ಆಣೆಪ್ರಮಾಣದ ಬಗೆಗಳು ಹಾಗು ಬಳಕೆಯ ಸನ್ನಿವೇಶಗಳು

– ಸಿ.ಪಿ.ನಾಗರಾಜ.

DSC_0046

(ಆಣೆಪ್ರಮಾಣ – ಮೂರನೆಯ ಕಂತು)
(ಕಂತು 1, ಕಂತು 2)

ಪ್ರಮಾಣದ ಬಗೆಗಳು:

ಇಬ್ಬರ ನಡುವಣ ನಂಟಿನಲ್ಲಿ ಬಿರುಕು ಇಲ್ಲವೇ ವ್ಯವಹಾರದಲ್ಲಿ ತೊಡಕು ಉಂಟಾಗಿ ಮಾತಿನ ಜಟಾಪಟಿ ನಡೆದು, ತೊಡಕು ಬಗೆಹರಿಯದಿದ್ದಾಗ, ಪ್ರಮಾಣ ಮಾಡುವ ಆಚರಣೆಯು ನಡೆಯುತ್ತದೆ. ಒಬ್ಬನು ತಪ್ಪನ್ನು ಹೊರಿಸುತ್ತಿದ್ದು, ತಪ್ಪಿಗೆ ಗುರಿಯಾದವನು ಅದನ್ನು ಅಲ್ಲಗಳೆಯುತ್ತಿರುವಾಗ, ಇಬ್ಬರ ಮಾತುಗಳಿಗೂ ಯಾವುದೇ ರೀತಿಯ ಪುರಾವೆ ಇಲ್ಲದಿದ್ದರೆ, ಕಟ್ಟಕಡೆಯದಾಗಿ ತಪ್ಪಿಗೆ ಗುರಿಯಾದವನ ಪಾಲಿಗೆ ಪ್ರಮಾಣ ಮಾಡಲೇಬೇಕಾದ ಸನ್ನಿವೇಶ ಒದಗಿಬರುತ್ತದೆ. ಒಮ್ಮೊಮ್ಮೆ ತಪ್ಪಿಗೆ ಗುರಿಯಾದವನು ತಾನಾಗಿಯೇ ಪ್ರಮಾಣ ಮಾಡುವುದಕ್ಕೆ ತವಕಿಸುತ್ತಾನೆ. ಮತ್ತೆ ಕೆಲವೊಂದು ಸನ್ನಿವೇಶದಲ್ಲಿ ತಪ್ಪನ್ನು ಹೊರಿಸಿದವನು ಪ್ರಮಾಣ ಮಾಡುವಂತೆ ಒತ್ತಡ ಹೇರುತ್ತಾನೆ. ಪ್ರಮಾಣ ಮಾಡುವ ಆಚರಣೆಯು ನಡೆಯತೊಡಗಿದಾಗ, ಜಗಳದಲ್ಲಿ ನೇರವಾಗಿ ತೊಡಗಿದವರಲ್ಲದೇ, ಕೆಲವೊಮ್ಮೆ ಇತರರು ಇರುತ್ತಾರೆ. ವ್ಯಕ್ತಿಯು ದೊಡ್ಡದಾದ ತಪ್ಪಿಗೆ ಗುರಿಯಾದ ಪ್ರಸಂಗದಲ್ಲಿ ಊರಿನ ಜನರ ಮುಂದೆ ಗುಡಿ/ಚಾವಡಿಯ ಅಂಗಳದಲ್ಲಿ ಊರಿನ ಹಿರಿಯರು ಇಲ್ಲವೇ ಆಯಾಯ ಜಾತಿ/ಪಂಗಡ/ಕುಲದ ತಲೆಯಾಳುಗಳಿಂದ ವಿಚಾರಣೆ ನಡೆದು, ತೊಡಕು ಬಗೆಹರಿಯದಿದ್ದಾಗ, ಅಲ್ಲಿ ನೆರೆದವರೆಲ್ಲರ ಮುಂದೆ ಪ್ರಮಾಣ ಮಾಡುವಂತೆ ಆರೋಪಿಗೆ ಪಂಚಾಯ್ತಿದಾರರು ಅಪ್ಪಣೆಮಾಡುತ್ತಾರೆ. ಪ್ರಮಾಣ ಮಾಡುವ ರೀತಿ ಇಂತಹುದೇ ಆಗಿರಬೇಕು ಎಂಬುದನ್ನು ಹಿರಿಯರು ತೀರ‍್ಮಾನಿಸುತ್ತಾರೆ. ಕೆಲವೊಮ್ಮೆ ತಪ್ಪಿಗೆ ಗುರಿಯಾದವನ ಇಲ್ಲವೇ ತಪ್ಪನ್ನು ಹೊರಿಸಿದವನ ಆಯ್ಕೆಗೂ ಬಿಡಲಾಗುತ್ತದೆ.

ಪ್ರಮಾಣ ಮಾಡುವ ಆಚರಣೆಗಳು ಆಯಾಯ ಮಾತಿನ ಸಮುದಾಯದ ಸಾಮಾಜಿಕ, ಸಾಂಸ್ಕ್ರುತಿಕ ಜೀವನದಲ್ಲಿ ದೊಡ್ಡವರೆಂದು ತಿಳಿದಿರುವ ವ್ಯಕ್ತಿಗಳನ್ನು, ಪವಿತ್ರವೆಂದು ಪರಿಗಣಿಸಿರುವ ವಸ್ತುಗಳನ್ನು ಮತ್ತು ಪ್ರಾಣಿಗಳನ್ನು, ನಂಬಿರುವ ಹಾಗೂ ಪೂಜಿಸುತ್ತಿರುವ ದೇವರನ್ನು ಒಳಗೊಂಡಿರುತ್ತವೆ. ಕನ್ನಡ ಮಾತಿನ ಸಮುದಾಯದಲ್ಲಿ ಈ ಕೆಳಕಂಡ ಆಚರಣೆಗಳು ಕಂಡು ಬರುತ್ತವೆ. ತಪ್ಪಿಗೆ ಗುರಿಯಾದವರು ಪ್ರಮಾಣವನ್ನು ಮಾಡುವಾಗ ನಾನಾ ಬಗೆಯ ಎಸಕಗಳಲ್ಲಿ ತೊಡಗುತ್ತಾರೆ. ತಮ್ಮ ಮಕ್ಕಳ ತಲೆಯ ಮೇಲೆ ಕೈಯಿಟ್ಟು/ತಮ್ಮ ಜೀವನದ ನೋವುನಲಿವುಗಳಲ್ಲಿ ಒಂದಾಗಿ ಮಿಡಿಯುವ ಹಾಗೂ ನೆರವಾಗುವ ಒಲವಿನ ನೆಂಟರಿಶ್ಟರ ಕೈಗಳನ್ನು ಹಿಡಿದುಕೊಂಡು/ಎಡೆಬಿಡದ ನಂಟು ಮತ್ತು ರುಣದ ಸಂಕೇತವಾದ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡು ಇಲ್ಲವೇ ಉಪ್ಪಿನ ಗುಡ್ಡೆಯ ಮೇಲೆ ನಿಂತು ಪ್ರಮಾಣ ಮಾಡುತ್ತಾರೆ. ಹಾಲನ್ನು/ಒಂದು ಹಿಡಿ ಮಣ್ಣನ್ನು/ನೀರನ್ನು/ಹೊತ್ತಿಗೆಯನ್ನು /ಹುತ್ತವನ್ನು/ತಮ್ಮ ಕಣ್ಣುಗಳನ್ನು/ಹಸುವಿನ ತಲೆ ಇಲ್ಲವೇ ಬಾಲವನ್ನು/ದೇವರ ಪಟ ಹಾಗೂ ವಿಗ್ರಹಗಳನ್ನು/ದೇಗುಲದ ಹೊಸ್ತಿಲನ್ನು/ಅರಳಿಮರ ಇಲ್ಲವೇ ತೆಂಗಿನಮರದ ಬುಡವನ್ನು ತಮ್ಮೆರಡು ಕೈಗಳಿಂದ ಮುಟ್ಟಿ ಪ್ರಮಾಣ ಮಾಡುತ್ತಾರೆ. ದೇವರನ್ನು ಪೂಜಿಸಿದ ತಟ್ಟೆಯಲ್ಲಿ ಉರಿಯುತ್ತಿರುವ ಇಲ್ಲವೇ ನೆಲದ ಮೇಲೆ ಹಚ್ಚಿಟ್ಟಿರುವ ಕರ‍್ಪೂರದ ಉರಿಯ ಮೇಲೆ ಹಾಗೂ ಬೆಳಗುತ್ತಿರುವ ದೀಪದ ಕುಡಿಯ ಮೇಲೆ ತಮ್ಮೆರಡು ಅಂಗಯ್‍ಗಳನ್ನಿಟ್ಟು ಪ್ರಮಾಣ ಮಾಡುತ್ತಾರೆ. ಅಡಕೆಯ ಚೂರುಗಳನ್ನಿಟ್ಟಿರುವ ವಿಳ್ಳೇದೆಲೆಗಳನ್ನು ಕೈಯಲ್ಲಿ ತೆಗೆದುಕೊಂಡು ಅವನ್ನು ತಮ್ಮ ಕಣ್ಣುಗಳಿಗೆ ಒತ್ತಿಕೊಳ್ಳುತ್ತ ಪ್ರಮಾಣ ಮಾಡುತ್ತಾರೆ. ಹೆಂಗಸರು ತಮ್ಮ ಕೊರಳಲ್ಲಿರುವ ತಾಳಿಯನ್ನು ಮುಟ್ಟಿಕೊಳ್ಳುತ್ತ ಪ್ರಮಾಣ ಮಾಡುತ್ತಾರೆ.

ಆಣೆ ಪ್ರಮಾಣಗಳ ಬಳಕೆಯ ಸನ್ನಿವೇಶಗಳಲ್ಲಿ ಕಂಡು ಬರುವ ಸಾಮಾಜಿಕ ಸಂಗತಿಗಳು:

ವ್ಯಕ್ತಿಗಳು ಆಡುವ ಮಾತುಗಳಿಗೆ ಬೆಲೆ ಬರಬೇಕಾದರೆ, ಅವರ ಸಾಮಾಜಿಕ ಅಂತಸ್ತು ತುಂಬಾ ದೊಡ್ಡ ಪಾತ್ರವನ್ನು ವಹಿಸುತ್ತದೆ. ಲಿಂಗ, ವಯಸ್ಸು, ಮಯ್ಯಿನ ಬಲ, ಜಾತಿ, ಮತ, ವಿದ್ಯೆ, ಗದ್ದುಗೆ, ಸಂಪತ್ತು, ಹುಟ್ಟಿಬೆಳೆದುಬಾಳುತ್ತಿರುವ ಜಾಗ ಹಾಗೂ ಆಡುವ ನುಡಿಗಳ ಕಾರಣದಿಂದಾಗಿ ವ್ಯಕ್ತಿಗಳ ಸಾಮಾಜಿಕ ಅಂತಸ್ತು ನಿರ‍್ಣಯಗೊಳ್ಳುತ್ತದೆ. ಈ ಹಿನ್ನೆಲೆಯಿಂದ ಆಣೆ ಪ್ರಮಾಣಗಳ ಬಳಕೆಯ ಸಾಮಾಜಿಕ ಸನ್ನಿವೇಶಗಳನ್ನು ಗಮನಿಸಿದಾಗ, ತೊಡಗಿದವರಲ್ಲಿ ಯಾರ ಸಾಮಾಜಿಕ ಅಂತಸ್ತು ಕಡಿಮೆಯಿರುತ್ತದೆಯೋ ಅಂತಹ ವ್ಯಕ್ತಿಯು ತಾನು ಹೇಳುತ್ತಿರುವ ಮಾತುಗಳನ್ನು ನಿಜವೆಂದು ಗಟ್ಟಿಮಾಡುವುದಕ್ಕಾಗಿ ಆಣೆ ಪ್ರಮಾಣಗಳನ್ನು ಪದೇಪದೇ ಬಳಸುತ್ತಿರುತ್ತಾನೆ. ಸಾಮಾಜಿಕ ಅಂತಸ್ತಿನ ಮಟ್ಟದಲ್ಲಿ ಮೇಲಿರುವ ವ್ಯಕ್ತಿಯು ಆಣೆಪ್ರಮಾಣಗಳನ್ನು ಆದಶ್ಟು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾನೆ. ಅತಿ ಹೆಚ್ಚಿನ ಪ್ರಸಂಗಗಳಲ್ಲಿ ಆಣೆ ಪ್ರಮಾಣಗಳು ಒಂದು ಕಡೆಯಿಂದ ಮಾತ್ರ ಬಳಕೆಯಾಗುತ್ತಿರುತ್ತವೆ. ಅಂದರೆ ಮಾತಿನ ಸನ್ನಿವೇಶದಲ್ಲಿ ಕೆಳಹಂತದಲ್ಲಿರುವವನು ಮೇಲಿನ ಅಂತಸ್ತಿನಲ್ಲಿರುವವನ ಮುಂದೆ ಹೆಚ್ಚಾಗಿ ಬಳಸುತ್ತಾನೆ. ಆಣೆ ಪ್ರಮಾಣಗಳ ಬಳಕೆಗೆ ಇಂತಹುದೇ ವೇಳೆ ಎಂಬುದಿಲ್ಲ. ಇಬ್ಬರು ಇಲ್ಲವೇ ಅನೇಕರ ನಡುವೆ ವ್ಯವಹಾರಗಳು ನಡೆಯುವ ಯಾವುದೇ ಮಾತಿನ ಸನ್ನಿವೇಶದಲ್ಲಾದರೂ ಇವು ಬಳಕೆಯಾಗುತ್ತಿರುತ್ತವೆ. ಕುಟುಂಬ/ದುಡಿಮೆ/ಸಾರ‍್ವಜನಿಕ ನೆಲೆಗಳಲ್ಲಿ ಬಳಕೆಯಾಗುತ್ತಿರುವ ಆಣೆ ಪ್ರಮಾಣಗಳನ್ನು ನಾನಾ ಮಗ್ಗಲುಗಳಿಂದ ನೋಡಿದಾಗ ಹಲವಾರು ಸಾಮಾಜಿಕ ಸಂಗತಿಗಳು ಎದ್ದು ಕಾಣುತ್ತವೆ.

ಕುಟುಂಬದ ನೆಲೆ:

ಕುಟುಂಬಗಳ ಸಾಮಾಜಿಕ ಅಂತಸ್ತಿಗೆ ತಕ್ಕಂತೆ ಆಣೆ ಪ್ರಮಾಣಗಳ ಬಳಕೆಯ ಸನ್ನಿವೇಶಗಳು ಹೆಚ್ಚು ಕಡಿಮೆಯಾಗುತ್ತವೆ. ಹಣಕಾಸಿನಲ್ಲಿ ಮತ್ತು ಸಂಪತ್ತಿನಲ್ಲಿ ನಡುವಣ ವರ‍್ಗ/ಸಿರಿವಂತ ಕುಟುಂಬಕ್ಕೆ ಸೇರಿದ ಕುಟುಂಬಗಳಲ್ಲಿ – ಅವು ಯಾವುದೇ ಜಾತಿ ಉಪಜಾತಿಗಳಿಗೆ ಸೇರಿರಲಿ – ಆಣೆಪ್ರಮಾಣಗಳ ಬಳಕೆಯು ಕಡಿಮೆ ಸಂಕೆಯಲ್ಲಿರುತ್ತದೆ. ಏಕೆಂದರೆ “ಮನೆಯೊಳಗೆ ಎಂತಹುದೇ ಸನ್ನಿವೇಶದಲ್ಲಿಯೂ ಯಾರೇ ಆಗಲಿ ಆಣೆ ಪ್ರಮಾಣಗಳನ್ನು ಮಾಡಬಾರದು. ಅದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಆಣೆಪ್ರಮಾಣವನ್ನು ಹೆಚ್ಚಾಗಿ ಮಾಡುವವರ ಮನೆಯು ಬೇಗ ಹಾಳಾಗುತ್ತದೆ” ಎಂಬ ನಂಬಿಕೆಯು ಜನಮನದಲ್ಲಿ ನೆಲೆಗೊಂಡಿದೆ. ಇದೇ ಬಗೆಯ ನಂಬಿಕೆಯನ್ನು ನಡುವಣ ಕೆಳವರ‍್ಗ ಮತ್ತು ಬಡವರ‍್ಗಕ್ಕೆ ಸೇರಿದ ಕುಟುಂಬದ ಜನರು ಹೊಂದಿದ್ದರೂ, ಅವರಲ್ಲಿ ಆಣೆ ಪ್ರಮಾಣಗಳ ಬಳಕೆಯು ಹೆಚ್ಚಾಗಿರುತ್ತದೆ. ಏಕೆಂದರೆ ಹಣಕಾಸಿನಲ್ಲಿ ಕೆಳವರ‍್ಗದಲ್ಲಿರುವ ಜನರು ಆಡುವ ಮಾತನ್ನು ಮೇಲುವರ‍್ಗದ ಜನರು ಸಾಮಾನ್ಯವಾಗಿ ನಂಬುವುದಿಲ್ಲ. ಬಹುಬಗೆಯ ಸಾಮಾಜಿಕ ಮತ್ತು ಹಣಕಾಸಿನ ತೊಡಕುಗಳಿಗೆ ಪದೇಪದೇ ಒಳಗಾಗುವ ಕೆಳವರ‍್ಗದ ಜನರಲ್ಲಿ ಕುಟುಂಬದ ಆಗುಹೋಗುಗಳನ್ನು ಎದುರಿಸಲು ಇಲ್ಲವೇ ನಿಬಾಯಿಸಿಕೊಂಡು ಹೋಗಲು ಕೆಲವು ಸನ್ನಿವೇಶಗಳಲ್ಲಿ ಆಣೆ ಪ್ರಮಾಣಗಳ ಬಳಕೆಯು ಅಗತ್ಯವಾಗುತ್ತದೆ.

ಕುಟುಂಬದ ವ್ಯಕ್ತಿಗಳ ನಡುವೆ ಆಣೆ ಪ್ರಮಾಣಗಳು ಬಳಕೆಯಾಗುವ ಸನ್ನಿವೇಶಗಳಲ್ಲಿ ಆರೋಪ ಮಾಡುವವರು ಮತ್ತು ಆರೋಪಕ್ಕೆ ಗುರಿಯಾಗುವವರು ಬೇರೆಬೇರೆ ಬಗೆಯ ಎರಡು ನೆಲೆಗಳಲ್ಲಿರುತ್ತಾರೆ. ಆರೋಪವನ್ನು ಮಾಡುವವರು ಸಾಮಾನ್ಯವಾಗಿ ಕುಟುಂಬದ ಜವಾಬ್ದಾರಿಯನ್ನು ಮತ್ತು ಹಣಕಾಸಿನ ವೆಚ್ಚದ ಹೊಣೆಯನ್ನು ಹೊತ್ತಿರುವವರು ಹಾಗೂ ವಯಸ್ಸಿನಲ್ಲಿ ಹಿರಿಯರಾಗಿರುತ್ತಾರೆ. ಆರೋಪಕ್ಕೆ ಗುರಿಯಾಗುವವರು ಹೆಚ್ಚಿನ ಸನ್ನಿವೇಶಗಳಲ್ಲಿ ಕಿರಿಯರಾಗಿರುತ್ತಾರೆ ಮತ್ತು ತಮ್ಮ ಜೀವನದ ಆಗುಹೋಗುಗಳಿಗೆ ಕುಟುಂಬದ ಒಡೆಯ ಇಲ್ಲವೇ ಒಡತಿಯ ಹಂಗಿನಲ್ಲಿರುತ್ತಾರೆ. ಕುಟುಂಬದೊಳಗೆ ಇವರು ಎರಡನೇ ದರ‍್ಜೆಯ ವ್ಯಕ್ತಿಗಳಾಗಿರುತ್ತಾರೆ. ವಿವಾದಗಳು ಉಂಟಾದಾಗ ಆರೋಪಕ್ಕೆ ಗುರಿಯಾದ ವ್ಯಕ್ತಿಗಳು ತಾವಾಗಿಯೇ ಆಣೆಗಳನ್ನಿಡುತ್ತಾ ಆರೋಪದ ನಿರಾಕರಣೆಯಲ್ಲಿ ತೊಡಗುತ್ತಾರೆ. ಆರೋಪಿಯ ಬಾಯಿಂದ ಆಣೆಗಳನ್ನು ಕೇಳುತ್ತಿದ್ದಂತೆಯೇ ಆರೋಪವನ್ನು ಮಾಡಿದವರು ಕೆಲವು ಸನ್ನಿವೇಶಗಳಲ್ಲಿ ಮಾತನ್ನು ಮೊಟಕುಗೊಳಿಸಿ, ಆರೋಪಿಗೆ ತಿಳಿಯಹೇಳಿ, ಮತ್ತೆ ಇಂತಹ ತಪ್ಪನ್ನು ಮಾಡದಂತೆ ಎಚ್ಚರಿಸುತ್ತಾರೆ. ಕೆಲವೊಮ್ಮೆ ವ್ಯಕ್ತಿಗಳ ನಡುವೆ ಹಗೆತನ, ಅಸೂಯೆ, ಅನುಮಾನ ಮೊದಲೇ ಎಡೆಮಾಡಿದ್ದಲ್ಲಿ, ಆರೋಪಿಯನ್ನು ಪ್ರಮಾಣ ಮಾಡುವಂತೆ ಒತ್ತಾಯಿಸುತ್ತಾರೆ. ತಂದೆತಾಯಿಗಳ ಮುಂದೆ ಮಕ್ಕಳು ಆಣೆಗಳನ್ನು ಇಡತೊಡಗಿದಾಗ ಹೆತ್ತವರು ಆತಂಕಕ್ಕೆ ಒಳಗಾಗುತ್ತಾರೆ. ತಮ್ಮ ಮಕ್ಕಳು ನಿಜ ಸಂಗತಿಯನ್ನು ಮುಚ್ಚಿಟ್ಟು ಸುಳ್ಳನ್ನಾಡುತ್ತಾ, ಅದಕ್ಕೆ ಪೂರಕವಾಗಿ ಇಡುತ್ತಿರುವ ಆಣೆಯಿಂದ ಇಲ್ಲವೇ ಮಾಡುತ್ತಿರುವ ಪ್ರಮಾಣದಿಂದ, ಇಂದಲ್ಲ ನಾಳೆ ಅವರಿಗೆ ಕೇಡಾಗಬಹುದೆಂಬ ಆತಂಕದಿಂದ ಸಂಕಟಕ್ಕೆ ಒಳಗಾಗುತ್ತಾರೆ. ಇದೆಲ್ಲವೂ ಆಯಾಯ ಕುಟುಂಬದ ಸಾಮಾಜಿಕ ಅಂತಸ್ತಿಗೆ ತಕ್ಕಂತೆ ನಡೆಯುತ್ತದೆ. ಒಟ್ಟಿನಲ್ಲಿ ಕುಟುಂಬದ ನೆಲೆಯಲ್ಲಿ ಬಳಕೆಯಾಗುವ ಆಣೆ ಪ್ರಮಾಣಗಳಿಂದ ವ್ಯಕ್ತಿಗಳ ನಡುವಣ ಒಲವು ಮತ್ತು ನಂಬಿಕೆಯ ನಂಟು ಸಡಿಲಗೊಂಡು ಹಾಳಾಗುತ್ತದೆ.

ದುಡಿಮೆಯ ನೆಲೆ:

ಮನೆಗಳಲ್ಲಿ, ಹೊಲಗದ್ದೆಗಳಲ್ಲಿ, ಪ್ಯಾಕ್ಟರಿಗಳಲ್ಲಿ, ಕಚೇರಿಗಳಲ್ಲಿ ಮತ್ತು ಇನ್ನಿತರ ನೂರಾರು ಎಡೆಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಮತ್ತು ಅವರ ಮೇಲ್ಪಟ್ಟವರ ನಡುವೆ ಸಮಸ್ಯೆಗಳುಂಟಾದ ಸನ್ನಿವೇಶಳಲ್ಲಿ ಕೆಲವೊಮ್ಮೆ ಆಣೆ ಪ್ರಮಾಣಗಳು ಬಳಕೆಯಾಗುತ್ತವೆ. ಈ ನೆಲೆಯಲ್ಲಿ ಆರೋಪವನ್ನು ಮಾಡುವವರು ಅದಿಕಾರ, ಸಂಪತ್ತು, ತೋಳ್ಬಲ, ಜನಬಲ ಮತ್ತು ಜಾತಿಬಲವುಳ್ಳವರಾಗಿರುತ್ತಾರೆ. ಈ ಅಂಶಗಳಲ್ಲಿ ಯಾವುದಾದರೂ ಒಂದು ಇಲ್ಲವೇ ಹೆಚ್ಚಿನವು ಜತೆಗೂಡಿರುತ್ತವೆ. ಆರೋಪಕ್ಕೆ ಗುರಿಯಾದವರು ಅತಿ ಹೆಚ್ಚಿನ ಪ್ರಸಂಗಗಳಲ್ಲಿ ಕೆಳಹಂತದಲ್ಲಿ ದುಡಿಯುವ ಬಡವರ‍್ಗದ ಜನರಾಗಿರುತ್ತಾರೆ. ಈ ನೆಲೆಯಲ್ಲಿ ವಯಸ್ಸಿನ ಹಿರಿತನ/ಕಿರಿತನಕ್ಕೆ ಬೆಲೆಯಿರುವುದಿಲ್ಲ. ದುಡಿಮೆಯ ನೆಲೆಯಲ್ಲಿ ಬೆಲೆಬಾಳುವ ವಸ್ತುಗಳು ಇಲ್ಲವೇ ಹಣ ಕಾಣೆಯಾದಾಗ, ಮಾಡಬೇಕಾದ ಕೆಲಸದಲ್ಲಿ ತಪ್ಪು ಇಲ್ಲವೇ ನಡೆನುಡಿಯಲ್ಲಿ ಅನುಮಾನ ಉಂಟಾದಾಗ, ಮರುಗಳಿಗೆಯಲ್ಲಿಯೇ ಕೆಳಹಂತದಲ್ಲಿರುವ ಕೆಲಸಗಾರರು ಆರೋಪಕ್ಕೆ ಗುರಿಯಾಗುತ್ತಾರೆ. ಇದುವರೆಗಿನ ಅವರ ಒಳ್ಳೆಯ ನಡೆನುಡಿಗಳು ಲೆಕ್ಕಕ್ಕೆ ಬರುವುದಿಲ್ಲ. ಒಡೆಯ ಇಲ್ಲವೇ ಒಡತಿಯ ಮುಂದೆ ಆಳುಗಳು, ದೊಡ್ಡ ಗದ್ದುಗೆಯಲ್ಲಿರುವವರ ಮುಂದೆ ಕೆಳದರ‍್ಜೆಯ ನೌಕರರು ಬಹಳ ದೀನತೆಯಿಂದ ತಗ್ಗಿಬಗ್ಗಿ ಮೊರೆಯಿಡುತ್ತಾ, ತಮ್ಮ ಮೇಲೆ ಬಂದಿರುವ ಆರೋಪದಿಂದ ಪಾರಾಗಲು ನಾನಾ ಬಗೆಯ ಆಣೆಗಳನ್ನಿಡಲು ಮತ್ತು ಪ್ರಮಾಣಗಳನ್ನು ಮಾಡಲು ಮುಂದಾಗುತ್ತಾರೆ. ಆರೋಪಕ್ಕೆ ಗುರಿಯಾದವರು ಈ ಪ್ರಸಂಗದಲ್ಲಿ ಒಳ್ಳೆಯವರಾಗಿರಲಿ ಇಲ್ಲವೇ ವಂಚಕರಾಗಿರಲಿ, ಅದರಿಂದ ಬಿಡುಗಡೆ ಪಡೆಯಲು ಇರುವ ಒಂದೇ ಒಂದು ದಾರಿಯೆಂದರೆ ಆಣೆಯಿಡುವುದು ಇಲ್ಲವೇ ಪ್ರಮಾಣ ಮಾಡುವುದಾಗಿರುತ್ತದೆ. ಆದರೆ ಕೆಳವರ‍್ಗದ ಬಡಜನತೆ ಬಳಸುವ ಯಾವುದೇ ಬಗೆಯ ಆಣೆ ಪ್ರಮಾಣಗಳನ್ನು ಮೇಲಿನ ವರ‍್ಗದವರು ಕಿಂಚಿತ್ತಾದರೂ ನಂಬುವುದಿಲ್ಲ. “ದನ ತಿನ್ನೂರ‍್ಗೆ ಗೊಬ್ಬರದಾಣೆ ಬ್ಯಾರೆ ಕೇಡು” ಎಂದು ಹಂಗಿಸುತ್ತಾರೆ. ಆರೋಪಿಗಳಿಗೆ ತಾವೇ ಹೊಡೆದು ನೋಯಿಸಲು ಇಲ್ಲವೇ ಊರಿನ ಮುಕಂಡರಿಂದ ಪಂಚಾಯ್ತಿ ಮಾಡಿಸಿ ದಂಡ ಹಾಕಿಸಲು ಇಲ್ಲವೇ ಕಾನೂನಿ ಪ್ರಕಾರ ದಂಡನೆಯಾಗಲೆಂದು ಪೋಲಿಸರಿಗೆ ಒಪ್ಪಿಸಲು ಮುಂದಾಗುತ್ತಾರೆ. ಇತರರಿಂದ ಒತ್ತಾಯಪೂರ‍್ವಕವಾಗಿ ಆಣೆಯನ್ನು ಇಕ್ಕಿಸುವ ಮತ್ತು ಪ್ರಮಾಣವನ್ನು ಮಾಡಿಸುವ ಕೆಲಸಗಳು ಜನಸಮುದಾಯದಲ್ಲಿನ ಸಾಮಾಜಿಕ ವ್ಯವಸ್ತೆಯಲ್ಲಿ ಮೇಲುವರ‍್ಗದವರ ಅದಿಕಾರದ ಶಕ್ತಿ/ಸಿರಿವಂತಿಕೆಯ ದರ‍್ಪ/ಜಾತಿಬಲವನ್ನು ತೋರಿಸುವ ಆಚರಣೆಗಳಾಗಿರುತ್ತವೆಯೆಂದು ಸಾಮಾಜಿಕ ಮನೋವಿಜ್ನಾನಿಗಳು ವಿವರಿಸಿದ್ದಾರೆ.

ಸಾರ‍್ವಜನಿಕ ನೆಲೆ:

ಬಸ್ಸು ಮತ್ತು ರೈಲು ನಿಲ್ದಾಣಗಳು, ಹೋಟೆಲುಗಳು, ಅಂಗಡಿಮುಂಗಟ್ಟುಗಳು ಮತ್ತು ಚಲನಚಿತ್ರ ಮಂದಿರಗಳನ್ನೊಳಗೊಂಡಂತೆ ಸಾರ‍್ವಜನಿಕರು ಹೆಚ್ಚಿನ ಸಂಕೆಯಲ್ಲಿ ನೆರೆಯುವ ಎಡೆಗಳಲ್ಲಿ ಆಗಿಂದಾಗ್ಗೆ ಕೇಳಿಬರುವ ಮಾತಿನ ಜಟಾಪಟಿಯ ಪ್ರಸಂಗಗಳಲ್ಲಿ ಯಾರಾದರೂ ಆಣೆ ಪ್ರಮಾಣಗಳನ್ನು ಬಳಸುತ್ತಿರುವುದನ್ನು ಕಂಡಾಗ, ಹೆಚ್ಚಿನ ಸನ್ನಿವೇಶಗಳಲ್ಲಿ ಅಂತಹವರನ್ನು ನಿಜಕ್ಕೂ ಆರೋಪಿಗಳೆಂದೇ ಇತರರು ತಿಳಿಯುತ್ತಾರೆ. ಏಕೆಂದರೆ ಆಣೆ ಪ್ರಮಾಣ ಮಾಡುವವರಲ್ಲಿ ಹೆಚ್ಚಿನವರು ಸುಳ್ಳರು ಹಾಗೂ ನಯವಂಚಕರೆಂಬ ಒಳಮಿಡಿತವು ಜನಮನದಲ್ಲಿ ನೆಲೆಸಿದೆ.

ಈ ಮೂರು ನೆಲೆಗಳಲ್ಲಿಯೂ ಆರೋಪಕ್ಕೆ ಗುರಿಯಾದವರಲ್ಲಿ ತಪ್ಪನ್ನು ಮಾಡದ ವ್ಯಕ್ತಿಗಳು ತಮ್ಮ ನಡೆನುಡಿಗೆ ತಟ್ಟಿದ ಈ ಬಗೆಯ ಕಳಂಕದಿಂದ ಅಪಮಾನಗೊಂಡು ಮಾನಸಿಕವಾಗಿ ಕುಸಿದು ಅದರಿಂದ ಪಾರಾಗಲು ಆಣೆ ಪ್ರಮಾಣಗಳ ಮೊರೆಹೋಗುತ್ತಾರೆ. ಆದರೆ ಕಳ್ಳತನ, ವಂಚನೆ, ದ್ರೋಹ ಮತ್ತು ಇನ್ನಿತರ ತಪ್ಪುಗಳನ್ನು ಎಸಗಿಯೂ ಅದನ್ನು ಮೊಂಡುತನದಿಂದ ಅಲ್ಲಗಳೆಯುವ ವ್ಯಕ್ತಿಗಳು ಯಾವುದೇ ಹಿಂಜರಿಕೆಯನ್ನು ತೋರಿಸಿಕೊಳ್ಳದೆ ಆಣೆ ಪ್ರಮಾಣಗಳನ್ನು ದಾರಾಳವಾಗಿ ಬಳಸುತ್ತಾರೆ.

“ಈ ಆಣೆ ಪ್ರಮಾಣಗಳೆಲ್ಲವೂ ಸುಳ್ಳು. ಇವುಗಳ ಬಳಕೆಯಿಂದ ಮುಂದೆ ಯಾವ ನೋವು/ಹಾನಿ/ಆಪತ್ತು ಉಂಟಾಗುವುದಿಲ್ಲ. ಇತರ ವ್ಯವಹಾರಗಳಲ್ಲಿ ಬಳಸಿದ ಮಾತುಗಳು ಆಡಿದ ನಂತರ ಹೇಗೆ ಮರೆಯಾಗುತ್ತವೆಯೋ, ಅಂತೆಯೇ ಇವು ಕೂಡ ಆ ಒಂದು ಗಳಿಗೆಯ ಕೆಲಸಕ್ಕಾಗಿ ಬಳಕೆಯಾಗುವ ಮಾತುಗಳು” ಎಂಬ ನಿಲುವು ಕೆಲವರಲ್ಲಿದೆ. ಇಂತಹವರು ಯಾವುದೇ ಬಗೆಯ ಆಣೆ ಪ್ರಮಾಣಗಳನ್ನು ಬಳಸುತ್ತಿದ್ದರೂ ಅದೇ ಗಳಿಗೆಯಲ್ಲಿ ತಮ್ಮ ಮನದೊಳಗೆ ತಾವು ನಂಬಿದ ದೇವರಲ್ಲಿ ತಮ್ಮ ತಪ್ಪನ್ನು ಮನ್ನಿಸಿ ಕಾಪಾಡುವಂತೆ ಮೊರೆಯಿಡುವುದಾಗಿ ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಆಣೆ ಪ್ರಮಾಣಗಳ ಬಳಕೆಯಿಂದ ಮುಂದೆ ಉಂಟಾಗುವ ಯಾವುದೇ ಪರಿಣಾಮಗಳ ಬಗ್ಗೆ ಏನನ್ನೂ ಚಿಂತಿಸದೆ, ಅವನ್ನು ಸಲೀಸಾಗಿ ಬಳಸುತ್ತಾರೆ. ಮುಂದೆ ಬರಲಿರುವ ನೋವು/ಸಂಕಟ/ಆಪತ್ತಿಗಿಂತ ಈಗ ತಮ್ಮ ಪಾಲಿಗೆ ಬಂದಿರುವ ಆರೋಪ / ಗಂಡಾಂತರದಿಂದ ಪಾರಾಗುವುದೇ ಇಂತಹವರ ಪಾಲಿಗೆ ದೊಡ್ಡದಾಗಿರುತ್ತದೆ. ಮಾಡಿದ ತಪ್ಪನ್ನು ಮುಚ್ಚಿಡಲೆಂದು ಆಣೆ ಪ್ರಮಾಣ ಮಾಡಿದ ಕೆಲವರು, ಆ ಸಮಯದಲ್ಲಿ ಬಿಕ್ಕಟ್ಟಿನಿಂದ ಪಾರಾಗಿದ್ದರೂ ಮುಂದೆ ಎಂದಾದರೊಂದು ದಿನ ಆಪತ್ತಿಗೆ ಸಿಲುಕಿದಾಗ, ಇತರರು ಅದಕ್ಕೂ ಮತ್ತು ಆ ಹಿಂದೆ ಇವರು ಮಾಡಿದ್ದ ಆಣೆ ಪ್ರಮಾಣಕ್ಕೂ ನೆಂಟನ್ನು ಗಂಟು ಹಾಕಿ “ಜನರಿಗೆ ಮೋಸ ಮಾಡಬಹುದು, ಆದರೆ ದೇವರಿಗೆ ಮೋಸ ಮಾಡೋಕಾಗುತ್ತ!” ಎಂದು ಆಡಿಕೊಂಡು ಹಂಗಿಸುತ್ತಾರೆ. ಆಣೆ ಪ್ರಮಾಣಗಳಿಗೆ ಒಂದು ಬಗೆಯ ಮಾಂತ್ರಿಕಶಕ್ತಿಯಿದೆ… ಅಂದರೆ ಯಾವುದಾದರೊಂದು ಬಗೆಯಲ್ಲಿ ಇಂದಲ್ಲ ನಾಳೆಯಾದರೂ ಇಲ್ಲವೇ ಎಂದಿದ್ದರೂ ಪರಿಣಾಮವನ್ನು ಬೀರುತ್ತದೆಯೆಂಬ ನಂಬಿಕೆಯು ಜನಮನದಲ್ಲಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ: