ಮುಂಜಾನೆಯ ವಿಹಾರದಲ್ಲಿ ನಾ ಕಂಡ ಅಪರೂಪದ ಜಗತ್ತು!

– ಸುನಿಲ್ ಮಲ್ಲೇನಹಳ್ಳಿ.

shutterstock_113228137

ದಿನಾ ಬೆಳಗ್ಗೆ ಬೇಗ ಎದ್ದು, ಮನೆಯ ಟೆರೆಸ್ಸಿನಲ್ಲಿ ಕೆಲಹೊತ್ತು ವಿಹಾರ ಹೋಗಿಬರೋದು ನನ್ನ ಪ್ರತಿನಿತ್ಯದ ಅಬ್ಯಾಸಗಳಲ್ಲೊಂದು. ತಣ್ಣಗಿನ ವಾತಾವರಣ ಹಾಗೂ ಬಿಡದೆ ಕಾಡುವ ಚಳಿಯಿರುವ ಆ ಗಳಿಗೆಯಲ್ಲಿ ವಿಹಾರಕ್ಕೆ ಹೋಗಲು ಮನಸ್ಸು ಸುತರಾಂ ಒಪ್ಪವುದಿಲ್ಲವಾದರೂ ಹಟಕ್ಕೆ ಬಿದ್ದವನಂತೆ ವಿಹಾರಕ್ಕೆ ಹೋಗಿಬರುತ್ತೇನೆ. ಈಚಿನ ದಿನಗಳಲ್ಲಿ ಆಗಸದಲ್ಲಿ ಬಹಳವಾಗಿ ಕಾರ‍್ಮೋಡಗಳೇ ಇರುವುದರಿಂದ ವಿಹಾರದ ಸಮಯದಲ್ಲಿ ಉದಯಾವಸ್ತೆಯ ಸೂರ‍್ಯದೇವರನ್ನು ನೋಡುವ ಬಾಗ್ಯ ನನ್ನದಾಗೋದು ಕಶ್ಟವೇ ಸರಿ. ಸೂರ‍್ಯನೆಂದರೇ ಬಾಲ್ಯದಿಂದಲೂ ನನಗೆ ಅದೇನೋ ಬಕ್ತಿ, ಅಬಿಮಾನ. ನಮಗೆ ತಿಳಿದಿರುವಂತೆ ಬೂಮಿಯಲ್ಲಿನ ಸಕಲ ಚರಾಚರ ವಸ್ತುಗಳ ಆದಿ, ಬದ್ರ-ಬುನಾದಿ, ಉದ್ದಾರಕನೂ ಅವನೇ. ಹಾಗಾಗಿ, ಉದಯ ರವಿಯ ದರ‍್ಶನವೇ ಒಂದು ವಿಶೇಶ ಎಂಬುದು ನನ್ನ ಅರಿವು.

ದರೆಯ ಆಳಲೆಂದು ಜನ್ಮವೆತ್ತಿ ಬಂದ ದೊರೆಗಳಿಗೆ ಲೆಕ್ಕವಿಲ್ಲ. ಆ ರೀತಿ ಬಂದ ಅವರೆಲ್ಲ, ಯಾವುದೋ ಒಂದು ಪ್ರಾಂತ್ಯ ಇಲ್ಲವೇ ರಾಜ್ಯವನ್ನು ಆಳಿ, ಎಂದೋ ಅಳಿದು ಹೋಗಿಹರು. ಆದರೆ, ಅನಾದಿ ಕಾಲದಿಂದಲೂ ತಾನೆಂಬ ಆಹಂ ಇಲ್ಲದೇ ರವಿಯು ತನ್ನನ್ನೇ ತಾನು ಸುಟ್ಟುಕೊಳ್ಳುವ, ಅದ ಲೆಕ್ಕಿಸದೆ ಪ್ರತಿ ಗಳಿಗೆ ದರೆಯ ಬೆಳಗುತಾ ಜೀವಾದಿಗಳ ಪೊರೆವ, ದಿನವ ಕಳೆಯವ, ಹೊನ್ನ ಓಕಳಿ ಚೆಲ್ಲಿ ಪಡುವಣದಲ್ಲಿ ಮುಳುಗುವ, ಮತ್ತೆ ಅದೇಕ್ಶಣದಲ್ಲಿ ಅಲ್ಲೆಲ್ಲೋ ನಗುತಾ ಮೇಲೇರಿ ಬರುವ, ಬೆಳಕ ತರುವ. ಒಂದು ಕ್ಶಣವೂ ವಿಶ್ರಮಿಸದ, ಅರೇಕ್ಶಣವೂ ನಿದ್ರಿಸದ ಅವನು ನಮ್ಮ ದರೆಯ ನಿಜ ದೊರೆಯೇ ಸರಿ.

ನನ್ನ ವಿಹಾರದ ವೇಳೆ, ಆಕಾಶವನ್ನೇ ಬಹುತೇಕವಾಗಿ ಆವರಿಸಿಕೊಂಡ ಆ ಕರಿಮೋಡಗಳನ್ನು ಮತ್ತು ಅವುಗಳ ಚಲನೆಯನ್ನು ಕಂಡು ಒಮ್ಮೊಮ್ಮೆ ಯೋಚಿಸುತ್ತಿರುತ್ತೇನೆ, ತಂಡೋಪತಂಡವಾಗಿ ಅವು ಹೋಗುತ್ತಿರುವುದಾದರೂ ಎಲ್ಲಿಗೆ? ಆ ಊರು ಈ ಊರು ಎನ್ನದೆ, ದಿಕ್ಕುದೆಸೆ ಸಹ ಇಲ್ಲದೆ, ನಿರ‍್ಲಿಪ್ತ ಮನೋಬಾವದಿಂದ ಯಾತ್ರೆ ಕೈಗೊಂಡಿರುತ್ತವಲ್ಲ. ಅದರಲ್ಲೂ ಅವುಗಳ ರೂಪ, ಸ್ವರೂಪ ಒಂದರಂತೆ ಇನ್ನೊಂದಿಲ್ಲ. ಸಮಯ-ಸಮಯಕ್ಕೂ ಅವುಗಳಿಗೆ ಬಿನ್ನ-ವಿಬಿನ್ನವಾದ ರೂಪ, ಸ್ವರೂಪ ಕೊಡುವ ಆ ಮಾಯ ಶಿಲ್ಪಿಯಾದರೂ ಯಾರು? ಎನ್ನುವ ಪ್ರಶ್ನೆಯು ಸಹ ನನ್ನಲ್ಲಿ ಆಗಾಗ ಉದ್ಬವಿಸುತ್ತದೆ. ಇದೆಲ್ಲವೂ ವಾಯುದೇವರ ಕೈಚಳಕವೇ ಇರಬೇಕು ಅನ್ನೋದು ನನ್ನ ಪ್ರಬಲ ನಂಬಿಕೆ.

ಆ ಕರಿಮೋಡಗಳು ಮತ್ತು ಅವುಗಳ ಚಲನೆಯನ್ನೇ ಎವೆಯಿಕ್ಕದೆ ನೋಡುತ್ತಾ ನಿಂತ ನನ್ನ ಗಮನವನ್ನು ನಂತರದಲ್ಲಿ ಸೆಳೆಯೋದು ಗುಂಪು, ಗುಂಪಾಗಿ ಹಾರುತ್ತಾ ಬರುವ ಬೆಳ್ಳಕ್ಕಿ ಮತ್ತಿತರರ ಹಕ್ಕಿಗಳ ಹಿಂಡು. ನಿತ್ಯವೂ ನಿರ‍್ದಿಶ್ಟ ವೇಳೆಯಲ್ಲಿ ಆಹಾರ ಹುಡುಕುತ್ತಾ, ನಮ್ಮ ಮನೆಯ ಎದುರು ಹಾದುಹೋಗುತ್ತವೆ ಅವು. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹಕ್ಕಿಗಳ ಹಿಂಡು ಹಾದುಹೋಗುತ್ತವೆ. ಆದರೆ, ಅವು ಎಲ್ಲಿಂದ ಬರುತ್ತವೆ? ಎಲ್ಲಿಗೆ ಹಾರಿ ಹೋಗುತ್ತವೆ? ಎಂಬುದನ್ನು ನಾನು ಕಾಣೆ. ಹೊತ್ತಾರೆ ಬೇಗ ಹೋಗುವ ಅವು, ಸಂಜೆಯ ವೇಳೆಗೆ ಮಾತ್ರವೇ ತಮ್ಮ ಗೂಡಿನತ್ತ ಮರಳಿ ಬರೋದು. ಇದನ್ನು ಒಂದೆರಡು ಬಾರಿ ಪರೀಕ್ಶಿಸಿದ್ದೇನೆ ಕೂಡ. ನಮ್ಮಂತೆ ಗಡಿಯಾರ ಬಳಸದ ಅವು, ಎಲ್ಲವನ್ನೂ ನಿರ‍್ದಿಶ್ಟ ಸಮಯದಲ್ಲಿ ಮಾಡುವುದಂತೂ ಸೋಜಿಗದ ಸಂಗತಿಯಾಗಿದೆ. ಅವುಗಳಲ್ಲಿ ನಮಗೆ ಇರೋ ಹಾಗೆ ಸೋಮಾರಿತನ, ಹರಟೆ ಮಾಡುತ್ತಾ ವ್ರುತಾ ಕಾಲವ್ಯಯ ಮಾಡೋ ಗುಣಗಳಿಲ್ಲವೇ ಎನ್ನುವ ವಿಚಾರ ನನ್ನನ್ನು ಸದಾ ಕಾಡುತ್ತೆ.

ವಿಹಾರದ ವೇಳೆ ಸುತ್ತಲೂ ನಿಶಬ್ದತೆ ಇರೋದರಿಂದ ಬೆಳಗಿನ ಆ ಸಮಯದಲ್ಲಿ ಗುಂಜೂರು ಪಾಳ್ಯದ ಬೀರೇಶ್ವರ ಸ್ವಾಮಿ ಇಲ್ಲವೇ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ತಾನದಲ್ಲಿ ಹಾಕುವ ಬಕ್ತಿಗೀತೆಗಳ ಲಹರಿ ಬಲು ಸ್ಪಶ್ಟವಾಗಿ ಕೇಳಿಬರುತ್ತದೆ. ಅಣ್ಣಾವ್ರು ಹಾಗು ಇನ್ನೂ ಮೊದಲಾದವರು ಹಾಡಿದ ಬಕ್ತಿಗೀತೆಗಳು ಆವಾಗಿರುತ್ತವೆ. ಈ ಗೀತೆಗಳನ್ನು ಕೇಳಿ ಮೈ-ಮನಸ್ಸಿಗೆ ಆನಂದ, ಉಲ್ಲಾಸವಾಗುತ್ತೆ. ಅಲ್ಲದೆ ಕೆಲವೊಮ್ಮೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಅಣಿಯಾಗಿ, ನಿದಾನವಾಗಿ ಮಂದಗತಿಯಲ್ಲಿ, ತಲೆಯ ಮೇಲೆ ಕಣ್ಣಳತೆಯ ದೂರದಲ್ಲಿ ಹಾರುತ್ತಾ ಹೋಗುವ ವಿಮಾನದ ದರುಶನವೂ ಸಹ ಆಗುತ್ತೆ, ಅದು ಮಾಡುವ ಸದ್ದು ಸಹ ಕೇಳಿಸುತ್ತೆ.

pic-1

ಇದರ ಮದ್ಯೆ ನಮ್ಮ ಮನೆಗೆ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಕಾರ‍್ಮೆಲ್ ರಾಂ ರೈಲು ನಿಲ್ದಾಣ ಮೂಲಕ, ಚುಕ್-ಬುಕ್ ಎಂದು ದ್ವನಿಯನ್ನು ಮಾಡುತ್ತಾ ಹೋಗುವ ರೈಲುಗಳ ಸುದ್ದು ಸಹ ಕೇಳಿಸುತ್ತೆ. ರೈಲಿನ ಬಗ್ಗೆ ಬರೆವಾಗ ಬಾಲ್ಯದ ಗಟನೆಯೊಂದು ನೆನಪಿಗೆ ಬಂತು. ಅದೇನೆಂದರೆ, ಚಿಕ್ಕಂದಿನಲ್ಲಿ ರೈಲ‌‍ನ್ನು ನಾವು ಹತ್ತಿರದಿಂದ ನೋಡರಲಿಲ್ಲ. ಮೇಲಾಗಿ ನಮ್ಮೂರ ಹತ್ತಿರ ಯಾವುದೇ ರೈಲು ಮಾರ‍್ಗವಿರಲಿಲ್ಲ. ಹಾಗಾಗಿ ರೈಲು ‌ಎಂದರೆ ನಮಗೆ ಬಹಳ ಕುತೂಹಲವಿತ್ತು. ಒಮ್ಮೆ ದೂರದ ಊರಿಗೆ ಮದುವೆಗೆ ಹೋಗಿದ್ದ ನಾನು ಮತ್ತು ನನ್ನ ಗೆಳೆಯರು ಸೇರಿಕೊಂಡು, ಆ ಊರ ಮೂಲಕ ಹಾದುಹೋಗಿದ್ದ ರೈಲು ಹಳಿಯ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಸಾಲು-ಸಾಲಾಗಿಟ್ಟು, ರೈಲು ಬರೋದನ್ನೇ ಕಾಯುತ್ತಾ ಇದ್ವೀ. ಬಾಳೆಹಣ್ಣಿನ ಸಿಪ್ಪೆಯ ಮೇಲೆ ಹಾದುಹೋಗುವ ಆ ರೈಲು ಜಾರಿಬೀಳತ್ತೆ. ಆಗ ರೈಲನ್ನು ತೀರ ಹತ್ತಿರದಿಂದ ನೋಡಬಹುದು ಅನ್ನೋದು ನಮ್ಮ ಲೆಕ್ಕಾಚಾರವಾಗಿತ್ತು!

ನಮ್ಮ ಮನೆಯ ಎದುರಿಗೊಂದು ಕೆರೆಯು ಸಹ ಇದೆ! ವಿಹಾರದ ವೇಳೆಯಲ್ಲಿ ಅದರ ದರುಶನ ನನಗೆ ಆಗುತ್ತಲೇ ಇರುತ್ತೆ. ಆದರೆ, ಸೂಕ್ತವಾದ ಸಂರಕ್ಶಣೆ ಹಾಗೂ ಅಬಿವ್ರುದ್ದಿ ಇಲ್ಲದೆ ಅದೊಂದು ಹಾಳು ಕೆರೆಯಾಗಿದೆ. ಇರುವ ನೀರೆಲ್ಲ ಹಸಿರು ಬಣ್ಣದ ಹೊದಿಕೆ ಹೊದ್ದು ಮಲಗಿದೆ. ಸರ‍್ಕಾರ ಇಲ್ಲವೇ ಸಂಬಂದಪಟ್ಟ ಅದಿಕಾರಿಗಳ ಕಾಳಜಿಯುತ ದ್ರುಶ್ಟಿ ಈ ಕೆರೆಯ ಮೇಲೆ ಬೀಳಲಿ ಎನ್ನುವುದು ದೇವರಲ್ಲಿ ನನ್ನ ಪ್ರಾರ‍್ತನೆ.

ಹೊತ್ತು ಸರಿದಂತೆ ನಮ್ಮ ಮನೆಯ ಮಂದೆ ಹಾದುಹೋಗಿರುವ ರಸ್ತೆಯಲ್ಲಿ ಮೋಟಾರು ವಾಹನಗಳು ಸದ್ದು ಮಾಡುತ್ತಾ ಬರಲಾರಂಬಿಸುತ್ತವೆ. ಅವು ಬೈಕ್, ಆಟೋ, ಲಾರಿ ಅತವಾ ಶಾಲಾ ವಾಹನಗಳು, ಹೀಗೆ ಯಾವುದಾದರೂ ವಾಹನಗಳಿರಬಹುದು. ನನ್ನ ವಿಹಾರದ ಸಮಯದಲ್ಲಿ ಈವರೆಗೂ ಇದ್ದ ನಿಶಬ್ದತೆ ದೂರಾಗುತ್ತಾ, ಕೇಳಿಬರುತ್ತಿದ್ದ ಬಕ್ತಿಗೀತೆಗಳ ಇಂಪಾದ ಲಹರಿ, ಮರಗಿಡಗಳಿಂದ ಹೊರಹೊಮ್ಮುತ್ತಾ ಬರುತ್ತಿದ್ದ ಹಕ್ಕಿಗಳ ಚಿಲಿಪಿಲಿ ನಿನಾದ, ರೈಲಿನ ಚುಕ್-ಬುಕ್ ದ್ವನಿ ಎಲ್ಲವೂ ಈಗ ಕೇಳದಂತೆ ಆಗುತ್ತೆ, ಇಲ್ಲವೇ ಕೇಳಿಸುತ್ತಿದ್ದರೂ ಎಲ್ಲವು ಅಸ್ಪಶ್ಟ!

(ಚಿತ್ರ ಸೆಲೆ: photographyblogger.netthebetterindia.com)Categories: ನಲ್ಬರಹ

ಟ್ಯಾಗ್ ಗಳು:, , , , , , , ,

1 reply

  1. Excellent Experience shared from your busy working life. Good luck for your future writings.

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s