ಹೆಚ್ಚು ಕೆಲಸ ಮಾಡುವುದರಿಂದ ನಿಜಕ್ಕೂ ಒಳಿತಿದೆಯೇ?

– ರತೀಶ ರತ್ನಾಕರ.

twitter-information-overload

‘ಯಾವಾಗ ನೋಡುದ್ರು ಕೆಲಸ, ಕೆಲಸ, ಕೆಲಸ…’ ಬೆಳಗ್ಗೆ ಎದ್ದು ಹೋದ್ರೆ ಕತ್ತಲೆ ಆಗುವ ತನಕ ಕಚೇರಿಯಲ್ಲೇ ಇರುವವರನ್ನು ನೋಡಿ ಹೀಗೆ ಹೇಳುವುದನ್ನು ಕೇಳಿರಬಹುದು. ಈಗಿನ ಕಂಪನಿಯ ಕೆಲಸಗಳು ಸಾಮಾನ್ಯವಾಗಿ 8 ಗಂಟೆಗಳ ಕಾಲ ಇರುತ್ತದೆ. ಅದಕ್ಕಿಂತ ಹೆಚ್ಚು ಹೊತ್ತು ಕಚೇರಿಯಲ್ಲಿ ಇಲ್ಲವೇ ಮನೆಯಿಂದಲೇ ಕೆಲಸಮಾಡುವುದನ್ನು ನಾವು ನೋಡಿರುತ್ತೇವೆ/ಮಾಡಿರುತ್ತೇವೆ.

ಹೆಚ್ಚು ಕೆಲಸ(Overwork) ವನ್ನು ಏಕೆ ಮಾಡುತ್ತೇವೆ?

1. ಕೆಲವೊಂದು ಸಲ ಕಂಪನಿಯ ನಡೆ-ನುಡಿಯೇ ಹೆಚ್ಚು ಕೆಲಸವನ್ನು ಮಾಡುವುದಾಗಿರುತ್ತದೆ. ಕಂಪನಿಯ ಒಡೆಯರಿಂದ(Owners) ಹಿಡಿದು ಮೇಲುಗರ (Managers)ವರೆಗೂ ಹೆಚ್ಚು ಕೆಲಸವನ್ನು ಮಾಡುತ್ತಿರುತ್ತಾರೆ. ಆಗ ಕೆಲಸಗಾರರೂ ಕೂಡ ಅವರಂತೆ ಕೆಲಸಮಾಡಲಿ ಎಂದು ಎದುರುನೋಡುತ್ತಾರೆ. ರಜೆಯ ದಿನಗಳಲ್ಲಿ ಮತ್ತು ವಾರದ ಕೊನೆಯಲ್ಲಿ ತಕರಾರು ಮಾಡದೇ ಕೆಲಸ ಮಾಡಲು ಸಿದ್ದವಾಗಿರಬೇಕೆಂದು ಬಯಸುತ್ತಾರೆ. ದಿನದ 8 ಗಂಟೆಯನ್ನು ಮೀರಿ ಕೆಲಸಮಾಡಬೇಕೆಂದು ಹೇಳುತ್ತಾರೆ. ಇದರಿಂದಾಗಿ ಕೆಲಸಗಾರರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಕೆಲಸಗಾರರು ಮೇಲುಗರ ಕಾರಣದಿಂದಾಗಿ ಹೆಚ್ಚು ಕೆಲಸ ಮಾಡುವ ಸ್ತಿತಿ ಬಂದಿರುತ್ತದೆ.

2. ಕೆಲಸಗಾರರ ಮನಸ್ತಿತಿಯೂ ಕೂಡ ಕೆಲವೊಮ್ಮೆ ಹೆಚ್ಚು ಕೆಲಸಮಾಡುವಂತೆ ಮಾಡುತ್ತದೆ. ಕೆಲಸದ ಮೇಲಿನ ಒಲವು, ಮುಗಿಸಲೇ ಬೇಕೆಂಬ ಹಟ, ಮೇಲುಗರ ಮೆಚ್ಚುಗೆ ಗಳಿಸುವುದು, ಕಂಪನಿಯಲ್ಲಿ ಮೇಲೆ ಬರಬೇಕೆಂಬ ಹಂಬಲ, ಒಳ್ಳೆಯ ಕೆಲಸಗಾರನೆಂದು ಕರೆಸಿಕೊಳ್ಳುವ ತವಕ ಇಂತಹ ಕಾರಣಗಳು ಹೆಚ್ಚು ಕೆಲಸದತ್ತ ದೂಡುತ್ತವೆ. ಇನ್ನು ಕೆಲವರಿಗೆ ಕೆಲಸ ಮುಗಿಸಬೇಕೆಂಬ ಒತ್ತಡ, ಆತಂಕ, ಕೆಲಸ ಕೈಬಿಟ್ಟು ಹೋಗುವುದೇನೋ ಎಂಬ ಹೆದರಿಕೆಯಂತಹ ಕಾರಣಗಳೂ ಹೆಚ್ಚು ಕೆಲಸ ಎಸಗುವಂತೆ ಮಾಡುತ್ತವೆ.

3. ಕೆಲವು ಕಂಪನಿಗಳಲ್ಲಿ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದರೆ ಗಂಟೆಗೆ ಇಶ್ಟು ಎಂದು ಹೆಚ್ಚಿನ ಹಣ ಸಿಗುತ್ತದೆ, ರಜೆಯ ದಿನ ಇಲ್ಲವೇ ವಾರದ ಕೊನೆಯ ಕೆಲಸಕ್ಕೂ ಹಣವಿದೆ. ಯಾವುದಾದರು ಹಮ್ಮುಗೆಯನ್ನು (project) ಮುಗಿಸಿಕೊಟ್ಟರೆ ಬರುವ ಗಳಿಕೆಯಲ್ಲಿ ಪಾಲು ಸಿಗುತ್ತದೆ. ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಇದ್ದು ಯಾವ ಹೊತ್ತಿನಲ್ಲಿ ಬೇಕಾದರೂ ಕೆಲಸ ಮಾಡುವ ಸವಲತ್ತುಗಳಿರುತ್ತವೆ. ಹೀಗೆ ಹೆಚ್ಚು ಕೆಲಸ ಮಾಡಿದರೆ ಸಿಗುವ ಹಣದ ಗಳಿಕೆ ಹಾಗು ಕೆಲಸ ಮಾಡಲು ಇರುವ ಆಯ್ಕೆಗಳು ಹೆಚ್ಚು ಕೆಲಸ ಮಾಡುವಂತೆ ಸೆಳೆಯುತ್ತವೆ.

ದಿಟವಾಗಿಯೂ ಹೆಚ್ಚು ಕೆಲಸ ಮಾಡಿದರೆ ಗಳಿಕೆ ಇದೆಯೇ?

ಹೆಚ್ಚಿನ ಕೆಲಸ ಕೆಲಸಗಾರನಿಗೆ ಒಳ್ಳೆಯದು ಮಾಡುವುದೇ? ಇದರಿಂದ ಕಂಪನಿಗೆ ಒಳ್ಳೆಯದಾಗುತ್ತಿದೆಯೇ? ಎಂಬ ಕೇಳ್ವಿಗಳ ಸುತ್ತ ಹಲವಾರು ಅರಕೆಗಳು (researches) ನಡೆದಿವೆ. ಹೆಚ್ಚಿನ ಕೆಲಸ ಮಾಡುವುದಕ್ಕೆ ಕಾರಣ ಯಾವುದೇ ಇರಬಹುದು ಆದರೆ ಇದರಿಂದ ಕೆಲಸಗಾರರಿಗಾಗಲಿ, ಕಂಪನಿಯವರಿಗಾಗಲಿ ಯಾವ ಗಳಿಕೆಯೂ ಇಲ್ಲ ಎಂದು ಹೆಚ್ಚಿನ ಅರಕೆಗಳು ತೋರಿಸಿಕೊಟ್ಟಿವೆ.

1. ಒಂದು ವಾರದಲ್ಲಿ ಯಾವ ಕೆಲಸಗಾರರು ದಿಟವಾಗಿಯೂ ಹೆಚ್ಚು ಕೆಲಸ ಮಾಡಿದ್ದಾರೆ, ಯಾವ ಕೆಲಸಗಾರರು ಮೈಗಳ್ಳತನ ಮಾಡಿದ್ದಾರೆ ಎಂದು ಆ ತಂಡದ ಮೇಲುಗರಿಗೆ(manager) ಗುರುತಿಸಲು ಆಗುವುದಿಲ್ಲ. ವಾರಕ್ಕೆ ಬೇಕಾದಶ್ಟು ಕೆಲಸವನ್ನು ಮಾತ್ರ ಮಾಡಿ ಅದನ್ನು ಮೇಲುಗರಿಗೆ ತಿಳಿಸುವ ಒಳ್ಳೆಯತನ ತೋರಿದರೆ, ‘ಕಡಿಮೆ ಕೆಲಸ ಮಾಡಿದ್ದೀಯ…’ ಎಂದು ಮೇಲುಗರ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ, ಎಂದು ಬಾಸ್ಟನ್ ಕಲಿಕೆವೀಡಿನ ಪ್ರೊಪೆಸರ್ ಆದ ಎರಿನ್ ರೀಡ್ (Erin Reid) ಮತ್ತು ತಂಡದವರು ನಡೆಸಿದ ಅರಕೆಯಲ್ಲಿ ತಿಳಿದುಬಂದಿದೆ. ಎಶ್ಟು ಬೇಕೋ ಅಶ್ಟು ಮಾತ್ರ ಕೆಲಸ ಮಾಡಿದವರು ಕಡಿಮೆ ಸಾದಿಸಿದ್ದಾರೆ, ಹೆಚ್ಚು ಕೆಲಸ ಮಾಡಿದವರು ಹೆಚ್ಚು ಸಾದಿಸಿದ್ದಾರೆ ಎಂದು ಹೇಳಲು ಯಾವ ಆದಾರವೂ ಇಲ್ಲ ಎಂದು ಎರಿನ್ ಅವರು ಹೇಳುತ್ತಾರೆ.

2. ಪಿನ್ನಿಶ್ ಇನ್ಸ್ಟಿಟ್ಯೂಟ್ ಆಪ್ ಅಕ್ಯುಪೇಶನಲ್ ಹೆಲ್ತ್ ನ ಕೆಲಸಗಾರರಾದ ಮಾರಿಯಾನ ವೀರ‍್ಟನೆನ್ ಮತ್ತವರ ತಂಡದವರು ನಡೆಸಿದ ಅರಕೆಯಲ್ಲಿ, ಹೆಚ್ಚಿನ ಕೆಲಸವು ಕೆಲಸಗಾರರ ಮೇಲೆ ಒತ್ತಡವನ್ನು ಹೆಚ್ಚಿಸಿ ಮಯ್ಯೊಳಿತನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ. ನಿದ್ದೆ ಕಡಿಮೆಯಾಗುವುದು, ಆತಂಕ ಹೆಚ್ಚಾಗುವುದು, ಗುಂಡಿಗೆಯ ತೊಂದರೆಗೆ ಒಳಗಾಗುವುದು, ಹೊಗೆಬತ್ತಿ/ಕುಡಿತದ ಚಟಕ್ಕೆ ಬಲಿಯಾಗುವುದು ಹೀಗೆ ಕೆಲಸಗಾರರ ಮಯ್ಯೊಳಿತು (health) ಕುಗ್ಗಿ ತೊಂದರೆಗೆ ಒಳಗಾಗುತ್ತಾರೆ. ಕೆಲಸಗಾರರ ಮಯ್ಯೊಳಿತು ಕುಗ್ಗಿದರೆ ಕಂಪನಿಯವರೂ ಕೂಡ ತೊಂದರೆಗೆ ಒಳಗಾಗುತ್ತಾರೆ. ಮೈಗೆ ಸರಿಯಿಲ್ಲದೇ ರಜೆಗಳು ಹಾಕುವುದು ಮತ್ತು ಕೆಲಸದ ಮೇಲೆ ನಿಗಾ ತಪ್ಪುವುದು, ಇಂತಹವುಗಳಿಂದ ಕಂಪನಿಯ ಕೆಲಸಗಳು ಸರಿಯಾಗಿ ಮುಂದೆಹೋಗುವುದಿಲ್ಲ. ಇದಲ್ಲದೇ ಮತ್ತೊಂದು ತೊಂದರೆ ಎಂದರೆ ಮಯ್ಯೊಳಿತು ಸರಿಯಿಲ್ಲದ ಕೆಲಸಗಾರರು ಹೆಚ್ಚಾದೊಡನೆ ಕಂಪನಿಯವರ ಮುನ್ಗಾಪಿನ (health insurance) ಕಂತು ಕೂಡ ಏರಿಕೆಯಾಗುತ್ತದೆ. ಇದು ಕಂಪನಿಯ ಹಣಕಾಸಿಗೆ ಪೆಟ್ಟು ನೀಡುತ್ತದೆ. ಒಟ್ಟಾರೆಯಾಗಿ, ಹೆಚ್ಚಿನ ಕೆಲಸ ಮಾಡುವುದು ಇಲ್ಲವೇ ಮಾಡಿಸುವುದು ಕೆಲಸಗಾರರಿಗಾಗಲಿ, ಕಂಪನಿಗಾಗಲಿ ಒಳ್ಳೆಯದಲ್ಲ ಎಂಬುದನ್ನು ಮಾರಿಯಾನ ಅವರ ಅರಕೆ ತೋರಿಸಿಕೊಡುತ್ತದೆ.

3. ಕೆಲಸದ ಮೇಲಿನ ಒಲವಿನಿಂದಾಗಿ ತಾನಾಗಿಯೇ ಹೆಚ್ಚು ಕೆಲಸ ಮಾಡುವುದೂ ತಪ್ಪು. ಹೆಚ್ಚಿನ ಕೆಲಸ ಬಿರ‍್ರನೆ ಸುಸ್ತು ಮಾಡುತ್ತದೆ, ಸುಸ್ತಾದಾಗ ಕೆಲಸದಲ್ಲಿ ತಪ್ಪು ಮಾಡುವ ಸಾದ್ಯತೆಗಳಿವೆ. ಅಲ್ಲದೇ ಇದು ನಿದ್ದೆಗೂ ತೊಂದರೆ ಕೊಡುತ್ತದೆ. ಸರಿಯಾದ ನಿದ್ದೆ ಬಾರದೇ ಹೋದರೆ ಅದು ಗೆಯ್ಮೆ (performance)ಯ ಮೇಲೆ ಪೆಟ್ಟು ನೀಡುತ್ತದೆ. 5% ಅಮೇರಿಕಾದ ಕೆಲಸಗಾರರು ಮಾತ್ರ ಬೇಕಾದ 7 ಗಂಟೆ ನಿದ್ದೆಯನ್ನು ಪಡೆಯುತ್ತಾರೆ ಎಂದು ಪಿಟ್ಸ್ ಬರ‍್ಗ್ ನ ಮೆಡಿಕಲ್ ಸೆಂಟರ್‍ನಲ್ಲಿ ನಡೆಸಿದ ಅರಕೆಯಲ್ಲಿ ಬಯಲಾಗಿದೆ.

4. ‘ಕತ್ತೆ ದುಡಿದ ಹಾಗೆ ದುಡಿಯುತ್ತಾರೆ ಆದರೂ ಮೇಲೆ ಬಂದಿಲ್ಲ’ ಎಂದು ಕೇಳಿರಬಹುದು. ಹೆಚ್ಚಿನ ದುಡಿಮೆ ಗುರಿಯ ಮೇಲಿನ ಗಮನವನ್ನು ತಪ್ಪಿಸಬಹುದು. ಮೈ ಬಗ್ಗಿಸಿ ದುಡಿಯುವುದು ಮಾತ್ರ ಗೊತ್ತಿರುತ್ತದೆ, ಯಾಕೆ ಈ ಕೆಲಸ ಮಾಡುತ್ತಿರುವೆ? ಇದರಿಂದ ಏನು ಉಪಯೋಗ? ಎಂಬ ಅರಿವು ಇಲ್ಲದೇ ಹೋಗುತ್ತದೆ. ಕೆಲಸದಲ್ಲೇ ಕಳೆದುಹೋಗುವ ಸಾದ್ಯತೆಗಳಿವೆ.

ಹಾರ‍್ವರ‍್ಡ್ ಕಲಿಕೇವೀಡಿನವರು ತಿಳಿಸುವಂತೆ ದಿನಕ್ಕೆ 8 ಗಂಟೆಗಳ ಸರಿಯಾದ ಕೆಲಸ, ವಾರದ ಕೊನೆಯಲ್ಲಿ ಬಿಡುವು ಹಾಗು ಆಗಾಗ ರಜೆಯ ತಿರುಗಾಟಗಳು ಕೆಲಸಗಾರರ ಮಾಡುಗತನವನ್ನು (productivity) ಹೆಚ್ಚಿಸುತ್ತವೆ. ಇದು ಕೆಲಸಗಾರರು ಮತ್ತು ಕಂಪನಿಗಳು ಇಬ್ಬರಿಗೂ ಒಳ್ಳೆಯದಾಗಿದೆ. ಹಾಗಾಗಿ, ಗಡಿಯಾರದತ್ತ ಒಂದು ಕಣ್ಣಿರಲಿ, ಕೊಟ್ಟಿರುವ ಹೊತ್ತಿನಲ್ಲಿ ಕೆಲಸವನ್ನು ಸರಿಯಾಗಿ ಮಾಡಿ ಮುಗಿಸುವ ಗುರಿಯಿರಲಿ, ದಿನವನ್ನು ಎಳೆದು ಹೆಚ್ಚು ಕೆಲಸ ಮಾಡುವ ಯೋಚೆನೆಗೆ ಒಂದು ತಡೆಯಿರಲಿ.

(ಮಾಹಿತಿ ಸೆಲೆ: hbr.org)
(ಚಿತ್ರ ಸೆಲೆ: eduncovered.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.