ಬದುಕೆಲ್ಲ ಸಲಹುತ್ತ ನಡೆಯೇ
ಇಳೆಯ ಒಡಲಾಳದಾರಯ್ವವನುಂಡು
ತಾ ಚಿಗುರೊಡೆದು ಬೆಳೆದಂತೆ ಮೊಳಕೆ
ನುಡಿಯ ಕಡಲಾಳದಾರುಮೆಯನುಂಡು
ನಾ ಬೆಳೆದಿರುವೆ ಸವಿದಂತೆ ಕುಡಿಕೆ
ಹೆತ್ತ ಮರಿಗಳ ಅಬ್ಬೆ ಮಯ್ಚಾಚಿ ಒರಗಲು
ಎದೆಹಾಲು ತೊಟ್ಟಿಕ್ಕುವಂತೆ
ನಾಡ ಮಕ್ಕಳ ಅಬ್ಬೆ ನುಡಿಯಿತ್ತು ಪೊರೆಯಲು
ಸಿಹಿಹೊನಲು ನೆರೆಯುಕ್ಕುದಂತೆ
ಎನಿತು ಆಟಗಳೊಳಗೆ ಎನಿತು ಹೂಟಗಳೊಳಗೆ
ಹುರಿಯಿತ್ತು ಕಯ್ಬಿಡದೆ ಕಾಯಿ
ಬಾಳ ಹಾದಿಯೊಳಿಳಿದು ಆಳ ಕೂರ‍್ಮೆಯೊಳಳೆದು
ನುಡಿತುತ್ತು ಉಣಬಡಿಸು ತಾಯಿ
ಅರಿವು ಮೂಡಿದಲಿಂದ ಇರುವು ಮುಳುಗುವ ತನಕ
ಬಗೆಗೆಲ್ಲ ಕಸುವಿತ್ತ ನುಡಿಯೇ
ಇಳಿದು ನಿನ್ನೊಡಲೊಳಗೆ ತಿರುಳ ಹೀರುವ ತವಕ
ಬದುಕೆಲ್ಲ ಸಲಹುತ್ತ ನಡೆಯೇ
(ಚಿತ್ರ ಸೆಲೆ: stuartwilde.com )
ಇತ್ತೀಚಿನ ಅನಿಸಿಕೆಗಳು