ಅಲಲಲಾ ಕಂಡಾಲಾ…

– ಅಜಿತ್ ಕುಲಕರ‍್ಣಿ.

khandala

ಅಲಲಲಾ ಕಂಡಾಲಾ
ಏನದು ನಿನ್ನ ಆ
ಅಕಂಡ ಸೊಬಗಿನ ಜಾಲ

ಗಿರಿಯ ತುದಿಯಲ್ಲಿ
ಹೆಪ್ಪುಗಟ್ಟಿದ ಮೋಡ
ಮೋಡದಪ್ಪುಗೆಗೆ ಗಿರಿಯು
ತೆಪ್ಪಗಿಹುದು ನೋಡಾ

ಹಚ್ಚಹಸಿರಿನ ಹೊದಿಕೆ
ಅದಕೆ ಸೀರೆಯೇನು?
ನಡುವೆ ಹರಿವ ಜರಿಗಳದಕೆ
ನೆರಿಗೆಯೇನು?

ಬುಜಕೆ ಬುಜ ತಾಕಿಸಿ
ಗಟ್ಟಿಯಾಗಿ ಕುಳಿತಂತೆ
ಕಂಡಿಹವು ಗಿರಿಗಳು
ಜಗಜಟ್ಟಿಗಳಂತೆ

ಹೆಬ್ಬಯಕೆ ಉದಿಸಿಹುದು
ಇಬ್ಬನಿಯಾಗಲೆಂದು
ಕೊಬ್ಬಿಕಾಣುವ ಪರ‍್ವತಗಳ
ತಬ್ಬಲೆಂದು

ಅಲ್ಲಿ ಮೋಡ ನೋಡಾ
ಅದರ ಮೋಜ ನೋಡಾ
ಅದೇನು ಚಿತ್ರ!
ಅದೆಶ್ಟು ವಿಚಿತ್ರ!
ಅದು ಮೇಗ ಮಾಲೆಯೇ
ಇಲ್ಲಾ ಬೇಲೂರು ಬಾಲೆಯೇ

ಅಲೆವ ಮನವು
ನಿಂತು ಹೋಯಿತು
ಹ್ರುದಯ ಬಡಿತ
ಮರೆತು ಹೋಯಿತು
ಮಾತು ಮೌನವಾಯಿತು
ಬಾವ ದಿವ್ಯವಾಯಿತು
ಬರೆದೆ ಕಾವ್ಯವಾಯಿತು

( ಚಿತ್ರ ಸೆಲೆ: wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: