“ಇಂದು ರಶಿಯದ ಜನತೆಗೆ ನಾನು ಪರಿಚಿತನಾಗಿದ್ದೇನೆ”

– ಪ್ರಕಾಶ ಪರ‍್ವತೀಕರ.

kuldarov

ಮಿಟ್ಯಾ ಕುಲ್ಡರೋವ್ ಮನೆಗೆ ಬಂದಾಗ ರಾತ್ರಿ ಹನ್ನೆರಡು ಗಂಟೆ. ಬಾವಾವೇಶದಿಂದ ಮುಕ ಮತ್ತಿಶ್ಟು ಕೆಂಪು ಬಣ್ಣಕ್ಕೆ ತಿರುಗಿತ್ತು. ಮನೆಯೊಳಗೆ ಹೊಕ್ಕವನೆ ಆತುರಾತುರದಿಂದ ಎಲ್ಲ ಕೋಣೆಯೊಳಗೆ ಓಡಾಡಿದ. ಅವನ ತಂದೆ ತಾಯಿಗಳು ಈಗಾಗಲೇ ನಿದ್ರೆಗೆ ಶರಣಾಗಿದ್ದರು. ಆತನ ತಂಗಿ ಕಾದಂಬರಿಯೊಂದರನ್ನು ಓದುವದರಲ್ಲಿ ಮಗ್ನಳಾಗಿದ್ದಳು. ಆತನ ಸಹೋದರರು ಗಾಡವಾಗಿ ನಿದ್ದೆ ಮಾಡುತ್ತಿದ್ದರು. ಈತನ ಗಲಾಟೆಯಿಂದ ತಂದೆ ಎಚ್ಚರಾದ, ಇವನ ವರ‍್ತನೆಯಿಂದ ಅಚ್ಚರಿಗೊಂಡ. “ಇಶ್ಟು ಹೊತ್ತಿನವರೆಗೆ ಎಲ್ಲಿಗೆ ಹೋಗಿದ್ದೆ? ಏನು ಸಮಚಾರ?” ಎಂದು ಕೇಳಿದ.

“ಓಹ್, ದಯವಿಟ್ಟು ಕೇಳಬೇಡಿ. ನಾನು ಅದನ್ನು ನಿರೀಕ್ಶಿಸಿರಲಿಲ್ಲ. ನಿಜವಾಗಿಯೂ ನಾನು ನಿರೀಕ್ಶಿಸಿರಲಿಲ್ಲ. ಅದು, ಅದು ಸ್ವತಹ ನನಗೆ ನಂಬಲಾಗುತ್ತಿಲ್ಲ”

ಮಿಟ್ಯಾ ಅತ್ಯಂತ ಕುಶಿಯಿಂದ ನಗುತ್ತ ನಗುತ್ತ ಕುರ‍್ಚಿಯ ಮೇಲೆ ಕುಳಿತುಕೊಂಡ. ಹೊತ್ತುಕೊಂಡಿದ್ದ ರಜಾಯಿಯನ್ನು ಕಾಲಿನಿಂದ ದೂರ ತಳ್ಳಿ ಮಂಚದಿಂದ ಕೆಳಗೆ ಜಿಗಿದು ಸಹೋದರಿ ಕುತೂಹಲದಿಂದ ಆತನ ಬಳಿ ಬಂದಳು. ಸಹೋದರರಿಬ್ಬರು ಎಚ್ಚೆತ್ತು ಕಣ್ಣು ಬಿಟ್ಟು ನೋಡುತ್ತಿದ್ದರು.

“ಇವತ್ತು ನಿನ್ನಲ್ಲಿ ಏನೋ ಬದಲಾವಣೆ ಆಗಿದೆ. ದಿನದಂತೆ ನಿನ್ನ ವರ‍್ತನೆ ಕಾಣುತ್ತಿಲ್ಲ. ಅಸ್ವಾಬಾವಿಕವೆನಿಸುತ್ತದೆ. ಏನು ವಿಶಯ?” ಎಂದು ತಾಯಿ ಕೇಳಿದಳು.

“ಅಮ್ಮಾ, ಇಂದು ಪರಮಾನಂದವಾಗಿದೆ. ನಿನಗೆ ಗೊತ್ತೆ? ಇಂದು ರಶಿಯದ ಜನತೆಗೆ ನಾನು ಪರಿಚಿತನಾಗಿದ್ದೇನೆ. ಇಡೀ ರಶಿಯಾದ ಜನತೆಗೆ! ಈವರೆಗೆ ನಿನಗೆ ನಿನ್ನ ಮಗ ಮಿಟ್ಯಾ ಕುಲ್ಡರೋವ್ ತಾಲೂಕ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬ ಕಾರಕೂನ ಎಂದು ಗೊತ್ತಿತ್ತು. ಈಗ ರಶಿಯ ದೇಶಕ್ಕೆ ನಾನು ಪರಿಚಿತನಾಗಿದ್ದೇನೆ. ಓ ದೇವರೇ, ನೀನೆಶ್ಟು ಕ್ರುಪಾಳು”

ಮಿಟ್ಯಾ ಮೇಲೆ ಎದ್ದ. ಮತ್ತೆ ಎಲ್ಲ ಕೋಣೆಗಳಲ್ಲಿ ಓಡಾಡಿ ಏದುಸಿರು ಬಿಡುತ್ತ ಕುರ‍್ಚಿಯ ಮೇಲೆ ಬಂದು ಕುಳಿತ.

“ಸ್ವಲ್ಪ ವಿವೇಕತನದಿಂದ ವರ‍್ತಿಸು. ಏನು ವಿಶಯ? ನಮಗೆ ವಿವರಿಸಿ ಹೇಳು”

“ನೀವು ಕಾಡು ಪ್ರಾಣಿಗಳಂತೆ ಬದುಕುತ್ತಿದ್ದೀರಿ. ನೀವು ಅಸಂಸ್ಕ್ರುತರು. ನೀವು ವರ‍್ತಮಾನ ಪತ್ರಿಕೆಯನ್ನು ಓದುವುದಿಲ್ಲ. ಅದರಲ್ಲಿ ಪ್ರಕಟವಾದ ವಿಶಯಗಳನ್ನ ಓದುವ ಗೋಜಿಗೂ ಹೋಗುವದಿಲ್ಲ. ಪತ್ರಿಕೆಯಲ್ಲಿ ಎಶ್ಟೊಂದು ಕುತೂಹಲಕಾರಿ ಸಂಗತಿಗಳು, ಅಪರೂಪದ ಮಾಹಿತಿಗಳು ಇರುತ್ತವೆ. ಇದರ ಬಗ್ಗೆ ನಿಮಗೆ ಪರಿಜ್ನಾನವೇ ಇಲ್ಲ. ಜಗತ್ತಿನ ಯಾವುದೆ ಮೂಲೆಯಲ್ಲಿ ಏನೇ ಸಂಬವಿಸಿದರೂ ಕ್ಶಣಾರ‍್ದದಲ್ಲಿ ಪ್ರಪಂಚಕ್ಕೆ ಅದು ತಲುಪುತ್ತದೆ. ಯಾವುದೂ ರಹಸ್ಯವಾಗಿ ಉಳಿಯುದಿಲ್ಲ. ಅಯ್ಯೊ ದೇವರೆ ಇಂದು ನನ್ನಶ್ಟು ಸಂತೋಶವಾಗಿರುವವರು ಬಹುಶಹ ಯಾರೂ ಇರಲಾರರು.ನಿಮಗೆ ಗೊತ್ತೆ? ಪ್ರಕ್ಯಾತ ಮಹನೀಯರ ಹೆಸರಗಳು ಮಾತ್ರ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ. ಆದರೆ ಈ ಜನರೆಲ್ಲ ಹೊರಟು ಹೋಗಿದ್ದಾರೆ. ಈಗ ನನ್ನ ಹೆಸರು ಪ್ರಕಟವಾಗಿದೆ”

“ಅಂದರೆ ಅವರೆಲ್ಲ ಎಲ್ಲಿ ಹೋದರು? ನಿನ್ನ ಮಾತಿನ ಅರ‍್ತವನ್ನು ನಮಗೆ ಬಿಡಿಸಿ ಹೇಳು”. ಆತಂಕಗೊಂಡು, ತಂದೆಯ ಮುಕ ಬಿಳಿಚುಗೊಂಡಿತ್ತು. ಅಮ್ಮ ಶಿಲುಬೆ ಮುದ್ರೆಯನ್ನು ಕಣ್ಣಿಗೆ ಹಣೆಗೆ ಹಚ್ಚಿ ನಂತರ ಚುಂಬಿಸಿದಳು. ಎದುರಿಗೆ ಇದ್ದ ದೇವದೂತನ ಬಾವಚಿತ್ರಕ್ಕೆ ನಮಸ್ಕರಿಸಿದಳು. ನಿದ್ರೆಯಿಂದ ಎಚ್ಚೆತ್ತ ಆತನ ತಮ್ಮಂದಿರು ಆತನನ್ನು ಸುತ್ತುವರೆದಿದ್ದರು.

“ನನ್ನ ಹೆಸರು ಪತ್ರಿಕೆಯಲ್ಲಿ ಬಂದಿದೆ. ಇನ್ನು ಮೇಲೆ ರಶಿಯಾದಲ್ಲಿಯ ಎಲ್ಲ ಪ್ರಜೆಗಳು ನನ್ನನ್ನು ಗುರುತಿಸುತ್ತಾರೆ. ಅಮ್ಮಾ ಈ ಪತ್ರಿಕೆಯನ್ನು ಸುರಕ್ಶಿತವಾಗಿ ನಿನ್ನ ಕಡೆ ಇಟ್ಟಕೊ. ನಾವು ಇದನ್ನು ಹೆಮ್ಮೆಯಿಂದ ಆಪ್ತರಿಗೆ ತೋರಿಸಬಹುದು”

ಮಿಟ್ಯಾ ಜೇಬಿನಿಂದ ವರ‍್ತಮಾನ ಪತ್ರಿಕೆ ಹೊರತೆಗೆದು ತಂದೆಗೆ ಕೊಟ್ಟ. ತನ್ನ ಹೆಸರು ಇದ್ದಕಡೆ ಕೆಂಪು ಪೆನ್ಸಿಲ್ಲಿನಿಂದ ಗುರುತು ಮಾಡಿದ್ದನ್ನು ಹೆಮ್ಮೆಯಿಂದ ತಂದೆಗೆ ತೋರಿಸಿ ” ಓದು” ಎಂದು ಹೇಳಿದ. ತಂದೆ ಕನ್ನಡಕ ಹಾಕಿಕೊಂಡ.

“ಬೇಗನೆ ಓದು”

ತಾಯಿ ಮತ್ತೆ ಶಿಲುಬೆ ಮುದ್ರೆಯನ್ನು ಕಣ್ಣಿಗೆ ಹಾಗೂ ಹಣೆಗೆ ಹಚ್ಚಿ ಚುಂಬಿಸಿ, ನಮಸ್ಕರಿಸಿದಳು. ತಂದೆ ಗಂಟಲು ಸರಿ ಮಾಡಿಕೊಂಟು ಓದಲು ಪ್ರಾರಂಬಿಸಿದ. “29 ಡಿಸೆಂಬರ ರಾತ್ರಿ ಹನ್ನೊಂದು ಗಂಟೆಗೆ ತಾಲೂಕ ಕಚೇರಿಯ ಕಾರಕೂನನಾದ ಮಿಟ್ಯಾ ಕುಲ್ಡರೋವ್ ………”

“ನೋಡಿದಿರಾ, ಅದು ಅದು ನನ್ನ ಹೆಸರು, ಮುಂದೆ ಓದಿ”

“ತಾಲೂಕ ಕಚೇರಿಯ ಕರಕೂನನಾದ ಮಿಟ್ಯಾ ಕುಲ್ಡರೋವ್ ಅಪರ ಮದ್ಯ ಸೇವನೆ ಮಾಡಿ, ಬ್ರೊನ್ನಿಯಾ ಬೀದಿಯಲ್ಲಿ ಅಮಲೇರಿದ ಸ್ತಿತಿಯಲ್ಲಿ………”

“ಅವನು ಅವನು ನಾನೇ. ನನ್ನ ಜೊತೆ ನನ್ನ ಗೆಳೆಯ ಸೆಮ್ಯಿನ್ ಪೆಟ್ರೋವಿಚ್ ಕೂಡ ಇದ್ದ. ನೋಡಿ. ಎಶ್ಟು ಸರಿಯಾಗಿ ವರ‍್ಣನೆ ಮಾಡಿದ್ದಾರೆ ನೋಡಿ. ಅಪ್ಪಾ ನೀವು ಓದಿ. ಉಳಿದವರು ಲಕ್ಶ್ಯಗೊಟ್ಟು ಕೇಳಿ”

“ಅಮಲೇರಿದ ಸ್ತಿತಿಯಲ್ಲಿ ತೂರಾಡುತ್ತ, ಜೋಲಾಡುತ್ತ ಬರುತ್ತಿರುವಾಗ, ಮಾನಸಿಕ ನಿಯಂತ್ರಣ ಕಳೆದುಕೊಂಡು ಬೀದಿಯಲ್ಲಿ ಜಾರಿ ಬಿದ್ದ. ಅದೇ ವೇಳೆ ಎದುರಿನಿಂದ ವೇಗದಿಂದ ಬಂದ ಸಾರೋಟದ ಕುದುರೆಯ ಕಾಲಿನ ನಡುವೆ ಮಿಟ್ಯಾ ಕುಲ್ಡರೋವ ಸಿಕ್ಕಿಕೊಂಡ. ಗಾಬರಿಗೊಂಡ ಕುದುರೆ ಸಿಕ್ಕಾಪಟ್ಟೆ ವೇಗದಲ್ಲಿ ಓಡಿದಾಗ ಸಾರೋಟು ತಲೆ ಕೆಳಗಾಗಿ ಬಿದ್ದಿತು. ಅ ಸಾರೋಟಿನಲ್ಲ್ದಿ ಪಯಣಿಸುತ್ತಿದ್ದ ಊರಿನ ಪ್ರತಿಶ್ಟಿತ ವ್ಯಕ್ತಿಯಾಗಿದ್ದ ಸ್ಟಿಪನ್‍ಗೆ ಸಾಕಶ್ಟು ಗಾಯಗಳಾದವು. ಅಲ್ಲಿಯೇ ಇದ್ದ ಜನರು ಅವನನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದರು. ಮಿಟ್ಯಾ ಕುಲ್ಡರೋವ್ ಕೆಲ ಹೊತ್ತು ಅರೆ ಪ್ರಜ್ನಾ ಅವಸ್ತೆಯಲ್ಲಿದ್ದ. ಆತನನ್ನು ಪೋಲೀಸ ಟಾಣೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಯೇ ಇದ್ದ ಸರಕಾರಿ ವೈದ್ಯ ಅತನನ್ನು ತಪಾಸಣೆ ಮಾಡಿದ. ತಲೆಯ ಹಿಂದಿನ ಬಾಗದಲ್ಲಿ ಪೆಟ್ಟು ಬಿದ್ದಿತ್ತು. ಸಾರೋಟಿನ ಅಚ್ಚುದಿಂಡು ಅಂದರೆ ಶಾಪ್ಟ್ ನಿಂದ ಈ ಪೆಟ್ಟು ಬಿದ್ದಿತ್ತು”

”ಓದು ಇನ್ನೂ ಮುಂದೆ ಇದೆ”

“ಮಿಟ್ಯಾ ಕುಲ್ಡರೋವ್‍ನ ತಲೆಗೆ ಆದ ಗಾಯ ಗಂಬೀರ ಸ್ವರೂಪದ್ದಾಗಿರಲಿಲ್ಲ. ವೈದ್ಯಕೀಯ ಚಿಕಿತ್ಸೆಯನ್ನು ಗಾಯಾಳುವಿಗೆ ಕೊಡಲಾಯಿತು. ಗಾಯ ಆದ ಜಾಗದಲ್ಲಿ ಮಂಜುಗಡ್ಡೆ ಇಡಲು ಹೇಳಿದರು”

“ನೀನು ಸ್ವತಹ ಓದಿದೆಯಲ್ಲ. ಈಗ ರಶಿಯಾದ ತುಂಬ ನನ್ನ ಹೆಸರು ಪ್ರಚಾರಗೊಂಡಿದೆ.ಅದನ್ನು ಕೊಡು”

ಮಿಟ್ಯಾ ಆ ಪತ್ರಿಕೆಯನ್ನು ಕಿತ್ತುಕೊಂಡ. ಮಡಚಿ ತನ್ನ ಜೇಬಿನಲ್ಲಿ ಇಟ್ಟುಕೊಂಡ.

“ನಮ್ಮ ಓಣಿಯ ತುಂಬ ಓಡಾಡಿ ಎಲ್ಲರಿಗೆ ಈ ಪತ್ರಿಕೆಯನ್ನು ತೋರಿಸುತ್ತೇನೆ. ನನ್ನ ಗೆಳೆಯರಾದ ಇವಾನಿಟ್ಸ್ಕಿಸ್, ನತಾಶಾ, ಅನಿಸಿಂ ಇವರಿಗೆಲ್ಲಾ ತೋರಿಸಲೇಬೇಕು”

ಮಿಟ್ಯಾ ಟೊಪ್ಪಿಗೆ ಹಾಕಿಕೊಂಡ. ಅದಕ್ಕೆ ಜರಿಯ ತುರಾಯಿ ಸಿಗಿಸಿದ. ಅತ್ಯಂತ ಕುಶಿಯಿಂದ ಹಾಡುತ್ತ ಕುಣಿಯುತ್ತ ಮನೆಯಿಂದ ಹೊರಗೆ ಬಿದ್ದ.

( ಮೂಲ(ರಶ್ಯನ್) ಬರಹಗಾರ—-ಅಂಟೋನ್ ಚೇಕೋವ್ )

( ಚಿತ್ರ ಸೆಲೆ: yooniqimages.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: