ಎಂಟಾಣೆ ಪೆಪ್ಪರುಮೆಂಟು
ಸುರೇಶ ನೀ ತಮ್ಮ ಸುನೀಲಗೆ
ಇಂದೇಕೊ ಬುಸುಗುಡುವಂತಾದೆಯೋ
ಬದುಕು ಬವಣೆಯಲ್ಲಿ, ಸಲುಗೆ ಹಾಡುವಲ್ಲಿ
ಅವನೊಟ್ಟಿಗೆ ನೀನು, ನಿನ್ನೊಟ್ಟಿಗೆ ಅವನು
ಅಪ್ಪಿ ನಡೆದರಲ್ಲೊ, ಇಂದೇಕೊ ಹೀಗೆ
ಮೂರು ವರ‍್ಶ ಕಿರಿಯವನೋ, ಮೂರು ವರ‍್ಶ
ಸುನೀಲ ನೀನಪ್ಪ, ಸುರೇಶಗೆ
ನಿನ್ನ ಎತ್ತಿ ತಿರುಗಿದ್ದು ಅವನು, ಆ ದ್ರುಶ್ಯ
ನನ್ನ ಕಣ್ಣಲ್ಲೇ ಇನ್ನೂ ಬೆಪ್ಪಾಗಿ ನಿಂತಿದೆ
ಅವನ ಮೇಲೆ ಎದೆಯೇರಿಸುವಾಗ ಆಲೋಚಿಸಪ್ಪ
ಪೆಪ್ಪರುಮೆಂಟು 1 ರೂಪಾಯಿಗೆ 8
ಅವನತ್ತಿರವಿದ್ದುದು ಎಂಟಾಣೆಯೊ
ಅದು ಯಾವ ರಸ್ತೆಯಲ್ಲಿ ದೂಳಿಡಿದಿದ್ದೋ
ಯಾರ ಸೋಕನ್ನು ಮಂತ್ರಿಸಿ ಎಸೆದಿದ್ದೋ
ಇಲ್ಲ ನಿನ್ನಪ್ಪ ಅವನಿಗೆ ಕೊಟ್ಟದ್ದೋ
ತಂದುದರಲ್ಲಿ ನಿನಗೆ ಮೂರು ಕೊಟ್ಟನಲ್ಲೋ
ಅಣ್ಣನಂಗಿಯನ್ನಲ್ಲೊ ನೀನು ದರಿಸುತ್ತಾ ಬಂದಿದ್ದು
ಅವ ದಪ್ಪನಾದರೆ ಬಾಗ್ಯ, ಅವನಿಗಾಗದ ಸ್ತಿತಿಯ ಶರ‍್ಟು
ಅದು ನಿನ್ನ ಪಾಲು, ಅವನಿಗಾಗದ ಸ್ತಿತಿಯ ಪ್ಯಾಂಟು
ಅದೂ ನಿನ್ನ ಪಾಲು! ದರಿಸಿ ನಕ್ಕರಲ್ಲೊ ಕೂಡಿ
ನನಗಿನ್ನೂ ನೆನಪಿದೆ, ನೀ ಸಂತಸದೇ ದರಿಸುತ್ತಿದ್ದೆ
ಆದರವನು ಅದು ಹರಿದಿದೆಯೆಂದು ನಿನಗೆ ಹಾಕಗೊಡಲಿಲ್ಲ
ಕೂತು ಹೊಲೆದ, ಯಾವದೋ ಮೊಂಡ ಸೂಜಿ ತುಕ್ಕೂ ಹಿಡಿದಿತ್ತು
ಅದಾವದೋ ಹಳೆಯದಾರ ಅದೆಲ್ಲಿಂದ ತಂದನೋ ಕಪ್ಪಗಿತ್ತು
ಮರಕೋತಿಗೆಂದು ಮರುಳಪ್ಪನ ತೋಟಕ್ಕೆ ಹೊಕ್ಕುತ್ತಿದ್ದಿರಿ
ನೀವಿಬ್ಬರೊಂದಿಗೆ ಇನ್ನೂ ನಿಮ್ಮ ಕೋತಿ ಸೈನ್ಯ
ಅಲ್ಲಿದ್ದವರಿಗೆಲ್ಲ ನೀನೆ ಚಿಕ್ಕವ, ಕುಳ್ಳ
ಆದರೂ ಆ ದಿನ ಪೂರ‍್ತಿ ಆಟದಲ್ಲಿ ನೀ ಸೋಲದಂತೆ
ಏನೇನೋ ಬಂಡನ್ಯಾಯ, ಏನೇನೋ ಕಿತಾಪತಿ ಮಾಡಿ
ಗೆಳೆಯರೊಂದಿಗೆ ಕಿತ್ತಾಡಿಕೊಂಡು ಅಂಗಿ ಹರುಕೊಂಡನಲ್ಲೊ
ಪಕ್ಕದಳ್ಳಿಯ ಜಾತ್ರೆಗೆ ನಾವೆಲ್ಲರೂ ನಡೆದೆವು
ಅವ ಎಲ್ಲೋ ಅಲೆಯ ಹೋಗಿದ್ದ, ನೀ ಪುಟ್ಟ ನಮ್ಮೊಂದಿಗಿದ್ದೆ
ಕಲ್ಲು ಹಾದಿಯಲ್ಲಿ ನೀ ಚಡಪಡಿಸಿ ನಡೆದರು ಅರಿವಿಲ್ಲ ನಮಗೆ
ಮದ್ಯದಲ್ಲಿ ಸಂಗ ಕೂಡಿಕೊಂಡ, ಮಂಕಾಗಿದ್ದೆ ನೀನು
“ಎಲ್ಲಿ ಬಿಟ್ಯೋ ಚಪ್ಪಲಿ” ಎಂದು ಅವ ಬರಿಗಾಲಾದ
ನೀ ಹರ‍್ಶದಿಂದ ವೇಗವಾಗಿ ನಡೆದೆ, ನೋಡಿ ನಕ್ಕವನು ಅವನೋ
ಮಂದ ಜಾಸ್ತಿ, ವಿದ್ಯೆಯೆಲ್ಲ ವಿದಾಯ
ನೀನು ಚುರುಕು, ತರಗತಿಯಲ್ಲಿ ನಿನ್ನ ಮುಂದಾಳತ್ವ
ನಿನ್ನ ಚಟುವಟಿಕೆಯನ್ನ ಹುರುಳಿ ಹುರಿದ ಹಾಗೆ ಪಟಪಟನೆ
ನನ್ನ ಬಳಿ ಉದ್ವೇಗದಿಂದ ಹೇಳಿದ
“ನಮ್ಮ ಸುರೇಶ ತರಗತಿನಾಗೆ ಬಲು ಜೋರು
ನಮ್ಮ ಮೇಸ್ಟ್ರು ಪೆಟ್ಟುಕೊಡುವಾಗಲು ಅದೇ ಹೇಳಿದರು”
ಈಗೀಗ ಇಬ್ಬರು ಸಮನಾದಿರಿ, ಅಣ್ಣ-ತಮ್ಮ
ಗುರುತೇ ಹತ್ತದಾದ ಮೇಲೆ ಹಿಂಗ್ಯಾಕೊ
ಏನೋ ತಮ್ಮನಿಗೊಂದು ಏಟು ಕೊಡಲೂ ಅರ‍್ಹನಲ್ಲವೇನೊ
ನೀನಶ್ಟು ದೊಡ್ಡವನಾದೆಯಾ, ಕೈಯ್ಯತ್ತಲೋದೆಯಲ್ಲೋ
ಹೋಗು ಗದ್ದೆಯಂಚಿನ ಹಲಸಿನ ಮರದಡಿ
ಬಿಕ್ಕಿ ಬಿಕ್ಕಿ ಅಳುತ್ತಿರುವನಂತೆ, ನೀ ತಿರುಗಿಬಿದ್ದೆಯೆಂದಲ್ಲ
ಅವಕೊಟ್ಟ ಪೆಟ್ಟು ನಿನ್ನ ಕೆನ್ನೆ ಮೇಲೆ ಬಾಸುಂಡೆ ಮೂಡಿದ್ದಕ್ಕೋ
ಒಂದಾಗಿರಪ್ಪ, ಹಾಲು-ಜೇನ ಬದುಕು, ನಗುವಿರಿ
ದೂರಾದಿರೋ ದರಿದ್ರರಾಗಿ ಪರದೇಶಿಯಂತಹ ನಡಿಗೆ, ಚಂದವೇ?
ನಿನ್ನ ಅಕ್ಕರೆ ಅವನ ನಗುವಾದಾಗ ನೀನು ತಮ್ಮ
ಅವನ ಪ್ರೀತಿ ನಿನ್ನ ಬಲವಾದರೆ ಆಗ ಅವನು ಅಣ್ಣ
ಕೂಡಿಬಾಳಿರಪ್ಪ, ಹರಿದು ಹಂಚೋಗುವ ಬದಲು ಜೊತೆಯಾಗಿ ನಿಲ್ಲಿ
ಅಣ್ಣನೆಂದರೆ ಅಪ್ಪನಂತೊ, ನಿನ್ನ ಜಾಣ್ಮೆ ಬೆಳೆಯುತಿರಲಿ
ಅವನಿಗೆ ಮೋಸಮಾಡಲಲ್ಲೊ, ನೀ ಎಂದರೆ ಅವಗೆ ಪ್ರಾಣ
ಕಳೆದ ಮೇಲೆ ಎಂತಹ ಅರಿವು ತಾನೆ ತಂದುಕೊಡುತ್ತದೆಯೇನು?
ನೀನೆ ಹೋಗಿ ಅವನನ್ನ ಕರಕೊಂಡು ಬಾರೊ, ಅದೇ ಒಲವು
ಹಾ! ನಾಳೆ ಅಜ್ಜಿಯೂರಿಗೆ ಹೋಗಬೇಕು, ಹಬ್ಬದೂಟ ಆಹಾ!
ಜೊತೆಯಾಗಿರಪ್ಪ, ಜೊತೆಯಾಗಿರಿ, ಬೇಗ ಬೇಗ ನಡೆ ಕಂದ
(ಚಿತ್ರ ಸೆಲೆ: paulkiritsis.net )
ಇತ್ತೀಚಿನ ಅನಿಸಿಕೆಗಳು