ಬರಲಿದೆ ಹೊಸ ಟಾಟಾ ಟಿಯಾಗೊ
ಟಾಟಾದ ಟಿಯಾಗೊ (Tiago) ಹೆಸರಿನ ಕಾರು ಬಿಡುಗಡೆಗೆ ಅಣಿಗೊಂಡಿದೆ. ಕಿರು ಹಿಂಗದ ಕಾರೊಂದನ್ನು ಬಲುದಿನದಿಂದ ಮಾರುಕಟ್ಟೆಗೆ ತರಲು ಕಾಯುತ್ತಿದ್ದ ಟಾಟಾದವರ ಕಾರು ಬರುವಿಕೆಗೆ ಉದ್ಯಮವೇ ಕಾದಿದೆ. ನಾವು ಹಮ್ಮುಗೆಯೊಂದನ್ನು ಹಾಕಿಕೊಂಡರೆ ಎದುರಾಗುವ ಕಶ್ಟಗಳು ಹಲವಾರು. ಇಂತ ಹಲವಾರು ಅಡ್ಡಿಗಳುಂಟಾದರೂ ಅವುಗಳನ್ನು ಬಿಡಿಸಿಕೊಂಡು ಇಂದು ಟಿಯಾಗೊ ಮಾರುಕಟ್ಟೆಯ ಓಟಕ್ಕೆ ಲಗ್ಗೆ ಇಡುವ ದಿನಗಳು ಹತ್ತಿರವಾಗಿವೆ.
ಕಳೆದ ವರುಶ ನವೆಂಬರ್-ಡಿಸೆಂಬರ್ ಹೊತ್ತಿಗೆ ಈ ಬಂಡಿ ಹೊರಬರುವ ಸುದ್ದಿಯಿತ್ತು ಆದರೆ ಅದು ಕಯ್ಗೂಡಲಿಲ್ಲ. ಇದೇ ವರುಶದ ಬಂಡಿ ತೋರ‍್ಪಿನ ಮೊದಲೇ ಟಿಯಾಗೊ ಬಿಡುಗಡೆಯಾಗಬೇಕಿತ್ತು. ಅಂದುಕೊಂಡಂತೆ ಅದು ಕೂಡ ಆಗಲಿಲ್ಲ. ಹಾಗೋ ಹೀಗೊ ಬಂಡಿ ತೋರ‍್ಪಿನಲ್ಲಿ ಟಿಯಾಗೊದ ಮೊದಲ ಮಾದರಿಗಳನ್ನು ಜಗತ್ತಿನ ಮುಂದೆ ತೋರಿಸಲಾಗಿತ್ತು. ಅಲ್ಲಿ ಮತ್ತೊಂದು ಕಾಟ ಅದೇ ಹೆಸರಿನದು. ಈ ಮುಂಚೆ ಟಾಟಾ ಜೀಕಾ ಎಂಬ ಹೆಸರು ಪಡೆದಿದ್ದ ಈ ಬಂಡಿಗೆ ಜೀಕಾ ಹೆಸರೇ ಕಾಡುವ ಪರಿಸ್ತಿತಿ ತಂದಿಟ್ಟಿತ್ತು. ಯಾಕೆಂದರೆ ಅದೇ ಹೊತ್ತಿಗೆ ಜಿಕಾ ಹೆಸರಿನ ನಂಜುಳವೊಂದು ಜಗತ್ತಿನ ಹಲವು ದೇಶಗಳಲ್ಲಿ ದೊಡ್ಡ ಮಾರಿ ರೋಗವೊಂದನ್ನು ಹಬ್ಬತೊಡಗಿತ್ತು. ಬಂಡಿ ತೋರ‍್ಪಿನ ಬಳಿಕ ಹೆಸರು ಬದಲಾವಣೆಯ ಅಬಿಯಾನವನ್ನೇ ನಡೆಸಿದ ಟಾಟಾ ಕೊನೆಗೆ ಟಿಯಾಗೊ ಎಂಬ ಹೆಸರನ್ನು ಆಯ್ದುಕೊಂಡಿದ್ದು ಹಳಮೆ.
ಹೆಚ್ಚುತ್ತಿರುವ ಮಾರುಕಟ್ಟೆಯ ಪಯ್ಪೋಟಿಗೆ ಟಾಟಾದವರ ಕಾರುಗಳು ಮಂಡಿಯೂರುತ್ತಿವೆ. ಇದು ಅಲ್ಲದೇ ಟಾಟಾದವರಿಂದ ಮಂದಿ ಹೊಸದೊಂದನ್ನು ಬಯಸುತ್ತಿದ್ದು ಅಶ್ಟೇ ದಿಟ. ಅದಕ್ಕೆಂದೇ ತನ್ನ ಕಾರುಗಳ ಈಡುಗಾರಿಕೆ ಹೊಸ ಟಚ್ ನೀಡಲು ಟಿಯಾಗೊ ಮೂಲಕ ಕಯ್ ಹಾಕಿದೆ ಟಾಟಾ. ಈ ವರುಶದಲ್ಲಿ ಇನ್ನೂ ಕೆಲವು ಹೊಸ ಬಂಡಿಗಳನ್ನು ಮಾರಾಟಕ್ಕೆ ಅಣಿಗೊಳಿಸಲಿರುವ ಟಾಟಾ ಕೂಟದವರಿಗೆ ಟಿಯಾಗೊ ದಾರಿದೀಪವಾಗಲಿರುವುದು ನಿಜ.ಟಾಟಾ ಟಿಯಾಗೊದ ಕಿರುನೋಟ ಈ ಮುಂದಿನ ಸಾಲುಗಳಲ್ಲಿ ಓದಿ.
ಬಿಣಿಗೆ ಮತ್ತು ಸಾಗಣಿ: ಟಿಯಾಗೊ ಬಂಡಿಗೆಂದೇ 2 ವಿಶೇಶ ಬಿಣಿಗೆಗಳನ್ನು ಅಣಿಗೊಳಿಸಲಾಗಿದೆ. ಪೆಟ್ರೋಲ್‌ಗಾಗಿ 1.2ಲೀಟರ್ ಅಳತೆಯ 3 ಉರುಳೆಯ ಬಿಣಿಗೆಯೊಂದನ್ನು ಬೆಳೆಸಿದ್ದಾರೆ ಈ ಹಿಂದೆ ಬೋಲ್ಟ್ ಮತ್ತು ಜೇಸ್ಟ್ ಕಾರುಗಳಲ್ಲಿ ಕಂಡುಬಂದಿದ್ದ ರೆವೋಟ್ರಾನ್(Revotran) ಬಿಣಿಗೆಯನ್ನೇ ಇಲ್ಲಿ ಕಿರಿದಾಗಿಸಿ ಮತ್ತು ಹಗುರವಾಗಿರುವಂತೆ ನೋಡಿಕೊಳ್ಳಲಾಗಿದೆ. 85 ಪಿಏಸ್ ಕಸುವಿನ ಈ ಬಿಣಿಗೆ 114 ನ್ಯೂಟನ್ ಮೀಟರ್ ತಿರುಗುಬಲ ನೀಡಲಿದೆ. ಡಿಸೇಲ್‌ಗಾಗಿ ರೆವೋಟಾರ‍್ಕ್(Revotorq) ಹೆಸರಿನ 1.05 ಲೀಟರ್ ಅಳತೆಯ ಬಿಣಿಗೆ 70 ಪಿಏಸ್ ಕಸುವುಂಟು ಮಾಡಿ 144 ನ್ಯೂಟನ್ ಮೀಟರ್ ತಿರುಗುಬಲವನ್ನು ಬಂಡಿಯ ಗಾಲಿಗಳಿಗೆ ಸಾಗಿಸಲಿದೆ. ಎರಡು ಬಿಣಿಗೆಗೆ 5-ವೇಗದ ಓಡಿಸುಗನಿಡಿತದ ಸಾಗಣಿ ಜೊತೆಯಾಗಿರುತ್ತದೆ. ಪೆಟ್ರೋಲ್ ಬಂಡಿಯ ಮಯ್ಲಿಯೋಟ 23.5 ಕಿ.ಮೀ. ಪ್ರತಿ ಲೀಟರ್ ಆಗಿದೆ. ಡಿಸೇಲ್ ಮಯ್ಲಿಯೋಟ ತಿಳಿದು ಬಂದಿಲ್ಲ.
ಮಯ್ಮಾಟ: ಟಾಟಾದವರು ತಲೆಮಾರುಗಳಿಂದ ಬಳಸುತ್ತಿರುವ ನಗುಮೊಗವನ್ನು ಹೋಲುವ ಮುನ್ಕಂಬಿ ತೆರೆ (Front Grill) ಸೊಗಸಾಗಿದೆ. ಒಪ್ಪವಾಗಿರುವ ಮುಂದೀಪಗಳು ಮತ್ತು ತುಸು ಎತ್ತರಕ್ಕೇರಿಸಲ್ಪಟ್ಟ ಬಿಣಿಗವಸು ಟಾಟಾದವರ ಹೊಸ ಈಡುಗಾರಿಕೆ ಎದ್ದು ಕಾಣುವಂತೆ ಮಾಡಿವೆ. ಬಂಡಿಯ ಹಿಂಬದಿಯು ಕೂಡ ಮೂಡಿಬಂದಿದೆ ಅಗಲವಾದ ಹಿಂದೀಪಗಳು, ಮೇಲ್ಬಾಗದಲ್ಲಿ ಎಳೆತಗ್ಗುಕವು (Spoiler) ಈ ಕಿರುಕಾರಿನ ಅಂದವನ್ನು ಇನ್ನೂ ಹೆಚ್ಚಿಸಿವೆ. ಈ ಮುಂಚಿನ ಟಾಟಾ ಇಂಡಿಕಾ ವಿಸ್ತಾ (Indica Vista), ಬೋಲ್ಟ್(Bolt)ಗಳಿಗಿಂತ ಟಿಯಾಗೊ ಸಾಕಶ್ಟು ಬೇರ‍್ಮೆ ಹೊಂದಿದ್ದು ನೋಡುಗರಿಗೆ ಮೆಚ್ಚುಗೆಯಾಗುತ್ತದೆ.
ಹೊರನೋಟದಂತೆ ಟಿಯಾಗೊದ ಒಳನೋಟವೂ ದಿಟ್ಟವಾಗಿ ಕಂಡುಬರುತ್ತದೆ. ಒಳಗಡೆ ಬಳಸಲ್ಪಟ್ಟಿರುವ ಪ್ಲ್ಯಾಸ್ಟಿಕ್ ಮತ್ತು ಕೂರಿರ‍್ಕೆ ಜವಳಿಗಳು (Fabric) ಒಳ್ಳೆಯ ಗುಣಮಟ್ಟದ್ದು ಇದರಲ್ಲಿ ಯಾವುದೇ ಬೆಲೆ ಕಡಿತಕ್ಕೆ ರಾಜಿಯಾಗಿಲ್ಲವೆಂದು ತೋರುತ್ತದೆ. ಹೆಸರಾಂತ ಹಾರ‍್ಮನ್(Harman) ಕೂಟದವರೂ ಈ ಬಂಡಿಯ ತಿಳಿನಲಿ ಏರ‍್ಪಾಟನ್ನು (Infotainment System) ತಯಾರಿಸಿದ್ದಾರೆ. ಈಗಿನ ಬಹುತೇಕ ಬಂಡಿಗಳಲ್ಲಿ ಕಂಡುಬರುವ ಎಲ್ಲ ಸವ್ಕರ‍್ಯಗಳನ್ನು ಈ ತಿಳಿನಲಿ ಏರ‍್ಪಾಟು ಒದಗಿಸಲಿದೆಯಾದರೂ ಇದಕ್ಕೆ ಸೋಕುತೆರೆಯ(Touch Screen) ಸವ್ಕರ‍್ಯ ಇಲ್ಲ. ತಕ್ಕುದಾದ ಕುಳಿರು ಪೆಟ್ಟಿಗೆ ಏರ‍್ಪಾಟು (Air Condition) ಹೊಂದಿರುವ ಟಿಯಾಗೊ, ಬಂಡಿಯನ್ನು ಬೇಗನೆ ತಂಪಾಗಿಸದು.
ಟಾಟಾ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಜಾಗದ ಕೊರತೆಯನ್ನು ಟಿಯಾಗೊ ನೀಗಿಸುವಂತಿದೆ. ಬಂಡಿಯ ಎಲ್ಲ ಬಾಗಿಲುಗಳಲ್ಲಿ ಸುಮಾರು ಅರ‍್ದ ಲೀಟರ್‌ನಶ್ಟಿರುವ ಬಾಟಲಿಗಳನ್ನು, ಓಡಿಸುಗನ ಬದಿಯಲ್ಲಿ 2ಕಪ್‌ಗಳನ್ನು ಇಟ್ಟುಕೊಂಡು ಸಾಗಬಹುದು. ಬಿರು ಬಿಸಿಲಿನ ಬೇಗೆಯ ಪಯಣಗಳಿಗೆ ನಿಮ್ಮ ಕೋಲ್ಡ್ರಿಂಕ್, ನೀರು ಮುಂತಾದವನ್ನು ತಂಪಾಗಿರಿಸಲು ತಂಪು ಸರಕು ಗೂಡೊಂದನು ನೀಡಲಾಗಿದೆ. ಇದಲ್ಲದೇ ಇನ್ನೊಂದು ಸಾಮಾನ್ಯ ಸರಕುಗೂಡು ಓಡಿಸುಗರ ಬದಿಯಲ್ಲಿದ್ದು ನಿಮ್ಮ ಮಿನ್ಮಣೆಯಂತ(Tablet) ಚಿಕ್ಕ ಪುಟ್ಟ ವಸ್ತುಗಳನ್ನಿಡಲು ನೆರವಿಗೆ ಬರಲಿದೆ. ಇಶ್ಟೇಯಲ್ಲದೇ ಓಡಿಸುಗನ ಎಡಬದಿಯಲ್ಲಿ ಅಲೆಯುಲಿಗಳನ್ನಿಡಲು ಚಿಕ್ಕದಾದ ಸೇರುವೆಯೊಂದನ್ನು ನೀಡಿದ್ದಾರೆ.
ಕಾಪಿನ ವಿಶಯ: ಬಂಡಿಯ ಕಾಪಿಗೆಂದೇ ಕೂರುಪಟ್ಟಿ(Seat Belt) ಜೊತೆಗೆ ಆರಂಬಿಕ ಮಾದರಿಯ ಕಾರುಗಳಲ್ಲಿ ಕೂಡ ಓಡಿಸುಗ ಮತ್ತು ಅವರ ಪಕ್ಕದಲ್ಲಿ ಕೂಡುವರಿಗೆಂದು ಎರಡು ಗಾಳಿಚೀಲ (Airbag)ನೀಡಲಾಗಿದೆ. ಎಲ್ಲ ಪಯಣಿಗರ ಗಾಳಿಚೀಲಗಳು ಆಯ್ಕೆಯಾಗಿ ಸಿಗುವ ಸಾದ್ಯತೆಯಿದೆ. ಇದರೊಂದಿಗೆ ಬಂಡಿಗಳ್ಳರಿಂದ ಕಾಪಾಡಲು ಕದಲುತಡೆ ಏರ‍್ಪಾಟು(Immobilizer) ಇದರಲ್ಲಿರಲಿದೆ.
ಪಯ್ಪೋಟಿ: ಟಿಯಾಗೊ ಬಂಡಿಗೆ ಮಾರುತಿ ಸುಜುಕಿಯ ಸೆಲೆರಿಯೊ (Celerio), ಶೆವರ‍್ಲೆಯ ಬೀಟ್ (Beat) ಮತ್ತು ಹ್ಯುಂಡಾಯ್ ನವರ ಆಯ್-10 (i10) ನೇರ ಎದುರಾಳಿಗಳು. ಆಯಗಳ ವಿಶಯಕ್ಕೆ ಬಂದರೆ ಟಿಯಾಗೊ ಉದ್ದ, ಅಗಲದಲ್ಲಿ ದೊಡ್ಡದಾಗಿದೆ. ಎತ್ತರದಲ್ಲಿ ತುಸು ಕಡಿಮೆಯೆನ್ನಿಸಿದರೆ, ನೆಲತೆರವು ಮತ್ತು ಗಾಲಿಗಳ ನಡುವಿನ ದೂರ ಇವುಗಳಲ್ಲಿ ಎರಡನೇ ಸ್ತಾನದಲ್ಲಿದೆ.
ಇನ್ನೂ ಡಿಸೇಲ್ ಮತ್ತು ಪೆಟ್ರೋಲ್ ಬಿಣಿಗೆ ಎರಡರಲ್ಲೂ ಟಿಯಾಗೊ ಎದುರಾಳಿಗಳಿಗಿಂತ ಸಾಕಶ್ಟು ಮುಂದಿದೆ. ಬೆಲೆ ಮತ್ತು ಮಯ್ಲಿಯೋಟದ ಮಾಹಿತಿಗಳು ಟಿಯಾಗೊದ ಮುಂದಿನ ಬವಿಶ್ಯವನ್ನು ನಿರ‍್ದರಿಸಲಿವೆ.
ಬಯಲರಿಕೆ ಮತ್ತು ಬೆಲೆ: ಟಾಟಾ ಟಿಯಾಗೊ ಮತ್ತೊಂದು ಹೊಸತಕ್ಕೆ ಮೊದಲಾಗಿದೆ. ಇದೇ ಮೊದಲ ಬಾರಿಗೆ ಬಾರತದ ಕಾರು ಕೂಟವೊಂದು ಜಗತ್ತಿನ ಹೆಸರುವಾಸಿ ಕಾಲ್ಚೆಂಡಿನ ಆಟಗಾರ ಲಿಯೊನೆಲ್ ಮೆಸ್ಸಿಯನ್ನು (Lionel Messi) ತನ್ನ ರಾಯಬಾರಿಯಾಗಿ ನೇಮಿಸಿಕೊಂಡಿದೆ. ಅರ‍್ಜೆಂಟೀನಾ ಮೂಲದ ಮೆಸ್ಸಿ, ಸ್ಪೇಯ್ನ್ ನಾಡಿನ ಪ್ರಮುಕ ಕಾಲ್ಚೆಂಡಿನಾಟದ ಕ್ಲಬ್ ಎಪ್.ಸಿ.ಬಾರ‍್ಸಿಲೋನಾ(FC Barcelona) ಪರವಾಗಿ ಆಡಿ ಸಾಕಶ್ಟು ಹೆಸರು ಮಾಡಿಕೊಂಡಿರುವ ಜಗತ್ತಿನ ಸಿರಿವಂತ ಆಟಗಾರರಲ್ಲೊಬ್ಬ. ಇವರನ್ನು ಸೆಳೆದು ತರಲು ಸಾಕಶ್ಟು ಹಣದ ಹೊಳೆಯನ್ನೇ ಹರಿಸಲಾಗಿದೆಯಂತೆ. ಲಿಯೊನೆಲ್ ಮೆಸ್ಸಿಯವರು ಹಾಕಿಕೊಂಡು ಪೆಂಟಾಸ್ಟಿಕೊ(Fantastico), ಮೇಡ್ ಆಪ್ ಗ್ರೇಟ್ (Made of Great) ಎಂಬ ಸೆಳೆಸಾಲುಗಳ ಬಯಲರಿಕೆಗಳು ತಿಂಗಳುಗಳಿಂದ ಟಿವಿ, ಸುದ್ದಿಹಾಳೆಗಳಲ್ಲಿ ಚುರುಕಾಗಿ ಮೂಡಿಬರುತ್ತಿವೆ.
ಇದೇ ವಾರ ಬೀದಿಗಿಳಿಯಬೇಕಿದ್ದ ಟಿಯಾಗೊ ಬಂಡಿ ಏಪ್ರಿಲ್ ಮೊದನೇಯ ವಾರಕ್ಕೆ ಮುಂದೂಡಲ್ಪಟ್ಟಿದ್ದು ಅಂದೇ ವಿವಿದ ಮಾದರಿಗಳು ಮತ್ತು ಬೆಲೆ ಹೊರಬರಲಿವೆ. ಕೆಲವರು ಹೇಳುವಂತೆ ಟಿಯಾಗೊದ ಆರಂಬಿಕ ಬೆಲೆ 3.5-4 ಲಕ್ಶ ರೂಪಾಯಿಗಳಾಗಿರಲಿದೆಯಂತೆ. ಬಿಳಿ, ನೀಲಿ ಮತ್ತು ತಾಮ್ರದ ಬಣ್ಣಗಳಲ್ಲಿ ಟಿಯಾಗೊ ಸಿಗುವುದು ಕಚಿತವಾಗಿದ್ದು ಇತರೆ 3-4 ಬಣ್ಣಗಳು ಈ ಪಟ್ಟಿಗೆ ಸೇರಿಕೊಳ್ಳಬಹುದು. ಮುಂಗಡ ಕಾಯ್ದಿರಿಸುವಿಕೆ ಮಾರ‍್ಚ್ 7ಕ್ಕೆ ಆರಂಬಗೊಂಡಿದ್ದು ಆಸಕ್ತಿಯುಳ್ಳವರು ಹತ್ತಿರದ ಟಾಟಾ ಕಾರಿನ ಮಳಿಗೆಯಲ್ಲಿ ಟಿಯಾಗೊ ನೋಡಿ, 10000 ರೂಪಾಯಿ ನೀಡಿ ಕಾಯ್ದಿರಿಸಬಹುದು.
(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, madeofgreat.tatamotors.com, intoday.in)
ಇತ್ತೀಚಿನ ಅನಿಸಿಕೆಗಳು