ಹಸಿವಿಂದ ಹಸಿರಿನೆಡೆಗೆ 

ಪ್ರಶಾಂತ ಎಲೆಮನೆ.

1024px-Algoculture_au_kibboutz_Ketura

ನಾನು ಆರೋಹ.ನನಗೀಗ 28 ವರುಶ. ನನ್ನ ನೆಲೆ ಇಸ್ರೇಲಿನ ನೆಗೆವ್ಪ್ರ. ದೇಶದಲ್ಲಿ, ನಾನೊಬ್ಬಒಕ್ಕಲಿಗ. ನನ್ನ ನಾಡಿನ ಹೆಚ್ಚಿನ ಪಾಲು ಮರಳುಗಾಡು. ಕೇವಲ 20% ತುಣುಕು ಸಾಗುವಳಿ ಮಾಡಲು ತಕ್ಕದ್ದಾಗಿದೆ. ನಮ್ಮಲ್ಲಿ ಇರುವುದೆಲ್ಲ ಬರೀ ಉಪ್ಪುನೀರು. 1967ರಲ್ಲಿ ಮಾರ‍್ಕ್ ಟ್ವೈನ್ (Mark Twain – ಅಮೇರಿಕಾದ ಬರಹಗಾರ) ನನ್ನ ನಾಡನ್ನು ಮಂದಿಯು ಬದುಕಲಾಗದ ನೆಲೆ ಅಂದಿದ್ದನಂತೆ. ಇಂದು ಅವನೆದ್ದು ಬಂದರೆ ಅವನಿಗೆ ನನ್ನ ನಾಡಿನ ಗುರುತು ಸಿಗಲಿಕ್ಕಿಲ್ಲ. ನಾವಿಂದು ನಮ್ಮ ಬೇಡಿಕೆಯ 95ರಶ್ಟನ್ನು ಬೆಳೆಯುತ್ತೇವೆ. 10 ವರುಶದ ಕೆಳಗೆ ನಾನು ಮೊದಲಬಾರಿಗೆ ಕಿಬ್ಬುಟ್ಸ್ (kibbutz) ಸಹಾಯಕನಾಗಿ ಸೇರಿಕೊಂಡಾಗ ನನಗೆ 30 ಎಕರೆ ನೆಲವನ್ನ ಬಿತ್ತುವ ಕೆಲಸ ಕೊಟ್ಟಿದ್ದರು, ಅದೇ ನನಗೆ ಕುಶಿ ಅನಿಸಿತು. ಮುಂದೆ ಅದೇ ನನ್ನ ಬದುಕಿನ ಬಾಗವಾಯಿತು. ಇಂದು ಎಲ್ಲರೂ ನಮ್ಮತ್ತ ನೋಡುತ್ತಿದ್ದಾರೆ. ನಾವು ನಮ್ಮ ಸಾಗುವಳಿಯ ಬಗೆಯನ್ನ ಎಲ್ಲರಿಗೂ ತಿಳಿಸುವ ಕೆಲಸದಲ್ಲಿದ್ದೇವೆ.

ನಮ್ಮ ಸಾಗುವಳಿ ಸಹಕಾರ ಪದ್ದತಿಯದ್ದು, ಇದರಲ್ಲಿ ಎರಡು ಬಗೆ.

1) ಕಿಬ್ಬುಟ್ಸ್: ಇಲ್ಲಿ ಎಲ್ಲಾ ಸಹಕಾರ ಪದ್ದತಿಯಲ್ಲಿ ಸಾಗುವಳಿ ಮಾಡುತ್ತಾರೆ, ಬಂದ ಆದಾಯ ಎಲ್ಲರಿಗೂ ಸೇರಿದ್ದು.

2) ಮೊಶವ್(Moshav) : ಇಲ್ಲಿನ ಎಲ್ಲಾ ಒಕ್ಕಲುಗಳು ತಮ್ಮದೇ ಜಮೀನಿನಲ್ಲಿ ನಡೆಯುತ್ತದೆ, ಮಾರಾಟ ಮಾತ್ರ ಹೊಂದಾಣಿಕೆಯ ರೂಪದಲ್ಲಿ ನಡೆಯುತ್ತದೆ.

ನಾವು ಬೆಳೆಯದ ಬೆಳೆ ಇಲ್ಲ. ನಮ್ಮ ದೇಹ ಹಸಿರು ಮನೆಯನ್ನಮಾಡಿಕೊಂಡು, ನಮಗೆ ಬೇಕಾದ ವಾತಾವರಣ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಜ್ಯೂಯಿಶ್ ನ್ಯಾಶನಲ್ ಪಂಡ್ ಇಲ್ಲಿ ನಮ್ಮ ಸಹಾಯಕ್ಕೆ ನಿಂತಿದೆ. ವರುಶಕ್ಕೆ 8000 ಎಕರೆಯಶ್ಟು ನೆಲವನ್ನ ಸಾಗುವಳಿಗೆ ತಕ್ಕನಾಗಿಸುತ್ತಿದೆ. ದ್ರಾಕ್ಶಿ, ಮಾವು, ಕಿವಿ, ಪೇರಳೆ, ಬಾಳೆ, ಸೇಬು, ಕಿತ್ತಳೆ – ಹೀಗೆ ಹಣ್ಣುಗಳ ಜೊತೆಗೆ ಗೋದಿ, ಅಕ್ಕಿ, ಬಾರ‍್ಲಿಯನ್ನೂ ನಾವು ಯಶಸ್ವಿಯಾಗಿ ಬೆಳೆಯುತ್ತಿದ್ದೇವೆ. ನೀರಿಲ್ಲದ ಮರಳುಗಾಡಿನಲ್ಲಿ ನೀರನ್ನು ಚೆನ್ನಾಗಿ ಬಳಕೆ ಮಾಡುವುದನ್ನು ನಾವು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ನೀವು ಬಳಸುವ ತುಂತುರು ನೀರಾವರಿ, ಹನಿ ನೀರಾವರಿ ಎಲ್ಲವೂ ಬಂದಿರುವುದು ನಮ್ಮಿಂದ. ನೇರವಾಗಿ ಗಿಡದ ಬೇರಿಗೆ ನೀರುಣಿಸುವ ಬಗೆಯನ್ನು ನಾವು ಅನುಸರಿಸುತ್ತಿದ್ದೇವೆ. ನಮ್ಮ ಟೊಮೇಟೊ ತಿಂಗಳವರೆಗೆ ಕೆಡಲ್ಲ, ನಾವು ಬೆಳೆಯುವ ಆಲೂ ಉಪ್ಪು ನೀರನ್ನೂ ಕುಡಿಯಬಲ್ಲುದು. ನಮ್ಮ ಅರಿಗರು ಕಂಡುಹಿಡಿದಿರುವ ಹೊದಿಕೆಗಳು ಬೆಳೆಗಳನ್ನು ಬಹುಕಾಲ ಕೆಡದಂತೆ ಕಾಪಾಡಬಲ್ಲವು.

ಸಾವಯವದ ಸಾರವನ್ನ ಎಲ್ಲರೂ ಅರಿಯಬೇಕಿದೆ. ಸಾವಯವ ಸಾಗುವಳಿ ಎಂದರೇನು ಎಂದು ಗೊತ್ತಿಲ್ಲದ ಹೊತ್ತಿನಲ್ಲಿ ಅಂದರೆ ಸುಮಾರು 40 ವರುಶಗಳ ಕೆಳಗೆಯೇ ನಾವದನ್ನ ಪರಿಚಯಿಸಿದ್ದೆವು. ಹುಳುಗಳನ್ನು ಹುಳಗಳಿಂದಲೇ ಹೊಡೆದೋಡಿಸಬೇಕೆ ಹೊರತು ಕೇಡಳಿಕಗಳಿಂದಲ್ಲ (pesticides). ಪ್ರಕ್ರುತಿಯಲ್ಲಿ ಎಲ್ಲಾ ಹುಳುಗಳಿಗೂ ಅದರದೆಯಾದ ಹಗೆಗಾರರಿದ್ದಾರೆ. ನಾವು ಮಾಡಿದ್ದೂ ಅದನ್ನೆ. ನಾವಿಂದು ಬೆಳೆಗಳ ಹಾಳು ಮಾಡುವ ಹೆಗ್ಗಣಗಳನ್ನ ವಿಶದಿಂದ ಕೊಲ್ಲಲ್ಲ, ಬದಲಾಗಿ ಬರ‍್ನ್ ಎಂಬ ಬಗೆಯ ಗೂಬೆ ನಮಗಾಗಿ ಆ ಕೆಲಸ ಮಾಡುತ್ತೆ.

ಹಸಿರುಮನೆಯಲ್ಲಿ ಸಹಜ ಪರಾಗ ಸಾದ್ಯವಿಲ್ಲ. ಅದಕ್ಕಾಗಿ ನಾವು ಹಸಿರುಮನೆಯಲ್ಲಿ ಹೆಜ್ಜೇನುಗಳನ್ನೂ ಸಾಕಿದ್ದು ಗೆಲುವಿನ ಪ್ರಯೋಗವಾಯ್ತು. ಇದೇ ರೀತಿಯ ಪ್ರಯೋಗಗಳಿಂದ ಅವಾರ ಕಣಿವೆಯಲ್ಲಿ ಹೆಚ್ಚಿನ ತರಕಾರಿ ಇಳುವರಿ ಸಾದ್ಯವಾಗಿದ್ದು. ಅಲ್ಲಿ ಬೆಳೆಯುವ 60% ತರಕಾರಿಗಳು ರಪ್ತಾಗುತ್ತದೆ. ಮೊದ ಮೊದಲು ನನಗೂ ಬೇಸಾಯಕ್ಕೆ ನೀರಿನ ಕೊರತೆ ತೊಂದರೆಯಾಗಿತ್ತು. ನಮ್ಮ ಕಿಬ್ಬುಟ್ಸ್ನಲ್ಲಿ ಯಾರೋ ನನಗೆ ಕಪ್ಪುನೀರನ್ನು ಬಳಸಿ ಆಲಿವ್ ಮರಗಳನ್ನ ಬೆಳೆಸಬಾರದೇಕೆ ಎಂದರು. ಅದಾದ 4 ವರುಶಗಳಲ್ಲಿ ನಾಡಿನಲ್ಲೇ ಅತಿಹೆಚ್ಚು ಆಲಿವ್ ಮರಗಳನ್ನು ನಾವು ಬೆಳೆಸಿದ್ದೇವೆ. ಇದರ ಜೊತೆಗೆ ಕಾಳುಮೆಣಸು, ವಿದವಿದ ಹೂವುಗಳನ್ನೂ ನಾವು ಬೆಳೆಸಿದ್ದೇವೆ. ಹೈನುಗಾರಿಕೆಯೂ ನಮ್ಮ ದೊಡ್ಡ ಕಸುಬಾಗಿದೆ.

ನಾವು ಮಾಡಲಾಗದ್ದನ್ನು ಮಾಡಿ ತೋರಿಸಿದ್ದೇವೆ. ನಮ್ಮ ಜೊತೆ ಯಾವುದೇ ನಂಟಿಲ್ಲದ ಜಗತ್ತಿನ ಮೂಲೆಮೂಲೆಯಲ್ಲೂ ನಮ್ಮ ಸಾಗುವಳಿ ಉತ್ಪನ್ನಗಳು, ನಮ್ಮ ಸಾಗುವಳಿ ಬಗೆಗಳು ಮಾರಾಟವಾಗುತ್ತೆ. ನಮ್ಮ ನಾಡಿನ ಎಲ್ಲಾ ಜ್ಯೂಯಿಶ್ಗಳನ್ನು ಹಿಡಿದಿಟ್ಟಿರುವುದು ಇದೇ ನೆಲ. ನಾವು ಹಸಿವಿಂದ ಹಸಿರಿನೆಡೆಗಿನ ಹಾದಿಯಲ್ಲಿ ಇನ್ನೂ ಬಹುದೂರ ಹೋಗಬೇಕಿದೆ.

ಯಾರಾದರು ಕೇಳಿದರೆ ನಿಮ್ಮಮುಂದಿನ ಗುರಿ ಏನು? ಅಂತ. ನಾನಂತೀನಿ, ನನಗೆ ಜಗತ್ತಿನ ಹಸಿವನ್ನ ನಿವಾರಿಸುವ ಕನಸಿದೆ ಅಂತ. ನೀವೇನಂತೀರಿ?

(ಮಾಹಿತಿ ಮತ್ತು ತಿಟ್ಟ ಸೆಲೆ: jewishvirtuallibrary.org, wikipedia.org, neot-semadar.com, wikepdia.org)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: