ಶೆವರ‍್ಲೆಯ ಹೊಚ್ಚ ಹೊಸ ಟ್ರಯಲ್‌ಬ್ಲೆಜರ್

ಜಯತೀರ‍್ತ ನಾಡಗವ್ಡ.

4

ಇಂದು ಹೆಚ್ಚಿನ ಬಂಡಿ ತಯಾರಕ ಕೂಟದವರ ಕಣ್ಣು ಕಿರು ಆಟೋಟ/ಹಲಬಳಕೆಯ ಬಂಡಿಗಳತ್ತ ನೆಟ್ಟಿದ್ದರೆ ಜನರಲ್ ಮೋಟಾರ‍್ಸ್ ‌ನ ಶೆವರ‍್ಲೆ(Chevrolet) ತಂಡದವರು ಬೇರೆಯತ್ತ ತಮ್ಮ ಕಣ್ಣು ಹರಿಸಿದಂತಿದೆ.  ಅಗ್ಗದ ಬೆಲೆಯ ಕಿರು ಆಟೋಟ ಬಳಕೆಯ ಬಂಡಿಗಳು ಬಾರತದಲ್ಲಿ ಹೆಚ್ಚುತ್ತಿದ್ದರೂ ದುಬಾರಿ ಆಟೋಟದ ಬಳಕೆಯ ಬಂಡಿಗಳ ಮೆರುಗು ಎಂದಿನಂತೆ ಹಾಗೇ ಇದೆ. ಡಸ್ಟರ್, ಎಕೊ ಸ್ಪೋರ‍್ಟ್, ಕ್ರೇಟಾ ನಂತ ಕಿರು ಆಟೋಟದ ಬಂಡಿಗಳು ಬಂದರೂ ಟೊಯೊಟಾ ಪಾರ‍್ಚುನರ್ (Toyota Fortuner), ಮಿಟ್ಸುಬಿಶಿ ಪಜೆರೊ ಸ್ಪೋರ‍್ಟ್ (Mitsubishi Pajero Sport), ಪೋರ‍್ಡ್ ಎಂಡೆವರ್ (Ford Endeavour) ಇಂತ ದೊಡ್ಡ ಗಾತ್ರದ ಆಟೋಟದ ಬಳಕೆಯ ಕಾರುಗಳ(SUV) ಬೇಡಿಕೆ ತಗ್ಗಿಲ್ಲ.

ಈ ದುಬಾರಿ ದೊಡ್ಡ ಬಂಡಿಗಳ ಕೊಳ್ಳುಗರೇ ಬೇರೆ. ಹಣವಂತರು, ಆಳ್ವಿಗರು, ಆಟಗಾರರು, ಓಡುತಿಟ್ಟದ ನಟ/ನಟಿಯರಿಗೆ ಈಗಲೂ ಇಂತ ಕಾರುಗಳೆಂದರೇ ಅಚ್ಚುಮೆಚ್ಚು. ಇದನ್ನರಿತ ಜನರಲ್ ಮೋಟಾರ‍್ಸ್ ಕೂಟದವರು ಇದೀಗ ಹೊಸದೊಂದು ಬಂಡಿಯನ್ನು ತಯಾರಿಸಿ ಹೊರತಂದಿದ್ದಾರೆ. ಇದೇ ಟ್ರಯಲ್‌ಬ್ಲೆಜರ್ (Trailblazer).

ಇಂತ ದೊಡ್ಡ ಗಡುಸಾದ ಆಟೋಟ ಬಳಕೆಯ ಬಂಡಿಗಳ ಗುಂಪಿನಲ್ಲಿ ಆಯ್ಕೆಗಳು ಹೆಚ್ಚೇನೂ ಇಲ್ಲ.  ಅದಕ್ಕೇ ಇರಬೇಕು ಟೊಯೊಟಾದವರ ಪಾರ‍್ಚುನರ್‌ ಈ ಗುಂಪಿನ ಕಾರುಗಳಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದೆ. ದೊಡ್ಡ ಬಂಡಿಗಳ ಈ ಸಣ್ಣ ಗುಂಪಿಗೆ ಟ್ರಯಲ್‌ಬ್ಲೆಜರ್ ಹೊಸ ಸೇರ‍್ಪಡೆ. ಬಾರತದ ಮಂದಿ ಜನರಲ್ ಮೋಟಾರ‍್ಸ್ ಶೆವರ‍್ಲೆ ಕಾರುಗಳಿಗೆ ಅಶ್ಟೇನೂ ಮೆಚ್ಚಿಕೊಂಡಿಲ್ಲವಾದರೂ ಪಾರ‍್ಚುನರ್, ಪಜೆರೊ ಸ್ಪೋರ‍್ಟ್‌ಗಳ ಮೆರೆದಾಟ ತಗ್ಗಿಸಿ ಮೇಲೆರುವ ತವಕ ಇವರದು.

ಗುಜರಾತ್‌ನ ಹಲೋಲ್ ಮತ್ತು ಮಹಾರಾಶ್ಟ್ರದ ಪುಣೆ ಬಳಿಯಿರುವ ತಳೆಗಾಂವ್ ಎರಡು ಕಡೆ ಜನರಲ್ ಮೋಟಾರ‍್ಸ್‌ನ ಶೆವರ‍್ಲೆ ತನ್ನ ಕಾರ‍್ಕಾನೆ ಹೊಂದಿದೆ. ಈ ಕಾರ‍್ಕಾನೆಗಳಲ್ಲಿ ತಯಾರಿಸಿದ ಹೆಚ್ಚಿನ ಬಂಡಿಗಳು ಹೊರ ನಾಡುಗಳಿಗೆ ಕಳಿಸಲ್ಪಟ್ಟಿವೆ. ಜಗತ್ತಿನ ತಾನೋಡ ಕೂಟವೊಂದರ ಮೊತ್ತ ಮೊದಲ ಹೆಣ್ಣು ಮೇಲಾಳು ಎಂದು ಹೆಸರುವಾಸಿಯಾಗಿರುವ ಜನರಲ್ ಮೋಟಾರ‍್ಸ್‌ನ ಮ್ಯಾರಿ ಬರ್ರಾ (Marry Barra) ಇತ್ತಿಚೀಗೆ ಬಾರತ ಪ್ರವಾಸ ಕಯ್ಗೊಂಡಿದ್ದರು. ಬೇಡಿಕೆ ಇಳಿಮುಕ ಕಂಡಿರುವ ಕಾರಣ ಗುಜರಾತ್‌ನಲ್ಲಿರುವ ಹಲೋಲ್ ಕಾರ‍್ಕಾನೆಯನ್ನು ಮುಚ್ಚಿ  ಅಲ್ಲಿರುವ ಕೆಲಸವನ್ನು ಅರ‍್ದದಶ್ಟೇ ಬಳಕೆಯಾಗುತ್ತಿರುವ ಪುಣೆಯ ತಳೆಗಾಂವ್ ಕಾರ‍್ಕಾನೆಗೆ ವಹಿಸುವ ಇಂಗಿತ ಹೇಳಿಕೊಂಡಿದ್ದರು. ಇದನ್ನು ಕಂಡು ಬಾರತದಲ್ಲಿ ಶೆವರ‍್ಲೆ ತನ್ನ ಹರವು ಕಡಿತಗೊಳಿಸುತ್ತಿದೆ ಎನ್ನಲಾಗಿತ್ತು ಆದರೆ ಟ್ರಯಲ್‌ಬ್ಲೆಜರ್  ಬೀದಿಗಿಳಿಸುವ ಮೂಲಕ ಇದನ್ನು ಸುಳ್ಳಾಗಿಸಿದೆ. ಟ್ರಯಲ್‌ಬ್ಲೆಜರ್‌ಬಂಡಿ ಹೇಗಿರಲಿದೆ ಎನ್ನುವುದನ್ನು ನೋಡೋಣ ಬನ್ನಿ.

1

ಬಿಣಿಗೆ (Engine):

2.8 ಲೀಟರ್ ಅಳತೆಯ ದೊಡ್ಡ ಡ್ಯುರಾಮ್ಯಾಕ್ಸ್ ಬಿಣಿಗೆ ಟ್ರಯಲ್‌ಬ್ಲೆಜರ್‌ಗೆ ಕಸುವು ತುಂಬಲಿದೆ. 4 ಉರುಳೆಯ 2 ಮೇಲುಬ್ಬುಗುಣಿಗಳ ಬಿಣಿಗೆಗೆ 200 ಪಿಎಸ್ ಕಸುವು 500 ನ್ಯೂಟನ್ ಮೀಟರ್ ತಿರುಗುಬಲ ಉಂಟು ಮಾಡುವ ಡ್ಯುರಾಮ್ಯಾಕ್ಸ್ (Duramax) ಅಪ್ಪಟ ಆಟೋಟದ ಬಳಕೆ ಬಂಡಿಯ ಅನುಬವ ನೀಡಲಿದೆ. ಸಾಮಾನ್ಯವಾಗಿ ಇಂತ ದೊಡ್ಡ ಆಟೋಟದ ಬಂಡಿಗಳ ಓಡಿಸುಗರು ಹೆಚ್ಚಿನ ಕಸುವು ಮತ್ತು ತಿರುಗುಬಲ ಬಯಸುತ್ತಾರೆ. ಹಾಗಾಗಿ ಇತರೆ ಕಾರುಗಳಿಗಿಂತ ದೊಡ್ಡ ಆಟೋಟದ ಬಂಡಿಗಳಲ್ಲಿ ಕಸುವು, ತಿರುಗುಬಲ ಮುಂತಾದವು ಹೆಚ್ಚಿನದೇ ಆಗಿರುತ್ತದೆ ಆದರೂ ಟ್ರಯಲ್‌ಬ್ಲೆಜರ್ ಇದರಲ್ಲೂ ಒಂದು ಹೆಜ್ಜೆ ಮುಂದೆ ಇದೆ ಎನ್ನಬಹುದು. 500 ನ್ಯೂಟನ್ ಮೀಟರ್ ತಿರುಗುಬಲ ಸಾಮಾನ್ಯವಾಗಿ ದೊಡ್ಡ ಟ್ರಕ್ ಇಲ್ಲವೇ ಬಸ್ಸುಗಳಲ್ಲಿ ಕಂಡು ಬರುವಂತದ್ದು. ಕರ‍್ನಾಟಕ ನಾಡಿನ ಹಲವೆಡೆ ಓಡಾಡುತ್ತಿರುವ ಅಶೋಕ್ ಲೇಲ್ಯಾಂಡ್‌ರವರ ಸಾರಿಗೆ ಬಸ್ಸುಗಳು ಉಂಟು ಮಾಡುವಶ್ಟು ತಿರುಗುಬಲ ಇದರಲ್ಲಿದೆ ಎಂದರೆ ಓಡಿಸುಗರಿಗೆ ಸುಗ್ಗಿಯೇ ಸರಿ.

Table1.png

ಸಾಗಣಿ (Transmission):

ಟ್ರಯಲ್‌ಬ್ಲೆಜರ್ ಬಂಡಿಗೆ ತನ್ನಿಡಿತದ ಸಾಗಣಿ (Automatic Transmission)  ಅಳವಡಿಸಲಾಗಿದೆ. 6 ವಿವಿದ ಬಗೆಯ ವೇಗದ ತನ್ನಿಡಿತದ ಸಾಗಣಿ ಹೆದ್ದಾರಿಯ ಓಡಾಟಕ್ಕೆ ಹೇಳಿ ಮಾಡಿಸಿದಂತಿದೆ.

ಮಯ್ಮಾಟ:

ಮಯ್ಮಾಟದಲ್ಲಿ ಟ್ರಯಲ್‌ಬ್ಲೆಜರ್ ಯಾವುದರಲ್ಲೂ ಕಡಿಮೆ ಇಲ್ಲ. 4878 ಮಿಲಿಮೀಟರ್ ಉದ್ದ, 2132 ಮಿಲಿಮೀಟರ್ ಅಗಲ, 1851 ಮಿಲಿಮೀಟರ್ ಎತ್ತರ ಮತ್ತು 250 ಮಿಲಿಮೀಟರ್‌ಗೂ ಹೆಚ್ಚಿನ ನೆಲತೆರವು ನೋಡಿದರೆ ಟ್ರಯಲ್‌ಬ್ಲೆಜರ್‌ಗೆ ಸಾಟಿ ಮತ್ತೊಂದಿಲ್ಲವೆನ್ನಬಹುದು. ಗಟ್ಟಿಮುಟ್ಟಾದ ದೇಹದ ಆನೆಯೇ ನಮ್ಮ ಮುಂದಿದೆ ಎನ್ನುವ ಅನುಬವ.

ಬಂಡಿಯ ಒಳಗೆ ಕಣ್ಣು ಹಾಯಿಸಿದರೆ ನಿಮಗೆ ಬೇಕಾದ ಎಲ್ಲ ಪರಿಚೆಗಳು ಕಾಣಸಿಗುತ್ತವೆ. 7 ಇಂಚಿನ ಸೋಕು ತೆರೆಯ “ಮಾಯ್ ಲಿಂಕ್” (My Linc) ಎಂಬ ಹೊಸ ತಿಳಿನೆಲೆ ಏರ‍್ಪಾಟು (Infotainment system) ಇದೇ ಮೊದಲ ಬಾರಿಗೆ ಶೆವರ‍್ಲೆ ಬಂಡಿಯೊಂದರ ಮೂಲಕ ಬಾರತಕ್ಕೆ ಪರಿಚಯಿಸುತ್ತಿದೆ. ಹಾಡು ಕೇಳಲು, ಕರೆ ಮಾಡಲು, ತಲುಪುದಾರಿ ಏರ‍್ಪಾಟು ಬಳಸಲು ಹೀಗೆ ಎಲ್ಲವನ್ನೂ ಈ ಸೋಕು ತೆರೆಯ ಮೂಲಕ ಮಾಡಬಹುದು.

3

ದಪ್ಪಗಿದ್ದವರು, ಎತ್ತರವಿದ್ದವರು ಹೆದರುವ ಮಾತೇ ಇಲ್ಲ. ಎಲ್ಲರಿಗೂ ಬಂಡಿಯಲ್ಲಿ ಸಾಕಶ್ಟು ಜಾಗವಿದೆ. ಯಾವುದೇ ಕಿರಿಕಿರಿ ಇಲ್ಲದೇ ಕೈ, ಕಾಲು, ತಲೆಯನ್ನು ನಿಮಗಿಶ್ಟದಂತೆ ಚಾಚಿಕೊಂಡು 7 ಮಂದಿ ಹಾಯಾಗಿ ಕೂತು ಸಾಗಬಹುದು.  ಹಿಂಬಾಗದ ಎರಡನೇ ಮತ್ತು ಮೂರನೇ ಸಾಲಿಗೂ ಕುಳಿರು ಪೆಟ್ಟಿಗೆಯ ಕಿಂಡಿ ನೀಡಿದ್ದು ಎಲ್ಲ ಪಯಣಿಗರಿಗೂ ಸಮನಾದ ತಂಗಾಳಿ ಹೊರಸೂಸಲಿದೆ. ಹಿಂದುಗಡೆಯ 2 ಮತ್ತು 3 ನೇಯ ಸಾಲಿನ ಕೂರುಗಳನ್ನು ಪೂರ‍್ತಿಯಾಗಿ ಮಡಚಿಡಬಹುದು. ಹೀಗೆ ಮಡಚಿದರೆ ಇಬ್ಬರು ಮಲಗುವಶ್ಟು ದೊಡ್ಡ ಜಾಗವೇ ಇದೆ ಎನ್ನಬಹುದು.

2

ಟ್ರಯಲ್‌‍ಬ್ಲೆಜರ್ ಬಂಡಿಯ ಕಾಪಿನ ವಿಶಯದಲ್ಲಿ ಯಾವುದೇ ರಾಜಿಯಾದಂತೆ ತೋರುತ್ತಿಲ್ಲ. ಹೆಚ್ಚು ಕಡಿಮೆ ಎಲ್ಲ ಕಾಪಿನ ಪರಿಚೆಗಳು ಬಂಡಿಯಲ್ಲಿವೆ. ಸಿಲುಕದ ತಡೆತ (Anti-lock Braking System), ಗಾಳಿಚೀಲ (Airbag), ಕದಲ್ಗಾಪು (Immobilizer), ಹಿಡಿತದ ಅಂಕೆಯ ಏರ‍್ಪಾಟು (Traction Control system) ಇವೆಲ್ಲವೂ ಬಂಡಿಯಲ್ಲಿ ಪಯಣಿಸುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿವೆ.

ಬಿಳಿ, ಕಂದು, ಬೆಳ್ಳಿ, ಕೆಂಪು, ಕಪ್ಪು, ನೀಲಿ, ಬೂದು ಹೀಗೆ 7 ಬಣ್ಣಗಳ ಆಯ್ಕೆ ಸಿಗಲಿದೆ.

Table2

ಪಯ್ಪೋಟಿ:

 ಈ ಮೊದಲೇ ಹೇಳಿದಂತೆ ಪಾರ‍್ಚುನರ್ ಮತ್ತು ಪಜೆರೊ ಸ್ಪೋರ‍್ಟ್ ಟ್ರಯಲ್‌ಬ್ಲೆಜರ್‌ಗೆ ನೇರಾನೇರ ಎದುರಾಳಿಗಳು. ಉದ್ದ, ಅಗಲ, ಎತ್ತರ, ಗಾಲಿಗಳ ನಡುವಿನ ದೂರ, ನೆಲತೆರವು ಎಲ್ಲ ಆಯಗಳಲ್ಲಿ ಟ್ರಯಲ್‌ಬ್ಲೆಜರ್ ಎದುರಾಳಿಗಳನ್ನು ಸುಲಬವಾಗಿ ಮೀರಿಸುತ್ತದೆ. ಟ್ರಯಲ್‌ಬ್ಲೆಜರ್‌ನ ಡ್ಯುರಾಮ್ಯಾಕ್ಸ್ (Duramax) ಬಿಣಿಗೆಗಿಂತ ತುಸು ದೊಡ್ಡದಿರುವ 3 ಲೀಟರ್ ಅಳತೆಯ ಪಾರ‍್ಚುನರ್ ಬಿಣಿಗೆ ಡ್ಯುರಾಮ್ಯಾಕ್ಸ್‌ನಶ್ಟು ಕಸುವಾಗಲಿ ತಿರುಗುಬಲವಾಗಲಿ ಹೊಂದಿಲ್ಲ. ಹೋಲಿಕೆಯಲ್ಲಿ ತುಸು ಸಣ್ಣದಾದ ಎರಡುವರೆ ಲೀಟರ್ ಅಳತೆಯ ಪಜೆರೊ ಸ್ಪೋರ‍್ಟ್‌ನಲ್ಲಿ ಜೋಡಿಸಲಾಗಿರುವ ಬಿಣಿಗೆ ಪಾರ‍್ಚುನರ್ ಬಿಣಿಗೆಗಿಂತ ಹೆಚ್ಚು ಕಸುವು ಮತ್ತು ತಿರುಗುಬಲ ನೀಡುತ್ತದೆ. ಒಟ್ಟಿನಲ್ಲಿ ನೋಡಿದರೆ ಟ್ರಯಲ್‌ಬ್ಲೆಜರ್ ಎದುರಾಳಿಗಳ ಮುಂದೆ ಬಲಬೀಮನೇ ಎನ್ನಬಹುದು.

Table3

ಮಯ್ಲಿಯೋಟದ ಹೋಲಿಕೆ ಬಂದಾಗ ಪಾರ‍್ಚುನರ್ ಬಂಡಿ ಲೀಟರ್ ಡಿಸೇಲ್‌ಗೆ ಸುಮಾರು 12 ಕಿಮೀ ಸಾಗಿದರೆ ಟ್ರಯಲ್‌ಬ್ಲೆಜರ್ 11.45 ಕಿಮೀ ಅಶ್ಟೇ ಸಾಗುವುದು. ಪಜೆರೊ ಸ್ಪೋರ‍್ಟ್ ಬರೀ 10.77 ಕಿಮೀ ಓಡುವ ಮೂಲಕ ಹಿಂದೆ ಬೀಳುತ್ತದೆ.

ಟ್ರಯಲ್‌ಬ್ಲೆಜರ್ 6-ವೇಗದ ತನ್ನಿಡಿತದ ಸಾಗಣಿ ಹೊಂದಿದ್ದರೆ ಪಾರ‍್ಚುನರ್‌ನಲ್ಲಿ 5-ವೇಗದ ತನ್ನಿಡಿತ ಸಾಗಣಿ ನೀಡಿದ್ದಾರೆ, ಮಿಟ್ಸುಬಿಶಿಯ ಪಜೆರೊ ಸ್ಪೋರ‍್ಟ್‌ಗೆ 5-ವೇಗದ ಓಡಿಸುಗನಿಡಿತದ ಸಾಗಣಿ ಅಳವಡಿಸಲಾಗಿದೆ.

Table4

ಬೆಲೆ:

ಟ್ರಯಲ್‌ಬ್ಲೆಜರ್ ಬಂಡಿಯ ಬೆಲೆ 26.40 ಲಕ್ಶಗಳಾಗಿದೆ.  ಇದೇ ಮೊತ್ತ ಮೊದಲಿಗೆ ಬಂಡಿಯೊಂದನ್ನು ಮಿನ್ಕೊಳುಕೊಡೆ (E-Commerce) ತಾಣದಲ್ಲಿ ಮುಂಗಡ ಕಾಯ್ದಿರಿಸುವ ಸೇವೆ ನೀಡಿದ್ದಾರೆ. ಹೆಚ್ಚುತ್ತಿರುವ ಆನ್ಲಾಯಿನ್ ಕೊಳ್ಳುಗರನ್ನು ಕಂಡು ಈ ಹೊಸ ತಂತ್ರ ಹೆಣೆಯುವ ಮೂಲಕ ಹೊಸ ಮಾದರಿಯ ಮಾರಾಟಕ್ಕೆ ಇದು ನಾಂದಿಹಾಡಿದೆ. ಇದೇ 21ನೇ ಅಕ್ಟೋಬರ್‌ನಿಂದ 25ನೇ ಅಕ್ಟೋಬರ್‍‌‌ವರೆಗೆ ನೀವು ಅಮೆಜಾನ್ ಎಂಬ ಮಿನ್ಕೊಳುಕೊಡೆ ತಾಣದಲ್ಲಿ ಇದನ್ನು ಕಾಯ್ದಿರಿಸಲು ಅವಕಾಶ ಮಾಡಲಾಗಿತ್ತು.

ಮೊದಲ ಕೆಲ ತಿಂಗಳು ಈ ಬಂಡಿಯನ್ನು ತೈಲ್ಯಾಂಡ್ ಮೂಲಕ ತರಿಸಿಕೊಂಡು ಬಾರತದಲ್ಲಿ ಮಾರಲಾಗುವುದು. ಮುಂಬರುವ ಕೆಲ ತಿಂಗಳ ನಂತರ ಬಾರತದಲ್ಲಿ ಇವುಗಳನ್ನು ತಯಾರಿಸಲಾವುದು ಎನ್ನುವ ಸುದ್ದಿ ಬಂದಿದೆ. ಎಲ್ಲ ರೀತಿಯ ತಯಾರಿ ಮಾಡಿಕೊಂಡು ದೊಡ್ಡ ಆಟೋಟದ ಬಳಕೆ ಬಂಡಿಯನ್ನು ಬಿಡುಗಡೆ ಮಾಡಿರುವ ಶೆವರ‍್ಲೆ ಕೂಟ ಈಗಾಗಲೇ ಮಂದಿಯ ಮೆಚ್ಚುಗೆ ಪಡೆದಿರುವ ಪಾರ‍್ಚುನರ್, ಪಜೆರೊ ಸ್ಪೋರ‍್ಟ್ ಗಳ ಹಾದಿಯನ್ನು ತೊಡಕಾಗಿಸಲಿದೆ.

 (ಮಾಹಿತಿ ಮತ್ತು ತಿಟ್ಟ ಸೆಲೆchevrolet.co.inautocarindia.commotorbeam.com)Categories: ಅರಿಮೆ

ಟ್ಯಾಗ್ ಗಳು:, , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s