ಕತೆ: ನಶೆ

– ಪ್ರಶಾಂತ ಎಲೆಮನೆ.

Ganja, ಬಂಗಿ, ಗಾಂಜಾ

“ತಿಂಗಳ ಬೆಳಕಿನ ಇರುಳಿನಲೊಂದು
ಅಮ್ಮನು ಕೆಲಸದೊಳಿರುತಿರೆ ಕಂಡು
ಗೋಪಿಯು ಪುಟ್ಟುವು ಹೊರಗಡೆ ಬಂದು
ಬಾವಿಗೆ ಇಣುಕಿದರು”

ಅಂತ ಏರು ದನಿಯಲ್ಲಿ ಓದುತಿದ್ದ ಮಗನನ್ನ, “ಏಳ, ಆಡ್ಕ ಹೋಗ!” ಅಂತ ಓಡಿಸಿದ ಶಂಕರ. ಹೇಳಿದ್ದೇ ತಡ, ಕಾದಾಟದಲ್ಲಿ ಗೆದ್ದಂತೆ ಚಿಟ್ಟೆ (ಕಟ್ಟೆ)ಯಿಂದ ನೆಗೆದು ತೋಟದ ಕಡೆ ಓಡಿತ್ತು ಗಡ.

“ಅಯ್ಯೋ, ಹಿಡಿದು ಈಗಿನ್ನು ಓದಾಕೆ ಕೂರ‍್ಸಿದ್ದೆ, ಓಡಿಸಿದಾ! ಇವನ ವಾಲೆ ಕಳೀಕೆ” ಅಂತ ಒಳಗಿಂದ ಶಪಿಸಿದಳು ಹೆಂಡತಿ ಗೌರ. ಒಂದೆರಡು ದಿನದಿಂದ ಶಂಕರನ ಮನಸು ಸರಿ ಇಲ್ಲ. ಕಡ್ಡಿ ಪುಡಿ, ಬೀಡಿಯೇ ಅವನ ಆಹಾರ. ಕೆಲಸದ ಕಡೆ ತಲೆ ಹಾಕಿಲ್ಲ. ಗಂಟೆಗೊಮ್ಮೆ ಕಾಪಿ, ದಿನಕ್ಕೆರಡು ಬಾರಿ ಮೇಲಿನ ಊರಿಗೆ ಸವಾರಿ ಇವಿಶ್ಟೇ ಅವನ ದಿನಚರಿ.

ಶಂಕರ ಗಟ್ಟಿಮುಟ್ಟು ಆಳು. ಊರಲ್ಲಿ ಅವನು ಮಾಡದ ಕೆಲಸವಿಲ್ಲ. ಮರಗೆಲಸ, ಗದ್ದೆ ಕೆಲಸ, ಗಾರೆಕೆಲಸ ಎಲ್ಲದಕ್ಕೂ ಸೈ. ಊರವರಿಗೆಲ್ಲ ಶಂಕರ ನೋಡದ ಊರಿಲ್ಲ, ಮಾಡದ ಕೆಲಸವಿಲ್ಲ ಅನ್ನೋದೊಂದು ಕಯಾಲಿ. ಹುಟ್ಟಿದ್ದು ಗಟ್ಟದ ಕೆಳಗೆ, ಅಲೆದಿದ್ದು ಬಯಲ ಸೀಮೆ, ಸದ್ಯಕ್ಕೆ ಗಟ್ಟದ ಮೇಲೆ.

ಇಶ್ಟಕ್ಕೂ ಶಂಕರನ ಸಂಕಟಕ್ಕೆ ಕಾರಣ ಊರ ಅಮಲಯ್ಯ ಮತ್ತವನ ಬಂಗಿ (ಗಾಂಜಾ). ಎರಡು ದಿನದ ಹಿಂದೆ ಕೊಟ್ಟಿಗೆಯಲ್ಲಿ ಸಗಣಿ ಬಾಚುತ್ತಿದ್ದಾಗ ಅಮಲಯ್ಯನ ಯಾರೋ ಕರೆದರಂತೆ. ನೋಡಿದರೆ ಇವನ ಆಪ್ತ ಬದ್ರಾವತಿಯ ಸೀನ. ಜೀಪಲ್ಲಿ ಬಂದಿದ್ದ ಸೀನ ಏನೊ ಸನ್ನೆ ಮಾಡಿದನಂತೆ. ಅದನ್ನ ಅರಿತ ಅಮಲಯ್ಯ ದುಡ್ಡು ಹಿಡಿದು ಅವನ ಹತ್ತಿರ ಹೋಗಿ ಅವನಿಂದೇನೋ ಈಸ್ಕೊಂಡ. ಅಲ್ಲೇ ಮಾರುವೇಶದಲ್ಲಿ ಜೀಪಲ್ಲಿ ಹೊಂಚು ಹಾಕಿದ್ದ ಪೊಲೀಸಿನೋರು ಅಮಲಯ್ಯನ ಎಳೆದು ಜೀಪಿಗೆ ತುಂಬಿಕೊಂಡು ಹೋದರಂತೆ. ಪೊಲೀಸಿನವರು ಅಮಲಯ್ಯನ ಹಿಡಿಯೋಕೆ ಸೀನನ್ನ ಬಳಸಿದ್ರು. ಆದರೆ ಸಮಸ್ಯೆ ಇದಲ್ಲ, ಊರಲೆಲ್ಲಾ ಸುದ್ದಿ ಹಬ್ಬಿದ ಮೇಲೆ ಶಂಕರ ಅಮಲಯ್ಯನ ಮನೆಕಡೆ ದೌಡಾಯಿಸಿದ್ದ. ಅಲ್ಲಿ ಊರಿನವರ ಗುಸು ಗುಸು ನಡುವೆಯೆ ಊರ ಮುಕಂಡ ರಾಮಯ್ಯ ಗುಟ್ಟಾಗಿ ಶಂಕರನ ಹತ್ತಿರ ಬಂದು,

‘ಪೊಲೀಸಿನೋರು ಮತ್ತೊಂದು ಸುತ್ತು ಬರ‌್ತಾರಂತೆ, ಆಗ ಗಾಂಜಾ ನಶೆ ಮಾಡವರನ್ನೂ ಎಳಕಂಡು ಹೋಗ್ತಾರಂತೆ’ ಅಂದಿದ್ದು.

ಒಂದು ವರುಶದ ಹಿಂದೆ ಶಂಕರನಿಗೆ ಬಂಗಿಯ ರುಚಿ ಹತ್ತಿಸಿದ್ದು ಇದೇ ಅಮಲಯ್ಯ. ಇವನಿಗೆ ದೂರದ ಬದ್ರಾವತಿಯ ಸೀನ ಅಗತ್ಯ ಗಾಂಜಾ ಸರಬರಾಜುದಾರ. ಬಂದವರಿಗೆಲ್ಲ ಮಾರೋನಲ್ಲ ಅಮಲಯ್ಯ, ಅದು ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಶಂಕರ ಅಮಲಯ್ಯನ ಬಂಟ, ಹಾಗಾಗಿ ಬೆಳೆದದ್ದು ಗಾಂಜಾ ನಂಟು. ಈಗ ಸೀನ, ಅಮಲಯ್ಯ ಇಬ್ಬರೂ ಪೊಲೀಸರ ಅತಿತಿಗಳು. ಪೊಲೀಸಿನೋರು ಅವರನ್ನ ಕರಕೊಂಡು ಎಲ್ಲಿಗೆ ಹೋದರು ಅನ್ನೊ ಸುಳಿವು ಯಾರಿಗೂ ಇಲ್ಲ. ಊರಲೆಲ್ಲಾ ಕುಂದಾಪುರ, ಉಡುಪಿ, ಮಂಗಳೂರು, ಬೆಂಗಳೂರು ಅಂತ ಗುಸು ಗುಸು. ಇನ್ನು 2 ದಿನದಿಂದ ಸರಿಯಾಗಿ ನಿದ್ದೆ ಮಾಡದ ಶಂಕರನಿಗೆ ರಾಮಯ್ಯನ ಮಾತು ನಿಜವಾಗಿಬಿಟ್ಟರೆ ಅಂತ ಚಿಂತೆ.  Police, arrest, ಪೊಲೀಸ್, ಬಂದನ

ಒಂದು ಕಡೆ ಗಾಂಜಾದ ನಶೆ ಇಲ್ಲದೆ ತಲೆ ಒಳಗೆಲ್ಲ ಗೊಯ್ ಅಂತ ಏನೋ ಸದ್ದು. ಇನ್ನೊಂದೆಡೆ ನಿಂತರೂ, ಕುಂತರೂ ಪೊಲೀಸಿನೋರು. ಶಂಕರನ ತಲೆಯ ಯಾವುದೋ ಒಂದು ಮೂಲೆ ಪೊಲೀಸ್ ಸ್ಟೇಶನ್ನೇ ಆಗಿಬಿಟ್ಟಿದೆ ಅಂತ ಚಿಂತೆ ಅವನಿಗೆ. ಕಣ್ಣು ಮುಚ್ಚಿದರೆ ಬೂಟು, ಲಾಟಿ ಸದ್ದು. ರಾತ್ರಿ ಕತ್ತಲಲ್ಲಿ ತಿರುಗೋದಕ್ಕೆ ಬೂತ, ಪಿಶಾಚಿ ಅಂತ ಹೆದರೊ ಶಂಕರ ಈಗ ಮನೆಯಿಂದ ಹೊರಗೆ ಬೀಳೋದು ರಾತ್ರಿ ಮೇಲೆಯೇ! ಕೆಲಸದ ಮೇಲೆ ಹೋಗ್ತೀನಿ ಅಂತ ಹಗಲು ಹೋದರೂ ಅಶ್ಚು ದೂರ ಹೋಗಿ ತಿರುಗಿ ಬಂದರೂ ಬಂದ. ರಸ್ತೆಯ ಮೇಲೆಲ್ಲಾರು ಜೀಪು ಬಂದುಬಿಟ್ಟರೂ ಪೊಲೀಸಿನವರೇನಾರು ಬಂದು ಬಿಟ್ರಾ ಅಂತ ಗುಮಾನಿ ಶಂಕರನಿಗೆ.

ಮೂರೇ ದಿನದಲ್ಲಿ ಅಮಲಯ್ಯನ ಕರ‌್ಕೊಂಡ್ಬರ‌್ತಿನಿ ಅಂತ ಅವಾಜ್ ಹಾಕಿದ್ದ ಕೆಳಗಿನ ಮನೆಯ ಮಹಾಬಲ ಮೂವತ್ತು ದಿನವಾದರೂ ಪತ್ತೆಯಿಲ್ಲ. ಮೊದಲೆಲ್ಲ ‘ನಶೆ ಇನ್ನ್ ಬಿಡತ್ತ್ ಕಾಣಿ’ ಅಂತಿದ್ದ ಗೌರ, ಗಂಡನ ಅವಸ್ತೆ ನೋಡಿ ಹೇಳೋ ಅಶ್ಚು ಹೇಳಿ ಸುಸ್ತಾಗಿ ಕೊಲ್ಲೂರ ಮೂಕಾಂಬಿಕೆ, ಮಾರಣಕಟ್ಟೆ, ಕುಕ್ಕೆ ಸುಬ್ರಮಣ್ಯ ಸುತ್ತಾಡಿ, ಹರಕೆ ಹೊತ್ತು ಬಂದರೂ ಶಂಕರ ಆರು ಬಿಟ್ಟು ಮೂರಕ್ಕೂ ಏರಿಲ್ಲ. ಶಂಕರ ಸಿಟ್ಟಿನ ಜನ, ಸಿಟ್ಟು ಬಂದರೆ ಹೆಂಡತಿ ಬಗ್ಗಿಸಿ ಬೆನ್ನಿಗೆ ಗುದ್ದುವವನೆ. ಆದರೆ ಈಗ ಗುದ್ದು ಇಲ್ಲ, ಮುದ್ದು ಇಲ್ಲ ಅನ್ನೊ ಸ್ತಿತಿ ಗೌರಳದ್ದು. ಮೇಲಿನ ಮನೆಯ ರಾಮ್ ಬಟ್ಟರತ್ರನೂ ಹೇಳಿಸಿ ನೋಡಬೇಕು ಅಂತ ಕಳಿಸೋದೇನೊ ಕಳಿಸಿದಳು, ಆದರೆ ಎಲೆ ಕವಳ ಜಗೀತ ರಾಮ್ ಬಟ್ರು ಹೇಳಿದ ಹರಿ ಕತೆ ಶಂಕರನ ಮಂಡೆಗೆ ಹೋಯಿತೊ ಇಲ್ಲವೊ ದೇವರೇ ಬಲ್ಲ.

ಸಣ್ಣ ಜಿನುಗೋ ಮಳೆಯಲ್ಲಿ ರಾಮ್ ಬಟ್ಟರ ತೋಟದ ಪೇರಲೆ ತಿಂದು, ಮನೆ ಎದುರಿನ ತೋಟದಲ್ಲಿದ್ದ ಹಾವು ಹಿಡಿಯೋ ಸಾಹಸಕ್ಕೆ ಕೈ ಹಾಕಿದ್ದ ಗಡ. ಹಾವು ಇನ್ನೇನು ಸಿಕ್ಕಿತು ಅನ್ನೋದರಲ್ಲಿ ಜಾರಿ ಮಾಯವಾಗಿತ್ತು. ಮನೆ ಕಡೆಗೆ ಹೋದರೆ, ಅಬ್ಬೆ ಏಟು ತಪ್ಪಿದ್ದಲ್ಲ. ಈಗಲೆ ಯಾಕೆ? ಸಂಜೆ ಮೇಲೆ ಹೋದರಾಯ್ತು ಅಂತ ರಾಮ್ ಬಟ್ಟರ ಮನೆ ಕಡೆ ಟಿವಿ ನೋಡೋಕೆ ಹೊಂಟ. ರಸ್ತೆ ಬದೀಲಿ ಹರೀತಿದ್ದ ಚರಂಟೆ (ಸಹಸ್ರಪದಿ)ಯನ್ನ ನೋಡಿ, ಮುಟ್ಟಿ ಅದು ಸುರುಳಿ ಸುತ್ತಿತೊ ಬೀಸಿ ಒಗೆದ. ಅದೇ ಸಮಯಕ್ಕೆ ಮಹಾಬಲನ ಕಾರು ಅಮಲಯ್ಯನ ಕೂರಿಸ್ಕೊಂಡು ದೂಳೆಬ್ಬಿಸುತ್ತ ಬುರ್ ಅಂತ ಹೋಯ್ತು. ಅಮಲಯ್ಯ ಮನೆಗೆ ಬಂದ ಸುದ್ದಿ ಊರಲೆಲ್ಲಾ ಗಂಟೆಯೊಳಗೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಊರಿನವರೆಲ್ಲ ಒಬ್ಬೊಬ್ಬರಾಗಿ ಹೋಗಿ ಕುಶಲೋಪರಿ ಕೇಳಿದ್ದೂ ಕೇಳಿದ್ದೆ. ಅಮಲಯ್ಯನ ನೋಡಿ, ಪೊಲೀಸರ ಏಟಿಗೂ ಜಗ್ಗದ ಜಟ್ಟಿ ಅಂತೆಲ್ಲ ಒಳಗಿಂದೊಳಗೆ ಮೆಚ್ಚುಗೆ ಮಾತಾಡಿ ಬಂದಿದ್ದರು ಊರಿನವರು.

ಇತ್ತ ಗೌರಳಿಗೆ ಹಾಲು ಕುಡಿದಶ್ಚು ಸಂತಸ. ತನ್ನ ಗಂಡನ ಹುಚ್ಚು ಈಗಲಾದರೂ ಬಿಟ್ಟಿತೇನೊ ಅನ್ನೊ ದೂರದ ಆಸೆ. ಶಂಕರ ಅವತ್ತು ಹತ್ತು ಸುತ್ತು ಜಾಸ್ತಿಯೇ ಗಸ್ತು ಹೊಡೆದ. ಒಂದು ಕಡೆ ಮಾತಾಡ್ಸಿ ಬರುವುದಾ ಇಲ್ಲ ಬ್ಯಾಡವಾ ಅನ್ನೊ ಗೊಂದಲ. ಅಂತೂ ಅವತ್ತಿನ ಇಡೀ ದಿನ ರಸ್ತೆ ಬದೀಲಿ ಹೋದ ಮಂಜ, ಸೀನ, ಚಂದ್ರ, ಶಾರದೆ ಯಾರನ್ನೂ ಬಿಡದೆ ಕೇಳಿದ್ದ. ” ಬಂದಾರೆ, ಬೇಲ್ ಮೇಲೆ ಬಿಟ್ಟಾರಂತೆ!” ಅಂದರೆ ವಿನಾ ಮತ್ತೇನನ್ನೂ ಯಾರು ಹೇಳಲಿಲ್ಲ.

ಮರು ದಿನ ನೋಡಿಯೇ ಬಿಡೋಣ ಅಂತ ಸೊಂಟಕೊಂದು ಕೈಗತ್ತಿ ಸಿಕ್ಕಿಸಿಕೊಂಡು ನೇರ ಅಮಲಯ್ಯನ ಮನೆ ಕಡೆ ನೆಡೆದ .ಮನೆ ಮುಂದೆ ಯಾರೂ ಇರಲಿಲ್ಲ.

“ಅಮಲಯ್ಯ, ಅಮಲಯ್ಯ”  ಕರೆದ ಶಂಕರ

“ಯಾರು ಶಂಕರಾನಾ” ಅನ್ನುತ್ತಾ ಹೊರಬಂದ ಅಮಲಯ್ಯ.

“ಹೌದು ನಾನೆ, ಸುಮ್ನೆ ಕಾಂಬ ಹೇಳಿ ಬಂದೆ”.

“ನಿಂಗೊಂದು ಹೇಳಾದು ಬಾಕಿ ಇತ್ತು ನೋಡು” ಅನ್ನುತ್ತಾ ಮುಂದುವರಿಸಿ, “ನನಗೇನು, ಪೊಲೀಸಿನವರು ಕರ‌್ಕಂಡು ಹೋದಂಗೆನೆ ತಂದು ಬಿಟ್ರು, ಅವರತ್ರ ನನ್ನ ಒಂದು ಕೂದಲು ಮುಟ್ಟಾಕೆ ಅಯ್ಲಿಲ್ಲ” ಅಂತ ಏರು ದನಿಯಲ್ಲಿ ಅಂದ ಅಮಲಯ್ಯ.

“ಹೋ..ಹಂಗಾರೆ ಮತ್ ಬಪ್ಪುದಿಲ್ಯಾ ಪೊಲೀಸಿನೋರು?”. ಕುತೂಹಲದಿಂದ ಕೇಳಿದ ಶಂಕರ

“ಮತ್  ಈ ಕಡೆ ತಲೆ ಕೂಡ ಹಾಕಲ್ಲ. ಯಾರೋ ಊರಿನ ಕಳ್ ಬೋಳಿಮಕ್ಳು ಹೇಳಿಸಿ ಮಾಡಿಸಿರೋದು.ಎಲ್ಲರಿಗೂ ಬುದ್ದಿ ಕಳಿಸ್ತೀನಿ ನೋಡ್ತಿರು” ಅಂತ ಹಲ್ಲು ಕಚ್ಚಿ ಹೇಳಿದ ಅಮಲಯ್ಯ.

ಶಂಕರನ ಸಂತಸಕ್ಕೆ ಮೇಲೆ ಹಾರೋದೊಂದೆ ಬಾಕಿ. “ನಾ ಹಂಗಾರೆ ನಾಳೆಯಿಂದ ಏನಾರು ಕೆಲಸಕ್ಕೆ ಬತ್ತೆ” ಅಂತ ಪೀಟಿಕೆ ಹಾಕಿದ ಶಂಕರ.

“ಸರಿ ಬಾ, ನಾ ಇಲ್ಲದೆ ಒಂದೂ ಕೆಲಸ ಆಗಿಲ್ಲ”. ಅಂತ ತಲೆದೂಗಿದ ಅಮಲಯ್ಯ

“ಹಂಗೆ ಹೇಗೂ ನಾಳೆ ಬತ್ತೆ, ಒಂಚೂರು ಸೊಪ್ಪು ಇದ್ದರೆ ಕೊಡಿ ಕಾಂಬ ಈಗ. ತಲೆ ಚಿಟ್ ಹಿಡದು, ತಲೆ ಒಳಗೆಲ್ಲ ಗುಂಯ್ ಅಂತಿತ್ತು ಎಲ್ಲಾ ಈ ಪೋಲೀಸಿನವರ ಯಾಪಾರ ಕಾಣಿ” ಅಂದ ಶಂಕರ ಕೈ ಹಿಸುಕುತ್ತ.

ಒಳಗೆದ್ದು ಹೋದ ಅಮಲಯ್ಯ. ಒಂದು ನಿಮಿಶ ಬಿಟ್ಟು ಹೊರಬಂದ. ಬಲಗೈಯಲ್ಲಿ ಏನೋ ತಂದಂಗಿತ್ತು. ಬಿಟ್ಟ ಕಣ್ಣು ಬಿಟ್ಟ ಹಾಗೆ ಕಾಯ್ತಿದ್ದ ಶಂಕರ. ಬಂದವನೆ ಶಂಕರನ ಬಗ್ಗಿಸಿ ದುಬು ದುಬು ಅಂತ ಬೆನ್ನ ಮೇಲೆ ಗುದ್ದು ಹಾಕತೊಡಗಿದ.

“ಬೇಕಾ, ತಕೊ..ತಕೊ “ ಅಂತ ಅಟ್ಟಿಸಿ ಕೊಂಡು ಹತ್ತು ಗುದ್ದು ಹಾಕಿದ್ದ. ಎಲ್ಲಿತ್ತೋ ಆ ಆವೇಶ. ಸತ್ತೆ ನಾ ಸತ್ತೆ ಅಂತ ಅವರ ಮನೆ ತೋಟಕ್ಕೆ ಹಾರಿ ಒಂದೇ ಉಸಿರಿಗೆ ಓಡಿದ್ದ ಶಂಕರ.

ಬುಸು ಬುಸು ಉಸಿರು ಬಿಡುತ್ತ ಮನೆ ಕಡೆ ಬರುತಿದ್ದ ಗಂಡನ ಕೆಂಪೇರಿದ ಮುಕ ನೋಡಿದ ಗೌರ ಮುಸುರೆ ತಿಕ್ಕುತ್ತಲೆ ಏನೋ ಎಡವಟ್ಟಾಗಿದೆ ಅಂದುಕೊಂಡಳು. ಬೇಲಿ ದಾಟಿದವನೆ ಹೆಂಡತಿಯ ಬಗ್ಗಿಸಿ ಮುಶ್ಟಿಯಲ್ಲಿ ಎರಡು ಗುದ್ದು ಹಾಕಿ ಗುಡಿಸಲಿಗೆ ನುಗ್ಗಿದ. ಅಯ್ಯಯ್ಯೋ..ಅಂತ ಕೂಗಿ ಗೌರ ಸಾವರಿಸಿ ಕೊಳ್ಳೋದರಲ್ಲಿ ಗಂಡ ಮಾಯ. ಅದೇ ಸಮಯಕ್ಕೆ ಸರಿಯಾಗಿ ಗದ್ದೆ, ಕೆರೆ ಅಂತ ಕೆಸರೆರೆಚಿಕೊಂಡು ಬಂದಿದ್ದ ಗಡನನ್ನು ನೋಡಿ ಕೆದರಿದ ಗೌರ, “ಸಾಯುಕೆ, ನಾಯಿ ಓದುಕೆ ಏನ ದಾಡಿ” ಅಂತ ಮಗನ ಕಿವಿ ಹಿಂಡಿ, ಕುಂಡೆ ಮೇಲೆ ರಪ್ ರಪ್ ಅಂತ ಎರಡು ಬಿಗಿದಳು. ನಾ ಸತ್ತೆ ಅಂತ ಒಂದೇ ಕುಪ್ಪಳಕ್ಕೆ ಮನೆಯ ಕಟ್ಟೆ ಮೇಲೇರಿದ ಗಡ, ಅಲ್ಲಿದ್ದ ಪುಸ್ತಕದ ಹಾಳೆ ತಿರುಗಿಸಿ ಏರು ದನಿಯಲ್ಲಿ ಶುರುವಿಟ್ಟ,

“ಚಂದ್ರನ ಮೇಲಕೆ ಏರಿಸಿ ಬಿಟ್ಟೆ
ನಮ್ಮಯ ದೇವರ ಬದುಕಿಸಿ ಕೊಟ್ಟೆ
ಅಮ್ಮಗೆ ಗೊತ್ತಾದರೆ ನಾಕೆಟ್ಟೆ
ಎಂದೋಡಿದ ಪುಟ್ಟು”

( ಚಿತ್ರ ಸೆಲೆ: phoenixrisingbehavioral.comvijaykarnataka.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: