ಹಲಸಿನ ಹಣ್ಣಿನ ಮುಳಕ – ಮಳೆಗಾಲಕ್ಕೆ ಹೇಳಿಮಾಡಿಸಿದ ತಿಂಡಿ

ಸಿಂದು ನಾಗೇಶ್.

IMG_4203

ನೀವೊಂದು ಗಾದೆ ಕೇಳಿರಬಹುದು, “ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು” ಎಂದು. ಹಸಿದವರು ರುಚಿ ರುಚಿಯಾಗಿ ಏನಾದರೂ ತಿನ್ನ ಬಯಸಿದರೆ ಹಲಸಿನ ಹಣ್ಣಿಗಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ. ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ಹಪ್ಪಳ, ಬನ್ಸ್, ಹಣ್ಣೀರು(Juice), ಮಂಜುಕೆನೆ(Ice cream), ಸಿಹಿತೊಕ್ಕು(Jam), ಚಿಪ್ಸ್, ಹಲ್ವ, ಕಡುಬು, ಮುಳಕ, ಶೀರಾ, ಪಾಯಸ, ದೋಸೆ, ಇಡ್ಲಿ, ಹೋಳಿಗೆ ಅಬ್ಬಬ್ಬಾ ಹೀಗೆ ಹೇಳುತ್ತಾ ಹೋದರೆ ಹಲಸಿನ ಹಣ್ಣಿನಿಂದ ಮಾಡಬಹುದಾದ ತಿನಿಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಬಹಳಶ್ಟು ಮಂದಿಗೆ ಹಲಸು ಬರಿಯ ಹಣ್ಣಾಗಿ ಗೊತ್ತೇ ಹೊರತು ಅದರಿಂದ ಮಾಡಬಹುದಾದ ತಿನಿಸುಗಳ ಬಗ್ಗೆ ಅವರಿಗೆ ಗೊತ್ತಿಲ್ಲ. ಅದೇನೇ ಇರಲಿ, ಮಳೆಗಾಲದ ಹೊತ್ತಿಗೆ ಚಳಿಗಾಳಿಗೆ ಬಿಸಿ ಬಿಸಿಯಾಗಿ ಏನಾದರೂ ತಿನಿಸು ಮಾಡಿ ತಿನ್ನಬೇಕೆಂದು ಮನಸ್ಸು ಸದಾ ಹಂಬಲಿಸುತ್ತದೆ. ಆ ನಿಟ್ಟಿನಲ್ಲಿ ಈ ನನ್ನ ಅಡುಗೆ ಬರಹ ನಿಮಗೆ ನೆರವಾಗಬಹುದು ನೋಡಿ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ನೀರು ಬಿದ್ದೊಡನೆ ಹಲಸಿನ ಹಣ್ಣಿನ ಸಿಹಿ ತುಸು ಕಡಿಮೆಯಾಗುವುದು. ಅಂತಹ ಹೊತ್ತಿನಲ್ಲಿ ಹಲಸಿನ ಹಣ್ಣಿಗೆ ತುಸು ಸಿಹಿ ಸೇರಿಸಿ ಮಾಡಬಹುದಾದ ಒಂದು ಬಗೆಯ ಸಿಹಿತಿನಿಸು ‘ಹಲಸಿನ ಹಣ್ಣಿನ ಮುಳಕ’. ಗುಳಿಯಪ್ಪ, ಸುಟ್ಟುವು ಇದಕ್ಕಿರುವ ಇತರೆ ಕೆಲವು ಹೆಸರುಗಳು. ಮಲೆನಾಡು ಮತ್ತು ಕರುನಾಡ ಕರಾವಳಿ ಮಂದಿಗೆ ಇದು ನೆಚ್ಚಿನ ತಿನಿಸುಗಳಲ್ಲೊಂದು ಎಂದರೆ ತಪ್ಪಿಲ್ಲ. ಅದರಲ್ಲೂ ಬಕ್ಕೆ ಹಲಸಿನ ಹಣ್ಣಿನ ತೋಳೆಗಳಿಂದ ಮಾಡಿದರೆ ಮುಳಕದ ರುಚಿ ಇನ್ನಶ್ಟು ಹೆಚ್ಚುತ್ತದೆ.

ಹಲಸಿನ ಹಣ್ಣಿನ ಮುಳಕ ಮಾಡಲು ಬೇಕಾಗುವ ಸಾಮಗ್ರಿಗಳು :

* ಚೆನ್ನಾಗಿ ತುಂಡರಿಸಿದ ಹಲಸಿನ ಹಣ್ಣಿನ ತೋಳೆ – 1 ಲೋಟ
* ಅಕ್ಕಿ – 1 ಲೋಟ
* ತುರಿದ ತೆಂಗಿನ ತುರಿ – 1/4 ಲೋಟ
* ಬೆಲ್ಲ – 1/2 ಲೋಟ
* ಏಲಕ್ಕಿ
* ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ :

ಮೊದಲು ಅಕ್ಕಿಯನ್ನು ಒಂದೆರಡು ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಬೇಕು. ಬಳಿಕ ನೆನೆಸಿದ ಅಕ್ಕಿಯನ್ನು ಬಸಿದು, ತುಂಡರಿಸಿದ ಹಲಸಿನ ಹಣ್ಣಿನ ತೋಳೆ, ತೆಂಗಿನ ತುರಿ, ಏಲಕ್ಕಿ ಸೇರಿಸಿ ಚೆನ್ನಾಗಿ ರುಬ್ಬಬೇಕು. ರುಬ್ಬುವಾಗ ಹಲಸಿನ ಹಣ್ಣು ತನ್ನಲ್ಲಿರುವ ನೀರನ್ನು ಬಿಡುವುದರಿಂದ ಬೇಕಾದಶ್ಟು ನೀರನ್ನು ಮಾತ್ರ ಬೆರೆಸಿ ಹದವಾಗಿ ರುಬ್ಬಬೇಕು. ಏಕೆಂದರೆ ಹಿಟ್ಟು ತುಸು ಗಟ್ಟಿಯಾಗಿರುವಂತೆ ರುಬ್ಬಿಕೊಂಡಿರಬೇಕು. (ಇಡ್ಲಿ ಹಿಟ್ಟಿಗಿಂತಲೂ ಗಟ್ಟಿ ಇರಬೇಕು). ಬಳಿಕ ರುಬ್ಬಿದ ಹಿಟ್ಟಿಗೆ ಬೆಲ್ಲದ ಪುಡಿ ಮತ್ತು ರುಚಿಗೆ ತಕ್ಕಶ್ಟು ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಬೇಕು.

ಹೀಗೆ ರುಬ್ಬಿದ ಹಿಟ್ಟನ್ನು ಸುಮಾರು ಇಪ್ಪತ್ತು ನಿಮಿಶಗಳವರೆಗೆ ಹಾಗೆಯೇ ಬಿಟ್ಟು, ಬಳಿಕ ಬಾಣಲೆಯಲ್ಲಿ ಬಿಸಿ ಮಾಡಿದ ಎಣ್ಣೆಗೆ ಚಿಕ್ಕ ಚಿಕ್ಕ ಉಂಡೆಯಂತೆ ಮಾಡಿ ಹಿಟ್ಟನ್ನು ಬಿಡಬೇಕು. ಎಣ್ಣೆಯಲ್ಲಿ ಕರಿದ ಹಿಟ್ಟು ಕೆಂಬಣ್ಣಕ್ಕೆ ತಿರುಗುತಿದ್ದಂತೆ ಎಣ್ಣೆಯಿಂದ ಮೇಲೆತ್ತಬೇಕು. ಒಂದೆರಡು ನಿಮಿಶಗಳ ಹೊತ್ತು ಬಿಸಿಯಾರಲು ಬಿಟ್ಟರೆ ಹಲಸಿನ ಹಣ್ಣಿನ ಮುಳಕ ತಿನ್ನಲು ಸಿದ್ದ. ಅದರಲ್ಲೂ ಸ್ವಲ್ಪ ಪುದೀನ ಚಟ್ನಿಯನ್ನು ಬೆರೆಸಿ ತಿಂದರೆ ಇನ್ನಶ್ಟು ರುಚಿಯಾಗುತ್ತದೆ.

(ಚಿತ್ರ ಸೆಲೆ: ruchiruchiaduge.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: