ನೋಡ ಬನ್ನಿ ಕಲಬುರಗಿ ಸೊಬಗ!

– ನಾಗರಾಜ್ ಬದ್ರಾ.

ಸುಮಾರು 6 ನೇ ಶತಮಾನದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ಕಲಬುರುಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈಗ ಇವು ಪ್ರವಾಸಿ ತಾಣಗಳಾಗಿವೆ. ಒಂದೇ ನಗರದಲ್ಲಿ ಎಲ್ಲಾ ದರ‍್ಮಗಳ ಪ್ರಮುಕ ಪ್ರವಾಸಿ ತಾಣಗಳಿರುವುದು ಈ ನಗರದ ವಿಶೇಶ.

ಕಲಬುರಗಿ ನಗರದ ಕೋಟೆ: 

Gulbarga_Fort.

ಮೊದಲು ರಾಜ ಗುಲ್ಚಂದ್ ಅವರು ಈ ಕೋಟೆಯನ್ನು ಕಟ್ಟಿದರು. ಬಳಿಕ 1347 ರಲ್ಲಿ ಬಹಮನಿ ಸುಲ್ತಾನರು ಕೋಟೆಯನ್ನು ದೊಡ್ಡದಾಗಿಸಿದರು. ಸುಮಾರು ಅರ‍್ದ ಎಕರೆ ಜಾಗದಲ್ಲಿ ಕಟ್ಟಲಾಗಿರುವ ಈ ಕೋಟೆಯ ಒಳಗಡೆ ಮನಸೆಳೆಯುವ ಕಟ್ಟಡಗಳಿವೆ. ಅದರಲ್ಲಿ ಸುಮಾರು 14 ನೇ ಅತವಾ 15 ನೇ ಶತಮಾನದಲ್ಲಿ ಮೋರಿಸ್ ವಾಸ್ತುಶಿಲ್ಪದಲ್ಲಿ (Moorish architect) ನಿರ‍್ಮಿಸಲಾದ ಜಮಾ ಮಸೀದಿಯಿದೆ (Jama masjid). ಜಮಾ ಮಸೀದಿಯ ಪೂರ‍್ಣ ಪ್ರದೇಶವು ಒಂದು ದೊಡ್ಡ ಗುಮ್ಮಟದಿಂದ ಒಳಗೊಂಡಿದ್ದು, ನಾಲ್ಕು ಚಿಕ್ಕತುದಿಗಳು ಮತ್ತು 75 ಇನ್ನೂ ಚಿಕ್ಕತುದಿಗಳು ಸುತ್ತಲೂ ಇವೆ. ಜಮಾ ಮಸೀದಿಯನ್ನು ಪರ‍್ಯಶಿನ್ ವಾಸ್ತುಶಿಲ್ಪಿ ರಪೀಯವರು 1367 ರಲ್ಲಿ ಕಟ್ಟಿದರು. ಕೋಟೆಯ ಒಳಗಡೆಯಿರುವ ಜಮಾ ಮಸೀದಿಯಲ್ಲಿ ಬಹುಬಗೆಯ ಕೋಣೆಗಳು ಮತ್ತು ಒಂದು ದೊಡ್ದದಾದ ಪ್ರಾರ‍್ತನೆಯ ಕೋಣೆಯಿದೆ. ಕೋಟೆಯ ಉತ್ತರ – ದಕ್ಶಿಣ ಬಾಗದಲ್ಲಿ 9 ಕೋಣೆಗಳನ್ನು ಮತ್ತು ಪೂರ‍್ವ- ಪಶ್ಚಿಮದಲ್ಲಿ 13 ಕೋಣೆಗಳನ್ನು ಹೊಂದಿದೆ. ಪ್ರತಿ ಕೋಣೆಯು ಮನೋಹರವಾದ ವಾಸ್ತುಶಿಲ್ಪದಿಂದ ನಿರ‍್ಮಿಸಲಾಗಿದ್ದು, ವಿಜಯಪುರ ನಗರದ ಇಬ್ರಾಹಿಮ್ ರೋಜಾವನ್ನು ಹೋಲುತ್ತವೆ. ಕೋಟೆಯಲ್ಲಿ ಒಟ್ಟು 15 ಗೋಪುರಗಳಿವೆ. ಉಳಿದಂತೆ ಕಲಬುರಗಿಯಲ್ಲಿ ಹಲವಾರು ಬವ್ಯವಾದ ಅರ‍್ದ ಗೋರಿಗಳಿವೆ (Haft Gumbaz).

ಕೋಟೆಯ ಕಲೆ ಹಾಗೂ ವಾಸ್ತುಶಿಲ್ಪ: ದೊಡ್ಡ ಪ್ರಮಾಣದ ಮುಸ್ಲಿಂ ಕಲೆಯಿಂದ ಗೋಪುರಗಳ ಚಾವಣಿಗಳನ್ನು ಕಟ್ಟಲಾಗಿದೆ. ಗೋಡೆಗಳ ಮೇಲೆ ಕ್ಯಾಲಿಗ್ರಪಿ ವಿನ್ಯಾಸಗಳು, ಹೂವು – ಮರಗಳ ಚಿತ್ರಕಲೆಗಳಿಂದ ಅಲಂಕರಿಸಲಾಗಿದೆ. ಸಮಾದಿಯನ್ನು ಗೆರೆಯರಿಮೆ(geometry)ಯ ವಿನ್ಯಾಸಗಳಿಂದ ಅಲಂಕರಿಸಲಾಗಿದೆ.

ಶರಣಬಸವೇಶ್ವರ ದೇವಸ್ತಾನ:

sharana basavanna gudi

18 ನೇ ಶತಮಾನದ ಮಹಾನ್ ದಾಸೋಹಿ, ತತ್ವಜ್ನಾನಿ, ಲಿಂಗಾಯತ ಸಂತ ಶ್ರೀ ಶರಣಬಸವೇಶ್ವರರು ನೆಲೆಸಿರುವ ಪವಿತ್ರವಾದ ಸ್ತಳವಿದು. ಅವರ ದಾಸೋಹದಲ್ಲಿ ಪ್ರತಿನಿತ್ಯವೂ ಸಾವಿರಾರು ಬಕ್ತರು ಊಟಮಾಡುತ್ತಿದ್ದರು. ಅವರು ದಾಸೋಹ, ಕಾಯಕ ಮತ್ತು ಕರ‍್ಮ ಸಿದ್ದಾಂತವನ್ನು ಪ್ರತಿಪಾದಿಸಿದವರು. ಶರಣಬಸವೇಶ್ವರರು ಕಲಬುರಗಿ ಜಿಲ್ಲೆಯ ಜೇವರ‍್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ಶರಣಬಸವೇಶ್ವರರವರ ತಂದೆ ಮಲಕಪ್ಪಾ ಹಾಗೂ ತಾಯಿ ಸಂಗಮ್ಮನವರು. ಅವರು ತಮ್ಮ ತತ್ವ ಸಿದ್ದಾಂತವನ್ನು ಹಾಗೂ ವೀರಶ್ವೆವ ದರ‍್ಮ ಪ್ರಚಾರವನ್ನು ಜಿಲ್ಲೆಯಾದ್ಯಂತ ಮತ್ತು ನೆರೆ ಜಿಲ್ಲೆಗಳಲ್ಲಿ ಮಾಡುತ್ತಾ, ಕಡೆಗೆ ಕಲಬುರಗಿ ನಗರದಲ್ಲಿ ಬಂದು ನೆಲೆಸಿದರು. ಶ್ರೀ ಶರಣಬಸವೇಶ್ವರರು ಲಿಂಗೈಕ್ಯರಾದ ಬಳಿಕ ಅವರ ಸಮಾದಿಗೆ ಗೋಪುರ ನಿರ‍್ಮಿಸಲಾಯಿತು. ಅದುವೇ ಇಂದು ಶ್ರೀ ಶರಣಬಸವೇಶ್ವರ ದೇವಾಲಯವಾಗಿದೆ.

ದೇವಾಲಯದ ಗದ್ದುಗೆಯ ಮೇಲೆ ಶರಣಬಸವೇಶ್ವರ ನೆಚ್ಚಿನ ಶಿಶ್ಯ ಆದಿ ದೊಡ್ಡಪ್ಪ ಮತ್ತು ಶರಣ ಬಸವೇಶ್ವರರ (ಗುರು – ಶಿಶ್ಯರ) ಬೆಳ್ಳಿಯ ಜೋಡಿ ಮುಕವಾಡಗಳನ್ನು ಪ್ರತಿಶ್ಟಾಪಿಸಲಾಗಿದೆ. ಅವರು ಹುಟ್ಟಿದ ಗ್ರಾಮ ಅರಳಗುಂಡಗಿಯಲ್ಲಿ ಹಾಗೂ ನಾಡಿನ ಇತರೆಡೆಗಳಲ್ಲೂ ಶ್ರೀ ಶರಣಬಸವೇಶ್ವರ ದೇವಾಲಯವಿದೆ. 1927 ರಲ್ಲಿ ಮಹಾತ್ಮಾ ಗಾಂದಿಜಿಯವರು ಇಲ್ಲಿಗೆ ಬೇಡಿ ನೀಡಿದ್ದರು. ಈ ದೇವಸ್ತಾನಕ್ಕೆ ನಾಡು-ಹೊರನಾಡುಗಳಿಂದ ಅಪಾರ ಜನಸಂಕ್ಯೆಯಲ್ಲಿ ಬಕ್ತರು ಬರುತ್ತಾರೆ. ಪ್ರತಿ ವರ‍್ಶವೂ ಹೋಳಿ ಹುಣ್ಣಿಮೆ ಆಗಿ ಐದನೇ ದಿನದಂದು ಜಾತ್ರೆ, ರತೋತ್ಸವವು ಅದ್ದೂರಿಯಾಗಿ ನಡೆಯುತ್ತದೆ. ಶರಣಬಸವೇಶ್ವರ ದೇವಸ್ತಾನದ ಗೋಪುರಕ್ಕೆ ಚಿನ್ನದ ಲೇಪನ ಮಾಡುವ ಕೆಲಸ ಈಗ ನಡೆಯುತ್ತಿದೆ. ಈ ಕೆಲಸ ಮುಗಿದರೆ ಈ ದೇವಸ್ತಾನವು ನಮ್ಮ ರಾಜ್ಯದ ಮೊದಲ ಚಿನ್ನದ ದೇವಸ್ತಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Jathre

ದೇವಸ್ತಾನದ ವಾಸ್ತುಶಿಲ್ಪ: ಈ ದೇವಸ್ತಾನದ ವಾಸ್ತುಶಿಲ್ಪವು 12 ನೇ ಶತಮಾನದ್ದಾಗಿದೆ. ಗರ‍್ಬಗುಡಿಯ ಮನೆಯಲ್ಲಿ ಶರಣಬಸವೇಶ್ವರ ಸಮಾದಿಯಿದೆ. ದೇವಸ್ತಾನದ ಗೋಡೆಗಳ ಮೇಲೆ ಆನೆ, ಹದ್ದು, ಹಾವು ಹಾಗೂ ಹೂವುಗಳ ಕಲ್ಕಲೆಗಳಿವೆ. ದೇವಸ್ತಾನದ ಸಂಕೀರ‍್ಣದಲ್ಲಿ ದೊಡ್ಡದಾದ ಸಬಾಮಂಟಪವಿದೆ. ಈ ಸಬಾಮಂಟಪವು ಹಲವಾರು ದೊಡ್ಡದಾದ ಸ್ತಂಬಗಳನ್ನು ಹಾಗೂ 36 ಕಮಾನುಗಳನ್ನು ಹೊಂದಿದೆ. ದೇವಸ್ತಾನದ ಸಂಕೀರ‍್ಣದಲ್ಲಿಯೇ ಹಲವಾರು ಶತಮಾನಗಳ ಇತಿಹಾಸ ಹೊಂದಿರುವ ದಾಸೋಹ ಮಹಾಮನೆಯಿದೆ. ಇಲ್ಲಿಯೇ ಹಲವಾರು ಶತಮಾನಗಳಿಂದ ದಾಸೋಹ ಕಾರ‍್ಯಕ್ರಮ ಜಾರಿಯಲ್ಲಿದೆ.

ಶರಣಬಸವೇಶ್ವರ ಕರೆ(ಅಪ್ಪಾ ಕರೆ):

appa kere
ಶರಣಬಸವೇಶ್ವರ ಕರೆಯು ಕಳೆದ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ. ಅಪ್ಪಾ ಕರೆಯು ಒಟ್ಟು 102 ಎಕರೆ ವಿಸ್ತೀರ‍್ಣವನ್ನು ಹೊಂದಿದೆ! ಕೆಲವು ವರ‍್ಶಗಳ ಹಿಂದೆ ಮಹಾನಗರ ಪಾಲಿಕೆ ಕಲಬುರಗಿಯು ಕರೆಯನ್ನು ಒಂದು ಸುಂದರವಾದ ಪ್ರವಾಸಿ ತಾಣವನ್ನಾಗಿ ಪರಿವರ‍್ತಿಸಲು ನಿರ‍್ದರಿಸಿತ್ತು. ನಂತರ ಕರೆಯ ಸುತ್ತಲೂ ಕಲ್ಲಿನ ಗೋಡೆಯನ್ನು ಕಟ್ಟಿ, ಬೇಲಿ ಹಾಕಿ ಕಾಪಾಡಿಕೊಂಡುಬಂದಿದೆ. ಕರೆಯ ಮುಂಬಾಗದಲ್ಲಿ ಒಂದು ಸುಂದರವಾದ ಉದ್ಯಾನವನ್ನು ನಿರ‍್ಮಿಸಿದೆ. ಕರೆಯಲ್ಲಿ ದೋಣಿ ವಿಹಾರದ ಏರ‍್ಪಾಡನ್ನು ಕೂಡ ಮಾಡಲಾಗಿದೆ.

ಕಾಜಾ ಬಂದೇ ನವಾಜ ದರ‍್ಗಾ:

gesu_daraz_gulbarga

14 ನೇ ಶತಮಾನದ ಪ್ರಸಿದ್ದ ಸೂಪಿ ಸಂತರು. ಇವರು 1321 ರಲ್ಲಿ ದೆಹಲಿಯಲ್ಲಿ ಜನಿಸಿದರು. ಅವರ ತಂದೆ ಸೈಯದ್ ಮಹಮ್ಮದ ಹುಸೇನಿ. ನಾಲ್ಕನೆಯ ವಯಸ್ಸಿನಲ್ಲಿ ಅವರ ಪರಿವಾರವು ದೌಲತಬಾದನಲ್ಲಿ ಬಂದು ನೆಲೆಸಿತು. ಸುಲ್ತಾನ ತಾಜ ಉದ-ದೀನ ಪೇರುಜ್ ಶಾಹರವರ ಆಮಂತ್ರಣದ ಮೇರೆಗೆ ಅವರು ಕಲಬುರಗಿಯಲ್ಲಿ ಬಂದು ನೆಲೆಸಿದ್ದರು. ತಮ್ಮ ಹೈದಿನೈದನೇ ವಯಸ್ಸಿನಲ್ಲಿ ನಸೀರುದೀನ ಚೀರಾಗ್ ದೇಹಲಾವಿ ಅವರಿಂದ ಹೆಚ್ಚಿನ ಕಲಿಕೆಗೆಂದು ದೆಹಲಿಗೆ ಮರಳಿದರು. ತರಬೇತಿಯನ್ನು ಪಡೆದ ಮೇಲೆ ದೆಹಲಿ, ಮೀವತ್, ಗ್ವಾಲಿಯರ್, ಬರೋಡಾ, ಚಂದೀರ್, ಅರೈಚ ಮುಂತಾದ ನಗರಗಳಲ್ಲಿ ಉಪದೇಶವನ್ನು ನೀಡಿ ಕಡೆಗೆ 1397 ರಲ್ಲಿ ಕಲಬುರಗಿಗೆ ಬಂದು ನೆಲೆಸಿದರು. ಅವರ ದಿಟವಾದ ಹೆಸರು ಅಬ್ದುಲ್ ಪತಾಹ (Abdul Fatah) ಹಾಗೂ ಗೋತ್ರನಾಮವು ಗೈಸು ದರಜ (Gaisu Daraz). ಆದರೆ ಜನರು ಅವರನ್ನು ಕಾಜಾ ಬಂದೇ ನವಾಜ ಗೈಸು ದರಜ ಎಂದು ಕರೆಯುತ್ತಾರೆ. 1422 ನವೆಂಬರ್ ನಲ್ಲಿ ಅವರು ಗುಲಬರ‍್ಗಾ ನಗರದಲ್ಲಿ ಸಾವನ್ನಪ್ಪಿದ ಬಳಿಕ ಅವರ ಸಮಾದಿಗೆ ಗೋಪುರವನ್ನು ನಿರ‍್ಮಿಸಲಾಯಿತು. ಅದುವೇ ಇಂದು ಕಾಜಾ ಬಂದೇ ನಮಾಜ ದರ‍್ಗಾವಾಗಿದೆ. ಪ್ರತಿ ವರ‍್ಶವೂ ಜಾತ್ರೆ ನಡೆಯುತ್ತದೆ. ದೇಶದ ವಿವಿದ ಬಾಗಗಳಿಂದ ಸಹಸ್ರಾರು ಬಕ್ತರು ದರ‍್ಶನಕ್ಕೆ ಬರುತ್ತಾರೆ.

ಬೌದ್ದ ವಿಹಾರ:

Front View of Buddha Vihar
ಮೊದಲು 2002 ರಲ್ಲಿ ಸಣ್ಣ ಪ್ರಮಾಣದಲ್ಲಿ ಬೌದ್ದ ವಿಹಾರದ ನಿರ‍್ಮಾಣದ ಕಾರ‍್ಯ ಪ್ರಾರಂಬವಾಯಿತು. ನಂತರದ ದಿನಗಳಲ್ಲಿ ಸಿದ್ದಾರ‍್ತ ವಿಹಾರ ಪ್ರತಿಶ್ಟಾನವು ಇದನ್ನು ದಕ್ಶಿಣ ಬಾರತದಲ್ಲಿಯೇ ಅತ್ಯಂತ ದೊಡ್ಡ ಬೌದ್ದ ವಿಹಾರವನ್ನಾಗಿ ರೂಪಿಸಲು ನಿರ‍್ದರಿಸಿತು. ಸುಮಾರು 18 ಎಕರೆ ಪ್ರದೇಶದಲ್ಲಿ ಇದನ್ನು ನಿರ‍್ಮಿಸಲಾಗಿದೆ. ಮುಕ್ಯ ಕಟ್ಟಡವನ್ನು ಎರಡು ಬಾಗಗಳನ್ನಾಗಿ ವಿಬಾಗಿಸಲಾಗಿದೆ. ಒಂದು ಬಾಗ ಆಲೋಚನೆ ಕೇಂದ್ರ ಮತ್ತು ಇನ್ನೊಂದು ಬಾಗ ಲಾರ‍್ಡ್ ಬೌದ್ದ ಚೈತ್ಯ (Lord Buddha chaitya).

ಬೌದ್ದ ವಿಹಾರ ಸಂಕೀರ‍್ಣವು ಬೌದ್ದ ದರ‍್ಮದ ವಾಸ್ತುಶಿಲ್ಪದಲ್ಲಿ ಕಟ್ಟಲಾಗಿದೆ. ಗೋಪುರ ವಿನ್ಯಾಸವು ತಾಜಮಹಲ್ ಮಾದರಿಯಲ್ಲಿದೆ. ಗೋಪುರವು 70 ಅಡಿ ಉದ್ದ ಮತ್ತು 59 ಅಡಿ ಅಡ್ಡಗಲ ಹೊಂದಿದ್ದು, ಒಳಗಡೆ ಕೋಣೆಯಲ್ಲಿ 48 ಅಡಿ ಉದ್ದದ ನಾಲ್ಕು ಅಶೋಕ ಸ್ತಂಬಗಳಿವೆ. ಆಲೋಚನೆ ಕೇಂದ್ರದ ಮುಕ್ಯ ಆಕರ‍್ಶಣೆಯೆಂದರೆ 6.5 ಅಡಿ ಉದ್ದದ ಕಪ್ಪು ಬಣ್ಣದ ಬುದ್ದನ ಮೂರ‍್ತಿ. ಸುಮಾರು 15,635 ಚದರ ಅಡಿಯ, 170 ಕಂಬಗಳು ಮತ್ತು 284 ಅಡಿಗಲ್ಲುಗಳನ್ನು ಹೊಂದಿರುವ ಒಂದು ದೊಡ್ಡ ಪ್ರಾರ‍್ತನೆಯ ಅಂಬಲವಿದೆ. ಬೌದ್ದ ವಿಹಾರದ ಮುಕ್ಯ ಆಕರ‍್ಶಣೆ ಎಂದರೆ 8.5 ಅಡಿ ಎತ್ತರದ ಐದುಲೋಹಗಳಿಂದ ಕಟ್ಟಿರುವ ಬುದ್ದನ ವಿಗ್ರಹ. ಇದು ದಕ್ಶಿಣ ಬಾರತದಲ್ಲಿಯೇ ಅತ್ಯಂತ ಎತ್ತರದ ವಿಗ್ರಹವಾಗಿದೆ. ಇದನ್ನು ತೈಲಾಂಡ್ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ದಕ್ಶಿಣ ಬಾರತದಲ್ಲಿಯೇ ಬೌದ್ದ ದರ‍್ಮದ ತೀರ‍್ತಯಾತ್ರಿಕರಿಗೆ ಒಂದು ಪ್ರಮುಕ ಯಾತ್ರಾ ಸ್ತಳವಾಗಿದೆ.

(ಮಾಹಿತಿ ಸೆಲೆ:  wikipedia, ಶರಣಬಸವೇಶ್ವರ ವಿದ್ಯಾವರ‍್ದಕ ಸಂಗದ ವಾರ‍್ಶಿಕ ಕ್ಯಾಲೆಂಡರ್ ನಿಂದ ಕೆಲವು ಮಾಹಿತಿಯನ್ನು ಕಲೆಹಾಕಲಾಗಿದೆ.)
(ಚಿತ್ರ ಸೆಲೆ: gulbarga.nic.in, youtube.comwikipedia, skyscrapercity.com, tripadvisor.com, e-hind.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Rakhi gowda says:

    ಕಲಬುರಗಿ ನಗರದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

ಅನಿಸಿಕೆ ಬರೆಯಿರಿ: