ಟಾಗೋರರ “ಗೀತಾಂಜಲಿ”ಯ ಮುತ್ತುಗಳು

– ಅಮರ್.ಬಿ.ಕಾರಂತ್.

tagores-gitanjali-1-728

 

ರವೀಂದ್ರನಾತ ಟಾಗೋರ್ ಅವರ “ಗೀತಾಂಜಲಿ” – 02

” ನೀಯೆನ್ನ ಹಾಡಲು ಸೆಲವಿಕ್ಕಿದಂತೆ ಎನ್ನೆದೆಯು ಹೆಮ್ಮೆಯಿಂದೊಡೆದು ನಾ ನಿನ್ನ ಮೊಗವ ನೋಡಲು ಕಣ್ತುಂಬಿ ಬರುವುದು. ಆಗ ಎನ್ಬಾಳ ಎಲ್ಲಾ ಪಪ್ಪರಿಕೆಗಳು, ಹೊಂದದಿಕೆಗಳು ಸವಿಯೊಗತನಕ್ಕೆ ಕರಗಿ, ನಿನ್ಮೇಲಿನ ಮೆಚ್ಚುಗೆಯು ಕಡಲಾಚೆಗೆ ಹಾರುತಿಹ ಸೊಮ್ಮಿದ ಬಾನಾಡಿಯ ಗರಿಗಳಂತೆ ಬಿಚ್ವುವುದು.

ನೀ ಎನ್ನ ಹಾಡಿನಲ್ಲಿ ನಲಿವನುಣುತಿರುವುದನರಿತಿರುವೆ. ನಿನ್ನೆದುರು ನಾ ಬರೀ ಹಾಡುಗನಾಗಶ್ಟೇ ಬಂದಿರುವೆನೆಂದರಿತಿರುವೆ. ಆದರೆ, ಸೇರಲಾಗದೆಂದೇ ಎಣಿಸಿದ್ದ ನಿನ್ನ ಕಾಲ್ಗಳನ್ನು, ನನ್ನ ಹಾಡಿನ ಕಳಿಬಿಚ್ಚಿದ ರೆಕ್ಕೆಯ ತುದಿಯಿಂದಲೇ ಸೋಂಕಿರುವೆನು. ಹಾಡಿನ ಅಮಲಿನ ಕುಡಿತದಲ್ಲಿ ನನ್ನನ್ನು ನಾನೇ ಮರೆತಿರುವೆನು.

ಓ ಎನ್ನೊಡೆಯನೇ, ಈಗ ನೀ ಎನ್ನ ಗೆಳೆಯನೆಂದೇ ತಿಳಿದಿಹೆನು ”

ರವೀಂದ್ರನಾತ ಟಾಗೋರ್ ಅವರ “ಗೀತಾಂಜಲಿ” – 11

” ಈ ನಿನ್ನ ಮೊರೆಯಿರಿಕೆ, ಹಾಡಿಕೆ, ಮಣಿಯೆಣಿಕೆಯನ್ನು ಬಿಡು. ಎಲ್ಲಾ ಬಾಗಿಲುಗಳನ್ನು ಮುಚ್ಚಿ, ಈ ಗುಡಿಯ ಕತ್ತಲೆಡೆಯಲ್ಲಿ ಅದಾರನ್ನು ಕೊಂಡಾಡುವೆ? ಒಮ್ಮೆ ಕಣ್ದೆರೆದು ನೋಡು, ಬರ‍್ದಿಲನು ನಿನ್ನೆದುರಿಗಿರುವನೇ?

ಗಟ್ಟಿನೆಲವನುತ್ತಿ ಬೆಳೆಯಿಳಿಸುವ ಉಳುಮೆಗಾರನ ಬಳಿ ನಿಂದಿರುವನಾ ನಿಳಿಂಬ. ಬಂಡೆಗಳನೊಡೆದು ದಾರಿಕೊರೆವವನ ಬಳಿ ನಿಂದಿರುವನಾ ದಾಟುಗ. ಸುಡುವ ಬಿಸಿಲಲ್ಲೂ, ಸುರಿವ ಮಳೆಯಲ್ಲೂ ಅವರೊಂದಿಗಿರುವ ಇವನ ಅರಿವೆಯೆಲ್ಲವೂ ದುಂಬಿನಿಂದ ಮುಸುಕಿದೆ! ಹಾಗಾಗಿ, ಒಡನೆಯೇ ನೋಂಪಿಯ ಹೊಣೆಯನ್ನು ಬಿಸುಟು, ಆ ಪೆರುಮಾಳನಂತೆ ಹುಡಿನೆಲದೆಡೆಗೆ ಬಾ.

ಬಿಡುಗಡೆ? ಈ ಬಿಡುಗಡೆ ಎಲ್ಲಿ ದೊರೆತೀತು? ಆ ಉಸಿರೊಡೆಯನೇ ನಲಿವಿನಿಂದ ಹುಟ್ಟಿಕೆಯ ನಂಟನ್ನು ಹೆಣೆದಿರುವಾಗ, ಹೊಣೆಹೊತ್ತಿರುವಾಗ, ನಮಗಿನ್ನೆಲ್ಲಿಯ ಬಿಡುಗಡೆ? ಅವನ ನಮ್ಮ ಪತ್ತುಗೆಯು ಮುಗಿಯದಂತದ್ದು. ಹಾಗಾಗಿ, ಪೊಳ್ಳು ತನ್ಹೊಂದಿಕೆಯನ್ನು, ನೋಂಪಿನ ಹೂವ್ಗಳನ್ನು, ಕಂಪುಹೊಗೆಯ ಮುತ್ತಿಗೆಯನ್ನು ತೊರೆದು ಬಾ. ನಿನ್ನ ತೊಡುಗೆಯು ಹರಿಯಲು, ಕಲೆಯಾಗಲು ನಿನಗಾವ ಕೆಡುಕು?

ಬಾ, ಆ ಹಿರಿಯಳವಿಗನನ್ನು ಕದೆ. ನಿನ್ನ ದುಡಿಮೆಯ ಹುಬ್ಬಂಚಿನ ಬೆವರಲ್ಲಿಯೂ ಅವನೊಡನೆ ಇರು ”

ರವೀಂದ್ರನಾತ ಟಾಗೋರ್ ಅವರ “ಗೀತಾಂಜಲಿ” – 24

” ಹಗಲು ಕರಗಿದೊಡೆ, ಬಾನಾಡಿಗಳ ಹಾಡು ಮಾಂದೊಡೆ, ನಿಡಿಸುಯ್ದು ದಣಿದು ಗಾಳಿ ನಿಂತೊಡೆ, ಕಗ್ಗತ್ತಲ ಮುಸುಕಿನಿಂದ ನನ್ನನ್ನು ಹೊದಿಸು. ಬೆಳಕು ಸರಿಯಲು, ನೀ ಈ ನೆಲವನ್ನು ಒರಗಿನ ಗುಬರಿನಿಂದ ಸುತ್ತಿಡುವ ಬಗೆ ಇದೇ ಅಲ್ಲವೇ? ಬಯ್ಗು ಮೂಡಲು, ಆ ಜೋಲಿದ ತಾವರೆಯ ಎಸಳುಗಳನ್ನು ನವುರಾಗಿ ಮಡಚಿಡುವ ಪರಿ ಇದೇ ಅಲ್ಲವೇ?

ಹಾದಿಗನ ನಡೆಪಾಡು ಮುಗಿಯುವ ಮುನ್ನವೇ ಇವನ ಒದಗಣೆಯೆಲ್ಲಾ ಬರಿದಾದಲ್ಲಿ, ಇವನುಟ್ಟ ಉಡುಗೆಯೆಲ್ಲವೂ ಹರಿದು ಕೊಳೆಯಾದಲ್ಲಿ, ಇವನ ಕಸುವೆಲ್ಲವೂ ಇಳಿದು ಈತ ಬಳಲಿದಲ್ಲಿ, ಕತ್ತಲಿನ ಕೊಡುಗಯ್ಯಿಂದ ನೀ ಆ ತಾವರೆಯನ್ನು ಮುಸುಕಿ ದಣಿವಾರಿಸಿದಂತೆ, ಬಾನಿಗಿರುಳೊಡ್ಡಿ ಈ ಹಾದಿಗನ ನಾಚಿಕೆಯನ್ನು, ಬಡತನವನ್ನು ಮರೆಸು. ಇವನಲ್ಲಿ ಹೊಸ ಹುರುಪನ್ನು ತುಂಬಿಸು ”

ರವೀಂದ್ರನಾತ ಟಾಗೋರ್ ಅವರ “ಗೀತಾಂಜಲಿ” – 29

” ನನ್ನ ಬರಿ ಹೆಸರಿನಿಂದಶ್ಟೇ ಗುರುತಿಸಿಕೊಂಡಿರುವ ಈ ಆಳು (ಅಂದರೆ, ನಾನು), ನೆಲಮಾಳಿಗೆಯ ಕತ್ತಲಲ್ಲಿ ಮರುಗುತ್ತಾ ಕುಳಿತಿದ್ದಾನೆ. ಮರುಗುವ ಈತನನ್ನು ನಾನು ಕಡೆಗಣಿಸಿ, ನನ್ನ ಸುತ್ತಲೂ ದೊಡ್ಡ ಗೋಡೆಯೊಂದನ್ನು ಕಟ್ಟುವುದರಲ್ಲಿ ಮುಳುಗಿರುವೆನಲ್ಲ! ಈ ಗೋಡೆಯು ನಾಳ್ನಾಳೂ ಬೆಳೆಯುತ್ತಾ, ಏರುತ್ತಾ ಸಾಗುತ್ತದೆ. ಇದು ಬೆಳೆದಂತೆ, ಇದರ ನೆರಳು ಹರಡಿದಂತೆ, ನನ್ನ ನಿಜಮೆಯು ಈ ನೆರಳಲ್ಲೇ ಕಣ್ಮರೆಯಾಗುತ್ತದೆ.

ಆದರೂ, ನಾನು ಈ ಗೋಡೆಯ ಕಂಡು ಹಿರಿಹಿರಿ ಹಿಗ್ಗುತ್ತೇನೆ. ಕುಳಿಯೊಂದೂ ಕಾಣಿಸದಂತೆ ಮಣ್ಣು, ದುಂಬುಗಳಿಂದ ಗೋಡೆಗೆ ಉಪ್ಪಾರ ಮಾಡುತ್ತೇನೆ. ಇಶ್ಟೆಲ್ಲಾ ಕಾಳಜಿಯನ್ನು ತೋರುತ್ತಲೇ, ಇದರ ದೊರೆತದಿಂದಲೇ, ನನ್ನ ನಿಜಮೆಯನ್ನೇ ಮರೆಯುತ್ತೇನೆ; ಈ ಗೋಡೆಯ ಕಗ್ಗತ್ತಲಲ್ಲಿ ”

ರವೀಂದ್ರನಾತ ಟಾಗೋರರ “ಗೀತಾಂಜಲಿ” – 35

” ಎಲ್ಲಿ ಬಗೆಯು ಅಳುಕದೆ, ಅಂಜದೆ ತಲೆಯೆತ್ತಿ ನಿಂತಿರುವುದೋ;
ಎಲ್ಲಿ ಅರಿವಿಗೆ ಅಂಕೆಯಿರದೋ;
ಎಲ್ಲಿ ಕಿರುಯೆಡೆಗಳ ಕಿರುಬಗೆಗಳ ಹುಸಿಗೋಡೆಗಳಿಂದ (ಅವುಗಳು ನೀರೆರೆವ ಬೇರ‍್ಮೆಗಳಿಂದ) ಹಿರಿನೆಲವು ಚೂರಾಗದೆ, ಒಂದಾಗಿ ಉಳಿದಿರುವುದೋ;
ಎಲ್ಲಿ ನಿಜದ ಆಳದಿಂದಶ್ಟೇ ಪದಗಳು, ಮಾತುಗಳು ಉಕ್ಕಿ ಬರುವುದೋ;
ಎಲ್ಲಿ ದಣಿವಿಲ್ಲದ ಗೆಯ್ಮೆಯೆಲ್ಲವೂ ಬದ್ದಿನೆಡೆಗೆ ಕಯ್ಯೊಡ್ಡುವುದೋ;
ಎಲ್ಲಿ ಅರಿವಿನ ತಿಳಿತೊರೆಯು, ಹಳೆಯ ಸತ್ತ ಚಟಗಳ ಕಳೆಗೆಟ್ಟ ಮರಳುಗಾಡನ್ನು ಸೇರದೆ (ಹುರುಳಿಲ್ಲದ ನಂಬಿಕೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ) ಹರಿವುದೋ;
ಎಲ್ಲಿ ನೀ ದಾರಿತೋರಿದಂತೆ ನನ್ನ ಬಗೆಯು, ಎಂದೂ ಕುಗ್ಗದ, ಕೊನೆಯಿಲ್ಲದ ಎಣಿಕೆ ಮತ್ತು ಗೆಯ್ತದೆಡೆಗೆ ಮುನ್ನುಗ್ಗುವುದೋ;
ಅಲ್ಲಿ, ಈ ಎಲ್ಲಾ ಬಿಡುತೆಗಳಿಂದ ತುಂಬಿರುವ ಮೇಲ್ನೆಲದಲ್ಲಿ, ನನ್ನ ನಾಡು ಎಚ್ಚೆತ್ತುಕೊಳ್ಳಲಿ ಎಂದು ಬಯಸುತ್ತೇನೆ. ಅಂತೆಯೇ ಹರಸು ನನ್ನ ತಂದೆಯೇ ”

( ಮಾಹಿತಿ ಸೆಲೆ : sacred-texts.com )

(ತಿಟ್ಟ ಸೆಲೆ: slideshare.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: