“ಆಹಾರ ನೀಡುವುದಕ್ಕಿಂತ, ಆಹಾರ ಸಂಪಾದಿಸುವ ದಾರಿಯನ್ನು ತೋರಿಸಿಕೊಡುವುದು ಸೂಕ್ತ”

– ಸುಂದರ್ ರಾಜ್.

Jesus-Healing-begger

ಏಸು ಸ್ವಾಮಿ ತನ್ನ ಸರಳತೆಯಿಂದ, ನಿಶ್ಕಾಮ ಕೆಲಸದಿಂದ ಜನಸಾಮಾನ್ಯರ ಪ್ರಬುವಾಗಿ ಹೆಸರು ಗಳಿಸಿದವರು. ಸತ್ಯಕ್ಕಾಗಿ ಬಲಿದಾನ ನೀಡಿದವರು. ಬಡವರ ಬಗ್ಗೆ ಅವರಿಗಿದ್ದ ಪ್ರೀತಿ, ಸರಳವಾದ ಉಪದೇಶ ಹೆಚ್ಚು ಜನ ಅವರತ್ತ ಆಕರ‍್ಶಿತರಾಗಲು ಕಾರಣವಾಗಿ ಅವರೊಬ್ಬ ಯುಗಪುರುಶರಾಗಲು ಸಾದ್ಯವಾಯಿತು.

ಒಮ್ಮೆ ಏಸುಕ್ರಿಸ್ತನ ಬಳಿ ಒಬ್ಬ ಬಡ ಬಿಕ್ಶುಕ ಬಿಕ್ಶೆಗಾಗಿ ಬಂದ. ಆತನಿಗೆ ಹಸಿವಾಗಿದ್ದದ್ದರಿಂದ ಏನಾದರೂ ಆಹಾರ ಸಿಗಬಹುದೆಂಬ ಬರವಸೆ ಅವನಿಗಿತ್ತು. ಆಗ ಏಸುಸ್ವಾಮಿ ಒಂದು ಕೊಳದ ಬಳಿ ಕುಳಿತು ನೀರನ್ನೇ ತದೇಕ ಚಿತ್ತದಿಂದ ನೋಡುತ್ತ, ಅದರಲ್ಲೇಳುವ ಅಲೆಗಳನ್ನು ಆಸ್ವಾದಿಸುತ್ತಿದ್ದರು. ಬಡ ಬಿಕ್ಶುಕ ಹಸಿವಿನಿಂದ ಆಹಾರ ನೀಡಬೇಕೆಂದು ಯಾಚಿಸಿದ್ದನ್ನು ಕೇಳಿ, ಆ ಬಡವನಿಗೆ ಸಹಾಯ ಮಾಡಲು ನಿರ‍್ದರಿಸಿ, ಅಲ್ಲಿಯೇ ಇದ್ದ ಮೀನಿನ ಗಾಳವನ್ನು ಬಿಕ್ಶುಕನ ಕೈಗಿತ್ತು, ಅದನ್ನು ನೀರಿನಲ್ಲಿ ಮುಳುಗಿಸಲು ಹೇಳಿದರು ಮತ್ತು ಗಾಳಕ್ಕೆ ಮೀನು ಸಿಕ್ಕ ಕೂಡಲೇ ಅದನ್ನು ಮೇಲೆಳೆಯುವಂತೆ ನಿರ‍್ದೇಶಿಸಿದರು.

ಆಹಾರ ಯಾಚನಗೆ ಬಂದವನಿಗೆ ಕೆಲಸ ಮಾಡಲು ತಿಳಿಸಿದ್ದು ಬಿಕ್ಶುಕನಿಗೆ ಬೇಸರ ತರಿಸಿದರೂ ಕೂಡ, ಏಸುವಿನ ಆಜ್ನೆಯನ್ನು ಚಾಚೂ ತಪ್ಪದೆ ಪಾಲಿಸಿದ. ಕೆಲ ಸಮಯದ ನಂತರ ಗಾಳಕ್ಕೆ ಮೀನು ಸಿಕ್ಕಾಗ ಅದನ್ನೆಳೆದು ಅಲ್ಲಿಯೇ ಇದ್ದ ಬುಟ್ಟಿಯಲ್ಲಿ ಹಾಕಿದ. ಹೀಗೇ ನಾಲ್ಕಾರು ಮೀನುಗಳನ್ನು ಹಿಡಿದಾಗ ಏಸುಕ್ರಿಸ್ತ ಹೇಳಿದರು, ‘ನೋಡು, ಈ ಮೀನುಗಳಿಂದ ನಿನ್ನ ಹಸಿವನ್ನು ನೀಗಿಸಿಕೋ. ಇದರೊಂದಿಗೆ ಈ ಗಾಳವನ್ನೂ ನೀನೇ ಇಟ್ಟುಕೋ. ಅದರಿಂದ ಮೀನು ಹಿಡಿಯುವುದು ಹೇಗೆಂದು ನಿನಗಾಗಲೇ ತಿಳಿದಿದೆ. ಇದರಿಂದ ಪ್ರತಿನಿತ್ಯ ಮೀನು ಹಿಡಿದು ನಿನ್ನ ಜೀವನ ಸಾಗಿಸು. ಯಾರೊಬ್ಬರನ್ನೂ ಯಾಚಿಸಿ, ನಿನ್ನ ಆತ್ಮಗೌರವವನ್ನು ಬಲಿಕೊಡಬೇಡ’ ಎಂದು ಉಪದೇಶಿಸಿದರು.

ಇದು ಆ ಬಿಕ್ಶುಕನ ಮನಸ್ಸಿನ ಮೇಲೆ ಅದೆಶ್ಟು ಪರಿಣಾಮ ಬೀರಿತೆಂದರೆ, ಅಂದಿನಿಂದ ಆತ ಮೀನು ಹಿಡಿಯುವ ಕಾಯಕವನ್ನು ಕೈಗೊಂಡು, ತನ್ನ ಜೀವನವನ್ನು ರೂಪಿಸಿಕೊಂಡ ಮತ್ತು ಏಸುವಿನ ಶಿಶ್ಯನಾಗಿ ತನ್ನ ಜೀವನ ಸಾರ‍್ತಕ ಪಡಿಸಿಕೊಂಡ. ಅದಕ್ಕೇ ಹೇಳುವುದು “ಆಹಾರ ನೀಡುವುದಕ್ಕಿಂತ, ಆಹಾರ ಸಂಪಾದಿಸುವ ದಾರಿಯನ್ನು ತೋರಿಸಿಕೊಡುವುದು ಸೂಕ್ತ” ಎಂದು.

( ಚಿತ್ರ ಸೆಲೆ: tes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: