾರಣವಾಗಿ ಪಕ್ಕದಲ್ಲಿ ನಿಂತು ಮುಗುಳ್ನಗೆ ಬೀರುತ್ತಿರುವೆಯಾ
ನಿನ್ನ ಎದುರು ಸಂತೋಶವು ದುರ‍್ಬಲವಾಗುವುದೇ ಇರುತ್ತದೆಯಾ

ನೀ ಬಾರದಿರುವೆಯಾ ಓ ಕೋಪವೇ

(ಚಿತ್ರಸೆಲೆ: railartbyshayne.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: