ಸಹ ಪ್ರಯಾಣಿಕ

 ಕೆ.ವಿ.ಶಶಿದರ.

bus

“ಯು ಇಡಿಯಟ್….” ಎನ್ನುತ್ತಾ ಲಲನಾಮಣಿ ತನ್ನ ಸಹ ಪ್ರಯಾಣಿಕನ ಕೆನ್ನೆಗೆ ‘ಚಟೀರ‍್’ ಎಂದು ಬಾರಿಸಿದ್ದಳು. ಏನಾಗುತ್ತಿದೆ ಎಂದು ತಿಳಿಯುವಶ್ಟರಲ್ಲಿ ಆ ಲಲನಾಮಣಿಯ ಹಿಂದಿನ ಸೀಟಿನಲ್ಲಿದ್ದ ಯುವಕ, ಆ ಸಹ ಪ್ರಯಾಣಿಕನ ಮುಕಕ್ಕೆ ಪಂಚ್ ನೀಡಿದ್ದ. ಸಹ ಪ್ರಯಾಣಿಕ ತನ್ನ ಕಾಲನ್ನು ಅವನ ಕಾಲಿಂದ ಸವರಿದ್ದನ್ನು ಬಿಡಿಸಿ ಬಿಡಿಸಿ ನಾಚಿಕೆಯಿಂದ ಉಲಿದಳು ಲಲನಾಮಣಿ.

ನಿಶ್ಯಬ್ದವಾಗಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಗುಜುಗುಜು. ಬಸ್ಸಿನ ಚಾಲಕ ಕೂಡಲೇ ದೀಪವನ್ನು ಹಾಕಿ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ, ‘ಆಳಿಗೊಂದು ಕಲ್ಲು’ ಎನ್ನುವಂತೆ ಆ ಸಹ ಪ್ರಯಾಣಿಕನ ಹಿಂದೆ ಮುಂದೆ ಇದ್ದವರೆಲ್ಲಾ ತಮ್ಮ ಕೈ ರುಚಿ ತೋರಿಸಿದ್ದರು. ಸಹ ಪ್ರಯಾಣಿಕ ಹೈರಾಣಾದ. ಆತನಿಗೆ ಮಾತನಾಡಲೂ ಸಹ ಆಗದಂತಾಗಿತ್ತು.

ಬಸ್ಸಿನಲ್ಲಿದ್ದವರೆಲ್ಲಾ ತಲೆಗೊಂದು ಸಲಹೆ ಹರಿಯಬಿಟ್ಟರು. ಒಬ್ಬರು ಮುಪ್ಪಿನ ವಯಸ್ಸಾದರೂ ಇನ್ನೂ ಚಟ ಎಂದರು. ಕಾಲಿಗೆ ಹಿಗ್ಗಾಮುಗ್ಗಾ ಬಾರಿಸಿ ಎಂದರು. ಕಾಲು ಮುರಿದು ಕೈಗೆ ಕೊಡಿ ಎಂದರು. ಬಸ್ಸಿನಿಂದ ಹೊರಹಾಕಿ ಎಂದರು. ಬಸ್ಸಿನ ಹಿಂಬದಿಯ ಸೀಟಿನಲ್ಲಿದ್ದ ಇಬ್ಬರು ದಾಂಡಿಗರು ಎದ್ದು ನೇರ ಆ ಸಹಪ್ರಯಾಣಿಕನ ಹತ್ತಿರ ಬಂದು ಅನಾಮತ್ತಾಗಿ ಸೀಟಿನಿಂದ ಅವರನ್ನು ಮೇಲೆತ್ತಿದರು. ಎತ್ತುವ ರಬಸಕ್ಕೆ ಆತ ಹೊದ್ದಿದ್ದ ಶಾಲು ಜಾರಿ ಕೆಳಗೆ ಬಿತ್ತು.

ಸ್ವಾದೀನವಿಲ್ಲದ, ಪೋಲಿಯೋ ಪೀಡಿತ ಎರಡೂ ಕಾಲುಗಳು ಜೋತಾಡುತ್ತಿದ್ದವು.

( ಚಿತ್ರ ಸೆಲೆ: stockphotos.ro )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: