ನಗೆಬರಹ: ‘ಶೂಟಿಂಗಾಯಣ’

– ಡಾ|| ಅಶೋಕ ಪಾಟೀಲ.

film-shoot

ಗಂಗಾವತಿಯಲ್ಲಿ ತುಂಗಬದ್ರೆ ಕೇವಲ 5 ಕಿಮೀ ದೂರದಲ್ಲೇ ಕವಲಾಗಿ ಹರಿಯುತ್ತಾಳೆ. ಬತ್ತ, ಬಾಳೆ, ತೆಂಗಿನ ತೋಟಗಳು ದೊಡ್ಡ ದೊಡ್ದ ಗುಡ್ಡಗಳ ನಡುವೆ ಕಂಗೊಳಿಸುತ್ತಿರುತ್ತವೆ. ಆನೇಗುಂದಿ, ಹಂಪಿ ತುಸುದೂರದಲ್ಲಿದ್ದು ಅನೇಕ ಕಟ್ ಶಾರ‍್ಟ್ ದಾರಿಗಳಿವೆ. ದಾರಿಗುಂಟ ಕಣ್ಣಿಗೆ ಹಿತವಾಗುವ ಸುಂದರ ನೋಟಗಳು ಬೆರಗುಗೊಳಿಸುತ್ತವೆ. ಹೀಗಾಗಿ ಸಿನಿಮಾ ಮಂದಿಗೆ ಸಾಕಶ್ಟು ಸುಂದರ ಲೋಕೆಶನ್ ಗಳು ಇಲ್ಲಿ ಸಿಗುತ್ತವೆ. ಕೆಲ ನಿರ‍್ದೇಶಕರ ಅಚ್ಚುಮೆಚ್ಚಿನ ಲೋಕೆಶನ್ ತಾಣಗಳಲ್ಲಿ ಇವೂ ಸೇರಿವೆ. ಜನದಟ್ಟಣೆ ಕಡಿಮೆ, ದೊಡ್ಡ ಪಟ್ಟಣಗಳಿಗೆ ತುಸುದೂರವೇ ಇರುವುದರಿಂದ ಇಲ್ಲಿ ಶೂಟಿಂಗ್ ಮಾಡುವುದು ತುಸು ನಿರಾಳ, ಸುಲಬ. ಶೂಟಿಂಗ್ ನಡೆಯುತ್ತಿದೆ ಎಂದು ಸುದ್ದಿಯಾದಾಗ ಮಾತ್ರ ಊರುಗಳಿಂದ ಶೂಟಿಂಗ್ ಹುಚ್ಚಿರೋ ನನ್ನಂತ ಗೆಳೆಯರೊಡಗೂಡಿ ತಂಡ ತಂಡವಾಗಿ ಬಂದರೆ ಮಾತ್ರ ಇವರಿಗೆ ತುಸು ತೊಂದರೆ. ಉಳಿದಂತೆ ಇಡೀ ದಿನ ಮೂರು ನಾಲ್ಕು ಸ್ಲಾಟ್ ಗಳನ್ನು ಮಾಡಿಕೊಂಡು ಸಾಕಾಗುವಶ್ಟು ಟೇಕುಗಳನ್ನು ತೆಗೆಯಲು ನಿರ‍್ದೇಶಕರಿಗೆ ಅನುಕೂಲಕರವಾದ ಜಾಗ, ಯಾಕಂದ್ರೆ ನಟರು ಯಾವ್ ಶೆಡ್ಯೂಲ್ ಗೂ ನೆವ ಹೆಳೀ ಹೋಟೆಲ್ ಗೆ ಹೋಗೋ ಹಾಗಿಲ್ಲ. ಯಾಕಂದ್ರೆ ಅವು ತುಸು ದೂರ. ಕಚ್ಚಾ ರಸ್ತೆಗಳು. ಸುಮ್ಮನೆ ಯಾಕೆ ಅಂತ ಅಲ್ಲೇ ಉಳಿದು ಇಡೀ ದಿನ ಶೂಟಿಂಗ್ ಗೆ ಹಾಜರಾಗಿರುತ್ತಿದ್ದರು. ಕೆಲವುಮ್ಮೆ ಅನಿವಾರ‍್ಯವಾಗಿ. ಇಂತಿಪ್ಪ ಶೂಟಿಂಗ್ ಸ್ಪಾಟ್ ಗಳಿಗೆ ನಾವು ನಮ್ಮ ನಮ್ಮ ಸೈಕಲ್ಲುಗಳ ಜೊತೆ ದಾಂಡಿ ಇಡುತ್ತಿದ್ದೆವು.

ಬೆಳಿಗ್ಗೆ ಕಲಿಮನೆಗೆ ಬಂದದ್ದೇ ತಡ, ಯಾವನಾದರೂ ಒಬ್ಬ ಶೂಟಿಂಗ್ ನಡಿತಿದೆಯಂತೆ ಅಂದರೆ ಮುಗೀತು. 8 ರಿಂದ 10 ಸೈಕಲ್ ಗಳು ರೆಡಿಯಾಗಿಬಿಡುತ್ತಿದ್ದವು. ಹೇಳ್ದೆ ಕೆಳ್ದೆ ಹೊರಟು ಶೂಟಿಂಗ್ ಸ್ಪಾಟ್ ಗೆ ಹಾಜರಾಗಿ ಅಲ್ಲಿ ನೆಚ್ಚಿನ ನಟ, ನಟಿಯರನ್ನು ಹತ್ತಿರದಿಂದ ನೋಡೋದು, ಮಾತಾಡ್ಸೋದು, ಆಟೋಗ್ರಾಪ್ ತೊಗೊಂಡು ಜೋಪಾನವಾಗಿ ಕಾಯ್ದುಕೊಳ್ಳೋದು, ಅದನ್ನು ತಿಂಗಳ್ಗಟ್ಟಲೇ ಎಲ್ಲರಿದಿರು ಹೇಳಿಕೊಳ್ಳೋದೆಂದರೆ ಹೆಮ್ಮೆ ಸಡಗರ, ಸಂಬ್ರಮ. ಯಾರ ಹತ್ತಿರ ಜಾಸ್ತಿ ಆಕ್ಟರ್ ಗಳ ಆಟೋಗ್ರಾಪ್ ಇರುತ್ತೋ ಅವ ನಮ್ಮೆಲ್ಲರಿಗಿಂತ ಶ್ರೇಶ್ಟ ವ್ಯಕ್ತಿ. ಆಗ ನಮ್ಮ ಹತ್ತಿರ ಪಟ್ಟನೆ ತಿಟ್ಟ ತೆಗೆಯಲು ಕ್ಯಾಮರಾಗಳಿದ್ದಿಲ್ಲ. ಕ್ಯಾಮರಾಗಳಿದ್ದರೂ ಅದರ ರೀಲಿಗೆ ಕರ‍್ಚು ಕೊಡೋಸ್ಟು ನಮ್ಮ ಮನೆಯವರು ದಾರಾಳಿಗಳಾಗಿರಲಿಲ್ಲ! ಅಲ್ಲಿ ಹೋಗಿ ಬಂದು ಹೇಳಿಕೊಳ್ಳೊಕೆ ನಮ್ಮ ಹತ್ತಿರ ಇರ‍್ತಿದ್ದ ಬಹು ದೊಡ್ಡ ಪುರಾವೆ ಅಂದ್ರೆ ಅವರ ‘ಆಟೋಗ್ರಾಪ್’. ಎಲ್ಲರೂ ಅದನ್ನು ದಿಟ್ಟಿಸಿ ನೋಡಿ ‘ಅಬಾಬಾ.. ಅಂತ ನಟರ ಕೈ ಬರಹವಾ? ಬೇಶ್.. ನಾವ್ ನೋಡೇ ಇಲ್ಲ ಅವ್ರನ್ನ..ಸಿನಿಮಾದಲ್ಲಿದ್ದಾಗೇ ಇದಾರಾ?’ ಅಂದಾಗ ನಾವು ಬಹು ದೊಡ್ಡ ಸಾದನೆ ಮಾಡಿದ ಅನುಬವ ಆಗಿ ಹಿರಿಹಿರಿ ಹಿಗ್ಗುತ್ತಿದ್ದೆವು. ಬೇರೆ ಊರಿಗೆ ಹೋಗುವಾಗ ತಪ್ಪದೇ ಆಟೋಗ್ರಾಪನ್ನು ಒಯ್ದು ಊರ ಗೆಳೆಯರು, ನೆಂಟರಿಗೆಲ್ಲ ತೋರಿಸಿ ದೊಡ್ಡಮನುಶ್ಯರಾಗುತ್ತಿದ್ದೆವು. ನಮ್ಮೆಲ್ಲರ ಕಿಸೆಯಲ್ಲಿ ಯಾವಾಗಲೂ ಸಣ್ಣ ಆಟೋಗ್ರಾಪ್ ಬುಕ್ ಒಂದನ್ನು ಇಟ್ಟುಕೊಂಡಿರುತ್ತಿದ್ದೆವು, ಯಾಕಂದ್ರೆ ಎಲ್ಲಿ ಯಾವಾಗ ಶೂಟಿಂಗ್ ನಡಿತಿರೋ ಸುದ್ದಿ ಬರುತ್ತೋ ಹೇಳಲಿಕ್ಕೆ ಆಗ್ತಿದ್ದಿಲ್ಲ ನೋಡಿ, ಅದಕ್ಕೆ.

ಕೆಲವೊಮ್ಮೆ ವಿರುಪಾಪುರ ಗಡ್ಡೆಯ ಅರೆ ಮೀಟರುಗಳಶ್ಟಿರುವ ನದಿಯನ್ನು ‘ಹುಟ್ಟಿ’ನಲ್ಲಿ ನಮ್ಮ ನಮ್ಮ ಸೈಕಲ್ಲುಗಳ ಸಮೇತ ದಾಟಿ ಹಂಪಿಯ ಜಾಗಗಳಿಗೆ ಹೋಗಿ ಶೂಟಿಂಗ್ ನೋಡಿ ಮತ್ತೆ ಇಳಿಸಂಜೆ ಹೊತ್ತಲ್ಲಿ ಮತ್ತದೇ ಹುಟ್ಟಿನಲ್ಲಿ ಸೈಕಲ್ ಸಮೇತ 12 ಕಿಲೋಮೀಟರ್ ನಶ್ಟು ದೂರವಿರೋ ಊರನ್ನು ತಲುಪಿ ನಂತರ ಸ್ವಲ್ಪ ಹೊತ್ತು ಸಣ್ಣ ಪುಟ್ಟ ಕರ‍್ಚುಗಳ ಲೆಕ್ಕ ಚುಕ್ತಾ ಮಾಡಿಕೊಂಡು ಮನೆ ಸೇರುತ್ತಿದ್ದೆವು. ಈ ಶೂಟಿಂಗ್ ಹುಚ್ಚಿನ ಸಲುವಾಗಿ ಮನೆಯಲ್ಲಿ ಸಾಕಶ್ಟು ಬಾರಿ ಅಮ್ಮನಿಂದ ಒದೆ ತಿಂದಿದ್ದಿದೆ. ಅಪ್ಪನಂತೂ ಎಲ್ಲಿ ಇವನು ಊರಿಂದ ಹಂಪಿಗೆ ಈ ಪಾಟಿ ತಿರುಗಾಡಿ ತಿರುಗಾಡಿ ಹಂಪಿಗೆ ಬರೋ ಪ್ರವಾಸಿಗರಿಗೆ ‘ಗೈಡ್ ಗೀಡ್’ ಆದಾನು ಎಂಬ ಬಯ ಯಾವಾಗಲೂ ಕಾಡುತ್ತಿತ್ತು.  ಯಾವಾಗ ಕಾಲೇಜಿಗೆ ಮತ್ತೆ ಹೊಸಪೇಟೆಗೆ ಸೇರಿದೆನೋ ಆ ಬಯ ದುಪ್ಪಟ್ಟಾಯಿತು. ಹೊಸಪೇಟೆಯಿಂದ ಹಂಪಿಗೆ ಪ್ರತಿ ಹತ್ತು ನಿಮಿಶಕ್ಕೊಂದು ಬಸ್ಸು!. ಅವರ ಪುಣ್ಯಕ್ಕೆ ಹಾಗಾಗಲಿಲ್ಲ. ನಮ್ಮ ಪ್ರವಾಸಿ ಸೈಕಲ್ ಗೆಳೆಯರ ಬಳಗ ಅಲ್ಲಿ ಇಲ್ಲದಿದ್ದುದ್ದರಿಂದ ಪ್ರವಾಸ ಹೆಚ್ಚುಕಡಿಮೆ ನಿಂತುಹೋಯಿತು.

ಎಶ್ಟೋ ಬಾರಿ ಸೈಕಲ್ ಗಳು ಕೈಕೊಡುತ್ತಿದ್ದವು. ಆದರೆ ಎಲ್ಲರೂ ಕೂಡಿ ಪಂಚರ್ ಶಾಪ್ ಬರೋವರೆಗೂ ಆ ಸೈಕಲ್ ನ್ನು ಹಾಗೂ ಹೀಗೂ ಸಾಗಿಸುತ್ತಿದ್ದೆವು. ನಡುವೆ ಸಿಗೋ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಪಂಚರ್ ತಿದ್ದಿಸಿಕೊಂಡ ಮೇಲೆ ಮತ್ತದೇ ಪಯಣ, ಅದೇ ಹಾದಿ. ನಮ್ಮ ಸೈಕಲ್ ವೇಗವನ್ನು ಹೆಚ್ಚಿಸಿಕೊಂಡು, ಪಂಚರ್ ತಿದ್ದಿಸಲು ಕಳೆದು ಹೋದ ಸಮಯವನ್ನು ಸರಿಮಾಡಿಕೊಳ್ಳುತ್ತಿದ್ದೆವು. ಕೆಲಬಾರಿ ಸೈಕಲ್ ಗಳಿಂದ ಬೀಳುತ್ತಿದ್ದೆವು, ಏಳುತ್ತಿದ್ದೆವು, ಸಣ್ಣ ಪುಟ್ಟ ಗಾಯಗಳಂತೂ ಮಾಮೂಲಾಗಿಬಿಟ್ಟಿದ್ದವು. ಒಮ್ಮೆ ಸೈಕಲ್ ನಿಂದ ಬಿದ್ದು ಒಬ್ಬ ಗೆಳೆಯ ಮುಂದಿನ ಹಲ್ಲು ಅರ‍್ದ ಮುರಿದುಕೊಂಡುಬಿಟ್ಟ! ಆವತ್ತು ಅರ‍್ದ ದಾರಿಗೆ ಹೆದರಿ ವಾಪಸಾಗಿಬಿಟ್ಟೆವು. ಅವರಮ್ಮನಿಂದ ನಮಗೆಲ್ಲರಿಗೂ ಸರಿಯಾಗಿ ವಾರಗಟ್ಟಲೇ ಮಂಗಳಾರತಿಯಾಯ್ತು. ಅವನ ಮನೆ ಮುಂದೆ ಹೋದರೆ ಅವರಮ್ಮ ಬಯ್ಯುತ್ತಾರೆಂದು ಸುತ್ತಿ ಬಳಸಿ ತಿರುಗಾಡಿದೆವು. ಅವನು ಆ ನಂತರದಲ್ಲಿ ನಮ್ಮ ಜೊತೆ ಯಾವ ಶೂಟಿಂಗ್ ಗೆ ಬಂದ ನೆನಪಿಲ್ಲ. ಬಂದಿದ್ರೆ ಅವರಮ್ಮ ನಮ್ಮನ್ನೆಲ್ಲ ಸೈಕಲ್ ಮೇಲೆ ಸಾಲಾಗಿ ನಿಲ್ಲಿಸಿ ‘ಶೂಟ್’ ಮಾಡಿರೋರು.

ಕನ್ನಡದ ಸಿನಿಮಾ ‘ಅರಗಿಣಿ’ ‘ಶ್ರೀಗಂದ’ ‘ಶ್ರೀ ಮಂಜುನಾತ’ ‘ಬೆಳ್ಳಿ ಕಾಲುಂಗುರ’, ‘ಕ್ರುಶ್ಣ ರುಕ್ಮಿಣಿ’  ಹಿಂದಿ ಸಿನಿಮಾಗಳಾದ ‘ ಅಮಾನತ್’ ‘ಚೈನಾ ಗೇಟ್’ ತೆಲುಗು ಸಿನಿಮಾಗಳಾದ ಶಂಕರ್ ನಿರ‍್ದೇಶನದ ‘ಒಕೇಒಕ್ಕುಡು’, ‘ಜಂಟಲಮನ್’ , ಚಿರಂಜೀವಿ, ಊರ‍್ಮಿಳಾ ನಟಿಸಿದ ಒಂದು ಚಿತ್ರ, ಹೀಗೆ ಇನ್ನು ಐದಾರು ಚಿತ್ರಗಳ ಶೂಟಿಂಗ್ ಗಳಿಗೆ ಸಾಕ್ಶಿಯಾಗಿದ್ದೆವು. ಮೆಗಾಸ್ಟಾರ್ ಚಿರಂಜೀವಿ, ಊರ‍್ಮಿಳಾ ಮಾತೋಂಡ್ಕರ್, ಸಂಜಯ ದತ್, ಅಕ್ಶಯ ಕುಮಾರ್, ಅರ‍್ಜುನ್ ಸರ‍್ಜಾ, ಮನೀಶಾ ಕೊಯಿರಾಲ, ಮಾಲಾಶ್ರೀ, ರಮೇಶ ಅರವಿಂದ್, ಸುದಾರಾಣಿ, ವಿಶ್ನುವರ‍್ದನ್ ಹೀಗೆ ಮಹಾನಟರೊಡನೆ ಹಾಗೂ ಅವರೊಡನೆ ಬಂದ ಸಹನಟರೊಡನೆ ಕಳೆದ ಕ್ಶಣಗಳಿನ್ನೂ ನಮ್ಮೂರಿನ ಬತ್ತದ ಬತ್ತದ ಗದ್ದೆಗಳಂತೆ ಇನ್ನೂ ಹಸಿರಾಗಿವೆ.

ಅರಗಿಣಿ ಚಿತ್ರದ ನಿರ‍್ದೇಶಕ ಪಿ ಎಚ್ ವಿಶ್ವನಾತ್, ಅವರ ಬಗ್ಗೆ ಅಶ್ಟೇನೂ ಗೊತ್ತಿಲ್ಲದ ನಮಗೆ ಅವರು ಹಾಕಿಕೊಂಡಿರೋ ಕೆಂಪನೆಯ ರೌಂಡ್ ಕ್ಯಾಪ್, ಎರಡೂ ಕೈಗಳಿಂದ ರಮೇಶ್ ಅರವಿಂದ್ ಮತ್ತು ಸುದಾರಾಣಿಗೆ ಸೀನ್ ಗಳನ್ನು ತಿಳಿಸುವ ರೀತಿ ನಮ್ಮನ್ನು ಇನ್ನಿಲ್ಲದ ಕೂತುಹಲಕ್ಕೀಡುಮಾಡುತ್ತಿತ್ತು. ನಾವೆಲ್ಲ ಕಲಿಮನೆಯ ಯುನಿಪಾರ‍್ಮ್ ನಲ್ಲೇ ಇರುತ್ತಿದ್ದುದರಿಂದ ಒಂದೇ ಗುಂಪೆಂದು ಯಾರಿಗಾದರೂ ಗೊತ್ತಾಗುತ್ತಿತ್ತು. ರಮೇಶ್, ಸುದಾರಾಣಿಯವರನ್ನು ಮೊದಲು ನೋಡಿದಾಗ ಅವರಿಬ್ಬರು ನಮ್ಮೆಲ್ಲರಿಗೂ ಹುಲುಮಾನವರಿಗಿಂತ ‘ವಿಶೇಶ ವ್ಯಕ್ತಿ’ಗಳೆಂದು ಗೋಚರಿಸಿದರು. ಅತ್ಯಂತ ಸ್ಪುರದ್ರೂಪಿ ನಟ ರಮೇಶ್. ಈಗ ಹೇಗಿದ್ದಾರೋ ಅದಕ್ಕೂ ಮಟ್ಟಸವಾಗಿ ಸುಮಾರು 20 ವರ‍್ಶಗಳ ಹಿಂದೆಯೂ ಇದ್ದರು. ತೀರಾ ಸರಳ ನಾಯಕ ನಟ. ನಾವು ಒಂದಶ್ಟು ಹುಡುಗರು ದಿನಾ ಕಲಿಮನೆಗೆ ಚಕ್ಕರ್ ಹಾಕಿ ಸರಿಯಾಗಿ ಶೂಟಿಂಗ್ ಗೆ ಹಾಜರಿರುತ್ತಿದ್ದುದನ್ನು ಕಂಡು ಮೂರ‍್ನಾಲ್ಕು ದಿನದ ನಂತರ ನಮ್ಮ ಬಳಿಯೇ ಬಂದರು. ಆ ಮೂರು ದಿನಗಳವರೆಗೂ ರಮೇಶ್ ಮತ್ತು ಸಹನಟರ ಟೇಕ್ ಮಾತ್ರ ಇದ್ದವು. ನಮ್ಮಲ್ಲಿ ಗುಂಡುಗುಂಡಾಗಿದ್ದ ಡುಮ್ಮ ಎಂಬ ಗೆಳೆಯನ ಕೆನ್ನೆ ಚಿವುಟಿ ‘ಏನ್ರಪಾ, ದಿನಾ ಸ್ಕೂಲ್ ಗೆ ಚಕ್ಕರ್ ಹಾಕಿ ಬರ‍್ತಿದೀರಾ? ನನ್ನ ನೋಡಿದ್ರಲ್ಲ, ಹೋಗ್ರೋ ಸಾಕು’ ಎಂದು ನಗಾಡುತ್ತ ಅಂದರು. ನಮ್ಮ ಡುಮ್ಮ ಸುಮ್ಮನಿರಬೇಕಲ್ಲ, ಸುದಾರಾಣಿ ಅವ್ರ್ನ ನೋಡಿ ಹೋಗ್ತೀವಿ ಸಾರ್ ಅನ್ನಬೇಕೇ? ರಮೇಶ್ ಕಕ್ಕಾಬಿಕ್ಕಿ! ‘ಬಲಾ ಪಾಕಡಿ ಇದಾನಲ್ಲೋ ನಿಮ್ಮ ಡಬ್ಬು!’ ಎಂದು ಬೆನ್ನಿಗೆ ಗುದ್ದಿದ್ದರು. ಇದನ್ನು ನಾವೆಲ್ಲ ಇಡೀ ಗಂಗಾವತಿಗೆ ತಿಂಗಳುಗಟ್ಟಲೇ ಸಾರಿ ಸಾರಿ ಹೇಳಿದೆವು.  ನಮ್ ಡಬ್ಬು, ರಮೇಶ ಬೆನ್ನಿಗೆ ಗುದ್ದಿದ್ದನ್ನು ಸುಮ್ ಸುಮ್ನೆ ಇನ್ನೂ ನೋಯ್ತದಪ್ಪಾ ಅಂತ ಬೇಕೆಂತಲೇ ಬಹಳ ತಿಂಗಳುಗಳವರೆಗೆ ಅಂತಿದ್ದ ಬಡ್ಡಿ ಮಗ. ಯಾಕಂದ್ರೆ ಅಲ್ಲಿದ್ದವರು ಯಾರಾದ್ರೂ ಯಾಕೋ? ಏನಾಯ್ತು ಬೆನ್ನಿಗೆ? ಅಂತ ಕೇಳಬೇಕು ಅನ್ನೋದು ಅವನ ಮಹದಾಸೆ.

ಕೊನೆಗೂ ಡಬ್ಬುವಿನ ಆಸೆಯಂತೆ (ನಮ್ಮೆಲ್ಲರ ಆಸೆಯೂ ಅನ್ನಿ!) ನಾಲ್ಕನೇ ದಿನ ‘ಪದುಮಳು ಬಂದಳು’ ಅಂದ್ರೆ ಸುದಾರಾಣಿ, ಇಲಕಲ್ ಸೀರೆಯುಟ್ಟು ಅಂದಿನ ಶೆಡ್ಯೂಲ್ ಗೆ ಹಾಜರಾಗಿ ನಮಗೆ ಸನಿಹದ ದರುಶನನವನ್ನಿತ್ತಳು. ಇಪ್ಪತ್ತು ವರ‍್ಶದ ಹಿಂದಿನ ಮಾತಾದರೂ ಆಗವರನ್ನು ನೋಡಿದ್ದು ಇನ್ನೂ ಮನದಾಗೆ ಅಚ್ಚೊತ್ತಿದಂತಿದೆ. ಅಪ್ಪಟ ದಂತದ ಬೊಂಬೆ, ಆಗ ಶೂಟಿಂಗ್ ಶಾಟ್ ಸಮಯವನ್ನು ಹೊರತು ಪಡಿಸಿ ಅವರು ತಮ್ಮ ಮುಂದಿನ ಟೇಕ್ ನ ಡೈಲಾಗು ಓದುವುದರಲ್ಲಿ, ಮೇಕಪ್ ಗಳಲ್ಲಿ ಬ್ಯುಸಿಯಾಗುತ್ತಿದ್ದರು.  ಅವರ ಮೇಲೆ ಚತ್ರಿ, ಆಕೆ ಸ್ವಲ್ಪ ಹೊತ್ತು ಹಾಕಿಕೊಳ್ಳುತ್ತಿದ್ದ  ಆ ಸನ್ ಗ್ಲಾಸು, ಇನ್ನೂ ಸ್ವಲ್ಪ ಹೊತ್ತಿಗೆ ಬಿಡುತ್ತಿದ್ದ ಓಪನ್ ಹೇರು, ಆಕೆ ಎದ್ದು ಕೂದಲು ಹಾರಾಡಿಸ್ಕೊಂಡು ಓಡಾಡದಿದ್ದರೂ ಕೂಡ ನಮ್ಮ ಮೈಯೆಲ್ಲ ಜುಮ್ಮೆನ್ನುತ್ತಿತ್ತು! ಸ್ವಲ್ಪ ನಮ್ ಕಡೆ ಕಣ್ಣಾಡಿಸಿದರೂ ನಾವ್ ಪುಲ್ ಕುಶ್ ಆಗುತ್ತಿದ್ದೆವು. ಅಂತಹದರಲ್ಲಿ ನಾವ್ ತಪ್ಪದೇ ಬರೋದನ್ನ ನೋಡಿ ಮೂರನೇ ದಿನ ನಮ್ ಚೋಟಾ ಗ್ಯಾಂಗ್ ಕಡೆಗೆ ‘ಇಸ್ಮೈಲ್’ ಒಂದನ್ನು ಬಿಸಾಕಿಬಿಡೋದೆ?! ನಮಗದು ಅನಿರೀಕ್ಶಿತ ಬಂದೆರಗಿದ ಆಗಾತ, ಆದರೂ ಸಂಬಾಳಿಸಿಕೊಂಡೆವು. ಲೈಟ್ ಬಾಯ್ ನ ಕಡೆ ತಿರುಗಿ ನಮ್ಮನ್ನು ಕರೆಸುವಂತೆ ಹೇಳಿದರು. ಯಾವ್ ಸ್ಕೂಲು?, ಯಾವ್ ಕ್ಲಾಸು? ಅಂತೆಲ್ಲ ವಿಚಾರಿಸಿ ಎಲ್ಲರಿಗೂ ಆಟೋಗ್ರಾಪ್ ನೀಡಿ ನಮ್ಮನ್ನು ಪಾವನರನ್ನಾಗಿಸಿದರು.

‘ಪಾಪ, ತುಂಬಾ ಒಳ್ಳೇವ್ರು ಲೇ ಇವ್ರು, ಸ್ವಲ್ಪನೂ ಸೊಕ್ಕೇ ಇಲ್ಲಲಲೇ?’ ಅಂತ ನಾವೆಲ್ಲ ಮಾತಾಡಿಕೊಳ್ಳುತ್ತ ಅಂದು ಸೈಕಲ್ ನ್ನು ತುಸು ಬರದಲ್ಲೇ ತುಳಿದಿದ್ದ ನೆನಪು. ನಮ್ಮಲ್ಲೊಬ್ಬ ಆಟೋಗ್ರಾಪ್ ತೆಗೆದುಕೊಳ್ಳುವಾಗ ತುಸು ಕೈ ತಾಕಿತೆಂತು ಪದೇ ಪದೇ ಹೇಳಿ ನಮ್ಮ ಹೊಟ್ಟೆ ಉರಿಸಿದ್ದ. ಆಮೇಲೆ ಗಂಗಾವತಿಯಲ್ಲಿ ಒಳ್ಳೆಯ ಹೈ ಪೈ ಹೋಟಲುಗಳು ನಿರ‍್ಮಾಣಗೊಂಡು ಆಕ್ಟರ್ ಗಳು ಹೊಸಪೇಟೆಗಿಂತ ನಮ್ಮೂರಲ್ಲೇ ಉಳಿಯತೊಡಗಿದರು. ಇದು ನಮಗೆ ತುಂಬಾ ಹಿಗ್ಗನ್ನುಂಟುಮಾಡಿತ್ತು. ಸಮೀಪದ ಲೋಕೆಶನ್ನುಗಳಿಗೆ ಬೆಳಿಗ್ಗೆ  ಸುಮಾರು 8 ರಿಂದ 10 ಗಂಟೆಯವರೆಗೆ ಎಲ್ಲ ನಟರೂ, ನಟೀಮಣಿಗಳು ತಮ್ಮ ಕಾರುಗಳಲ್ಲಿ ಹೊರಡಲನುವಾಗುತ್ತಿದ್ದರು. ಮೊದಮೊದಲು ಸಂಜಯದತ್ ಬಂದಾಗಂತೂ ಆ ಹೋಟಲ್ ಹೊರಬಾಗಿಲ ಕಡೆ ಅರ‍್ದ ಗಂಗಾವತಿಯೇ ನೆರೆದಿರುತ್ತಿತ್ತು. ಅಜಾನುಬಾಹುವಾದ ಸಂಜಯದತ್ ಉದ್ದನೆಯ ರೇಶಿಮೆ ಕೂದಲುಗಳನ್ನು ಬಿಟ್ಟಿದ್ದ. ಕಪ್ಪನೆಯ ಸ್ಲೀವ್ ಲೆಸ್ ಟೀ ಶರ‍್ಟ್ ಮೇಲೆ ಇದ್ದು ಹೊರಹೋಗುವಾಗ ನಗುತ್ತ ಕೈ ಬೀಸುತ್ತ ಲೋಕೆಶನ್ ಗಳಿಗೆ ತೆರಳುತ್ತಿದ್ದ. ‘ನಾಯಕ್ ನಹೀ ಕಳ್ನಾಯಕ್ ಹೈ ತೂ…’ ಅಂತ ಪಟ್ಟೆಗಳು ಜೋರಾಗಿ ಕಿರುಚುತ್ತಿದ್ದರು.

ಇನ್ನು ಶೂಟಿಂಗ್ ಆದ ಆಯಾ ಸಿನಿಮಾಗಳು ಊರಿನ ತಿಯೇಟರ್ ಗೆ ಬಂದಾಗ ನಮಗೆಲ್ಲ ಹಬ್ಬ. ಸಿನಿಮಾವನ್ನ ಲಕ್ಶ್ಯ ಕೊಟ್ಟು ನೋಡಿ, ಈ ಸೀನ್ ಅಲ್ಲಿ ನಡೆದಿದ್ದು, ಇದರ ಶೂಟ್ ನಲ್ಲಿ ನಾನಿದ್ದೆ, ಅಲ್ಲಿ ಗುಂಪಿನಲ್ಲಿ ಅದೋ ಅಲ್ಲೇ ಪಕ್ಕ ನಾನಿದ್ದೆ? ಅರೇ, ನಾನೆಲ್ಲಿ? ಏ ಅವತ್ತು ಇದೇ ಶೂಟ್ ಇತ್ತು, ಎಂಬ ಮಾತುಗಳಲ್ಲೇ ಸಿನಿಮಾಕ್ಕೆ ‘ಶುಬಂ’  ಮಾಡಿಬಿಡಿತ್ತಿದ್ದೆವು. ಕೆಲ ನಟ ನಟಿಯರು ತೆರೆ ಮೇಲೆಗಿಂತ ತೆರೆ ಹಿಂದೆಯೇ ಚೆನ್ನಾಗಿ ಕಾಣುತ್ತಾರೆ! ನಮಗೆ ಮಾಲಾಶ್ರೀ, ಮನೀಶಾ ಕೊಯಿರಾಲಾ ರನ್ನು ನೋಡಿದಾಗ ಹಾಗನ್ನಿಸುತ್ತಿತ್ತು. ಕೆಲ ವಿಶೇಶ ಮತ್ತು ಅಚ್ಚರಿಯ ಅಂಶಗಳು ನಮ್ಮ ಗಮನಕ್ಕೆ ಬಂದದ್ದೆಂದರೆ ಎಲ್ಲ ನಟ, ನಟಿಯರು ವೈಯಕ್ತಿಕವಾಗಿ ತುಂಬಾ ಗಾಡ ಗೆಳೆಯರಾಗಿರುವುದಿಲ್ಲ. ಕೆಲವು ನಟೀಮಣಿಗಳಿಗೆ ಸನ್ನೀವೇಶಗಳನ್ನು ಹೇಳಿ ಟೇಕ್ ಒಕೆ ಮಾಡುವಶ್ಟರಲ್ಲಿ ಸಹ ನಿರ‍್ದೇಶಕರು ಸುಸ್ತಾಗಿ ಬೀಳೋದೊಂದೆ ಬಾಕಿ. ಎರಡು ನಿಮಿಶದ ಟೇಕ್ ಅನ್ನು ಏನಿಲ್ಲವೆಂದ್ರೂ ಕಡೇ  ಪಕ್ಶ ಇಪ್ಪತ್ತು ಬಾರಿ  ತೆಗೆದುಕೊಂಡು ಅರೆ ದಿನವನ್ನು ಕಳೆದದ್ದನ್ನು ನೋಡಿದ್ದೆವು. ನಾಯಕ ನಟ, ನಾಯಕ ನಟಿಯರನ್ನು ಕಾಳಜಿಯಿಂದ ನೋಡಿಕೊಳ್ಳುವಶ್ಟು ಜೊತೆಗಾರ ನಟರನ್ನು ನೋಡಿಕೊಳ್ಳೊಲ್ಲ, ಕೆಲ ನಾಯಕ ನಟರು ಕಾರ್ ನಲ್ಲಿ ಒಬ್ಬರೇ ಹೋಗುತ್ತಿದ್ದರೆ ಹೊರತು ಹಿರಿಯ ಸಹನಟರನ್ನು ಅಪ್ಪಿತಪ್ಪಿಯೂ ಎದುರಿಗಿದ್ದರೂ ಕರೆಯುತ್ತಿರಲಿಲ್ಲ. ಕೆಲವೊಮ್ಮೆ ಆ ಸಹನಟರು ಯುನಿಟ್ ಹುಡುಗರ ಗಾಡಿಯಲ್ಲೇ ಹತ್ತಿ ಹೋಟಲ್ ತಲುಪುತ್ತಿದ್ದರು. ಅದಕ್ಕೆನೇ ಈ ಶೂಟಿಂಗ್ ನ ಬಗ್ಗೆ ನಮ್ಮ ಎರಡು ಸಾಲಿನ ನಿರ‍್ಣಯಗಳೆಂದರೆ,  ಸಿನಿಮಾಗಳನ್ನು ತೆರೆ ಮೇಲೆಯೇ ನೋಡೋದೇ ದೊಡ್ಡ ಕುಶಿ.  ಕೆಲ ನಾಯಕ ನಟ, ನಾಯಕ ನಟಿಯರನ್ನು ತೆರೆ ಮೇಲೆ ಮಾತ್ರ ನೋಡೋದೇ ವಾಸಿ!

(ಚಿತ್ರಸೆಲೆ:  selfieproductions.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: