ಕಂದಗಲ್ಲ ಹಣಮಂತರಾಯರು – ರಂಗಬೂಮಿ ಲೋಕದ ಮೇರು ಕಲಾವಿದ

– ಪ್ರಕಾಶ ಪರ‍್ವತೀಕರ.

kh

“ಅಹಹ, ಉರುಳುರುಳು, ಕಾಲಚಕ್ರಾ ನನಗೆ ಅನುಕೂಲವಾಗಿ ಉರುಳುತ್ತಿರು. ರತ್ನ, ವಜ್ರ ವೈಡೂರ‍್ಯಾದಿಗಳನ್ನು ಒಂದು ಕಡೆಗೆ ಚಿಮ್ಮುತ್ತಾ, ಬೇರೊಂದೆಡೆಗೆ ಬೆಣಚುಕಲ್ಲುಗಳನ್ನು ತೂರುತ್ತಾ, ಒಂದು ಕಡೆಗೆ ಆನಂದದ ಹೊಗೆ ಹರಿಸುತ್ತಾ, ಮತ್ತೊಂದು ಕಡೆಗೆ ಕಣ್ಣೀರಿನ ಕಡಲನ್ನು ನಿರ‍್ಮಿಸುತ್ತಾ ಉರುಳುರುಳು ಕಾಲಚಕ್ರಾ. ಇಂದೆನೆಗೆ ಅನುಕೂಲನಾಗಿ, ತಿರುಗು, ತಿರುಗು, ಹೀಗೆ ನನ್ನ ವಂಶವ್ರುಕ್ಶದ ಅಂತ್ಯದ ವರೆಗೆ ಕಾಲಚಕ್ರದ ರಬಸದಿಂದೆನಗೆ ಸರಸ, ಅಂದು ಕಸವಾದ ಜೀವನ. ಇಂದು ರಸಮಯ ಜೀವನ. ಚಿತ್ರಾಂಗದಾ ಇಂದು ನಿನ್ನ ಸುಕ ಶರದಿ ಬತ್ತಿ, ಇಂದೆನ್ನ ಸುಕದ ಸರೋವರ ಅಮ್ರುತದಿಂದ ತುಂಬಿ ಹೊರ ಚಲ್ಲುತ್ತಿರುವುದು.” ಇದು ಚಿತ್ರಾಂಗದೆ ನಾಟಕದಲ್ಲಿಯ ಸಂಬಾಶಣೆಯ ತುಣುಕು. ಎಲಿವಾಳ ಸಿದ್ದಯ್ಯಸ್ವಾಮಿಯವರಿಂದ ಈ ಸಂಬಾಶಣೆ ಕೇಳುತ್ತಿದ್ದರೆ ಇಡೀ ನಾಟಕ ಮಂದಿರ ಕಂಪಿಸುತ್ತಿತ್ತು. ಬೋರ‍್ಗರೆವ ಜಲಪಾತದಂತೆ, ಗುಡುಗು ಮಿಂಚಿನ ದಟ್ಟ ಅನುಬವವಾಗಿ ಪ್ರೇಕ್ಶಕರಲ್ಲಿ ವಿಚಿತ್ರವಾದ ಸಂಚಲನೆ ಮೂಡುತ್ತಿತ್ತು. ಕರ‍್ನಾಟಕ ಶೇಕ್ಸಪೀಯರ್ ಎಂದು ಕ್ಯಾತರಾದ ಕಂದಗಲ್ಲ ಹಣಮಂತರಾಯರ ಲೇಕನಿಯ ವೈಶಿಶ್ಟ್ಯವೇ ಹಾಗೆ. ಉದ್ದುದ್ದಾದ ಪ್ರಾಸಬದ್ದ ಸಂಬಾಶಣೆಗಳಲ್ಲಿ ಒಂದು ಲಯ, ಗತಿ ಇರುತ್ತಿತ್ತು. ಅದರಲ್ಲಿ ಸಂಸ್ಕ್ರುತ ಬಾಶೆಯ ನಾದ ಮಾದುರ‍್ಯ, ಇಂಗ್ಲಿಶಿನ ಸನ್ನೀವೇಶ ಚತುರತೆ, ಮರಾಟಿಯ ರಂಗಗೀತೆಗಳ ರಾಗ ರಾಗಿಣಿಯರ ಮೋಹಕತೆ, ಹಾಗು ಬಂಗಾಲದ ಪದ ಪುಂಜಗಳು ಮೇಳವಿಸಿ ಅದೊಂದು ಉತ್ತಮ ರಸಪಾಕವೇ ಆಗಿರುತ್ತಿತ್ತು. ಸಂಸ್ಕ್ರುತ ಬೂಯಿಶ್ಟ ಪದಗಳನ್ನು ಉಚ್ಚರಿಸಲು ನಟರು ಕಸರತ್ತು ಮಾಡಬೇಕಾಗುತ್ತಿತ್ತು. ಆದರೆ ಇದರಲ್ಲಿ ಅವರಿಗೆ ಸಂತ್ರಪ್ತಿ, ಸಮಾದಾನ ಸಿಗುತ್ತಿತ್ತು. “ಕಾವ್ಯೇಶು ನಾಟಕ ರಮ್ಯಂ” ಎಂದು ಕವಿ ಕಾಳಿದಾಸ ಹೇಳಿದ್ದಾನೆ. ಯಾಕೆಂದರೆ ನಾಟಕ ಬಿನ್ನ ಬಿನ್ನ ಅಬಿರುಚಿಯ ಜನರಿಗೆ ಸಂತೋಶ ಕೊಡುತ್ತದೆ. ಏಕೆಂದರೆ ಇದರಲ್ಲಿ ಸಾಹಿತ್ಯ, ಸಂಗೀತ, ಅಬಿನಯ, ಶ್ರುಂಗಾರ ಹಾಗು ನವ ವಿದವಾದ ರಸಗಳು ಮೇಳೈಯಿಸುತ್ತವೆ. ಹಣಮಂತರಾಯರು ಕನ್ನಡ ಸಾಹಿತ್ಯ, ಹಳೆಗನ್ನಡದ ಗಾಡವಾದ ಅದ್ಯಯನ ಮಾಡಿದ್ದರಿಂದ ಅವರ ನಾಟಕಗಳಲ್ಲಿ ಕುಮಾರವ್ಯಾಸ ಹಾಗು ಲಕ್ಶ್ಮೀಶನ ಪ್ರಬಾವವನ್ನೂ ಕಾಣಬಹುದು.

ಶ್ರೀ ಕಂದಗಲ್ಲ ಹಣಮಂತರಾಯರು ವಿಜಾಪುರ ಜಿಲ್ಲೆಯ ಬೀಳಗಿ ತಾಲೂಕಿನ ಕಂದಗಲ್ಲಿನವರು. 1896 ಜನವರಿ 11ರಂದು ಜನಿಸಿದರು. ಕುಲಕರ‍್ಣಿ ಮನೆತನದವರಾದರೂ ಊರಿನ ಹೆಸರಿನಿಂದ ಕ್ಯಾತರಾದರು. ಬಿಜಾಪುರದ ಮಾದ್ಯಮಿಕ ಶಾಲೆಯಲ್ಲಿ ಮೆಟ್ರಿಕ್ ಪಾಸಾದರು. ನಂತರ ಪುಣೆಯ ಮಿಲಿಟ್ರಿ ಅಕೌಂಟ್ಸ್ ನಲ್ಲಿ ಕೆಲ ವರ‍್ಶ ನೌಕರಿ ಮಾಡಿದರು. ಆಗ ಮರಾಟಿ ನಾಟಕಗಳ ಉತ್ಕರ‍್ಶ ಕಾಲ, ಸಂಗೀತ ಮಾನಾಪಮಾನ, ಸೌಬದ್ರ, ಹಾಗು ಏಕಚ ಪ್ಯಾಲಾ ನಾಟಕಗಳು ಅವರಿಗೆ ಹುಚ್ಚು ಹಿಡಿಸಿದವು. ಇದೇ ಕಾಲಕ್ಕೆ ಪಾರ‍್ಸಿ, ಇಂಗ್ಲಿಶ್ ಹಾಗು ಬಂಗಾಲಿ ನಾಟಕಗಳನ್ನು ನೋಡುವ ಬಾಗ್ಯ ಒದಗಿತು. ಈ ನಾಟಕಗಳಲ್ಲಿರುವ ಹೊಸ ತಂತ್ರಗಾರಿಕೆ, ರಂಗ ಸಜ್ಜಿಕೆಗಳು ಅವರ ತಲೆಯಲ್ಲಿ ಹೊಕ್ಕು ಕಾಡಲಾರಂಬಿಸಿದವು. ನೌಕರಿಗೆ ರಾಜೀನಾಮೆ ಕೊಟ್ಟು ಊರಿಗೆ ಮರಳಿದರು. ಅವರ ಮೊದಲ ನಾಟಕ “ಸಂದ್ಯಾರಾಗ” ಈ ನಾಟಕದ ಕತೆ ಆದರಿಸಿ ವಿ. ಶಾಂತಾರಾಮರು “ಸುಬಹಕಾ ತಾರಾ” ಎಂಬ ಚಲನಚಿತ್ರ ನಿರ‍್ಮಾಣ ಮಾಡಿದರು. ಆದರೆ ಇದಕ್ಕಾಗಿ ರಾಯರಿಗೆ ಕಿಲಬು ಕಾಸು ಕೂಡ ದೊರಕಲಿಲ್ಲ. 1940 ರಲ್ಲಿ ಹುಬ್ಬಳ್ಳಿಯ ಬಾರತ ಮಿಲ್ಲಿನಲ್ಲಿ ರಾಯರ “ಬಡತನದ ಬೂತ” ನಾಟಕವು ನೂರು ದಿನ ಕಂಡಿತು. ಆಗ ನಡೆದ ಸಮಾರಂಬದಲ್ಲಿ ರಾಯರಿಗೆ “ಕರ‍್ನಾಟಕ ಕವಿ ಕೇಸರಿ” ಎಂಬ ಬಿರುದು ಕೊಡಲಾಯಿತು. ವ್ಯಂಗ್ಯವೆಂದರೆ ಈ ನಾಟಕ ಬರೆದ ಮೇಲೆ ಬಡತನದ ಬೂತ ಅವರನ್ನು ಕೊನೆಯವರೆಗೆ ಬೆನ್ನು ಹತ್ತಿತು. ನಂತರ ವೀರೇಶಿ ಬರಮಪ್ಪನವರ ವಾಣಿವಿಲಾಸ ನಾಟಕ ಕಂಪನಿಯಲ್ಲಿ ಮಾಸ್ತರಾಗಿ ಅನೇಕ ನಾಟಕಗಳನ್ನು ಬರೆದು ನಿರ‍್ದೇಶಿಸಿದರು. ಅಲ್ಲದೆ ನಟರಿಗೆ ತರಬೇತು ಕೊಟ್ಟರು. ಈ ವೇಳೆಗೆ ರಾಯರು ಕರ‍್ನಾಟಕದ ತುಂಬ ಪ್ರಸಿದ್ದರಾಗಿದ್ದರು. ಅವರು ಇಪ್ಪತ್ತೈದು ನಾಟಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪೌರಾಣಿಕ ನಾಟಕಗಳು ಹೆಚ್ಚು. ಅಕ್ಶಯಾಂಬರ, ಚಿತ್ರಾಂಗದ, ಕುರುಕ್ಶೇತ್ರ, ಕಿರಾತಾರ‍್ಜುನ ಬಾಣಸಿಗ ಬೀಮ, ಹಾಗು ಅಗ್ನಿ ಕಮಲ ಪೌರಾಣಿಕ ನಾಟಕಗಳು. ವರಪ್ರದಾನ, ಸಂದ್ಯಾರಾಗ, ಕಿತ್ತೂರ ಚನ್ನಮ್ಮ, ಐತಿಹಾಸಿಕ ನಾಟಕಗಳು. ಕೆಲವೊಂದು ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ಅವರು ಬರೆದ ಕೊನೆಯ ನಾಟಕ “ಚಂದ್ರಲಾಂಬಾ ಮಹಿಮೆ”.

ಹಣಮಂತರಾಯರ ನಾಟಕಗಳಿಂದ ಕಲಾವಿದರಿಗೆ ತಮ್ಮಲ್ಲಿ ಅಡಗಿದ್ದ ಪ್ರತಿಬೆಯನ್ನು ವ್ಯಕ್ತಗೊಳಿಸಲು ಅವಕಾಶ ದೊರಕಿತು. ಹಂದಿಗನೂರ ಸಿದ್ರಾಮಪ್ಪನವರು, ಮಂಕಿಣಿ ಮಾನಪ್ಪನವರು, ಅದ್ರಶ್ಯಪ್ಪಾ ಮಾನ್ವಿ, ದುರ‍್ಗಾದಾಸ. ಚನ್ನಬಸವ ಕವಲಿ, ಮದ್ವರಾಜ ಉಮ್ಮರ‍್ಜಿ, ರಾಮರಾವ ಒಡೆಯರ, ಲಾಡ ಸಾಹೇಬ, ದಾನಪ್ಪಾ ಹಂದಿ ಈ ನಟರೆಲ್ಲ ಬೆಳಕಿಗೆ ಬಂದರು. ನಟಿಯರಾದ ಅಂಬುಜಮ್ಮ, ರಹಿಮಾನಮ್ಮ, ಸೋನುಬಾಯಿ ದೊಡಮನಿ, ಹಾಗು ಮರ‍್ದಾನಜಾನ ಹಾಗು ಜುಬೇದಬಾಯಿ ಸವಣೂರ ಇವರೆಲ್ಲ ಬದ್ರವಾಗಿ ರಂಗಬೂಮಿಯಲ್ಲಿ ನೆಲೆ ಕಂಡರು. ಶ್ರೀ ಮಲ್ಲಿಕಾರ‍್ಜುನ ಮನ್ಸೂರ ಹಾಗು ಬಸವರಾಜ ಮನ್ಸೂರ ಇವರ ನಾಟಕಗಳಲ್ಲಿ ಸಂಗೀತ ಸುದೆ ಹರಿಸಿದರು. ಶಾರದಾ ಸಂಗೀತ ಮಂಡಳಿ, ಗಜಾನನ ನಾಟಕ ಸಂಗ, ಕಲಾ ಪ್ರಕಾಶ ನಾಟ್ಯ ಸಂಗ, ಶಂಕಕರಲಿಂಗ ಪ್ರಾಸಾದಿಕ ಮಂಟಳಿ, ಕನ್ನಡ ತಿಯೆಟ್ರಿಕಲ್ ಸಂಸ್ತೆ, ಕಲಾವರ‍್ದಕ ನಾಟ್ಯ ಸಂಗ, ಗುಬ್ಬಿ ಕಂಪನಿ, ಸಿದ್ದಲಿಂಗೇಶ್ವರ ನಾಟ್ಯ ಸಂಗ, ಬೆಳವಣಿಕಿ ಸಂಗಪ್ಪನವರ ಕಂಪನಿ ಈ ಪ್ರಸಿದ್ದ ನಾಟಕ ಕಂಪನಿಗಳು ರಾಯರ ನಾಟಕಗಳನ್ನು ಎಡಬಿಡದೇ ಪ್ರಯೋಗಿಸುತ್ತಿದ್ದವು. ಆದರೆ ಬಡತನ ಬ್ರಹ್ಮರಾಕ್ಶಸನಂತೆ ರಾಯರ ಬೆನ್ನು ಹತ್ತಿತ್ತು, ಆರ‍್ತಿಕವಾಗಿ ತೊಂದರೆಯಾಗಿರುವುದಲ್ಲದೇ ಆರೋಗ್ಯ ಕೈ ಕೊಡುತ್ತಿತ್ತು. ಈ ವೇಳೆಯಲ್ಲಿ ಸುಳ್ಳಗ್ರಾಮದ ಜಹಗೀರದಾರರು, (ಇವರಿಗೆ ಜನ ಪ್ರೀತಿಯಿಂದ ದಣಿ ಎಂದೇ ಕರೆಯುತ್ತಿದ್ದರು.) ರಾಯರಿಗೆ ಕಿತ್ತೂರ ಚನ್ನಮ್ಮ ನಾಟಕ ಬರೆಯಲು ಪ್ರೇರೇಪಿಸಿದರಲ್ಲದೆ, ರಾಯರ ಕೊನೆಯ ಕಾಲದಲ್ಲಿ ಸಾಕಶ್ಟು ಹಣಸಹಾಯ ಮಾಡಿದರು. ಅವರ ಪಾಲನೆ ಪೋಶಣೆ ಮಾಡುವ ವ್ಯವಸ್ತೆ ಕೂಡ ಮಾಡಿದರು. ಈ ಜಹಗೀರದಾರರು ರಸಿಕರು, ಕಲೆಯಲ್ಲಿ ಆಸಕ್ತಿವುಳ್ಳವರು. ಅವರದೇ ಆದ ನಾಟಕ ಕಂಪನಿ ಇತ್ತು. ಆದರೆ ಕಿತ್ತೂರ ಚೆನ್ನಮ್ಮ ನಾಟಕ ಪ್ರದರ‍್ಶನ ನೋಡುವ ಬಾಗ್ಯ ಹಣಮಂತರಾಯರಿಗೆ ಇರಲಿಲ್ಲ. ಹನ್ನೆರಡು ದಿನ ಮುಂಚಿತವಾಗಿ ತಾ-13-9-1966ರಂದು ವಿದಿವಶರಾದರು.

ಅವರ ಪೌರಾಣಿಕ ಪ್ರಜ್ನೆ, ಐತಿಹಾಸಿಕ ಪ್ರಜ್ನೆ, ಸಮಕಾಲೀನ ವಿಶಯಗಳಿಗೆ ಸ್ಪಂದಿಸುವ ಅವರ ಆಶಯನ್ನು ಮೆಚ್ಚಲೇ ಬೇಕಾಗುತ್ತದೆ. ಕುರುಕ್ಶೇತ್ರದಲ್ಲಿ ನಾಟಕದಲ್ಲಿ ರಾಯರಿಗೆ ಅಸ್ಪ್ರಶ್ಯರಿಗೆ ಇದ್ದ ಕಳಕಳಿ ಎದ್ದು ಕಣುತ್ತದೆ. ಜಾತ್ಯಾತೀತ ಹಾಗು ಸಮಾನತೆವುಳ್ಳ ಸಮಾಜವನ್ನು ಕಟ್ಟಬೇಕೆಂಬ ಗಾಂದಿಯವರ ಕನಸನ್ನು ನಾಟಕಗಳಲ್ಲಿ ತೋರಿಸಲು ಯತ್ನಿಸುತ್ತಾರೆ. ದೇಶ ಬಕ್ತಿಯ ಬಗ್ಗೆ ಉಕ್ತಿಗಳು ನಾಟಕದಲ್ಲಿ ಸಾಕಶ್ಟು ಕಂಡುಬರುತ್ತವೆ. ಕುರುಕ್ಶೇತ್ರ ನಾಟಕದಲ್ಲಿ ಒಂದು ಪ್ರಸಂಗವಿದೆ. ಶಕುನಿಯ ಬಗ್ಗೆ ಬರತ ಕಂಡದ ಪ್ರಜೆಗಳು ತಮ್ಮ ರಾಜನ ಎದುರು ದೂರು ಹೇಳುತ್ತಾರೆ. ಶಕುನಿ ಗಾಂದಾರ ದೇಶದವನು. ಪರದೇಶದವನು. ಆತ ತನ್ನ ದೇಶದಿಂದ ಅರಿವೆಗಳನ್ನು ತಂದು ಮಾರುತ್ತಿದ್ದಾನೆ ಇದರಿಂದ ನಮ್ಮ ದೇಶದ ವ್ಯಾಪಾರಿಗಳು ನಶ್ಟ ಅನುಬವಿಸುತ್ತಿದ್ದಾರೆ. ವಿದೇಶಿ ವಸ್ತ್ರಗಳನ್ನು ಬಹಿಶ್ಕಾರ ಮಾಡಬೇಕೆಂಬುದನ್ನು ನಾಟಕದಲ್ಲಿ ಪರೋಕ್ಶವಾಗಿ ಸಾಂಕೇತಿಕವಾಗಿ ತೋರಿಸಿದ್ದಾರೆ. ಸ್ರುಜನಶೀಲರಾದ ಹಣಮಂತರಾಯರು ಪೌರಾಣಿಕ ಪಾತ್ರಗಳಿಗೆ ತಮ್ಮದೇ ಆದ ಕಲ್ಪನೆಯಿಂದ ರೆಕ್ಕೆ ಪುಕ್ಕ ಹಚ್ಚಿ ಹೊಸದನ್ನು ನಿರ‍್ಮಾಣ ಮಾಡುತ್ತಿದ್ದರು. ಅಗ್ನಿಕಮಲ ನಾಟಕ ಸೀತಾಮಾತೆಯ ಕತೆಯ ಮೇಲೆ ಆದರಿಸಿದ್ದು, ಆದರೆ ಇಲ್ಲಿಯ ಸೀತೆಯ ಪಾತ್ರವನ್ನು ಶಾಕ್ತ ಪಂತದ ದ್ರುಶ್ಟಿಕೋನದಿಂದ ನಿರ‍್ಮಿಸಲಾಗಿದೆ. ಸೀತೆಯನ್ನು ಜಗತ್ತಿನ ದಾರಣ ಶಕ್ತಿಯಂತೆ ನಾಟಕದ ಕತೆಯನ್ನು ಹೆಣೆಯಲಾಗಿದೆ.

ವರಕವಿ ಬೇಂದ್ರೆಯವರು, “ಕಂದಗಲ್ಲರ ನಾಟಕಗಳ ಇರವನ್ನೂ ಹಾಗೂ ಅರಿವನ್ನೂ ಬಲ್ಲವರಾರೆಂದರೆ, ಸಾಹಿತ್ಯವೆಂದರೇನೂ ಅರಿಯದ ಮುಗ್ದನೊಬ್ಬ, ಇಲ್ಲವೆ ಎಲ್ಲವನ್ನು ಅರಿತ ವಿದ್ವಾಂಸನೊಬ್ಬ.” ಎಂದು ಹೇಳಿದ್ದರೆ ಕುವೆಂಪುರವರು, ”ಸರಳ ರಗಳೆಯ ಬಾಶೆಯನ್ನು ರಂಗಬೂಮಿಯಲ್ಲಿ ಯಶಸ್ಸುಗೊಳಿಸಿದ ಸಾಹಸ ಹಣಮಂತರಾಯರದು.” ಎಂದು ಹೊಗಳಿದ್ದಾರೆ. ಅ.ನ.ಕ್ರು, “ಮುದ್ದಣನೆಂದೇ” ರಾಯರನ್ನು ಕರೆದಿದ್ದಾರೆ. ಕಂದಗಲ್ಲರ ನಾಟಕಗಳಲ್ಲಿ ಬರುವ ಪ್ರಾಸಬದ್ದ ಸಂಬಾಶಣೆ ಕೆಲ ವಿಮರ‍್ಶಕರಿಗೆ ಹಿಡಿಸದೆ ಅದರ ಮೌಲ್ಯಮಾಪನ ಮಾಡುವ ಗೊಡವೆಗೆ ಹೋಗಿಲ್ಲ. ಒಬ್ಬ ಹಿರಿಯ ವಿಮರ‍್ಶಕರು ಹೇಳುವಂತೆ, ಪೌರಾಣಿಕ ವ್ರುತ್ತಿ ರಂಗದ ನಾಟಕಗಳಲ್ಲಿ ಪ್ರಾಸ ಪ್ರಾದಾನ್ಯವಾಗಿರುತ್ತದೆ. ಇದು ಅಶಿಕ್ಶಿತ ಗ್ರಾಮೀಣ ನಟರ ಬಾಯಿಗೆ, ”ಸೆಲ್ಪ ಪ್ರಾಂಪ್ಟಿಂಗ್“ ವ್ಯವಸ್ತೆಯಲ್ಲಿ ಉದಯಿಸಿದ್ದು. ಅದನ್ನು ಅರ‍್ತ ಮಾಡಿಕೊಳ್ಳದೆ ಕಂದಗಲ್ಲರ ಶೈಲಿಯ ಕ್ರುತಿನಿಶ್ಟ ವಿಮರ‍್ಶೆ ಬರೆಯುವುದು ಅನುಚಿತ. ಒಂದು ಕಾಲದಲ್ಲಿ ಕಂದಗಲ್ಲರ ಸಂಬಾಶಣೆಯನ್ನು ಕಂಟಪಾಟ ಮಾಡಿ ಅನ್ನುವುದು ಉತ್ತರ ಕರ‍್ನಾಟಕ ರೈತರಲ್ಲಿ ಒಂದು ಪ್ಯಾಶನ್ ಆಗಿತ್ತು. ಕಂದಗಲ್ಲರಿಗೆ ಕರ‍್ನಾಟಕದ ಶೇಕ್ಸಪೀಯರ್ ಎಂದು ಕರೆಯಲಾಗುತ್ತಿತ್ತು. ಆದರೆ ಅವರಿಗೆ ಕರ‍್ನಾಟಕದ “ಬೆನ್ ಜಾನ್ಸನ್” ಎಂದು ಕರೆಯುವುದು ಸೂಕ್ತವೆಂದು ವಿಮರ‍್ಶಕರೊಬ್ಬರ ಅಂಬೋಣ. ತನ್ನ ಕಾಲದಲ್ಲಿ ಬೆನ್ ಜಾನ್ಸನ್ ಶೇಕ್ಸಪೀಯರನಿಗಿಂತ ಹೆಚ್ಚು ಜನಪ್ರಿಯನಾಗಿದ್ದ ಎಂಬುದು ಐತಿಹಾಸಿಕ ಸತ್ಯ. ರಂಗಬೂಮಿಯ ಅಗತ್ಯಗಳು ಬೆನ್ ಜಾನ್ಸನ್ ನಶ್ಟೇ ಕಂದಗಲ್ಲರಿಗೆ ಗೊತ್ತಿತ್ತು. ಕಂದಗಲ್ಲರ ನಾಮದಾರಣೆ ಮಾಡಿದ ರಂಗ ಮಂದಿರ ವಿಜಯಪುರದಲ್ಲಿದೆ. ರಾಯರ ಕರ‍್ಮಬೂಮಿಯಾದ ಗುಳೇದಗುಡ್ಡದಲ್ಲಿ ಬಯಲು ರಂಗಬೂಮಿಯ ನಿರ‍್ಮಾಣ ಕಾರ‍್ಯ ಅರ‍್ದಕ್ಕೆ ನಿಂತಿದೆ. ಜಾಲಿಗಿಡಗಳು ಮುಳ್ಳುಕಂಟೆಗಳು ಹುಲುಸಾಗಿ ಬೆಳೆದು ಹಂದಿಗಳ ನಿವಾಸ ಸ್ತಾನವಾಗಿದೆ. ಸಾರ‍್ವಜನಿಕರ ಶೌಚಾಲಯವಾಗಿದೆ.

(ಚಿತ್ರಸೆಲೆ: prefaze.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks