ತೇಜಸ್ವಿ ನೆನಪಿನಲ್ಲಿ

ಗಿರೀಶ್ ಬಿ. ಕುಮಾರ್.

fb_img_1473067486470

ಇಂದು ತೇಜಸ್ವಿಯವರು ಇದ್ದಿದ್ದರೆ ಅವರ ಹುಟ್ಟುಹಬ್ಬವನ್ನು ಕಾಡಿನ ಯಾವುದೋ ಮೂಲೆಯಲ್ಲಿ ಹಕ್ಕಿಗಳ ಜೊತೆಯೋ, ಮರಗಳ ಜೊತೆಯೋ ಅತವಾ ಮಂದಣ್ಣ, ಎಂಗ್ಟ, ಕರಿಯಪ್ಪ, ಮಾರ, ಪ್ಯಾರರಂತಹ ಸಾಮಾನ್ಯ ಜನರ ಜೊತೆಯೋ ಆಚರಿಸಿಕೊಳ್ಳುತ್ತಿದ್ದರು. ಬದುಕಿದ್ದ ಅಶ್ಟೂ ದಿನವೂ “ಮನುಶ್ಯ ಬದುಕಬೇಕಾಗಿದ್ದೇ ಹೀಗೆ” ಎಂದು ತೋರಿಸಿಕೊಟ್ಟವರು ಪೂಚಂತೇ. ಇವರು ಎಂದಿಗೂ ಯಾರಿಗೂ ನನ್ನ ಹಾಗೆ ಬದುಕು ಎಂದು ಹೇಳಿದವರಲ್ಲ ಬದಲಿಗೆ ಬದುಕಿ ತೋರಿಸಿದವರು. ತೇಜಸ್ವಿಯವರು ಅವರ ಬರಹದಲ್ಲೂ ಯಾವುದೇ ಸಿದ್ದಾಂತಗಳನ್ನು ಇಟ್ಟುಕೊಳ್ಳದೆ ಬರೆದು ಹೆಚ್ಚು ಜನರನ್ನು ತಲುಪಿದಂತಹ “ಹೊಮೋಸೆಪಿಯನ್ ವರ‍್ಗದ ಅಪೂರ‍್ವ ಸ್ವೆಸಿಮನ್” ಎಂದರೆ ತಪ್ಪಾಗಲಾರದು.

ಅವರ ಅಬಿಮಾನಿಗಳಾದ ನಾವು ಅವರ ವಿಚಾರಗಳನ್ನು ಹೆಚ್ಚು ತಿಳಿದುಕೊಂಡು ಇತರರಿಗೆ ತಲುಪಿಸುವುದರ ಮೂಲಕ, ಅವರ ಸಾಹಿತ್ಯವನ್ನು ಹೆಚ್ಚು ಓದುವುದರ ಮೂಲಕ ಅವರ ಹುಟ್ಟುಹಬ್ಬ ಆಚರಿಸಬೇಕಿದೆ. ‘ಓದುಗರನ್ನು ಗೆಲ್ಲಬೇಕು ಪ್ರಶಸ್ತಿಯನ್ನಲ್ಲ’ ಎಂದು ಹೇಳುತ್ತ ಕೊನೆಗೂ ಅವರು ಲಕ್ಶಾಂತರ ಓದುಗರ ಮನಸ್ಸನ್ನು ಗೆದ್ದುಬಿಟ್ಟರು. ತೇಜಸ್ವಿಯವರ ಬರಹ ಮತ್ತು ಜೀವನ ದ್ರುಶ್ಟಿಯಿಂದ ಸ್ಪೂರ‍್ತಿ ಪಡೆದ ಎಶ್ಟೊ ಜನರು ಇಂದು ಸಮಾಜದಲ್ಲಿ ಅವರು ತೋರಿಸಿಕೊಟ್ಟ ಹಾದಿಯಲ್ಲಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ತೇಜಸ್ವಿಯವರು ಬರೀ ಬರಹಗಾರರಶ್ಟೇ ಅಲ್ಲ, ತೇಜಸ್ವಿ ಎಂಬ ಹೆಸರು ಪರಿಸರ, ಕಾಡು, ಹೋರಾಟ, ಚಾಯಾಗ್ರಹಣ ಹೀಗೆ ಹಲವಾರು ಆಸಕ್ತಿಗಳಿಂದ ಕೂಡಿದೆ. ತೇಜಸ್ವಿಯವರು ಕೇವಲ ಅದ್ಬುತ ಕ್ರುತಿಗಳನ್ನು ಮಾತ್ರ ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿಲ್ಲ.  ರೈತ ಚಳುವಳಿ, ನಾಡು-ನುಡಿಯ ಬಗೆಗಿನ ಹೋರಾಟ, ಕಾಪಿ ಬೆಳೆಗಾರರ ಹೋರಾಟ, ಪರಿಸರ ಕಾಳಜಿ ಮತ್ತು ವನ್ಯಜೀವಿ ಚಾಯಾಗ್ರಹಣ ಸೇರಿ ಹಲವಾರು ಕ್ಶೇತ್ರಗಳ ಮೂಲಕ ನಮ್ಮ ನಾಡಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

img-20160821-wa0013

ಲೋಹಿಯಾರ ತತ್ವಚಿಂತನೆ, ಕುವೆಂಪುರವರ ಕಲಾಸ್ರುಶ್ಟಿ, ಕಾರಂತರ ಜೀವನ ದ್ರುಶ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆಯಿಂದ ತೇಜಸ್ವಿಯವರು ಪ್ರಬಾವಿತರಾಗಿದ್ದರು ಎಂಬುದು ನಮಗೆ ತಿಳಿದಿರುವ ವಿಚಾರ. ಹೀಗಾಗಿ ನಾವು ತೇಜಸ್ವಿಯವರನ್ನು ಅರಿತರೆ ಕುವೆಂಪು, ಲೋಹಿಯಾ ಮತ್ತು ಕಾರಂತರನ್ನು ಅರಿತಂತೆಯೇ ಸರಿ. ರಾಜಕೀಯ ಮತ್ತು ಅದಿಕಾರಶಾಹಿ ವ್ಯವಸ್ತೆಯಿಂದ ದೂರವಿದ್ದ ತೇಜಸ್ವಿಯವರು ತಮ್ಮ ಹಲವಾರು ಲೇಕನಗಳ ಮೂಲಕ ರಾಜಕಾರಣಿಗಳಿಗೆ, ಅದಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು ಇಂದಿಗೆ ಇತಿಹಾಸ. ನಾಡು-ನುಡಿಯ ಬಗ್ಗೆ ಕನ್ನಡಿಗರಾಗಿ ಇತರರಿಗೆ ಹೆಚ್ಚು ಅರಿವು ಮೂಡಿಸಬೇಕಾಗಿರುವ ನಾವು ತೇಜಸ್ವಿಯವರ ವಿಚಾರಗಳನ್ನು ಹೆಚ್ಚು ತಿಳಿದುಕೊಳ್ಳುವುದು ಅಗತ್ಯ. “ಮುಕ್ಯ ವಿಚಾರ ಬಿಟ್ಟು ಅಡ್ಡದಾರಿ ತುಳಿಯಬೇಡಿ” ಎಂದು ಯುವಕರನ್ನು ಎಚ್ಚರಿಸುತ್ತ ತೇಜಸ್ವಿಯವರು ಬದುಕಿದ ರೀತಿಯನ್ನು ಅರಿತು ನಾವು ಬದುಕಬೇಕಿದೆ.

ತೇಜಸ್ವಿಯವರ ಸಾಹಿತ್ಯದಲ್ಲಿ ಸಾಮಾನ್ಯವಾಗಿ ನಾವು ಕಾಣುವ ಪರಿಸರ ಪ್ರಜ್ನೆ, ಸಾಮಾಜಿಕ ಸಮಸ್ಯೆಗಳು ಹಾಗೂ ವಿಜ್ನಾನದ ಬಗೆಗಿನ ವಿಶಯಗಳನ್ನು ಸರಳವಾಗಿ ಹಾಸ್ಯ ಮತ್ತು ಕುತೂಹಲದ ಜೊತೆಗೆ ಓದುಗರಿಗೆ ಉಣಬಡಿಸುವ ರೀತಿ ತುಂಬಾ ಚೆನ್ನಾಗಿರುತ್ತದೆ. ಪರಿಸರದ ಕತೆ, ಏರೋಪ್ಲೇನ್ ಚಿಟ್ಟೆ, ಕನ್ನಡ ನಾಡಿನ ಹಕ್ಕಿಗಳು ಹೀಗೆ ಹಲವು ಕ್ರುತಿಗಳು ನಮಗೆ ಪರಿಸರ, ಕಾಡು, ಪ್ರಾಣಿ, ಪಕ್ಶಿಗಳ ಬಗ್ಗೆ ತಿಳಿಸುವಲ್ಲಿ ಗೆದ್ದಿವೆ. ಹಾಗೆಯೇ ಪಶ್ಚಿಮ ಗಟ್ಟಗಳ ಕಾಡುಗಳ ಪರಿಸ್ತಿತಿ, ಅಲ್ಲಿನ ಕಾಳಸಂತೆ ಮತ್ತು ರಾಜಕೀಯವನ್ನು ತೆರೆದಿಡುವ ಕೆಲಸವನ್ನು ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಕರ‍್ವಾಲೋ ಹಾಗೂ ಮಾಯಾಲೋಕ ಕ್ರುತಿಗಳು ಮಾಡಿವೆ.

ಇಡೀ ಅಂಡಮಾನ್ ಅನ್ನು ಕಣ್ಮುಂದೆ ಚಿತ್ರಿಸಲು ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್ ಇದೆ. ಜಗತ್ತಿನ ವಿಸ್ಮಯ ತಿಳಿಸಲು ಮಿಲೇನಿಯಮ್ ಸರಣಿ, ವಿಸ್ಮಯ ಸರಣಿ ಮತ್ತು ಪ್ಲೇಯಿಂಗ್ ಸಾಸರ್ ಕ್ರುತಿಗಳಿಗೆ. ಮೈ ರೋಮಾಂಚನಗೊಳಿಸುವ ಕಾಡಿನ ಕತೆಗಳು, ರುದ್ರ ಪ್ರಯಾಗದ ನರಬಕ್ಶಕ ಮತ್ತು ಪ್ಯಾಪಿಲಾನ್ ನಂತಹ ಅದ್ಬುತ ಕ್ರುತಿಗಳಿವೆ. ಹಾಗೆಯೇ ಕಿರಗೂರಿನ ಗಯ್ಯಾಳಿಗಳು, ಅಬಚೂರಿನ ಪೋಸ್ಟಾಪೀಸು, ತಬರನ ಕತೆ, ಕುಬಿ ಮತ್ತು ಇಯಾಲ ಕತೆಗಳು ಸಿನಿಮಾಗಳಾಗಿ ಜನರ ಕಣ್ಣುಗಳ ಮುಂದೆ ಕುಣಿದಾಡುತ್ತಿವೆ.

ಈ ಮೇಲೆ ತಿಳಿಸಿದ ಹೊತ್ತಗೆಗಳು ತೇಜಸ್ವಿಯವರ ಜೀವನ ಮತ್ತು ಸಾಹಿತ್ಯದ ಬಗ್ಗೆ ತಿಳಿಸುತ್ತವೆ. ತೇಜಸ್ವಿಯವರ ವಿಚಾರಗಳನ್ನು ತಿಳಿಯಲು “ಹೊಸ ವಿಚಾರಗಳು” ಹೊತ್ತಗೆ ಬಹುಮುಕ್ಯವಾದದ್ದು. ತೇಜಸ್ವಿಯವರ ಹೋರಾಟಗಳು, ಸಂದರ‍್ಶನಗಳು ಮತ್ತು ಲೇಕನಗಳ ಸಂಗ್ರಹವೇ “ಹೊಸ ವಿಚಾರಗಳು”. ಇದು ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ ಹೊತ್ತಗೆ.
ತೇಜಸ್ವಿಯವರು ಬರೆದಿರುವ ಎಲ್ಲಾ ಹೊತ್ತಗೆಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

(ಚಿತ್ರಸೆಲೆ: karavenalnudi.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: