ಜೀವ ಸೀತೆ

ಪ್ರವೀಣ್  ದೇಶಪಾಂಡೆ.

ಜೀವವೆಂಬ ಸೀತೆ
ಆತ್ಮಾ ರಾಮನ ಅರ‍್ದಾಂಗಿ,
ಲೋಕವನಾಳಿಯೂ
ಪರಿತ್ಯಕ್ತೆ,
ನಾರ‍್ಮಡಿಯಲೂ ನೀಳ್ನಗೆ
ನಗುತ ನಡೆದಳು ನಾಡೆಂಬ ಕಾಡಿಗೆ

ದಶರತನ ಸಾರತಿಯಾಗಬೇಕಾದವಳು
ಮರೀಚಿಕೆ ಮಾಯೆಯ ಬೆನ್ನತ್ತಿ
ದಶಾನನನ ಸೇರಿದಂತೆ,
ಅಶ್ಟೈಶ್ವರ‍್ಯದ ಲಂಕೆಯ
ಅಶೋಕವನದಲ್ಲೂ
ಶೋಕತುಂಬಿದ ವನಿತೆ

ಜಗದ ಜೀವ
ರಾಮನಿಲ್ಲದ ಸೀತೆ
ಪಡೆದಳು ಹನುಮನೆಂಬ ಗುರುವ
ಸ್ವಾಮಿಯ ಕುರುಹ ತೋರಿದವ
ಮರಳಿ ರಾಮನಪ್ಪಿಕೊಳ್ಳಲು
ಅಗ್ನಿಪರೀಕ್ಶೆ,
ಜಗದ ಕಣ್ಣಿಗೆ ಜೀವಶಿಕ್ಶೆ

ರಾಮರಾಜ್ಯದಲೂ ಅವಳಿಗಪವಾದ
ರಾವಣನೆತ್ತಿ ಒಯ್ದದ್ದು
ಸೀತೆಯ ಪ್ರಮಾದ!
ಮತ್ತೆ ಹೊರಟಳದೇ ಕಾಡಿಗೆ
ಜ್ನಾನ ಬಕುತಿ ಎಂಬೆರೆಡು
ಮಕ್ಕಳ ಹೆರಿಗೆ,
ಕೋದಂಡನ ಸೋಲಿಸಿದ
ಸೀತೆ ಹೆತ್ತ ಮಕ್ಕಳು,
ಅವಳ ಸೆಡವು ತೀರಿತು
ಇನ್ನವಳು ಬಿಕ್ಕಳು

ಮಣ್ಣಿನ ಮಗಳು ಮತ್ತೆ
ಸೇರಿದ್ದು ಮಣ್ಣಿಗೇ,
ಬೂಮಿ ಬಾಯಿತೆರೆದು
ನುಂಗಿತು ರಾಮನೆದುರಿಗೇ

ಹುಟ್ಟಿ ಇಶ್ಟು ಕಶ್ಟಪಟ್ಟ ಜೀವ
ಜನಿಸಿದ್ದು ಯಾಕೆ?
ಸೀತೆ, ಎನಗೆತನಗೆಂಬ ಎಲ್ಲರನು ಬಿಟ್ಟು ರಾಮನ ವರಿಸಿದ್ಯಾಕೆ?
ಎಂತ ಕತೆ, ಏನು ವ್ಯತೆ?
ಆಕೆ
ಎಲ್ಲರ ನಡುವಿದ್ದೂ
ಯಾರ ಕೈಗೂ ಸಿಗದ
ಜೀವನ್ಮುಕ್ತೆ

(ಚಿತ್ರಸೆಲೆpinterest.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks