ಗಿನ್ನೆಸ್ ದಾಕಲೆಯ ಅತಿ ಎತ್ತರದ ಬುದ್ದನ ಪ್ರತಿಮೆ

 ಕೆ.ವಿ.ಶಶಿದರ.

spring-temple-buddha

ಜಗತ್ತಿನ ಅತಿ ಎತ್ತರದ ವಿಗ್ರಹ ಸ್ಪ್ರಿಂಗ್ ಟೆಂಪಲ್ ಬುದ್ದ ಇರುವುದು ಚೀನಾದಲ್ಲಿ. ಚೀನಾ ದೇಶವೇ ನಿಗೂಡಗಳ ಆಗರ. ಈ ದೇಶದಲ್ಲಿ ವಿಶ್ವದ ಬೇರೆಲ್ಲೂ ಕಂಡರಿಯದಶ್ಟು ವಿಸ್ಮಯಗಳು ತುಂಬಿವೆ. ಚೀನಾದ ಮಹಾಗೋಡೆಯಂತೆ, ಇಂದಿನ ದಿನಕ್ಕೆ ಅತಿ ಎತ್ತರದ ಪ್ರತಿಮೆಯೆಂದು ‘ಗಿನ್ನೆಸ್ ಬುಕ್ ಆಪ್ ರೆಕಾರ‍್ಡ್ಸ್’ನಲ್ಲಿ ದಾಕಲಾಗಿರುವುದು ಸ್ಪ್ರಿಂಗ್ ಟೆಂಪಲ್ ಬುದ್ದನ ಪ್ರತಿಮೆ. ವೈರೋಕನಾ ಬುದ್ದನ ಪ್ರತಿರೂಪದಂತಿರುವ ಈ ವಿಗ್ರಹ ರಾರಾಜಿಸುತ್ತಿರುವುದು ಲೋಟಸ್ ವೇದಿಕೆಯ ಮೇಲೆ. ಈ ಬುದ್ದನ ಪ್ರತಿಮೆಯ ಎತ್ತರ 108 ಮೀಟರ್. ಲೋಟಸ್ ವೇದಿಕೆಯ ಎತ್ತರ ಇಪ್ಪತ್ತು ಮೀಟರ್. ವೇದಿಕೆಯ ಎತ್ತರವನ್ನು ವಿಗ್ರಹದ ಜೊತೆಗೆ ಸೇರಿಸಿದಲ್ಲ್ಲಿ ಒಟ್ಟು ಎತ್ತರ 128 ಮೀಟರ್ ಅಂದರೆ 420 ಅಡಿ ಆಗುತ್ತದೆ. ಈ ಲೋಟಸ್ ವೇದಿಕೆಯ ಅಡಿಯಲ್ಲಿ ಡೈಮಂಡ್ ಸೀಟ್ ಹಾಗೂ ಸುಮೇರು ಸೀಟ್‍ಗಳೆಂಬ 2 ಬಹುಮಹಡಿಗಳ ಕಟ್ಟಡಗಳಿವೆ. ಡೈಮಂಡ್ ಸೀಟ್‍ನ ಎತ್ತರ 15 ಮೀಟರ್ ಹಾಗೂ ಸುಮೇರು ಸೀಟ್‍ನ ಎತ್ತರ 10 ಮೀಟರ್. ಬುದ್ದನ ವಿಗ್ರಹದ ಎತ್ತರದ ಜೊತೆ ಲೋಟಸ್ ವೇದಿಕೆ, ಡೈಮಂಡ್ ಸೀಟ್‍ನ ಹಾಗೂ ಸುಮೇರು ಸೀಟ್‍ನ ಎತ್ತರವನ್ನೂ ಪರಿಗಣಿಸಿದಲ್ಲಿ ಒಟ್ಟಾರೆ ಎತ್ತರ 208 ಮೀಟರ್ (502 ಅಡಿ) ಆಗುತ್ತದೆ.

ಈ ದೈತ್ಯ ವಿಗ್ರಹದ ಸ್ತಾಪನೆಯ ಉದ್ದೇಶವೇನು? ಇದರ ಹಿಂದಿರುವ ಕತೆಯೇನು? ಯಾಕಾಗಿ ಬೆರೆಗುಗೊಳಿಸುವಶ್ಟು ಎತ್ತರದ ವಿಗ್ರಹವನ್ನು ನಿರ‍್ಮಿಸಿದ್ದಾರೆ? ಇದಕ್ಕೆ ಉಪಯೋಗಿಸಿದ ಸಾಮಗ್ರಿಗಳೇನು? ಅವುಗಳ ಪ್ರಮಾಣವೆಶ್ಟು? ಇದಕ್ಕಾಗಿ ಕರ‍್ಚಾದ ಹಣವೆಶ್ಟು? ಸ್ಪ್ರಿಂಗ್ ಎಂದು ಹೆಸರು ಬರಲು ಕಾರಣವೇನು? ಈ ವಿಗ್ರಹದ ಬಗ್ಗೆ ಗಿನ್ನೆಸ್ ದಾಕಲೆ ಏನು ಹೇಳುತ್ತದೆ? ತಿಳಿಯುವ ಬನ್ನಿ.

ಚೀನಾ ದೇಶದ ಇತಿಹಾಸವನ್ನು ಅವಲೋಕಿಸಿದಲ್ಲಿ ಆ ದೇಶದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳೂ ಅತಿ ಗೌಪ್ಯವಾಗಿರುತ್ತದೆ. ಗೌಪ್ಯತೆಯು ಚೀನಾಕ್ಕೆ ವರವೋ ಶಾಪವೋ ತಿಳಿಯದು. ಇದರಿಂದಾಗಿ ಚೀನಾ ದೇಶವು ಮುಕ್ಯ ಹರವಿನಿಂದ ಸಾಕಶ್ಟು ದೂರವೇ ಉಳಿದಿದೆ. ಹತ್ತು ಹಲವು ಅದ್ಬುತಗಳನ್ನು ತನ್ನ ಒಡಲಲ್ಲಿ ಮುಚ್ಚಿಟ್ಟುಕೊಂಡಿರುವ ಚೀನಾ ದೇಶ ಅವುಗಳನ್ನು ಹೊರಹಾಕಿದಲ್ಲಿ ವಿಸ್ಮಯಗಳ ಆಗರವನ್ನೇ ಕೊಡುಗೆಯಾಗಿ ಜಗತ್ತಿಗೆ ನೀಡಬಹುದು. ಪ್ರವಾಸೋದ್ಯಮಕ್ಕೂ ಸಹ ಒತ್ತು ನೀಡಿದಂತಾಗುತ್ತದಲ್ಲವೆ?

ಅಸಂಕ್ಯಾತ ವಿಸ್ಮಯಗಳಲ್ಲಿ ಒಂದಾದ, ಎತ್ತರದಲ್ಲಿ ವಿಶ್ವದಾಕಲೆ ಸ್ರುಶ್ಟಿಸಿರುವ ಸ್ಪ್ರಿಂಗ್ ಟೆಂಪಲ್ ಬುದ್ದನ ಪ್ರತಿಮೆಯು ಚೀನಾ ದೇಶದ ಒಂದು ಮೂಲೆಯಲ್ಲಿದೆ. ವಿಶ್ವದ ಗಮನದಿಂದ ದೂರದಲ್ಲಿ, ಪತ್ತೆಯಾಗದಂತಹ ಸ್ತಳವೊಂದರಲ್ಲಿ, ಹುದುಗಿದೆ ಎಂದರೆ ಅಚ್ಚರಿಯಾಗುತ್ತದಲ್ಲವೇ?

ಸ್ಪ್ರಿಂಗ್ ಟೆಂಪಲ್ ಬುದ್ದನ ವಿಗ್ರಹವು ಚೀನಾದ ಹೆನನ್ ಪ್ರಾಂತದಲ್ಲಿದೆ. ಈ ಪ್ರಾಂತದಲ್ಲಿನ ಲೂಶನ್ ಎಂಬ ಪುಟ್ಟ ಪಟ್ಟಣದಿಂದ ಬುದ್ದನ ವಿಗ್ರಹವಿರುವ ‘ಪೋಡುಶನ್ ಸಿನಿಕ್ ಏರಿಯಾ’ಗೆ ಹೋಗಲು ಕನಿಶ್ಟ ಎರಡು ತಾಸಿನ ಪ್ರಯಾಣ ಅಗತ್ಯ. ಈ ಪ್ರತಿಮೆಯೇ ಇಲ್ಲಿನ ಅತಿ ಆಕರ‍್ಶಣೀಯ ಕೇಂದ್ರ ಬಿಂದು. ಈ ದೈತ್ಯ ವಿಗ್ರಹದೊಂದಿಗೆ ಇಲ್ಲಿ ‘ಪೋಕನ್ ಟೆಂಪಲ್’ ನೋಡಬಹುದಾದ ಮತ್ತೊಂದು ಪ್ರೇಕ್ಶಣೀಯ ಸ್ತಳ. ಹೆನನ್ ಪ್ರಾಂತ್ಯದ ಪಿಂಗ್‍ಡಿಂಗ್‍ಶಾನ್‍ನಲ್ಲಿರುವ ಪೋಕನ್ ಟೆಂಪಲ್ ಬುದ್ದನ ವಿಗ್ರಹದ ಬಳಿಯಲ್ಲಿದ್ದು ಇದರಲ್ಲಿ ‘ಬೆಲ್ ಆಪ್ ಗುಡ್ ಲಕ್’ ಎಂಬ ಬ್ರುಹದಾಕಾರದ ಕಂಚಿನ ಗಂಟೆಯಿದೆ. ಪೋಕನ್ ಟೆಂಪಲ್, ಟಾಂಗ್ ಡೈನಾಸ್ಟಿಯ ಸಮಯದಲ್ಲಿ ನಿರ‍್ಮಾಣವಾದ ಬಗ್ಗೆ ದಾಕಲೆಗಳಿವೆ.

ಈ ಬ್ರುಹದಾಕಾರದ ಗಂಟೆಯದೇ ಒಂದು ಇತಿಹಾಸ. ಇದನ್ನು 2000 ನೇ ವರ‍್ಶದ ಸಂದ್ಯಾಕಾಲದಲ್ಲಿ ತಯಾರಿಸಿದ್ದು ಡ್ರ್ಯಾಗನ್ ಹೆಡ್ ಪೀಕ್‍ನ ಮೇಲೆ ಸ್ತಾಪಿಸಲಾಗಿದೆ. ವಿಶ್ವದಲ್ಲಿ ಉಪಯೋಗಿಸಬಹುದಾದ ಅತಿ ಹೆಚ್ಚು ತೂಕದ ಕಂಚಿನ ಬೆಲ್ ಎಂದು ಇದು ಪ್ರಕ್ಯಾತವಾಗಿದೆ. ಇದರ ತೂಕ 116 ಟನ್. 318 ಇಂಚುಗಳಶ್ಟು ಎತ್ತರವಿರುವ ಇದರ ವ್ಯಾಸ 201 ಇಂಚಿನಶ್ಟಿದೆ. ಈ ಬೆಲ್ ಅನ್ನು ಬಾರಿಸಿದಲ್ಲಿ ಅದ್ರುಶ್ಟ ಕುಲಾಯಿಸಿದಂತೆ ಎಂಬುದು ನಂಬಿಕೆ. ಅದಕ್ಕಾಗೇ ಇದನ್ನು ‘ಬೆಲ್ ಆಪ್ ಗುಡ್ ಲಕ್’ ಎಂದು ಕರೆಯುವುದು.

p4040665

ಬೆಲ್ ಆಪ್ ಗುಡ್ ಲಕ್

ಬುದ್ದನ ವಿಗ್ರಹ ತಯಾರಿಸಲು ಬಳಸಿದ ಸಾಮಗ್ರಿಗಳೇನು?

ಲಬ್ಯವಿರುವ ದಾಕಲಾತಿಗಳ ಪ್ರಕಾರ ಸ್ಪ್ರಿಂಗ್ ಟೆಂಪಲ್ ಬುದ್ದನ ವಿಗ್ರಹವನ್ನು 108 ಕೆಜಿ ಚಿನ್ನ, 3300 ಟನ್ ತಾಮ್ರದ ಅಲಾಯ್ ಹಾಗೂ 15000 ಟನ್ ಸ್ಟೀಲ್ ಬಳಸಿ ತಯಾರಿಸಲಾಗಿದೆ. ಇದೇ ದಾಕಲಾತಿಯನ್ನು ಗಿನ್ನೆಸ್ ಬುಕ್ ಆಪ್ ರೆಕಾರ‍್ಡ್ಸ್ ಸಹ ದ್ರುಡೀಕರಿಸಿದೆ. ಈ ವಿಗ್ರಹದ ನಿರ‍್ಮಾಣದ ಅಂದಾಜು ವೆಚ್ಚ 55 ಮಿಲಿಯನ್ ಡಾಲರ್‍ಗಳು. ಕೇವಲ ವಿಗ್ರಹವನ್ನು ಮಾತ್ರ ಪರಿಗಣಿಸಿದಲ್ಲಿ ಅದಕ್ಕೆ 18 ಮಿಲಿಯನ್ ಡಾಲರ್‍ಗಳು ವ್ಯಯವಾಗಿರುವ ದಾಕಲೆಗಳಿವೆ.

ಬೆಟ್ಟದ ಆಡಿಯಿಂದ ಬುದ್ದನ ವಿಗ್ರಹದ ಬಳಿಗೆ ತಲುಪುವ ಬಗೆ ಹೇಗೆ?

ಬುದ್ದನ ವಿಗ್ರಹವನ್ನು ತಲುಪಲು ಎರಡು ಜತೆ ಮೆಟ್ಟಲುಗಳಿವೆ. ಪ್ರತಿಯೊಂದರಲ್ಲೂ 365 ಮೆಟ್ಟಲುಗಳಿವೆ. ಈ ಮೆಟ್ಟಲುಗಳನ್ನು ಏರಿ ಒಳಹೊಕ್ಕರೆ ಮತ್ತೂ ಹಲವು ಮೆಟ್ಟಲುಗಳು ಕಾಣುತ್ತವೆ. ಒಟ್ಟಾರೆ 1000 ಕ್ಕೂ ಹೆಚ್ಚು ಮೆಟ್ಟಲುಗಳಿವೆ. ಇಶ್ಟನ್ನು ಹತ್ತಲು ಸಾದ್ಯವಿಲ್ಲದವರಿಗೆ, ಮೇಲೆ ಹೋಗಲು ಮಿನಿ ಬಸ್ಸಿನ ಸೌಲಬ್ಯವಿದೆ. ಬಸ್ಸಿನಲ್ಲಿ ಪ್ರಯಾಣಿಸಲು ಕೊಂಚ ಹೆಚ್ಚಿನ ಹಣ ತೆರಬೇಕಾಗುವುದು. ಡೈಮಂಡ್ ಸೀಟ್‍ನಿಂದ ಬುದ್ದನ ಪ್ರತಿಮೆಯ ಕಾಲ ಬಳಿ ತಲುಪಲು ಲಿಪ್ಟ್ ಸೇವೆ ಕೂಡ ಲಬ್ಯವಿದೆ. ಪ್ರತಿಮೆಯ ಕಾಲಿನ ಬೆರಳನ್ನು ಮುಟ್ಟಿ ಅನುಬವಿಸಬಹುದು. ಒಂದೊಂದು ಬೆರಳೂ ಸಹ ಒಬ್ಬ ಆಜಾನುಬಾಹುವಿನ ಎತ್ತರದಶ್ಟಿದೆ.

spring-temple-buddha-original-17638

ಈ ದೈತ್ಯ ಬುದ್ದನ ವಿಗ್ರಹ ನಿರ‍್ಮಾಣಕ್ಕೆ ಸ್ಪೂರ‍್ತಿ ಏನು?

ಈ ಬ್ರುಹತ್ ವಿಗ್ರಹದ ನಿರ‍್ಮಾಣಕ್ಕೆ ಯಾವುದೇ ಸ್ಪೂರ‍್ತಿಯಿಲ್ಲ. ಮೇಲಾಗಿ 2001 ರಲ್ಲಿ ಆಪ್ಗಾನಿಸ್ತಾನದಲ್ಲಿದ್ದ ‘ಬಮಿಯಾನ್ ಬುದ್ದನ’ ವಿಗ್ರಹಗಳನ್ನು ತಾಲಿಬಾನ್‍ನವರು ಹಾಳುಗೆಡವಿದ್ದನ್ನು ಚೀನಾ ಸರ‍್ಕಾರವು ಕಂಡಿಸಿ, ಅದರ ಪ್ರತೀಕಾರವಾಗಿ ಅದೇ ರೀತಿಯ ದೈತ್ಯಾಕಾರದ ಬುದ್ದನ ವಿಗ್ರಹವನ್ನು ನಿರ‍್ಮಿಸುವ ಆಕಾಂಕ್ಶೆಯನ್ನು ಗೋಶಣೆ ಮಾಡಿತು. ಗೋಶಣೆಯಂತೆ ಬುದ್ದನ ವಿಗ್ರಹದ ನಿರ‍್ಮಾಣವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡು 2009ರಲ್ಲಿ ಪೂರ‍್ಣಗೊಳಿಸಲಾಯಿತು.

ಪ್ರವಾಸಿಗರನ್ನು ಆಕರ‍್ಶಿಸಲು ಹಾಗೂ ಅವರುಗಳಿಗೆ ಇನ್ನಿತರೆ ಸೌಲಬ್ಯಗಳನ್ನು ಒದಗಿಸಲು ಬುದ್ದನ ವಿಗ್ರಹದ ಕೆಳಬಾಗದಲ್ಲಿ ಎರಡು ಬಹುಮಹಡಿಗಳ ಕಟ್ಟಡವನ್ನು ನಿರ‍್ಮಿಸುವ ಬಗ್ಗೆ ಇರುವ ಇರಾದೆಯನ್ನು ಪ್ರಕಟಿಸಲಾಯಿತು. ಇದಕ್ಕಾಗಿ ಬುದ್ದನ ವಿಗ್ರಹವಿರುವ ಬೆಟ್ಟದ ವಿನ್ಯಾಸವನ್ನೇ ಬದಲಾಯಿಸಿ ಡೈಮಂಡ್ ಸೀಟ್ ಹಾಗೂ ಸುಮೇರು ಸೀಟ್‍ಗಳನ್ನು ನಿರ‍್ಮಿಸಿದ್ದಾರೆ. ಇವೆಲ್ಲಾ ಪ್ರಕ್ರಿಯೆಗಳ ನಂತರ ಕೊನೆಯದಾಗಿ ವಿಗ್ರಹವನ್ನು ತಲುಪಲು ಅವಶ್ಯವಿದ್ದ ಮೆಟ್ಟಲುಗಳ ಹಾಗೂ ಲಿಪ್ಟಿನ ನಿರ‍್ಮಾಣವನ್ನು ಮುಗಿಸಿದ್ದಾರೆ.

ಡೈಮಂಡ್ ಸೀಟ್‍ನಲ್ಲಿ ಒಟ್ಟಾರೆ 5000ಕ್ಕೂ ಹೆಚ್ಚಿನ ದೇವಾಲಯಗಳಿದ್ದು, ಅವುಗಳಲ್ಲಿ ಅಂದಾಜು 6666 ಬುದ್ದನ ವಿಗ್ರಹಗಳಿವೆ.

ಈ ಡೈಮಂಡ್ ಸೀಟ್ ಸ್ಪ್ರಿಂಗ್ ಟೆಂಪಲ್ ಬುದ್ದನ ವಿಗ್ರಹದ ಕೆಳಗಿರುವ ಒಂದು ಕುತೂಹಲಕಾರಿ ಆಸಕ್ತಿದಾಯಕ ತಾಣ. ಬಹು ಮಹಡಿಗಳ ಕಟ್ಟಡವಾದ ಇದು ಐದು ಅಂತಸ್ತನ್ನು ಹೊಂದಿದೆ. ಪ್ರತಿಯೊಂದು ಅಂತಸ್ತಿನಲ್ಲೂ ಪುಟ್ಟ ಪುಟ್ಟ ಬುದ್ದನ ದೇವಾಲಯಗಳಿದ್ದು, ಪ್ರತಿಯೊಂದು ದೇವಾಲಯದಲ್ಲೂ ದೈತ್ಯ ಸ್ಪ್ರಿಂಗ್ ಟೆಂಪಲ್ ಬುದ್ದನ ಪ್ರತಿರೂಪದ ಪುಟ್ಟ ಪುಟ್ಟ ಬುದ್ದನ ವಿಗ್ರಹಗಳಿವೆ. ಈ ತರಹದ ದೇವಾಲಯಗಳು ಡೈಮಂಡ್ ಸೀಟ್‍ನಲ್ಲಿ ಒಟ್ಟಾರೆ 5000ಕ್ಕೂ ಹೆಚ್ಚಿದ್ದು, ಅವುಗಳಲ್ಲಿ ಅಂದಾಜು 6666 ಬುದ್ದನ ವಿಗ್ರಹಗಳಿವೆ. ಸ್ಪ್ರಿಂಗ್ ಟೆಂಪಲ್ ಬುದ್ದನ ಪ್ರತಿಮೆಯನ್ನು ನಿರ‍್ಮಿಸಿದ ನಂತರವಶ್ಟೇ ಡೈಮಂಡ್ ಸೀಟ್ ಹಾಗೂ ಸುಮೇರು ಸೀಟ್‍ಗಳ ನಿರ‍್ಮಾಣದ ಬಗ್ಗೆ ಚಿಂತನೆ ನಡೆದಿದ್ದು. ಹಾಗಾಗಿ ಬ್ರುಹತ್ ಬುದ್ದನ ಪ್ರತಿಮೆಯ ಅಡಿಯಲ್ಲಿನ ಬೆಟ್ಟವನ್ನು ಕೊರೆದು ಬಹುಮಹಡಿಗಳ ಕಟ್ಟಡಗಳನ್ನು ನಿರ‍್ಮಿಸಿರುವುದು. ಇದೊಂದು ಅಸಹಜ ಕ್ರಿಯೆ ಎನಿಸಿದರೂ ಚೀನಾದವರ ತಾಂತ್ರಿಕ ಕೌಶಲ್ಯದ ಪರಿಣತಿಯನ್ನು ಎತ್ತಿ ತೋರಿಸುತ್ತದೆ.

ಸ್ಪ್ರಿಂಗ್ ಟೆಂಪಲ್ ಬುದ್ದ ಎಂದೇಕೆ ಕರೆಯುತ್ತಾರೆ?

ಇದರಲ್ಲಿ ಅಂತಹ ಮಹತ್ವವೇನೂ ಇಲ್ಲ. ಇದಕ್ಕೆ ಈ ಹೆಸರು ಬರಲು ಕಾರಣ ಈ ಬೆಟ್ಟದ ಬಳಿಯಿರುವ ಬಿಸಿ ನೀರಿನ ಬುಗ್ಗೆ. ಈ ಬಿಸಿ ನೀರಿನ ಬುಗ್ಗೆಯನ್ನು ‘ಟಿಯಾನ್‍ರುಯಿ’ ಎಂದು ಕರೆಯುತ್ತಾರೆ. ಇದರಿಂದ ಬರುವ ಬಿಸಿ ನೀರು ಅಂದಾಜು 60 ಡಿಗ್ರಿ ಸೆ. ನವರೆಗೂ ಇದ್ದು ಅನೇಕ ರೋಗ ರುಜಿನಗಳಿಗೆ ರಾಮಬಾಣ. ರೋಗ ರುಜಿನಗಳ ಜೊತೆ ಮನಸ್ಸಿನ ಕ್ಲೇಶವನ್ನು ಕಳೆದುಕೊಳ್ಳಲು ಪ್ರವಾಸಿಗರು ಇಲ್ಲಿಗೆ ಮುಗಿ ಬೀಳುತ್ತಾರೆಂಬುದು ಸ್ಪ್ರಿಂಗ್ ಟೆಂಪಲ್ ಬುದ್ದನ ಅನುಯಾಯಿಗಳ ಆಶಯ.

ಸ್ಪ್ರಿಂಗ್ ಟೆಂಪಲ್ ಬುದ್ದನ ಬಳಿಗೆ ತಲುಪುವುದು ಹೇಗೆ?

ಈ ಬ್ರುಹತ್ ಬುದ್ದನ ವಿಗ್ರಹವು ಇರುವುದು ಜೋಕುನ್ ನಗರದ ಬಳಿ. ಜೋಕುನ್ ನಗರವು ಹೆನನ್ ಪ್ರಾಂತದ ಲೂಶನ್ ಜಿಲ್ಲೆಯಲ್ಲಿದೆ. ರಾಶ್ಟ್ರೀಯ ಮುಕ್ತಮಾರ‍್ಗ 311ರ ಹತ್ತಿರದಲ್ಲಿನ ಪೊಡುಶನ್ ಸೆನಿಕ್ ಏರಿಯಾದಲ್ಲಿ ಈ ವಿಗ್ರಹ ಇರುವುದರಿಂದ ವಿಗ್ರಹದ ಬಳಿ ತಲುಪುವ ಹಾದಿ ಸುಗಮ.

page1-750x499

ಏನಿದು ವೈರೋಕನಾ ಬುದ್ದ?

ಸ್ಪ್ರಿಂಗ್ ಟೆಂಪಲ್ ಬುದ್ದನ ವಿಗ್ರಹವು ವೈರೋಕನಾ ಬುದ್ದನನ್ನು ಪ್ರತಿರೂಪ. ವೈರೋಕನಾವು ಚೀನಾದ ಬೌದ್ದ ದರ‍್ಮದಲ್ಲಿ ಸಂಪೂರ‍್ಣ ಶೂನ್ಯತೆಯನ್ನು ಅತವಾ ಸ್ವಂತಿಕೆಯ ಬಾವವನ್ನು, ಮಾನಸಿಕ ಶಾಂತಿಯನ್ನು ಪ್ರತಿಬಿಂಬಿಸುತ್ತದೆ. ಆಪ್ಗಾನಿಸ್ತಾನದಲ್ಲಿ ತಾಲಿಬಾನ್‍ನವರು ನಾಶಪಡಿಸಿದ ಎರಡು ಬಮಿಯಾನ್ ಬುದ್ದನ ಪ್ರತಿಮೆಯಲ್ಲಿ ಎತ್ತರದ ವಿಗ್ರಹವೇ ವೈರೋಕನಾ ಬುದ್ದ.

ಗಿನ್ನೆಸ್ ಬುಕ್ ಆಪ್ ವರ‍್ಲ್ಡ್ ರೆಕಾರ‍್ಡ್‍ನಲ್ಲಿನ ದಾಕಲೆ ಏನು ಹೇಳುತ್ತದೆ?

ಬುದ್ದನ ಪ್ರತಿಮೆಯು 2009ರ ಸೆಪ್ಟಂಬರ್ ತಿಂಗಳ ಒಂದರಂದು ಅನಾವರಣಗೊಂಡಿದ್ದು, 2ನೇ ಡಿಸೆಂಬರ್ 2009ರಲ್ಲಿ ಇದರ ಎತ್ತರವನ್ನು ಗಿನ್ನೆಸ್ ದಾಕಲೆಯ ಆದಿಕಾರಿಗಳು ಕುದ್ದಾಗಿ ಅಳತೆ ಮಾಡಿರುತ್ತಾರೆ. ಜೊಂಗ್ಯುನ್ ಬುದ್ದ ಯಾ ಸ್ಪ್ರಿಂಗ್ ಟೆಂಪಲ್ ಬುದ್ದ – ಇದರ ಕರಾರುವಾಕ್ಕು ಎತ್ತರ 127.64 ಮೀಟರ್ (418 ಅಡಿ 9.19 ಇಂಚು). ದಾಕಲಾತಿಗಾಗಿ ಲೋಟಸ್ ವೇದಿಕೆಯಿಂದ ಮಾತ್ರ ಎತ್ತರವನ್ನು ಅಳೆದಿದೆ ಎಂದು ಉಲ್ಲೇಕಿಸಲಾಗಿದೆ. ಬುದ್ದನ ವಿಗ್ರಹ ಹಾಗೂ ಲೋಟಸ್ ವೇದಿಕೆಯ ಒಟ್ಟು ಎತ್ತರವು 127.64 ಮೀಟರ್. ಇದರಲ್ಲಿ ಬುದ್ದನ ವಿಗ್ರಹವು 108.448 ಮೀಟರ್ ಹಾಗೂ ವೇದಿಕೆಯ ಎತ್ತರ 19.291 ಮೀಟರ್. ಲೋಟಸ್ ವೇದಿಕೆಯ ತಳದಲ್ಲಿ ಜಿಂಗ್‍ಆಂಗ್ ಇದ್ದು, ಇದು 27.453 ಮೀಟರ್ ಎತ್ತರವಿದೆ. ಇದರ ಅಡಿಯಲ್ಲಿರುವ ಕ್ಸೂಮಿ ಇದ್ದು ಇದರ ಎತ್ತರ 25.238 ಮೀಟರ್. ಇದರಡಿಯಲ್ಲಿರುವ ಮತ್ತೊಂದರ ಎತ್ತರ 27.629 ಮೀಟರ್. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಲ್ಲಿ ಒಟ್ಟಾರೆ ವಿಗ್ರಹದ ಎತ್ತರವು 208.059 ಮೀಟರ್‍ಗಳು ಎಂದು ದಾಕಲೆಯ ಪುಸ್ತುಕದಲ್ಲಿದೆ.

ಇದರ ಆದಾರದ ಮೇಲೆ ಸ್ಪ್ರಿಂಗ್ ಟೆಂಪಲ್ ಬುದ್ದನ ಪ್ರತಿಮೆಯನ್ನು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂದು ಮನ್ನಣೆ ನೀಡಿರುವುದು. ಗಿನ್ನೆಸ್ ದಾಕಲೆಯ ಪ್ರಕಾರ 1997ರಲ್ಲಿ ಈ ಪ್ರತಿಮೆಯ ನಿರ‍್ಮಾಣವನ್ನು ಕೈಗೆತ್ತಿಕೊಂಡಿದ್ದು, ಪೂರ‍್ಣಗೊಳಿಸಲು 12 ವರ‍್ಶಗಳ ದೀರ‍್ಗಕಾಲ ಹಿಡಿದಿದೆ. ಪ್ರಸ್ತುತ ಬುದ್ದನ ಪ್ರತಿಮೆಯ ಉಸ್ತುವಾರಿಯನ್ನು ‘ಟಿಯಾನ್‍ರುಯಿ ಗ್ರೂಪ್ ಟೂರಿಸಮ್ ಡೆವೆಲಪ್‍ಮೆಂಟ್ ಕಂಪೆನಿ ಲಿಮಿಟೆಡ್’ ನಿರ‍್ವಹಿಸುತ್ತಿದೆ.

(ಚಿತ್ರಸೆಲೆ: taringa.net, thousandwonders.netnevworldwonders.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: