ಗಣಪನನ್ನು ಹುಡುಕುವ ಜೋಕುಮಾರ : ಜನಪದ ಆಚರಣೆಯ ಕುರುಹು
ನಮ್ಮ ಬೇಸಾಯ ಪರಂಪರೆಯಲ್ಲಿ ಮಳೆದೇವರೆಂದು ಕರೆಸಿಕೊಳ್ಳುವ ಜೋಕುಮಾರ ಸಮ್ರುದ್ದಿಯ ಸಂಕೇತವಾಗಿದ್ದಾನೆ. ಸ್ರುಶ್ಟಿಯ ಮೂಲ, ಪುರುಶ ಅಂಗ ರೂಪದ ಜೋಕುಮಾರನನ್ನು ಕುಂಬಾರ ತಯಾರಿಸಿಕೊಡುತ್ತಾನೆ. ಬೆತ್ತದ ಬುಟ್ಟಿಯಲ್ಲಿ ಬೇವಿನ ತಪ್ಪಲ ಮದ್ಯದಲ್ಲಿ ಅಲಂಕ್ರುತನಾದ ಜೋಕುಮಾರನನ್ನು ಚಿಕ್ಕ ಮಕ್ಕಳು ನೋಡಬಾರದೆಂದು ದೂರ ಸರಿಸುತ್ತಾರೆ. ಜೋಕುಮಾರನ ಬಾಯಿಗೆ ಬೆಣ್ಣೆ ಹಚ್ಚಿರುತ್ತಾರೆ. ಬಾರಿಕೇರ ತಾಯಂದಿರು ಮನೆ ಮನೆಗೆ ಹೊತ್ತು ತರುತ್ತಾರೆ. ಬಕ್ತರು ಮೊರದಲ್ಲಿ ಉಪ್ಪು ,ಮೆಣಸಿನಕಾಯಿ, ಜೋಳ ಮತ್ತು ರೊಟ್ಟಿ ಕೊಟ್ಟು ಗೌರವಿಸುತ್ತಾರೆ. ಅಂಬಲಿ ಪ್ರಸಾದವನ್ನು ಔಡಲ ಎಲೆಯಲ್ಲಿ ನೀಡುತ್ತಾರೆ. ಜೊತೆಗೆ ಅಂಗಾರವನ್ನು(ಬೂದಿ) ನೀಡುತ್ತಾರೆ. ಅಂಗಾರವನ್ನು ಬಿತ್ತುವ ಬೀಜದಲ್ಲಿಯೂ, ಅಂಬಲಿ ಪ್ರಸಾದವನ್ನು ಹೊಲದಲ್ಲಿಯೂ ಬೆರಸಿ ಸಮ್ರುದ್ದಿಗಾಗಿ ಬೇಡಿಕೊಳ್ಳುತ್ತಾರೆ.
ರೈತರ ಪರವಾಗಿ ಹೋರಾಡಿದ, ತಾನೇ ರೈತನಾಗಿದ್ದ ಗಣಪ ಉಳ್ಳ ಬಕ್ತರ ಮನೆ ಊಟಕ್ಕೆ ಮಾರುಹೊಗಿ ಬೋಗ ಸಂಸ್ಕ್ರುತಿಯ ಪ್ರತೀಕವಾಗುತ್ತಾನೆ. ದುಡಿವ ಪಕ್ಶದಿಂದ ಕುಳಿತು ಉಣ್ಣುವ ಪಕ್ಶಕ್ಕೆ ವರ‍್ಗಾವಣೆಗೊಳ್ಳುತ್ತಾನೆ. ಆಗ ರೈತ ಮುಕಂಡನಾದ ಜೋಕುಮಾರ ಗಣಪನ ಮೇಲೆ ಸಿಟ್ಟಿಗೆದ್ದು ಉಳ್ಳವರ ಮನೆಯಲ್ಲಿ ಹುಡುಕುತ್ತಾನೆ. ಉಳ್ಳವರು ಗಣಪನನ್ನು ಮನೆಯಲ್ಲಿರಿಸಿಕೊಂಡು ಇಲ್ಲವೆಂದು ಸುಳ್ಳು ಹೇಳುತ್ತಾರೆ. ಒಮ್ಮೊಮ್ಮೆ ಗಣಪ, ಜೋಕುಮಾರನ ಕೈಯಿಂದ ತಪ್ಪಿಸಿಕೊಳ್ಳಲು ಮಾರುವೇಶ ದರಿಸಿ ಇಲ್ಲವೇ ಮುಕವಾಡ(ಆನೆ) ದರಿಸಿ ಓಡಾಡುತ್ತಾನೆ. ಕೊನೆಗೂ ಒಮ್ಮೆ ಗಣಪ ಸಿಕ್ಕಿ ಬೀಳುತ್ತಾನೆ.
ಇಂತಹ ರೈತ ನಾಯಕ ನಮಗೆ ಬೇಡವೆಂದು ಜೋಕುಮಾರನ ಮುಕಂಡತ್ವದಲ್ಲಿ ಸೇರಿದ ಎಲ್ಲ ರೈತರು ಗಣಪನನ್ನು ಹೆಗಲಮೇಲೆ ಹೊತ್ತು ಮೆರವಣಿಗೆ ಮಾಡುತ್ತ, ಮದ್ದು ಸುಡುತ್ತ ಹೊಳೆ ಕಾಣಿಸುತ್ತಾರೆ. ಈಗಲೂ ಜೋಕುಮಾರ ಮನೆಗೆ ಬಂದಾಗ ಗಣಪನನ್ನು ಇರಿಸಿದ ಮಾಡನ್ನು ಪರದೆಯಿಂದ ಮುಚ್ಚುವ ಪದ್ದತಿ ಇದೆ. ಇದು ಅಂದಿನ ಗಟನೆಯನ್ನು ಪಳಯುಳಿಕೆಯಾಗಿಸಿಕೊಂಡ ರೂಪಕ.
ಅಡ್ಡಡ್ಡ ಮಳಿಬಂದು ದೊಡ್ಡದೊಡ್ಡಾ ಕೆರಿತುಂಬಿ
ಗೊಡ್ದುಗಳೆಲ್ಲ ಹಯನಾಗಿ ಜೋಕುಮಾರ|
ಗೊಡ್ಡುಗಳೆಲ್ಲ ಹಯನಾದಿ ಜೋಕುಮಾರ
ಗೌಡ ಶೆಡ್ಡಿಯ ಮ್ಯಾಲ ಸಿರಿಬಂದ ಜೋಕುಮಾರ |
ಈ ಪದ್ಯದಲ್ಲಿ ಮಳೆ ಬಂದು ಬೂಮಿ ಬೆಳೆ ಬೆಳೆಯಿತೆಂಬ ಮಾತಿನ ಜೊತೆಗೆ ಗೊಡ್ಡುಗಳೆಲ್ಲ ಹಯನಾಗಿ ಎಂಬ ವಿಶೇಶವೂ ಇದೆ. ಗೊಡ್ದು ಎಂದರೆ ಬಂಜೆ ಎಂದರ‍್ತ. ಜೋಕುಮಾರ ಕ್ರುಪಾ ದ್ರುಶ್ಟಿ ಬಿದ್ದರೆ ಬಂಜೆತನ ದೂರವಾಗುತ್ತದೆ. ಇಂತ ಸಾಲುಗಳನ್ನು ಸಲ್ಪ ಆಳವಾಗಿ ನೋಡಿದಾಗ, ಜನಪದದ ನಿಜ ದರ‍್ಶನವಾಗುತ್ತದೆ.
ಪೌರಾಣಿಕ ಅಂಶಗಳಿಗಿಂತ ಜಾನಪದೀಯ ಅಂಶಗಳು ಜೋಕುಮಾರನನ್ನು ಲಿಂಗದ ಸಂಕೇತ, ಸ್ರುಶ್ಟಿ ಸಮ್ರುದ್ದಿಯ ಸಂಕೇತವೆಂದು ನಿರೂಪಿಸುತ್ತವೆ. ಮಕ್ಕಳಾಗದವರು ಗುಪ್ತವಾಗಿಯೇ ಜೋಕುಮಾರನನ್ನು ಪೂಜಿಸಿ ಸಂತಾನ ನೀಡುವಂತೆ ಬೇಡಿಕೊಳ್ಳುತ್ತಾರೆ. ರೈತನ ಆರಾದ್ಯ ದೈವವಾದ ಜೋಕುಮಾರ ಮಳೆ ತಂದೇ ತರುತ್ತಾನೆ ಎಂಬ ನಂಬಿಕೆ ಇದೆ. ಗಣಪತಿ ಬೂಲೋಕದ ಸಂಕಶ್ಟವನ್ನು ಶಿವ ಪಾರ‍್ವತಿಯರಿಗೆ ಹೇಳುವುದನ್ನು ಮರೆಯಬಹುದು. ಏಕೆಂದರೆ ಗಣಪ ಉಳ್ಳ ಬಕ್ತರ ಮನೆಯಲ್ಲಿ ಮೋದಕ ತಿಂದು ನಿಜವಾದ ಗೋಳನ್ನು ಗಮನಿಸುವುದಿಲ್ಲ. ಆದರೆ ಜೋಕುಮಾರ ಹಾಗಲ್ಲ. ಇಲ್ಲಿಯ ಪರಿಸ್ತಿತಿಯನ್ನು ತಂದೆ ತಾಯಿಗೆ ಮನವರಿಕೆ ಮಾಡಿಕೊಟ್ಟು ತಪ್ಪದೇ ಮಳೆ ತರಿಸುತ್ತಾನೆ.
ಈ ವರುಶ ಕನ್ನಡ ನಾಡು ಗಣಪನ ಹಬ್ಬದ ದಿನವೇ ದೊಡ್ಡ ಗಂಡಾಂತರಕ್ಕೆ ಸಿಲುಕಿಕೊಂಡಿತು. ಮಳೆ ಬರದೆ ಸಂಕಶ್ಟದಲ್ಲಿದ್ದ ನಮಗೆ ಇದ್ದ ಅಲ್ಪ ಸ್ವಲ್ಪ ನೀರನ್ನು ತಮಿಳುನಾಡಿಗೆ ಹರಿಸಬೇಕಾದ ದುರ‍್ಬರ ಸ್ತಿತಿ ಬಂತು. ಈಗ ನಮ್ಮ ಮಳೆ ದೇವರು, ರೈತರ ಹಿತೈಶಿ ಜೋಕುಮಾರ ಮಳೆ ಸುರಿಸಿ ನಮ್ಮನ್ನು ಸಂಕಶ್ಟದಿಂದ ಪಾರುಮಾಡಲಿ. ಮತ್ತು ನಮ್ಮ ರಾಜಕಾರಣಿಗಳಿಗೆ ನಮ್ಮ ನೆಲ ಜಲದ ಕುರಿತು ಹೋರಾಡುವ ಬಲ ಕೊಡಲಿ.
( ಚಿತ್ರ ಸೆಲೆ: ಬರಹಗಾರರ ಆಯ್ಕೆ, kannadajaanapada.blogspot.in )
ಇತ್ತೀಚಿನ ಅನಿಸಿಕೆಗಳು