ಕಲಿಸುಗನ ಸೋಲು..
– ಬಸವರಾಜ್ ಕಂಟಿ.
( ಈ ಕತೆಯು ಎರಡು ಕಂತುಗಳಲ್ಲಿ ಮೂಡಿಬರುತ್ತದೆ )
ಕಂತು – 1
ಎಶ್ಟು ಹೊರಳಾಡಿದರೂ ನಿದ್ದೆ ಸುಳಿಯಲಿಲ್ಲ. ಹಾಸಿಗೆಯಿಂದೆದ್ದು ಕಿಟಕಿಯ ಬಳಿ ಬಂದು ನಿಂತನು ಇಮ್ರಾನ್. ಮುಂಬಯಿಯ ಬೀದಿಯೊಂದರ ಎರಡನೇ ಮಹಡಿಯಲ್ಲಿತ್ತು ಅವನ ಪುಟ್ಟ ಮನೆ. ತಂಪು ಗಾಳಿ ಬೀಸುತ್ತಿತ್ತು, ಇನ್ನೇನು ಮಳೆಗಾಲ ಶುರುವಾಗುವ ದಿನಗಳು. ಮುಂಬಯಿಯ ತುಂಬಾ ಕತ್ತಲನ್ನು ನೀಗಿಸುವ ವಿದ್ಯುತ್ ಲಾಂದ್ರಗಳು ಉರಿಯುತ್ತಿದ್ದವು. ಪೂರ‍್ತಿ ಕತ್ತಲೂ ಇಲ್ಲ, ಪೂರ‍್ತಿ ಬೆಳಕೂ ಇಲ್ಲ ಎನಿಸಿತು ಅವನಿಗೆ, ಹೆಚ್ಚು ಕಮ್ಮಿ ತನ್ನ ಮನಸ್ಸಿನಂತೆ. ಬರೀ ಗೊಂದಲ. ತಾನು ಅಂದುಕೊಂಡತೆ ಬದುಕು ನಡೆದಿರಲಿಲ್ಲ. ಬದುಕು ಹಾಗೆಯೇ ಎಂದುಕೊಂಡ. ಆದರೆ ತಾನು ವಿದ್ಯಾರ‍್ತಿಯಾಗಿದ್ದಾಗ ಮಾತ್ರ ಅಂದುಕೊಂಡಂತೆ ಎಲ್ಲವೂ ಆಗಿತ್ತು. ಸರ‍್ಕಾರಿ ಶಾಲೆಯಲ್ಲಿ ಕಲಿಕೆ ಮುಗಿಸಿದ್ದರೂ ತನ್ನ ಗಟ್ಟಿ ಪರಿಶ್ರಮದಿಂದ ದಿಲ್ಲಿಯ ಐಐಟಿಯಲ್ಲಿ ಜಾಗ ಗಿಟ್ಟಿಸಿ ಇಂಜಿನಿಯರಿಂಗ್ ಮುಗಿಸಿದ್ದ. ಮುಂದೆ ಸ್ಕಾಲರ‍್ಶಿಪ್ ಪಡೆದು, ಅಮೇರಿಕದ ಮಿನ್ನೆಸೊಟಾ ಯುನಿವರ‍್ಸಿಟಿಯಲ್ಲಿ ಮಾಸ್ಟರ‍್ಸ್ ಕೂಡ ಓದಿದ್ದ. ಈಗ ಮುಂಬಯಿಯಲ್ಲಿರುವ, ಬಾರತದ ಪ್ರತಿಶ್ಟಿತ ಕಾಲೇಜಿನಲ್ಲಿ ಕಲಿಸುಗನಾಗಿ ಕೆಲಸ ಮಾಡುತ್ತಿದ್ದನು. ಅವನು ಮದ್ಯಮ ವರ‍್ಗದ ಕುಟುಂಬದಲ್ಲಿ ಬೆಳೆದ ಸಾಮಾನ್ಯ ಹುಡುಗ. ಆದರೆ ಅತೀ ಬುದ್ದಿವಂತ. ಸುತ್ತಮುತ್ತಲಿನ ಸಮಾಜದಲ್ಲಿದ್ದ ಸಮಸ್ಯೆಗಳನ್ನು ನೋಡುತ್ತಾ ಬೆಳೆದ ಅವನಿಗೆ, ತನ್ನ ತಂದೆಯಿಂದ ಓದಿಗಾಗಿ ಅಶ್ಟೇನು ಸಹಾಯ ಸಿಕ್ಕಿರಲಿಲ್ಲ. ಸ್ಕಾಲರ‍್ಶಿಪ್ ದುಡ್ಡಿನಲ್ಲೇ ಹೊಟ್ಟೆ ಬಟ್ಟೆ ಕಟ್ಟಿ ಅಮೇರಿಕದಲ್ಲಿ ಓದಿದ್ದನು. ಅವನ ಓದಿಗೆ ಯಾವಾಗಲೂ ಬೆನ್ನ ಹಿಂದೆ ನಿಂತು ಹುರಿದುಂಬಿಸಿದ್ದು ಅವನ ಅಚ್ಚುಮೆಚ್ಚಿನ ಪಾಟೀಲ್ ಸರ್. ಹಾಯ್ಸ್ಕೂಲಿನಲ್ಲಿ ಇಮ್ರಾನನಿಗೆ ಅರಿಮೆಯನ್ನು ಕಲಿಸಿದ್ದ ಪಾಟೀಲರು, ತಮ್ಮ ವಿಶಿಶ್ಟ ರೀತಿಯ ಕಲಿಸುವಿಕೆಯಿಂದ ಅವನಲ್ಲಿ ಅರಿಮೆಯ ಬಗ್ಗೆ ಆಸಕ್ತಿ ಮೂಡಿಸಿದ್ದರು.
ಅಶ್ಟೆಲ್ಲ ಓದಿದರೂ, ಅಮೇರಿಕದಲ್ಲೇ ಕೆಲಸ ಹುಡುಕದೆ, ಬಾರತಕ್ಕೆ ಮರಳಿ ಬಂದು, ಕಲಿಸುಗನಾಗಿ ಕೆಲಸ ಮಾಡಲು ಒಂದು ಕಾರಣವಿತ್ತು. ಅಮೇರಿಕದಲ್ಲಿ ಎರಡನೇ ವರ‍್ಶ ಎಮ್. ಎಸ್. ಓದುವಾಗ, ಒಂದು ದಿನ, ಮಾತುಮಾತಿನಲ್ಲಿ ಅಲ್ಲಿನ ಬಿಳಿಯರು ಬಾರತವನ್ನು ಬಡ ದೇಶವೆಂದು ಹೀಯಾಳಿಸಿದ್ದರು. ಇವನು ಅವಮಾನ ತಡೆಯಲಾಗದೆ, ಬ್ರಿಟೀಶರು ಬಾರತದ ಶ್ರೀಮಂತತೆಯನ್ನು ಕೊಳ್ಳೆಹೊಡೆದ ಇತಿಹಾಸ ಹೇಳಲು ಶುರುವಿಟ್ಟುಕೊಂಡ. ಅದನ್ನು ಸಹಿಸದ ಬಿಳಿಯರು, ನಿನ್ನ ದೇಶದ ಬಗ್ಗೆ ಅಶ್ಟು ಹೆಮ್ಮೆಯಿದ್ದರೆ ತಿರುಕರ ರೀತಿ ಇಲ್ಲ್ಯಾಕೆ ಬಂದು ಓದುತ್ತಿದ್ದೀಯಾ? ನಿನ್ನ ದೇಶದ ಜನರು ಕೆಲಸ ಹುಡುಕಿಕೊಂಡು ಇಲ್ಲೇ ಯಾಕೆ ಬರುತ್ತಾರೆ? ಎಂದೆಲ್ಲಾ ಕೇಳಿ ಅವಮಾನಿಸಿದ್ದರು. ಅವರ ಮಾತಿಗೆ ಅವನಲ್ಲಿ ಉತ್ತರವಿರಲಿಲ್ಲ. ಇದೇ ರೀತಿಯ ಮಾತುಗಳನ್ನು ಅವನು ಒಂದು ವರ‍್ಶದ ತನಕ ಮತ್ತೆ ಮತ್ತೆ ಕೇಳಬೇಕಾಯಿತು. ಆ ಮಾತುಗಳು ಅವನನ್ನು ಚಿಂತನೆಗೆ ನೂಕಿದ್ದವು. ಅಮೇರಿಕದ ಯುನಿವರ‍್ಸಿಟಿಯಲ್ಲಿ ಪ್ರೊಪೆಸರ್ ಗಳು ತುಂಬಾ ಪರಿಣಿತರಾಗಿದ್ದರು. ಅಲ್ಲಿ ಓದಿಗೆ ಬೇಕಾದ ಎಲ್ಲ ಸೌಕರ‍್ಯಗಳೂ ಮೇಲುಮಟ್ಟದಾಗಿದ್ದವು; ಕಲಿಸುವ ರೀತಿಯೂ ಇಲ್ಲಿಗಿಂತ ಬೇರೆಯಾಗಿತ್ತು. ಅಲ್ಲಿನ ಉದ್ದಿಮೆಗಳ ಹೊಸ ಹೊಸ ಆವಿಶ್ಕಾರಗಳಿಗೆ ಯುನಿವರ‍್ಸಿಟಿಗಳೇ ಬೆನ್ನೆಲುಬಾಗಿದ್ದವು. ತನ್ನ ದೇಶದಲ್ಲೂ ಅಮೇರಿಕದ ರೀತಿಯ ಕಲಿಕೆ ಸಿಗುವಂತಿದ್ದರೆ ಎಶ್ಟು ಚೆನ್ನ ಎಂದು ಅವನಿಗೆ ಅನಿಸಿತ್ತು.
ಇದರ ಬಗ್ಗೆ ಅವನು ನಿತ್ಯವೂ ಯೋಚಿಸುತ್ತಿದ್ದನು. ತುಂಬಾ ಯೋಚಿಸಿ ಅವನು ಕಂಡುಕೊಂಡ ಉತ್ತರ : ಬಾರತದಲ್ಲಿ ಕಾಲೇಜಿನಿಂದ ಉನ್ನತ ಸಾಲಿನಲ್ಲಿ ಹೊರ ಬರುವ ಜಾಣರು ಕಲಿಕೆಯ ರಂಗಕ್ಕೆ ಬರದೇ ಇರುವುದು. ಉತ್ತಮ ಕಲಿಸುಗರಿದ್ದರೆ ಉತ್ತಮ ಕಾಲೇಜುಗಳಿರುತ್ತವೆ. ಜಾಣರು ಹೆಚ್ಚಿನ ಸಂಬಳದ ಆಸೆಗೆ ಬೇರೆ ಕೆಲಸಕ್ಕೆ ಹೋಗುವುದರಿಂದ ಕಲಿಸಲು ಬರುವ ಮಂದಿ ಅಶ್ಟಾಗಿ ಯೋಗ್ಯರಿರುವುದಿಲ್ಲ. ಅವನ ಯೋಚನೆ ಸತ್ಯವೂ ಆಗಿತ್ತು. ಆಗ ಅವನಿಗೆ ತಾನೊಬ್ಬ ಕಲಿಸುಗನಾಗಿ ಆದಶ್ಟು ಹೆಚ್ಚು ಹೆಚ್ಚು ಜಾಣರಿಗೆ ಶಿಕ್ಶಣದ ಕಡೆಗೆ ಎಳೆದು ತರಬೇಕೆಂಬ ಹಂಬಲ ಹುಟ್ಟಿ, ದಿನಕಳೆದಂತೆ ಅದು ಚಲವಾಗಿ ಬದಲಾಗಿತ್ತು. ಎಮ್. ಎಸ್. ಮುಗಿಯುತ್ತಲೇ ಮುಂಬಯಿಯ ಪ್ರತಿಶ್ಟಿತ ಕಾಲೇಜಿನಲ್ಲಿ ಕಲಿಸುಗನಾಗಿ ಕೆಲಸ ಗಿಟ್ಟಿಸಿದ್ದನು. ಅಲ್ಲಿಯೇ ತನ್ನ ಪಿ.ಎಚ್.ಡಿ.ಯ ಓದೂ ಶುರುಮಾಡಿದ್ದನು.
ಕೆಲಸಕ್ಕೆ ಸೇರಿದ ಬಳಿಕ, ನಮ್ಮ ಶಿಕ್ಶಣ ವ್ಯವಸ್ತೆಯ ದುಸ್ತಿತಿ, ಅದರ ಕಾರಣಗಳನ್ನು ವಿದ್ಯಾರ‍್ತಿಗಳಲ್ಲಿ ಹಂಚಿಕೊಳ್ಳುತ್ತಿದ್ದನು. ಇದೇ ವಿಶಯವಾಗಿ ವರ‍್ಶಕ್ಕೆರಡು ಬಾರಿ, ಸೆಮಿಸ್ಟರ್ ಮುಗಿಯುವ ಹೊತ್ತಿಗೆ ಸೆಮಿನಾರ್ ಗಳನ್ನು ಏರ‍್ಪಡಿಸಿ, ಅವರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದನು. ಡಿಗ್ರಿ ಹುಡುಗರಿಗೆ ಎಮ್.ಎಸ್. ಓದಿ ಶಿಕ್ಶಣ ಕ್ಶೇತ್ರಕ್ಕೆ ಬರಲು ಹುರಿದುಂಬಿಸುತ್ತಿದ್ದನು. ಈಗಾಗಲೇ ಎಮ್.ಎಸ್ ಓದುವವರಿಗೆ ಪಿ.ಎಚ್.ಡಿ. ಮಾಡಲು ಸಲಹೆ ನೀಡುತ್ತಿದ್ದನು. ಅವನ ಮಾತುಗಳನ್ನು ಮೆಚ್ಚಿಕೊಂಡರೂ ಯಾವ ವಿದ್ಯಾರ‍್ತಿಯೂ ಹೆಚ್ಚಿನ ಸಂಬಳದ ಕೆಲಸ ಬಿಟ್ಟು ಕಲಿಸುಗರಾಗಲು ಮುಂದೆ ಬರಲಿಲ್ಲ. ಎರಡು ಏಡು ಹೀಗೇ ಕಳೆದು ಹೋಯಿತು. ಮೂರನೇ ಏಡು ಮುಗಿಯುವಶ್ಟರಲ್ಲಿ ಅವನ ಪಿ.ಎಚ್.ಡಿ. ಕೂಡ ಮುಗಿಯಿತು. ಸಿಲಿಕಾನ್ ಮತ್ತು ಕಾರ‍್ಬನ್ ಬಳಸಿ ತಯಾರಿಸಿದ ವಿದ್ಯುತ್ ಚಿಪ್ ನಿಂದ, ಮಾಹಿತಿಯನ್ನು ದುಪ್ಪಟ್ಟು ವೇಗದಲ್ಲಿ ರವಾನಿಸಬಹುದು ಎಂದು ತೋರಿಸಿಕೊಟ್ಟ ಅವನ ಸಂಶೋದನೆಗೆ ಜಗತ್ತಿನೆಲ್ಲೆಡೆಯಿಂದ ಮೆಚ್ಚುಗೆಗಳು ಬಂದಿದ್ದರೂ ಅವನ ಮನಸ್ಸು ಸದಾ ತನ್ನ ಗುರಿಯೆಡೆಗಿನ ಹಾದಿಯಲ್ಲಾಗುತ್ತಿರುವ ಸೋಲಿನ ಬಗ್ಗೆ ಚಿಂತಿಸುತ್ತಿತ್ತು. ಆಗ ಅವನು ತನಗೆ ತಾನೇ ಕಟ್ಟಳೆ ಹಾಕಿಕೊಂಡು, ಇನ್ನೊಂದು ಏಡಿನಲ್ಲಿ ಐದು ವಿದ್ಯಾರ‍್ತಿಗಳನ್ನಾದರೂ ಶಿಕ್ಶಣ ಕ್ಶೇತ್ರಕ್ಕೆ ಎಳೆದು ತರಲಾಗದಿದ್ದರೆ ಈ ಕೆಲಸ ಬಿಟ್ಟುಬಿಡುವುದೆಂದು ತೀರ‍್ಮಾನಿಸಿದ. ಆ ಏಡು ಇನ್ನೂ ಹೆಚ್ಚಿನ ಶ್ರದ್ದೆಯಿಂದ ವಿದ್ಯಾರ‍್ತಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ. ಕಾಲೇಜಿನಲ್ಲಿ ಪ್ರತಿ ವರ‍್ಶ ನಡೆಯುವ ಉದ್ಯೋಗ ಮೇಳದ ಎರಡು ದಿನಗಳ ಮೊದಲೇ ತನ್ನ ಸೆಮಿನಾರ್ ಇಟ್ಟುಕೊಳ್ಳಲು ತೀರ‍್ಮಾನಿಸಿದ. ಉದ್ಯೋಗ ದೊರೆಯುವ ಮೊದಲೇ ವಿದ್ಯಾರ‍್ತಿಗಳ ಮನಸ್ಸನ್ನು ಬದಲಿಸಿದರೆ, ಅವರು ಸಂದರ‍್ಶನಕ್ಕೆ ಹೋಗದಿರುವಂತೆ ನೋಡಿಕೊಳ್ಳಬಹುದೆಂದು ಅವನ ಎಣಿಕೆಯಾಗಿತ್ತು. ಒಂದು ವೇಳೆ ಅವರಿಗೆ ಕೆಲಸ ಕಾತರಿಯಾಗಿ, ಸಂಬಳದ ಬಗ್ಗೆ ಕನಸು ಹುಟ್ಟಿಕೊಂಡರೆ, ಅವರ ಮನಸ್ಸು ಬದಲಿಸುವುದು ಕಶ್ಟವೆಂದು ಅವನಿಗೆ ಗೊತ್ತಿತ್ತು.
ಈಗ ಆ ಹೊತ್ತು ಬಂದೇ ಬಿಟ್ಟಿತ್ತು. ಮರುದಿನವೇ ಅವನ ಸೆಮಿನಾರ್. ಅವನ ಕಡೇ ಪ್ರಯತ್ನ. ಆ ಉದ್ವೇಗದಲ್ಲಿ ಅವನಿಗೆ ನಿದ್ದೆ ಹತ್ತದೆ ಕಿಟಕಿಯ ಬಳಿ ನಿಂತು ತನ್ನ ಈವರೆಗಿನ ಸೋಲಿನ ಹಾದಿಯನ್ನು ತಿರುವಿಹಾಕುತ್ತಲಿದ್ದ. ಅಲ್ಲಿಯ ತನಕ ಅವನ ಕಯ್ಲಾದಶ್ಟು, ಅತವಾ ಕಯ್ ಮೀರಿ, ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟಿದ್ದನು. ಅವನ ಪ್ರಯತ್ನಕ್ಕೆ ಕಾಲೇಜಿನಿಂದ ತಕ್ಕ ಬೆಂಬಲ ಸಿಕ್ಕಿರಲಿಲ್ಲ. ಎಲ್ಲ ಪ್ರೊಪೆಸರ್ ಗಳೂ ತಮ್ಮ ತಮ್ಮ ಲೋಕದಲ್ಲೇ ಮುಳುಗಿರುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಜಾತಿ ರಾಜಕೀಯ, ಅದಿಕಾರ ದುರ‍್ಬಳಕೆ, ಪಕ್ಶಪಾತಗಳೆಲ್ಲ ಒಂದೊಂದಾಗಿ ಅವನಿಗೆ ಗೊತ್ತಾಗಿದ್ದವು. ಅವು ಯಾವುವೂ ಇನ್ನೂ ಅವನ ಹಾದಿಯಲ್ಲಿ ಅಡ್ಡ ಬಂದಿರಲಿಲ್ಲ. ತನ್ನ ಪ್ರಾಮಾಣಿಕ ಕೆಲಸಕ್ಕೆ ಯಾವುದೇ ರಾಜಕೀಯ ಅತವಾ ಅದಿಕಾರ ಅಡ್ಡಬಂದಿದ್ದರೆ ಅವನು ಸಹಿಸುತ್ತಿರಲಿಲ್ಲವೆನೋ. ಕಾಲೇಜಿನಲ್ಲಿದ್ದ ಎಲ್ಲ ಪ್ರೊಪೆಸರ್ ಗಳೂ ಅವನ ತ್ಯಾಗಕ್ಕೆ, ಅವನ ಕಳಕಳಿಗೆ, ಮೊದಮೊದಲು ತುಂಬಾ ಮೆಚ್ಚುಗೆ ತೋರ‍್ಪಡಿಸಿದ್ದರು. ಬರಬರುತ್ತಾ ಅವನ ಸೋಲು ಕಂಡು, ಬೆನ್ನಹಿಂದೆ ಆಡಿಕೊಂಡು ನಗಲು ಶುರುಮಾಡಿದ್ದರು. ಅದು ಇಮ್ರಾನನಿಗೂ ತಿಳಿದಿತ್ತು. ಅವರ ಅಲ್ಪ ಬುದ್ದಿಯನ್ನು ಅವನು ಚೆನ್ನಾಗಿ ಅರಿತಿದ್ದ. ಇದೆಲ್ಲಾ ಇನ್ನೊಂದು ಸ್ವಲ್ಪ ದಿನ ಎಂದುಕೊಂಡ. ಮುಂದಿನ ವಾರದಲ್ಲಿ ಉದ್ಯೋಗ ಮೇಳ ಶುರುವಾಗುತ್ತದೆ, ಆಗ ತಾನು ಗೆದ್ದರೂ, ಸೋತರೂ ಈ ಮಾತುಗಳು ನಿಲ್ಲುತ್ತವೆ. ಗೆದ್ದರೆ ಅವರ ಬಾಯಿ ಮುಚ್ಚುತ್ತದೆ, ಸೋತರೆ ತಾನು ಈ ಕೆಲಸ ಬಿಟ್ಟಿರುತ್ತೇನೆ ಎಂದುಕೊಂಡ. ಆದರೆ ಅವನು ಸೋಲಬಾರದು. ಸೋತರೆ ಅದು ಅವನ ಸೋಲಲ್ಲ, ನಮ್ಮ ಶಿಕ್ಶಣ ವ್ಯವಸ್ತೆಯ ಸೋಲು, ನಮ್ಮ ಸಮಾಜದ ಸೋಲು.
ಕಿಟಕಿಯಿಂದ ಹೊರಳಿ ತನ್ನ ಮೇಜಿನತ್ತ ಬಂದ. ಲ್ಯಾಪ್ಟಾಪನ್ನು ತೆರೆದು ಮಿಂಚೆಗಳನ್ನು ಓದಿದ. ಅಮೇರಿಕದ ಕಂಪೆನಿಯೊಂದರಿಂದ ಬಂದಿದ್ದ ಮಿಂಚೆಯೊಂದನ್ನು ನೋಡಿ ನಕ್ಕ. ಅವನ ಸಂಶೋದನೆ ಅರಿತ ಅವರು, ಕೆಲಸ ಕೊಡಲು ಮುಂದೆ ಬಂದಿದ್ದರು. ಸಾವಿರಾರು ಡಾಲರ್ ಗಳ ಸಂಬಳ. ಅವನ ಪಿ.ಎಚ್.ಡಿ. ಪ್ರಬಂದ ಪ್ರಕಟವಾದ ಮೇಲೆ ಕೆಲಸ ನೀಡಲು ಮುಂದೆ ಬಂದಿದ್ದ ಮೂರನೇ ಕಂಪನಿ ಇದು. ಆದರೆ ಇವನು ಅವರಿಗೆ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ. ಆ ಮಿಂಚೆ ಮುಚ್ಚಿ, ಗಡಿಯಾರ ನೋಡಿದ. ಹೊತ್ತು ರಾತ್ರಿ ಮೂರಾಗಿತ್ತು. ಹಾಗೇ ಮಂಚದ ಮೇಲೆ ಅಡ್ಡವಾದ. ನಿದ್ದೆ ಹತ್ತಿತು. ಎಚ್ಚರವಾಗಿದ್ದು ಅವನ ಮೊಬಾಯಿಲಿಗೆ ಕರೆ ಬಂದಾಗಲೇ. ಅತ್ತ ಕಡೆಯ ಸುದ್ದಿ ಕೇಳಿ ಅವನಿಗೆ ತುಂಬಾ ಆಗಾತವಾಯಿತು. ದಾರವಾಡದಲ್ಲಿರುವ, ತನ್ನ ಅಚ್ಚುಮೆಚ್ಚಿನ ಗುರುಗಳಾದ ಪಾಟೀಲ್ ಸರ್ ಅವರಿಗೆ ಹ್ರುದಯಾಗಾತವಾಗಿ ಆಸ್ಪತ್ರೆ ಸೇರಿದ್ದರು. ಏನೂ ತೋಚದೆ, ತಕ್ಶಣ ಹೊರಡಬೇಕೆಂದುಕೊಂಡನು. ಆದರೆ ಅವನ ಸೆಮಿನಾರ‍್? ಆರು ತಿಂಗಳಿಂದ ಈ ದಿನಕ್ಕಾಗಿ ಕಾದಿದ್ದನು. ತನ್ನ ಮುಂದಿನ ಬದುಕು ನಿಂತಿರುವುದು ಇದೇ ದಿನದ ಮೇಲೆ. ಮನಸ್ಸಿನ ತಳಮಳ ಹತ್ತಿಕ್ಕಿ, ಸೆಮಿನಾರ್ ಮುಗಿದ ತಕ್ಶಣ ಹೊರಡಬೇಕೆಂದು ತೀರ‍್ಮಾನಿಸಿ, ಕಾಲೇಜಿಗೆ ಹೋಗಲು ಅಣಿಯಾದನು. ಕಾಲೇಜಿಗೆ ಹೋಗುವ ತನಕವೂ ಪಾಟೀಲರ ನೆನಪೇ ಕಾಡುತ್ತಿತ್ತು. ಅವನ ಓದಿನ ಬಗ್ಗೆ ಅಶ್ಟಾಗಿ ಆಸಕ್ತಿ ವಹಿಸದ ಅವನ ತಂದೆಯ ಬದಲಿಗೆ ಆ ಜಾಗದಲ್ಲಿ ನಿಂತು ಅವರು ಅವನಿಗೆ ಮಾರ‍್ಗದರ‍್ಶನ ಮಾಡಿದ್ದರು. ವಯ್ಯಸ್ಸಾದರೂ ಸುಮ್ಮನಿರದೆ ಮನೆಯ ವಸ್ತುಗಳನ್ನೇ ಬಳಸಿ, ಅರಿಮೆಯ ಕಲಿಕಾ ಮಾದರಿಗಳನ್ನು ಮಾಡಿ, ಶಾಲೆಗಳಿಗೆ ಹೋಗಿ ಮಕ್ಕಳಿಗೆ ಕಲಿಸಿ, ವಿಗ್ನಾನದೆಡೆಗೆ ಸೆಳೆಯುತ್ತಿದ್ದರು. ಈಗ ಅವರು ಹುಶಾರಿಲ್ಲದೆ ಆಸ್ಪತ್ರೆಯಲ್ಲಿ ಇರುವುದನ್ನು ಕೇಳಿ ಅವನ ಮನಸ್ಸು ತುಂಬಾ ನೊಂದಿತ್ತು.
ಬಾರವಾದ ಹ್ರುದಯದಲ್ಲೇ ಸೆಮಿನಾರ್ ಶುರುಮಾಡಿದನು. ಸುಮಾರು ನೂರು ಜನ ವಿದ್ಯಾರ‍್ತಿಗಳು ಬಂದಿದ್ದರು. ಯಾವುದೋ ಬಾವಕ್ಕೆ ಒಳಗಾಗಿ, ಸೆಮಿನಾರ್ ಹೇಗೆ ನಡೆಸಿಕೊಡಬೇಕೆಂದು ತಾನು ಯೋಚಿಸಿಟ್ಟ ಸಿದ್ದತೆಯೆಲ್ಲಾ ಬದಿಗಿಟ್ಟು, ತನ್ನದೇ ಕತೆ ಹೇಳಲು ಶುರುಮಾಡಿದ. ಅಮೇರಿಕದಲ್ಲಾದ ತನ್ನ ಅನುಬವ, ಹುಟ್ಟಿಕೊಂಡ ಚಲ, ಮೂರು ಏಡುಗಳ ಸೋಲು ಎಲ್ಲವನ್ನೂ ಬಿಚ್ಚು ಮನಸ್ಸಿನಿಂದ ಹೇಳಿಕೊಂಡ. ತನ್ನ ಗುರುಗಳಾದ ಪಾಟೀಲ್ ಸರ್ ಬಗೆಗೂ ಹೇಳಿಕೊಂಡ. ಬದಲಾವಣೆ ತರಲು ಅಲ್ಲಲ್ಲಿ ಹೇಗೆ ಜನ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ವಿವರಿಸಿದ. ತ್ಯಾಗದ ಹಿರಿಮೆ, ಸಾಮಾಜಿಕ ಜವಾಬ್ದಾರಿಯನ್ನು ಮನದಟ್ಟಾಗುವಂತೆ ತಿಳಿಸಿದ. ಎಲ್ಲರೂ ಮೂಕರಂತೆ ಅವನ ಮಾತುಗಳನ್ನು ಕೇಳುತ್ತಿದ್ದರು. ಹೇಳುವುದೆಲ್ಲ ಮುಗಿಯಿತು ಎನಿಸಿದ ಮೇಲೆ, ತಮ್ಮ ತಮ್ಮ ನಿರ‍್ದಾರವನ್ನು ಉದ್ಯೋಗ ಮೇಳದ ಮುಂಚೆಯೇ ಮಾಡುವ ಅಗತ್ಯದ ಬಗ್ಗೆಯೂ ಹೇಳಿದ. ಡಿಗ್ರಿ ಓದುವ ಹುಡುಗರಿಗೆ ಪರೀಕ್ಶೆ ಮುಗಿದ ತಕ್ಶಣ ಎಮ್.ಎಸ್ ಸೇರಿಕೊಳ್ಳಲು ಬೇಡಿಕೊಂಡ. ನಂತರ ಎಲ್ಲರಿಗೂ ಶುಬ ಕೋರಿ ಹೊರಬಂದ. ಶಿಕ್ಶಕರ ಕೋಣೆಯಲ್ಲಿದ್ದ ತನ್ನ ಮೇಜಿನ ಬಳಿ ಬಂದು ಕುಂತಾಗ, ವಿದ್ಯಾರ‍್ತಿಯೊಬ್ಬ ಬಂದು ಅವನ ಮುಂದೆ ನಿಂತದ್ದನ್ನು ಕಂಡು, “ಏನು?” ಎನ್ನುವಂತೆ ನೋಡಿದ ಇಮ್ರಾನ್. “ಸರ್. ನಿಮ್ಮ ಮಾತಿನಿಂದ ತುಂಬಾ ಪ್ರಬಾವಿತನಾಗಿದ್ದೀನಿ. ನಾನಂತೂ ಕಂಡಿತಾ ಇಂಟರ‍್ವ್ಯುನಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದನು. ಇಮ್ರಾನನಿಗೆ ತುಂಬಾ ಕುಶಿಯಾಯಿತು. “ವೆರಿ ಗುಡ್” ಎಂದು ಅವನ ಕಯ್ ಕುಲುಕಿದನು. ಆದರೆ ಹೆಚ್ಚು ಮಾತಾಡಲು ಸಮಯವಿರಲಿಲ್ಲ. ತಡಮಾಡದೆ, ತನ್ನ ಹುಟ್ಟೂರು ದಾರವಾಡಕ್ಕೆ ಹೊರಟ, ಪಾಟೀಲರನ್ನು ನೋಡಲು.
(ಮುಂದುವರೆಯುವುದು : ಎರಡನೆ ಕಂತು ನಾಳೆ ಮೂಡಿ ಬರುತ್ತದೆ)
(ಚಿತ್ರ ಸೆಲೆ: bbc.co.uk )
1 Response
[…] ಕಂತು-1 ಕಂತು 2 […]