ಜೀವನದ ಉದ್ದೇಶ ತಿಳಿಯಿರಿ 5 ನಿಮಿಶದಲ್ಲಿ!
ಜೀವನದಲ್ಲಿ ನಾನೇನು ಮಾಡ್ತಿದೀನಿ? ಯಾಕೆ ಇದನ್ನ ಮಾಡ್ತಿದೀನಿ? ಅನ್ನೋ ಪ್ರಶ್ನೆ ಹಲವು ಸಲ ಮೂಡಿರಬಹುದು. ಕೆಲಸದಲ್ಲಿ ಬೇಸರ ಮೂಡಿ ಈ ಕೆಲಸ ತಲೆನೋವು ಸಾಕಪ್ಪಾ ಸಾಕು ಎಂದು ಎಲ್ಲರಿಗೂ ಒಮ್ಮೆ ಅನಿಸಿರುತ್ತದೆ. ಜಗತ್ತಿನ ಎಲ್ಲ ಬಾರವೂ ನಮ್ಮ ತಲೆಯ ಮೇಲೆಯೇ ಬಿದ್ದಿರುವ ಹಾಗೆ ಆಗುತ್ತದೆ. ಇದು ಎಲ್ಲರ ಜೀವನದಲ್ಲಿ ಆಗುವಂತದ್ದು. ಇದೆಲ್ಲ ತಾನಾಗಿಯೇ ಸರಿಹೋದೀತು ಎಂದು ಕೆಲವರು ಮುನ್ನಡೆದರೆ ಅದನ್ನೇ ತಲೆಗೆ ಹಚ್ಚಿಕೊಂಡು ಕಿನ್ನತೆಗೆ ಒಳಗಾಗುವವರೂ ಇದ್ದಾರೆ. ಆದರೆ ಕೆಲವು ಮಂದಿ ಒಂದು ಹೆಜ್ಜೆ ಮುಂದೆ ಹೋಗಿ, ತಾವು ಮಾಡುತ್ತಿರುವ ಕೆಲಸದ ಉದ್ದೇಶವನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಒಂದು ಬಗೆಯಲ್ಲಿ ಜೀವನದ ಉದ್ದೇಶವನ್ನೇ ತಿಳಿಯುವ ಯತ್ನ ಅವರದ್ದಾಗಿರುತ್ತದೆ.
ಜೀವನದ ಉದ್ದೇಶ ತಿಳಿಯುವುದು ಅಶ್ಟು ಸರಳ ವಿಚಾರವೇ? ತುಂಬಾ ಹೊತ್ತು ತೆಗೆದುಕೊಳ್ಳುವ ಕೆಲಸವಲ್ಲವೇ ಅದು ಎಂಬ ಕೇಳ್ವಿ ಮೂಡುವುದು ಸಹಜ. ಆದರೆ, ಜೀವನದ ಉದ್ದೇಶವನ್ನು ತಿಳಿಯಲು 5 ನಿಮಿಶ ಸಾಕು ಎಂದರೆ ನಂಬುವಿರಾ? ಹೌದು ಎನ್ನುತ್ತಾರೆ ಆಡಮ್ ಲೆಪ್ಜಿಗ್(Adam Leipzig). ಅದಕ್ಕಾಗಿ ಕೆಳಗೆ ಪಟ್ಟಿ ಮಾಡಿರುವ ಕೇಳ್ವಿಗಳನ್ನು ಕೇಳಿಕೊಂಡರೆ ಆಯಿತು, ಜೀವನದ ಗುರಿ ತಾನಾಗಿಯೇ ಗೊತ್ತಾಗುತ್ತದೆ.
ನೀವು ಯಾರು?
ಇದಕ್ಕೆ ಉತ್ತರ ನಿಮ್ಮಲ್ಲಿಯೇ ಇದೆ. ನೀವು ಯಾವ ತರದ ವ್ಯಕ್ತಿ ಎಂದು ಒಮ್ಮೆ ಯೋಚಿಸಿ. ನಿಮ್ಮ ಸ್ವಬಾವಕ್ಕೆ ಸರಿಹೊಂದದ ವಿಶಯಗಳು ಯಾವುವು ಎಂದು ತಿಳಿಯಿರಿ.
ನೀವೇನು ಮಾಡುತ್ತಿದ್ದೀರಿ?
ನಿಮಗೆ ಅತಿ ಹೆಚ್ಚು ಮೆಚ್ಚುಗೆಯಾಗುವ ಕೆಲಸ ಯಾವುದು ಎಂದು ಪಟ್ಟಿಮಾಡಿಕೊಳ್ಳಿ. ಕಲಿಸುವುದು, ನಾಟಕ ಮಾಡುವುದು, ಸುತ್ತಾಡುವುದು, ಅಡುಗೆ, ಗದ್ದೆ ಕೆಲ್ಸ ಹೀಗೆ ಹಲವು ಕೆಲಸಗಳು ನಿಮಗೆ ಮೆಚ್ಚುಗೆ ಆಗಬಹುದು. ‘ಈ ಪಟ್ಟಿಯಲ್ಲಿನ ಕೆಲಸಗಳಲ್ಲಿ ಯಾವುದನ್ನು ನೀವು ಬೇರೆಯವರಿಗೆ ಚೆನ್ನಾಗಿ ಕಲಿಸಬಲ್ಲಿರಿ?’ ಎಂದು ಕೇಳುವ ಮೂಲಕ ಮುಕ್ಯವಾದುದನ್ನು ಗುರುತಿಸಿ.
ನೀವು ಅದನ್ನು ಯಾರಿಗಾಗಿ ಮಾಡುತ್ತಿದ್ದೀರಿ?
ನೀವು ಯಾರಿಗಾಗಿ ಕೆಲಸವನ್ನು ಮಾಡುತ್ತಿದ್ದೀರಿ ಎಂದು ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳಿ. ಅವರ ಜೀವನದಲ್ಲಿ ನಿಮ್ಮ ಕೆಲಸದಿಂದ ಏನೇನು ಬದಲಾವಣೆಗಳನ್ನು ತರಬಲ್ಲಿರಿ ಎಂದು ತಿಳಿಯಿರಿ.
ಅವರಿಗೆ ಏನು ಬೇಕು?
ನೀವು ಯಾರಿಗಾಗಿ ಕೆಲಸ ಮಾಡಬಯಸುತ್ತೀರೋ ಅವರಿಗೆ ಬೇಕಾಗಿರುವುದು ಏನು ಎಂದು ತಿಳಿಯಿರಿ.
ನಿಮ್ಮ ಕೆಲಸಗಳು ಹೇಗೆ ಬದಲಾವಣೆಯನ್ನು ತರಬಲ್ಲವು?
ನೀವು ಮಾಡುವ ಕೆಲಸದಿಂದ ನಿಜವಾಗಿಯೂ ಅವರಿಗೆ ನೆಮ್ಮದಿ ಸಿಗುತ್ತಿದೆಯೇ ಎಂದು ಯೋಚಿಸಿ. ಇದಕ್ಕೆ ಉತ್ತರ ಹೌದು ಎಂದಾದರೆ ನೀವು ಮಾಡುತ್ತಿರುವ ಕೆಲಸ ನಿಮಗೆ ಸರಿಯಾಗಿ ಹೊಂದುತ್ತದೆ. ನೀವು ಮಾಡಬೇಕಾಗಿರುವುದೂ ಅದನ್ನೇ! ನಿಮ್ಮ ಜೀವನದ ಉದ್ದೇಶದ ದಿಕ್ಕಿನಲ್ಲಿಯೇ ನೀವಿದ್ದೀರಿ. ಮುನ್ನಡೆಯಿರಿ.
ನೀವು ಮಾಡುವ ಕೆಲಸದಿಂದ ಇನ್ನೊಬ್ಬರಿಗೆ ಸಂತಸ ಆಗುವುದಾದರೆ ಆಗುವುದಾದರೆ ನಿಮ್ಮ ನೆಮ್ಮದಿಯೂ ಅಲ್ಲಿಯೇ ಇದೆ. ಅಲ್ಲವೇ?
(ಮಾಹಿತಿ ಮತ್ತು ಚಿತ್ರ ಸೆಲೆ – businessinsider.in, Google Images, myopinionsdocumented.blogspot.in, huffingtonpost.co.uk, learnhowtorap.com, all-free-download.com)
1 Response
[…] ನೀವು ಮಾಡಬೇಕಿರುವ ಕೆಲಸವೆಂದರೆ – ನೀವು ಏನನ್ನು ಸಾದಿಸಬೇಕು ಎಂಬುದನ್ನು […]