ಅಲ್ಲಮನ ವಚನಗಳ ಓದು – 10ನೆಯ ಕಂತು

– ಸಿ.ಪಿ.ನಾಗರಾಜ.

allamprabhu

ಹಗಲನಿರುಳ ಮಾಡಿ ಇರುಳ ಹಗಲ ಮಾಡಿ
ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವನ ಮಾತ ಕೇಳಲಾಗದು ಗುಹೇಶ್ವರ.

ಮಾತಿನಲ್ಲೇ ಮಂಟಪವನ್ನು ಕಟ್ಟಿ ಜನರನ್ನು ಮರುಳುಮಾಡಿ ಸಮಾಜದ ಬದುಕನ್ನು ಹಾಳುಮಾಡುವ ಸೋಗಲಾಡಿಗಳನ್ನು/ನಯವಂಚಕರನ್ನು ಕುರಿತು ಅಲ್ಲಮನು ಕಟುವಾಗಿ ವಿಡಂಬಿಸಿದ್ದಾನೆ.

( ಹಗಲ್+ಅನ್+ಇರುಳ್+ಅ ; ಹಗಲ್=ನಿಸರ‍್ಗದಲ್ಲಿ ಬೆಳಕು ಹರಡಿರುವ ಸಮಯ ; ಅನ್=ಅನ್ನು ; ಇರುಳ್+ಅ ; ಇರುಳ್=ರಾತ್ರಿ/ಕತ್ತಲು/ನಿಸರ‍್ಗದಲ್ಲಿ ಕತ್ತಲು ಕವಿದಿರುವ ಸಮಯ ; ಇರುಳ=ರಾತ್ರಿಯನ್ನಾಗಿ ; ಹಗಲ್+ಅ ; ಹಗಲ=ಬೆಳಕು ಹರಡಿರುವ ಸಮಯವನ್ನಾಗಿ ; ” ಹಗಲನಿರುಳ ಮಾಡಿ ಇರುಳ ಹಗಲ ಮಾಡಿ ” ಎಂಬ ಪದಕಂತೆಗಳು ” ಮಾತಿನ ಮೋಡಿಯಿಂದಲೇ ಕೇಳುವವರ ಮನವನ್ನು ತಮ್ಮತ್ತ ಸೆಳೆದುಕೊಂಡು , ತಾವಾಡುವ ಮಾತುಗಳನ್ನು ನಂಬುವಂತೆ ಮಾಡಿ , ನಿಜವನ್ನು ಸುಳ್ಳನ್ನಾಗಿಸಿ/ಸುಳ್ಳನ್ನು ನಿಜವನ್ನಾಗಿಸಿ ಜನರನ್ನು ವಂಚಿಸುವುದು ” ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ ; ಆಚಾರ=ತನಗೆ ಮತ್ತು ಇತರರಿಗೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳು ; ಆಚಾರ+ಅ=ಆಚಾರವ=ಆಚಾರವನ್ನು ; ಅನಾಚಾರ=ತನಗೆ ಮತ್ತು ಇತರರಿಗೆ ಕೆಡುಕನ್ನು ಉಂಟುಮಾಡುವಂತಹ ನಡೆನುಡಿಗಳು ; ಅನಾಚಾರ+ಅ=ಅನಾಚಾರವ=ಅನಾಚಾರವನ್ನು ; ” ಆಚಾರವ ಅನಾಚಾರವ ಮಾಡಿ ಅನಾಚಾರವ ಆಚಾರವ ಮಾಡಿ ” ಎಂಬ ಪದಕಂತೆಗಳು ” ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತಿರುವುದನ್ನೇ ಕೆಡುಕಿನ ನಡೆನುಡಿಗಳೆಂದು ಪ್ರಚಾರ ಮಾಡುತ್ತ , ಜನತೆಗೆ ಕೇಡನ್ನು ಬಗೆಯುತ್ತಿರುವ ಕೆಲಸಗಳನ್ನೇ ಒಳಿತೆಂದು ಹಾಡಿಹೊಗಳುತ್ತ , ತಪ್ಪು ಮಾಹಿತಿಗಳನ್ನು ಹರಡುವುದರ ಮೂಲಕ ಜನಸಮುದಾಯದ ನೆಮ್ಮದಿಯ ಬದುಕನ್ನು ಕಲಕುವುದು/ಹಾಳುಮಾಡುವುದು ” ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ ; ಭಕ್ತ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು , ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು ; ಭವಿ=ದುರಾಶೆ/ನೀಚತನ/ವಂಚನೆ/ಕ್ರೂರತನದ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವವನು ; ” ಭಕ್ತನ ಭವಿಯ ಮಾಡಿ ಭವಿಯ ಭಕ್ತನ ಮಾಡಿ ” ಎಂಬ ಪದಕಂತೆಗಳು ” ಸಮಾಜಕ್ಕೆ ಒಳಿತನ್ನು ಮಾಡುವವನನ್ನೇ ಕೆಡುಕನೆಂದು ಹೇಳುತ್ತ , ಕೆಡುಕನನ್ನೇ ಸಮಾಜವನ್ನು ಕಾಪಾಡುವವನು ಎಂದು ಕೊಂಡಾಡುವುದು ” ಎಂಬ ತಿರುಳಿನಲ್ಲಿ ಬಳಕೆಯಾಗಿದೆ ; ನುಡಿ=ಮಾತು ; ನುಡಿವನ=ಮಾತನಾಡುವವನ ; ಮಾತು+ಅ ; ಮಾತ=ಮಾತುಗಳನ್ನು/ನುಡಿಗಳನ್ನು ; ಕೇಳಲ್+ಆಗದು ; ಕೇಳಲ್=ಕೇಳುವುದಕ್ಕೆ ; ಆಗದು=ಆಗುವುದಿಲ್ಲ ; ಗುಹೇಶ್ವರ=ಅಲ್ಲಮನ ಮೆಚ್ಚಿನ ದೇವರು/ಶಿವ )

ತನು ಒಂದು ದ್ವೀಪ ಮನ ಒಂದು ದ್ವೀಪ
ಆಪ್ಯಾಯನ ಒಂದು ದ್ವೀಪ ವಚನ ಒಂದು ದ್ವೀಪ
ಇಂತೀ ನಾಲ್ಕು ದ್ವೀಪದೆಡೆಯ ಬೆಸೆಗೊಂಬಡೆ
ಗುಹೇಶ್ವರ ನಿಮ್ಮ ಸ್ಥಾನಂಗಳು.

ವ್ಯಕ್ತಿಯ ನಡೆನುಡಿಗಳನ್ನು ರೂಪಿಸುವುದರಲ್ಲಿ ಮಯ್, ಮನಸ್ಸು ಮತ್ತು ಮಾತುಗಳ ಪಾತ್ರ ದೊಡ್ಡದು. ಇವುಗಳ ನಡುವೆ ಪರಸ್ಪರ ಹೊಂದಾಣಿಕೆಯಿದ್ದಾಗ ಮಾತ್ರ ವ್ಯಕ್ತಿಯ ಬದುಕಿನಲ್ಲಿ ನಲಿವು/ನೆಮ್ಮದಿ/ಹಿತವುಂಟಾಗುತ್ತದೆ. ನಿಸರ‍್ಗ ಸಹಜವಾದ ಸೆಳೆತ ಮತ್ತು ಸಮಾಜದ ಕಟ್ಟುಪಾಡುಗಳ ನಡುವೆ ಸಿಲುಕಿದ ವ್ಯಕ್ತಿಯು ತನ್ನ ಮಯ್ಯಲ್ಲಿ ಕೆರಳುವ ಕಾಮನೆಗಳನ್ನು, ಮನದಲ್ಲಿ ತುಡಿಯುವ ಒಳಮಿಡಿತಗಳನ್ನು ಮತ್ತು ಆಡುವ ಮಾತುಗಳೆಲ್ಲವನ್ನು ಬೇರೆಬೇರೆಯಾಗಿ ಬಿಡದೆ, ಒಳಿತಿನ ಕಡೆಗೆ ಒಗ್ಗೂಡಿಸುವುದರ ಮೂಲಕ ತನಗೆ ಮತ್ತು ಸಮಾಜಕ್ಕೆ ಹಿತವನ್ನುಂಟುಮಾಡುವ ನಡೆನುಡಿಗಳನ್ನು ರೂಪಿಸಿಕೊಳ್ಳಬೇಕೆಂಬುದನ್ನು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.

(ತನು=ಮಯ್/ದೇಹ/ಶರೀರ ; ದ್ವೀಪ=ಸುತ್ತಲೂ ನೀರಿನಿಂದ ಆವರಿಸಿಕೊಂಡಿರುವ ಬೂಮಿ ; ದ್ವೀಪ ಎಂಬ ಪದವನ್ನು ” ಪ್ರತ್ಯೇಕವಾಗಿರುವುದು/ಬೇರೆಯಾಗಿರುವುದು/ಒಂಟಿಯಾಗಿರುವುದು/ಸಂಪರ‍್ಕವಿಲ್ಲದಿರುವುದು ” ಎಂಬ ತಿರುಳಿನ ಒಂದು ರೂಪಕವಾಗಿ ಬಳಸಿದ್ದಾನೆ. ವ್ಯಕ್ತಿಯ ಮಯ್ಯಲ್ಲಿ ತುಡಿಯುವ ಕಾಮನೆಗಳು , ಮನಗಳಲ್ಲಿ ಮೂಡುವ ಬಯಕೆಗಳು ಮತ್ತು ಆಡುವ ಮಾತುಗಳ ನಡುವೆ ಹೊಂದಾಣಿಕೆಯಿಲ್ಲದಿರುವ ಬಗೆಯನ್ನು ದ್ವೀಪವೆಂಬ ರೂಪಕದ ಮೂಲಕ ಚಿತ್ರಿಸಿದ್ದಾನೆ ; ಮನ=ಮನಸ್ಸು ; ಆಪ್ಯಾಯನ=ನೆಮ್ಮದಿ/ನಲಿವು/ಹಿತ/ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವಿಕೆ ; ವಚನ=ಮಾತು/ನುಡಿ ; ಇಂತು+ಈ ; ಇಂತು=ಈ ರೀತಿಯಾಗಿ/ಬಗೆಯಲ್ಲಿ ; ದ್ವೀಪದ+ಎಡೆಯ ; ಎಡೆ=ಜಾಗ/ನೆಲೆ ; ಬೆಸೆ+ಕೊಂಬಡೆ ; ಬೆಸೆ=ಕೂಡಿಸು/ಸೇರಿಸು/ಒಂದು ಮಾಡು ; ಕೊಂಬಡೆ=ಕೊಳ್ಳುವುದಾದರೆ/ಪಡೆಯುವುದಾದರೆ/ಗಳಿಸುವುದಾದರೆ ; ನಾಲ್ಕು ದ್ವೀಪದೆಡೆಯ ಬೆಸೆಗೊಂಬಡೆ=ನಾಲ್ಕನ್ನು ಸೇರಿಸಿ ಒಂದು ಮಾಡಿದರೆ ಅಂದರೆ ವ್ಯಕ್ತಿಯ ತನುಮನವಚನಗಳು ಒಂದಾಗಿ ಬೆಸೆದುಕೊಂಡು ಒಳಿತಿನ ನಡೆನುಡಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ನೆಮ್ಮದಿ ದೊರೆಯುತ್ತದೆ ; ಗುಹೇಶ್ವರ=ಅಲ್ಲಮನ ಮೆಚ್ಚಿನ ದೇವರು/ಶಿವ ; ಸ್ಥಾನ=ಜಾಗ/ನೆಲೆ/ಎಡೆ ; ಗುಹೇಶ್ವರ ನಿಮ್ಮ ಸ್ಥಾನಂಗಳು=ದೇವರು ಇರುವ ನೆಲೆ/ಮಯ್ ಮನಸ್ಸು ಮಾತುಗಳು ಜತೆಗೂಡಿ ನೆಮ್ಮದಿಯಿಂದ ಕೂಡಿದ ಒಳ್ಳೆಯ ನಡೆನುಡಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಗುಹೇಶ್ವರನು ಒಲಿಯುತ್ತಾನೆ )

ಮಣಿಯನೆಣಿಸಿ ಕಾಲವ ಕಳೆಯಬೇಡ
ಕಣಿಯ ಪೂಜಿಸಿ ಕಾಲವ ಕಳೆಯಬೇಡ
ಕ್ಷಣವಾದಡೆಯೂ ಆಗಲಿ ನಿಜದ ನೆನಹೇ ಸಾಕು
ಕ್ಷಣಾರ್ಧವಾದಡೆಯೂ ಆಗಲಿ ನಿಜದ ನೆನಹೇ ಸಾಕು
ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೇ ಗುಹೇಶ್ವರ.

ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳುವುದು ದೊಡ್ಡದೇ ಹೊರತು, ದೇವರ ಬಗೆಗಿನ ಒಲವನ್ನು ತೋರಿಸಿಕೊಳ್ಳುವುದಕ್ಕಾಗಿ ಮಾಡುವ ಆಚರಣೆಗಳಿಂದ ಇಲ್ಲವೇ ಪೂಜೆಯಿಂದ ಯಾವುದೇ ಪ್ರಯೋಜನವಿಲ್ಲವೆಂಬುದನ್ನು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.

( ಮಣಿ+ಅನ್+ಎಣಿಸಿ ; ಮಣಿ=ಗುಂಡನೆಯ ಆಕಾರವುಳ್ಳ ರುದ್ರಾಕ್ಶಿ ಮರದ ಕಾಯಿ/ಹವಳ/ಮುತ್ತು ; ಅನ್=ಅನ್ನು ; ಮಣಿಯನ್=ದುಂಡನೆಯ ರುದ್ರಾಕ್ಶಿ ಕಾಯಿ/ಹವಳ/ಮುತ್ತುಗಳನ್ನು ದಾರವೊಂದಕ್ಕೆ ಪೋಣಿಸಿ ಮಾಡಿರುವ ಸರವನ್ನು ; ಎಣಿಸಿ=ಲೆಕ್ಕ ಹಾಕುತ್ತ ; ಕಾಲ=ಸಮಯ/ವೇಳೆ ; ಕಳೆ=ಹಾಳು ಮಾಡು ; ಮಣಿಯನೆಣಿಸಿ ಕಾಲವ ಕಳೆಯಬೇಡ=ಮಣಿಗಳನ್ನು ಪೋಣಿಸಿರುವ ಮಾಲೆಯನ್ನು ಜಪಸರವನ್ನಾಗಿ ಮಾಡಿಕೊಂಡು , ಅದರಲ್ಲಿನ ಒಂದೊಂದು ಮಣಿಯನ್ನು ಮುಂದೆ ಮುಂದೆ ಜರುಗಿಸುತ್ತ , ಒಂದೊಂದು ಮಣಿಗೂ ದೇವರ ಹೆಸರನ್ನು ಉಚ್ಚರಿಸುವ ಕೆಲಸದಲ್ಲಿ ತೊಡಗಿ ಕಾಲವನ್ನು ಹಾಳುಮಾಡಬೇಡ ; ಕಣಿ=ಕಲ್ಲು/ಶಿಲೆ ; ಪೂಜಿಸಿ=ಪೂಜೆಯನ್ನು ಮಾಡಿ ; ಕಣಿಯ ಪೂಜಿಸಿ ಕಾಲವ ಕಳೆಯಬೇಡ=ಕಲ್ಲನ್ನು ಕಡೆದು ಮಾಡಿರುವ ದೇವರ ವಿಗ್ರಹವನ್ನು ಬಗೆಬಗೆಯ ಆಚರಣೆಗಳಿಂದ ಪೂಜಿಸುತ್ತ ಕಾಲವನ್ನು ಹಾಳುಮಾಡಬೇಡ ; ಕ್ಷಣ+ಆದಡೆಯೂ ; ಕ್ಷಣ=ತುಸು ಕಾಲ/ಸಮಯ/ಗಳಿಗೆ ; ಆದಡೆ=ಆದರೆ ; ಆದಡೆಯೂ=ಆದರೂ ; ನಿಜ=ದಿನನಿತ್ಯದ ಬದುಕಿನಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿ ; ನೆನಹು=ನೆನಪು ; ನಿಜದ ನೆನಹು=ಒಳ್ಳೆಯ ನಡೆನುಡಿಗಳನ್ನು ಆಚರಣೆಗೆ ತರಬೇಕೆಂಬ ಎಚ್ಚರ ಮತ್ತು ಅದರಂತೆ ನಡೆಯುವುದು ; ಕ್ಷಣ+ಅರ್ಧ+ಆದಡೆಯೂ ; ಕ್ಷಣಾರ್ಧ=ಅರೆಗಳಿಗೆ ; ಬೆಂಕಿ+ಒಳಗೆ+ಉಳ್ಳ ; ಬೆಂಕಿ=ಉರಿ/ಕಿಚ್ಚು/ಅಗ್ನಿ ; ಉಳ್ಳ=ಇರುವ ; ಗುಣ=ಶಕ್ತಿ/ಬಲ/ಸತ್ವ ; ಬಿಸಿನೀರಲ್+ಉಂಟೇ ; ನೀರಲ್=ನೀರಿನಲ್ಲಿ ; ಉಂಟೇ=ಇದೆಯೇ ; ಬಿಸಿನೀರು=ಸುಡುವ ನೀರು/ಬೆಂಕಿಯಲ್ಲಿ ಕಾದು ಬೆಚ್ಚಗಿರುವ ನೀರು ; ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೇ ಎಂಬ ಸೊಲ್ಲು ” ವ್ಯಕ್ತಿಯ ದಿನನಿತ್ಯದ ಸಾಮಾಜಿಕ ವ್ಯವಹಾರಗಳಲ್ಲಿ ಕಂಡುಬರುವ ಒಳ್ಳೆಯ ನಡೆನುಡಿಗಳಿಗೆ ಇರುವ ಬೆಲೆಯು , ವ್ಯಕ್ತಿಯು ಮಾಡುವ ತೋರಿಕೆಯ ಪೂಜೆಯ ಆಚರಣೆಗಳಿಗೆ ಇರುವುದಿಲ್ಲ ” ಎಂಬ ತಿರುಳಿನಲ್ಲಿ ಬಳಕೆಯಾಗಿರುವ ರೂಪಕವಾಗಿದೆ ; ಗುಹೇಶ್ವರ=ಅಲ್ಲಮನ ಮೆಚ್ಚಿನ ದೇವರು/ಶಿವ )

( ಚಿತ್ರ ಸೆಲೆ: lingayatreligion.com )Categories: ನಲ್ಬರಹ

ಟ್ಯಾಗ್ ಗಳು:, , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s