ಜಿಮ್ನಾಸ್ಟಿಕ್ಸ್ ನ ಹೊಸಬೆಳಕು ದೀಪಾ ಕರ‍್ಮಾಕರ್

ಸುಂದರ್ ರಾಜ್.

Dipa Large-1460926114

ದೀಪಾ ಕರ‍್ಮಾಕರ್ ಅವರು ತ್ರಿಪುರ ರಾಜ್ಯದ ಅಗರ‍್ತಲಾದವರು. ಆರನೇ ವಯಸ್ಸಿನಲ್ಲಿಯೇ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿದ ಈ ಬಾಲೆ ತಾನು ದೊಡ್ಡವಳಾದ ಮೇಲೆ ದೇಶಕ್ಕೆ ಹೆಸರು ತರುವ ಕ್ರೀಡಾಪಟುವಾಗಬೇಕೆಂದು ಕನಸು ಕಟ್ಟಿಕೊಂಡಳು. ಆರು ವರ‍್ಶವಾಗಿದ್ದಾಗಲೇ ಈಕೆಗೆ ತರಬೇತಿನೀಡಿದ ಬಿಸ್ಬೇಶ್ವರ್ ನಂದಿ ಆಕೆಯ ಆಸಕ್ತಿ ಕಂಡು ಅಚ್ಚರಿಗೊಂಡರು. ದೀಪಾಳಿಗೆ ಜಿಮ್ನಾಸ್ಟಿಕ್ ತರಬೇತಿ ನೀಡಲು ಪ್ರಾರಂಬಿಸಿದರು. 2007 ರಲ್ಲಿ ಜಲಪೈರ್‍ಗುರಿಯಲ್ಲಿ ರಾಶ್ಟ್ರೀಯ ಜೂನಿಯರ್ ಚಾಂಪಿಯನ್‍ಶಿಪ್ ಗೆದ್ದು ದೀಪಾ ತಮ್ಮ ಪ್ರತಿಬೆಯನ್ನು ಹೊರಹಾಕಿದರು. 2010 ರಲ್ಲಿ ದೆಹಲಿ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಅಶೀಶ್ ಕುಮಾರ್ ಅವರು ಇತಿಹಾಸದಲ್ಲೇ ಮೊದಲ ಪದಕವನ್ನು ಜಿಮ್ನಾಸ್ಟಿಕ್ ನಲ್ಲಿ ಪಡೆದಾಗ, ತಾನೂ ಸಹ ಜಿಮ್ನಾಸ್ಟಿಕ್ ನಲ್ಲಿ ಪದಕ ಗಳಿಸಬೇಕೆಂದು ನಿರ‍್ದರಿಸಿದರು. ಇದುವರೆಗೆ ಆಕೆ ಸ್ಪರ‍್ದಿಸಿದ ಎಲ್ಲ ಸ್ಪರ‍್ದೆಗಳಲ್ಲಿ ಪದಕಗಳನ್ನು ಗಳಿಸಿದ್ದಾರೆ. ಅವರು ಗಳಿಸಿದ 77 ಪದಕಗಳಲ್ಲಿ 67 ಚಿನ್ನದ ಪದಕಗಳಾಗಿವೆ. ಅದರಲ್ಲಿ 2014 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಗಳಿಸಿದ ಕಂಚಿನ ಪದಕವೂ ಸೇರಿದೆ.

ಇದೀಗ 23 ವರುಶದ ದೀಪಾ ಈ ವರ‍್ಶದ ರಿಯೋ ಒಲಿಂಪಿಕ್ಸ್ ಸ್ಪರ‍್ದೆಯಲ್ಲಿ ಬಾಗವಹಿಸಿ ‘ಒಲಂಪಿಕ್ಸ್ ಜಿಮ್ನಾಸ್ಟಿಕ್ ನಲ್ಲಿ ಪೈನಲ್‍ಗೇರಿದ ಇಂಡಿಯಾದ ಮೊದಲ ಹೆಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕಾಗಿ ಅವರು ಸಾಕಶ್ಟು ತಯಾರಿ ಮಾಡಿದ್ದಾರೆ. ಕಟಿಣ ಅಬ್ಯಾಸ ಮಾಡಿರುವ ದೀಪಾ ಒಲಿಂಪಿಕ್ಸ್ ನಲ್ಲಿ ಪದಕ ಪಡೆದೇ ಪಡೆಯುತ್ತೇನೆಂದು ಪಣತೊಟ್ಟಿದ್ದಾರೆ. ದೀಪಾ ಈಗಾಗಲೇ ಏಪ್ರಿಲ್ 2016 ರಲ್ಲಿ ಒಟ್ಟು 52.698 ಪಾಯಿಂಟ್ಸ್ ಗಳಿಸಿ ಒಲಿಂಪಿಕ್ಸ್ ಗೆ ಆಯ್ಕೆಯಾಗುವ ಅರ‍್ಹತೆ ಪಡೆದಿದ್ದರು. ಈಕೆಗೆ ಎಲ್ಲ ರೀತಿಯ ತರಬೇತಿಯ ನೆರವನ್ನು ‘ಗೋಸ್ಪೋರ‍್ಟ್ಸ ಪೌಂಡೇಶನ್’ ನೀಡುತ್ತಿದೆ.

ಆಗಸ್ಟ್ 14 ರಂದು ನಡೆಯುವ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಪೈನಲ್ ನಲ್ಲಿ ಪದಕ ಗೆಲ್ಲುವ ಎಲ್ಲ ಅವಕಾಶಗಳು ದೀಪಾ ಕರ‍್ಮಾಕರ್ ಗೆ ದೊರೆತಿರುವುದು ಸಂತಸದ ವಿಶಯ. ಪೈನಲ್ ಪಂದ್ಯದಲ್ಲಿ ಒಳ್ಳೆಯ ಪ್ರದರ‍್ಶನ ನೀಡಲಿ ಎಂದು ಹಾರೈಸೋಣ.

(ಚಿತ್ರ ಸೆಲೆ: ಟೆನ್‍ಸ್ಪೋರ‍್ಟ್ಸ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: